Wednesday, August 12, 2015

SVACH BHAARAT MISSION



             ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಇಚ್ಛಾಶಕ್ತಿಯ ಕೊರತೆ

ದೇಶದ ಪ್ರಧಾನ ಸೇವಕನೆಂದು ಸ್ವಯಂ ಘೋಷಿಸಿದ್ದ ನರೇಂದ್ರ ಮೋದಿಯವರು ಕಳೆದ ವರ್ಷದ ಅಕ್ಟೋಬರ್ ೨ ರಂದು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಛ ಭಾರತ ಅಭಿಯಾನ " ಕ್ಕೆ ಚಾಲನೆಯನ್ನು ನೀಡಿದ್ದರು. ಗಾಂಧೀ ಜಯಂತಿಯಂದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದ ಮೋದಿಯವರು, ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಕನಿಷ್ಠ ಎರಡು ಗಂಟೆಗಳಂತೆ, ವರ್ಷದಲ್ಲಿ ೧೦೦ ಗಂಟೆಗಳನ್ನು  ಸ್ವಚ್ಛತೆಗಾಗಿ ವಿನಿಯೋಗಿಸಬೇಕೆಂದು ವಿನಂತಿಸಿದ್ದರು.

ಪ್ರಾರಂಭಿಕ ಹಂತದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ದೊರೆತಿದ್ದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡಾಗ , ನಿರೀಕ್ಷಿತ ಅವಧಿಗೆ ಮುನ್ನ ಇದು ಯಶಸ್ವಿಯಾಗುವುದೆನ್ನುವ ಭರವಸೆಯು ಇದೀಗ ಹುಸಿಯಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣವೊಂದರಲ್ಲಿ  " ಮೋದಿಯವರ ಸ್ವಚ್ಛ ಭಾರತ ಅಭಿಯಾನವು ವಿಫಲವಾಗಿರುವುದು ಇದೀಗ ಇತಿಹಾಸ " ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿದ್ದ ವ್ಯಕ್ತಿಗೆ, ಇದರ ವೈಫಲ್ಯಕ್ಕೆ ಮತ್ತು ತತ್ಪರಿಣಾಮವಾಗಿ ಮುಂದೆ ದೇಶದ ಜನತೆಯನ್ನು ಕಾಡಲಿರುವ ಸಮಸ್ಯೆಗಳಿಗೆ ಹೊಣೆಗಾರರು  ನಾವೇ ಹೊರತು ಮೋದಿಯವರಲ್ಲ ಎನ್ನುವ ಸತ್ಯದ ಅರಿವಿಲ್ಲದಿರುವುದನ್ನು ಗಮನಿಸಿ ಅಚ್ಚರಿಯೂ ಆಗಿತ್ತು. ರಾಜಕೀಯ ದೃಷ್ಠಿಯಿಂದ ಇಂತಹ ಅಭಿಪ್ರಾಯವನ್ನು ಪ್ರಕಟಿಸುವ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಇದಕ್ಕೂ ಹೆಚ್ಚೇನನ್ನೂ ಅಪೇಕ್ಷಿಸುವಂತಿಲ್ಲ.ಆದರೆ ಅದೃಷ್ಟವಶಾತ್ ಇಂತಹ ಪ್ರತಿಕ್ರಿಯೆಗಳಿಂದಾಗಿ ಸ್ವಚ್ಚ ಭಾರತ ಅಭಿಯಾನಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳೇ ಇಲ್ಲ.

ಈ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಕ್ರಿಯವಾಗಿ ಭಾಗಿಯಾಗಿದ್ದಲ್ಲಿ ನಮ್ಮ ದೇಶವೂ ಅನೇಕ ಪಾಶ್ಚಾತ್ಯ ದೇಶಗಳಂತೆಯೇ ಸ್ವಚ್ಛವಾಗುವುದರೊಂದಿಗೆ, ಇದೀಗ ಸ್ವಸ್ಥ ಹಾಗೂ ಸುಂದರವಾಗುತ್ತಿತ್ತು. ಆದರೆ ಕೇವಲ ಪ್ರಚಾರದ ಸಲುವಾಗಿ ಇದರಲ್ಲಿ ಭಾಗಿಯಾಗಿದ್ದ ರಾಜಕೀಯ ನೇತಾರರು ಮತ್ತು ಕೆಲ ಸಂಘಟನೆಗಳು, ಒಂದೆರಡು ತಿಂಗಳುಗಳ ಬಳಿಕ ಈ ವಿಚಾರವನ್ನೇ ಮರೆತಿದ್ದು ವಿಪರ್ಯಾಸವೇ ಸರಿ.

ಸ್ವಚ್ಚತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಲು ಇಚ್ಛೆಯಿಲ್ಲದ ಜನರು ಕನಿಷ್ಠ ಪಕ್ಷ ತಾವು ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಉತ್ಪಾದಿಸಿರುವ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಯಲ್ಲಿ ಸಹಕರಿಸುವ ಮೂಲಕ ಪರೋಕ್ಷವಾಗಿ ಭಾಗಿಯಾಗಬಹುದಿತ್ತು. ಆದರೆ ಕಾರಣಾಂತರಗಳಿಂದ ಸಹಕರಿಸದೆ ಇದ್ದ ಜನರಿಂದಾಗಿ ಈ ಅಭಿಯಾನವು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವೆನಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ನಮ್ಮ ದೇಶದ ಜನತೆಯನ್ನು ಪೀಡಿಸುವ ಹಲವಾರು ವಿಧದ ರೋಗರುಜಿನಗಳ ಸಮಸ್ಯೆಯೂ ಬಗೆಹರಿದಿಲ್ಲ. ವಿಶೇಷವೆಂದರೆ ಅನೇಕ ವಿದ್ಯಾವಂತರಿಗೂ ಈ ಸತ್ಯದ ಅರಿವಿಲ್ಲ!.

ಸ್ವಚ್ಛತೆ ಮತ್ತು ಆರೋಗ್ಯ

ನಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಮತ್ತು ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತಲೇ ಇರುತ್ತವೆ. ಜೊತೆಗೆ ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸಿ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ನಮ್ಮ ಪರಿಸರದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವ್ಯತ್ಯಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ. ಜನಸಾಮಾನ್ಯರ ಆರೋಗ್ಯದೊಂದಿಗೆ ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುವ ಈ  ಸಮಸ್ಯೆಯನ್ನು ತಡೆಗಟ್ಟಲು, ಸ್ವಚ್ಛತಾ ಅಭಿಯಾನವು ಯಶಸ್ವಿಯಾಗಲೇಬೇಕಿದೆ.

ನೀವೇನು ಮಾಡಬಹುದು

ಪ್ರಧಾನ ಮಂತ್ರಿಯವರು ವಿನಂತಿಸಿರುವಂತೆ ವಾರದಲ್ಲಿ ಕನಿಷ್ಠ ೨ ತಾಸುಗಳನ್ನು ಸ್ವಚ್ಛತೆಗಾಗಿ ಮೀಸಲಿಡಿ. ಇದು ಅಸಾಧ್ಯವೆನಿಸಿದಲ್ಲಿ ನೀವು ಪ್ರತಿನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ನಿಯಂತ್ರಿಸಿ. ಯಾವುದೇ ಕಾರಣಕ್ಕೂ ಸಂಗ್ರಹಿತ ತ್ಯಾಜ್ಯಗಳನ್ನು ಚರಂಡಿ ಅಥವಾ ಎಲ್ಲೆಂದರಲ್ಲಿ ಎಸೆಯದಿರಿ. ಉತ್ಪಾದಿತ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಲು ಬಳಸಿ. ಅಥವಾ ನಿಮ್ಮ ಮನೆಯ ಅವರಣದಲ್ಲಿರುವ ಮರಗಳ ಬುಡದಲ್ಲಿ ಹಾಕಿ. ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪುನರ್ ಬಳಸಿ. ಮಾರುಕಟ್ಟೆಗೆ ತೆರಳುವಾಗ ಬಟ್ಟೆಯ ಚೀಲವನ್ನು ತಪ್ಪದೆ ಕೊಂಡೊಯ್ಯಿರಿ. ವರ್ತಕರು ನೀಡುವ ಪ್ಲಾಸ್ಟಿಕ್ ಚೀಲಗಳನ್ನು ನಯವಾಗಿ ನಿರಾಕರಿಸಿ. ಪುನರ್ ಆವರ್ತನಗೊಳಿಸಬಲ್ಲ  ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಮನೆಮನೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಯಕರ್ತರಿಗೆ ನೀಡಿ ಗುಜರಿ ಅಂಗಡಿಗಳಿಗೆ ಮಾರುವಂತೆ ಸೂಚಿಸಿ. ನಿಮ್ಮ ನೆರೆಕರೆಯವರಿಗೂ ಇದೇ ಸಲಹೆಯನ್ನು ನೀಡಿ, ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. ನಿಮ್ಮ ಮನೆ, ಸುತ್ತಮುತ್ತಲ ಆವರಣ, ಸಮೀಪದ ರಸ್ತೆ, ನಿಮ್ಮೂರು ಮತ್ತು ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮನಸ್ಪೂರ್ವಕವಾಗಿ ಸಹಕರಿಸಿ. ತನ್ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, “ ಸ್ವಚ್ಛ ಭಾರತ, ಸ್ವಸ್ಥ ಮತ್ತು ಸುಂದರ ಭಾರತ “ ಎನ್ನುವ ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸಲು ಶ್ರಮಿಸುವ ಮೂಲಕ ಗಾಂಧೀಜಿಯವರ ಜನ್ಮ ದಿನವನ್ನು ಅವಿಸ್ಮರಣೀಯವನ್ನಾಗಿಸಿ.

ಇದನ್ನು ಬಾಕ್ಸ್ ನಲ್ಲಿ ಪ್ರಕಟಿಸಿ

ಅಂತರಂಗ – ಬಹಿರಂಗ ಶುದ್ಧಿ

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಬರೆಯುವಾಗ ಬಾಲ್ಯದಲ್ಲಿ ಓದಿದ್ದ ಕತೆಯೊಂದು ನೆನಪಾಗುತ್ತಿದೆ. ಗುರುಕುಲವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಲ್ಲ ಶಿಷ್ಯರಿಗೆ ಒಂದೊಂದು ತಂಬಿಗೆಯನ್ನು ನೀಡಿದ ಗುರುಗಳು, ಇದನ್ನು ಸ್ವಚ್ಛಗೊಳಿಸಿ ತರುವಂತೆ ಆದೇಶಿಸಿದ್ದರು. ಸ್ವಲ್ಪ ಸಮಯದ ಬಳಿಕ ಮರಳಿದ ಶಿಷ್ಯರೆಲ್ಲರ ಕೈಗಳಲ್ಲಿ ಥಳಥಳಿಸುವ ತಂಬಿಗೆಗಳಿದ್ದವು. ಆದರೆ ಒಬ್ಬ ಶಿಷ್ಯನ ಕೈಯ್ಯಲ್ಲಿದ್ದ ತಂಬಿಗೆಯು ಮೇಲ್ನೋಟಕ್ಕೆ ಕೊಳಕಾಗಿ ಕಾಣಿಸುತ್ತಿದ್ದುದನ್ನು ಕಂಡ ಇತರ ಶಿಷ್ಯರು, ಆತನನ್ನು ಲೇವಡಿ ಮಾಡಿದ್ದರು. ಇದನ್ನು ಕಂಡ ಗುರುಗಳು ಆತನ ಬಳಿಯಿದ್ದ ತಂಬಿಗೆಯನ್ನು ಪರಿಶೀಲಿಸಿದಾಗ, ಅದರ ಒಳಭಾಗವು ಅತ್ಯಂತ ಸ್ವಚ್ಛವಾಗಿರುವುದು ಅರಿಯಿತು. ಬಳಿಕ ಅನ್ಯ ಶಿಷ್ಯರ ಕೈಯ್ಯಲ್ಲಿದ್ದ ತಂಬಿಗೆಗಳನ್ನು ಒಂದೊಂದಾಗಿ ಪರಿಶೀಲಿಸಿದಾಗ, ಅವುಗಳ ಒಳಭಾಗ ಅತ್ಯಂತ ಕೊಳಕಾಗಿರುವುದು ತಿಳಿದುಬಂದಿತ್ತು. ಇದನ್ನು ಗಮನಿಸಿದ ಗುರುಗಳ ಮುಖದಲ್ಲಿ ಮಂದಹಾಸ ಮಿನುಗಿತ್ತು. ಗುರುಗಳ ಅಭಿಪ್ರಾಯದಂತೆ ಕೇವಲ ಒಬ್ಬ ಶಿಷ್ಯನು ಅಂತರಂಗದ ಶುಚಿತ್ವಕ್ಕೆ ಗಮನವನ್ನು ನೀಡಿದ್ದು, ಇತರ ಶಿಷ್ಯರು ಬಹಿರಂಗ ಶುದ್ಧಿಗೆ ಪ್ರಾಮುಖ್ಯವನ್ನು ನೀಡಿದ್ದರು.

ಮೇಲಿನ ಕತೆಯಲ್ಲಿ ಅಂತರಂಗ ಶುದ್ಧಿಗೆ ನೀಡಿರುವ ಪ್ರಾಮುಖ್ಯತೆಯನ್ನು ಇಂದು ನಾವೆಲ್ಲರೂ ತಪ್ಪದೇ ಪರಿಪಾಲಿಸುತ್ತಿದ್ದೇವೆ. ಅರ್ಥಾತ್, ನಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಸಲುವಾಗಿ  ಪ್ರತಿನಿತ್ಯ ಸಾಕಷ್ಟು ಶ್ರಮಿಸುತ್ತೇವೆ. ಆದರೆ ನಮ್ಮ ಮನೆಯ ಮುಂದಿನ ರಸ್ತೆ, ನಮ್ಮ ಕೇರಿ ಮತ್ತು ನಮ್ಮ ಊರಿನ ಸ್ವಚ್ಛತೆಯನ್ನು ಕಾಪಾಡಲು ನಿರ್ಲಕ್ಷಿಸುತ್ತಿದ್ದೇವೆ. ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಿದ್ದಲ್ಲಿ, ಅಂತರಂಗ ಮತ್ತು ಬಹಿರಂಗ ಶುದ್ಧಿಗಳೆರಡಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನು ನಾವಿಂದು ನೀಡಲೆಬೇಕಾಗಿದೆ.

ಕೊನೆಯ ಮಾತು

ಪ್ರಧಾನಿಯವರ ಕರೆಗೆ ಓಗೊಟ್ಟು ಸ್ವಯಂಪ್ರೇರಿತವಾಗಿ ಸ್ವಚ್ಛತೆಗಾಗಿ ಶ್ರಮಿಸುವ ವ್ಯಕ್ತಿಗಳು ಅಥವಾ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರನ್ನು ಪ್ರೋತ್ಸಾಹಿಸಿ ಗೌರವಿಸಿ. ಸಾಧ್ಯವಿದ್ದಲ್ಲಿ ಅವರೊಂದಿಗೆ ಕೈಜೋಡಿಸಿ. ಅವರು ಸ್ವಚ್ಛಗೊಳಿಸಿರುವ ಸ್ಥಳದಲ್ಲಿ ಮತ್ತೆ ತ್ಯಾಜ್ಯಗಳನ್ನು ಸುರಿಯದಿರಿ.

ಆಗ್ಲಿ ಇಂಡಿಯನ್ಸ್ ಮತ್ತು ರಾಮಕೃಷ್ಣ ಮಿಶನ್ ಗಳಂತಹ ಕೆಲ ಸಂಸ್ಥೆಗಳು ನಿಯಮಿತವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದೇ ರೀತಿಯಲ್ಲಿ ದೇಶದ ಎಲ್ಲ ಪ್ರಜೆಗಳು ಮತ್ತು ಇನ್ನಷ್ಟು ಸಂಘಟನೆಗಳು ಇದರಲ್ಲಿ ಭಾಗಿಯಾದಲ್ಲಿ, ನಮ್ಮ ದೇಶವು ಸ್ವಸ್ಥ ಮತ್ತು ಸುಂದರವಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು





No comments:

Post a Comment