Tuesday, December 9, 2014

PICK A PLASTIC BOTTLE MISSION !



 ಹುಡುಕದಿದ್ದರೂ ಕಾಲಿಗೆ ತೊಡರುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳು !

ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ರಸ್ತೆಗಳಲ್ಲೂ ಕಾಣಸಿಗುವ ವೈವಿಧ್ಯಮಯ ತ್ಯಾಜ್ಯಗಳಲ್ಲಿ ಬಳಸಿ ಎಸೆದ ಪ್ಲಾಸ್ಟಿಕ್ ಬಾಟಲಿಗಳ ಪ್ರಮಾಣವು ಸಾಕಷ್ಟಿದೆ. ಸಾರ್ವಜನಿಕ ಸಭೆ- ಸಮಾರಂಭಗಳ ಸಂದರ್ಭದಲ್ಲಿ ಮತ್ತು ಬೇಸಗೆಯ ದಿನಗಳಲ್ಲಿ ಇಂತಹ ತ್ಯಾಜ್ಯ ಬಾಟಲಿಗಳ ಹಾವಳಿಯೂ ಅತಿಯಾಗಿರುತ್ತದೆ. ವಿಶೇಷವೆಂದರೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡುವ ಶುದ್ಧೀಕರಿಸಿದ ನೀರು ಅಥವಾ ಲಘುಪಾನೀಯಗಳನ್ನು ಸೇವಿಸುವ ಸುಶಿಕ್ಷಿತ ಜನರು, ಖಾಲಿ ಬಾಟಲಿಗಳನ್ನು ಕಂಡಲ್ಲಿ ಎಸೆಯಲು ಹಿಂಜರಿಯುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೈಲು ಅಥವಾ ಅನ್ಯ ವಾಹನಗಳಲ್ಲಿ ಪಯಣಿಸುವ ಪ್ರಯಾಣಿಕರು ತ್ಯಾಜ್ಯ ಬಾಟಲಿಗಳನ್ನು ರಸ್ತೆಗಳ - ರೈಲುಹಳಿಗಳ ಬದಿಗಳಲ್ಲಿ ಎಸೆಯುವುದನ್ನೂ ನಿಲ್ಲಿಸುವುದೇ ಇಲ್ಲ. ಈ ಕೆಟ್ಟ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸಬೇಕಾದ ಅವಶ್ಯಕತೆ ಇದ್ದರೂ, ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?, ಎನ್ನುವ ಇಂತಹ ಪ್ರಶ್ನೆಗೆ ಉತ್ತರ ದೊರಕುವ ಸಾಧ್ಯತೆಗಳೇ ಇಲ್ಲ. ಆದರೆ ಇದೀಗ ದೇಶಾದ್ಯಂತ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನದ ಪರಿಣಾಮವಾಗಿಯಾದರೂ, ತ್ಯಾಜ್ಯ ಬಾಟಲಿಗಳು ಮಾತ್ರವಲ್ಲ, ಯಾವುದೇ ತ್ಯಾಜ್ಯಗಳನ್ನು ಕಂಡಲ್ಲಿ ಎಸೆಯುವ ಹವ್ಯಾಸವನ್ನು ಭಾರತೀಯರು ತ್ಯಜಿಸಲೇಬೇಕಾಗಿದೆ. 

ದುಬಾರಿ ಬಾಟಲಿಗಳು!

ಕಳೆದ ಹಲವಾರು ವರ್ಷಗಳಿಂದ ಜನಪ್ರಿಯವೆನಿಸಿರುವ ಶುದ್ಧೀಕರಿಸಿದ ನೀರಿನ ಮತ್ತು ಲಘುಪಾನೀಯಗಳ ಬಾಟಲಿಗಳನ್ನು ಕಚ್ಚಾ ಪೆಟ್ರೋಲಿಯಂ ತೈಲದಿಂದ ತಯಾರಿಸಲಾಗುತ್ತದೆ. ಈ ತೈಲಕ್ಕಾಗಿ ನಾವು ಸಾಕಷ್ಟು ವಿದೇಶಿ ವಿನಿಯಮವನ್ನು ತೆರಲೇಬೇಕಾಗುತ್ತದೆ. ಬಹುತೇಕ ಜನರು ತಮ್ಮ ಸ್ವಾಸ್ಥ್ಯ ರಕ್ಷಣೆಯ ಸಲುವಾಗಿ ಕುಡಿಯುವ ಈ ಬಾಟಲೀಕರಿಸಿದ ನೀರಿನಿಂದಾಗಿ, ಪ್ರತಿಯೊಂದು ರಸ್ತೆ ಹಾಗೂ ಚರಂಡಿಗಳಲ್ಲಿ ತ್ಯಾಜ್ಯ ಬಾಟಲಿಗಳು ಎಸೆಯಲ್ಪತ್ತಿರುತ್ತವೆ. ಹಾಗೂ ಪರೋಕ್ಷವಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಸುಶಿಕ್ಷಿತ ಜನರೇ ಹೆಚ್ಚಾಗಿ ಖರೀದಿಸಿ ಕುಡಿಯುವ ಈ ಬಾಟಲೀಕರಿಸಿದ ನೀರಿನ ಅಥವಾ ಲಘುಪಾನೀಯಗಳ ತ್ಯಾಜ್ಯ ಬಾಟಲಿಗಳು, ಇವುಗಳನ್ನು ಬಳಸದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ ಎನ್ನುವ ಗಂಭೀರ ವಿಚಾರವನ್ನು ಈ ಜನರು ಅನುಕೂಲಕರವಾಗಿ ಮರೆತುಬಿಡುತ್ತಾರೆ. ಅಂತೆಯೇ ಇಂತಹ ತ್ಯಾಜ್ಯಗಳ  ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯ ವೆಚ್ಚದ ಬಗ್ಗೆಯೂ ಯಾರೊಬ್ಬರೂ ಚಿಂತಿಸುವುದಿಲ್ಲ. ವಿಶೇಷವೆಂದರೆ ಸ್ವಚ್ಚ ಭಾರತ ಅಭಿಯಾನದ ಯಶಸ್ಸಿಗಾಗಿ ಜನಸಾಮಾನ್ಯರ ಮನಸ್ಪೂರ್ವಕ ಸಹಕಾರವನ್ನು ಅಪೇಕ್ಷಿಸುವ ರಾಜ್ಯ - ಕೇಂದ್ರ ಸರ್ಕಾರಗಳ ಕಛೇರಿಗಳು ಮತ್ತು ಆಯೋಜಿಸುವ ಪ್ರತಿಯೊಂದು ಸಭೆ - ಸಮಾರಂಭಗಳಲ್ಲಿ ಇಂತಹ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ರಾರಾಜಿಸುತ್ತವೆ!. 

ಚರಂಡಿಗಳಲ್ಲಿ ಬಾಟಲಿಗಳ ರಾಶಿ 

ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಪುತ್ತೂರಿನ ಪ್ರಧಾನ ರಸ್ತೆಯ ಬದಿಯಲ್ಲಿದ್ದ ಬೃಹತ್ ದೇವದಾರು ಮರವೊಂದನ್ನು, ರಸ್ತೆಯ ವಿಸ್ತರಣೆಗಾಗಿ ಕಡಿಯಲಾಗಿತ್ತು. ಈ ಸಂದರ್ಭದಲ್ಲಿ ಇದೇ ರಸ್ತೆಯ ಬದಿಯಲ್ಲಿದ್ದ ಬೃಹತ್ ಚರಂಡಿಯಲ್ಲಿ ಕಡಿದ ಮರದ ಕೊಂಬೆಗಳು ಬಿದ್ದಿದ್ದು, ಇದರಿಂದಾಗಿ ಚರಂಡಿಯಲ್ಲಿ ಹರಿಯುತ್ತಿದ್ದ ಕೊಳಚೆ ನೀರಿನ ಹರಿವಿಗೆ ಅಡಚಣೆ ಉಂಟಾಗಿತ್ತು. ತತ್ಪರಿಣಾಮವಾಗಿ ಚರಂಡಿಯ ಈ ಭಾಗದಲ್ಲಿ ಅಗಾಧ ಪ್ರಮಾಣದ ಪ್ಲಾಸ್ಯಿಕ್ ಕೈಚೀಲಗಳು, ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ವೈವಿಧ್ಯಮಯ ತ್ಯಾಜ್ಯಗಳು ಸಂಗ್ರಹವಾಗಿದ್ದವು. ಇವುಗಳಲ್ಲಿ ನೂರಾರು ತ್ಯಾಜ್ಯ  ಪ್ಲಾಸ್ಟಿಕ್ ಬಾಟಲಿಗಳ ಪಾಲೇ ಸರ್ವಾಧಿಕವಾಗಿತ್ತು. 

ಈ ವಿಲಕ್ಷಣ ಸಮಸ್ಯೆಗೆ ರಸ್ತೆಬದಿಗಳಲ್ಲಿ ಜನರು ಎಸೆದ ತ್ಯಾಜ್ಯ ಬಾಟಲಿಗಳೇ ಕಾರಣವೆನಿಸಿದ್ದವು. ಅಂದು ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡಿರದೇ ಇದ್ದರೂ, ರಸ್ತೆಬದಿಯಲ್ಲಿ ಬಿದ್ದಿರುವ ತ್ಯಾಜ್ಯ ಬಾಟಲಿಗಳನ್ನು ನಾವು ಸಂಗ್ರಹಿಸಿದಲ್ಲಿ ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದು ಎನ್ನುವ ವಿಶ್ವಾಸ ಮೂಡಿತ್ತು. ಹಾಗೂ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾದಲ್ಲಿ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಬಹುದು ಎನ್ನುವ ಭಾವನೆಯೂ ಮನದಲ್ಲಿ ಮೂಡಿತ್ತು.

ಶುಭಸ್ಯ ಶೀಘ್ರಂ ಎನ್ನುವಂತೆ ಮರುದಿನದಿಂದಲೇ ಬೆಳಗಿನ ಜಾವ ನಡಿಗೆಯಲ್ಲಿ ತೊಡಗುವಾಗ ದಾರಿಯುದ್ದಕ್ಕೂ ಕಾಲಿಗೆ ತೊಡರುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕೈಚೀಲವೊಂದರಲ್ಲಿ ಸಂಗ್ರಹಿಸುವ ಕಾಯಕವನ್ನು ಆರಂಭಿಸಿದ್ದೆನು. ನಗರದ ಪ್ರಧಾನ ರಸ್ತೆಯ ಎರಡು ಕಿಲೋಮೀಟರ್ ಭಾಗದಲ್ಲಿ ಪ್ರತಿನಿತ್ಯ ಸರಾಸರಿ ೧೫ ರಿಂದ ೩೦ ಬಾಟಲಿಗಳು ಸಂಗ್ರಹವಾಗುತ್ತಿದ್ದು, ತಿಂಗಳೊಪ್ಪತ್ತಿನಲ್ಲಿ ಸುಮಾರು ೬೦೦ ಕ್ಕೂ ಮಿಕ್ಕಿ ಬಾಟಲಿಗಳು ಸಂಗ್ರಹವಾಗಿದ್ದವು.ಅರ್ಥಾತ್, ಕಳೆದ ಏಳು ತಿಂಗಳುಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಬಾಟಲಿಗಳನ್ನು ಸಂಗ್ರಹಿಸಲು ಯಶಸ್ವಿಯಾಗಿದ್ದೆನು. 

 ಈ ಬಾಟಲಿಗಳನ್ನು ಮನೆಮನೆಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನೀಡಿ, ಇವುಗಳನ್ನು ಗುಜರಿ ಅಂಗಡಿಗಳಲ್ಲಿ ಮಾರಿ ದೊರೆಯುವ ಹಣವನ್ನು ಸ್ವಂತಕ್ಕಾಗಿ ಬಳಸಲು ಹೇಳಿದ್ದೆನು. ಮೊತ್ತಮೊದಲ ಬಾರಿ ನೀಡಿದ್ದ ತ್ಯಾಜ್ಯ ಬಾಟಲಿಗಳ ಮಾರಾಟದಿಂದ ಕಾರ್ಯಕರ್ತರಿಗೆ ೧೦೦ ರೂ. ದೊರೆತಿದ್ದುದನ್ನು ಅರಿತು ಸಂತೋಷವೂ ಆಗಿತ್ತು. ಇದಕ್ಕೂ ಮಿಗಿಲಾಗಿ ಸಂಗ್ರಹಿತ ತ್ಯಾಜ್ಯ ಬಾಟಲಿಗಳು ಪುನರ್ ಆವರ್ತನಗೊಂಡು, ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಮನಸ್ಸಿಗೆ ಒಂದಿಷ್ಟು ನೆಮ್ಮದಿಯನ್ನೂ ನೀಡಿತ್ತು. 

ಕಳೆದ ಏಳು ತಿಂಗಳುಗಳ ಹಿಂದೆ ಆರಂಭಿಸಿದ್ದ ದೈನಂದಿನ ನಡಿಗೆಯೊಂದಿಗೆ ತ್ಯಾಜ್ಯ ಬಾಟಲಿಗಳನ್ನು ಸಂಗ್ರಹಿಸುವ ಕಾಯಕ ಇಂದಿಗೂ ಮುಂದುವರೆದಿದೆ. ಇದರಿಂದಾಗಿ ಒಂದಿಷ್ಟು ಹೆಚ್ಚುವರಿ ವ್ಯಾಯಾಮವೂ ಅಯಾಚಿತವಾಗಿ ಲಭಿಸುತ್ತಿದೆ. ಇದರೊಂದಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳು ಮತ್ತು ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಂಭಾವ್ಯತೆಗಳ ಬಗ್ಗೆ ಬಂದುಮಿತ್ರರಿಗೆ ತಿಳಿಸಿ, ಇವುಗಳನ್ನು ಬಳಸದಂತೆ ಅವರ ಮನವೊಲಿಸುವುದು ನಿಸ್ಸಂದೇಹವಾಗಿಯೂ ಮನಸ್ಸಿಗೆ ಮುದನೀಡುತ್ತದೆ. 

ಕೊನೆಯ ಮಾತು 

ಈ ಲೇಖನವನ್ನು ಓದಿದ ಬಳಿಕ ಯಾರದೇ ಸಹಾಯವಿಲ್ಲದೇ ನೀವು ಏಕಾಂಗಿಯಾಗಿ ಈ ಕಾರ್ಯವನ್ನು ಮಾಡುವ ಮನಸ್ಸಿದ್ದಲ್ಲಿ ಪ್ರಯತ್ನಿಸಿ. ತನ್ಮೂಲಕ ಸ್ವಚ್ಛ  ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಿ. ಇದು ಅಸಾಧ್ಯ ಎನಿಸಿದಲ್ಲಿ ಕನಿಷ್ಠಪಕ್ಷ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನಾದರೂ ನಿಲ್ಲಿಸಿ. ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆಮಾಡುವುದು, ತ್ಯಾಜ್ಯ ಸಂಗ್ರಹ - ವಿಲೇವಾರಿಗಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಚಿತ್ರ- ಒಂದು ವಾರದಲ್ಲಿ ಪುತ್ತೂರಿನ ಪ್ರಧಾನ ರಸ್ತೆಯ ೨ ಕಿ.ಮೀ. ಭಾಗದಲ್ಲಿ ಸಂಗ್ರಹಿಸಿರುವ ತ್ಯಾಜ್ಯ ಬಾಟಲಿಗಳು. 

 

No comments:

Post a Comment