Friday, December 19, 2014

ALLEGATION OF CORRUPTION


ಸಚಿವರ ಭ್ರಷ್ಟಾಚಾರ : ಶಾಸಕರಿಂದ ಆರೋಪಗಳ ಮಹಾಪೂರ !

ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲಗಳ ಅಧಿವೇಶನಕ್ಕೆ ಮುನ್ನ ಜರಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ತಮ್ಮದೇ ಪಕ್ಷದ ಸಚಿವರ ವಿರುದ್ಧ ಭ್ರಷ್ಟಾಚಾರ, ಸರ್ಕಾರಿ ನೌಕರರ ವರ್ಗಾವಣೆಯ ಧಂಧೆ ಮತ್ತು ತಮ್ಮನ್ನು ನಿರ್ಲಕ್ಷಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರು ಗಂಭೀರ ಆರೋಪಗಳನ್ನು ಮಾಡಿದ್ದ ವಿಚಾರವು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಈ ಸಂದರ್ಭದಲ್ಲಿ ನಿರ್ದಿಷ್ಟ ನಿದರ್ಶನಗಳೊಂದಿಗೆ ನೇರವಾಗಿ ಆರೋಪ ಮಾಡಿದ್ದ ಶಾಸಕರು, ಈ ಅಕ್ರಮಗಳಿಗೆ ಕಡಿವಾಣ ತೊಡಿಸದೇ ಇದ್ದಲ್ಲಿ, ನೇರವಾಗಿ ಎ ಐ ಸಿ ಸಿ ಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಎಚ್ಚರಿಕೆಯನ್ನು ನೀಡಿದ್ದರು. 

ಪಕ್ಷದ ಶಾಸಕರ ಈ ಸಭೆಯಲ್ಲಿ ಸಣ್ಣ ನೀರಾವರಿ ಸಚಿವರು ಮೂರು ಲಕ್ಷ ಲಂಚ ಪಡೆದು ಕಾರ್ಯಕಾರಿ ಎಂಜಿನಿಯರ್ ರನ್ನು ವರ್ಗಾವಣೆ ಮಾಡಿದ್ದುದು, ಕೆಲ ಸಚಿವರು ಶೇ.೫ ರಿಂದ ೮ ರಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ನೀಡದೇ ಇದ್ದಲ್ಲಿ ಅನುದಾನದ ಹಣವನ್ನು ಬಿಡುಗಡೆ ಮಾಡದಿರುವುದು, ಪ್ರಬಲ ಸಚಿವರು ಇಲಾಖಾ ಅನುದಾನವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಶಾಸಕರಿಗೆ ಅನ್ಯಾಯ ಮಾಡುವುದು ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ೨೫ ಕೋಟಿ ರೂ.ಗಳಲ್ಲಿ ೧೩೫ ಕೋಟಿರೂ.ಗಳನ್ನುಸಚಿವರೊಬ್ಬರ ಜಿಲ್ಲೆಯೊಂದಕ್ಕೆ ಬಿಡುಗಡೆ ಮಾಡಿರುವುದೇ ಮುಂತಾದ ನಿದರ್ಶನಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಸಭೆಯಲ್ಲಿ ಪ್ರಸ್ತಾಪ ಮಾಡದೇ ಇದ್ದ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮುಂತಾದ ಪ್ರಕರಣಗಳು ಸಾಕಷ್ಟು ಇದ್ದಿರಲೇಬೇಕು. ಆದರೆ ಇವೆಲ್ಲವನ್ನೂ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಲು ಅನೇಕ ಶಾಸಕರು ಹಿಂಜರಿದಿರಬೇಕು. 

ಭ್ರಷ್ಟಾಚಾರ ಗುಟ್ಟೇನಲ್ಲ 

ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ರಾಜ್ಯದ ಪ್ರಜೆಗಳಿಗೆ ತಿಳಿಯದ ವಿಚಾರವೇನಲ್ಲ. ಯಾವುದೇ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದರೂ, ಶೈಕ್ಷಣಿಕ ಅರ್ಹತೆಗಳಿಲ್ಲದ, ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಹಣಬಲ ಮತ್ತು ತೋಳ್ಬಲಗಳಿರುವ ಶಾಸಕರು ಸಚಿವ ಸ್ಥಾನವನ್ನು ಗಳಿಸಲು ಯಶಸ್ವಿಯಾಗುವುದು ನಮ್ಮ ದೇಶದ ರಾಜಕೀಯ ಕ್ಷೇತ್ರದ ಅಧಃಪತನಕ್ಕೆ ಸಾಕ್ಷಿಯಾಗಿದೆ. ವಿಶೇಷವೆಂದರೆ ಅತ್ಯಾಚಾರ ಮತ್ತು ಕೊಲೆಗಳಂತಹ ಹೇಯ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದವರೂ, ಇಂದು ಶಾಸಕ, ಸಂಸದ ಹಾಗೂ ಸಚಿವರಾಗಿರುವುದು ಮತ್ತು ಈ ಬಗ್ಗೆ ಸ್ಪಷ್ಟನೆಯನ್ನು ನೀಡುವಾಗ ತಾವು ಕೇವಲ ಆರೋಪಿಯೇ ಹೊರತು ಅಪರಾದಿ ಅಥವಾ ಪಾತಕಿಯಲ್ಲ ಎನ್ನುವುದು ವಾಡಿಕೆಯಾಗಿದೆ. 

ಭ್ರಷ್ಟಾಚಾರದ ಪೆಡಂಭೂತ 

ಭಾರತದ ಮಾಜಿ ಪ್ರಧಾನಿಯೊಬ್ಬರು ಅನೇಕ ವರ್ಷಗಳ ಹಿಂದೆ ಭ್ರಷ್ಟಾಚಾರವನ್ನು " ಒಂದು ಅಂತಾರಾಷ್ಟ್ರೀಯ ಘಟನೆ" ಎಂದಿದ್ದುದನ್ನು ಅನೇಕ ಭಾರತೀಯರು ಮರೆತಿರುವ ಸಾಧ್ಯತೆಗಳಿಲ್ಲ.ಅಂದಿನ ದಿನಗಳಲ್ಲಿ ದೇಶದಲ್ಲಿ ಕಂಡುಬರುತ್ತಿದ್ದ ಕೆಲ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾಜಿ ಪ್ರಧಾನಿಗಳು ಹೇಳಿದ್ದ ಈ ಮಾತುಗಳು, ಭ್ರಷ್ಟಾಚಾರವನ್ನು ಸಮರ್ಥಿಸಲು ನೀಡಿದ್ದ ಹೇಳಿಕೆಯಂತಿದ್ದವು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಕೆಲವೇ ದಶಕಗಳ ಹಿಂದಿನ ತನಕ ತೆರೆಯ ಮರೆಯಲ್ಲಿ ಹಾಗೂ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವು, ಇಂದು ಬಹಿರಂಗವಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿವಾಸಗಳ ಮೇಲೆ ಆದಾಯ ತೆರಿಗೆ, ಲೋಕಾಯುಕ್ತ ಮತ್ತಿತರ ಸರ್ಕಾರಿ ಇಲಾಖೆಗಳು ನಡೆಸಿದ್ದ ದಾಳಿಗಳ ಸಂದರ್ಭದಲ್ಲಿ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸೊತ್ತುಗಳೇ ಇದಕ್ಕೆ ಮೂಕ ಸಾಕ್ಷಿಯಾಗಿವೆ. ಅಂತೆಯೇ ಭಿಕ್ಷಾಧಿಪತಿಗಳಾಗಿದ್ದ ಹಲವಾರು ರಾಜಕೀಯ ನೇತಾರರು ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿರುವುದು ಇದನ್ನು ಸಾಬೀತುಪಡಿಸುತ್ತದೆ. ಅನೇಕ ನೇತಾರರು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಆಸ್ತಿಪಾಸ್ತಿಗಳ ಮೌಲ್ಯವು ವರ್ಷ ಕಳೆಯುವಷ್ಟರಲ್ಲೇ ಹಲವಾರು ಪಟ್ಟು ಹೆಚ್ಚುತ್ತಿರುವುದು, ಅಕ್ರಮಗಳನ್ನು ಎಸಗುವುದು ಮತ್ತು ಭ್ರಷ್ಟಾಚಾರದ ಪರಿಣಾಮವಾಗಿಯೇ ಹೊರತು, ನ್ಯಾಯ ಸಮ್ಮತ ಮಾರ್ಗದಿಂದಲ್ಲ ಎನ್ನುವುದು ನಮ್ಮ ದೇಶದ ಮತದಾರರಿಗೆ ಚೆನ್ನಾಗಿ ತಿಳಿದಿದೆ. ಆದರೆ ಚುನಾಯಿತ ಜನ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕನ್ನು ಭಾರತದ ಮತದಾರರಿಗೆ ನೀಡದ ಕಾರಣದಿಂದಾಗಿ, ಪ್ರಜೆಗಳು ಅಸಾಯಕರಾಗಿ ಇವರ ದುರ್ವರ್ತನೆಗಳನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಮಾತ್ರ ಸುಳ್ಳೇನಲ್ಲ. 

ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು " ಜಿ ಪ್ರವರ್ಗದ ನಿವೇಶನ " ಗಳ ಹಗರಣದ ಬಗ್ಗೆ  ಹೇಳಿದ್ದಂತೆ, ರಾಜ್ಯದ ಶಾಸಕರು ಒಂದಕ್ಕೂ ಅಧಿಕ ನಿವೇಶನಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವುದು, ಇವುಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಿ ದೊರೆಯುವ ಹಣವನ್ನು ಚುನಾವಣೆಯ ಸಂದರ್ಭದಲ್ಲಿ ವ್ಯಯಿಸಲೇ ಹೊರತು ಅನ್ಯ ಉದ್ದೇಶಕ್ಕಾಗಿ ಅಲ್ಲ ಎನ್ನುವುದು ಗಮನಾರ್ಹ. ಚುನಾವಣೆಗಳ ಸಂದರ್ಭದಲ್ಲಿ ಅಧಿಕತಮ ಅಭ್ಯರ್ಥಿಗಳು ವ್ಯಯಿಸುವ ಮೊತ್ತ, ಅಪರೂಪದಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಳ್ಳುವ ಕೋಟ್ಯಂತರ ರೂಪಾಯಿಗಳು ಮತ್ತು ಮತದಾರರಿಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಂಚುವ ಹಣ ಮತ್ತು ಹೆಂಡಗಳ ಪ್ರಮಾಣವನ್ನು ಗಮನಿಸಿದಲ್ಲಿ, ಚುನಾವಣಾ ಆಯೋಗವು ನಿಗದಿಸಿರುವ ಮೊತ್ತವನ್ನು ಮೀರುವುದರಲ್ಲಿ ಸಂದೇಹವಿಲ್ಲ. 

ಸರ್ಕಾರದಿಂದ ಲಭಿಸುವ ಜಿ ಪ್ರವರ್ಗದ ನಿವೇಶನ ಮತ್ತಿತರ  ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ಅನೇಕ ಶಾಸಕರು, ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿಯೇ ಫಲವತ್ತಾದ ಖಾತೆಯೊಂದರ ಸಚಿವರಾಗಲು ಹಾತೊರೆಯುತ್ತಾರೆ. ದುರದೃಷ್ಟವಶಾತ್ ಈ ಅವಕಾಶದಿಂದ ವಂಚಿತರಾದಲ್ಲಿ, ಯಾವುದಾದರೂ ನಿಗಮ - ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪಡೆಯಲು ಹರಸಾಹಸವನ್ನೇ ನಡೆಸುತ್ತಾರೆ. ತನ್ಮೂಲಕ ಚುನಾವಣೆಯ ಸಂದರ್ಭದಲ್ಲಿ ತಾವು ವ್ಯಯಿಸಿದ್ದ ಕೋಟ್ಯಂತರ ರೂಪಾಯಿಗಳಿಗೆ ಪ್ರತಿಯಾಗಿ, ಇನ್ನಷ್ಟು ಕೋಟಿ ರೂ.ಗಳನ್ನು ಸಂಪಾದಿಸುತ್ತಾರೆ. 

ಪ್ರಾಯಶಃ " ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು " ಎನ್ನುವ ಮಾತುಗಳು ಇದೀಗ ಬದಲಾದ ಸ್ಥಿತಿಯಲ್ಲಿ ತಮ್ಮ ಅರ್ಥವನ್ನೇ ಕಳೆದುಕೊಂಡಿವೆ. ಏಕೆಂದರೆ ರಾಜಕೀಯ ಪ್ರಭಾವ, ಸಾಕಷ್ಟು ಹಣಬಲ ಮತ್ತು ತೋಳ್ಬಲಗಳಿಲ್ಲದೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಇದೀಗ ಅಕ್ಷರಶಃ ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಪ್ರಾಮಾಣಿಕ ಪ್ರಜೆಯೊಬ್ಬ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆಲ್ಲುವುದು ಅಸಾಧ್ಯವೆನಿಸುತ್ತಿದೆ. ಆಮ್ ಆದ್ಮಿ ಪಕ್ಷವು ಇದಕ್ಕೆ ಅಪವಾದವೆನಿಸಿದರೂ, ಸ್ಪಷ್ಟ ಬಹುಮತದ ಅಭಾವ ಹಾಗೂ ಆಡಳಿತದ ಅನುಭವವಿಲ್ಲದ ಶಾಸಕರು ಮತ್ತು ನೇತಾರರಿಂದಾಗಿ ಸಿಕ್ಕ ಅವಕಾಶವನ್ನು ಕಳೆದುಕೊಂಡು ನೇಪಥ್ಯಕ್ಕೆ ಸರಿದಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 


No comments:

Post a Comment