Friday, August 14, 2015

AUGUST 20 - WORLD MOSQUITO DAY



      ಆಗಸ್ಟ್ ೨೦ : ವಿಶ್ವ ಸೊಳ್ಳೆಗಳ ದಿನಾಚರಣೆ !

ದಷ್ಟಪುಷ್ಟ ಶರೀರವನ್ನು ಹೊಂದಿರುವ ಎಂಟೆದೆಯ ಬಂಟರನ್ನೂ ಹಾಸಿಗೆ ಹಿಡಿಸಬಲ್ಲ ಶಕ್ತಿ ಒಂದು ಪುಟ್ಟ ಸೊಳ್ಳೆಗಿದೆ. ಜಾನುವಾರುಗಳು ಮತ್ತು ಮನುಷ್ಯರ ರಕ್ತವನ್ನು ಹೀರುವ ಈ ಕ್ಷುದ್ರ ಜೀವಿಗೆ, ಮಾರಕ ಕಾಯಿಲೆಗಳನ್ನು ಹರಡುವ ಸಾಮರ್ಥ್ಯವೂ ಇದೆ. ಇದೇ ಕಾರಣದಿಂದಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ವ್ಯಾಪಕವಾಗಿ ಪತ್ತೆಯಾದಾಗ, ಅಧಿಕತಮ ಜನರು ಸ್ವಾಭಾವಿಕವಾಗಿಯೇ ಭಯಭೀತರಾಗುತ್ತಾರೆ. ಮನುಷ್ಯರ ರಕ್ತವನ್ನು ಹೀರಿ ಜೀವಿಸುವ ಹಾಗೂ ವೈವಿಧ್ಯಮಯ ಮತ್ತು ಮಾರಕವಾಗಿ ಪರಿಣಮಿಸಬಲ್ಲ ಕಾಯಿಲೆಗಳನ್ನು ಹರಡುವ ಈ  ರಕ್ತಪಿಪಾಸುವಿನ ಸಲುವಾಗಿ “ ವಿಶ್ವ ಸೊಳ್ಳೆಗಳ ದಿನ “ ವನ್ನು ಆಚರಿಸಲಾಗುತ್ತಿದೆಯೇ?, ಎಂದು ಅಚ್ಚರಿ ಪಡದಿರಿ. ಏಕೆಂದರೆ ಈ ವಿಶೇಷ ದಿನಾಚರಣೆಗೆ ನಿರ್ದಿಷ್ಟ ಕಾರಣವಿದೆ.

ಸೊಳ್ಳೆಗಳಿಗೊಂದು ದಿನ !
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಕಳೆದ ೧೧೪ ವರ್ಷಗಳಿಂದ ಆಗಸ್ಟ್ 20 ರಂದು " ವಿಶ್ವ ಸೊಳ್ಳೆಗಳ ದಿನ " ವನ್ನು ಆಚರಿಸಲಾಗುತ್ತಿದೆ. ಬ್ರಿಟನ್ ನ ಖ್ಯಾತ ವೈದ್ಯ ಸರ್ ರೋನಾಲ್ಡ್ ರಾಸ್ಸ್ ಇವರು ೧೮೯೭ ರಲ್ಲಿ ಹೆಣ್ಣು ಸೊಳ್ಳೆಗಳಿಂದ ಮಲೇರಿಯ ವ್ಯಾಧಿಯು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವುದನ್ನು ಪತ್ತೆಹಚ್ಚಿದ್ದರು.ತತ್ಪರಿಣಾಮವಾಗಿ ಜಗತ್ತಿನ ವೈದ್ಯಕೀಯ ಸಂಶೋಧಕರು ಮಲೇರಿಯ ಕಾಯಿಲೆಯನ್ನು ಹರಡುವ ಸೊಳ್ಳೆಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳುವ ಹಾಗೂ ಇವುಗಳನ್ನು ನಿವಾರಿಸುವ ಮತ್ತು ನಾಶಪಡಿಸುವ ವಿಚಾರಗಳನ್ನು ಅಭಿವೃದ್ಧಿಪಡಿಸಲು ಮೂಲವೆನಿಸಿತ್ತು. ಈ ಸಂಶೋಧನೆಗಾಗಿ ಡಾ.ರಾಸ್ ಇವರಿಗೆ ೧೯೦೨ ರಲ್ಲಿ ವೈದ್ಯಕೀಯ ಸಂಶೋಧನೆಗೆ  ಸಂಬಂಧಿಸಿದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.  ಇದರ ಸ್ಮರಣಾರ್ಥ ಹಾಗೂ ಡಾ.ರಾಸ್ಸ್ ಇವರ ಅಪೇಕ್ಷೆಯಂತೆ ಲಂಡನ್ ಸ್ಕೂಲ್ ಆಫ್ ಹೈಜೀನ್ ಎಂಡ್ ಟ್ರೋಪಿಕಲ್ ಮೆಡಿಸಿನ್ ಸಂಸ್ಥೆಯು ವರ್ಷಂಪ್ರತಿ ಆಗಸ್ಟ್ ೨೦ ರಂದು ವಿಶ್ವ ಸೊಳ್ಳೆಗಳ ದಿನವನ್ನು ಆಚರಿಸುತ್ತಿದೆ. ೧೯೩೦ ರಿಂದ ಈ ಸಂಪ್ರದಾಯವನ್ನು ಪರಿಪಾಲಿಸುತ್ತಿರುವ ಸಂಸ್ಥೆಯು, ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಸೊಳ್ಳೆಗಳಿಂದ ಅನಾರೋಗ್ಯ

ಸೊಳ್ಳೆಗಳಲ್ಲಿ ಹಲವಾರು ತಳಿಗಳಿದ್ದು, ಕೆಲ ತಳಿಗಳು ನಿರಪಾಯಕಾರಿ ಅಥವಾ ಮನುಕುಲಕ್ಕೆ ಉಪಯುಕ್ತವೆನಿಸಿದರೂ, ಬಹುತೇಕ ಸೊಳ್ಳೆಗಳು ಮನುಷ್ಯನೂ ಸೇರಿದಂತೆ ಅನ್ಯ ಕಶೇರುಕಗಳ ರಕ್ತವನ್ನು ಹೀರುವ ಕಾರಣದಿಂದಾಗಿ ಅತ್ಯಂತ ಅಪಾಯಕಾರಿ ಹಾಗೂ ಉಪದ್ರವಕಾರಿ ಎನಿಸಿವೆ. ಅಧಿಕತಮ ಹೆಣ್ಣು ಸೊಳ್ಳೆಗಳು ರಕ್ತವನ್ನು ಸೇವಿಸುವ ಕೀಟಗಳಾಗಿದ್ದು, ಇವುಗಳಲ್ಲಿ ಕೆಲ ತಳಿಗಳು ಮನುಷ್ಯರಿಗೆ ಅತ್ಯಂತ ಅಪಾಯಕಾರಿ  ಎನಿಸುವ ಮಲೇರಿಯ,ಡೆಂಗೆ, ಚಿಕುನ್ ಗುನ್ಯಾ, ಎಲ್ಲೊ ಫಿವರ್ ಮತ್ತು ಫೈಲೆರಿಯಾಸಿಸ್,ವೆಸ್ಟ್ ನೈಲ್ ವೈರಸ್, ಜಪಾನೀಸ್ ಎನ್ಸೆಫಲೈಟಿಸ್, ಸೈಂಟ್ ಲೂಯಿಸ್ – ವೆಸ್ಟರ್ನ್ ಇಕ್ವೈನ್ – ಈಸ್ಟರ್ನ್ ಇಕ್ವೈನ್ – ವೆನೆಜುವೇಲನ್ ಹಾಗೂ ಲಾ ಕ್ರಾಸ್  ಎನ್ಸೆಫಲೈಟಿಸ್, ಜಿಕಾ ಜ್ವರ, ಸಾಂಕ್ರಾಮಿಕ ಪಾಲಿಆರ್ಥ್ರೈಟಿಸ್ ಗಳಂತಹ ಕಾಯಿಲೆಗಳನ್ನು ಹರಡುತ್ತವೆ. ಆರೋಗ್ಯ ಕ್ಷೇತ್ರದ ಕೆಲ ತಜ್ಞರ ಅಭಿಪ್ರಾಯದಂತೆ ಸೊಳ್ಳೆಗಳು ಮನುಷ್ಯರ ಪಾಲಿಗೆ ಅತ್ಯಂತ ಅಪಾಯಕಾರಿಗಳಾಗಿದ್ದು, ಕೆಲ ಸಂದರ್ಭಗಳಲ್ಲಿ ಮಾರಕವೆನಿಸಬಲ್ಲ ಕಾಯಿಲೆಗಳನ್ನು ಹರಡಬಲ್ಲ ಜೀವಿಗಳಾಗಿವೆ. ಅದೃಷ್ಟವಶಾತ್ ಸೊಳ್ಳೆಗಳ ಜೀವಿತಾವಧಿಯು ಕೇವಲ ೩೦ ದಿನಗಳಾಗಿರುವುದರಿಂದ, ಇವುಗಳು ಹರಡುವ ಕಾಯಿಲೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡುತ್ತದೆ. ಮನುಷ್ಯನಿಗೆ ತಿಳಿದಿರುವ ಸುಮಾರು ೧೪,೦೦೦ ರೋಗಕಾರಕ ಸೂಕ್ಷ್ಮಾಣುಜೀವಿಗಳಲ್ಲಿ, ೬೦೦ ರೋಗಾಣುಗಳು ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತವೆ. ಇಂತಹ ರೋಗಾಣುಗಳ “ ಆಶ್ರಯ ತಾಣ “ ಕ್ಕೆ ಸೊಳ್ಳೆಗಳು ಉತ್ತಮ ಉದಾಹರಣೆಯೆನಿಸುತ್ತವೆ!.

ರೋಗಪೀಡಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆಗಳು ಹೀರಿದ ರಕ್ತದೊಂದಿಗೆ ಅವುಗಳ ಶರೀರವನ್ನು ಪ್ರವೇಶಿಸಿದ ರೋಗಾಣುಗಳು, ಈ ಸೊಳ್ಳೆಯು ಮತ್ತೊಬ್ಬ ವ್ಯಕ್ತಿಗೆ ಕಚ್ಚಿದಾಗ ಆತನ ಶರೀರದಲ್ಲಿ ಪ್ರವೇಶವನ್ನು ಗಳಿಸುತ್ತವೆ. ಸೊಳ್ಳೆಗಳು ಮನುಷ್ಯನನ್ನು ಕಚ್ಚುವಾಗ ಸ್ರವಿಸುವ ಜೊಲ್ಲಿನಲ್ಲಿ ರಕ್ತವು ಹೆಪ್ಪುಗಟ್ಟುವುದನ್ನು ತಡೆಗಟ್ಟುವ ಅಂಶಗಳು ಸೇರಿದ್ದು, ರಕ್ತವನ್ನು ಅಡೆತಡೆ ಇಲ್ಲದೇ ಹೀರಲು ಉಪಯುಕ್ತವೆನಿಸುತ್ತದೆ.  

ಅಂಕಿ ಅಂಶಗಳು

ಸೊಳ್ಳೆಗಳ ವಿವಿಧ ತಳಿಗಳು ಅನೇಕ ವಿಧದ ಕಾಯಿಲೆಗಳನ್ನು ಹರಡುತ್ತಿದ್ದು, ಇವುಗಳು ಒಂದು ವರ್ಷದಲ್ಲಿ ಆಫ್ರಿಕ, ಸೌತ್ ಮತ್ತು ಸೆಂಟ್ರಲ್ ಅಮೇರಿಕ, ಮೆಕ್ಸಿಕೊ, ರಷ್ಯ ಮತ್ತು ಏಷ್ಯಾ ಖಂಡಗಳಿಗೆ ಸೇರಿದ ೭೦೦ ದಶಲಕ್ಷಕ್ಕೂ ಅಧಿಕ ಜನರನ್ನು ಪೀಡಿಸುವುದರೊಂದಿಗೆ, ಕನಿಷ್ಠ ೨ ದಶಲಕ್ಷ ಜನರ ಮರಣಕ್ಕೆ ಕಾರಣವೆನಿಸುತ್ತಿದೆ. ಸೊಳ್ಳೆಗಳ ಕಡಿತದಿಂದ ಹರಡುವ ಮಲೇರಿಯ ವ್ಯಾಧಿಗೆ ವರ್ಷಂಪ್ರತಿ ಲಕ್ಷಾಂತರ ಜನರು ಈಡಾಗುತ್ತಿದ್ದು, ೭,೮೧,೦೦೦ ರೋಗಿಗಳ ಅಕಾಲಿಕ ಮರಣಕ್ಕೆ( ವಿಶೇಷವಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ) ಕಾರಣವೆನಿಸುತ್ತಿದೆ. ಇದರಲ್ಲಿ ಶೇ.೯೦ ರಷ್ಟು ಜನರು ಆಫ್ರಿಕನ್ ದೇಶಗಳ ನಿವಾಸಿಗಳಾಗಿದ್ದಾರೆ. ಅದೇ ರೀತಿಯಲ್ಲಿ ಜಗತ್ತಿನಾದ್ಯಂತ ೪೦ ದಶಲಕ್ಷಕ್ಕೂ ಅಧಿಕ ಜನರು ಫೈಲೆರಿಯಾಸಿಸ್ ವ್ಯಾಧಿಯಿಂದ ಬಳಲುತ್ತಿದ್ದಾರೆ.

ತಡೆಗಟ್ಟುವುದೆಂತು?

ಈ ಅಪಾಯಕಾರಿ ಮತ್ತು ಮಾರಕ ಸಮಸ್ಯೆಯನ್ನು ತಡೆಗಟ್ಟಲು, ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವ ಮತ್ತು ನಾಶಪಡಿಸುವ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಅಂತೆಯೇ ಇವುಗಳಿಂದ ಹರಡಬಲ್ಲ ಕಾಯಿಲೆಗಳನ್ನು ತಡೆಗಟ್ಟಬಲ್ಲ ಔಷದಗಳ ಬಳಕೆ ಮತ್ತು ಲಸಿಕೆಗಳ ಸಂಶೋಧನೆಗಳೇ ಉಪಯುಕ್ತ ಹಾಗೂ ಪರಿಣಾಮಕಾರಿ ವಿಧಾನಗಳಾಗಿವೆ. ಅಂತೆಯೇ ಸೊಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳು, ಚರ್ಮದ ಮೇಲೆ ಹಚ್ಚುವ ಮುಲಾಮುಗಳು, ಸೊಳ್ಳೆಗಳನ್ನೂ ದೂರವಿರಿಸಬಲ್ಲ ಬತ್ತಿಗಳು ಹಾಗೂ ದ್ರವಗಳ ಬಳಕೆಯೂ ತಕ್ಕ ಮಟ್ಟಿಗೆ ಉಪಯುಕ್ತವೆನಿಸಬಲ್ಲದು. ಅಂತೆಯೇ ನಿಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದು ಅತ್ಯವಶ್ಯಕವೂ ಹೌದು. ಇವೆಲ್ಲಕ್ಕೂ ಮಿಗಿಲಾಗಿ ಸೊಳ್ಳೆಗಳಿಂದ ಹರಡುವ ವ್ಯಾಧಿಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ, ನಿರ್ದಿಷ್ಟ ವ್ಯಾಧಿಗೆ ಚಿಕಿತ್ಸೆಯನ್ನು ನೀಡುವುದರ ಜೊತೆಗೆ, ಆತನನ್ನು ಮತ್ತಷ್ಟು ಸೊಳ್ಳೆಗಳು ಕಡಿದು ಇನ್ನಷ್ಟು ಜನರಿಗೆ ವ್ಯಾಧಿಯನ್ನು ಹರಡದಂತೆ ಸೊಳ್ಳೆ ಪರದೆಯನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಎನಿಸುವುದು.

ಕೊನೆಯ ಮಾತು

ಅದೇನೇ ಇರಲಿ, ಇದುವರೆಗೆ ನಿಮಗೆ ತಿಳಿದಿರದ ವಿಶ್ವ ಸೊಳ್ಳೆಗಳ ದಿನಾಚರಣೆಯ ಬಗ್ಗೆ ಹಾಗೂ ಸೊಳ್ಳೆಗಳಿಂದ ಹರಡಬಲ್ಲ ಅಪಾಯಕಾರಿ ಕಾಯಿಲೆಗಳು ಮತ್ತು ಮಾರಕತೆಗಳ ಮಾಹಿತಿಗಳನ್ನು ಅರಿತುಕೊಂಡ ಬಳಿಕ, ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ನಿಮ್ಮ ಸುತ್ತಮುತ್ತಲ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸಿದಲ್ಲಿ ಈ ಲೇಖನದ ಉದ್ದೇಶ ಸಫಲವೆನಿಸುವುದು.


ಡಾ.ಸಿ. ನಿತ್ಯಾನಂದ ಪೈ, ಪುತ್ತೂರು


No comments:

Post a Comment