Saturday, November 15, 2014

ADB LOAN - NOT REPAID




 ಎ . ಡಿ . ಬಿ ಸಾಲ : ಬಡ್ಡಿಯನ್ನೂ ಮರುಪಾವತಿಸಿಲ್ಲ !

೧೯೯೦ ರ ದಶಕದ ಅಂತ್ಯದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಆಯ್ದ ೧೦ ನಗರ - ಪಟ್ಟಣಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಆಧಾರಿತ ಯೋಜನೆಯೊಂದನ್ನು ಅಂಗೀಕರಿಸಿತ್ತು. ಈ ಯೋಜನೆಯ ಅನುಷ್ಠಾನದ ಬಳಿಕ ಈ ೧೦ ನಗರ-ಪಟ್ಟಣಗಳ ನಿವಾಸಿಗಳ ಜೀವನದ ಮಟ್ಟವು ಉನ್ನತ ಸ್ಥಿತಿಗೆ ಏರಲಿದೆ ಎಂದು ಘೋಷಿಸಲಾಗಿತ್ತು. 

ದುಬಾರಿ ಬಡ್ಡಿ 

ಈ ಯೋಜನೆಯ ಅನುಷ್ಠಾನಕ್ಕಾಗಿ ಎ.ಡಿ.ಬಿ ಸಂಸ್ಥೆಯು ೭೩೫ ಕೋಟಿ ರೂ.ಗಳ ಸಾಲವನ್ನು ಭಾರತ ಸರ್ಕಾರಕ್ಕೆ ಶೇ.೬ ರ ಬಡ್ಡಿಯಲ್ಲಿ ನೀಡಿತ್ತು. ಈ ಮೊತ್ತದಲ್ಲಿ ೨೨೦.೫ ಕೋಟಿ ರೂ. ಗಳನ್ನು ತನ್ನ ಪಾಲಿನ ಅನುದಾನವನ್ನಾಗಿ ಪರಿವರ್ತಿಸಿದ್ದ ಕೇಂದ್ರ ಸರ್ಕಾರವು, ಈ ಸಾಲದ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಸಂದರ್ಭದಲ್ಲಿ ಶೇ.೧೩ ರ ಬಡ್ಡಿಯನ್ನು ವಿಧಿಸಿತ್ತು!. 

ಕೇಂದ್ರ ನೀಡಿದ್ದ ೭೩೫ ಕೋಟಿ ರೂ. ಗಳಿಗೆ ತನ್ನ ಪಾಲಿನ ಅನುದಾನವಾದ ೨೧.೧೧ ಕೋಟಿ ರೂ.ಗಳನ್ನು ಸೇರಿಸಿದ್ದ ರಾಜ್ಯ ಸರ್ಕಾರವು, ೧೦೫೬.೧೧ ಕೋಟಿ. ರೂ.ಗಳ ಬೃಹತ್ ಯೋಜನೆಯನ್ನು ಸಿದ್ಧಪಡಿಸಿತ್ತು. ಅಂತೆಯೇ ಯೋಜನೆಯ ಫಲಾನುಭವಿ ನಗರ- ಪಟ್ಟಣಗಳ ಜನಸಂಖ್ಯೆಗೆ ಅನುಗುಣವಾಗಿ, ಯೋಜನೆಯ ಒಟ್ಟು ವೆಚ್ಚದ  ಕನಿಷ್ಠ ಶೇ.೧೮ ರಿಂದ ಗರಿಷ್ಠ ಶೇ.೫೯ ರಷ್ಟು ಸಾಲ ಮತ್ತು ಕನಿಷ್ಠ ಶೇ. ೩೨ ರಿಂದ ಗರಿಷ್ಠ ೮೨ ರಷ್ಟು ಮೊತ್ತವನ್ನು ಅನುದಾನದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಜೊತೆಗೆ ಸಾಲದ ಮೊತ್ತಕ್ಕೆ ವಾರ್ಷಿಕ ಶೇ. ೧೩.೫ ಬಡ್ಡಿಯ ದರವನ್ನು ನಿಗದಿಸಿತ್ತು. ಯೋಜನೆಯ ಅನುಷ್ಥಾನಕ್ಕಾಗಿ ೫ ವರ್ಷಗಳ ಅವಧಿಯನ್ನು ನಿಗದಿಸಿದ್ದು, ಈ ಅವಧಿಯಲ್ಲಿ ಸಾಲದ ಮೊತ್ತದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರವೇ ನೀಡಲಿತ್ತು. ತದನಂತರ ಪ್ರತಿ ಆರು ತಿಂಗಳುಗಳಿಗೊಮ್ಮೆ ಫಲಾನುಭವಿ ಸ್ಥಳೀಯ ಸಂಸ್ಥೆಗಳು ಸಾಲದ ಕಂತು ಮತ್ತು ಬಡ್ಡಿಯ ಹಣವನ್ನು ರಾಜ್ಯ ಸರ್ಕಾರಕ್ಕೆ ಮರುಪಾವತಿಸಬೇಕಾಗಿತ್ತು. 

೨೦೦೧ ರಲ್ಲಿ ಯೋಜನೆಯ ಕಾಮಗಾರಿಗಳು ಅನುಷ್ಠಾನಗೊಳ್ಳಲು ಸಿದ್ಧತೆಗಳು ನಡೆದಂತೆಯೇ, ಸರ್ಕಾರೇತರ ಸ್ವಯಂ ಸೇವಾ ಸೇವಾ ಸಂಘಟನೆಗಳು ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳ ದುಬಾರಿ ಬಡ್ಡಿದರದ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸುವುದರೊಂದಿಗೆ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದವು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕುಸಿಯಲು ಆರಂಭಿಸಿದ್ದ ಬಡ್ಡಿಯ ದರಗಳ ಅರಿವಿದ್ದರೂ, ರಾಜ್ಯ - ಕೇಂದ್ರ ಸರ್ಕಾರಗಳು ಈ ಬಗ್ಗೆ ಮೌನ ವಹಿಸಿದ್ದವು. 

ಅಂತಿಮವಾಗಿ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಯ ನೇತೃತ್ವದಲ್ಲಿ ಅನುಷ್ಠಾನಗೊಳ್ಳಲು ಆರಂಭಿಸಿದ್ದ ಕರಾವಳಿ ಕರ್ನಾಟಕದ ಕುಡ್ಸೆಂಪ್ ಯೋಜನೆಗಳು ೨೦೦೪ ರಲ್ಲಿ ಪರಿಪೂರ್ಣಗೊಳ್ಳಬೇಕಿತ್ತಾದರೂ, ಕೆಲ ನಗರಗಳಲ್ಲಿ ಇಂದಿಗೂ ಪರಿಪೂರ್ಣಗೊಂಡಿಲ್ಲ!. ಆದರೆ ರಾಜ್ಯ ಸರ್ಕಾರದ ಕಡತಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದ್ದು, ಫಲಾನುಭವಿ ಸ್ಥಳೀಯ ಸಂಸ್ಥೆಗಳು ತಾವು ಪಡೆದಿದ್ದ ಸಾಲದ ಮೊತ್ತದ ಕಂತು ಮತ್ತು ಬಡ್ಡಿಗಳ ಮರುಪಾವತಿಯನ್ನು ಆರಂಭಿಸಬೇಕಿತ್ತು.

ಬಡ್ಡಿಯ ದರದಲ್ಲಿ ಕಡಿತ 

ತನ್ಮಧ್ಯೆ ದುಬಾರಿ ಬಡ್ಡಿ ದರದ ಹೊರೆಯೊಂದಿಗೆ ಸಾಲದ ಕಂತುಗಳನ್ನು ಮರುಪಾವತಿಸುವುದು ಸ್ಥಳೀಯ ಸಂಸ್ಥೆಗಳಿಗೆ ಅಸಾಧ್ಯವೆನಿಸಲಿದೆ ಎನ್ನುವ ವಿಚಾರವನ್ನು ಸ್ವಯಂ ಸೇವಾ ಸಂಘಟನೆಗಳ ನಿರಂತರ ಆಂದೋಲನ ಹಾಗೂ ಪ್ರಚಾರಗಳಿಂದ ಅರಿತ ರಾಜ್ಯ ಸರ್ಕಾರವು, ಸದ್ದಿಲ್ಲದೇ ಬಡ್ಡಿ ದರವನ್ನು ೮.೫ ಕ್ಕೆ ಇಳಿಸಿತ್ತು!. ತದನಂತರ ಸ್ಥಳೀಯ ಸಂಸ್ಥೆಗಳು ವಾರ್ಷಿಕ ಕನಿಷ್ಠ ಶೇ.೭೫ ರಷ್ಟು ಸ್ವಯಂ ಘೋಷಿತ ಆಸ್ತಿತೆರಿಗೆಯನ್ನು ಸಂಗ್ರಹಿಸಿದಲ್ಲಿ ಶೇ.೧, ತಮ್ಮ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಸಮರ್ಪಕ ಬದಲಾವಣೆಗಳೊಂದಿಗೆ ಕಂಪ್ಯೂಟರೀಕರಣಗೊಳಿಸಿದಲ್ಲಿ ಮತ್ತೆ ಶೇ.೧ ಮತ್ತು ಕುಡಿಯುವ ನೀರಿನ ಶುಲ್ಕವನ್ನು ಪರಿಷ್ಕರಿಸಿ ದ್ವಿಗುಣಗೊಳಿಸಿದಲ್ಲಿ ಮತ್ತೆ ಶೇ.೧ ರಷ್ಟು ಎಂದು ಒಟ್ಟು ಶೇ.೩ ರಷ್ಟು ಬಡ್ಡಿಯನ್ನು ಮತ್ತೆ ಕಡಿತ ಮಾಡುವ ಆಮಿಷವನ್ನು ಒಡ್ಡಿತ್ತು. ಇದನ್ನು ಅಕ್ಷರಶಃ ಪಾಲಿಸಲಿರುವ ಸ್ಥಳೀಯ ಸಂಸ್ಥೆಗಳು ತಾವು ಪಡೆದಿದ್ದ ಸಾಲದ ಮೊತ್ತದ ಮೇಲೆ ನೀಡಬೇಕಾಗಿದ್ದ ಬಡ್ಡಿಯ ದರವು ಶೇ.೧೩.೫ ರಿಂದ ಶೇ.೫.೫ ಕ್ಕೆ ಇಳಿಯಲಿತ್ತು. 

ಸಾಲ- ಬಡ್ಡಿ ಮರುಪಾವತಿಸಿಲ್ಲ 

ರಾಜ್ಯ ಸರ್ಕಾರವು ಎ.ಡಿ.ಬಿ ಸಾಲದ ಮೇಲಿನ ಬಡ್ಡಿಯ ದರವನ್ನು ಕೇವಲ ಶೇ. ೫.೫ ಕ್ಕೆ ಇಳಿಸಿದ್ದರೂ, ಕರಾವಳಿ ಕರ್ನಾಟಕದ ೧೦ ನಗರ ಪಟ್ಟಣಗಳು ತಮ್ಮ ಸಾಲ ಮತ್ತು ಬಡ್ಡಿಯ ಕಂತುಗಳನ್ನು ಇಂದಿನ ತನಕ ತನಕ ಮರುಪಾವತಿಸಿಲ್ಲ. ಈ ಬಗ್ಗೆ ನಿಜಸ್ಥಿತಿಯನ್ನು ಅರಿತುಕೊಳ್ಳಲು ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಮಾಹಿತಿ ಹಕ್ಕು ಕಾಯಿದೆಯಂತೆ ೧೫-೧೦-೨೦೧೪ ರಂದು ಬಳಕೆದಾರರ ವೇದಿಕೆಯ ವತಿಯಿಂದ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ೧೨-೧೧-೨೦೧೪ ರಂದು ದೊರೆತ ಮಾಹಿತಿಯಂತೆ, ಕರಾವಳಿ ಕರ್ನಾಟಕದ ೧೦ ನಗರ- ಪಟ್ಟಣಗಳಲ್ಲಿ ಕುಂದಾಪುರ ಸ್ಥಳೀಯ ಸಂಸ್ಥೆಯು ೨.೭೫ ಕೋಟಿ ರೂ.ಗಳನ್ನು ಮರುಪಾವತಿಸಿದ್ದು, ಇದನ್ನು ಬಡ್ಡಿಯ ಮೊತ್ತಕ್ಕೆ ಸರಿ ಹೊಂದಿಸಲಾಗಿದೆ. ಅರ್ಥಾತ್ ಇತರ ಒಂಬತ್ತು ಸ್ಥಳೀಯ ಸಂಸ್ಥೆಗಳು ಇಂದಿನ ತನಕ ಸಾಲ ಅಥವಾ ಬಡ್ಡಿಯ ಒಂದೇ ಒಂದು ಕಂತನ್ನು ಮರುಪಾವತಿಸಿಲ್ಲ ಎನ್ನುವ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳು ನೀಡಿದ್ದಾರೆ. 

ನಿಗದಿತ ಸಮಯದಲ್ಲಿ- ಅವಧಿಯಲ್ಲಿ ಸಾಲ- ಬಡ್ಡಿಯನ್ನು ಮರುಪಾವತಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಸರ್ಕಾರ ಅಥವಾ ಕೆ.ಯು.ಐ.ಡಿ.ಎಫ್.ಸಿ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ಮಾಹಿತಿಯನ್ನು ಕೇಳಿದ್ದು, ನಮಗೆ ದೊರೆತಿದ್ದ ಮಾಹಿತಿ ಇಂತಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಪ್ರಸ್ತುತ ಸಾಲ ಮತ್ತು ಬಡ್ಡಿಗಳ ವಿವರ ಮತ್ತು ಹಿಂದಿನ ಕಂತಿನವರೆಗಿನ ಅಸಲು ಮತ್ತು ಬಡ್ಡಿಗಳ ಬಾಕಿಯ ವಿವರಗಳನ್ನು ಡಿಮಾಂಡ್ ನೋಟೀಸಿನಲ್ಲಿ ಪ್ರತಿ ೬ ತಿಂಗಳಿಗೊಮ್ಮೆ ಕಳುಹಿಸಲಾಗುತ್ತದೆ. ಜೊತೆಗೆ ಈ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ವರ್ಷಂಪ್ರತಿ ನೀಡುವ ವಿವಿಧ ಅನುದಾನದ ಮೊತ್ತದಲ್ಲಿ, ಇವುಗಳು ಮರುಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಿ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಕಳುಹಿಸುವಂತೆ ಕ್ರಮಕೈಗೊಳ್ಳಲು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರವನ್ನು ಬರೆಯಲಾಗಿದೆ ಎನ್ನುವ ಮಾಹಿತಿಯನ್ನೂ ಸಂಬಂಧಿತ ಅಧಿಕಾರಿಗಳು ನೀಡಿರುತ್ತಾರೆ. ಆದರೆ ಈ ಪ್ರಯತ್ನಗಳು ಇಂದಿನ ತನಕ ಅಪೇಕ್ಷಿತ ಪರಿಣಾಮವನ್ನು ನೀಡಿಲ್ಲ. ಅರ್ಥಾತ್, ತಾನು ನೀಡಿದ್ದ ಸಾಲವನ್ನು ಬಡ್ಡಿ ಸಹಿತ ವಸೂಲು ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನಲು ಅಡ್ಡಿಯಿಲ್ಲ. 

ಇದಲ್ಲದೇ ೧೦೫೬ ಕೋಟಿ ರೂ.ಗಳ ಯೋಜನೆಗೆ ಇದುವರೆಗೆ ಕೇವಲ ೧೦೦೧ ಕೋಟಿ ರೂ.ಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಾಲದ ಮೊತ್ತ ೪೬೨.೯೩ ಕೋಟಿ ಮತ್ತು ಅನುದಾನದ ಮೊತ್ತವು ೫೩೬.೨೯ ಕೋಟಿಗಳಾಗಿವೆ ಎನ್ನುವ ಮಾಹಿತಿಯೂ ಇದೇ ಸಂದರ್ಭದಲ್ಲಿ ಲಭ್ಯವಾಗಿದೆ. 

ಅದೇನೇ ಇರಲಿ, ಕುಡ್ಸೆಂಪ್ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ನಡೆಸಿದ್ದ ಸಮೀಕ್ಷೆಯೊಂದರಲ್ಲಿ, ಈ ಯೋಜನೆಗೆ ಆಯ್ಕೆಯಾಗಿದ್ದ ೧೦ ಫಲಾನುಭವಿ ಸ್ಥಳೀಯ ಸಂಸ್ಥೆಗಳಲ್ಲಿ ಮೂರು ಸಂಸ್ಥೆಗಳು ತಾವು ಪಡೆದುಕೊಳ್ಳಲಿರುವ ಸಾಲದ ಮೊತ್ತ ಮತ್ತು ಇದರ ಮೇಲಿನ ಬಡ್ಡಿಗಳನ್ನು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ವರದಿಯಾಗಿತ್ತು. ಆದರೆ ಇದೀಗ ಕುಂದಾಪುರವನ್ನು ಹೊರತುಪಡಿಸಿ ಇತರ ಒಂಬತ್ತು ಸ್ಥಳೀಯ ಸಂಸ್ಥೆಗಳು ಒಂದೇ ಒಂದು ಕಂತನ್ನೂ ಮರುಪಾವತಿಸದೇ ಇರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. ಅಂತೆಯೇ ರಾಜ್ಯ ಸರ್ಕಾರದ ಬೇಜವಾಬ್ದಾರಿಯನ್ನು ಸಾಬೀತುಪಡಿಸುತ್ತದೆ. 

ಕೊನೆಯ ಮಾತು 

ಪುತ್ತೂರು ಪುರಸಭೆಯೂ ಈ ಯೋಜನೆಯ ಫಲಾನುಭಾವಿಯಾಗಿದ್ದು, ಎ.ಡಿ.ಬಿ ಸಾಲದ ಅಸಲು ಮತ್ತು ಬಡ್ಡಿಗಳನ್ನು ಮರುಪಾವತಿಸಿಲ್ಲ. ಆದರೆ ಕೆಲವೇ ತಿಂಗಳುಗಳ ಹಿಂದೆ ಪುತ್ತೂರು ಪುರಸಭೆಗೆ ೯೦ ಕೋಟಿ ರೂ.ಗಳ ಅನುದಾನವನ್ನು ನಗರಾಭಿವೃದ್ಧಿ ಸಚಿವರು ಘೋಷಿಸಿದ್ದು, ಇದರಲ್ಲಿ ಒಳಚರಂಡಿ ಯೋಜನೆಗಾಗಿ ೭೫ ಕೋಟಿ ಮತ್ತು ಕುಡಿಯುವ ನೀರಿನ ಪೂರೈಕೆಯ ಯೋಜನೆಗಾಗಿ ೧೫ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದೆಂದು ಘೋಷಿಸಲಾಗಿತ್ತು. 

ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕಿದಾಗ, ಇದು ಎ.ಡಿ.ಬಿ ಸಾಲ ಆಧಾರಿತ ಯೋಜನೆಯೇ ಹೊರತು ಅನುದಾನವಲ್ಲ ಎಂದು ತಿಳಿದುಬಂದಿತ್ತು!. ಹಿಂದಿನ ಎ.ಡಿ.ಬಿ ಸಾಲವನ್ನೇ ಮರುಪಾವತಿಸದ ಸ್ಥಳೀಯ ಸಂಸ್ಥೆಗೆ ಮತ್ತೆ ಹೊಸ ಸಾಲವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ. ವಿಶೇಷವೆಂದರೆ ಹಿಂದಿನ ಎ.ಡಿ.ಬಿ ಯೋಜನೆಯ ಅನುಷ್ಠಾನಕ್ಕೆ ಮುನ್ನ  ಪುತ್ತೂರಿನಲ್ಲಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ನಡೆಸಿದ್ದ ಅಧ್ಯಯನದ ವರದಿಯಂತೆ, ಇಲ್ಲಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದು ತಿಳಿದುಬಂದಿತ್ತು. ನಿಜ ಸ್ಥಿತಿ ಹೀಗಿದ್ದಲ್ಲಿ ಇದೀಗ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾದರೂ ಹೇಗೆ ಮತ್ತು ಏಕೆ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವವರು ಯಾರೆಂದು ನಮಗೂ ತಿಳಿದಿಲ್ಲ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  

ಚಿತ್ರ- ಎ ಡಿ ಬಿ ಯೋಜನೆಯಲ್ಲಿ ನಿರ್ಮಿಸಿದ್ದ ಕಿಂಡಿ ಆಣೆಕಟ್ಟು 


No comments:

Post a Comment