Friday, January 9, 2015

TRAFFIC PROBLEMS ...........



ಸಾರಿಗೆ ಸಮಸ್ಯೆಗಳನ್ನು ಪರಿಹರಿಸುವವರು ಯಾರು?

ಅನೇಕ ವರ್ಷಗಳ ಹಿಂದೆ ಪಡ್ಡೆಹುಡುಗರು ತಮ್ಮ ಬೈಕುಗಳಿಗೆ ಅಳವಡಿಸುತ್ತಿದ್ದ " ಜೆಟ್ ಸೈಲೆನ್ಸರ್ " ಗಳು ಇದೀಗ ಮತ್ತೆ ಮಾರುಕಟ್ಟೆಗೆ ಮರಳಿವೆ. ಪುತ್ತೂರಿನ ರಸ್ತೆಗಳಲ್ಲೂ ಜೆಟ್ ಸೈಲೆನ್ಸರ್ ಅಳವಡಿಸಿದ ಅನೇಕ ಬೈಕುಗಳು ಕಿವಿ ಗಡಚಿಕ್ಕುವ ಸದ್ದು ಮಾಡುತ್ತಾ ಓಡಾಡುತ್ತಿವೆ. ಸ್ಥಳೀಯರ ಪಾಲಿಗೆ ಕರ್ಕಶವೆನಿಸುವ ಈ ಅಸಾಧಾರಣ ಸದ್ದು, ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳು ಮತ್ತು ವಯೋವೃದ್ಧರ  ಶ್ರವಣ ಶಕ್ತಿಯನ್ನೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳಂತೆ, ಇಂತಹ ಕಿವಿಗಡಚಿಕ್ಕುವ ಸದ್ದು ಮಾಡುವ ಯಾವುದೇ ವಾಹನಗಳ ಚಾಲಕರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ದಾವೆಯನ್ನು ಹೂಡಬಹುದಾಗಿದೆ. ಆದರೆ ಕರ್ತವ್ಯ ನಿರತ ಸಂಚಾರ ವಿಭಾಗದ ಪೊಲೀಸರು ಮಾತ್ರ ಇಂತಹ ವರ್ತನೆಯನ್ನು ಕಂಡೂ ಕಾಣದಂತೆ ಸುಮ್ಮನಿರುತ್ತಾರೆ. 

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳಂತೆ, ಇಂತಹ ಶಬ್ದ ಮಾಲಿನ್ಯವು ಶಿಕ್ಷಾರ್ಹ ಅಪರಾಧವೆನಿಸುತ್ತದೆ. ಆದರೆ ಈ ಕಾನೂನನ್ನು ರಾಜಾರೋಷವಾಗಿ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಪೊಲೀಸರೇ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಜನಸಾಮಾನ್ಯರು ಅಸಾಯಕರಾಗಿ ಈ ಅಯಾಚಿತ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.

ಅತಿವೇಗದ ಅತಿರೇಕ 

ಇಷ್ಟು ಮಾತ್ರವಲ್ಲ, ನಿಮ್ಮ ಕಿವಿ ತಮ್ಮಟೆ ಹರಿದುಹೋಗುವಂತಹ  ಸದ್ದನ್ನು ಮಾಡುವ ಕರ್ಕಶವಾದ ಹಾರ್ನ್ ಬಾರಿಸುತ್ತಾ, ಜನನಿಬಿಡ ರಸ್ತೆಯಲ್ಲೂ ಶರವೇಗದಿಂದ ಧಾವಿಸುವ ಮತ್ತು ಕತ್ತಲಾದ ಬಳಿಕ ಕಣ್ಣು ಕುಕ್ಕುವ ದೀಪಗಳನ್ನು ಬೆಳಗಿಸಿ ಓಡಾಡುವ ಲಘು ಮತ್ತು ಘನ ವಾಹನಗಳ ಚಾಲಕರ ವಿರುದ್ಧವೂ ಸಂಚಾರ ವಿಭಾಗದ ಪೊಲೀಸರು ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪುತ್ತೂರಿನ ಪ್ರಧಾನ ರಸ್ತೆಯ ವಿವಿಧ ಭಾಗಗಳಲ್ಲಿ ವಾಹನಗಳ ವೇಗದ ಮಿತಿ ೩೦ ಕಿ.ಮೀ ಎಂದು ಸೂಚಿಸುವ ಫಲಕಗಳನ್ನು ಅಳವಡಿಸಿದ್ದರೂ, ಇದರ ದುಪ್ಪಟ್ಟು ವೇಗದಲ್ಲಿ ಚಲಿಸುವ ಅನೇಕ ವಾಹನಗಳ ಚಾಲಕರ ವರ್ತನೆಗಳು ಮಾತ್ರ ಬದಲಾಗಿಲ್ಲ. ತತ್ಪರಿಣಾಮವಾಗಿ ಇಂತಹ ಚಾಲಕರ ದುಂಡಾವರ್ತಿಗಳಿಗೆ ಕಡಿವಾಣವನ್ನು ತೊಡಿಸುವವರೇ ಇಲ್ಲದಂತೆ ಆಗಿರುವುದು ಮಾತ್ರ ಸುಳ್ಳೇನಲ್ಲ!. 

ಗತವರ್ಷದಲ್ಲಿ  ಪುತ್ತೂರಿನ ಟ್ರಾಫಿಕ್ ಪೊಲೀಸರಿಗೆ ವಾಹನಗಳ ವೇಗವನ್ನು ಅಳೆಯಬಲ್ಲ " ರಾಡಾರ್ " ಒಂದನ್ನು ನೀಡಲಾಗಿತ್ತು. ಈ ಉಪಕರಣ ಕೈಸೇರಿದ ಬಳಿಕ  ತಮ್ಮ ಇಂಟರ್ ಸೆಪ್ಟರ್ ವಾಹನದಲ್ಲಿ ಇದನ್ನು ಇರಿಸಿ, ನಗರದ ರಸ್ತೆಗಳಲ್ಲಿ ಅತಿವೇಗದಿಂದ ಚಲಿಸುವ ವಾಹನಗಳನ್ನು ಪತ್ತೆಹಚ್ಚಿ ಸ್ಥಳದಲ್ಲೇ ದಂಡವನ್ನು ವಿಧಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು.ಇರಿಸಿಏ ಕಟ್ಟುನಿಟ್ಟಿನ ಕ್ರಮದಿಂದಾಗಿ ಸರಕಾರದ ಬೊಕ್ಕಸಕ್ಕೆ ಒಂದಿಷ್ಟು ಆದಾಯ ಲಭಿಸುವುದರೊಂದಿಗೆ, ತಮ್ಮ ವಾಹನಗಳನ್ನು ಜಾಗರೂಕತೆಯಿಂದ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಚಾಲಕರಲ್ಲಿ ಮೂಡಿಸಲು ಯಶಸ್ವಿಯಾಗಿತ್ತು. ಆದರೆ ಇತ್ತೀಚಿನ ಕೆಲದಿನಗಳಿಂದ ನಗರದಲ್ಲಿ ಇಂಟರ್ ಸೆಪ್ಟರ್ ವಾಹನವು ಇಂತಹ ಕಾರ್ಯಾಚರಣೆಯನ್ನು ನಡೆಸುವುದು ಅಪರೂಪವೆನಿಸಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಬಿಸಿಯಾಗದೇ ಬೆಣ್ಣೆ .....

ಪುತ್ತೂರಿನ ಅನೇಕ ನಾಗರಿಕರು ಇಲ್ಲಿನ ಸಂಚಾರ ಮತ್ತಿತರ ಸಮಸ್ಯೆಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳನ್ನು ಬಿಗಿಯುವರಾದರೂ, ಸಂಬಂಧಿತ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡಲು ಹಿಂಜರಿಯುತ್ತಾರೆ. ಇದಕ್ಕೂ ಮಿಗಿಲಾಗಿ ತಮ್ಮನ್ನು ಕಾಡುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿ, ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸುತ್ತಾರೆ. ಅರ್ಥಾತ್, ಆಂಗ್ಲಭಾಷೆಯ ಸುಪ್ರಸಿದ್ಧ ಉಕ್ತಿಯೊಂದರಂತೆ " ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕನ್ನು ಇರಿಸಿ, ಗುಂಡು ಹಾರಿಸುತ್ತಾರೆ ".

ಸ್ಥಳೀಯ ನಾಗರಿಕರು ಇಂತಹ  ಗಂಭೀರ ಸಮಸ್ಯೆಗಳ  ಬಗ್ಗೆ ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡದೇ ಇದ್ದಲ್ಲಿ, ಜನಸಾಮಾನ್ಯರನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ. ಸಂದರ್ಭೋಚಿತವಾಗಿ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರ ಮಾರ್ಗದರ್ಶನ ಮತ್ತು ಬೆಂಬಲಗಳನ್ನು ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವವನ್ನು ಜನಸಾಮಾನ್ಯರು ಬೆಳೆಸಿಕೊಂಡಲ್ಲಿ, ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ನೆಮ್ಮದಿಯಿಂದ ಜೀವಿಸುವುದು ಅಸಾಧ್ಯವೇನಲ್ಲ!.  

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  


No comments:

Post a Comment