Monday, November 3, 2014

USE PLASTIC WASTE TO BUILD NEW ROADS






 ತ್ಯಾಜ್ಯ ಪ್ಲಾಸ್ಟಿಕ್ ಬಳಸಿ : ಉತ್ತಮ ರಸ್ತೆಗಳನ್ನು ನಿರ್ಮಿಸಿ

ಕರ್ನಾಟಕ ರಾಜ್ಯ ಸರ್ಕಾರವು ವರ್ಷಂಪ್ರತಿ ರಾಜ್ಯದ ರಸ್ತೆಗಳನ್ನು ದುರಸ್ತಿಪಡಿಸಲು, ನವೀಕರಿಸಲು ಮತ್ತು ನೂತನ ರಸ್ತೆಗಳನ್ನು ನಿರ್ಮಿಸಲು ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ಈ ರಸ್ತೆಗಳು ಮಾತ್ರ ಅಲ್ಪಾವಧಿಯಲ್ಲೇ ಅಳಿದುಹೊಗುತ್ತಿವೆ. ಶಿರಾಡಿ ಘಾಟಿಯ ರಸ್ತೆಯು ಇದಕ್ಕೊಂದು ಉತ್ತಮ ಉದಾಹರಣ ಎನಿಸುತ್ತದೆ. 

ಪ್ಲಾಸ್ಟಿಕ್ ರಸ್ತೆ! 

ನಮ್ಮ ರಾಜ್ಯದ ಪ್ರತಿಯೊಂದು ಹಳ್ಳಿಯಿಂದ ಆರಂಭಿಸಿ ರಾಜಧಾನಿಯಾದ ಬೆಂಗಳೂರಿನ ತನಕ, ಪ್ರತಿಯೊಂದು ಊರುಗಳಲ್ಲೂ ಕಣ್ಣಿಗೆ ರಾಚುವಂತೆ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ಏಕೆಂದರೆ ಕನ್ನಡಿಗರು ಪ್ರತಿನಿತ್ಯ ಬಳಸಿ ಎಸೆಯುತ್ತಿರುವ  ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದೆ. ಜನಸಾಮಾನ್ಯರ ಸಹಕಾರವಿಲ್ಲದೇ ಇಂತಹ ಸಮಸ್ಯೆಗಳನ್ನು ಸ್ಥಳೀಯ ಸಂಸ್ಥೆಗಳು ಪರಿಹರಿಸುವುದು ಅಸಾಧ್ಯವೆನಿಸುತ್ತದೆ. ಆದರೆ ಈ ಸಮಸ್ಯೆಯನ್ನು ನಿಶ್ಚಿತವಾಗಿ ಬಗೆಹರಿಸಬಲ್ಲ ವೈಜ್ಞಾನಿಕ ವಿಧಾನವೊಂದನ್ನು ಬೆಂಗಳೂರಿನ ಕನ್ನಡಿಗ ಅಹ್ಮದ್ ಖಾನ್ ಇವರು ಆವಿಷ್ಕರಿಸಿ ವರ್ಷಗಳೇ ಸಂದಿವೆ. " ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದಂತೆ " ಎನಿಸುವ ಈ ವಿಧಾನವನ್ನು ಅನುಷ್ಠಾನಿಸಿದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಯೊಂದಿಗೆ, ಉತ್ತಮ ಗುಣಮಟ್ಟದ ಹಾಗೂ ಸುದೀರ್ಘಕಾಲ ಬಾಳ್ವಿಕೆ ಬರುವ ಮತ್ತು ದುಬಾರಿ ಬೆಲೆಯ ಬಿಟುಮಿನ್ ನ ವೆಚ್ಚವನ್ನು ಆಂಶಿಕವಾಗಿ ಉಳಿತಾಯಮಾಡಬಲ್ಲ ರಸ್ತೆಗಳು ಜನರಿಗೆ ಲಭ್ಯವಾಗಲಿವೆ!. 

ಸ್ವಯಂ ಸಂಶೋಧನೆ 

ಬೆಂಗಳೂರಿನ ಕೆ.ಕೆ.ಪ್ಲಾಸ್ಟಿಕ್ಸ್ ಸಂಸ್ಥೆಯು ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಪರಿಹರಿಸಲು ಒಂದು ಪ್ರಯೋಗಾಲಯವನ್ನು ಸ್ಥಾಪಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಕೆ ಮಾಡುವ ಬಗ್ಗೆ ಸಂಶೋಧನೆಯೊಂದನ್ನು ನಡೆಸಿತ್ತು. ಇದರ ಅಂಗವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಉದ್ಭವಿಸಿದ್ದ ಹೊಂಡಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೆರೆಸಿ ಸಿದ್ಧಪಡಿಸಿದ ಬಿಟುಮಿನ್ ಮಿಶ್ರಣವನ್ನು ಬಳಸಿ ಮುಚ್ಚಿತ್ತು. ತಿಂಗಳುಗಳೇ ಕಳೆದರೂ ಈ ಮುಚ್ಚಿದ ಹೊಂಡಗಳು ಮತ್ತೆ ಹಾಳಾಗದೇ ಇರುವುದರಿಂದ, ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ನೇತ್ರತ್ವದಲ್ಲಿ ಮತ್ತಷ್ಟು ಸಂಶೋಧನೆಯನ್ನು ತನ್ನದೇ ವೆಚ್ಚದಲ್ಲಿ ನಡೆಸಿತ್ತು.ತತ್ಪರಿಣಾಮವಾಗಿ ರಸ್ತೆಗಳ ಗುಣಮಟ್ಟ ಹೆಚ್ಚುವುದರೊಂದಿಗೆ, ಇವುಗಳ ಆಯುಷ್ಯವು  ಸಾಮಾನ್ಯ ರಸ್ತೆಗಳಿಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚುವುದು ತಿಳಿದುಬಂದಿತ್ತು. 

ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಂತೆಯೇ, ಇದನ್ನು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿಂದ ಪ್ರಮಾಣೀಕರಿಸುವಂತೆ ಸೂಚಿಸಲಾಗಿತ್ತು. ತದನಂತರ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ೪೦ ಕಿ.ಮೀ. ರಸ್ತೆಯನ್ನು ನೂತನ ವಿಧಾನದಿಂದ ಸಿದ್ಧಪಡಿಸಲಾಯಿತು. ಈ ಯೋಜನೆ ಯಶಸ್ವಿಯಾದಂತೆಯೇ, ಬೆಂಗಳೂರಿನಲ್ಲಿ  ೧೨೦೦ ಕಿ.ಮೀ. ಉದ್ದದ ನೂತನ ರಸ್ತೆಗಳನ್ನುಇದೇ ವಿಧಾನದಿಂದ  ನಿರ್ಮಿಸಲಾಗಿತ್ತು. 

ಕೆ.ಕೆ ಪ್ಲಾಸ್ಟಿಕ್ಸ್ ಸಂಸ್ಥೆಯು ರಸ್ತೆಗಳ ನಿರ್ಮಾಣದಲ್ಲಿ ಬಳಸಲು ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸುತ್ತಿದ್ದು, ಒಂದು ಕೆ.ಜಿ. ತ್ಯಾಜ್ಯ ಪ್ಲಾಸ್ಟಿಕ್ ಗೆ ೮ ರೂ. ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡುತ್ತದೆ. ಇದರಿಂದಾಗಿ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗುವುದರೊಂದಿಗೆ, ಇದನ್ನು ಸಂಗ್ರಹಿಸಿದವರಿಗೆ ಒಂದಿಷ್ಟು ಆದಾಯವೂ ದೊರೆಯತ್ತದೆ. ಈ ಪ್ರಯೋಗವು ಈಗಾಗಲೇ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಅನುಷ್ಠಾನಗೊಳ್ಳಬೇಕಿದೆ. ಈ ಸಂಶೋಧನೆಯನ್ನು ಮಾಡಿದ್ದ ಕೆ.ಕೆ.ಪ್ಲಾಸ್ಟಿಕ್ಸ್ ಸಂಸ್ಥೆಯ ಮಾಲೀಕ ಅಹ್ಮದ್ ಖಾನ್ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಆದರೆ " ಹಿತ್ತಲ ಗಿಡ ಮದ್ದಲ್ಲ " ಎನ್ನುವ ರಾಜ್ಯ ಸರ್ಕಾರದ ಧೋರಣೆಯಿಂದಾಗಿ, ರಾಜ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಜೊತೆಗೆ ಈ ಉಪಯುಕ್ತ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಬಳಸದ ಕಾರಣದಿಂದಾಗಿ, ನೂತನವಾಗಿ ನಿರ್ಮಿಸಿದ ರಸ್ತೆಗಳೂ ವರ್ಷಕಳೆಯುವಷ್ಟರಲ್ಲೇ ನಿರ್ನಾಮಗೊಳ್ಳುತ್ತಿವೆ.

ಬೆಂಗಳೂರಿನ ಕೆ.ಕೆ. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ, ಗತ ದಶಕದಲ್ಲಿ ಇದೇ ವಿಧಾನದಿಂದ ೧೨೦೦ ಕಿ.ಮೀ ರಸ್ತೆಗಳನ್ನು ನಿರ್ಮಿಸಲು ೩೫೦೦ ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಳಸಿದ್ದು, ಈ ರಸ್ತೆಗಳು ಇಂದಿಗೂ ಸುಸ್ಥಿತಿಯಲ್ಲಿವೆ!. ಆದರೆ ಈ ವಿಚಾರದ ಅರಿವಿದ್ದರೂ, ರಾಜ್ಯ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಈ ವಿಧಾನದಿಂದ ರಾಜ್ಯದ ಪ್ರತಿಯೊಂದು ರಸ್ತೆಗಳನ್ನು ದುರಸ್ತಿಪಡಿಸುವ ಹಾಗೂ ನೂತನ ರಸ್ತೆಗಳನ್ನು ನಿರ್ಮಿಸುವುದನ್ನೇ ನಿರ್ಲಕ್ಷಿಸಿರುವುದು ನಂಬಲಸಾಧ್ಯವೆನಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸುವ ವಿಧಾನವನ್ನು ಗತ ದಶಕದಲ್ಲೇ ಅನುಷ್ಠಾನಿಸಿದ್ದಲ್ಲಿ, ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿಯೊಂದಿಗೆ, ರಾಜ್ಯದ ಅನೇಕ " ಲ್ಯಾಂಡ್ ಫೈಲ್ ಸೈಟ್ " ಗಳು ತುಂಬಿ ತುಳುಕುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿತ್ತು. ಜೊತೆಗೆ ಇಂತಹ ರಸ್ತೆಗಳು ಸುದೀರ್ಘ ಕಾಲ ಬಾಳ್ವಿಕೆ ಬರುವುದರಿಂದ, ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಣದ ಉಳಿತಾಯವೂ ಆಗುತ್ತಿತ್ತು. ಪ್ರಾಯಶಃ ಅಲ್ಪಾವಧಿಯಲ್ಲೇ ಅಳಿದುಹೋಗುವ ರಸ್ತೆಗಳನ್ನು ನಿರ್ಮಿಸಿದಲ್ಲಿ, ಇವುಗಳ ದುರಸ್ತಿ ಅಥವಾ ನೂತನ ರಸ್ತೆಗಳ ನಿರ್ಮಾಣದ ಕಾಮಗಾರಿಗಳಲ್ಲಿ ತಮಗೆ ದೊರೆಯುವ " ಕಮಿಷನ್ " ನ ಆಸೆಗಾಗಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ರಸ್ತೆಗಳನ್ನು ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಸಂದೇಹ ಜನಸಾಮಾನ್ಯರನ್ನು ಕಾಡುತ್ತಿರುವುದು ಸುಳ್ಳೇನಲ್ಲ. 

ಜನಾಗ್ರಹದಿಂದ ಪರಿಹಾರ 

ಪ್ರಸ್ತುತ ರಾಜ್ಯದ ಎಲ್ಲಾ ನಗರ- ಪಟ್ಟಣಗಳಲ್ಲಿನ ರಸ್ತೆಗಳು ಮಳೆಗಾಲ ಆರಂಭವಾದ ಕೆಲವೇ ವಾರಗಳಲ್ಲಿ ನಾಮಾವಶೇಷವಾಗುತ್ತಿರುವುದು ನಿಮಗೂ ತಿಳಿದಿರಲೇಬೇಕು. ಸಣ್ಣಪುಟ್ಟ ಗಾತ್ರದ ಹೊಂಡಗಳಿಂದ ಆರಂಭಿಸಿ, ಗಜಗಾತ್ರದ ಹೊಂಡಗಳಿಲ್ಲದ ರಸ್ತೆಗಳನ್ನು ಹುಡುಕುವುದು " ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ಅರಸಿದಂತೆ " ಎನಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಮಸ್ಯೆಯನ್ನು ಅಲ್ಪ ವೆಚ್ಚದಲ್ಲಿ ಬಗೆಹರಿಸಬಹುದಾದ ಪ್ಲಾಸ್ಟಿಕ್ ರಸ್ತೆಗಳನ್ನು ನಿರ್ಮಿಸಲು ಸರ್ಕಾರದ ಮೇಲೆ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ಒತ್ತಡವನ್ನು ಹೇರಬೇಕಾಗಿದೆ. ತನ್ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳನ್ನು ಹೊಂದುವ ನಮ್ಮ ಹಕ್ಕನ್ನು ನಾವಿಂದು ಚಲಾಯಿಸಬೇಕಾಗಿದೆ. 

ಅಂತಿಮವಾಗಿ " ಸ್ವಚ್ಚ  ಭಾರತ ಅಭಿಯಾನ " ದ ಮಾದರಿಯಲ್ಲೇ  " ಸ್ವಚ್ಚ ಕರ್ನಾಟಕ " ಯೋಜನೆಯನ್ನು ಅನುಷ್ಠಾನಗೊಳಿಸಲು ಬಯಸಿರುವ  ರಾಜ್ಯದ ಮುಖ್ಯಮಂತ್ರಿಯವರ ಕನಸನ್ನು ನನಸಾಗಿಸಬೇಕಿದ್ದಲ್ಲಿ, ರಾಜ್ಯದ ಪ್ರತಿಯೊಂದು ರಸ್ತೆಗಳ ದುರಸ್ತಿ ಮತ್ತು ನೂತನ ರಸ್ತೆಗಳ ನಿರ್ಮಾಣದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸುವ ವಿಧಾನವನ್ನು ಅನುಸರಿಸಲೇಬೇಕು ಎನ್ನುವ " ಸುಗ್ರೀವಾಜ್ಞೆ " ಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 



No comments:

Post a Comment