Wednesday, January 28, 2015

EXERCISE BEFORE BREAKFAST


ಮುಂಜಾನೆಯ ವ್ಯಾಯಾಮ : ತೂಕ ಇಳಿಸಲು ಅತ್ಯುತ್ತಮ 

ಪ್ರಾತಃಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಶೌಚಕ್ರಿಯೆಗಳನ್ನು ಮುಗಿಸಿದ ಬಳಿಕ ನಿತ್ಯಕರ್ಮಗಳನ್ನು ಆರಂಭಿಸುವ ಮುನ್ನ ಶಾರೀರಿಕ ವ್ಯಾಯಾಮವನ್ನು ಮಾಡುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಮತ್ತು ಶರೀರದ ತೂಕವನ್ನು ಇಳಿಸಿಕೊಳ್ಳಲು ಅತ್ಯುತ್ತಮ ಎಂದು ನಮ್ಮ ಪೂರ್ವಜರು ಹೇಳಿದ್ದರು. ಇತ್ತೀಚೆಗೆ ಈ ವಿಚಾರವನ್ನು ಬೆಲ್ಜಿಯಂ ದೇಶದ ಸಂಶೋಧಕರು ಧೃಡೀಕರಿಸಿದ್ದಾರೆ. 

ವ್ಯಾಯಾಮದಿಂದ ಆರೋಗ್ಯ 

ಮನುಷ್ಯನು ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿ ಎಡೆಬಿಡದೆ ದುಡಿದು, ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಬಳಿಕ ಕಳೆದುಕೊಂಡ ಆರೋಗ್ಯವನ್ನು ಮರಳಿ ಗಳಿಸಲು, ತಾನು ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನೆಲ್ಲಾ ವ್ಯಯಿಸುತ್ತಾನೆ. ಇದು ಇಂದಿನ ಪೀಳಿಗೆಯ ಧನದಾಹ ಹಾಗೂ ನಿಷ್ಪ್ರಯೋಜಕ ಆಹಾರ ಸೇವನೆ ಮತ್ತು ಬಿಡುವಿಲ್ಲದ ಜೀವನಶೈಲಿಗಳ  ಪರಿಣಾಮವೇ ಹೊರತು ಬೇರೇನೂ ಅಲ್ಲ. 

ಸಾಮಾನ್ಯವಾಗಿ ಯಾವುದೇ ವ್ಯಾಧಿಯ ಲಕ್ಷಣಗಳು ಕಂಡುಬರುವ ಮುನ್ನ, ತಾನು ಆರೋಗ್ಯದಿಂದ ಇದ್ದೇನೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಾರಣಾಂತರಗಳಿಂದ ವೈದ್ಯರನ್ನು ಸಂದರ್ಶಿಸಿದಾಗ, ಯಾವುದಾದರೂ ವ್ಯಾಧಿಯು ಪತ್ತೆಯಾದಲ್ಲಿ ಸ್ವಾಭಾವಿಕವಾಗಿಯೇ ಗಾಬರಿಯಾಗುತ್ತಾರೆ. ಅಂತೆಯೇ ತಮ್ಮ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು, ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾರೆ. 

 ಬಾಲ್ಯದಿಂದಲೇ ಶಿಸ್ತಿಲ್ಲದ  ದಿನಚರಿ, ಅಪಾಯಕಾರಿ ಕೊಬ್ಬುಗಳಿಂದ ಸಮೃದ್ಧವಾಗಿರುವ ತ್ಯಾಜ್ಯ ಆಹಾರ ( ಜಂಕ್ ಫುಡ್ ) ಗಳ ಅತಿಸೇವನೆ ಹಾಗೂ ನಿಷ್ಕ್ರಿಯ ಜೀವನ ಶೈಲಿಗಳನ್ನು ಅನುಸರಿಸುವ ಇಂದಿನ ಯುವಜನರು, ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಇರಿಸಿಕೊಳ್ಳುವ ಸಲುವಾಗಿ ಆರೋಗ್ಯದಾಯಕ ಜೀವನಶೈಲಿಯ ಪರಿಪಾಲನೆ ಹಾಗೂ ಒಂದಿಷ್ಟು ಶಾರೀರಿಕ ವ್ಯಾಯಾಮವನ್ನು ಮಾಡಲು ಸಿದ್ಧರಿರುವುದಿಲ್ಲ. ನಿಷ್ಕ್ರಿಯ ಜೀವನಶೈಲಿಯ ದಾಸಾನುದಾಸರೆನಿಸಿರುವ ಬಹುತೇಕ ಯುವಜನರು, ಯಾವುದೇ ಕಾರಣಕ್ಕೂ ತಮ್ಮ ಬಿಂದಾಸ್ ಜೀವನಶೈಲಿಯನ್ನು ತೊರೆಯುವುದಿಲ್ಲ. ಆದರೆ ಇಂತಹ ವರ್ತನೆಗಳಿಂದಾಗಿ ಯೌವ್ವನದಲ್ಲೇ ಪ್ರತ್ಯಕ್ಷವಾಗುವ ಅಧಿಕ ತೂಕ, ಅತಿಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಗಂಭೀರ ಆರೋಗ್ಯದ ಸಮಸ್ಯೆಗಳು ತಲೆದೋರಿದೊಡನೆ, ಆಕಾಶವೇ ತಲೆಗೆ ಬಿದ್ದಂತೆ ಚಿಂತಾಕ್ರಾಂತರಾಗುತ್ತಾರೆ. ತದನಂತರ " ಕೆಟ್ಟ ಮೇಲೆ ಬುದ್ಧಿ ಬಂತು " ಎನ್ನುವಂತೆ, ವೈದ್ಯರ ಸೂಚನೆಗಳನ್ನು ಪರಿಪಾಲಿಸುವುದರೊಂದಿಗೆ,ಸೂಕ್ತ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ದೈನಂದಿನ ವ್ಯಾಯಾಮಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲಿಡುತ್ತಾರೆ!. 

ಮುಂಜಾನೆಯ ವ್ಯಾಯಾಮ 

ಪ್ರತಿನಿತ್ಯ ಬೆಳಗಿನ ಉಪಾಹಾರ ಸೇವನೆಗೆ ಮುನ್ನ ವ್ಯಾಯಾಮವನ್ನು ಮಾಡುವುದರಿಂದ ನಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಶರೀರವನ್ನು ಪ್ರಚೋದಿಸುತ್ತದೆ. ಜೊತೆಗೆ ಶರೀರದ ತೂಕ ಹೆಚ್ಚುವುದನ್ನೂ ನಿಯಂತ್ರಿಸುತ್ತದೆ. ಈ ಪ್ರಕ್ರಿಯೆಗಳು ಆಹಾರ ಸೇವನೆಯ ಬಳಿಕ ಆಥವಾ ಅನ್ಯ ಸಮಯದಲ್ಲಿ ಮಾಡುವ ವ್ಯಾಯಾಮಕ್ಕಿಂತ ಅಧಿಕ ಪರಿಣಾಮವನ್ನು ತೋರುತ್ತದೆ. 

ಬೆಲ್ಜಿಯಂ ದೇಶದ ಸಂಶೋಧಕರು ೨೦೧೦ ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಬಾಗಿಯಾದ ಆರೋಗ್ಯವಂತ ಯುವಕರಿಗೆ ಆರು ವಾರಗಳ ಕಾಲ ಯಥೇಚ್ಚವಾಗಿ ಸಮೃದ್ಧ ಆಹಾರವನ್ನು ಸೇವಿಸಲು ಸೂಚಿಸಿದ್ದರು. ಈ ಆಹಾರದಲ್ಲಿ ಎಂದಿಗಿಂತ ಶೇ. ೩೦ ರಷ್ಟು ಅಧಿಕ ಕ್ಯಾಲರಿಗಳು ಮತ್ತು ಶೇ. ೫೦ ರಷ್ಟು ಅಧಿಕ ಕೊಬ್ಬಿನ ಅಂಶಗಳಿರುವಂತೆ ಸಲಹೆಯನ್ನು ನೀಡಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಕೆಲ ಯುವಕರು ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸಿದರೆ, ಮತ್ತೆ ಕೆಲವರು ಬೆಳಗಿನ ಉಪಾಹಾರ ಸೇವನೆಯ ಬಳಿಕ ಕಠಿಣ ವ್ಯಾಮದಲ್ಲಿ ತೊಡಗಿಸಿಕೊಂಡಿದ್ದರು. ಮತ್ತೊಂದಿಷ್ಟು ಯುವಕರು ಬೆಳಗಿನ ಉಪಾಹಾರ ಸೇವನೆಯ ಮುನ್ನ ಇದೇ ರೀತಿಯ ವ್ಯಾಯಾಮದಲ್ಲಿ ಭಾಗಿಯಾಗಿದ್ದರು. 

ಆರು ವಾರಗಳ ಬಳಿಕ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುತ್ತಿದ್ದ ಯುವಕರು ಸಾಕಷ್ಟು ಉಬ್ಬಿದ್ದು, ಸುಮಾರು ಆರು ಪೌಂಡ್ ತೂಕವನ್ನು ಗಳಿಸಿದ್ದರು. ಜೊತೆಗೆ ಇವರು ಇನ್ಸುಲಿನ್ ಗೆ ಪ್ರತಿರೋಧವನ್ನು ಗಳಿಸುವುದರೊಂದಿಗೆ, ತಮ್ಮ ಮಾಂಸಪೇಶಿಗಳಲ್ಲಿ ಇನ್ನಷ್ಟು ಕೊಬ್ಬಿನ ಕಣಗಳನ್ನು ಸಂಗ್ರಹಿಸಿದ್ದರು. ಉಪಾಹಾರ ಸೇವನೆಯ ಬಳಿಕ ವ್ಯಾಯಾಮವನ್ನು ಮಾಡುತ್ತಿದ್ದ ಯುವಕರು ಸುಮಾರು ಮೂರು ಪೌಂಡ್ ತೂಕವನ್ನು ಗಳಿಸಿಕೊಂಡಿದ್ದು, ಇನ್ಸುಲಿನ್ ನ ಸಮಸ್ಯೆಯನ್ನು ಗಳಿಸಿಕೊಂಡಿದ್ದರು. ಆದರೆ ಮುಂಜಾನೆ ಆಹಾರ ಸೇವನೆಗೆ ಮುನ್ನ ವ್ಯಾಯಾಮದಲ್ಲಿ ಭಾಗವಹಿಸುತ್ತಿದ್ದ ಯುವಕರು ಮಾತ್ರ ಕಿಂಚಿತ್ ತೂಕವನ್ನೂ ಗಳಿಸದೇ ಇರುವುದರೊಂದಿಗೆ, ಇನ್ಸುಲಿನ್ ನ ಮಟ್ಟವನ್ನು ಆರೋಗ್ಯಕರ ಸ್ತರದಲ್ಲಿ ಇರಿಸಿಕೊಳ್ಳಲು ಯಶಸ್ವಿಯಾಗಿದ್ದರು. ಇದಕ್ಕೂ ಮಿಗಿಲಾಗಿ ಇವರ ಶರೀರವು ಇತರ ಎರಡು ಗುಂಪಿನ ಯುವಕರಿಗಿಂತ ತುಸು ಅಧಿಕ ಪ್ರಮಾಣದಲ್ಲಿ ಹಾಗೂ ದಿನವಿಡೀ ಕೊಬ್ಬನ್ನು ಕರಗಿಸುತ್ತಿರುವುದು ತಿಳಿದುಬಂದಿತ್ತು!. 

ಈ ಅಧ್ಯಯನವನ್ನು ನಡೆಸಿದ್ದ ಸಂಶೋಧಕರ ಅಭಿಪ್ರಾಯದಂತೆ ನಮ್ಮ ಶರೀರದ ತೂಕವನ್ನು ಅಪೇಕ್ಷಿತ ಮಟ್ಟಕ್ಕಿಂತ ಹೆಚ್ಚಾಗದಂತೆ ಕಾಪಾಡಿಕೊಳ್ಳುವುದರೊಂದಿಗೆ, ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆ ಮತ್ತು ಸಕ್ರಿಯ ಜೀವನಶೈಲಿ ( ದೈನಂದಿನ ವ್ಯಾಯಾಮ ) ಯ ಪರಿಪಾಲನೆ ಅತ್ಯವಶ್ಯಕವೆನಿಸುವುದು.  ಅಂತೆಯೇ ನೀವು ಸಮತೋಲಿತ ಆಹಾರವನ್ನು ಸೇವಿಸದೇ ಇದ್ದಲ್ಲಿ, ಕನಿಷ್ಠ ಪಕ್ಷ ಬೆಳಗ್ಗಿನ ಆಹಾರ ಸೇವನೆಯ ಮುನ್ನ ಕಠಿಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಶರೀರದ ತೂಕವನ್ನು ನಿಯಂತ್ರಿಸಲು ಉಪಯುಕ್ತವೆನಿಸಬಲ್ಲದು. ಅರ್ಥಾತ್, ಆಹಾರ ಸೇವನೆಯ ಬಳಿಕ ಮಾಡುವ ವ್ಯಾಯಾಮಕ್ಕಿಂತ, ಬೆಳಗಿನ ಉಪಾಹಾರ ಸೇವನೆಗೆ ಮುನ್ನ ಮಾಡುವ ವ್ಯಾಯಾಮವು ಅತ್ಯಂತ ಪರಿಣಾಮಕಾರಿ ಎನಿಸುವುದು. 

ಮಧುಮೇಹಿಗಳಿಗೆ ಕಿವಿಮಾತು 

ಮುಂಜಾನೆಯ ವ್ಯಾಯಾಮದಲ್ಲಿ ಭಾಗಿಯಾಗಲು ಬಯಸುವ ಮಧುಮೇಹಿಗಳು, ತಮ್ಮ ವೈದ್ಯರ ಸಲಹೆಯನ್ನು ಪಡೆಯಲೇಬೇಕು. ಉಪಾಹಾರ ಸೇವನೆಗೆ ಮುನ್ನ ವ್ಯಾಯಾಮದಲ್ಲಿ ಭಾಗಿಯಾಗುವುದರಿಂದ, ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಅಂಶವು ತ್ವರಿತಗತಿಯಲ್ಲಿ ಕುಸಿಯುವ ಸಾಧ್ಯತೆಗಳಿವೆ. ತತ್ಪರಿಣಾಮವಾಗಿ ಅತಿಆಯಾಸ,ಅತಿಯಾಗಿ ಬೆವರುವುದು  ಹಾಗೂ ಸುಸ್ತು,ಸಂಕಟಗಳೊಂದಿಗೆ, ಪ್ರಜ್ಞಾಹೀನರಾಗುವ ಸಾಧ್ಯತೆಗಳೂ ಇವೆ. ಇಂತಹ ಸಂದರ್ಭದಲ್ಲಿ  ತುರ್ತುಚಿಕಿತ್ಸೆ ಲಭಿಸದೇ ಇದ್ದಲ್ಲಿ, ಪ್ರಾಣಾಪಾಯದ ಸಾಧ್ಯತೆಯೂ ಇದೆ. ಆದುದರಿಂದ ಮಧುಮೇಹಿಗಳು ವೈದ್ಯರ ಸಲಹೆಯನ್ನು ಪಡೆದು, ಕಿಂಚಿತ್ ಆಹಾರವನ್ನು ಸೇವಿಸಿದ ಬಳಿಕವೇ ವ್ಯಾಯಮದಲ್ಲಿ ಭಾಗವಹಿಸುವುದು ಸುರಕ್ಷಿತವೆನಿಸುವುದು. 

ಕೊನೆಯ ಮಾತು 

ನಮ್ಮ ಪೂರ್ವಜರು ಸಮೃದ್ಧವಾದ ಆಹಾರವನ್ನು ಸೇವಿಸುತ್ತಿದ್ದರೂ, ದಿನವಿಡೀ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡುವ ಮೂಲಕ " ಉಂಡದ್ದನ್ನು ಕರಗಿಸುತ್ತಿದ್ದರು ". ಇದರೊಂದಿಗೆ ರಾತ್ರಿ ಬೇಗನೆ ಮಲಗಿ, ಬೆಳಗ್ಗೆ ನಸುಕು ಮೂಡುವ ಮುನ್ನ ಎದ್ದು, ತಮ್ಮ ಕಾಯಕದಲ್ಲಿ ತೊಡಗುತ್ತಿದ್ದರು. ತನ್ಮೂಲಕ ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಅಧಿಕತಮ ಜನರು ಮಧ್ಯರಾತ್ರಿಯ ಬಳಿಕ ಮಲಗಿ, ಸೂರ್ಯ ನೆತ್ತಿಗೇರುವ ಸಮಯದಲ್ಲಿ ಏಳುವ ಹವ್ಯಾಸವನ್ನು ರೂಢಿಸಿಕೊಂಡಿರುವುದು ಸುಳ್ಳೇನಲ್ಲ. ಅಂತೆಯೇ ಶ್ರಮದಾಯಕ ಜೀವಶೈಲಿಗೆ ಬದಲಾಗಿ ಆರಾಮದಾಯಕ ಜೀವನಶೈಲಿಗೆ ಶರಣಾಗಿರುವುದರಿಂದ, ಯೌವ್ವನದಲ್ಲೇ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವುದು ಮಾತ್ರ ಸತ್ಯ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು   


Monday, January 26, 2015

USELESS SOLAR STREETLIGHTS !

ಸೋತು ಸುಣ್ಣವಾಗಿರುವ ಸೋಲಾರ್ ದಾರಿದೀಪಗಳು

ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಕತ್ತಲಾದ ಬಳಿಕ ಸೋಡಿಯಂ ವೇಪರ್, ಮರ್ಕ್ಯುರಿ ಮತ್ತು ಹೈಮಾಸ್ಟ್ ದಾರಿದೀಪಗಳು ಝಗಮಗಿಸುವುದನ್ನು ನೀವೂ ಕಂಡಿರಬೇಕು. ಕೆಲವೆಡೆ ಹಗಲಿನಲ್ಲೂ ಪ್ರಜ್ವಲಿಸುವ ದಾರಿದೀಪಗಳನ್ನು ಕಂಡು ಬೆರಗಾಗಿರಬೇಕು. ಅಗಾಧ ಪ್ರಮಾಣದ ವಿದ್ಯುತ್ತನ್ನು ಕಬಳಿಸುವ ಇಂತಹ ದಾರಿದೀಪಗಳ ವಿದ್ಯುತ್ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುವುದು ಇದಕ್ಕೊಂದು ಪ್ರಮುಖ ಕಾರಣವಾಗಿರಬಹುದು.

ವಿದ್ಯುತ್ ಕೊರತೆ

ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ನೂತನ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಯೊಂದಿಗೆ, ರಾಜ್ಯಾದ್ಯಂತ ಪೋಲಾಗುತ್ತಿರುವ ವಿದ್ಯುಚ್ಚಕ್ತಿಯನ್ನು ಆಂಶಿಕವಾಗಿ ಉಳಿಸಬಲ್ಲ ಮಾರ್ಗೋಪಾಯಗಳನ್ನು ರಾಜ್ಯ ಸರರ್ಕಾರವು ಈಗಾಗಲೇ ಜಾರಿಗೊಳಿಸಿದೆ. ಇವುಗಳಲ್ಲಿ ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ " ಸೋಲಾರ್ ದಾರಿದೀಪ " ಗಳನ್ನು ಅಳವಡಿಸುವ ಉಪಕ್ರಮವೂ ಒಂದಾಗಿದೆ.

೨೦೦೯ ರಲ್ಲಿ ರಾಜ್ಯದ ಮೂರು ಜಿಲ್ಲೆಗಳ ಐದು ತಾಲೂಕುಗಳಲ್ಲಿನ ಆಯ್ದ ಹತ್ತು ಗ್ರಾಮಗಳಲ್ಲಿ ಈ ಯೋಜನೆಯನ್ವಯ ತಲಾ ೧೮ ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿತ್ತು. ದ.ಕ ಜಿಲ್ಲೆಯ ಐದು ತಾಲೂಕುಗಳ ತಲಾ ಎರಡು ಗ್ರಾಮಗಳಂತೆ, ಒಟ್ಟು ಹತ್ತು ಗ್ರಾಮಗಳು ಈ ಯೋಜನೆಯ ಫಲಾನುಭಾವಿಗಳಾಗಿ ಆಯ್ಕೆಯಾಗಿದ್ದವು. ಈ ದಾರಿದೀಪಗಳನ್ನು ಅಳವಡಿಸಿದ ಬಳಿಕಈ ಗ್ರಾಮಗಳ ವಿದ್ಯುತ್ ವೆಚ್ಚವು ಕಡಿಮೆಯಾಗಿವುದೆಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಸೋಲಾರ್ ದಾರಿದೀಪಗಳು ಅಲ್ಪಾವಧಿಯಲ್ಲೇ ಕೆಟ್ಟು ಹೋಗಿದ್ದರ ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿತ್ತು!.

ನಿಜ ಹೇಳಬೇಕಿದ್ದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಅತ್ಯಂತ ಉಪಯುಕ್ತವೆನಿಸಬಲ್ಲ ಸೌರದೀಪಗಳನ್ನುವಿದ್ಯುತ್ ಸಂಪರ್ಕ ಇರುವಲ್ಲಿ ಅಳವಡಿಸುವುದು ಮೂರ್ಖತನದ ಪರಮಾವಾಧಿ ಎನ್ನದೇ ವಿಧಿಯಿಲ್ಲ. ಏಕೆಂದರೆ ತಲಾ ೨೩ ಸಾವಿರ ರೂಪಾಯಿ ಬೆಲೆಯ ಈ ಸೌರದೀಪದ ಯೂನಿಟ್ ನಲ್ಲಿ, ಒಂದು ಸೌರ ಫಲಕ, ಪುಟ್ಟದೊಂದು ಎಲ್ ಇ ಡಿ ದೀಪ ಹಾಗೂ ಬ್ಯಾಟರಿಯನ್ನು ಅಳವಡಿಸಿರುವ ಸಾಧಾರಣ ಎತ್ತರದ ಕಬ್ಬಿಣದ ಕಂಬವೊಂದನ್ನು ಒದಗಿಸಲಾಗಿದ್ದು, ಇದರ ಬೆಳಕು ಕೇವಲ ನಾಲ್ಕಾರು ಚದರ ಮೀಟರ್ ವಿಸ್ತೀರ್ಣಕ್ಕೆ ಪಸರಿಸುತ್ತದೆ.

ಈ ಸೌರದೀಪಗಳು ಇರುಳಿಡೀ ಬೆಳಗಲು ಬೇಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಲುಇವುಗಳ ಸೌರಫಲಕಗಳಿಗೆ ಪ್ರತಿನಿತ್ಯ ಕನಿಷ್ಠ ೬ ಗಂಟೆಗಳ ಕಾಲ ಪ್ರಖರವಾದ ಸೂರ್ಯನ ಬಿಸಿಲು ಬೀಳಬೇಕಾಗುವುದು. ಆದರೆ ರಸ್ತೆಯ ಬದಿಗಳಲ್ಲಿ ಇರಬಹುದಾದ ಮರಗಳ ನೆರಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಹಬ್ಬುವ ಧೂಳು ಸೌರಫಲಕದ ಮೇಲೆ ಆವರಿಸಿದಲ್ಲಿ ಮತ್ತು ಮಳೆಗಾಲದ ದಿನಗಳಲ್ಲಿ ಅಥವಾ ಮೋಡ ಕವಿದ ದಿನಗಳಲ್ಲಿ ಈ ದೀಪಗಳು ಮಂಕಾಗುವ ಅಥವಾ ಉರಿಯದೇ ಇರುವ ಸಾಧ್ಯತೆಗಳಿವೆ. ಇದಲ್ಲದೆ ಸೌರಫಲಕಗಳು ಉತ್ಪಾದಿಸಿದ ವಿದ್ಯುತ್ತನ್ನು ಸಂಗ್ರಹಿಸಿ ಇರಿಸಬೇಕಾದ ಬ್ಯಾಟರಿಗಳನ್ನು ಸುಸ್ಥಿತಿಯಲ್ಲಿರುವಂತೆ ನಿರ್ವಹಿಸದಿದ್ದಲ್ಲಿ, ಬ್ಯಾಟರಿಗಳು ಕೆಟ್ಟು ಹೋಗುವುದರಿಂದ ದೀಪಗಳು ನಿರುಪಯುಕ್ತವೆನಿಸುತ್ತವೆ.

ಪರ್ಯಾಯ ವ್ಯವಸ್ಥೆ

.ಕ ಜಿಲ್ಲೆಯ ಕನ್ಯಾನ, ಗೋಳ್ತಮಜಲು ಮತ್ತು ನೆಕ್ಕಿಲಾಡಿ ಗ್ರಾಮಗಳಲ್ಲಿಈ ಯೋಜನೆಯನ್ವಯ ಅಳವಡಿಸಿದ್ದ ಸೌರದೀಪಗಳು ಕೆಲವೇ ತಿಂಗಳುಗಳಲ್ಲಿ ಕೆಟ್ಟು ಹೋಗಿದ್ದವು. ಇವುಗಳನ್ನು ಮುಂದಿನ ೫ ವರ್ಷಗಳ ಕಾಲ ನಿರ್ವಹಿಸುವುದಾಗಿ ಖಾತರಿ ನೀಡಿದ್ದ ಗುತ್ತಿಗೆದಾರರು, ದಾರಿದೀಪಗಳನ್ನು ಅಳವಡಿಸಿದ ಬಳಿಕ ನಾಪತ್ತೆಯಾಗಿದ್ದರು!.

.ಕ ಜಿಲ್ಲೆಯ ಮೂರೂ ಗ್ರಾಮಗಳಲ್ಲಿ ಅಳವಡಿಸಿದ್ದ ಸೌರದೀಪಗಳು ಅಲ್ಪಾವಧಿಯಲ್ಲೇ ಕೆಟ್ಟುಹೋಗಿದ್ದರೂ, ಇವುಗಳನ್ನು ಅಳವಡಿಸಿದ ಹಾಗೂ  ಕೆಟ್ಟು ಹೋಗಿದ್ದ ದೀಪಗಳನ್ನು ದುರಸ್ತಿಪಡಿಸದ ಮತ್ತು  ಇವುಗಳನ್ನು ನಿಗದಿತ ಅವಧಿಗೆ ಉಚಿತವಾಗಿ  ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ನಿಭಾಯಿಸದ ಗುತ್ತಿಗೆದಾರರ ವಿರುದ್ಧ ಸರಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದೃಷ್ಟವಶಾತ್ ಈ ಮೂರೂ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿರುವ ಕಾರಣದಿಂದಾಗಿಸಾಮಾನ್ಯ ದಾರಿದೀಪಗಳು ಬೆಳಗುತ್ತಿರುವುದರಿಂದಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ತೊಂದರೆಗಳು ಸಂಭವಿಸಿಲ್ಲ. ಆದರೆ ಸರಕಾರದ ನಿರರ್ಥಕ ಯೋಜನೆಗಳಿಗಾಗಿ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ಬೇಕಾಬಿಟ್ಟಿಯಾಗಿ ವ್ಯಯಿಸುವ ರಾಜಕಾರಣಿಗಳಿಗೆ, ಲಕ್ಷಾಂತರ ರೂಪಾಯಿಗಳು ಪಾಲಾಗಿರುವ ಬಗ್ಗೆ ಕಿಂಚಿತ್ ಬೇಸರವೂ ಆಗಿರುವ ಸಾಧ್ಯತೆಗಳಿಲ್ಲ. ಏಕೆಂದರೆ ಅವರಿಗೆ ಲಭಿಸಬೇಕಾದ " ಕಪ್ಪ ಕಾಣಿಕೆ " ಗಳ ಪಾಲು ಸಲ್ಲದೇಯಾವುದೇ  ಯೋಜನೆಯ ಕಾಮಗಾರಿಗಳ  ಗುತ್ತಿಗೆಯನ್ನೇ ನೀಡುವುದಿಲ್ಲ!.

ಕೊನೆಯ ಮಾತು

ರಾಜ್ಯ ಸರಕಾರವು ವಿದ್ಯುತ್ ಉಳಿತಾಯದ ಉದ್ದೇಶದಿಂದ ಜಾರಿಗೊಳಿಸಿದ್ದ ಈ ಯೋಜನೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿತ್ತು. ಗುತ್ತಿಗೆದಾರರು ಅಳವಡಿಸಿದ್ದ ಕಳಪೆ ಗುಣಮಟ್ಟದ ಸೌರದೀಪಗಳ ವೈಫಲ್ಯದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ನಷ್ಟವೂ ಸಂಭವಿಸಿದೆ. ನಿಜ ಹೇಳಬೇಕಿದ್ದಲ್ಲಿ ವಿದ್ಯುತ್ ಸಂಪರ್ಕವಿರುವ ಈ ಮೂರೂ ಗ್ರಾಮಗಳಲ್ಲಿ ಇದೇ ಹಣವನ್ನು ಬಳಸಿ, ತುಸು ದೊಡ್ಡ ಗಾತ್ರದ ಎಲ್.ಇ .ಡಿ ದಾರಿದೀಪಗಳನ್ನು ಅಳವಡಿಸಬಹುದಾಗಿತ್ತು. ಇದರಿಂದಾಗಿ ಸೌರದೀಪಗಳ ಕಂಬ, ಬ್ಯಾಟರಿ ಹಾಗೂ ಎಲ್ ಇ ಡಿ ದೀಪ ಇತ್ಯಾದಿಗಳಿಗೆ ವ್ಯಯಿಸಿದ್ದ ಹಣ ಉಳಿಯುತ್ತಿತ್ತು. ಜೊತೆಗೆ ಇವುಗಳ ನಿರ್ವಹಣೆಯ ವೆಚ್ಚವೂ ಉಳಿತಾಯ ಆಗುತ್ತಿತ್ತು!. ಆದರೆ ನಮ್ಮನ್ನಾಳುವವರು ತಮ್ಮ ವೈಯುಕ್ತಿಕ ಲಾಭದ ಸಲುವಾಗಿ ಬಹುತೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆಯೇ ವಿನಃಪ್ರಜೆಗಳ ಒಳಿತಿಗಾಗಿ ಅಲ್ಲ ಎನ್ನುವುದು ರಾಜ್ಯದ ಪ್ರಜೆಗಳಿಗೂ ಚೆನ್ನಾಗಿ ತಿಳಿದಿದೆ. ಇಂತಹ ವಿಚಾರಗಳ ಅರಿವಿದ್ದರೂ, ರಾಜ್ಯದ ಮತದಾರರು  ಭ್ರಷ್ಟ ರಾಜಕಾರಣಿಗಳಿಗೆ ಮತ್ತೆಮತ್ತೆ ಮತವನ್ನು ನೀಡುವ ಮೂಲಕ ಇನ್ನಷ್ಟು ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡುವುದೇಕೆ?, ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  




Friday, January 23, 2015

CONTRACTORS NEGLIGENCE !




 ಸ್ವಚ್ಛತೆಯತ್ತ ಗಮನಹರಿಸದ ಗುತ್ತಿಗೆದಾರರು 

ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಎರಡು ತಿಂಗಳುಗಳೇ ಕಳೆದಿವೆ. ದೇಶಾದ್ಯಂತ ಅನೇಕ ಸುಪ್ರಸಿದ್ಧ ವ್ಯಕ್ತಿಗಳು ಮತ್ತು ಸಂಘಟನೆಗಳು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಈ ಅಭಿಯಾನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ದೇಶದ ಉದ್ದಗಲಕ್ಕೂ ಪ್ರತಿನಿತ್ಯ ನಡೆಯುತ್ತಿರುವ ಅಸಂಖ್ಯ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಮಾತ್ರ ಇದನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. 

ಕಾಮಗಾರಿಗಳಿಂದ ತ್ಯಾಜ್ಯ 

ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ನಿರಂತರವಾಗಿ ವೈವಿಧ್ಯಮಯ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಕೆಲವೆಡೆ ನೂತನ ಕಟ್ಟಡಗಳ ನಿರ್ಮಾಣದ ಸಲುವಾಗಿ, ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಡವಿದ ಕಟ್ಟಡಗಳ ಭಗ್ನಾವಶೇಷಗಳ ಪ್ರಮಾಣವೂ ಸಾಕಷ್ಟಿರುತ್ತದೆ. ಈ ರೀತಿಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು, ಇದರ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಬಹುತೇಕ ದೇಶಗಳಲ್ಲಿ ಇಂತಹ ತ್ಯಾಜ್ಯಗಳನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ ಅಥವಾ ಪುನರ್ ಆವರ್ತನಗೊಳಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಈ ರೀತಿಯ ವಿಧಾನಗಳನ್ನು ಅನುಸರಿಸದೇ ಇರುವುದರಿಂದ, ಹೆಚ್ಚಾಗಿ ಇವುಗಳನ್ನು ಯಾವುದಾದರೂ ಖಾಲಿಜಾಗದಲ್ಲಿ ಅಥವಾ ರಸ್ತೆಗಳ ಬದಿಗಳಲ್ಲಿ ಸುರಿದುಬಿಡಲಾಗುತ್ತದೆ. ತತ್ಪರಿಣಾಮವಾಗಿ ಇನ್ನಷ್ಟು ಸಮಸ್ಯೆಗಳಿಗೆ ಮೂಲವೆನಿಸುತ್ತದೆ.

ಅದೇ ರೀತಿಯಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸುವ ಅಥವಾ ಹಳೆಯ ಕಟ್ಟಡಗಳನ್ನು ಪುನರ್ ನವೀಕರಿಸುವ ಸಂದರ್ಭಗಳಲ್ಲೂ ಗಣನೀಯ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಈ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರು, ಬಹುತೇಕ ಸಂದರ್ಭಗಳಲ್ಲಿ ಇವುಗಳನ್ನು ಯಾವುದಾದರೂ ಖಾಲಿಜಾಗದಲ್ಲಿ ಅಥವಾ ನಗರಗಳ ಹೊರವಲಯ ಅಥವಾ ಸಮೀಪದಲ್ಲಿರುವ ಹೆದ್ದಾರಿಗಳ ಬದಿಗಳಲ್ಲಿ ಸುರಿದುಬಿಡುತ್ತಾರೆ. ತತ್ಪರಿಣಾಮವಾಗಿ ಈ ರಸ್ತೆಗಳ ಮೇಲೆ ಸುರಿದ ಮಳೆನೀರು ಸರಾಗವಾಗಿ ಹರಿದು ಚರಂಡಿಯನ್ನು ಸೇರುವುದಕ್ಕೆ ಅಡಚಣೆಯಾಗುವುದರಿಂದ, ಈ ಹೆದ್ದಾರಿಗಳು ಹಾನಿಗೀಡಾಗುತ್ತವೆ. " ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ " ಎನ್ನಬಹುದಾದ ಇಂತಹ ಘಟನೆಗಳಿಗೆ, ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವೆನಿಸುತ್ತದೆ. ವಿಶೇಷವೆಂದರೆ ಈ ಸಮಸ್ಯೆಯ ಬಗ್ಗೆ ಗುತ್ತಿಗೆದಾರರಿಗೆ ಅರಿವಿದ್ದರೂ, ಈ ಕೆಟ್ಟ ಹವ್ಯಾಸವನ್ನು ಬಿಡಲು ಸಿದ್ಧರಿಲ್ಲದ ಕಾರಣದಿಂದಾಗಿ, ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ನಾಮಾವಶೇಷಗೊಂಡಿರುವುದು ಸತ್ಯ. 

ಇದಲ್ಲದೇ ನಿರ್ಮಾಣ ಕಾಮಗಾರಿಗಳ ಸಂದರ್ಭದಲ್ಲಿ ಬಳಸುವ ಸಿಮೆಂಟಿನ ಖಾಲಿ ಚೀಲಗಳು, ಮರದ ತುಂಡುಗಳು,ಮೊಳೆಗಳು, ಅಳಿದುಳಿದ ಮರಳು ಹಾಗೂ ಜಲ್ಲಿ, ಕಲ್ಲಿನ ತುಂಡುಗಳೇ ಮುಂತಾದ ಅವಶೇಷಗಳನ್ನು, ಬಹುತೇಕ ಸಂದರ್ಭಗಳಲ್ಲಿ ವಿಲೇವಾರಿ ಮಾಡದೇ ಸ್ಥಳದಲ್ಲೇ ಬಿಡಲಾಗುತ್ತದೆ. ಈ ಚಾಳಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಅಧಿಕಾರಿಗಳ ಹೊಣೆಗಾರಿಕೆ 

ದೇಶದ ಪ್ರಧಾನಿಯವರ ಅಪೇಕ್ಷೆಯಂತೆ ಪ್ರತಿಯೊಂದು ರಾಜ್ಯಗಳ ಸರ್ಕಾರಗಳು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದರೂ, ಕೆಲ ಖಾಸಗಿ ಮತ್ತು ಅಧಿಕತಮ ಸರ್ಕಾರಿ ಗುತ್ತಿಗೆದಾರರು ಈ ವಿಚಾರವನ್ನು ನಿರ್ಲಕ್ಷಿಸಿರುವುದು ಏಕೆಂದು ನಮಗೂ ತಿಳಿದಿಲ್ಲ. ಪ್ರಾಯಶಃ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಾರಿಗೊಳಿಸದಿರುವುದು ಅಥವಾ ಕಠಿಣ ಕಾನೂನುಕ್ರಮಗಳನ್ನು ಕೈಗೊಳ್ಳದೇ ಇರುವುದು ಇದಕ್ಕೆ ಕಾರಣವಾಗಿರಲೂಬಹುದು. ಅದೇನೇ ಇರಲಿ, ಇನ್ನು ಮುಂದಾದರೂ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಸ್ಥಳದಲ್ಲಿ ಉತ್ಪನ್ನವಾದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು. ಇದಕ್ಕೆ ತಪ್ಪಿದಲ್ಲಿ   " ಸ್ವಚ್ಚ ಭಾರತ ಅಭಿಯಾನ " ವನ್ನು ಹಮ್ಮಿಕೊಳ್ಳುವುದು ನಿರರ್ಥಕವೆನಿಸುವುದು!.   

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳ ಅವಶೇಷಗಳು 

Sunday, January 11, 2015

BSNL 3 G - No Jee !


ಪುತ್ತೂರು: ಬಿ ಎಸ್ ಎನ್ ಎಲ್ ಜಿ - ನೋ ಜೀ  !
ನಮ್ಮ ದೇಶವು ದೂರಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಅಂತೆಯೇ ಅಂತರ್ಜಾಲ ಬಳಕೆಯ ಮೂಲಕ ಇ- ಆಡಳಿತ ಮತ್ತಿತರ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಇದೀಗ ದೇಶದ ೨.೫ ಲಕ್ಷ ಗ್ರಾಮ ಪಂಚಾಯತಿಗಳಿಗೆ ಒಪ್ಟಿಕಲ್ ಫೈಬರ್ ಮೂಲಕ ಬ್ರಾಡ್ ಬ್ಯಾಂಡ್ ಸಂಪರ್ಕಜಾಲವನ್ನು( ಭಾರತ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ) ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯೂ ಕೇರಳದಲ್ಲಿ ಉದ್ಘಾಟನೆಗೊಂಡಿದೆ. ಆದರೆ ದೇಶದ ಅನೇಕ ನಗರ- ಪಟ್ಟಣಗಳಲ್ಲಿ ಸರಕಾರೀ ಸ್ವಾಮ್ಯದ ಬಿ ಎಸ್ ಎನ್ ಎಲ್ ಸಂಸ್ಥೆಯು ಒದಗಿಸುತ್ತಿರುವ ಅಂತರ್ಜಾಲ ಸೇವೆಯು, ಅಪೇಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ಬಿ ಎಸ್ ಎನ್ ಎಲ್ ಏಕಾಧಿಪತ್ಯ
ಸುಮಾರು ನಾಲ್ಕು ದಶಕಗಳ ಹಿಂದಿನ ತನಕ ನಿಮಗೊಂದು ಸ್ಥಿರ ದೂರವಾಣಿ ಸಂಪರ್ಕ ಸಿಗಬೇಕಿದ್ದಲ್ಲಿ, ಬಿ ಎಸ್ ಎನ್ ಎಲ್ ಕಚೇರಿಗೆ ಅರ್ಜಿಯನ್ನು ಗುಜರಾಯಿಸಿ ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತುಸರಕಾರೀ ಸ್ವಾಮ್ಯದ ಈ ಸಂಸ್ಥೆಯು ಅಂದಿನ ದಿನಗಳಲ್ಲಿ ಉತ್ತುಂಗದಲ್ಲಿತ್ತುಕಾಲಕ್ರಮೇಣ ಖಾಸಗಿ ಮೊಬೈಲ್ ದೂರವಾಣಿ ಸಂಸ್ಥೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕಇವುಗಳಿಂದ ಮಾಡುವ ಕರೆಗಳ ಶುಲ್ಕವೂ ಕಡಿಮೆಯಾಗಿತ್ತುತತ್ಪರಿಣಾಮವಾಗಿ ಮೊಬೈಲ್ ದೂರವಾಣಿಗಳ ಸಂಖ್ಯೆ ಹೆಚ್ಚುವುದರೊಂದಿಗೆಬಿ ಎಸ್ ಎನ್ ಎಲ್ ನ ಏಕಾಧಿಪತ್ಯವೂ ಅಂತ್ಯಗೊಂಡಿತ್ತು!.
ಖಾಸಗಿ ಮೊಬೈಲ್ ಸಂಸ್ಥೆಗಳ ಜನಪ್ರಿಯತೆಯನ್ನು ಗಮನಿಸಿದ ಬಿ ಎಸ್ ಎನ್ ಎಲ್ ಸಂಸ್ಥೆಯು ಮೊಬೈಲ್ ಸೇವೆಯನ್ನು ಒದಗಿಸುವ ಮತ್ತು ವಿಸ್ತರಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತು. ಆದರೆ ತನ್ನ ಸಂಪರ್ಕಜಾಲವನ್ನು ವಿಸ್ತರಿಸುತ್ತಾ ಹೋಗಿದ್ದ ಸಂಸ್ಥೆಯುತನ್ನ ಸಾಮರ್ಥ್ಯಕ್ಕಿಂತ ಅಧಿಕ ಸಂಪರ್ಕಗಳನ್ನು ನೀಡಿದ್ದ ಕಾರಣದಿಂದಾಗಿ, ಉದ್ಭವಿಸಿದ್ದ ಸೇವಾ ಪರಿಣಾಮವಾಗಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಕೆಲವೇ ವರ್ಷಗಳಲ್ಲಿ ನಿಸ್ತಂತು ಅಂತರ್ಜಾಲ ಸೇವೆಯನ್ನು ಆರಂಭಿಸಿದ್ದ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ದುಬಾರಿ ಶುಲ್ಕವನ್ನು ವಿಧಿಸುತ್ತಿದ್ದರೂಗ್ರಾಹಕರ ಬೆಂಬಲವನ್ನು ಗಳಿಸಲು ಯಶಸ್ವಿಯಾಗಿದ್ದವುತದನಂತರ ಜಿ ಹಾಗೂ ಜಿ ಸೇವೆಗಳನ್ನು ಒದಗಿಸಲಾರಂಭಿಸಿದ್ದ ಖಾಸಗಿ ಸೇವಾ ಸಂಸ್ಥೆಗಳನ್ನು ಅನುಕರಿಸಿದ್ದ ಬಿ ಎಸ್ ಎನ್ ಎಲ್ತನ್ನ ಸಂಪರ್ಕಜಾಲ ಮತ್ತು ಗ್ರಾಹಕ ಸ್ನೇಹಿ ದರಗಳಿಂದಾಗಿ ಕೊಂಚ ಜನಪ್ರಿಯತೆಯನ್ನು ಗಳಿಸಲು ಯಶಸ್ವಿಯಾಗಿತ್ತು.
ಪುತ್ತೂರಿನಲ್ಲಿ ಥ್ರೀ ಜಿ  ಸೇವೆ
ಬಿ ಎಸ್ ಎನ್ ಎಲ್ ಸಂಸ್ಥೆಯು ೨೦೧೩ ರ ಆಗಸ್ಟ್ ೨೨ ರಂದು ಪುತ್ತೂರು ನಗರದಲ್ಲಿ  ಜಿ ಸೇವೆಯನ್ನು ಆರಂಭಿಸಿದ್ದರೂಸಂಸ್ಥೆಯ ಸಿಬಂದಿಗಳೇ ಹೇಳುತ್ತಿದ್ದಂತೆ ಸ್ಥಳೀಯರಿಗೆ ಕೇವಲ ಜಿ ವೇಗದಲ್ಲಿ ಸೇವೆ ಲಭಿಸುತ್ತಿತ್ತುಆದರೂನೂತನ ಅಂತರ್ಜಾಲ ಸೇವೆಯ ವೇಗವು ತಕ್ಕಮಟ್ಟಿಗೆ ತೃಪ್ತಿಕರವಾಗಿತ್ತು.

ಈ ಸಂದರ್ಭದಲ್ಲಿ ಸಿಬಂದಿಯೋಬ್ಬರ ಸಲಹೆಯಂತೆ ಜಿ ನಿಸ್ತಂತು ಸಂಪರ್ಕವನ್ನು ಪಡೆದುಕೊಂಡಿದ್ದ ನನಗೆ, ಬಿ ಎಸ್ ಎನ್ ಎಲ್ ಸಂಸ್ಥೆಯ ಬಗ್ಗೆ ಹೆಮ್ಮೆಯೆನಿಸಿತ್ತು.ಆದರೆ  ಪ್ರಾರಂಭಿಕ ಹಂತದಲ್ಲಿ ಅಂತರ್ಜಾಲ ಸಂಪರ್ಕ ಮತ್ತು ಅವಶ್ಯಕ ಕಡತಗಳನ್ನು ಕ್ಷಣಾರ್ಧದಲ್ಲಿ ಕೆಳಗಿಳಿಸುವ ಸಾಮರ್ಥ್ಯವಿದ್ದ ಈ ಸಂಪರ್ಕವು, " ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆಯಾಯಿತು " ಎನ್ನುವಂತೆ ಬದಲಾಗತೊಡಗಿತ್ತು. ತದನಂತರ ೨೦೧೪ ಮಧ್ಯಭಾಗದಲ್ಲಿ ಅಂತರ್ಜಾಲ ಸಂಪರ್ಕ ಲಭಿಸಲು ಅಡೆತಡೆಗಳು ಹಾಗೂ ಸಂಪರ್ಕ ದೊರೆತ ಬಳಿಕ ಮಧ್ಯದಲ್ಲೇ ಕಡಿತಗೊಳ್ಳುವುದು ಮತ್ತು ಸೇವೆಯ ವೇಗವು " ಆಮೆಗತಿ " ಯನ್ನು ತಲುಪಿದಂತಹ ಘಟನೆಗಳು ನಿರಂತರವಾಗಿ ಗ್ರಾಹಕರನ್ನು ಪೀಡಿಸಲು ಆರಂಭಿಸಿದ್ದವು. ಅರ್ಥಾತ್, ಬಿ ಎಸ್ ಎನ್ ಎಲ್ ನ ಈ ಸೇವೆಯ ಘೋಷಣೆಯಾದ " ಫಾಸ್ಟರ್ ದಾನ್ ಯುವರ್ ಥಾಟ್ಸ್ " ಎನ್ನುವ ವಾಕ್ಯವೇ ಸುಳ್ಳಾಗಿತ್ತು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು.
೨೦೧೩ ರಲ್ಲಿ ಸಂಪರ್ಕವನ್ನು ಪಡೆದುಕೊಂಡಾಗ ಇರದ ಸಮಸ್ಯೆಯೊಂದು ಕೆಲವೇ ತಿಂಗಳುಗಳ ಬಳಿಕ  ಬಾಧಿಸಲು ಕಾರಣವೇನೆಂದು ಅರಿತುಕೊಳ್ಳಲು ಪ್ರಯತ್ನಿಸಿದರೂ, ಸೂಕ್ತ ಮಾಹಿತಿ ಮಾತ್ರ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಮಂಗಳೂರಿನ ಬಿ ಎಸ್ ಎನ್ ಎಲ್ ಕಚೇರಿಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಗತವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಯಿತು. ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀಡಿದ್ದ ವಿಸ್ತೃತ ಮಾಹಿತಿಗಳಿಂದಾಗಿ  ಸಮಸ್ಯೆಯ ಮೂಲ ಏನೆಂದು ತಿಳಿದುಬಂದಿತ್ತು.
ಟವರ್ ವ್ಯಾಪ್ತಿ
ಪ್ರಸ್ತುತ ಪುತ್ತೂರು ನಗರದಲ್ಲಿ ನಾಲ್ಕು ಟವರ್ ಗಳು ಜಿ ಸೇವೆಯನ್ನು ಒದಗಿಸುತ್ತಿದ್ದು, ಪ್ರತಿಯೊಂದು ಟವರ್ ನಲ್ಲಿ ೩ ಸೆಕ್ಟರ್ ಗಳಿವೆ. ಈ ಟವರ್ ಗಳ ವ್ಯಾಪ್ತಿಯು ೫೦ ಮೀ. ನಿಂದ ೨೦೦೦ ಮೀಟರ್ ಆಗಿದ್ದು, ಒಬ್ಬ ಗ್ರಾಹಕ ಮಾತ್ರ ಸಂಪರ್ಕದಲ್ಲಿದ್ದಾರೆ ೧೪ ಎಂ ಬಿ ಪಿ ಎಸ್ ವೇಗದಲ್ಲಿ ಅಂತರ್ಜಾಲ ದೊರೆಯುತ್ತದೆ. ಅಂತೆಯೇ ಇದಕ್ಕೂ ಅಧಿಕ ಸಂಖ್ಯೆಯ ಗ್ರಾಹಕರು ಸಂಪರ್ಕದಲ್ಲಿದ್ದರೆ, ಈ ವೇಗವು ಇವರೆಲ್ಲರಿಗೂ ಸಮವಾಗಿ ಹಂಚಿಹೊಗುತ್ತದೆ. ಈ ಮಾಹಿತಿಗಳನ್ನು ನೀಡುವ ಸಂದರ್ಭದಲ್ಲಿ ಪುತ್ತೂರು ನಗರದಲ್ಲಿ ೧೭,೦೧೪ ಗ್ರಾಹಕರು ಈ ಸೇವೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಅರ್ಧದಷ್ಟು ಗ್ರಾಹಕರು ಏಕ ಕಾಲದಲ್ಲಿ ಅಂತರ್ಜಾಲವನ್ನು ಬಳಸಿದರೂ, ಸ್ವಾಭಾವಿಕವಾಗಿಯೇ ಇವರಿಗೆ ಲಭಿಸುವ ವೇಗದ ಪ್ರಮಾಣವು ಕಡಿಮೆಯಾಗುತ್ತಿತ್ತು.
ವೇಗವೆಷ್ಟು?
ಪುತ್ತೂರಿನಲ್ಲಿ ಟವರ್ ಗಳ ಸಾಮರ್ಥ್ಯಕ್ಕಿಂತ ಅಧಿಕ ಸಂಪರ್ಕಗಳನ್ನು ನೀಡಿರುವುದು ಜಿ ಸೇವೆಯ ವೇಗ ಕಡಿಮೆಯಾಗಲು ಕಾರಣವೇ?, ಎಂದು ನಾವು ಕೇಳಿದ್ದ ಪ್ರಶ್ನೆಗೆ ಮೇಲಿನ ಉತ್ತರವನ್ನು ನೀಡಲಾಗಿತ್ತು. ಆದರೆ ಅಂತರ್ಜಾಲ ಸಂಪರ್ಕ ಸಿಗದಿರುವುದು, ಸಿಕ್ಕರೂ ಅಂತರ್ಜಾಲ ತಾಣಗಳನ್ನು ತೆರೆಯಲು ಸಾಧ್ಯವಾಗದಿರುವುದು ಮತ್ತು ಸಂಪರ್ಕ ದೊರೆತ ಬಳಿಕ ಆಕಸ್ಮಿಕವಾಗಿ ಸಂಪರ್ಕ ಕಡಿತವಾಗುವ ಸಮಸ್ಯೆಗೆ ಇದು ಕಾರಣವಲ್ಲ ಎನ್ನುವ ಸಮಜಾಯಿಷಿಯನ್ನುನಮಗೆ ನೀಡಲಾಗಿತ್ತು. ವಿಶೇಷವೆಂದರೆ ಸಾ.ಮಾ. ಅಧಿಕಾರಿ ನೀಡಿರುವ ಮಾಹಿತಿಯಂತೆ ಸೇವೆಯ ವೇಗವು ೧೪ ಎಂ ಬಿ ಪಿ ಎಸ್ ಆಗಿದ್ದು, ನಿಗದಿತ ಸಮಯದಲ್ಲಿ ಸಂಪರ್ಕದಲ್ಲಿರುವ ಗ್ರಾಹಕರಿಗೆ ಈ ವೇಗವು ಸಮವಾಗಿ ಹಂಚಿಹೋಗುವುದಾದಲ್ಲಿ, ಇಂತಹ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿವೆ ಎನ್ನುವುದು ನಮ್ಮ ಅನಿಸಿಕೆ. ಅಪೇಕ್ಷಿತ ಮಾಹಿತಿಗಳನ್ನು ಒದಗಿಸಿದ ಅಧಿಕಾರಿಯು ಒಂದು ಟವರ್ ನ ಸಾಮರ್ಥ್ಯದ ಬಗ್ಗೆ ವಿವರಣೆಯನ್ನು ನೀಡುವಾಗಒಂದು ಟವರ್ ನಿಂದ ನೀಡಬಹುದಾದ ಗರಿಷ್ಠ ಸಂಪರ್ಕಗಳ ಸಂಖ್ಯೆಯನ್ನು ನಮಗೆ ನೀಡಿಲ್ಲ. ಆದರೆ ಸೇವೆಯನ್ನು ಬಳಸಿಕೊಳ್ಳುವ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಸಂಪರ್ಕದ ವೇಗವು ಕ್ಷಣಕ್ಷಣಕ್ಕೂ ಬದಲಾಗುತ್ತದೆ ಎಂದು ತಿಳಿಸಿರುತ್ತಾರೆ. ಇದರರ್ಥ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಿದಂತೆಯೇ, ನಿಮಗೆ ಲಭಿಸುವ ಅಂತರ್ಜಾಲದ ವೇಗವು ನಿಶ್ಚಿತವಾಗಿಯೂ ಕಡಿಮೆಯಾಗುತ್ತದೆ. ಹಗಲಿನಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರು ಅಂತರ್ಜಾಲವನ್ನು ಬಳಸುವುದರಿಂದ, ಸೇವೆಯ ವೇಗವು ಹಗಲಿನಲ್ಲಿ ಕನಿಷ್ಠ ಮಟ್ಟದಲ್ಲಿ ಇರುತ್ತದೆ ಎನ್ನುವ ನಮ್ಮ ವಾದವನ್ನು ಮೇಲಿನ ಮಾಹಿತಿಗಳು ಸಮರ್ಥಿಸಿದರೂ, ಇಲಾಖೆಯ ಮಾಹಿತಿಯಂತೆ ಇದು ಅಸಾಧ್ಯವೆನ್ನುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.
ಅದೇನೇ ಇರಲಿ, ಪುತ್ತೂರಿನ ದೂರವಾಣಿ ಕಚೇರಿಯ ಆವರಣದಲ್ಲಿರುವ ಟವರ್ ಮತ್ತು ಸೀಟು ಗುಡ್ಡೆಯ ಮೇಲಿನ ಟವರ್ ಗಳ ನಡುವೆ ಹಾಗೂ ಇವೆರಡೂ ಟವರ್ ಗಳಿಂದ ಕೇವಲ ೧ ಮತ್ತು ೩/ ೪ ಕಿ.ಮೀ ಅಂತರದಲ್ಲಿ ನಾನು ಅಂತರ್ಜಾಲ ಸೇವೆಯನ್ನು ಬಳಸುತ್ತಿದ್ದು, ಇಂದಿಗೂ ಜಿ ಸೇವೆಯು ಪ್ರಾರಂಭಿಕ ಹಂತದಲ್ಲಿ ಲಭಿಸಿದಷ್ಟು ವೇಗದಲ್ಲಿ ಲಭಿಸುತ್ತಿಲ್ಲ.ಕೆಲವೊಮ್ಮೆ ಸಂಪರ್ಕ ಲಭಿಸದಿರುವುದು ಹಾಗೂ ಸಂಪರ್ಕ ಲಭಿಸಿದರೂ ಪದೇಪದೇ ಕಡಿತಗೊಳ್ಳುವುದು ಮತ್ತು ವೇಗವು ಬೆರಳೆಣಿಕೆಯಷ್ಟು ಕೆ ಬಿ ಗಳಿಗೆ ಅಥವಾ ಶೂನ್ಯಕ್ಕೆ ಕುಸಿಯುವುದೇ ಮುಂತಾದ ಸಮಸ್ಯೆಗಳು ಇಂದಿಗೂ ಬಾಧಿಸುತ್ತಲೇ ಇವೆ.  ಕೆಲವೇ ದಿನಗಳ ಹಿಂದೆ ೧೨ ಎಂ ಬಿ ಗಾತ್ರದ ಕಡತವೊಂದನ್ನು ಕೆಳಗಿಳಿಸಲು ಬರೋಬ್ಬರಿ ೨೯ ನಿಮಿಷಗಳು ತಗಲಿದ್ದುದು, ಬಿ ಎಸ್ ಎನ್ ಎಲ್ ಸೇವೆಯ ಬಗ್ಗೆ ನನ್ನ ಟೀಕೆ ಮತ್ತು ಅಭಿಪ್ರಾಯವನ್ನು ಸಮರ್ಥಿಸುತ್ತದೆ.
 ಪ್ರಸ್ತುತ ಪುತ್ತೂರಿನಲ್ಲಿ 3 ಜಿ  ಅಂತರ್ಜಾಲ ಸೇವೆಯನ್ನು ಒದಗಿಸುತ್ತಿರುವ  ಖಾಸಗಿ ಸೇವಾ ಸಂಸ್ಥೆಗಳ ಸೇವೆಯೊಂದಿಗೆ ತುಲನೆ ಮಾಡಿದಾಗ,ಬಿ ಎಸ್ ಎನ್ ಎಲ್ ಸಂಸ್ಥೆಯು ನೀಡುತ್ತಿರುವ ಸೇವೆಯು ನಿಶ್ಚಿತವಾಗಿಯೂ ತೃಪ್ತಿಕರವಾಗಿಲ್ಲ.ಇದೀಗ ಖಾಸಗಿ ಸಂಸ್ಥೆಗಳು ಅನೇಕ ನಗರಗಳಲ್ಲಿ ಜಿ ಸೇವೆಯನ್ನು ನೀಡಲು ಆರಂಭಿಸಿದ್ದು, ಪ್ರಾಯಶಃ ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲೂ ಲಭ್ಯವಾಗುವ ಸಾಧ್ಯತೆಗಳಿವೆ. ಆದುದರಿಂದ ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಬಿ ಎಸ್ ಎನ್ ಎಲ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನವನ್ನು ನಡೆಸಬೇಕಾಗಿದೆ. ತನ್ಮೂಲಕ ಗ್ರಾಹಕರ ವಿಶ್ವಾಸವನ್ನು ಮರಳಿ ಗಳಿಸಬೇಕಿದೆ. ಇದಕ್ಕೆ ತಪ್ಪಿದಲ್ಲಿ ಅಧಿಕತಮ ಗ್ರಾಹಕರು ಖಾಸಗಿ ಸೇವಾ ಸಂಸ್ಥೆಗಳ ಅಂತರ್ಜಾಲ ಸಂಪರ್ಕವನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

Friday, January 9, 2015

TRAFFIC PROBLEMS ...........



ಸಾರಿಗೆ ಸಮಸ್ಯೆಗಳನ್ನು ಪರಿಹರಿಸುವವರು ಯಾರು?

ಅನೇಕ ವರ್ಷಗಳ ಹಿಂದೆ ಪಡ್ಡೆಹುಡುಗರು ತಮ್ಮ ಬೈಕುಗಳಿಗೆ ಅಳವಡಿಸುತ್ತಿದ್ದ " ಜೆಟ್ ಸೈಲೆನ್ಸರ್ " ಗಳು ಇದೀಗ ಮತ್ತೆ ಮಾರುಕಟ್ಟೆಗೆ ಮರಳಿವೆ. ಪುತ್ತೂರಿನ ರಸ್ತೆಗಳಲ್ಲೂ ಜೆಟ್ ಸೈಲೆನ್ಸರ್ ಅಳವಡಿಸಿದ ಅನೇಕ ಬೈಕುಗಳು ಕಿವಿ ಗಡಚಿಕ್ಕುವ ಸದ್ದು ಮಾಡುತ್ತಾ ಓಡಾಡುತ್ತಿವೆ. ಸ್ಥಳೀಯರ ಪಾಲಿಗೆ ಕರ್ಕಶವೆನಿಸುವ ಈ ಅಸಾಧಾರಣ ಸದ್ದು, ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳು ಮತ್ತು ವಯೋವೃದ್ಧರ  ಶ್ರವಣ ಶಕ್ತಿಯನ್ನೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳಂತೆ, ಇಂತಹ ಕಿವಿಗಡಚಿಕ್ಕುವ ಸದ್ದು ಮಾಡುವ ಯಾವುದೇ ವಾಹನಗಳ ಚಾಲಕರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ದಾವೆಯನ್ನು ಹೂಡಬಹುದಾಗಿದೆ. ಆದರೆ ಕರ್ತವ್ಯ ನಿರತ ಸಂಚಾರ ವಿಭಾಗದ ಪೊಲೀಸರು ಮಾತ್ರ ಇಂತಹ ವರ್ತನೆಯನ್ನು ಕಂಡೂ ಕಾಣದಂತೆ ಸುಮ್ಮನಿರುತ್ತಾರೆ. 

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳಂತೆ, ಇಂತಹ ಶಬ್ದ ಮಾಲಿನ್ಯವು ಶಿಕ್ಷಾರ್ಹ ಅಪರಾಧವೆನಿಸುತ್ತದೆ. ಆದರೆ ಈ ಕಾನೂನನ್ನು ರಾಜಾರೋಷವಾಗಿ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಪೊಲೀಸರೇ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಜನಸಾಮಾನ್ಯರು ಅಸಾಯಕರಾಗಿ ಈ ಅಯಾಚಿತ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.

ಅತಿವೇಗದ ಅತಿರೇಕ 

ಇಷ್ಟು ಮಾತ್ರವಲ್ಲ, ನಿಮ್ಮ ಕಿವಿ ತಮ್ಮಟೆ ಹರಿದುಹೋಗುವಂತಹ  ಸದ್ದನ್ನು ಮಾಡುವ ಕರ್ಕಶವಾದ ಹಾರ್ನ್ ಬಾರಿಸುತ್ತಾ, ಜನನಿಬಿಡ ರಸ್ತೆಯಲ್ಲೂ ಶರವೇಗದಿಂದ ಧಾವಿಸುವ ಮತ್ತು ಕತ್ತಲಾದ ಬಳಿಕ ಕಣ್ಣು ಕುಕ್ಕುವ ದೀಪಗಳನ್ನು ಬೆಳಗಿಸಿ ಓಡಾಡುವ ಲಘು ಮತ್ತು ಘನ ವಾಹನಗಳ ಚಾಲಕರ ವಿರುದ್ಧವೂ ಸಂಚಾರ ವಿಭಾಗದ ಪೊಲೀಸರು ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪುತ್ತೂರಿನ ಪ್ರಧಾನ ರಸ್ತೆಯ ವಿವಿಧ ಭಾಗಗಳಲ್ಲಿ ವಾಹನಗಳ ವೇಗದ ಮಿತಿ ೩೦ ಕಿ.ಮೀ ಎಂದು ಸೂಚಿಸುವ ಫಲಕಗಳನ್ನು ಅಳವಡಿಸಿದ್ದರೂ, ಇದರ ದುಪ್ಪಟ್ಟು ವೇಗದಲ್ಲಿ ಚಲಿಸುವ ಅನೇಕ ವಾಹನಗಳ ಚಾಲಕರ ವರ್ತನೆಗಳು ಮಾತ್ರ ಬದಲಾಗಿಲ್ಲ. ತತ್ಪರಿಣಾಮವಾಗಿ ಇಂತಹ ಚಾಲಕರ ದುಂಡಾವರ್ತಿಗಳಿಗೆ ಕಡಿವಾಣವನ್ನು ತೊಡಿಸುವವರೇ ಇಲ್ಲದಂತೆ ಆಗಿರುವುದು ಮಾತ್ರ ಸುಳ್ಳೇನಲ್ಲ!. 

ಗತವರ್ಷದಲ್ಲಿ  ಪುತ್ತೂರಿನ ಟ್ರಾಫಿಕ್ ಪೊಲೀಸರಿಗೆ ವಾಹನಗಳ ವೇಗವನ್ನು ಅಳೆಯಬಲ್ಲ " ರಾಡಾರ್ " ಒಂದನ್ನು ನೀಡಲಾಗಿತ್ತು. ಈ ಉಪಕರಣ ಕೈಸೇರಿದ ಬಳಿಕ  ತಮ್ಮ ಇಂಟರ್ ಸೆಪ್ಟರ್ ವಾಹನದಲ್ಲಿ ಇದನ್ನು ಇರಿಸಿ, ನಗರದ ರಸ್ತೆಗಳಲ್ಲಿ ಅತಿವೇಗದಿಂದ ಚಲಿಸುವ ವಾಹನಗಳನ್ನು ಪತ್ತೆಹಚ್ಚಿ ಸ್ಥಳದಲ್ಲೇ ದಂಡವನ್ನು ವಿಧಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು.ಇರಿಸಿಏ ಕಟ್ಟುನಿಟ್ಟಿನ ಕ್ರಮದಿಂದಾಗಿ ಸರಕಾರದ ಬೊಕ್ಕಸಕ್ಕೆ ಒಂದಿಷ್ಟು ಆದಾಯ ಲಭಿಸುವುದರೊಂದಿಗೆ, ತಮ್ಮ ವಾಹನಗಳನ್ನು ಜಾಗರೂಕತೆಯಿಂದ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಚಾಲಕರಲ್ಲಿ ಮೂಡಿಸಲು ಯಶಸ್ವಿಯಾಗಿತ್ತು. ಆದರೆ ಇತ್ತೀಚಿನ ಕೆಲದಿನಗಳಿಂದ ನಗರದಲ್ಲಿ ಇಂಟರ್ ಸೆಪ್ಟರ್ ವಾಹನವು ಇಂತಹ ಕಾರ್ಯಾಚರಣೆಯನ್ನು ನಡೆಸುವುದು ಅಪರೂಪವೆನಿಸಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಬಿಸಿಯಾಗದೇ ಬೆಣ್ಣೆ .....

ಪುತ್ತೂರಿನ ಅನೇಕ ನಾಗರಿಕರು ಇಲ್ಲಿನ ಸಂಚಾರ ಮತ್ತಿತರ ಸಮಸ್ಯೆಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳನ್ನು ಬಿಗಿಯುವರಾದರೂ, ಸಂಬಂಧಿತ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡಲು ಹಿಂಜರಿಯುತ್ತಾರೆ. ಇದಕ್ಕೂ ಮಿಗಿಲಾಗಿ ತಮ್ಮನ್ನು ಕಾಡುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿ, ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸುತ್ತಾರೆ. ಅರ್ಥಾತ್, ಆಂಗ್ಲಭಾಷೆಯ ಸುಪ್ರಸಿದ್ಧ ಉಕ್ತಿಯೊಂದರಂತೆ " ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕನ್ನು ಇರಿಸಿ, ಗುಂಡು ಹಾರಿಸುತ್ತಾರೆ ".

ಸ್ಥಳೀಯ ನಾಗರಿಕರು ಇಂತಹ  ಗಂಭೀರ ಸಮಸ್ಯೆಗಳ  ಬಗ್ಗೆ ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡದೇ ಇದ್ದಲ್ಲಿ, ಜನಸಾಮಾನ್ಯರನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ. ಸಂದರ್ಭೋಚಿತವಾಗಿ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರ ಮಾರ್ಗದರ್ಶನ ಮತ್ತು ಬೆಂಬಲಗಳನ್ನು ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವವನ್ನು ಜನಸಾಮಾನ್ಯರು ಬೆಳೆಸಿಕೊಂಡಲ್ಲಿ, ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ನೆಮ್ಮದಿಯಿಂದ ಜೀವಿಸುವುದು ಅಸಾಧ್ಯವೇನಲ್ಲ!.  

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  


Thursday, January 8, 2015

INDIAN RAILWAYS AND CLEANLINESS




ಸ್ವಚ್ಚತೆಯತ್ತ ಚಿತ್ತವನ್ನೇ ಹರಿಸದ ರೈಲ್ವೆ ಇಲಾಖೆ!

ಹತ್ತಾರು ದಿನಗಳಲ್ಲಿ ಒಂದುಬಾರಿ ಮನೆಯ ಸಮೀಪದಲ್ಲಿರುವ ರೈಲುಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಾ, ಹಳಿಗಳ ಇಕ್ಕೆಲಗಳಲ್ಲಿ ಪ್ರಯಾಣಿಕರು ಎಸೆದಿರುವ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಆಯ್ದುಕೊಳ್ಳುವ " ಹುಚ್ಚು ಹವ್ಯಾಸ " ನನ್ನಲ್ಲಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರು, ಲಘು ಪಾನೀಯ, ಹಣ್ಣಿನ ರಸಗಳ ಖಾಲಿ ಬಾಟಲಿಗಳೊಂದಿಗೆ, ವಿಸ್ಕಿ ಮತ್ತು ಬಿಯರ್ ಇತ್ಯಾದಿ ಮಾದಕ ಪೇಯಗಳ ಗಾಜಿನ ಬಾಟಲಿಗಳೂ ಕಾಣಸಿಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ  ಗಾಜಿನ ಬಾಟಲಿಗಳು ಹಳಿಗಳ ಮೇಲೆ ಅಥವಾ ಬದಿಯಲ್ಲಿರುವ ಜಲ್ಲಿ ಕಲ್ಲುಗಳ ಮೇಲೆ ಬಿದ್ದು ನುಚ್ಚುನೂರಾಗಿರುತ್ತವೆ.

ರೈಲ್ ನೀರ್ 

ಆದರೆ ಗುರುವಾರದಂದು ಬೆಳಗಿನ ಜಾವ ರೈಲು ಹಳಿಗಳ ಬದಿಯಲ್ಲಿ " ರೈಲ್ ನೀರ್ " ಎನ್ನುವ ಹೆಸರಿರುವ, ನಾಲ್ಕಾರು  ಖಾಲಿ ಪ್ಲಾಸ್ಟಿಕ್ ಬಾಟಲಿಗಳು ದೊರೆತಿದ್ದವು. ಇತರ ನಿರುಪಯುಕ್ತ ಬಾಟಲಿಗಳೊಂದಿಗೆ ಇವುಗಳನ್ನೂ ಆಯ್ದು ತಂದ ಬಳಿಕ, ಕುತೂಹಲದಿಂದ ಈ ಬಾಟಲಿಯ ಲೇಬಲ್ ಮೇಲಿರುವ ವಿವರಗಳನ್ನು ಗಮನಿಸಿದಾಗ ಇದು ರೈಲ್ವೆ ಇಲಾಖೆಯ ವಾಣಿಜ್ಯ ಉತ್ಪನ್ನವೆಂದು ತಿಳಿದುಬಂದಿತ್ತು. ಇಂಡಿಯನ್ ರೈಲ್ವೆ ಕೆಟರಿಂಗ್ ಎಂಡ್ ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯು ತಮಿಳುನಾಡಿನ ಕಾಂಚೀಪುರಂ ನಲ್ಲಿರುವ ರೈಲ್ ನೀರ್ ಪ್ಲಾಂಟ್ ನಲ್ಲಿ ತಯಾರಿಸುವ  ಈ ಶುದ್ಧೀಕರಿಸಿದ ಕುಡಿಯುವ ನೀರನ್ನು, ಭಾರತೀಯ ರೈಲ್ವೆ ಗೆ ಸರಬರಾಜು ಮಾಡಲಾಗುತ್ತದೆ. ಹಾಗೂ ಇದನ್ನು ರೈಲು ಪ್ರಯಾಣಿಕರಿಗೆ ಮತ್ತು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಪ್ರಯಾಣಿಕರ ಸಲುವಾಗಿಯೇ ಈ ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವ ರೈಲ್ವೆ ಇಲಾಖೆಗೆ, ಪ್ರಯಾಣಿಕರು ಉತ್ಪಾದಿಸುವ ತ್ಯಾಜ್ಯಗಳನ್ನು ಸಂಗ್ರಹಿಸಲು ಅತ್ಯವಶ್ಯಕವೆನಿಸುವ ಕಸದ ಬುಟ್ಟಿಗಳನ್ನು ಒದಗಿಸಬೇಕೆನ್ನುವ ವಿಚಾರದ ಅರಿವಿಲ್ಲದಿರುವುದು ನಂಬಲಸಾಧ್ಯವೆನಿಸುತ್ತದೆ.

ವಿಶೇಷವೆಂದರೆ ಅಧಿಕತಮ ರೈಲು ಪ್ರಯಾಣಿಕರು ಈ ನೀರಿನ ಮತ್ತು ಇತರ ಬಾಟಲಿಗಳು ಖಾಲಿಯಾದೊಡನೆ, ರೈಲಿನ ಕಿಟಿಕಿಯಿಂದ ಹೊರಕ್ಕೆ ಎಸೆದುಬಿಡುತ್ತಾರೆ. ಅಂತೆಯೇ ತಾವು ಬಳಸಿದ ಹಣ್ಣಿನ ರಸ, ಲಘು ಪಾನೀಯ, ಬಿಯರ್ ಮತ್ತು ವಿಸ್ಕಿಯಂತಹ ಮಾದಕ ಪೇಯಗಳ  ಖಾಲಿ ಬಾಟಲಿಗಳನ್ನೂ ಹಳಿಗಳ ಇಕ್ಕೆಲಗಳಲ್ಲಿ ಎಸೆದುಬಿಡುತ್ತಾರೆ. ಇಷ್ಟು ಮಾತ್ರವಲ್ಲ, ತಾವು ಅನ್ಯ ಖಾದ್ಯಪೇಯಗಳನ್ನು ಪ್ಯಾಕ್ ಮಾಡಿ ತಂದಿದ್ದ ಆಗೂ ಸೇವಿಸಲು ಬಳಸಿದ್ದ ಪ್ಲಾಸ್ಟಿಕ್ ತಟ್ಟೆ,ಲೋಟ, ಚಮಚ, ಕಾಗದ ಮತ್ತು ಪ್ಲಾಸ್ಟಿಕ್ ಚೀಲ ಇತ್ಯಾದಿ ತ್ಯಾಜ್ಯಗಳನ್ನು ಕೂಡಾ ಇದೆ ರೀತಿಯಲ್ಲಿ ಎಸೆದುಬಿಡುತ್ತಾರೆ. ಈ ಸಮಸ್ಯೆಗೆ ನಿರ್ದಿಷ್ಟ ಕಾರಣವೂ ಇದೆ. 

ಸಾಮಾನ್ಯವಾಗಿ ನೀವು ಪಯಣಿಸುವ ರೈಲು ಬೋಗಿಗಳಲ್ಲಿ ಪುಟ್ಟ ಗಾತ್ರದ ಕಸದ ಬುಟ್ಟಿಯೊಂದು ಇರುತ್ತದೆ. ಒಂದು ಬೋಗಿಯಲ್ಲಿ ಪಯಣಿಸುವ ನೂರಾರು ಪ್ರಯಾಣಿಕರು ಉತ್ಪಾದಿಸುವ ತ್ಯಾಜ್ಯಗಳನ್ನು ಹಾಕಲು ಇದು ಸಾಕಾಗದು ಎನ್ನುವುದು ಇಲಾಖೆಗೂ ತಿಳಿದಿದೆ. ಅದರಲ್ಲೂ ದೂರ ಪ್ರಯಾಣದ ರೈಲುಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಒಂದಿಷ್ಟು ಅತಿಯಾಗಿಯಾಗಿಯೇ ಇರುತ್ತದೆ. ಹಾಗೂ ಇದೇ ಕಾರಣದಿಂದಾಗಿ ಬೋಗಿಯಲ್ಲಿರುವ ಕಸದ ಬುಟ್ಟಿಯು ಸದಾ ತುಂಬಿ ತುಳುಕುತ್ತಿರುತ್ತದೆ. ಈ ತ್ಯಾಜ್ಯಗಳನ್ನು ಆಯ್ದ ರೈಲ್ವೆ ಸ್ಟೇಶನ್ ಗಳಲ್ಲಿ ತೆರವುಗೊಳಿಸದೇ ಇರುವುದರಿಂದ ಪ್ರಯಾಣಿಕರಿಗೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಹೇಗೆ ಎನ್ನುವ ಸಮಸ್ಯೆ ಎದುರಾಗುತ್ತದೆ. ತತ್ಪರಿಣಾಮವಾಗಿ ಅಧಿಕತಮ ಪ್ರಯಾಣಿಕರು ಸಕಲ ವಿಧದ ತ್ಯಾಜ್ಯಗಳನ್ನು ಚಲಿಸುವ ರೈಲಿನಿಂದ ಹೊರಕ್ಕೆ ಎಸೆದುಬಿಡುತ್ತಾರೆ. 

ಸ್ವಚ್ಚತಾ ಅಭಿಯಾನ ನಡೆಸುವುದೇಕೆ?

ದೇಶದ ಪ್ರಧಾನಿ ಮೋದಿಯವರು ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ದೇಶದ ಬಹುತೇಕ ರೈಲು ನಿಲ್ದಾಣಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳು ಜರಗಿದ್ದವು. ಆದರೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳು, ರೈಲುಹಳಿಗಳ ಇಕ್ಕೆಲಗಳಲ್ಲೂ ರಾಶಿ ಬೀಳುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಇಲಾಖೆಯು ಆದ್ಯತೆಯ ಮೇರೆಗೆ ಬಗೆಹರಿಸಲು ಮುಂದಾಗಬೇಕಿದೆ. ಹಾಗೂ ಇದಕ್ಕಾಗಿ ಪ್ರತಿಯೊಂದು ರೈಲಿನ ಪ್ರತಿಯೊಂದು ಬೋಗಿಗಳಲ್ಲೂ ಸೂಕ್ತ ಗಾತ್ರದ ಕಸದ ಬುಟ್ಟಿಯನ್ನು ಇರಿಸುವುದರೊಂದಿಗೆ, ನಿಗದಿತ ನಿಲ್ದಾಣಗಳಲ್ಲಿ ಇವುಗಳನ್ನು ತೆರವುಗೊಳಿಸಲು ಸಿಬಂದಿಗಳನ್ನು ನಿಯೋಜಿಸಬೇಕಿದೆ. ಇಂತಹ ವ್ಯವಸ್ಥೆಗಳನ್ನು ಪ್ರಯಾಣಿಕರಿಗೆ ಒದಗಿಸುವುದರ ಹೊರತಾಗಿ, ಕೇವಲ ಕಾಟಾಚಾರಕ್ಕಾಗಿ ಸ್ವಚ್ಛತಾ  ಅಭಿಯಾನದ ಆಚರಣೆಯ ಸಲುವಾಗಿ ರೈಲು ನಿಲ್ದಾಣಗಳಲ್ಲಿ ಕಸಗುಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಿಶ್ಚಿತವಾಗಿಯೂ ನಿರರ್ಥಕವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು