Thursday, August 6, 2015

JUNK FOOD - GIVE IT UP



   ನಿರುಪಯುಕ್ತ ಆಹಾರಗಳ ಸೇವನೆಯನ್ನು ನಿಯಂತ್ರಿಸಿ  

ಈ ಲೇಖನದ ತಲೆಬರಹವನ್ನು ಕಂಡು ಬಹುತೇಕ ಓದುಗರು ತಲೆಕೆಡಿಸಿಕೊಂಡಿರಲೇ ಬೇಕು. ಏಕೆಂದರೆ ನಾವಿಂದು ಮಾತನಾಡುವ ಕನ್ನಡ ಭಾಷೆಯಲ್ಲಿ ನೂರಾರು ಆಂಗ್ಲ ಭಾಷೆಯ ಪದಗಳನ್ನು ಬಳಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಉಪಯೋಗಿಸುವ ಅನೇಕ ಕನ್ನಡ ಪದಗಳು ಜನಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಅದೇನೇ ಇರಲಿ, ಇದೀಗ ಈ ಲೇಖನದ ತಲೆಬರಹದಲ್ಲಿ ಬಳಸಿರುವ ನಿರುಪಯುಕ್ತ ಆಹಾರ ಎನ್ನುವ ಪದಕ್ಕೆ ಆಂಗ್ಲ ಭಾಷೆಯಲ್ಲಿ ಜಂಕ್ ಫುಡ್ ಎನ್ನುತ್ತಾರೆ. ಇದನ್ನು ಅರಿತ ಬಳಿಕ ನಿರುಪಯುಕ್ತ ಆಹಾರವೆಂದರೆ ಏನು ಎನ್ನುವುದು ನಿಮಗೆ ತಿಳಿದರೂ, ಇದರ ನಿಜವಾದ ಅರ್ಥ ನಿಮಗೂ ತಿಳಿದಿರಲಾರದು. ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳಿಂದ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಜಂಕ್ ಫುಡ್ ಎನ್ನುತ್ತಾರೆ. 

ಜಂಕ್ ಫುಡ್ ಎಂದರೇನು?

ಹೈದರಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ನಿರೂಪಿಸುವಂತೆ ಪ್ರೋಟೀನ್, ವಿಟಮಿನ್ಸ್ ಹಾಗೂ  ಖನಿಜಗಳು ಅತ್ಯಲ್ಪ ಪ್ರಮಾಣದಲ್ಲಿರುವ ಅಥವಾ ಕಿಂಚಿತ್ ಪ್ರಮಾಣದಲ್ಲೂ ಇಲ್ಲದೇ ಇರುವ, ಆದರೆ ಸಕ್ಕರೆ, ಉಪ್ಪು ಮತ್ತು ಶಕ್ತಿ ( ಎನರ್ಜಿ ) ಗಳು ಅಧಿಕ ಪ್ರಮಾಣದಲ್ಲಿರುವ ಆಹಾರಗಳು ಜಂಕ್ ಫುಡ್ ಎಂದು ಕರೆಯಲ್ಪಡುತ್ತದೆ. ಇಂತಹ ಆಹಾರಗಳ ಸೇವನೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಬಾಧಿಸುವ ಬಗ್ಗೆ ಸಾಕಷ್ಟು ಪುರಾವೆಗಳೂ ಇವೆ. ವಿಶೇಷವೆಂದರೆ ಭಾರತದಲ್ಲಿ ಗಣನೀಯ ಪ್ರಮಾಣದ ಮಕ್ಕಳು ಅಪೌಷ್ಠಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಸಾಕಷ್ಟು ಮಕ್ಕಳು ಬಾಲ್ಯ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹಲವಾರು ಅಧ್ಯಯನಗಳ ವರದಿಗಳಂತೆ ಈ ಸಮಸ್ಯೆಗೆ ಅಧಿಕ ಕ್ಯಾಲರಿಗಳಿರುವ ನಿರುಪಯುಕ್ತ ಆಹಾರ ಸೇವನೆಯೂ ಕಾರಣವೆನಿಸಿದೆ.
ಇತ್ತೀಚೆಗಷ್ಟೇ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ ಬಳಿಕ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗಿದ್ದ  ಮ್ಯಾಗಿ ಮತ್ತು ಇತರ ನಾಮಧೇಯಗಳ ನೂಡಲ್ಸ್, ಬರ್ಗರ್, ಪಿಜ್ಜಾ, ಲಘು ಪಾನೀಯಗಳು, ಕರಿದ ಹಾಗೂ  ವೈವಿಧ್ಯಮಯ ಕುರುಕಲು ತಿಂಡಿಗಳು ಮತ್ತು ಅನೇಕ ಅನ್ಯ ಖಾದ್ಯಪೇಯಗಳು ನಿರುಪಯುಕ್ತ ಆಹಾರಗಳ ಪಟ್ಟಿಯಲ್ಲಿ ಸೇರುತ್ತವೆ. ಇಂತಹ ಆಹಾರಗಳನ್ನು ನಿಯಮಿತವಾಗಿ ಹಾಗೂ ಅತಿಯಾಗಿ ಸೇವಿಸುವ ಮಕ್ಕಳಲ್ಲಿ ಅಧಿಕ ತೂಕ ಹಾಗೂ ಅತಿಬೊಜ್ಜಿನೊಂದಿಗೆ, ಇತರ ಕೆಲ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ.
ವ್ಯಾಯಾಮದ ಕೊರತೆ ಕಾರಣವಲ್ಲ

ವಿಶೇಷವೆಂದರೆ ಇಂತಹ ನಿರುಪಯುಕ್ತ ಖಾದ್ಯಪೇಯಗಳನ್ನು ತಯಾರಿಸಿ ನಮ್ಮ ದೇಶದಲ್ಲಿ ಮಾರಾಟ ಮಾಡುತ್ತಿರುವ ಅನೇಕ ಸಂಸ್ಥೆಗಳು, ಮಕ್ಕಳನ್ನು ಪೀಡಿಸುವ ಆರೋಗ್ಯದ ಸಮಸ್ಯೆಗಳಿಗೆ ಶಾರೀರಿಕ ಚಟುವಟಿಕೆ ಹಾಗೂ ವ್ಯಾಯಾಮಗಳ ಕೊರತೆ ಕಾರಣವೇ ಹೊರತು, ತಮ್ಮ ಉತ್ಪನ್ನಗಳ ಸೇವನೆ ಕಾರಣವಲ್ಲ ಎಂದು ವಾದಿಸುತ್ತಾರೆ. ಜೊತೆಗೆ ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಅತ್ಯವಶ್ಯಕ ಎನಿಸುವ " ಶಕ್ತಿ " ಯನ್ನು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳಿರುವ ಆಹಾರ ಒದಗಿಸುತ್ತದೆ ಎನ್ನುತ್ತಾರೆ. ಆದರೆ ಸುಪ್ರಸಿದ್ಧ ಮಕ್ಕಳ ತಜ್ಞರ ಅಭಿಪ್ರಾಯದಂತೆ,ಶಾರೀರಿಕ ವ್ಯಾಯಾಮವು ನಿಶ್ಚಿತವಾಗಿಯೂ ಸಮತೋಲಿತ ಆಹಾರ ಸೇವನೆಗೆ ಪರ್ಯಾಯವಲ್ಲ!.

ಸಮಿತಿಯ ಸಲಹೆಗಳು

೨೦೧೦ ರಲ್ಲಿ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ಸ್ವಯಂ ಸೇವಾ ಸಂಘಟನೆಯೊಂದು ಶಾಲಾಕಾಲೇಜುಗಳಲ್ಲಿ ಮತ್ತು ಇವುಗಳ ಆಸುಪಾಸಿನಲ್ಲಿ ಜಂಕ್ ಫುಡ್ ನಿಷೇಧಿಸಬೇಕೆಂದು ದಾವೆಯೊಂದನ್ನು ಹೂಡಿತ್ತು. ಈ ಸಮಸ್ಯೆಯ ಕುರಿತು ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿದ ನ್ಯಾಯಾಲಯವು, ನಿರುಪಯುಕ್ತ ಆಹಾರ ಸೇವನೆಯ ದುಷ್ಪರಿಣಾಮಗಳನ್ನು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಮಕ್ಕಳ ತಜ್ಞರು ಈಗಾಗಲೇ ದಾಖಲಿಸಿದ್ದು, ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಆದೇಶಿಸಿತ್ತು.

ಈ ಸಮಿತಿಯು ನಿರುಪಯುಕ್ತ ಆಹಾರಗಳ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದಕ್ಕಿಂತಲೂ, ನಿರುಪಯುಕ್ತ ಆಹಾರ ಎಂದು ಹೇಳಲು ಇವುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳು ಇರಬೇಕು ಎನ್ನುವ ಮಾನದಂಡಗಳನ್ನು ರೂಪಿಸಲು ಯತ್ನಿಸಬೇಕಾಗಿಬಂದಿತ್ತು. ಇದರ ಆಧಾರದ ಮೇಲೆ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ಎಂದು ಗುರುತಿಸಿರುವ ಚಿಪ್ಸ್ ಮತ್ತು ಇತರ ಕರಿದ ಹಾಗೂ ಪ್ಯಾಕ್ ಮಾಡಿದ ತಿನಿಸುಗಳು, ಕಾರ್ಬೋನೇಟೆಡ್ ಲಘುಪಾನೀಯಗಳು, ನೂಡಲ್ಸ್ ಮತ್ತು ಬೇಕರಿ ಉತ್ಪನ್ನಗಳನ್ನು ಸೇರಿಸಲಾಗಿತ್ತು. ಸಮಿತಿಯ ಅಭಿಪ್ರಾಯದಂತೆ ಮಕ್ಕಳು ತಾವು ಸೇವಿಸಬಹುದಾದ ಆಹಾರಗಳನ್ನು ನಿರ್ಧರಿಸಲು ಯೋಗ್ಯರಲ್ಲದೇ ಇರುವುದರಿಂದ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಸುಲಭದಲ್ಲೇ ಪ್ರಭಾವಿತರಾಗುವುದರಿಂದ, ಶಾಲಾಕಾಲೇಜುಗಳ ಆಸುಪಾಸಿನಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ಸಲಹೆಯನ್ನು ನೀಡಿತ್ತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸೂಚಿಸಿತ್ತು. ಇದರೊಂದಿಗೆ ಶಾಲಾಕಾಲೆಜುಗಳಲ್ಲಿನ ಕ್ಯಾಂಟೀನ್ ಗಳಲ್ಲಿ ಶೇ. ೮೦ ರಷ್ಟು ಆಹಾರಗಳು ಆರೋಗ್ಯಕರವಾಗಿ ಇರಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿತ್ತು.ಇವೆಲ್ಲಕ್ಕೂ ಮಿಗಿಲಾಗಿ  ಖ್ಯಾತನಾಮ ಕ್ರೀಡಾಪಟುಗಳು ಹಾಗೂ ಚಲನಚಿತ್ರ ತಾರೆಯರು ಜಂಕ್ ಫುಡ್ ಗಳ ಜಾಹೀರಾತುಗಳಲ್ಲಿ ಭಾಗಿಯಾಗುವುದನ್ನೇ ನಿಷೇಧಿಸುವಂತೆ ಸಲಹೆಯನ್ನು ನೀಡಿತ್ತು.

ಆದರೆ ಸಮಿತಿಯ ಈ ಸಲಹೆ ಸೂಚನೆಗಳನ್ನು ಅಂಗೀಕರಿಸಲು ಜಂಕ್ ಫುಡ್ ಗಳ ತಯಾರಕರು ಮತ್ತು ಖ್ಯಾತನಾಮ ಸಂಸ್ಥೆಗಳು ಸಿದ್ಧರಿರಲಿಲ್ಲ. ಇವರ ಅಭಿಪ್ರಾಯದಂತೆ ಜಂಕ್ ಫುಡ್ ಗಳನ್ನು ನಿಷೇಧಿಸುವ ಬದಲಾಗಿ, ಮಕ್ಕಳು “ ಜವಾಬ್ದಾರಿಯುತವಾಗಿ ಆಹಾರವನ್ನು ಸೇವಿಸಬೇಕು “ ಎಂದಿದ್ದರೂ, ಜವಾಬ್ದಾರಿಯುತವಾಗಿ ಆಹಾರವನ್ನು ಸೇವಿಸಬೇಕು ಎನ್ನುವುದರ ಅರ್ಥವೇನೆಂದು ವಿವರಿಸಲು ವಿಫಲರಾಗಿದ್ದರು.

ಜಾಗತಿಕ ಮಟ್ಟದಲ್ಲಿ ಹೋರಾಟ

ಜಾಗತಿಕ ಮಟ್ಟದಲ್ಲಿ ಜಂಕ್ ಫುಡ್ ಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಹಾಗೂ ಶಾಲಾಕಾಲೇಜುಗಳ ಸಮೀಪದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸುವ ಮತ್ತು ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಖ್ಯಾತನಾಮ ವ್ಯಕ್ತಿಗಳು ಇವುಗಳ ಜಾಹೀರಾತುಗಳಲ್ಲಿ ಭಾಗವಹಿಸದಂತೆ ಹಾಗೂ ಆರೋಗ್ಯದಾಯಕ ಆಹಾರ ಸೇವನೆಯನ್ನು ಪ್ರೋತ್ಸಾಹಿಸುವಂತೆ ಮನವೊಲಿಸಲಾಗುತ್ತಿದೆ. ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಇವರ ಪತ್ನಿ ಮಿಶೆಲ್ ಒಬಾಮರವರು ಜಂಕ್ ಫುಡ್ ಗಳ ವಿರುದ್ಧ ಪ್ರಚಾರ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇಂತಹ ಪ್ರಯತ್ನಗಳು ಇನ್ನೂ ಆರಂಭವಾಗಿಲ್ಲದಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು

ಅದೇನೇ ಇರಲಿ, ನಿಮ್ಮ ಮಕ್ಕಳು ಅತಿಯಾದ ಪ್ರಮಾಣದಲ್ಲಿ ಮತ್ತು ದಿನನಿತ್ಯ ನಿರುಪಯುಕ್ತ ಆಹಾರಗಳನ್ನು ಸೇವಿಸುವ ಹವ್ಯಾಸವನ್ನು ಹೊಂದಿದ್ದಲ್ಲಿ, ಇದನ್ನು ಇಂದಿನಿಂದಲೇ ನಿಯಂತ್ರಿಸಿ. ಸಾಧ್ಯವಿದ್ದಲ್ಲಿ ಇವುಗಳ ಸೇವನೆಯನ್ನೇ ನಿಲ್ಲಿಸಲು ಪ್ರಯತ್ನಿಸಿ. 

ತಮ್ಮ ಮಕ್ಕಳು ಬೆಳಗ್ಗಿನ ಉಪಾಹಾರವನ್ನು ಸೇವಿಸಲು ನಿರಾಕರಿಸಿದಾಗ, ಬರಿ ಹೊಟ್ಟೆಯಲ್ಲಿ ಶಾಲೆಗೆ ಹೋಗುವುದು ಸರಿಯಲ್ಲವೆಂದು ಮ್ಯಾಗಿ ನೂಡಲ್ಸ್ ತಯಾರಿಸಿ ನೀಡುತ್ತಿದ್ದ ಮಾತೆಯರು ಇದೀಗ ಮಾರುಕಟ್ಟೆಯಿಂದ ಮ್ಯಾಗಿ ಮಾಯವಾದ ಬಳಿಕ ನಿರಾಳವಾಗಿದ್ದಾರೆ. ಅಂತೆಯೇ ಅನೇಕ ಮಕ್ಕಳು ಅನ್ಯಮಾರ್ಗವಿಲ್ಲದೇ ಅಮ್ಮ ತಯಾರಿಸಿದ ಇಡ್ಲಿ – ದೋಸೆಗಳನ್ನು ಸೇವಿಸುತ್ತಿದ್ದಾರೆ!.

ಅಂತಿಮವಾಗಿ ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯ ನಿಮ್ಮ ಕೈಯ್ಯಲ್ಲೇ ಇದೆ ಎನ್ನುವುದನ್ನು ಮಾತ್ರ ಮರೆಯದಿರಿ. ಆರೋಗ್ಯದಾಯಕ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು





No comments:

Post a Comment