Wednesday, January 28, 2015

EXERCISE BEFORE BREAKFAST


ಮುಂಜಾನೆಯ ವ್ಯಾಯಾಮ : ತೂಕ ಇಳಿಸಲು ಅತ್ಯುತ್ತಮ 

ಪ್ರಾತಃಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಶೌಚಕ್ರಿಯೆಗಳನ್ನು ಮುಗಿಸಿದ ಬಳಿಕ ನಿತ್ಯಕರ್ಮಗಳನ್ನು ಆರಂಭಿಸುವ ಮುನ್ನ ಶಾರೀರಿಕ ವ್ಯಾಯಾಮವನ್ನು ಮಾಡುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಮತ್ತು ಶರೀರದ ತೂಕವನ್ನು ಇಳಿಸಿಕೊಳ್ಳಲು ಅತ್ಯುತ್ತಮ ಎಂದು ನಮ್ಮ ಪೂರ್ವಜರು ಹೇಳಿದ್ದರು. ಇತ್ತೀಚೆಗೆ ಈ ವಿಚಾರವನ್ನು ಬೆಲ್ಜಿಯಂ ದೇಶದ ಸಂಶೋಧಕರು ಧೃಡೀಕರಿಸಿದ್ದಾರೆ. 

ವ್ಯಾಯಾಮದಿಂದ ಆರೋಗ್ಯ 

ಮನುಷ್ಯನು ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿ ಎಡೆಬಿಡದೆ ದುಡಿದು, ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಬಳಿಕ ಕಳೆದುಕೊಂಡ ಆರೋಗ್ಯವನ್ನು ಮರಳಿ ಗಳಿಸಲು, ತಾನು ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನೆಲ್ಲಾ ವ್ಯಯಿಸುತ್ತಾನೆ. ಇದು ಇಂದಿನ ಪೀಳಿಗೆಯ ಧನದಾಹ ಹಾಗೂ ನಿಷ್ಪ್ರಯೋಜಕ ಆಹಾರ ಸೇವನೆ ಮತ್ತು ಬಿಡುವಿಲ್ಲದ ಜೀವನಶೈಲಿಗಳ  ಪರಿಣಾಮವೇ ಹೊರತು ಬೇರೇನೂ ಅಲ್ಲ. 

ಸಾಮಾನ್ಯವಾಗಿ ಯಾವುದೇ ವ್ಯಾಧಿಯ ಲಕ್ಷಣಗಳು ಕಂಡುಬರುವ ಮುನ್ನ, ತಾನು ಆರೋಗ್ಯದಿಂದ ಇದ್ದೇನೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಾರಣಾಂತರಗಳಿಂದ ವೈದ್ಯರನ್ನು ಸಂದರ್ಶಿಸಿದಾಗ, ಯಾವುದಾದರೂ ವ್ಯಾಧಿಯು ಪತ್ತೆಯಾದಲ್ಲಿ ಸ್ವಾಭಾವಿಕವಾಗಿಯೇ ಗಾಬರಿಯಾಗುತ್ತಾರೆ. ಅಂತೆಯೇ ತಮ್ಮ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು, ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾರೆ. 

 ಬಾಲ್ಯದಿಂದಲೇ ಶಿಸ್ತಿಲ್ಲದ  ದಿನಚರಿ, ಅಪಾಯಕಾರಿ ಕೊಬ್ಬುಗಳಿಂದ ಸಮೃದ್ಧವಾಗಿರುವ ತ್ಯಾಜ್ಯ ಆಹಾರ ( ಜಂಕ್ ಫುಡ್ ) ಗಳ ಅತಿಸೇವನೆ ಹಾಗೂ ನಿಷ್ಕ್ರಿಯ ಜೀವನ ಶೈಲಿಗಳನ್ನು ಅನುಸರಿಸುವ ಇಂದಿನ ಯುವಜನರು, ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಇರಿಸಿಕೊಳ್ಳುವ ಸಲುವಾಗಿ ಆರೋಗ್ಯದಾಯಕ ಜೀವನಶೈಲಿಯ ಪರಿಪಾಲನೆ ಹಾಗೂ ಒಂದಿಷ್ಟು ಶಾರೀರಿಕ ವ್ಯಾಯಾಮವನ್ನು ಮಾಡಲು ಸಿದ್ಧರಿರುವುದಿಲ್ಲ. ನಿಷ್ಕ್ರಿಯ ಜೀವನಶೈಲಿಯ ದಾಸಾನುದಾಸರೆನಿಸಿರುವ ಬಹುತೇಕ ಯುವಜನರು, ಯಾವುದೇ ಕಾರಣಕ್ಕೂ ತಮ್ಮ ಬಿಂದಾಸ್ ಜೀವನಶೈಲಿಯನ್ನು ತೊರೆಯುವುದಿಲ್ಲ. ಆದರೆ ಇಂತಹ ವರ್ತನೆಗಳಿಂದಾಗಿ ಯೌವ್ವನದಲ್ಲೇ ಪ್ರತ್ಯಕ್ಷವಾಗುವ ಅಧಿಕ ತೂಕ, ಅತಿಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಗಂಭೀರ ಆರೋಗ್ಯದ ಸಮಸ್ಯೆಗಳು ತಲೆದೋರಿದೊಡನೆ, ಆಕಾಶವೇ ತಲೆಗೆ ಬಿದ್ದಂತೆ ಚಿಂತಾಕ್ರಾಂತರಾಗುತ್ತಾರೆ. ತದನಂತರ " ಕೆಟ್ಟ ಮೇಲೆ ಬುದ್ಧಿ ಬಂತು " ಎನ್ನುವಂತೆ, ವೈದ್ಯರ ಸೂಚನೆಗಳನ್ನು ಪರಿಪಾಲಿಸುವುದರೊಂದಿಗೆ,ಸೂಕ್ತ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ದೈನಂದಿನ ವ್ಯಾಯಾಮಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲಿಡುತ್ತಾರೆ!. 

ಮುಂಜಾನೆಯ ವ್ಯಾಯಾಮ 

ಪ್ರತಿನಿತ್ಯ ಬೆಳಗಿನ ಉಪಾಹಾರ ಸೇವನೆಗೆ ಮುನ್ನ ವ್ಯಾಯಾಮವನ್ನು ಮಾಡುವುದರಿಂದ ನಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಶರೀರವನ್ನು ಪ್ರಚೋದಿಸುತ್ತದೆ. ಜೊತೆಗೆ ಶರೀರದ ತೂಕ ಹೆಚ್ಚುವುದನ್ನೂ ನಿಯಂತ್ರಿಸುತ್ತದೆ. ಈ ಪ್ರಕ್ರಿಯೆಗಳು ಆಹಾರ ಸೇವನೆಯ ಬಳಿಕ ಆಥವಾ ಅನ್ಯ ಸಮಯದಲ್ಲಿ ಮಾಡುವ ವ್ಯಾಯಾಮಕ್ಕಿಂತ ಅಧಿಕ ಪರಿಣಾಮವನ್ನು ತೋರುತ್ತದೆ. 

ಬೆಲ್ಜಿಯಂ ದೇಶದ ಸಂಶೋಧಕರು ೨೦೧೦ ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಬಾಗಿಯಾದ ಆರೋಗ್ಯವಂತ ಯುವಕರಿಗೆ ಆರು ವಾರಗಳ ಕಾಲ ಯಥೇಚ್ಚವಾಗಿ ಸಮೃದ್ಧ ಆಹಾರವನ್ನು ಸೇವಿಸಲು ಸೂಚಿಸಿದ್ದರು. ಈ ಆಹಾರದಲ್ಲಿ ಎಂದಿಗಿಂತ ಶೇ. ೩೦ ರಷ್ಟು ಅಧಿಕ ಕ್ಯಾಲರಿಗಳು ಮತ್ತು ಶೇ. ೫೦ ರಷ್ಟು ಅಧಿಕ ಕೊಬ್ಬಿನ ಅಂಶಗಳಿರುವಂತೆ ಸಲಹೆಯನ್ನು ನೀಡಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಕೆಲ ಯುವಕರು ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸಿದರೆ, ಮತ್ತೆ ಕೆಲವರು ಬೆಳಗಿನ ಉಪಾಹಾರ ಸೇವನೆಯ ಬಳಿಕ ಕಠಿಣ ವ್ಯಾಮದಲ್ಲಿ ತೊಡಗಿಸಿಕೊಂಡಿದ್ದರು. ಮತ್ತೊಂದಿಷ್ಟು ಯುವಕರು ಬೆಳಗಿನ ಉಪಾಹಾರ ಸೇವನೆಯ ಮುನ್ನ ಇದೇ ರೀತಿಯ ವ್ಯಾಯಾಮದಲ್ಲಿ ಭಾಗಿಯಾಗಿದ್ದರು. 

ಆರು ವಾರಗಳ ಬಳಿಕ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುತ್ತಿದ್ದ ಯುವಕರು ಸಾಕಷ್ಟು ಉಬ್ಬಿದ್ದು, ಸುಮಾರು ಆರು ಪೌಂಡ್ ತೂಕವನ್ನು ಗಳಿಸಿದ್ದರು. ಜೊತೆಗೆ ಇವರು ಇನ್ಸುಲಿನ್ ಗೆ ಪ್ರತಿರೋಧವನ್ನು ಗಳಿಸುವುದರೊಂದಿಗೆ, ತಮ್ಮ ಮಾಂಸಪೇಶಿಗಳಲ್ಲಿ ಇನ್ನಷ್ಟು ಕೊಬ್ಬಿನ ಕಣಗಳನ್ನು ಸಂಗ್ರಹಿಸಿದ್ದರು. ಉಪಾಹಾರ ಸೇವನೆಯ ಬಳಿಕ ವ್ಯಾಯಾಮವನ್ನು ಮಾಡುತ್ತಿದ್ದ ಯುವಕರು ಸುಮಾರು ಮೂರು ಪೌಂಡ್ ತೂಕವನ್ನು ಗಳಿಸಿಕೊಂಡಿದ್ದು, ಇನ್ಸುಲಿನ್ ನ ಸಮಸ್ಯೆಯನ್ನು ಗಳಿಸಿಕೊಂಡಿದ್ದರು. ಆದರೆ ಮುಂಜಾನೆ ಆಹಾರ ಸೇವನೆಗೆ ಮುನ್ನ ವ್ಯಾಯಾಮದಲ್ಲಿ ಭಾಗವಹಿಸುತ್ತಿದ್ದ ಯುವಕರು ಮಾತ್ರ ಕಿಂಚಿತ್ ತೂಕವನ್ನೂ ಗಳಿಸದೇ ಇರುವುದರೊಂದಿಗೆ, ಇನ್ಸುಲಿನ್ ನ ಮಟ್ಟವನ್ನು ಆರೋಗ್ಯಕರ ಸ್ತರದಲ್ಲಿ ಇರಿಸಿಕೊಳ್ಳಲು ಯಶಸ್ವಿಯಾಗಿದ್ದರು. ಇದಕ್ಕೂ ಮಿಗಿಲಾಗಿ ಇವರ ಶರೀರವು ಇತರ ಎರಡು ಗುಂಪಿನ ಯುವಕರಿಗಿಂತ ತುಸು ಅಧಿಕ ಪ್ರಮಾಣದಲ್ಲಿ ಹಾಗೂ ದಿನವಿಡೀ ಕೊಬ್ಬನ್ನು ಕರಗಿಸುತ್ತಿರುವುದು ತಿಳಿದುಬಂದಿತ್ತು!. 

ಈ ಅಧ್ಯಯನವನ್ನು ನಡೆಸಿದ್ದ ಸಂಶೋಧಕರ ಅಭಿಪ್ರಾಯದಂತೆ ನಮ್ಮ ಶರೀರದ ತೂಕವನ್ನು ಅಪೇಕ್ಷಿತ ಮಟ್ಟಕ್ಕಿಂತ ಹೆಚ್ಚಾಗದಂತೆ ಕಾಪಾಡಿಕೊಳ್ಳುವುದರೊಂದಿಗೆ, ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆ ಮತ್ತು ಸಕ್ರಿಯ ಜೀವನಶೈಲಿ ( ದೈನಂದಿನ ವ್ಯಾಯಾಮ ) ಯ ಪರಿಪಾಲನೆ ಅತ್ಯವಶ್ಯಕವೆನಿಸುವುದು.  ಅಂತೆಯೇ ನೀವು ಸಮತೋಲಿತ ಆಹಾರವನ್ನು ಸೇವಿಸದೇ ಇದ್ದಲ್ಲಿ, ಕನಿಷ್ಠ ಪಕ್ಷ ಬೆಳಗ್ಗಿನ ಆಹಾರ ಸೇವನೆಯ ಮುನ್ನ ಕಠಿಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಶರೀರದ ತೂಕವನ್ನು ನಿಯಂತ್ರಿಸಲು ಉಪಯುಕ್ತವೆನಿಸಬಲ್ಲದು. ಅರ್ಥಾತ್, ಆಹಾರ ಸೇವನೆಯ ಬಳಿಕ ಮಾಡುವ ವ್ಯಾಯಾಮಕ್ಕಿಂತ, ಬೆಳಗಿನ ಉಪಾಹಾರ ಸೇವನೆಗೆ ಮುನ್ನ ಮಾಡುವ ವ್ಯಾಯಾಮವು ಅತ್ಯಂತ ಪರಿಣಾಮಕಾರಿ ಎನಿಸುವುದು. 

ಮಧುಮೇಹಿಗಳಿಗೆ ಕಿವಿಮಾತು 

ಮುಂಜಾನೆಯ ವ್ಯಾಯಾಮದಲ್ಲಿ ಭಾಗಿಯಾಗಲು ಬಯಸುವ ಮಧುಮೇಹಿಗಳು, ತಮ್ಮ ವೈದ್ಯರ ಸಲಹೆಯನ್ನು ಪಡೆಯಲೇಬೇಕು. ಉಪಾಹಾರ ಸೇವನೆಗೆ ಮುನ್ನ ವ್ಯಾಯಾಮದಲ್ಲಿ ಭಾಗಿಯಾಗುವುದರಿಂದ, ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಅಂಶವು ತ್ವರಿತಗತಿಯಲ್ಲಿ ಕುಸಿಯುವ ಸಾಧ್ಯತೆಗಳಿವೆ. ತತ್ಪರಿಣಾಮವಾಗಿ ಅತಿಆಯಾಸ,ಅತಿಯಾಗಿ ಬೆವರುವುದು  ಹಾಗೂ ಸುಸ್ತು,ಸಂಕಟಗಳೊಂದಿಗೆ, ಪ್ರಜ್ಞಾಹೀನರಾಗುವ ಸಾಧ್ಯತೆಗಳೂ ಇವೆ. ಇಂತಹ ಸಂದರ್ಭದಲ್ಲಿ  ತುರ್ತುಚಿಕಿತ್ಸೆ ಲಭಿಸದೇ ಇದ್ದಲ್ಲಿ, ಪ್ರಾಣಾಪಾಯದ ಸಾಧ್ಯತೆಯೂ ಇದೆ. ಆದುದರಿಂದ ಮಧುಮೇಹಿಗಳು ವೈದ್ಯರ ಸಲಹೆಯನ್ನು ಪಡೆದು, ಕಿಂಚಿತ್ ಆಹಾರವನ್ನು ಸೇವಿಸಿದ ಬಳಿಕವೇ ವ್ಯಾಯಮದಲ್ಲಿ ಭಾಗವಹಿಸುವುದು ಸುರಕ್ಷಿತವೆನಿಸುವುದು. 

ಕೊನೆಯ ಮಾತು 

ನಮ್ಮ ಪೂರ್ವಜರು ಸಮೃದ್ಧವಾದ ಆಹಾರವನ್ನು ಸೇವಿಸುತ್ತಿದ್ದರೂ, ದಿನವಿಡೀ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡುವ ಮೂಲಕ " ಉಂಡದ್ದನ್ನು ಕರಗಿಸುತ್ತಿದ್ದರು ". ಇದರೊಂದಿಗೆ ರಾತ್ರಿ ಬೇಗನೆ ಮಲಗಿ, ಬೆಳಗ್ಗೆ ನಸುಕು ಮೂಡುವ ಮುನ್ನ ಎದ್ದು, ತಮ್ಮ ಕಾಯಕದಲ್ಲಿ ತೊಡಗುತ್ತಿದ್ದರು. ತನ್ಮೂಲಕ ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಅಧಿಕತಮ ಜನರು ಮಧ್ಯರಾತ್ರಿಯ ಬಳಿಕ ಮಲಗಿ, ಸೂರ್ಯ ನೆತ್ತಿಗೇರುವ ಸಮಯದಲ್ಲಿ ಏಳುವ ಹವ್ಯಾಸವನ್ನು ರೂಢಿಸಿಕೊಂಡಿರುವುದು ಸುಳ್ಳೇನಲ್ಲ. ಅಂತೆಯೇ ಶ್ರಮದಾಯಕ ಜೀವಶೈಲಿಗೆ ಬದಲಾಗಿ ಆರಾಮದಾಯಕ ಜೀವನಶೈಲಿಗೆ ಶರಣಾಗಿರುವುದರಿಂದ, ಯೌವ್ವನದಲ್ಲೇ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವುದು ಮಾತ್ರ ಸತ್ಯ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು   


No comments:

Post a Comment