Friday, January 23, 2015

CONTRACTORS NEGLIGENCE !




 ಸ್ವಚ್ಛತೆಯತ್ತ ಗಮನಹರಿಸದ ಗುತ್ತಿಗೆದಾರರು 

ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಎರಡು ತಿಂಗಳುಗಳೇ ಕಳೆದಿವೆ. ದೇಶಾದ್ಯಂತ ಅನೇಕ ಸುಪ್ರಸಿದ್ಧ ವ್ಯಕ್ತಿಗಳು ಮತ್ತು ಸಂಘಟನೆಗಳು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಈ ಅಭಿಯಾನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ದೇಶದ ಉದ್ದಗಲಕ್ಕೂ ಪ್ರತಿನಿತ್ಯ ನಡೆಯುತ್ತಿರುವ ಅಸಂಖ್ಯ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಮಾತ್ರ ಇದನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. 

ಕಾಮಗಾರಿಗಳಿಂದ ತ್ಯಾಜ್ಯ 

ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ನಿರಂತರವಾಗಿ ವೈವಿಧ್ಯಮಯ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಕೆಲವೆಡೆ ನೂತನ ಕಟ್ಟಡಗಳ ನಿರ್ಮಾಣದ ಸಲುವಾಗಿ, ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಡವಿದ ಕಟ್ಟಡಗಳ ಭಗ್ನಾವಶೇಷಗಳ ಪ್ರಮಾಣವೂ ಸಾಕಷ್ಟಿರುತ್ತದೆ. ಈ ರೀತಿಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು, ಇದರ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಬಹುತೇಕ ದೇಶಗಳಲ್ಲಿ ಇಂತಹ ತ್ಯಾಜ್ಯಗಳನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ ಅಥವಾ ಪುನರ್ ಆವರ್ತನಗೊಳಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಈ ರೀತಿಯ ವಿಧಾನಗಳನ್ನು ಅನುಸರಿಸದೇ ಇರುವುದರಿಂದ, ಹೆಚ್ಚಾಗಿ ಇವುಗಳನ್ನು ಯಾವುದಾದರೂ ಖಾಲಿಜಾಗದಲ್ಲಿ ಅಥವಾ ರಸ್ತೆಗಳ ಬದಿಗಳಲ್ಲಿ ಸುರಿದುಬಿಡಲಾಗುತ್ತದೆ. ತತ್ಪರಿಣಾಮವಾಗಿ ಇನ್ನಷ್ಟು ಸಮಸ್ಯೆಗಳಿಗೆ ಮೂಲವೆನಿಸುತ್ತದೆ.

ಅದೇ ರೀತಿಯಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸುವ ಅಥವಾ ಹಳೆಯ ಕಟ್ಟಡಗಳನ್ನು ಪುನರ್ ನವೀಕರಿಸುವ ಸಂದರ್ಭಗಳಲ್ಲೂ ಗಣನೀಯ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಈ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರು, ಬಹುತೇಕ ಸಂದರ್ಭಗಳಲ್ಲಿ ಇವುಗಳನ್ನು ಯಾವುದಾದರೂ ಖಾಲಿಜಾಗದಲ್ಲಿ ಅಥವಾ ನಗರಗಳ ಹೊರವಲಯ ಅಥವಾ ಸಮೀಪದಲ್ಲಿರುವ ಹೆದ್ದಾರಿಗಳ ಬದಿಗಳಲ್ಲಿ ಸುರಿದುಬಿಡುತ್ತಾರೆ. ತತ್ಪರಿಣಾಮವಾಗಿ ಈ ರಸ್ತೆಗಳ ಮೇಲೆ ಸುರಿದ ಮಳೆನೀರು ಸರಾಗವಾಗಿ ಹರಿದು ಚರಂಡಿಯನ್ನು ಸೇರುವುದಕ್ಕೆ ಅಡಚಣೆಯಾಗುವುದರಿಂದ, ಈ ಹೆದ್ದಾರಿಗಳು ಹಾನಿಗೀಡಾಗುತ್ತವೆ. " ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ " ಎನ್ನಬಹುದಾದ ಇಂತಹ ಘಟನೆಗಳಿಗೆ, ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವೆನಿಸುತ್ತದೆ. ವಿಶೇಷವೆಂದರೆ ಈ ಸಮಸ್ಯೆಯ ಬಗ್ಗೆ ಗುತ್ತಿಗೆದಾರರಿಗೆ ಅರಿವಿದ್ದರೂ, ಈ ಕೆಟ್ಟ ಹವ್ಯಾಸವನ್ನು ಬಿಡಲು ಸಿದ್ಧರಿಲ್ಲದ ಕಾರಣದಿಂದಾಗಿ, ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ನಾಮಾವಶೇಷಗೊಂಡಿರುವುದು ಸತ್ಯ. 

ಇದಲ್ಲದೇ ನಿರ್ಮಾಣ ಕಾಮಗಾರಿಗಳ ಸಂದರ್ಭದಲ್ಲಿ ಬಳಸುವ ಸಿಮೆಂಟಿನ ಖಾಲಿ ಚೀಲಗಳು, ಮರದ ತುಂಡುಗಳು,ಮೊಳೆಗಳು, ಅಳಿದುಳಿದ ಮರಳು ಹಾಗೂ ಜಲ್ಲಿ, ಕಲ್ಲಿನ ತುಂಡುಗಳೇ ಮುಂತಾದ ಅವಶೇಷಗಳನ್ನು, ಬಹುತೇಕ ಸಂದರ್ಭಗಳಲ್ಲಿ ವಿಲೇವಾರಿ ಮಾಡದೇ ಸ್ಥಳದಲ್ಲೇ ಬಿಡಲಾಗುತ್ತದೆ. ಈ ಚಾಳಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಅಧಿಕಾರಿಗಳ ಹೊಣೆಗಾರಿಕೆ 

ದೇಶದ ಪ್ರಧಾನಿಯವರ ಅಪೇಕ್ಷೆಯಂತೆ ಪ್ರತಿಯೊಂದು ರಾಜ್ಯಗಳ ಸರ್ಕಾರಗಳು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದರೂ, ಕೆಲ ಖಾಸಗಿ ಮತ್ತು ಅಧಿಕತಮ ಸರ್ಕಾರಿ ಗುತ್ತಿಗೆದಾರರು ಈ ವಿಚಾರವನ್ನು ನಿರ್ಲಕ್ಷಿಸಿರುವುದು ಏಕೆಂದು ನಮಗೂ ತಿಳಿದಿಲ್ಲ. ಪ್ರಾಯಶಃ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಾರಿಗೊಳಿಸದಿರುವುದು ಅಥವಾ ಕಠಿಣ ಕಾನೂನುಕ್ರಮಗಳನ್ನು ಕೈಗೊಳ್ಳದೇ ಇರುವುದು ಇದಕ್ಕೆ ಕಾರಣವಾಗಿರಲೂಬಹುದು. ಅದೇನೇ ಇರಲಿ, ಇನ್ನು ಮುಂದಾದರೂ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಸ್ಥಳದಲ್ಲಿ ಉತ್ಪನ್ನವಾದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು. ಇದಕ್ಕೆ ತಪ್ಪಿದಲ್ಲಿ   " ಸ್ವಚ್ಚ ಭಾರತ ಅಭಿಯಾನ " ವನ್ನು ಹಮ್ಮಿಕೊಳ್ಳುವುದು ನಿರರ್ಥಕವೆನಿಸುವುದು!.   

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳ ಅವಶೇಷಗಳು 

No comments:

Post a Comment