Tuesday, August 11, 2015

NO SUBSIDISED FOOD FOR KARNATAKA MLA's.



          ಸಂಸದರಿಗೆ ಲಭ್ಯ ಸೌಲಭ್ಯ : ಕರ್ನಾಟಕದ  ಶಾಸಕರಿಗೆ ಲಭ್ಯವಿಲ್ಲ !

ದೇಶದ ಸಂಸದರಿಗೆ ಪಾರ್ಲಿಮೆಂಟ್ ಭವನದಲ್ಲಿನ ಉಪಾಹಾರ ಗೃಹದಲ್ಲಿ ಅಲ್ಪಬೆಲೆಗೆ ಒದಗಿಸುವ ಖಾದ್ಯಪೇಯಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ೬೦ ಕೋಟಿ ರೂ.ಗಳನ್ನು ಸಹಾಯಧನದ ರೂಪದಲ್ಲಿ ಕೇಂದ್ರ ಸರ್ಕಾರವು ವ್ಯಯಿಸಿದ್ದ ವಿಚಾರವು ಬಹಿರಂಗವಾದಂತೆಯೇ ಸಾಕಷ್ಟು ವಾದವಿವಾದಗಳಿಗೆ ಹಾಗೂ ಚರ್ಚೆಗಳಿಗೆ ಗ್ರಾಸವೆನಿಸಿತ್ತು. ಮಾಸಿಕ ೧.೪ ಲಕ್ಷದಷ್ಟು ವೇತನದೊಂದಿಗೆ, ಇತರ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿರುವ ಸಂಸದರಿಗೆ ಅಲ್ಪಬೆಲೆಗೆ ಖಾದ್ಯಪೇಯಗಳನ್ನು ಒದಗಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯವೂ  ಸಾರ್ವತ್ರಿಕವಾಗಿ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಶಾಸಕರಿಗೆ ಇದೇ ರೀತಿಯ ಸೌಲಭ್ಯವನ್ನು ಒದಗಿಸಲಾಗುತ್ತಿದೆಯೇ ಎನ್ನುವುದನ್ನು ಅರಿತುಕೊಳ್ಳಲು, ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ವಯ ಪಡೆದಿದ್ದ ಒಂದಿಷ್ಟು ಮಾಹಿತಿ ಮತ್ತು ಸಂಸದರಿಗೆ ಲಭಿಸುತ್ತಿರುವ ಈ ವಿಶೇಷ ಸೌಲಭ್ಯದ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.

ಕರ್ನಾಟಕದ ಜನತೆಗೆ ಸದಾ ಒಂದಲ್ಲ ಒಂದು ಭಾಗ್ಯವನ್ನು ಕೊಡುಗೆಗಳ ರೂಪದಲ್ಲಿ ಕರುಣಿಸುವ ರಾಜ್ಯದ ಶಾಸಕರು, ತಮಗಾಗಿ ಕೆಲವೊಂದು ಭರ್ಜರಿ ಕೊಡುಗೆಗಳನ್ನು ತಾವೇ ಪಡೆದುಕೊಳ್ಳುತ್ತಲೇ ಇರುತ್ತಾರೆ. ಇತೀಚೆಗೆ ತಮ್ಮ ಮಾಸಿಕ ವೇತನ, ಭತ್ಯೆಗಳು, ನಿವೃತ್ತಿಯ ಬಳಿಕ ಲಭಿಸುವ ಪಿಂಚಣಿಯೇ ಮುಂತಾದ ಸೌಲಭ್ಯಗಳನ್ನು ಹೆಚ್ಚಿಸಿಕೊಂಡಿರುವ ನಮ್ಮ ಶಾಸಕರು, ದೇಶದ ಸಂಸದರಿಗೆ  ಸರಿಸಮಾನವಾದ ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರಿಗೆ ಪಾರ್ಲಿಮೆಂಟ್ ಭವನದ ಉಪಾಹಾರ ಗೃಹದಲ್ಲಿ ಅಲ್ಪಬೆಲೆಗೆ ದೊರೆಯುತ್ತಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಭೋಜ್ಯಗಳನ್ನು, ನಮ್ಮ ಶಾಸಕರಿಗೆ ವಿಧಾನಸಭೆಯ ಉಪಾಹಾರ ಗೃಹದಲ್ಲಿ ಒದಗಿಸಲಾಗುತಿಲ್ಲ. ಈ ಒಂದು ವಿಚಾರದಲ್ಲಿ ಮಾತ್ರ ನಮ್ಮ ಶಾಸಕರು ಹಿಂದುಳಿದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ. ಆದರೆ ಶ್ರೀಸಾಮಾನ್ಯನಿಗೆ ರಾಜ್ಯದ ಬಹುತೇಕ ಉಪಾಹಾರ ಗೃಹಗಳಲ್ಲಿ ಲಭಿಸುವ ಸಸ್ಯಾಹಾರಿ ಭಕ್ಷ್ಯಭೋಜ್ಯಗಳಷ್ಟೇ ಬೆಲೆಯನ್ನು ತೆತ್ತು, ನಮ್ಮ ಶಾಸಕರು ವಿಧಾನಸಭೆಯ ಉಪಾಹಾರ ಗೃಹದಲ್ಲಿ ಕೇವಲ  ಸಸ್ಯಾಹಾರಿ ಆಹಾರವನ್ನು ಸೇವಿಸುವುದು ನಿಜಕ್ಕೂ ಪ್ರಶಂಸನೀಯ.

ಹಿನ್ನೆಲೆ

ಸರ್ಕಾರದ ಸಹಾಯಧನದ ಮೂಲಕ ಕಡಿಮೆ ಬೆಲೆಗೆ ದೊರೆಯುವ ಅಡುಗೆ ಅನಿಲದ ಸೌಲಭ್ಯವನ್ನು ತ್ಯಜಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಕರೆನೀಡಿದ್ದರು. ಶ್ರೀಮಂತರು ತ್ಯಜಿಸುವ ಸಹಾಯಧನದ ಅನಿಲ ಜಾಡಿಗಳನ್ನು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಇಡುಗಂಟು ರಹಿತವಾಗಿ ನೀಡುವ ಉದ್ದೇಶವೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಸಹಸ್ರಾರು ಜನರು ಇದಕ್ಕೆ ಸ್ಪಂದಿಸಿದ್ದು, ಈ ಪಟ್ಟಿಯಲ್ಲಿ ಶ್ರೀಮಂತ ವರ್ಗಕ್ಕೆ ಸೇರಿದ ಉದ್ಯಮಪತಿಗಳಲ್ಲದೇ, ಬೆರಳೆಣಿಕೆಯಷ್ಟು ಸಂಸದರು ಮತ್ತು ಶಾಸಕರೂ ಸೇರಿದ್ದರು. ಆದರೆ ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಬ್ಬ ಶಾಸಕರು ಮತ್ತು ಸಂಸದರು ( ದೇಶದ ಸಂಸದರಲ್ಲಿ ೪೪೨ ಜನರು ಮತ್ತು ವಿವಿಧ ರಾಜ್ಯಗಳ ಸಹಸ್ರಾರು ಶಾಸಕರು ಕೋಟ್ಯಾಧಿಪತಿಗಳಾಗಿದ್ದರೂ ) ಈ ಸವಲತ್ತನ್ನು ತ್ಯಜಿಸಿರಲಿಲ್ಲ. ಮಾಸಿಕ ವೇತನ ಮತ್ತು ವಿವಿಧ ಭತ್ಯೆಗಳ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆಯುತ್ತಿರುವ ಜನಪ್ರತಿನಿಧಿಗಳ ಈ ಧೋರಣೆಯು ಮತದಾರ ಪ್ರಭುವಿನ ಅಸಮಾಧಾನಕ್ಕೆ ಕಾರಣವೆನಿಸಿತ್ತು.

ಅಲ್ಪಬೆಲೆಗೆ ಖಾದ್ಯಪೇಯಗಳು

ಇದೇ ಸಂದರ್ಭದಲ್ಲಿ ದೇಶದ ಸಂಸತ್ ಸದಸ್ಯರಿಗೆ ಸಂಸತ್ತಿನ ಕ್ಯಾಂಟೀನ್ ನಲ್ಲಿ ಸರ್ಕಾರದ ಸಹಾಯಧನದ ಮೂಲಕ ಅತ್ಯಲ್ಪ ಬೆಲೆಗೆ ಅತ್ಯುತ್ತಮ ಭಕ್ಷ್ಯ ಭೋಜ್ಯಗಳನ್ನು ಒದಗಿಸುತ್ತಿರುವ ವಿಚಾರವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದಂತೆಯೇ, ಮತದಾರ ಪ್ರಭುವಿಗೆ ದಿಗ್ಭ್ರಮೆಯಾಗಿತ್ತು. ನಿಜ ಹೇಳಬೇಕಿದ್ದಲ್ಲಿ ನಮ್ಮ ಸಂಸದರಿಗೆ ಅಲ್ಪಬೆಲೆಗೆ ಕೇವಲ ಸಸ್ಯಾಹಾರ ಮಾತ್ರವಲ್ಲ, ಮಾಂಸಾಹಾರವನ್ನೂ ಒದಗಿಸಲಾಗುತ್ತಿದೆ.ಹಾಗೂ ಸಂಸದರಿಗೆ ಈ ವಿಶೇಷ ಸೌಲಭ್ಯವನ್ನು ಒದಗಿಸಲು, ೨೦೦೯- ೧೦ ರಲ್ಲಿ ೧೦.೪ ಕೋಟಿ, ೨೦೧೦-೧೧ ರಲ್ಲಿ ೧೧., ೨೦೧೧-೧೨ ರಲ್ಲಿ ೧೧., ೨೦೧೨-೧೩ ರಲ್ಲಿ ೧೨.೫ ಮತ್ತು ೨೦೧೪-೧೫ ರಲ್ಲಿ ೧೪ ಕೋಟಿ ರೂ.ಗಳು ಸೇರಿದಂತೆ,ಕೇಂದ್ರ ಸರ್ಕಾರವು ೬೦ ಕೋಟಿ ರೂ.ಗಳನ್ನು ಸಹಾಯಧನದ ರೂಪದಲ್ಲಿ ನೀಡಿತ್ತು. ಮಾಹಿತಿ ಹಕ್ಕು ಕಾಯಿದೆಯನ್ವಯ ಕಾರ್ಯಕರ್ತರೊಬ್ಬರು ಪಡೆದುಕೊಂಡಿದ್ದ ಈ ಮಾಹಿತಿಯೇ ಜನಸಾಮಾನ್ಯರ ಅಸಮಾಧಾನಕ್ಕೆ ಮೂಲವೆನಿಸಿತ್ತು.

ನಮ್ಮ ಶಾಸಕರಿಗಿಲ್ಲ ಈ ಸೌಲಭ್ಯ

ದೇಶದ ಸಂಸದರಿಗೆ ಸಂಸತ್ತಿನ ಉಪಾಹಾರ ಗೃಹದಲ್ಲಿ ಪೂರೈಸುವ ಕೆಲವೊಂದು ಖಾದ್ಯಪೇಯಗಳ ಹೆಸರು ಮತ್ತು ಇವುಗಳ ಬೆಲೆಗಳ ಸ್ಯಾಂಪಲ್ ಇಂತಿದೆ. ಚಹಾ, ಕಾಫಿ,ರೋಟಿ, ಚಪಾತಿ ಒಂದರ ರೂ. ೧, ದಾಲ್ ೧.೫೦. ಅನ್ನ ೨, ದೋಸೆ, ವೆಜಿಟೆಬಲ್ ಸೂಪ್  ೪ , ಮಸಾಲೆದೋಸೆ ೬, ವೆಜ್ ಪಲಾವ್ ೮, ಮೊಸರನ್ನ ೧೧, ವೆಜ್ ಥಾಲಿ ೧೨.೫೦, ಫಿಶ್ ಕರಿ ರೈಸ್ ೧೩,ಚಿಕನ್ ಕರಿ ೨೦.೫೦,ನಾನ್ ವೆಜ್ ಥಾಲಿ ೨೨, ಚಿಕನ್ ಮಸಾಲ ೨೪.೫೦, ಬಟರ್ ಚಿಕನ್ ೩೭, ಚಿಕನ್ ಬಿರಿಯಾನಿ ೫೧, ಹುರಿದ ಮೀನು ೨೫, ಮಟನ್ ಕಟ್ಲೆಟ್ ೧೮, ಮಟನ್ ಕರಿ ೨೦ ರೂಪಾಯಿಗಳಂತೆ ಬೆಲೆಯನ್ನು ನಿಗದಿಸಲಾಗಿದೆ. ಇದಲ್ಲದೇ ಇನ್ನೂ ಹತ್ತುಹಲವು ವಿಧಗಳ ಖಾದ್ಯಪೇಯಗಳನ್ನು ನಮ್ಮ ಸಂಸದರಿಗೆ ಶೇ. ೬೩ ರಿಂದ ಶೇ. ೯೦ ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತದೆ!.

ಆದರೆ ಕೆಲ ಸಂಸದರು ಹೇಳುವಂತೆ ಈ ಸೌಲಭ್ಯವನ್ನು ಅಲ್ಪಪ್ರಮಾಣದ ಸಂಸದರು ಮಾತ್ರ ಬಳಸುತ್ತಿದ್ದು, ಪಾರ್ಲಿಮೆಂಟಿನ ಸಿಬಂದಿಗಳು ಹಾಗೂ ಪತ್ರಕರ್ತರು ಹೆಚ್ಚಾಗಿ ಬಳಸುತ್ತಾರೆ. ಸಂಸದರು ಹೇಳಿರುವುದು ನಿಜವಾಗಿದ್ದಲ್ಲಿ, ಸಂಸದರಿಗಾಗಿ ಒದಗಿಸುವ ಈ ಸೌಲಭ್ಯವನ್ನು ಅನ್ಯರು ಬಳಸುವುದು ತಪ್ಪಲ್ಲವೇ?, ಎನ್ನುವ ಪ್ರಶ್ನೆಯೂ  ಉದ್ಭವಿಸುತ್ತದೆ.

ವಿಧಾನಸಭೆಯ ಸಚಿವಾಲಯವು ಮಾಹಿತಿಹಕ್ಕು ಕಾಯಿದೆಯನ್ವಯ ಇದೇ ತಿಂಗಳಿನ ಮಧ್ಯಭಾಗದಲ್ಲಿ ನಮಗೆ ನೀಡಿದ್ದ ಮಾಹಿತಿಯಂತೆ,  ಕರ್ನಾಟಕದ ಶಾಸಕರು ಒಂದು ಮಸಾಲೆ ದೋಸೆಗೆ ವಿಧಾನ ಸೌಧದ ಉಪಾಹಾರ ಗೃಹದಲ್ಲಿ ೩೦ ರೂ. ಗಳನ್ನು  ತೆರಬೇಕಾಗುತ್ತದೆ. ಅಂತೆಯೇ ಖಾರಬಾತ್ ೨೦, ಕೇಸರಿಬಾತ್ ೨೦, ೨ ಇಡ್ಲಿಗಳಿಗೆ ೧೯, ೧ ರವೆ ಇಡ್ಲಿ ಒಂದರ  ೧೯, ಮಸಾಲೆವಡೆ, ಉದ್ದಿನ ವಡೆ, ಪಕೋಡಗಳಿಗೆ ತಲಾ ೧೯, ಮಸಾಲೆದೋಸೆ, ಈರುಳ್ಳಿ ದೋಸೆಗಳಿಗೆ ೩೦, ಪುಳಿಯೋಗರೆ,ಲೆಮನ್ ರೈಸ್,ಮೊಸರನ್ನ ಇತ್ಯಾದಿಗಳಿಗೆ ತಲಾ ೨೯, ಪುಳಿಯೋಗರೆ, ಶ್ಯಾವಿಗೆಬಾತ್ ಬಿಸಿಬೇಳೆಬಾತ್ ಗಳಿಗೆ ೩೫, ಪ್ಲೇಟ್ ಊಟಕ್ಕೆ ೫೦, ಸಿಹಿತಿಂಡಿಗಳಿಗೆ ೨೯ ರಿಂದ  ೫೦, ಟೊಮೇಟೊ ಸೂಪ್, ವೆಜ್ ಕಟ್ಲೆಟ್ ಗಳಿಗೆ ತಲಾ  ೩೦, ಲಘು ಪಾನೀಯಗಳಿಗೆ  ೨೩,  ಟೊಮೇಟೊ ಸೂಪ್ ರೂ.೩೦ ಮತ್ತು ಕಾಫಿ – ಟೀ ಗಳಿಗೆ ರೂ.೧೮ ರಂತೆ ಪಾವತಿಸಬೇಕಾಗುವುದು. ಇದಲ್ಲದೇ ಇತರ ಅನೇಕ ವಿಧದ ಭಕ್ಷ್ಯ ಭೋಜ್ಯಗಳನ್ನು ಶಾಸಕರಿಗೆ ಒದಗಿಸಲಾಗುತ್ತಿದ್ದು, ಇವೆಲ್ಲವುಗಳಿಗೂ ಮಧ್ಯಮ ದರ್ಜೆಯ ಹೋಟೆಲ್ ಗಳಲ್ಲಿ ವಿಧಿಸುವ ದರವನ್ನು ನಿಗದಿಸಲಾಗಿದೆ. ಹಾಗೂ ಈ ಸೌಲಭ್ಯವು ವಿಧಾನ ಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಸದನ ಆರಂಭವಾಗುವ ಸಮಯದಿಂದ ಮುಕ್ತಾಯಗೊಳ್ಳುವ ವರೆಗೆ ಮಾತ್ರ ಲಭ್ಯವಿರುತ್ತದೆ.

ಕೊನೆಯ ಮಾತು

ಪ್ರಸ್ತುತ ದೇಶದ ಸಂಸದರಿಗೆ ಲಭಿಸುತ್ತಿರುವ ಈ ವಿಶೇಷ ಸೌಲಭ್ಯವನ್ನು ತಮಗೂ ಒದಗಿಸುವಂತೆ ನಮ್ಮ ಶಾಸಕರು ಉಭಯ ಸದನಗಳ ಅಧ್ಯಕ್ಷ – ಸಭಾಪತಿಗಳನ್ನು  ಒತ್ತಾಯಿಸುವ ಅಥವಾ ಈ ಬಗ್ಗೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ!.  ಏಕೆಂದರೆ ತಮ್ಮ ಸಂಬಳ, ಭತ್ಯೆ ಮತ್ತಿತರ ಸವಲತ್ತುಗಳನ್ನು ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ  ಹೆಚ್ಚಿಸುವ ನಿರ್ಧಾರವು ನಮ್ಮ ಶಾಸಕರ ಕೈಯ್ಯಲ್ಲೇ ಇದೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು




No comments:

Post a Comment