Monday, January 26, 2015

USELESS SOLAR STREETLIGHTS !

ಸೋತು ಸುಣ್ಣವಾಗಿರುವ ಸೋಲಾರ್ ದಾರಿದೀಪಗಳು

ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಕತ್ತಲಾದ ಬಳಿಕ ಸೋಡಿಯಂ ವೇಪರ್, ಮರ್ಕ್ಯುರಿ ಮತ್ತು ಹೈಮಾಸ್ಟ್ ದಾರಿದೀಪಗಳು ಝಗಮಗಿಸುವುದನ್ನು ನೀವೂ ಕಂಡಿರಬೇಕು. ಕೆಲವೆಡೆ ಹಗಲಿನಲ್ಲೂ ಪ್ರಜ್ವಲಿಸುವ ದಾರಿದೀಪಗಳನ್ನು ಕಂಡು ಬೆರಗಾಗಿರಬೇಕು. ಅಗಾಧ ಪ್ರಮಾಣದ ವಿದ್ಯುತ್ತನ್ನು ಕಬಳಿಸುವ ಇಂತಹ ದಾರಿದೀಪಗಳ ವಿದ್ಯುತ್ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುವುದು ಇದಕ್ಕೊಂದು ಪ್ರಮುಖ ಕಾರಣವಾಗಿರಬಹುದು.

ವಿದ್ಯುತ್ ಕೊರತೆ

ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ನೂತನ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಯೊಂದಿಗೆ, ರಾಜ್ಯಾದ್ಯಂತ ಪೋಲಾಗುತ್ತಿರುವ ವಿದ್ಯುಚ್ಚಕ್ತಿಯನ್ನು ಆಂಶಿಕವಾಗಿ ಉಳಿಸಬಲ್ಲ ಮಾರ್ಗೋಪಾಯಗಳನ್ನು ರಾಜ್ಯ ಸರರ್ಕಾರವು ಈಗಾಗಲೇ ಜಾರಿಗೊಳಿಸಿದೆ. ಇವುಗಳಲ್ಲಿ ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ " ಸೋಲಾರ್ ದಾರಿದೀಪ " ಗಳನ್ನು ಅಳವಡಿಸುವ ಉಪಕ್ರಮವೂ ಒಂದಾಗಿದೆ.

೨೦೦೯ ರಲ್ಲಿ ರಾಜ್ಯದ ಮೂರು ಜಿಲ್ಲೆಗಳ ಐದು ತಾಲೂಕುಗಳಲ್ಲಿನ ಆಯ್ದ ಹತ್ತು ಗ್ರಾಮಗಳಲ್ಲಿ ಈ ಯೋಜನೆಯನ್ವಯ ತಲಾ ೧೮ ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿತ್ತು. ದ.ಕ ಜಿಲ್ಲೆಯ ಐದು ತಾಲೂಕುಗಳ ತಲಾ ಎರಡು ಗ್ರಾಮಗಳಂತೆ, ಒಟ್ಟು ಹತ್ತು ಗ್ರಾಮಗಳು ಈ ಯೋಜನೆಯ ಫಲಾನುಭಾವಿಗಳಾಗಿ ಆಯ್ಕೆಯಾಗಿದ್ದವು. ಈ ದಾರಿದೀಪಗಳನ್ನು ಅಳವಡಿಸಿದ ಬಳಿಕಈ ಗ್ರಾಮಗಳ ವಿದ್ಯುತ್ ವೆಚ್ಚವು ಕಡಿಮೆಯಾಗಿವುದೆಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಸೋಲಾರ್ ದಾರಿದೀಪಗಳು ಅಲ್ಪಾವಧಿಯಲ್ಲೇ ಕೆಟ್ಟು ಹೋಗಿದ್ದರ ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿತ್ತು!.

ನಿಜ ಹೇಳಬೇಕಿದ್ದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಅತ್ಯಂತ ಉಪಯುಕ್ತವೆನಿಸಬಲ್ಲ ಸೌರದೀಪಗಳನ್ನುವಿದ್ಯುತ್ ಸಂಪರ್ಕ ಇರುವಲ್ಲಿ ಅಳವಡಿಸುವುದು ಮೂರ್ಖತನದ ಪರಮಾವಾಧಿ ಎನ್ನದೇ ವಿಧಿಯಿಲ್ಲ. ಏಕೆಂದರೆ ತಲಾ ೨೩ ಸಾವಿರ ರೂಪಾಯಿ ಬೆಲೆಯ ಈ ಸೌರದೀಪದ ಯೂನಿಟ್ ನಲ್ಲಿ, ಒಂದು ಸೌರ ಫಲಕ, ಪುಟ್ಟದೊಂದು ಎಲ್ ಇ ಡಿ ದೀಪ ಹಾಗೂ ಬ್ಯಾಟರಿಯನ್ನು ಅಳವಡಿಸಿರುವ ಸಾಧಾರಣ ಎತ್ತರದ ಕಬ್ಬಿಣದ ಕಂಬವೊಂದನ್ನು ಒದಗಿಸಲಾಗಿದ್ದು, ಇದರ ಬೆಳಕು ಕೇವಲ ನಾಲ್ಕಾರು ಚದರ ಮೀಟರ್ ವಿಸ್ತೀರ್ಣಕ್ಕೆ ಪಸರಿಸುತ್ತದೆ.

ಈ ಸೌರದೀಪಗಳು ಇರುಳಿಡೀ ಬೆಳಗಲು ಬೇಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಲುಇವುಗಳ ಸೌರಫಲಕಗಳಿಗೆ ಪ್ರತಿನಿತ್ಯ ಕನಿಷ್ಠ ೬ ಗಂಟೆಗಳ ಕಾಲ ಪ್ರಖರವಾದ ಸೂರ್ಯನ ಬಿಸಿಲು ಬೀಳಬೇಕಾಗುವುದು. ಆದರೆ ರಸ್ತೆಯ ಬದಿಗಳಲ್ಲಿ ಇರಬಹುದಾದ ಮರಗಳ ನೆರಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಹಬ್ಬುವ ಧೂಳು ಸೌರಫಲಕದ ಮೇಲೆ ಆವರಿಸಿದಲ್ಲಿ ಮತ್ತು ಮಳೆಗಾಲದ ದಿನಗಳಲ್ಲಿ ಅಥವಾ ಮೋಡ ಕವಿದ ದಿನಗಳಲ್ಲಿ ಈ ದೀಪಗಳು ಮಂಕಾಗುವ ಅಥವಾ ಉರಿಯದೇ ಇರುವ ಸಾಧ್ಯತೆಗಳಿವೆ. ಇದಲ್ಲದೆ ಸೌರಫಲಕಗಳು ಉತ್ಪಾದಿಸಿದ ವಿದ್ಯುತ್ತನ್ನು ಸಂಗ್ರಹಿಸಿ ಇರಿಸಬೇಕಾದ ಬ್ಯಾಟರಿಗಳನ್ನು ಸುಸ್ಥಿತಿಯಲ್ಲಿರುವಂತೆ ನಿರ್ವಹಿಸದಿದ್ದಲ್ಲಿ, ಬ್ಯಾಟರಿಗಳು ಕೆಟ್ಟು ಹೋಗುವುದರಿಂದ ದೀಪಗಳು ನಿರುಪಯುಕ್ತವೆನಿಸುತ್ತವೆ.

ಪರ್ಯಾಯ ವ್ಯವಸ್ಥೆ

.ಕ ಜಿಲ್ಲೆಯ ಕನ್ಯಾನ, ಗೋಳ್ತಮಜಲು ಮತ್ತು ನೆಕ್ಕಿಲಾಡಿ ಗ್ರಾಮಗಳಲ್ಲಿಈ ಯೋಜನೆಯನ್ವಯ ಅಳವಡಿಸಿದ್ದ ಸೌರದೀಪಗಳು ಕೆಲವೇ ತಿಂಗಳುಗಳಲ್ಲಿ ಕೆಟ್ಟು ಹೋಗಿದ್ದವು. ಇವುಗಳನ್ನು ಮುಂದಿನ ೫ ವರ್ಷಗಳ ಕಾಲ ನಿರ್ವಹಿಸುವುದಾಗಿ ಖಾತರಿ ನೀಡಿದ್ದ ಗುತ್ತಿಗೆದಾರರು, ದಾರಿದೀಪಗಳನ್ನು ಅಳವಡಿಸಿದ ಬಳಿಕ ನಾಪತ್ತೆಯಾಗಿದ್ದರು!.

.ಕ ಜಿಲ್ಲೆಯ ಮೂರೂ ಗ್ರಾಮಗಳಲ್ಲಿ ಅಳವಡಿಸಿದ್ದ ಸೌರದೀಪಗಳು ಅಲ್ಪಾವಧಿಯಲ್ಲೇ ಕೆಟ್ಟುಹೋಗಿದ್ದರೂ, ಇವುಗಳನ್ನು ಅಳವಡಿಸಿದ ಹಾಗೂ  ಕೆಟ್ಟು ಹೋಗಿದ್ದ ದೀಪಗಳನ್ನು ದುರಸ್ತಿಪಡಿಸದ ಮತ್ತು  ಇವುಗಳನ್ನು ನಿಗದಿತ ಅವಧಿಗೆ ಉಚಿತವಾಗಿ  ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ನಿಭಾಯಿಸದ ಗುತ್ತಿಗೆದಾರರ ವಿರುದ್ಧ ಸರಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದೃಷ್ಟವಶಾತ್ ಈ ಮೂರೂ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿರುವ ಕಾರಣದಿಂದಾಗಿಸಾಮಾನ್ಯ ದಾರಿದೀಪಗಳು ಬೆಳಗುತ್ತಿರುವುದರಿಂದಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ತೊಂದರೆಗಳು ಸಂಭವಿಸಿಲ್ಲ. ಆದರೆ ಸರಕಾರದ ನಿರರ್ಥಕ ಯೋಜನೆಗಳಿಗಾಗಿ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ಬೇಕಾಬಿಟ್ಟಿಯಾಗಿ ವ್ಯಯಿಸುವ ರಾಜಕಾರಣಿಗಳಿಗೆ, ಲಕ್ಷಾಂತರ ರೂಪಾಯಿಗಳು ಪಾಲಾಗಿರುವ ಬಗ್ಗೆ ಕಿಂಚಿತ್ ಬೇಸರವೂ ಆಗಿರುವ ಸಾಧ್ಯತೆಗಳಿಲ್ಲ. ಏಕೆಂದರೆ ಅವರಿಗೆ ಲಭಿಸಬೇಕಾದ " ಕಪ್ಪ ಕಾಣಿಕೆ " ಗಳ ಪಾಲು ಸಲ್ಲದೇಯಾವುದೇ  ಯೋಜನೆಯ ಕಾಮಗಾರಿಗಳ  ಗುತ್ತಿಗೆಯನ್ನೇ ನೀಡುವುದಿಲ್ಲ!.

ಕೊನೆಯ ಮಾತು

ರಾಜ್ಯ ಸರಕಾರವು ವಿದ್ಯುತ್ ಉಳಿತಾಯದ ಉದ್ದೇಶದಿಂದ ಜಾರಿಗೊಳಿಸಿದ್ದ ಈ ಯೋಜನೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿತ್ತು. ಗುತ್ತಿಗೆದಾರರು ಅಳವಡಿಸಿದ್ದ ಕಳಪೆ ಗುಣಮಟ್ಟದ ಸೌರದೀಪಗಳ ವೈಫಲ್ಯದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ನಷ್ಟವೂ ಸಂಭವಿಸಿದೆ. ನಿಜ ಹೇಳಬೇಕಿದ್ದಲ್ಲಿ ವಿದ್ಯುತ್ ಸಂಪರ್ಕವಿರುವ ಈ ಮೂರೂ ಗ್ರಾಮಗಳಲ್ಲಿ ಇದೇ ಹಣವನ್ನು ಬಳಸಿ, ತುಸು ದೊಡ್ಡ ಗಾತ್ರದ ಎಲ್.ಇ .ಡಿ ದಾರಿದೀಪಗಳನ್ನು ಅಳವಡಿಸಬಹುದಾಗಿತ್ತು. ಇದರಿಂದಾಗಿ ಸೌರದೀಪಗಳ ಕಂಬ, ಬ್ಯಾಟರಿ ಹಾಗೂ ಎಲ್ ಇ ಡಿ ದೀಪ ಇತ್ಯಾದಿಗಳಿಗೆ ವ್ಯಯಿಸಿದ್ದ ಹಣ ಉಳಿಯುತ್ತಿತ್ತು. ಜೊತೆಗೆ ಇವುಗಳ ನಿರ್ವಹಣೆಯ ವೆಚ್ಚವೂ ಉಳಿತಾಯ ಆಗುತ್ತಿತ್ತು!. ಆದರೆ ನಮ್ಮನ್ನಾಳುವವರು ತಮ್ಮ ವೈಯುಕ್ತಿಕ ಲಾಭದ ಸಲುವಾಗಿ ಬಹುತೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆಯೇ ವಿನಃಪ್ರಜೆಗಳ ಒಳಿತಿಗಾಗಿ ಅಲ್ಲ ಎನ್ನುವುದು ರಾಜ್ಯದ ಪ್ರಜೆಗಳಿಗೂ ಚೆನ್ನಾಗಿ ತಿಳಿದಿದೆ. ಇಂತಹ ವಿಚಾರಗಳ ಅರಿವಿದ್ದರೂ, ರಾಜ್ಯದ ಮತದಾರರು  ಭ್ರಷ್ಟ ರಾಜಕಾರಣಿಗಳಿಗೆ ಮತ್ತೆಮತ್ತೆ ಮತವನ್ನು ನೀಡುವ ಮೂಲಕ ಇನ್ನಷ್ಟು ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡುವುದೇಕೆ?, ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  




No comments:

Post a Comment