Tuesday, December 30, 2014

VACCINE TO PREVENT EBOLA READY


ಸಿದ್ದಗೊಂಡಿವೆ : ಎಬೊಲ ವೈರಸ್ ತಡೆಗಟ್ಟಬಲ್ಲ ಲಸಿಕೆಗಳು 

ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ  ಭೀಭತ್ಸ ಕೃತ್ಯಗಳನ್ನು ಎಸಗುತ್ತಿರುವ ಉಗ್ರಗಾಮಿಗಳಿಗಿಂತಲೂ ಭಯಾನಕವೆನಿಸಿರುವ ಹಾಗೂ ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದಿದ್ದ ಎಬೊಲ ವೈರಸ್ ಗಳ ಹಾವಳಿಯಿಂದ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು ವೈದ್ಯಕೀಯ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಲಸಿಕೆಗಳನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸುವ ಪ್ರಕ್ರಿಯೆಗಳು ಮುಂದಿನ ಮೂರು ತಿಂಗಳುಗಳಲ್ಲಿ ಪರಿಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ತದನಂತರ ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. 

ವೈದ್ಯಕೀಯ ಸಂಶೋಧಕರು ಅತ್ಯಂತ ಅಪಾಯಕಾರಿ ಹಾಗೂ ಮಾರಕ ಎಂದು ಗುರುತಿಸಿರುವ ವೈರಸ್ ಗಳಲ್ಲಿ " ಎಬೊಲ " ವೈರಸ್ ಗಳೂ ಸೇರಿವೆ. ಈ ವೈರಸ್ ಗಳ ಐದು ತಳಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರು ತಳಿಗಳು ಅತ್ಯಂತ ಮಾರಕವೆಂದು ಪರಿಗಣಿಸಲ್ಪಟ್ಟಿವೆ. ಅತ್ಯಂತ ಪ್ರಬಲ ತಳಿಯೊಂದರ ಮಾರಕತೆಯ ಪ್ರಮಾಣವು ಶೇ.೯೦ ರಷ್ಟಿದೆ. ಇದಕ್ಕೂ ಮಿಗಿಲಾಗಿ ಈ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಎಬೊಲದ ಮೂಲ 

ಎಬೊಲ ವೈರಸ್ ಕಾಯಿಲೆ ಅಥವಾ ಎಬೊಲ ರಕ್ತಸ್ರಾವಕ ಜ್ವರ ಎಂದು ಕರೆಯಲ್ಪಡುವ ಗಂಭೀರ ಹಾಗೂ ಮಾರಕ ಸಮಸ್ಯೆಗೆ ಕಾರಣವೆನಿಸಿರುವ ಎಬೊಲ ವೈರಸ್ ಗಳು, ೧೯೭೬ ರಲ್ಲಿ ಮೊತ್ತ ಮೊದಲಬಾರಿಗೆ ಕಾಂಗೊ ಮತ್ತು ಸೂಡಾನ್ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿದ್ದವು. ಕಾಂಗೊ ದೇಶದ ಎಬೊಲ ನದಿ ಪ್ರಾಂತ್ಯದಲ್ಲಿ ಇದು ಪ್ರತ್ಯಕ್ಷವಾಗಿದ್ದುದರಿಂದ, ಈ ವೈರಸ್ ಗಳನ್ನು ಎಬೊಲ ಎಂದು ಹೆಸರಿಸಲಾಗಿತ್ತು. 

೧೯೭೬ ರಿಂದ ೨೦೧೨ ಅವಧಿಯಲ್ಲಿ ೧೨ ಬಾರಿ ವಿವಿಧ ದೇಶಗಳಲ್ಲಿ ಪ್ರತ್ಯಕ್ಶವಾಗಿದ್ದ ಈ ವೈರಸ್ ಗಳು, ಕೇವಲ ೧೦೦೦ ಕ್ಕೂ ಕಡಿಮೆ ಜನರನ್ನು ಪೀಡಿಸಿದ್ದವು. ಆದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಿನಿ ದೇಶದಲ್ಲಿ ಉದ್ಭವಿಸಿ, ತ್ವರಿತಗತಿಯಲ್ಲಿ ಲೈಬೀರಿಯ, ಸಿಯೆರಾ ಲಿಯೋನ್ ಮತ್ತು ನೈಜೀರಿಯ ದೇಶಗಳಲ್ಲಿ ಹರಡುತ್ತಾ, ಈಗಾಗಲೇ ಸರಿಸುಮಾರು ೧೯,೬೯೫ ಜನರಿಗೆ ಹರಡಿ ೭,೬೯  ಜನರನ್ನು ಬಲಿಪಡೆದಿರುವ ಈ ವೈರಸ್ ಗಳ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳು, ಕಳೆದ ನಾಲ್ಕು ದಶಕಗಳಲ್ಲೇ ಸರ್ವಾಧಿಕವೆನಿಸಿದೆ. ಇದೇ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಎಬೊಲ ವೈರಸ್ ಗಳ ಹಾವಳಿಯನ್ನು " ಅಂತಾರಾಷ್ಟ್ರೀಯ ಅರೋಗ್ಯ ತುರ್ತುಸ್ಥಿತಿ " ಎಂದು ಘೋಷಿಸಿತ್ತು. ಇಷ್ಟು ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ, ಈ ವ್ಯಾಧಿಯ ಹರಡುವಿಕೆಯ ಸಂಭಾವ್ಯತೆಯ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿತ್ತು. 

ಚಿಕಿತ್ಸೆ 

ಈಗಾಗಲೇ ಹೇಳಿರುವಂತೆ ಎಬೊಲ ವೈರಸ್ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತೀವ್ರ ಅಸ್ವಸ್ಥರಾಗಿರುವ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು. 

 ಈ ಬಾರಿ ಉದ್ಭವಿಸಿದ್ದೆಲ್ಲಿ ?

ಇತ್ತೀಚಿನ ವರದಿಗಳಂತೆ ಗಿನಿ ದೇಶದ ಹಳ್ಳಿಯೊಂದರಲ್ಲಿ ಎರಡು ವರ್ಷ ವಯಸ್ಸಿನ ಬಾಲಕನೊಬ್ಬನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಾಲಕನು ಮೃತಪಟ್ಟು ವಾರ ಕಳೆಯುವಷ್ಟರಲ್ಲಿ ಆತನ ತಾಯಿಯೂ ಮೃತಪಟ್ಟಿದ್ದಳು. ತದನಂತರ ಆತನ ಮೂರು ವರ್ಷದ ಸೋದರಿ ಮತ್ತು ಆತನ ಅಜ್ಜಿ ನಿಧನರಾಗಿದ್ದರು. ಆದರೆ ಈ ನಾಲ್ವರ ಮರಣಕ್ಕೆ ಕಾರಣವೇನೆಂದು ಯಾರಿಗೂ ತಿಳಿದಿರಲೇ ಇಲ್ಲ. ಅಜ್ಜಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಇಬ್ಬರು ಸಂಬಂಧಿಗಳು ಈ ನಿಗೂಢ ಕಾಯಿಲೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದಿದ್ದರು. ಬಳಿಕ ಆರೋಗ್ಯ ಕಾರ್ಯಕರ್ತನೊಬ್ಬನು ಈ ವ್ಯಾಧಿಯನ್ನು ಮತ್ತೊಬ್ಬರಿಗೆ ಹರಡಿದಂತೆಯೇ ಮೃತಪಟ್ಟಿದ್ದನು. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರೂ ಇದಕ್ಕೆ ಬಲಿಯಾಗಿದ್ದರು. ಇವರಿಬ್ಬರೂ ಅದಾಗಲೇ ಈ ಕಾಯಿಲೆಯನ್ನು ತಮ್ಮ ಪರಿಚಿತರು ಮತ್ತು ಸಂಬಂಧಿಗಳಿಗೆ ಹರಡಿದ್ದರು. ಅಂತಿಮವಾಗಿ ಇದೇ ವರ್ಷದ ಮಾರ್ಚ್  ತಿಂಗಳಿನಲ್ಲಿ ಈ ಮಾರಕ ವ್ಯಾಧಿಯು ಎಬೊಲ ಎಂದು ಪತ್ತೆಹಚ್ಚುವಷ್ಟರಲ್ಲಿ , ಅನೇಕ ಅಮಾಯಕರು ಇದಕ್ಕೆ ಬಲಿಯಾಗಿದ್ದರು. ಜೊತೆಗೆ ಗಡಿಯ ಸಮೀಪದಲ್ಲಿನ ಲೈಬೀರಿಯ ಮತ್ತು ಸಿಯೆರಾ ಲಿಯೋನ್ ದೇಶಗಳಲ್ಲೂ ಅನೇಕ ಪ್ರಕರಣಗಳು ಉದ್ಭವಿಸಲಾರಂಭಿಸಿದ್ದವು. 

ನಾಲ್ವರು ಬಲಿಯಾಗಿದ್ದ  ಹಳ್ಳಿಯು ಗಿನಿ ದೇಶದ ಗಡಿಭಾಗದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ಸಿಯೇರ ಲಿಯೋನ್ ಮತ್ತು ಲೈಬೀರಿಯಾ ದೇಶಗಳಿವೆ. ಈ ಹಿಂದುಳಿದ ಹಾಗೂ ಬಡ ದೇಶಗಳ ನಡುವಿನ ಗಡಿಭಾಗದ ರಸ್ತೆಗಳು ಹಿಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ, ಪ್ರತಿನಿತ್ಯ ನೂರಾರು ಜನರು ಈ ಮೂರು ದೇಶಗಳ ನಡುವೆ ಸಂಚರಿಸುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ, ಗಿನಿಯ ಹಳ್ಳಿಯಲ್ಲಿ ಉದ್ಭವಿಸಿದ್ದ ಎಬೊಲ ವೈರಸ್ ಗಳು, ಸುಲಭದಲ್ಲೇ ಸಮೀಪದ ದೇಶಗಳಿಗೆ ಹರಡಿದ್ದವು. 

ಆದರೆ ಈ ಬಾರಿ ಈ ವ್ಯಾಧಿಗೆ ಮೊದಲು ಬಲಿಯಾದ ಬಾಲಕನಿಗೆ ಈ ವೈರಸ್ ಗಳ ಸೋಂಕು ಎಲ್ಲಿಂದ ಬಂದಿತ್ತ್ತು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ. ಇದಕ್ಕೂ ಮುನ್ನ ಸಂಭವಿಸಿದ್ದ ಎಬೊಲ ಸಾಂಕ್ರಾಮಿಕತೆಯಂತೆಯೇ, ಸೋಂಕು ಪೀಡಿತ ಕಾಡುಪ್ರಾಣಿಗಳಿಂದ ಇದು ಬಂದಿರಬೇಕು ಎಂದು ವೈದ್ಯಕೀಯ ವಿಜ್ಞಾನಿಗಳು ಊಹಿಸಿದ್ದಾರೆ. ಆಫ್ರಿಕನ್ ಜನರು ಮಾಂಸಕ್ಕಾಗಿ ಕೊಲ್ಲುವ  ಮಂಗ ಹಾಗೂ ಹಣ್ಣುಗಳನ್ನು ತಿನ್ನುವ ಬಾವಲಿಗಳನ್ನು ಸಂಹರಿಸುವಾಗ, ಇವುಗಳ ರಕ್ತದಲ್ಲಿರಬಹುದಾದ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿರಬೇಕು. ಈ ಮಾಂಸವನ್ನು ಬೇಯಿಸಿದಾಗ ವೈರಸ್ ಗಳು ನಾಶವಾಗುವುದಾದರೂ, ಇವುಗಳನ್ನು ಕಡಿಯುವ ವ್ಯಕ್ತಿಗಳಿಗೆ ಸೋಂಕು ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬಾವಲಿಗಳು ತಿಂದು ಹಾಕಿದ ಹಾಗೂ ಇವುಗಳ ಮಲಮೂತ್ರಗಳಿಂದ ಕಲುಷಿತ  ಹಣ್ಣುಗಳನ್ನು ಸೇವಿಸಿದ ವ್ಯಕ್ತಿಗಳಿಗೂ ಈ ಸೋಂಕು ಸುಲಭದಲ್ಲೇ ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಈ ಬಾರಿಯ ಎಬೊಲ ಹಾವಳಿಯ ಮೂಲವನ್ನು ಪತ್ತೆಹಚ್ಚಿದ್ದರೂ, ಈಗಾಗಲೇ ಸಹಸ್ರಾರು ಜನರಿಗೆ ಮತ್ತು ಹಲವಾರು ದೇಶಗಳಿಗೆ ಹರಡಿರುವ ಈ ವ್ಯಾಧಿಯನ್ನು ನಿಯಂತ್ರಿಸಲು, ಹಲವಾರು ತಿಂಗಳುಗಳೇ ಬೇಕಾಗುವುದೆಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ. 

ಲಸಿಕೆಗಳು ಸಿದ್ಧ 

ರಷ್ಯಾ ದೇಶದ ವೈದ್ಯಕೀಯ ವಿಜ್ಞಾನಿಗಳು ಎಬೊಲ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಸಂಶೋಧಿಸಿದ್ದು, ಸದ್ಯೋಭವಿಷ್ಯದಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು. ಸೈಂಟ್  ಪೀಟರ್ಸ್ ಬರ್ಗ್ ನಲ್ಲಿರುವ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಇನ್ಫ್ಲೂಯೆಂಜಾ ಸಂಸ್ಥೆಯ ಯುವ ವಿಜ್ಞಾನಿಗಳು ಆವಿಷ್ಕರಿಸಿರುವ ಈ ಲಸಿಕೆಯನ್ನು " ವಂಶವಾಹಿನಿಗಳ ಸ್ಥಿರತೆ " ಗಾಗಿ ಪರೀಕ್ಷಿಸಲಾಗುತ್ತಿದ್ದು, ತದನಂತರ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಇವುಗಳ ಪರಿಣಾಮಗಳು ಧನಾತ್ಮಕವಾಗಿದ್ದಲ್ಲಿ,ಮುಂದೆ ಆಫ್ರಿಕಾ ದೇಶದಲ್ಲಿ ಪ್ರಾಯೋಗಿಕವಾಗಿ ಮನುಷ್ಯರ ಮೇಲೆ ಪ್ರಯೋಗಿಸುವ ಪರೀಕ್ಷೆಗಳಿಗೆ ಒಳಪಡಿಸುವ ಪ್ರಕ್ರಿಯೆಗಳು ೨೦೧೪ ರ ಫೆಬ್ರವರಿ ತಿಂಗಳಿನಲ್ಲಿ ಪರಿಪೂರ್ಣಗೊಳ್ಳಲಿದೆ.

ಇದಲ್ಲದೇ ಕೆಲದಿನಗಳ ಹಿಂದೆ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲೆರ್ಜಿ ಎಂಡ್ ಇನ್ಫೆಕ್ಷಿಯಸ್ ಡಿಸೀಸಸ್ ಸಂಸ್ಥೆಯು ಸಿದ್ಧಪಡಿಸಿದ್ದ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ಗಳ ಪರಿಣಾಮವಾಗಿ, ಇದರ ಸುರಕ್ಷತೆಯು ಸಾಬೀತಾಗಿದೆ. ತತ್ಪರಿಣಾಮವಾಗಿ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಯೋಗ್ಯವೆಂದು ತಿಳಿದುಬಂದಿದೆ. 

ತನ್ಮಧ್ಯೆ ಚೀನಾ ದೇಶದ ಸಂಶೋಧಕರು ಎಬೊಲ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಸಂಶೋಧಿಸಿದ್ದು, ಇದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಸಿದ್ಧತೆಗಳು ನಡೆದಿವೆ. ಈ ರೀತಿಯಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ವೈದ್ಯಕೀಯ ಸಂಶೋಧಕರು ಪತ್ತೆ ಹಚ್ಚಿರುವ ಲಸಿಕೆಗಳು ಪ್ರಾಥಮಿಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಮುಂದಿನ ಹಂತದ ಪರೀಕ್ಷೆಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದಲ್ಲಿ, ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ತತ್ಪರಿಣಾಮವಾಗಿ ಭಯಾನಕ ಹಾಗೂ ಅತ್ಯಂತ ಮಾರಕವೆನಿಸಿರುವ ಎಬೊಲ ವೈರಸ್ ಗಳ ಹರಡುವಿಕೆಯನ್ನು ನಿಶ್ಚಿತವಾಗಿ ತಡೆಗಟ್ಟಬಹುದಾಗಿದೆ. 


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






No comments:

Post a Comment