Tuesday, November 11, 2014

NOV.14- WORLD DIABETES DAY




ನ.೧೪ - ವಿಶ್ವ ಮಧುಮೇಹ ದಿನ 

ಆರೋಗ್ಯಕರ ಜೀವನ ಮತ್ತು ಮಧುಮೇಹ 

ಮಧುಮೇಹ ಎನ್ನುವ ಸುಂದರ ನಾಮಧೇಯದ ವ್ಯಾಧಿಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಕೇವಲ ಒಂದೆರಡು ದಶಕಗಳ ಹಿಂದಿನ ತನಕ, ಮಧ್ಯವಯಸ್ಸನ್ನು ಮೀರಿದವರನ್ನು ಪೀಡಿಸುತ್ತಿದ್ದ ಈ ವ್ಯಾಧಿಯು ಇದೀಗ ತಾರುಣ್ಯದಲ್ಲೇ ಪ್ರತ್ಯಕ್ಷವಾಗುವುದರೊಂದಿಗೆ, ತತ್ಸಂಬಂಧಿತ ಸಂಕೀರ್ಣ ಸಮಸ್ಯೆಗಳ ಸಂಭಾವ್ಯತೆಯೂ ಹೆಚ್ಚುತ್ತಿದೆ.ಇದಕ್ಕೆ ನಿರ್ದಿಷ್ಟ ಕಾರಣಗಳೂ ಇವೆ. ಇವುಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದಾಗಿ ನಶಿಸುತ್ತಿರುವ ಶಾರೀರಿಕ ಚಟುವಟಿಕೆಗಳು, ಕೊಬ್ಬು, ಸಕ್ಕರೆಗಳಿಂದ ಸಮೃದ್ಧವಾಗಿರುವ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿರುವ ಆಹಾರಗಳ ಅತಿಸೇವನೆ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡಗಳೇ ಇದಕ್ಕೆ ಕಾರಣವೆನಿಸುತ್ತಿವೆ. ಈ ಗಂಭೀರ ವ್ಯಾಧಿಯ ಸಂಭಾವ್ಯತೆಯನ್ನು ಕಡಿಮೆ ಮಾಡುವ ಸಲುವಾಗಿ,ಇದನ್ನು ತಡೆಗಟ್ಟುವ,ಪತ್ತೆಹಚ್ಚುವ, ಚಿಕಿತ್ಸಿಸುವ ಹಾಗೂ ಇದರಿಂದ ಉದ್ಭವಿಸಬಲ್ಲ ಗಂಭೀರ ಸಮಸ್ಯೆಗಳು ಮತ್ತು ಮಾರಕತೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ, ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟವು, ಸಂಯುಕ್ತ ರಾಷ್ಟ್ರಗಳು ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ೧೭೦ ದೇಶಗಳಲ್ಲಿರುವ ಮಧುಮೇಹ ಸಂಘಟನೆಗಳ ಸಹಯೋಗದಲ್ಲಿ " ವಿಶ್ವ ಮಧುಮೇಹ ದಿನ" ವನ್ನು ಪ್ರತಿವರ್ಷ ನವೆಂಬರ್ ೧೪ ರಂದು ಆಚರಿಸುತ್ತಿದೆ. ಈ ಬಾರಿ " ಆರೋಗ್ಯಕರ ಜೀವನ ಮತ್ತು ಮಧುಮೇಹ" ಎನ್ನುವ ಘೋಷಣೆಯೊಂದಿಗೆ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. 

ಚಾರ್ಲ್ಸ್ ಬೆಸ್ಟ್ ಎನ್ನುವ ಸಹೋದ್ಯೋಗಿಯೊಂದಿಗೆ ಸೇರಿ, ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿದ್ದ " ಇನ್ಸುಲಿನ್ " ಔಷದವನ್ನು ೧೯೨೨ ರಲ್ಲಿ ಸಂಶೋಧಿಸಿದ್ದ ಫ್ರೆಡರಿಕ್ ಬಾಂಟಿಂಗ್ ಎನ್ನುವ ವೈದ್ಯಕೀಯ ಸಂಶೋಧಕರ  ಜನ್ಮದಿನವನ್ನು , ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ.


ಮಧುಮೇಹ ಎಂದರೇನು? 

ಮನುಷ್ಯನ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಬೀಟಾ ಕಣಗಳು ಸ್ವಾಭಾವಿಕವಾಗಿ ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣವು ಕುಂಠಿತಗೊಂಡಾಗ ಅಥವಾ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ಉತ್ಪಾದನೆಯು ಸಂಪೂರ್ಣವಾಗಿ ನಶಿಸಿದಾಗ  ಮಧುಮೇಹ ವ್ಯಾಧಿ ಪ್ರತ್ಯಕ್ಷವಾಗುವುದು.ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುವುದು. 

 ಆಧುನಿಕ ಜೀವನಶೈಲಿ, ನಿರುಪಯುಕ್ತ (ಜಂಕ್ ಫುಡ್ ) ಆಹಾರಗಳ ಅತಿಸೇವನೆ, ನಿಷ್ಕ್ರಿಯತೆ, ಅಧಿಕತೂಕ, ಅತಿಬೊಜ್ಜು ಮತ್ತು ಅನುವಂಶಿಕತೆಗಳು ಇದಕ್ಕೆ ಕಾರಣವೆನಿಸುತ್ತವೆ. ಈ ವ್ಯಾಧಿಯು ನವಜಾತ ಶಿಶುಗಳಿಂದ ಆರಂಭಿಸಿ, ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ವೈದ್ಯಕೀಯ ಸಂಶೋಧಕರು ಇದುವರೆಗೆ ಶಾಶ್ವತ ಪರಿಹಾರವನ್ನು ನೀಡಬಲ್ಲ ಔಷದವನ್ನು ಪತ್ತೆಹಚ್ಚಿರದ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ.

 ಮಧುಮೇಹವನ್ನು ಸ್ಥೂಲವಾಗಿ ಇನ್ಸುಲಿನ್ ಅವಲಂಬಿತ (ಟೈಪ್-೧ )ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ(ಟೈಪ್-೨ ) ಎಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಟೈಪ್-೧, ಅದೇ ತಾನೇ ಜನಿಸಿದ ಶಿಶುವಿನಿಂದ ಆರಂಭಿಸಿ ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ಆದರೆ ಟೈಪ್-೨, ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕವೇ ತಲೆದೋರುವುದು. ಆದರೆ ಇತ್ತೀಚಿನ ಕೆಲವರ್ಷಗಳಿಂದ ಇದು ತಾರುಣ್ಯದಲ್ಲೇ ಉದ್ಭವಿಸುತ್ತಿರುವುದು ಕಳವಳಕ್ಕೆ ಕಾರಣವೆನಿಸಿದೆ.  ಮಧುಮೇಹ ಪೀಡಿತರು ತಮ್ಮ ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆ, ಆಹಾರ ಸೇವನೆಯಲ್ಲಿ ಪಥ್ಯ, ದೈನಂದಿನ ವ್ಯಾಯಾಮ, ಶರೀರದ ತೂಕ ಹೆಚ್ಚಿದ್ದಲ್ಲಿ ಇಳಿಸಿಕೊಳ್ಳುವುದು, ಮಾನಸಿಕ ಒತ್ತಡಗಳ ನಿವಾರಣೆ ಮತ್ತು ಸೂಕ್ತ ಔಷದಗಳ ಸೇವನೆಯಿಂದ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಬಹುದು. 

ಪೂರ್ವ ಸೂಚನೆಗಳು 

ಅತಿ ಆಯಾಸ, ಅತಿ ಬಾಯಾರಿಕೆ, ಶರೀರದ ತೂಕ ಕಡಿಮೆಯಾಗುತ್ತಲೇ ಹೋಗುವುದು, ತಲೆ ತಿರುಗಿದಂತಾಗುವುದು, ಕಣ್ಣುಗಳ ದೃಷ್ಟಿ ಮಂಜಾಗುವುದು, ಪದೇಪದೇ ಮೂತ್ರ ವಿಸರ್ಜಿಸಬೇಕೆನಿಸುವುದು, ಗಾಯಗಳು ಗುಣವಾಗದೇ ಉಲ್ಬಣಿಸುವುದು, ಇತರ ವ್ಯಾಧಿಗಳು ಬಾಧಿಸಿದಾಗ ಸೂಕ್ತ ಚಿಕಿತ್ಸೆ ಪಡೆದುಕೊಂಡರೂ ಗುಣವಾಗದಿರುವುದೇ ಮುಂತಾದ ಲಕ್ಷಣಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತವೆ. 

ತಪ್ಪು ಕಲ್ಪನೆಗಳು 

ನಮ್ಮ ಶರೀರದ ಮೇಲೆ ಆಗಿರುವ ಗಾಯಗಳು ತ್ವರಿತಗತಿಯಲ್ಲಿ ಗುಣವಾಗುತ್ತಿರುವುದರಿಂದ, ತಮಗೆ ಮಧುಮೇಹ ವ್ಯಾಧಿ ಇಲ್ಲವೆಂದು ಅನೇಕ ವಿದ್ಯಾವಂತರೂ ನಂಬಿದ್ದಾರೆ. ಅದೇ ರೀತಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆಸಿದ್ದ ರಕ್ತ ಪರೀಕ್ಷೆಯ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಗದಿತ ಮಿತಿಯಲ್ಲಿ ಇದ್ದುದರಿಂದ, ಮುಂದೆ ತಮ್ಮನ್ನು ಮಧುಮೇಹ ಬಾಧಿಸದು ಎನ್ನುವವರೂ ಇದ್ದಾರೆ. ಆದರೆ ಇಂತಹ ನಂಬಿಕೆಗಳು ಹಾಗೂ ತಪ್ಪುಕಲ್ಪನೆಗಳು ಹುಸಿಯಾದ ಪ್ರಸಂಗಗಳು ಸಾಕಷ್ಟಿವೆ. 

ಇನ್ನು ಕೆಲವು ಮಧುಮೇಹ ರೋಗಿಗಳು ಸಕ್ಕರೆಯಿಂದ ತಯಾರಿಸಿದ ಖಾದ್ಯ-ಪೇಯಗಳನ್ನು ತ್ಯಜಿಸಿದರೂ, ಬೆಲ್ಲದಿಂದ ತಯಾರಿಸಿದ ಮತ್ತು ಜೇನುತುಪ್ಪದೊಂದಿಗೆ ಅನ್ಯ ಖಾದ್ಯಗಳನ್ನು ಧಾರಾಳವಾಗಿ ಸೇವಿಸುತ್ತಾರೆ. ಈ ವಿಚಾರವನ್ನು ಸಮರ್ಥಿಸಲು ಬೆಲ್ಲ ಮತ್ತು ಜೆನುತುಪ್ಪಗಳು ನೈಸರ್ಗಿಕ ಉತ್ಪನ್ನಗಳಾಗಿರುವುದರಿಂದ ಇವುಗಳ ಸೇವನೆ ತ್ಯಾಜ್ಯವಲ್ಲ ಎಂದು ವಾದಿಸುತ್ತಾರೆ. ಆದರೆ ಸಕ್ಕರೆ ಮತ್ತು ಬೆಲ್ಲಗಳನ್ನು ಕಬ್ಬಿನಿಂದಲೇ ತಯಾರಿಸಲಾಗುತ್ತದೆ ಮತ್ತು ಜೇನುತುಪ್ಪದಲ್ಲಿ ಸಕ್ಕರೆಯ ಅಂಶವಿದೆ ಎನ್ನುವುದನ್ನು ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ಹೆಚ್ಚುತ್ತಿರುವ ಮಧುಮೇಹಿಗಳು 

೧೯೭೧ ರಿಂದ ೨೦೦೦ ನೇ ಇಸವಿಯ ಅವಧಿಯಲ್ಲಿ ಜಗತ್ತಿನಲ್ಲಿರುವ ಮಧುಮೇಹಿಗಳ ಪ್ರಮಾಣವು ಶೇ. ೧.೨ ರಿಂದ ೧೨.೧ ಕ್ಕೆ ಏರಿತ್ತು. ಭಾರತವು ವಿಶ್ವದ " ಮಧುಮೇಹಿಗಳ ರಾಜಧಾನಿ " ಎಂದು ಗುರುತಿಸಲ್ಪಟ್ಟಿದೆ. ಏಕೆಂದರೆ ೨೦೦೦ ನೇ ಇಸವಿಯಲ್ಲೇ ಭಾರತದಲ್ಲಿ ೩೧.೭ ದಶಲಕ್ಷ ಮಧುಮೇಹಿಗಳಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿತ್ತು!. ಇದೇ ಸಂದರ್ಭದಲ್ಲಿ ಚೀನಾ ದೇಶದಲ್ಲಿ ೨೦.೮ ದಶಲಕ್ಷ ಹಾಗೂ ಅಮೇರಿಕದಲ್ಲಿ ೧೭.೭ ದಶಲಕ್ಷ ಮಧುಮೇಹಿಗಳಿದ್ದರು. ಜಾಗತಿಕ ಮಟ್ಟದಲ್ಲಿ ೨೦೦೦ ನೇ ಇಸವಿಯಲ್ಲಿ ೧೭೧ ದಶಲಕ್ಷವಿದ್ದ ಮಧುಮೇಹಿಗಳ ಸಂಖ್ಯೆಯು, ೨೦೦ ರಲ್ಲಿ ೩೬೬ ದಶಲಕ್ಷಕ್ಕೆ ಏರುವ ಸಾಧ್ಯತೆಗಳಿವೆ. ಹಾಗೂ ಈ ಸಂದರ್ಭದಲ್ಲಿ ಭಾರತದ ಮಧುಮೇಹಿಗಳ ಸಂಖ್ಯೆಯು ೭೯.೪ ದಶಲಕ್ಷ, ಚೀನಾದಲ್ಲಿ ೪೨.೩ ಮತ್ತು ಅಮೆರಿಕದಲ್ಲಿ ೩೦.೩ ದಶಲಕ್ಷವನ್ನು ತಲುಪಲಿದೆ ಎಂದು ಊಹಿಸಲಾಗಿದೆ. 

ಸಂಕೀರ್ಣ ಸಮಸ್ಯೆಗಳನ್ನು ತಡೆಗಟ್ಟಿ 

ಕೆಲವೇ ದಶಕಗಳ ಹಿಂದೆ ಸಾಂಕ್ರಾಮಿಕವಾಗಿ ಹರಡುವ ಮಾರಕ ಕಾಯಿಲೆ ಮತ್ತು ಸೋಂಕುಗಳಿಗೆ ಲಕ್ಷಾಂತರ ಜನರು ಬಲಿಯಾಗುತ್ತಿದ್ದಲ್ಲಿ, ಇಂದು ಸಾಂಕ್ರಾಮಿಕವಾಗಿ ಹರಡದ,ಆದರೆ ಅತಿಹೆಚ್ಚು ಜನರನ್ನು ಬಲಿಪಡೆಯುತ್ತಿರುವ ಮಾರಕ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ದೃಷ್ಟಿನಾಶ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮೂತ್ರಪಿಂಡಗಳ ವೈಫಲ್ಯ ಮತ್ತು ಅಂಗಾಂಗ ವಿಚ್ಛೇದನಗಳಂತಹ ಅಪಾಯಕಾರಿ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ವ್ಯಾಧಿಯ ಸಂಭಾವ್ಯತೆಯನ್ನು ತಡೆಗಟ್ಟುವ ಸಲುವಾಗಿಯೇ ವಿಶ್ವ ಮಧುಮೇಹ ದಿನವನ್ನು ಪ್ರಪಂಚದ ೧೭೦ ರಾಷ್ಟ್ರಗಳಲ್ಲಿನ ೨೩೦ ಮಧುಮೇಹ ಸಂಘಟನೆಗಳ ಸಹಕಾರದಿಂದ ಆಚರಿಸಲಾಗುತ್ತಿದೆ. ಹಾಗೂ ಈ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಮೂಲಕ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಂಯುಕ್ತ ರಾಷ್ಟ್ರಗಳು ಸಂಸ್ಥೆಗಳು ಒಂದಾಗಿ ಶ್ರಮಿಸುತ್ತಿವೆ. 

ಅಂತಿಮವಾಗಿ ಹೇಳುವುದಾದಲ್ಲಿ, ಸೂಕ್ತ ಔಷದೋಪಚಾರಗಳಿಂದ ನಿಶ್ಚಿತವಾಗಿಯೂ ನಿಯಂತ್ರಿಸಲು ಆಗುವಂತಹ ಈ ವ್ಯಾಧಿಯನ್ನು, ನಿಸ್ಸಂದೇಹವಾಗಿ ಗುಣಪಡಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಕಾಸುಕೀಳುವ ನಕಲಿ ವೈದ್ಯರ ಮಾತಿಗೆ ಮರುಳಾಗದಿರಿ. ಅಂತೆಯೇ ನಿಮ್ಮನ್ನು ಕಾಡುವ ಮಧುಮೇಹವನ್ನು ಗುಣಪಡಿಸುವುದಾಗಿ ಅನ್ಯ ಚಿಕಿತ್ಸೆಯನ್ನು ನೀಡುವ ನಕಲಿ ವೈದ್ಯನ ಮಾತನ್ನು ನಂಬಿ, ನೀವು ಇದೀಗ ಸೇವಿಸುತ್ತಿರುವ ಆಧುನಿಕ ಪದ್ದತಿಯ ಔಷದಗಳ ಸೇವನೆಯನ್ನು ಅಥವಾ ಇನ್ಸುಲಿನ್ ಚುಚ್ಚುಮದ್ದನ್ನು ಪಡೆದುಕೊಳ್ಳುವುದನ್ನು ನಿಲ್ಲಿಸದಿರಿ. ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಅಥವಾ ಅವರ ಸಲಹೆಯಂತೆ ತಜ್ಞ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರೊಂದಿಗೆ, ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸುವ ಮೂಲಕ ನಿಶ್ಚಿಂತರಾಗಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 









 


No comments:

Post a Comment