Thursday, January 8, 2015

INDIAN RAILWAYS AND CLEANLINESS




ಸ್ವಚ್ಚತೆಯತ್ತ ಚಿತ್ತವನ್ನೇ ಹರಿಸದ ರೈಲ್ವೆ ಇಲಾಖೆ!

ಹತ್ತಾರು ದಿನಗಳಲ್ಲಿ ಒಂದುಬಾರಿ ಮನೆಯ ಸಮೀಪದಲ್ಲಿರುವ ರೈಲುಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಾ, ಹಳಿಗಳ ಇಕ್ಕೆಲಗಳಲ್ಲಿ ಪ್ರಯಾಣಿಕರು ಎಸೆದಿರುವ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಆಯ್ದುಕೊಳ್ಳುವ " ಹುಚ್ಚು ಹವ್ಯಾಸ " ನನ್ನಲ್ಲಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರು, ಲಘು ಪಾನೀಯ, ಹಣ್ಣಿನ ರಸಗಳ ಖಾಲಿ ಬಾಟಲಿಗಳೊಂದಿಗೆ, ವಿಸ್ಕಿ ಮತ್ತು ಬಿಯರ್ ಇತ್ಯಾದಿ ಮಾದಕ ಪೇಯಗಳ ಗಾಜಿನ ಬಾಟಲಿಗಳೂ ಕಾಣಸಿಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ  ಗಾಜಿನ ಬಾಟಲಿಗಳು ಹಳಿಗಳ ಮೇಲೆ ಅಥವಾ ಬದಿಯಲ್ಲಿರುವ ಜಲ್ಲಿ ಕಲ್ಲುಗಳ ಮೇಲೆ ಬಿದ್ದು ನುಚ್ಚುನೂರಾಗಿರುತ್ತವೆ.

ರೈಲ್ ನೀರ್ 

ಆದರೆ ಗುರುವಾರದಂದು ಬೆಳಗಿನ ಜಾವ ರೈಲು ಹಳಿಗಳ ಬದಿಯಲ್ಲಿ " ರೈಲ್ ನೀರ್ " ಎನ್ನುವ ಹೆಸರಿರುವ, ನಾಲ್ಕಾರು  ಖಾಲಿ ಪ್ಲಾಸ್ಟಿಕ್ ಬಾಟಲಿಗಳು ದೊರೆತಿದ್ದವು. ಇತರ ನಿರುಪಯುಕ್ತ ಬಾಟಲಿಗಳೊಂದಿಗೆ ಇವುಗಳನ್ನೂ ಆಯ್ದು ತಂದ ಬಳಿಕ, ಕುತೂಹಲದಿಂದ ಈ ಬಾಟಲಿಯ ಲೇಬಲ್ ಮೇಲಿರುವ ವಿವರಗಳನ್ನು ಗಮನಿಸಿದಾಗ ಇದು ರೈಲ್ವೆ ಇಲಾಖೆಯ ವಾಣಿಜ್ಯ ಉತ್ಪನ್ನವೆಂದು ತಿಳಿದುಬಂದಿತ್ತು. ಇಂಡಿಯನ್ ರೈಲ್ವೆ ಕೆಟರಿಂಗ್ ಎಂಡ್ ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯು ತಮಿಳುನಾಡಿನ ಕಾಂಚೀಪುರಂ ನಲ್ಲಿರುವ ರೈಲ್ ನೀರ್ ಪ್ಲಾಂಟ್ ನಲ್ಲಿ ತಯಾರಿಸುವ  ಈ ಶುದ್ಧೀಕರಿಸಿದ ಕುಡಿಯುವ ನೀರನ್ನು, ಭಾರತೀಯ ರೈಲ್ವೆ ಗೆ ಸರಬರಾಜು ಮಾಡಲಾಗುತ್ತದೆ. ಹಾಗೂ ಇದನ್ನು ರೈಲು ಪ್ರಯಾಣಿಕರಿಗೆ ಮತ್ತು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಪ್ರಯಾಣಿಕರ ಸಲುವಾಗಿಯೇ ಈ ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವ ರೈಲ್ವೆ ಇಲಾಖೆಗೆ, ಪ್ರಯಾಣಿಕರು ಉತ್ಪಾದಿಸುವ ತ್ಯಾಜ್ಯಗಳನ್ನು ಸಂಗ್ರಹಿಸಲು ಅತ್ಯವಶ್ಯಕವೆನಿಸುವ ಕಸದ ಬುಟ್ಟಿಗಳನ್ನು ಒದಗಿಸಬೇಕೆನ್ನುವ ವಿಚಾರದ ಅರಿವಿಲ್ಲದಿರುವುದು ನಂಬಲಸಾಧ್ಯವೆನಿಸುತ್ತದೆ.

ವಿಶೇಷವೆಂದರೆ ಅಧಿಕತಮ ರೈಲು ಪ್ರಯಾಣಿಕರು ಈ ನೀರಿನ ಮತ್ತು ಇತರ ಬಾಟಲಿಗಳು ಖಾಲಿಯಾದೊಡನೆ, ರೈಲಿನ ಕಿಟಿಕಿಯಿಂದ ಹೊರಕ್ಕೆ ಎಸೆದುಬಿಡುತ್ತಾರೆ. ಅಂತೆಯೇ ತಾವು ಬಳಸಿದ ಹಣ್ಣಿನ ರಸ, ಲಘು ಪಾನೀಯ, ಬಿಯರ್ ಮತ್ತು ವಿಸ್ಕಿಯಂತಹ ಮಾದಕ ಪೇಯಗಳ  ಖಾಲಿ ಬಾಟಲಿಗಳನ್ನೂ ಹಳಿಗಳ ಇಕ್ಕೆಲಗಳಲ್ಲಿ ಎಸೆದುಬಿಡುತ್ತಾರೆ. ಇಷ್ಟು ಮಾತ್ರವಲ್ಲ, ತಾವು ಅನ್ಯ ಖಾದ್ಯಪೇಯಗಳನ್ನು ಪ್ಯಾಕ್ ಮಾಡಿ ತಂದಿದ್ದ ಆಗೂ ಸೇವಿಸಲು ಬಳಸಿದ್ದ ಪ್ಲಾಸ್ಟಿಕ್ ತಟ್ಟೆ,ಲೋಟ, ಚಮಚ, ಕಾಗದ ಮತ್ತು ಪ್ಲಾಸ್ಟಿಕ್ ಚೀಲ ಇತ್ಯಾದಿ ತ್ಯಾಜ್ಯಗಳನ್ನು ಕೂಡಾ ಇದೆ ರೀತಿಯಲ್ಲಿ ಎಸೆದುಬಿಡುತ್ತಾರೆ. ಈ ಸಮಸ್ಯೆಗೆ ನಿರ್ದಿಷ್ಟ ಕಾರಣವೂ ಇದೆ. 

ಸಾಮಾನ್ಯವಾಗಿ ನೀವು ಪಯಣಿಸುವ ರೈಲು ಬೋಗಿಗಳಲ್ಲಿ ಪುಟ್ಟ ಗಾತ್ರದ ಕಸದ ಬುಟ್ಟಿಯೊಂದು ಇರುತ್ತದೆ. ಒಂದು ಬೋಗಿಯಲ್ಲಿ ಪಯಣಿಸುವ ನೂರಾರು ಪ್ರಯಾಣಿಕರು ಉತ್ಪಾದಿಸುವ ತ್ಯಾಜ್ಯಗಳನ್ನು ಹಾಕಲು ಇದು ಸಾಕಾಗದು ಎನ್ನುವುದು ಇಲಾಖೆಗೂ ತಿಳಿದಿದೆ. ಅದರಲ್ಲೂ ದೂರ ಪ್ರಯಾಣದ ರೈಲುಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಒಂದಿಷ್ಟು ಅತಿಯಾಗಿಯಾಗಿಯೇ ಇರುತ್ತದೆ. ಹಾಗೂ ಇದೇ ಕಾರಣದಿಂದಾಗಿ ಬೋಗಿಯಲ್ಲಿರುವ ಕಸದ ಬುಟ್ಟಿಯು ಸದಾ ತುಂಬಿ ತುಳುಕುತ್ತಿರುತ್ತದೆ. ಈ ತ್ಯಾಜ್ಯಗಳನ್ನು ಆಯ್ದ ರೈಲ್ವೆ ಸ್ಟೇಶನ್ ಗಳಲ್ಲಿ ತೆರವುಗೊಳಿಸದೇ ಇರುವುದರಿಂದ ಪ್ರಯಾಣಿಕರಿಗೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಹೇಗೆ ಎನ್ನುವ ಸಮಸ್ಯೆ ಎದುರಾಗುತ್ತದೆ. ತತ್ಪರಿಣಾಮವಾಗಿ ಅಧಿಕತಮ ಪ್ರಯಾಣಿಕರು ಸಕಲ ವಿಧದ ತ್ಯಾಜ್ಯಗಳನ್ನು ಚಲಿಸುವ ರೈಲಿನಿಂದ ಹೊರಕ್ಕೆ ಎಸೆದುಬಿಡುತ್ತಾರೆ. 

ಸ್ವಚ್ಚತಾ ಅಭಿಯಾನ ನಡೆಸುವುದೇಕೆ?

ದೇಶದ ಪ್ರಧಾನಿ ಮೋದಿಯವರು ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ದೇಶದ ಬಹುತೇಕ ರೈಲು ನಿಲ್ದಾಣಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳು ಜರಗಿದ್ದವು. ಆದರೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳು, ರೈಲುಹಳಿಗಳ ಇಕ್ಕೆಲಗಳಲ್ಲೂ ರಾಶಿ ಬೀಳುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಇಲಾಖೆಯು ಆದ್ಯತೆಯ ಮೇರೆಗೆ ಬಗೆಹರಿಸಲು ಮುಂದಾಗಬೇಕಿದೆ. ಹಾಗೂ ಇದಕ್ಕಾಗಿ ಪ್ರತಿಯೊಂದು ರೈಲಿನ ಪ್ರತಿಯೊಂದು ಬೋಗಿಗಳಲ್ಲೂ ಸೂಕ್ತ ಗಾತ್ರದ ಕಸದ ಬುಟ್ಟಿಯನ್ನು ಇರಿಸುವುದರೊಂದಿಗೆ, ನಿಗದಿತ ನಿಲ್ದಾಣಗಳಲ್ಲಿ ಇವುಗಳನ್ನು ತೆರವುಗೊಳಿಸಲು ಸಿಬಂದಿಗಳನ್ನು ನಿಯೋಜಿಸಬೇಕಿದೆ. ಇಂತಹ ವ್ಯವಸ್ಥೆಗಳನ್ನು ಪ್ರಯಾಣಿಕರಿಗೆ ಒದಗಿಸುವುದರ ಹೊರತಾಗಿ, ಕೇವಲ ಕಾಟಾಚಾರಕ್ಕಾಗಿ ಸ್ವಚ್ಛತಾ  ಅಭಿಯಾನದ ಆಚರಣೆಯ ಸಲುವಾಗಿ ರೈಲು ನಿಲ್ದಾಣಗಳಲ್ಲಿ ಕಸಗುಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಿಶ್ಚಿತವಾಗಿಯೂ ನಿರರ್ಥಕವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 





No comments:

Post a Comment