Thursday, November 27, 2014

WASTE TO ENERGY - SWEDEN MODEL





ತ್ಯಾಜ್ಯ ವಿಲೇವಾರಿ : ಸ್ವೀಡನ್ - ಜಗತ್ತಿಗೇ ಮಾದರಿ 

ಭವ್ಯ ಭಾರತದ ಉದ್ದಗಲಕ್ಕೂ ಕಾಣಸಿಗುವ ಅಗಾಧ ಪ್ರಮಾಣದ ಮತ್ತು ವೈವಿಧ್ಯಮಯ ತ್ಯಾಜ್ಯಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ದೇಶದ ಪ್ರಧಾನಿ ನರೇಂದ್ರ ಮೋದಿಯವರು " ಸ್ವಚ್ಛ ಭಾರತ ಅಭಿಯಾನ " ವನ್ನು ಗಾಂಧೀಜಿಯವರ ಜನ್ಮದಿನದಂದು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ  ರಾಜಕೀಯ ನೇತಾರರು, ಗಣ್ಯ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ, ಸ್ವಚ್ಚತಾ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ಪ್ರಾರಂಭಿಕ ಹಂತದಲ್ಲಿ ಕೇವಲ ವೈಯುಕ್ತಿಕ ಪ್ರಚಾರದ ಸಲುವಾಗಿ ಇದರಲ್ಲಿ ಭಾಗವಹಿಸಿದ್ದ ಹಲವಾರು ನೇತಾರರು ಮತ್ತು ಗಣ್ಯ ವ್ಯಕ್ತಿಗಳು, ಈಗಾಗಲೇ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ ಅನೇಕ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಮಾತ್ರ, ಸ್ವಯಂಸ್ಪೂರ್ತಿಯಿಂದ ಈ ಅಭಿಯಾನವನ್ನು ಮುಂದುವರೆಸುತ್ತಿದ್ದಾರೆ. 

ಮಹಾತ್ಮಾ ಗಾಂಧಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಈ ಅಭಿಯಾನಕ್ಕೆ ಚಾಲನೆಯನ್ನು ನೀಡುವ ಸಂದರ್ಭದಲ್ಲಿ ಮೋದಿಯವರು ಅಪೇಕ್ಷಿಸಿದಂತೆ, ವಾರದಲ್ಲಿ ಎರಡು ಘಂಟೆಗಳಂತೆ ವರ್ಷದಲ್ಲಿ ೧೦೦ ಘಂಟೆಗಳನ್ನು ನಾವೆಲ್ಲರೂ ಸ್ವಚ್ಚತೆಗಾಗಿ ಮೀಸಲಾಗಿರಿಸಿದಲ್ಲಿ, ಮುಂದಿನ ಐದು ವರ್ಷಗಳಲ್ಲಿ ನಮ್ಮ ದೇಶವು ಸ್ವಚ್ಛ, ಸ್ವಸ್ಥ ಮತ್ತು ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸಮರ್ಪಕವಾದ ಶೌಚಾಲಯಗಳ ನಿರ್ಮಾಣ ಮತ್ತು ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆಮಾಡುವ ಮೂಲಕ, ಈ ಸಮಸ್ಯೆಯನ್ನು ನಿಶ್ಚಿತವಾಗಿಯೂ ಪರಿಹರಿಸಬಹುದು ಎನ್ನುವ ಪ್ರಧಾನಿಯವರ ಕಿವಿಮಾತುಗಳನ್ನು ಅನೇಕರು ಈಗಾಗಲೇ ಮರೆತುಬಿಟ್ಟಿದ್ದಾರೆ. ಏಕೆಂದರೆ ಅನೇಕ ಜನರ ಅನಿಸಿಕೆಯಂತೆ ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವ ಭಾರತೀಯರ ಕೆಟ್ಟ ಹವ್ಯಾಸವನ್ನು ತಿದ್ದುವುದು ಅಸಾಧ್ಯ. ಅಂತೆಯೇ ತಾವು ಇದರಲ್ಲಿ ಭಾಗಿಯಾದರೂ, ಇತರರು ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸದಿರುವುದರಿಂದ ಸಮಸ್ಯೆ ಬಗೆಹರಿಯದು ಎನ್ನುವುದು ನಿಶ್ಚಿತವಾಗಿಯೂ ನಿಜವಲ್ಲ. ಇದೀಗ ಅಭಿಯಾನ ಆರಂಭಗೊಂಡು ಎರಡು ತಿಂಗಳುಗಳು ಕಳೆದಿದ್ದು, ಅಪೇಕ್ಷಿತ ಪರಿಣಾಮವನ್ನು ತೋರಲು ವಿಫಲವಾಗಿದೆ ಎನ್ನುವ ಜನರಿಗೆ, ಸಿಂಗಾಪುರವನ್ನು ಕಾಡುತ್ತಿದ್ದ ಇದೇ ಸಮಸ್ಯೆಯನ್ನು ಪರಿಹರಿಸಲು ೧೨ ವರ್ಷಗಳೇ ತಗಲಿದ್ದವು ಎನ್ನುವ ವಿಚಾರ ತಿಳಿದಿರಲಾರದು. ಅದೇ ರೀತಿಯಲ್ಲಿ ತ್ಯಾಜ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಗಳಲ್ಲಿ ಜಗತ್ತಿಗೆ ಮಾದರಿ ಎನಿಸಿರುವ ಸ್ವೀಡನ್ ದೇಶದ ಬಗ್ಗೆ ಅವಶ್ಯಕ ಮಾಹಿತಿ ದೊರೆತಿರಲಾರದು. ತಮ್ಮ ದೇಶದಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳಲ್ಲಿ ಶೇ.೯೯ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಮತ್ತು ತ್ಯಾಜ್ಯಗಳನ್ನು ಬಳಸಿ ತಮಗೆ ಬೇಕಾಗುವಷ್ಟು " ಇಂಧನ " ( ಶಾಖ ಮತ್ತು ವಿದ್ಯುತ್ ) ವನ್ನು ಉತಾದಿಸುತ್ತಿರುವ ಸ್ವೀಡನ್ ದೇಶದಲ್ಲಿ, ಕೇವಲ ಶೇ. ೧ ರಷ್ಟು ತ್ಯಾಜ್ಯಗಳು ಮಾತ್ರ " ಲ್ಯಾಂಡ್ ಫೈಲ್ ಸೈಟ್ " ಗಳನ್ನು ಸೇರುತ್ತಿವೆ ಎಂದಲ್ಲಿ ನೀವೂ ನಂಬಲಾರಿರಿ. 

ಸ್ವೀಡನ್ ಮಾದರಿ 

ಕೇವಲ ೯.೬ ದಶಲಕ್ಷ ಜನಸಂಖ್ಯೆ ಮತ್ತು ೪,೫೦,೨೯೫ ಚ.ಕಿ.ಮೀ ವಿಸ್ತೀರ್ಣವಿರುವ ಸ್ವೀಡನ್ ದೇಶದಲ್ಲಿ ತ್ಯಾಜ್ಯಗಳ ಪುನರ್ ಆವರ್ತನದ ವಿಚಾರದಲ್ಲಿ ಕ್ರಾಂತಿಯೇ ನಡೆದಿದೆ. ಜೊತೆಗೆ ತ್ಯಾಜ್ಯಗಳಿಂದ ಶಾಖ ಮತ್ತು ವಿದ್ಯುತ್ ಉತ್ಪಾದಿಸುವ ಮೂಲಕ ತ್ಯಾಜ್ಯಗಳ ಪ್ರಮಾಣವೂ ಗಣನೀಯವಾಗಿ  ಕಡಿಮೆಯಾಗಿರುವುದರಿಂದ, " ಶೂನ್ಯ ತ್ಯಾಜ್ಯ ವಲಯ " ಎಂದು ಗುರುತಿಸಲ್ಪಟ್ಟಿದೆ. 

ಸ್ವೀಡನ್ ದೇಶದಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲೇ ಪ್ರತ್ಯೇಕಿಸಲಾಗುತ್ತದೆ. ಜೈವಿಕ ತ್ಯಾಜ್ಯಗಳನ್ನು ಪ್ರತ್ಯೇಕಿಸಿದ ಬಳಿಕ ಮರುಬಳಕೆ ಅಥವಾ ಪುನರ್ ಆವರ್ತನಗೊಳಿಸಬಹುದಾದ ಪ್ರತಿಯೊಂದು ವಸ್ತುವನ್ನು ಪ್ರತ್ಯೇಕಿಸಿ ತೆಗೆದಿರಿಸಲಾಗುತ್ತದೆ. ತದನಂತರ ಸಂಪೂರ್ಣವಾಗಿ ನಿಷ್ಪ್ರಯೋಜಕವೆನಿಸುವ ವಸ್ತುಗಳನ್ನು ವೈಜ್ಞಾನಿಕವಾಗಿ ದಹನ ಮಾಡುವ ಇನ್ಸಿನರೇಟರ್ ಗಳಿಗೆ ರವಾನಿಸಲಾಗುತ್ತದೆ. ಈ ದೇಶದ ಕಾನೂನಿನಂತೆ ತ್ಯಾಜ್ಯಗಳ ಸಂಗ್ರಹಣೆ, ಪುನರ್ ಆವರ್ತನ ಮತ್ತು ವಿಲೇವಾರಿಗಳಿಗೆ ತಗಲುವ ವೆಚ್ಚಗಳಿಗೆ ಇವುಗಳ ಉತ್ಪಾದಕರೇ ಹೊಣೆಗಾರರಾಗಿರುತ್ತಾರೆ. ಉದಾಹರಣೆಗೆ ಯಾವುದೇ ವಾಣಿಜ್ಯ ಪೇಯಗಳ ಮಾರಾಟಗಾರರು ಇವುಗಳ ಖಾಲಿ ಬಾಟಲಿಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದು, ಮರುಬಳಕೆ ಅಥವಾ ಪುನರ್ ಆವರ್ತನ ಮಾಡಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. 

ತ್ಯಾಜ್ಯಗಳ ಅಭಾವ! 

ಸ್ವೀಡನ್ ದೇಶದಲ್ಲಿ ಒಂದು ವರ್ಷದಲ್ಲಿ ಸುಮಾರು ೨೦ ದಶಲಕ್ಷ ಟನ್ ನಿರುಪಯುಕ್ತ ತ್ಯಾಜ್ಯಗಳನ್ನು ಇನ್ಸಿನರೇಟರ್ ಗಳಲ್ಲಿ ದಹಿಸುವ ಮೂಲಕ, ಶೇ.೫೦ ರಷ್ಟು ಮುನಿಸಿಪಲ್ ತ್ಯಾಜ್ಯಗಳನ್ನು ಇಂಧನದ ಉತ್ಪಾದನೆಗಾಗಿ ಬಳಸಲಾಗುತ್ತದೆ. ಇಲ್ಲಿನ ಪ್ರತಿಯೊಂದು ಇನ್ಸಿನರೇಟರ್ ಗಳೂ ವಿದ್ಯುತ್ ಉತ್ಪಾದಿಸುತ್ತವೆ. ಇಂತಹ " ತ್ಯಾಜ್ಯಗಳಿಂದ ಇಂಧನ " ವನ್ನು ಉತ್ಪಾದಿಸುವ  ೩೨ ಘಟಕಗಳು ಸ್ವೀಡನ್ ದೇಶದಲ್ಲಿವೆ. ೨೦೧೨ ರಲ್ಲಿ ಈ ಘಟಕಗಳು ೧೪.೭ ಟೆರಾ ವ್ಯಾಟ್ಸ್ ಅವರ್ " ಶಕ್ತಿ " (ಎನರ್ಜಿ ) ಯನ್ನು ಉತ್ಪಾದಿಸಿದ್ದವು.ಇವುಗಳಲ್ಲಿ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಹಬೆಯನ್ನು ಜನರೇಟರ್ ಗಳ ಟರ್ಬೈನ್ ಗಳನ್ನು ಚಾಲನೆಮಾಡಲು ಬಳಸುವ ಮೂಲಕ, ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತದೆ. ಉದಾಹರಣೆಗೆ ಹೆಲ್ಸಿನ್ ಬೋರ್ಗ್ ನಗರದ ಜನಸಂಖ್ಯೆಯು ೧,೩೨,೯೮೯ ಆಗಿದ್ದು, ಇಲ್ಲಿನ ಒಂದು ಘಟಕವು ಶೇ.೪೦ ರಷ್ಟು ಮನೆಗಳಿಗೆ ಚಳಿಗಾಲದಲ್ಲಿ ಬೇಕಾಗುವಷ್ಟು ಶಾಖವನ್ನು ಉತ್ಪಾದಿಸುತ್ತದೆ. ಅಂತೆಯೇ ದೇಶದಲ್ಲಿನ ಇತರ ಘಟಕಗಳು ೯,೫೦,೦೦೦ ಮನೆಗಳಿಗೆ ಶಾಖ ಮತ್ತು ೨,೬೦,೦೦೦ ಮನೆಗಳಿಗೆ ವಿದ್ಯುಚ್ಚಕ್ತಿಯನ್ನು ಒದಗಿಸುತ್ತದೆ. ವಿಶೇಷವೆಂದರೆ ಇಲ್ಲಿನ ಇನ್ಸಿನರೇಟರ್ ಗಳಲ್ಲಿ ದಹಿಸಲು ತ್ಯಾಜ್ಯಗಳ ಅಭಾವವಿದ್ದು, ಇಂಗ್ಲೆಂಡ್, ಇಟಲಿ,ನಾರ್ವೆ ಮತ್ತು ಐರ್ ಲ್ಯಾಂಡ್ ದೇಶಗಳಿಂದ ಇದಕ್ಕಾಗಿಯೇ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗೂ ಇದಕ್ಕಾಗಿ ಇವೆಲ್ಲ ದೇಶಗಳು ನಿಗದಿತ ಶುಲ್ಕವನ್ನು ಸ್ವೀಡನ್ ಗೆ ಪಾವತಿಸುತ್ತವೆ. 

ಇದಲ್ಲದೇ ಸ್ವೀಡನ್ ನಲ್ಲಿ ೨೪೨ ಬಯೋಗ್ಯಾಸ್ ಘಟಕಗಳಿದ್ದು, ಇವುಗಳು ೧೫೮೯ ಜಿಗಾವ್ಯಾಟ್ಸ್ ಅವರ್ ಬಯೋಗ್ಯಾಸನ್ನು ಉತ್ಪಾದಿಸುತ್ತವೆ. ಇದರಲ್ಲಿ ಶೇ.೫೦ ರಷ್ಟು ಬಯೋಗ್ಯಾಸ್ ವಾಹನಗಳಲ್ಲಿ ಇಂಧನವನ್ನಾಗಿ ಬಳಸಲಾಗುತ್ತಿದೆ. ಈ ರೀತಿಯಲ್ಲಿ ಸ್ವೀಡನ್ ದೇಶದಲ್ಲಿ ಅಸಾಂಪ್ರದಾಯಿಕ ಇಂಧನದ ಬಳಕೆ ವ್ಯಾಪಕವಾಗಿದೆ. ತನ್ಮೂಲಕ ದುಬಾರಿ ಬೆಲೆಯ ಪೆಟ್ರೋಲಿಯಂ ತೈಲದ ಬಳಕೆಯನ್ನೇ ನಿಯಂತ್ರಿಸಲಾಗುತ್ತಿದೆ. 

ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ದಹಿಸುವ ಬಗ್ಗೆ ಒಂದಿಷ್ಟು ವಾದವಿವಾದಗಳಿದ್ದರೂ, ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತ್ಯಾಜ್ಯಗಳನ್ನು ಸುರಿಯುವುದರಿಂದ ಉತ್ಪನ್ನವಾಗುವ ಮಿಥೇನ್ ಅನಿಲ ಮತ್ತು ದ್ರವರೂಪಿ ತ್ಯಾಜ್ಯಗಳ ದ್ರಾವಣವು ಭೂಮಿಯಲ್ಲಿ ಇಂಗುವ ಮೂಲಕ, ಅಂತರ್ಜಲವನ್ನು ಕಲುಷಿತಗೊಳಿಸುವ ಸಮಸ್ಯೆಯೊಂದಿಗೆ ತುಲನೆ ಮಾಡಿದಾಗ, ಇನ್ಸಿನರೇಟರ್ ಗಳಲ್ಲಿ ದಹಿಸುವುದು ಸೂಕ್ತವೆನಿಸುತ್ತದೆ. ವಿಶೇಷವೆಂದರೆ ಜಗತ್ತಿನಲ್ಲಿ ಉತ್ಪನ್ನವಾಗುವ ಶೇ.೪೦ ರಷ್ಟು ತ್ಯಾಜಗಳನ್ನು ಇಂದಿಗೂ ಮುಕ್ತವಾಗಿ ಸುಟ್ಟುಬಿಡಲಾಗುತ್ತಿದ್ದು, ಇದು ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. 

ಭಾರತದಲ್ಲೂ ಜಾರಿಯಾಗಲಿ 

ಸ್ವೀಡನ್ ದೇಶದ ಮಾದರಿಯನ್ನು ನಮ್ಮ ದೇಶದಲ್ಲೂ ಜಾರಿಗೊಳಿಸಿದಲ್ಲಿ ಅಗಾಧ ಪ್ರಮಾಣದ ನಿರುಪಯುಕ್ತ ತ್ಯಾಜ್ಯಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಹಾಗೂ ಇದರಿಂದಾಗಿ ಈಗಾಗಲೇ ತುಂಬಿ ತುಳುಕುತ್ತಿರುವ ಲ್ಯಾಂಡ್ ಫೈಲ್ ಸೈಟ್ ಗಳಿಗೆ ಬದಲಾಗಿ ಹೊಸ ಸೈಟ್ ಗಳನ್ನು ನಿರ್ಮಿಸುವ ವೆಚ್ಚವೂ ಉಳಿತಾಯವಾಗಲಿದೆ. ಅಂತೆಯೇ ಲ್ಯಾಂಡ್ ಫೈಲ್ ಸೈಟ್ ಸ್ಥಾಪನೆಯನ್ನು ವಿರೋಧಿಸುವ ಜನರು ನಿಶ್ಚಿಂತರಾಗಿ ಇರಬಹುದಾಗಿದೆ.

 ಇಷ್ಟು ಮಾತ್ರವಲ್ಲ, ಸದಾ ವಿದ್ಯುತ್ ಕ್ಷಾಮದಿಂದ ಬಳಲುತ್ತಿರುವ ಭಾರತದ ಅನೇಕ ರಾಜ್ಯಗಳಿಗೆ ಅವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯೂ ಲಭ್ಯವಾಗಲಿದೆ. ಸ್ವೀಡನ್ ದೇಶದ ತಜ್ಞರ ಅಭಿಪ್ರಾಯದಂತೆ, ಮೂರು ಟನ್ ತ್ಯಾಜ್ಯಗಳು ಒಂದು ಟನ್ ಪೆಟ್ರೋಲಿಯಂ ತೈಲಕ್ಕೆ ಸಮ. ಇದೇ ಕಾರಣದಿಂದಾಗಿ ಆ ದೇಶದಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ಹಾಗೂ ಉಪಯುಕ್ತ ವಿಧಾನದಲ್ಲಿ ಬಳಸುವ ಮೂಲಕ ಸಾಕಷ್ಟು ಪ್ರಮಾಣದ ಇಂಧನವನ್ನು ಉಳಿಸುವುದರೊಂದಿಗೆ, ಗಣನೀಯ ಪ್ರಮಾಣದ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಲಾಗುತ್ತಿದೆ. ಪ್ರಾಯಶಃ ಭಾರತದಲ್ಲೂ ಇದೇ ವಿಧಾನವನ್ನು ಅನುಷ್ಠಾನಿಸುವುದರ ಸಾಧಕ- ಬಾಧಕಗಳ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆಯುವುದು ಹಿತಕರವೆನಿಸಬಹುದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ- ಸ್ವೀಡನ್ ನಲ್ಲಿ ಪುನರ್ ಆವರ್ತನಗೊಳಿಸಿದ ಸಾಮಾಗ್ರಿಗಳಿಂದ ನಿರ್ಮಿತ ಕಟ್ಟಡ 





No comments:

Post a Comment