Saturday, September 3, 2016

SEP. 4 - WORLD SEXUAL HEALTH DAY



                   ಸೆ. 4 : ವಿಶ್ವ ಲೈಂಗಿಕ ಆರೋಗ್ಯ ದಿನಾಚರಣೆ 

ಈ ಲೇಖನದ ತಲೆಬರಹವನ್ನು ಕಂಡು ನಿಮಗೂ ಆಶ್ಚರ್ಯವಾಗಿರಲೇಬೇಕು. ಏಕೆಂದರೆ ಭಾರತೀಯರೂ ಸೇರಿದಂತೆ ಅನೇಕ ದೇಶಗಳ ಪ್ರಜೆಗಳಿಗೆ ಕಳೆದ ಐದು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸುತ್ತಿರುವ ವಿಚಾರ ತಿಳಿದಿಲ್ಲ. ಅದರಲ್ಲೂ ಭಾರತೀಯರಿಗೆ ನಮ್ಮ ದೇಶದಲ್ಲೂ ಈ ವಿಶೇಷ ಹಾಗೂ ಮಹತ್ವಪೂರ್ಣ ದಿನವನ್ನು ಆಚರಿಸುವ ಬಗ್ಗೆ ಹಾಗೂ ತನ್ಮೂಲಕ ಲೈಂಗಿಕತೆಯ ಬಗ್ಗೆ ಸತ್ಯ, ನಿಖರ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಜನಸಾಮಾನ್ಯರಿಗೆ ಒದಗಿಸಿ, ಅವರ ಅಜ್ಞಾನ ಮತ್ತು ತಪ್ಪುಕಲ್ಪನೆಗಳನ್ನು ತೊಡೆದು ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರ ಅರಿವಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ವಿಶೇಷ ದಿನಾಚರಣೆ 

ವರ್ಲ್ಡ್ ಅಸೋಸಿಯೇಶನ್ ಫೊರ್ ಸೆಕ್ಶುವಲ್ ಹೆಲ್ತ್ ಸಂಘಟನೆಯು 2010 ರ ಸೆಪ್ಟೆಂಬರ್ ನಲ್ಲಿ ಪ್ರಪ್ರಥಮ ಬಾರಿಗೆ " ವಿಶ್ವ ಲೈಂಗಿಕ ಆರೋಗ್ಯ ದಿನ " ವನ್ನು ಜಾಗತಿಕ ಮಟ್ಟದಲ್ಲಿ ಆಚರಿಸುವಂತೆ ಕರೆನೀಡಿತ್ತು. " ನಾವು ಇದರ ಬಗ್ಗೆ ಮಾತನಾಡೋಣ " ( LETS TALK ABOUT IT! ) ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗಿದ್ದ ಈ ಕಾರ್ಯಕ್ರಮವು, ಇದೀಗ ಜಗತ್ತಿನ 36 ರಾಷ್ಟ್ರಗಳಲ್ಲಿ ವರ್ಷಂಪ್ರತಿ ಆಚರಿಸಲ್ಪಡುತ್ತಿದೆ. ಈ ಬಾರಿ " ಲೈಂಗಿಕತೆಯ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢ ನಂಬಿಕೆಗಳನ್ನು ತೊಡೆದುಹಾಕಿರಿ " ಎನ್ನುವ ಘೋಷವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಅಜ್ಞಾನ - ಮಡಿವಂತಿಕೆ 

ಭಾರತದ ಯುವಜನರಿಗೆ ಲೈಂಗಿಕ ಆರೋಗ್ಯದ ಬಗ್ಗೆ ಇರುವ ಅಜ್ಞಾನ ಹಾಗೂ ಅವಿದ್ಯಾವಂತರು ಮತ್ತು ಹಳೆಯ ಪೀಳಿಗೆಯವರಲ್ಲಿ ಇರುವ ಮಡಿವಂತಿಕೆಗಳು ಹಲವಾರು ವಿಧದ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಿವೆ. ಯಾವುದು ಸರಿ, ಯಾವುದು ತಪ್ಪು, ಯಾವ ಶಾರೀರಿಕ ಪ್ರಕ್ರಿಯೆಗಳು ಸ್ವಾಭಾವಿಕ ಮತ್ತು ಯಾವುದು ವ್ಯಾಧಿ ಲಕ್ಷಣವೆಂದು ಅರಿಯದವರು ನಮ್ಮ ನಿಮ್ಮ ನಡುವೆ ಇಂದಿಗೂ ಇದ್ದಾರೆ. ತಾತ್ಕಾಲಿಕ ನಿಮಿರು ದೌರ್ಬಲ್ಯದಂತಹ ಸೌಮ್ಯರೂಪದ ಸಮಸ್ಯೆ, ಹಸ್ತ ಮೈಥುನ ಮತ್ತು ಸ್ವಪ್ನಸ್ಖಲನದಂತಹ ಸ್ವಾಭಾವಿಕ ಕ್ರಿಯೆಯನ್ನೂ ಲೈಂಗಿಕ ದೌರ್ಬಲ್ಯವೆಂದು ನಂಬಿ, ಕೊರಗುವ ಯುವಜನರು ಸಾಕಷ್ಟಿದ್ದಾರೆ. ಪ್ರಕೃತಿ ನಿಯಮದಂತೆ ಪುಟ್ಟ ಕಂದ ಹುಟ್ಟಬೇಕಿದ್ದಲ್ಲಿ ಸ್ತ್ರೀಪುರುಷ ಸಮಾಗಮ ಅಗತ್ಯ ಎಂದರಿಯದ ಅಮಾಯಕ ಯುವಜನರು ಈ ಆಧುನಿಕ ಯುಗದಲ್ಲೂ ಇದ್ದಾರೆ ಎಂದಲ್ಲಿ ನೀವೂ ನಂಬಲಾರಿರಿ. ಇದೇ ರೀತಿಯಲ್ಲಿ ಹತ್ತುಹಲವು ವಿಚಾರಗಳ ಬಗ್ಗೆ ಜನಸಾಮಾನ್ಯರ ಮನದಲ್ಲಿ ಬಲವಾಗಿ ಬೇರೂರಿರುವ ಮೂಢನಂಬಿಕೆಗಳು, ಗಣನೀಯ ಪ್ರಮಾಣದ ಜನರ ಲೈಂಗಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವುದು ಸತ್ಯ. ಇವೆಲ್ಲವುಗಳನ್ನು ತೊಡೆದುಹಾಕಿ, ಸತ್ಯವಾದ ಹಾಗೂ ನಿಖರವಾದ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಒದಗಿಸುವ ಸಲುವಾಗಿಯೇ, ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. 

ಭಾರತೀಯರಲ್ಲಿ ತಮ್ಮ ಧರ್ಮ ಮತ್ತು ಆಚಾರ ವಿಚಾರಗಳ ಬಗ್ಗೆ ಇರುವ ಕಟ್ಟುನಿಟ್ಟಿನ ಮಡಿವಂತಿಕೆಗಿಂತಲೂ ತುಸು ಹೆಚ್ಚು ಮಡಿವಂತಿಕೆಯು ಲೈಂಗಿಕತೆಯ ಬಗ್ಗೆ ಇದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಒಂದೆರಡು ದಶಕಗಳ ಹಿಂದಿನ ತನಕ ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಜನರು ಹಿಂಜರಿಯುತ್ತಿದ್ದುದು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು. ವಿಶ್ವ ವಿಖ್ಯಾತ " ಕಾಮಸೂತ್ರ " ದ ಲೇಖಕ ವಾತ್ಸಾಯನನ ತವರಿನಲ್ಲೂ ಇಂತಹ ವರ್ತನೆಗಳಿವೆ ಎನ್ನುವುದು ಅಚ್ಚರಿಯ ವಿಷಯವೇ ಸರಿ. 

ಈ ಮಡಿವಂತಿಕೆಯ ಪರಿಣಾಮವಾಗಿ ತಮ್ಮ ಲೈಂಗಿಕ ಸಮಸ್ಯೆಗಳನ್ನು ತಮ್ಮ ಕುಟುಂಬ ವೈದ್ಯರ ಬಳಿಯಲ್ಲೂ ಚರ್ಚಿಸಲು ನಾಚುವ ವ್ಯಕ್ತಿಗಳು, ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ನಕಲಿ ವೈದ್ಯರ ಬಲೆಗೆ ಬೀಳುತ್ತಾರೆ. ತತ್ಪರಿಣಾಮವಾಗಿ ಸಾಕಷ್ಟು ಹಣದೊಂದಿಗೆ ತಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ವಿಶೇಷವೆಂದರೆ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತಜ್ಞ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳದ ವ್ಯಕ್ತಿಗಳು, ದಾಂಪತ್ಯ ಸಮಸ್ಯೆಗಳಿಗೆ ಮತ್ತು ಅನೇಕ ಸಂದರ್ಭಗಳಲ್ಲಿ ವಿವಾಹ ವಿಚ್ಛೇದನಕ್ಕೆ ಶರಣಾಗುವುದು ಕೂಡಾ ಅಪರೂಪವೇನಲ್ಲ. ನಮ್ಮ ದೇಶದಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸಬಲ್ಲ ಕಟ್ಟುನಿಟ್ಟಿನ ಕಾನೂನುಗಳಿದ್ದರೂ, ಇಂದಿಗೂ ಮಾಧ್ಯಮಗಳಲ್ಲಿ ಇಂತಹ ಜಾಹೀರಾತುಗಳು ಪ್ರಕಟವಾಗುತ್ತಲೇ ಇರುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ.

ಸೆಕ್ಸಾಲಜಿ ಎಕ್ಸ್ಪೋ  

ಲೈಂಗಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಜೊತೆಯಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು ಮನೆಮಾಡಿದ್ದು, ಇವುಗಳನ್ನು ನಿವಾರಿಸಲು ವಿಶೇಷ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ಭಾರತದಲ್ಲಿ ದ ಇಂಡಿಯನ್ ಅಸೋಸಿಯೇಶನ್ ಫೊರ್ ಸೆಕ್ಸಾಲಜಿ ಸಂಘಟನೆಯು, ಅನ್ಯ ಕೆಲ ಸಂಘಟನೆಗಳ ಸಹಯೋಗದಲ್ಲಿ ಇಂಟರ್ನ್ಯಾಶನಲ್ ಸೆಕ್ಸಾಲಜಿ ಎಕ್ಸ್ಪೋ ಕಾರ್ಯಕ್ರಮವನ್ನು ಸೆ. 2 ರಿಂದ 4 ರ ತನಕ ನಡೆಸುತ್ತಿದೆ. ಮನುಷ್ಯರನ್ನು ಬಾಧಿಸುವ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಮತ್ತಿತರ ಕಾಯಿಲೆಗಳ ಚಿಕಿತ್ಸೆಯಲ್ಲಿ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳು ಇರುವಂತೆಯೇ, ಲೈಂಗಿಕ ಆರೋಗ್ಯ ಮತ್ತು ಸಮಸ್ಯೆಗಳ ಚಿಕಿತ್ಸೆಯ ವಿಚಾರದಲ್ಲೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಭಾರತದ ಸಂಘಟನೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಕೊನೆಯ ಮಾತು 

ಜಗತ್ತಿನ ಅನ್ಯ ರಾಷ್ಟ್ರಗಳ ಜನರಂತೆಯೇ ಭಾರತೀಯರಲ್ಲೂ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಕಷ್ಟಿವೆ. ವಿಶೇಷವೆಂದರೆ ಇಂತಹ ಸಮಸ್ಯೆಗಳಿರುವ ವ್ಯಕ್ತಿಗಳು ತಮ್ಮ ನಂಬಿಗಸ್ತ ವೈದ್ಯರ ಸಲಹೆಯನ್ನು ಪಡೆಯುವುದರ ಹೊರತಾಗಿ, ತಮ್ಮ ಬಂಧುಮಿತ್ರರ ಸಲಹೆ - ಸೂಚನೆಗಳನ್ನು ಅಥವಾ ನಕಲಿ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಮೂಲಕ ತಮ್ಮ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಏಕೆಂದರೆ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುವ ತಜ್ಞರು ಯಾರೆಂದು ಅನೇಕರಿಗೆ ತಿಳಿದಿಲ್ಲ. ಇದೇ ಕಾರಣದಿಂದಾಗಿ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಹಾಗೂ ಸ್ವಯಂ " ಸೆಕ್ಸಾಲಜಿಸ್ಟ್ " ಎಂದು ಘೋಷಿಸಿಕೊಳ್ಳುವ ನಕಲಿವೈದ್ಯರ ಮಾತಿಗೆ ಮರುಳಾಗಿ, ಸಹಸ್ರಾರು ರೂಪಾಯಿಗಳನ್ನು ತೆತ್ತು ( ನಿರುಪಯುಕ್ತ )  ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. 

ಪುರುಷರನ್ನು ಬಾಧಿಸುವ ಲೈಂಗಿಕ ಸಮಸ್ಯೆಗಳ ಚಿಕಿತ್ಸೆಗೆ ಯುರಾಲಜಿಸ್ಟ್ - ಎನ್ಡ್ರೋಲಜಿಸ್ಟ್  ಮತ್ತು ಸ್ತ್ರೀಯರ ಸಮಸ್ಯೆಗಳ ಚಿಕಿತ್ಸೆಗಾಗಿ ಗೈನೆಕಾಲಜಿಸ್ಟ್ ಎಂದು ಕರೆಯಲ್ಪಡುವ ತಜ್ಞವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಿಶ್ಚಿತವಾಗಿಯೂ ಹಿತಕರವೆನಿಸುವುದು ಎನ್ನುವುದನ್ನು ಅರಿತಿರಿ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು