Sunday, November 9, 2014

BURNING TRASH IS DANGEROUS





 
 ತ್ಯಾಜ್ಯಗಳ ಮುಕ್ತ ದಹನ : ಅನಾರೋಗ್ಯಕ್ಕೆ ಆಹ್ವಾನ 

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳಲ್ಲಿ, ಶೇ.೪೦ ರಷ್ಟು ತ್ಯಾಜ್ಯಗಳನ್ನು ಅನಿಯಂತ್ರಿತವಾಗಿ ದಹಿಸಲಾಗುತ್ತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ ಎಂದು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಿಂದ ಬಹಿರಂಗಗೊಂಡಿದೆ. ಈ ರೀತಿಯಲ್ಲಿ ದಹಿಸಲ್ಪಡುವ ತ್ಯಾಜ್ಯಗಳು ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಪರಿಸರದಲ್ಲಿ ಬಿಡುಗಡೆಯಾಗುತ್ತಿರುವ ಮಾನವ ಜನ್ಯ ಜಾಗತಿಕ ಪ್ರದೂಷಕಗಳ ಶೇ.೨೯ ರಷ್ಟಿದೆ!. 

ಅನಿಯಂತ್ರಿತ ಹಾಗೂ ಮುಕ್ತ ತ್ಯಾಜ್ಯಗಳ ದಹನವನ್ನು ವಾಣಿಜ್ಯ ದಹನ ವ್ಯವಸ್ಥೆಯಂತೆ ( ಕಮರ್ಷಿಯಲ್ ಇನ್ಸಿನರೇಟರ್) ನಿಯಂತ್ರಿಸುವುದು ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ.ಈ ಅಧ್ಯಯನವನ್ನು ನಡೆಸಿದ್ದ ಅಮೇರಿಕ ಮೂಲದ ನೇಶನಲ್ ಸೆಂಟರ್ ಫಾರ್ ಅಟ್ಮೋಸ್ಫೆರಿಕ್ ರಿಸರ್ಚ್ ಸಂಸ್ಥೆಯ ಹೇಳಿಕೆಯಂತೆ, ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹಿಸುವಿಕೆಯಿಂದ ಹೊರಸೂಸುವ ಪ್ರದೂಷಕಗಳ ಪ್ರಮಾಣವು,   ಅಭಿವೃದ್ಧಿ ಹೊಂದುತ್ತಿರುವ ಮತ್ತು ಅತ್ಯಧಿಕ ಜನಸಂಖ್ಯೆ ಇರುವ ರಾಷ್ಟ್ರಗಳಾದ ಭಾರತ, ಚೀನಾ, ಬ್ರೆಜಿಲ್, ಮೆಕ್ಸಿಕೊ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳಲ್ಲಿ ಹೆಚ್ಚಿದೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ತ್ಯಾಜ್ಯಗಳ ದಹನ

ನಿಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳಾದ ಕಾಗದ, ನಿರುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳು, ನಿಷ್ಪ್ರಯೋಜಕ ಬ್ಯಾಟರಿಗಳು, ಪೈಂಟ್, ಎಣ್ಣೆ, ವಿದ್ಯುತ್ ಬಲ್ಬ್, ಹಳೆಯ ಬಟ್ಟೆಬರೆಗಳೇ ಮುಂತಾದ ನಿರುಪಯುಕ್ತ ವಸ್ತುಗಳನ್ನು ಬೆಂಕಿ ಹಚ್ಚಿ ಸುಡುವ ಮೂಲಕ ಸುಲಭದಲ್ಲೇ ವಿಲೇವಾರಿ ಮಾಡುವ ಹವ್ಯಾಸವಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಮಂದಿಯೊಂದಿಗೆ ನೆರೆಕರೆಯ ನಿವಾಸಿಗಳ ಆರೋಗ್ಯಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸುವುದೆಂದು ನಿಮಗೂ ತಿಳಿದಿರಲಾರದು. ಅದರಲ್ಲೂ ವಿಶೇಷವಾಗಿ ಹಸುಗೂಸುಗಳು, ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿಯರ ಪಾಲಿಗೆ " ಧೂಮಕೇತು " ವಿನಂತೆ ಕಾಡಬಲ್ಲ ಈ ದಹನಕ್ರಿಯೆಯಿಂದ ಉದ್ಭವಿಸುವ ಅಪಾಯಕಾರಿ ಅನಿಲಗಳು, ಅನೇಕ ವಿಧದ ಗಂಭೀರ ಮತ್ತು ಮಾರಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಈ ಧೂಮದಲ್ಲಿ ಏನಿದೆ?

ನೀವು ತ್ಯಾಜ್ಯಗಳನ್ನು ಬೆಂಕಿ ಹಚ್ಚಿ ಸುಡುವಾಗ ಫೋರ್ಮಾಲ್ ಡಿಹೈಡ್, ಹೈಡ್ರೋಜನ್ ಕ್ಲೋರೈಡ್, ಸಲ್ಫರ್ ಡೈಆಕ್ಸೈಡ್, ಡೈಆಕ್ಸಿನ್,ಮತ್ತು ಫುರಾನ್ ಇತ್ಯಾದಿ ಅಪಾಯಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಡೈಆಕ್ಸಿನ್ ಮತ್ತು ಫುರಾನ್ ಅನಿಲಗಳು ಕ್ಯಾನ್ಸರ್ ಕಾರಕವೆಂದು ಗುರುತಿಸಲ್ಪಟ್ಟಿವೆ.೨ ರಿಂದ ೪೦ ಮನೆಗಳಲ್ಲಿ ಮುಕ್ತವಾಗಿ ದಹಿಸುವ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫುರಾನ್ ಗಳ ಪ್ರಮಾಣವು, ಆಧುನಿಕ ಇನ್ಸಿನರೇಟರ್ ಒಂದರಲ್ಲಿ ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ೨೦೦ ಟನ್ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫುರಾನ್ ಗಳ ಪ್ರಮಾಣದಷ್ಟೇ ಆಗಿರುತ್ತವೆ!.ಏಕೆಂದರೆ ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ಗರಿಷ್ಠ ಉಷ್ಣತೆಯಲ್ಲಿ ದಹಿಸಲಾಗುತ್ತದೆ. ಆದರೆ ಮುಕ್ತವಾಗಿ ತ್ಯಾಜ್ಯಗಳನ್ನು ದಹಿಸುವಾಗ ಉಷ್ಣತೆಯ ಪ್ರಮಾಣವು ಇದಕ್ಕಿಂತಲೂ ಸಾಕಷ್ಟು ಕಡಿಮೆಯಿರುತ್ತದೆ. ಇದೇ ಕಾರಣದಿಂದಾಗಿ ಇದು ಸುತ್ತಮುತ್ತಲ ನಿವಾಸಿಗಳ ಆರೋಗ್ಯಕ್ಕೂ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಡೈಆಕ್ಸ್ಸಿನ್ ಮತ್ತು ಫುರಾನ್ ಅನಿಲಗಳನ್ನು ಶ್ವಾಸೋಚ್ಚ್ವಾಸದೊಂದಿಗೆ ಸೇವಿಸಿದಾಗ, ಶ್ವಾಸಕೋಶಗಳಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪನ್ನವಾಗುವುದು. ಈ ಆಮ್ಲದಿಂದಾಗಿ ಶ್ವಾಸನಾಳಗಳಲ್ಲಿ ಸಣ್ಣಪುಟ್ಟ ಹುಣ್ಣುಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಡೈಆಕ್ಸಿನ್ ಮತ್ತು ಫುರಾನ್ ಅನಿಲಗಳು ಅತ್ಯಂತ ವಿಷಕಾರಕಗಳಾಗಿದ್ದು, ಇವುಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಿದರೂ  ಗಂಭೀರ ವ್ಯಾಧಿಗಳಿಗೆ ಅಥವಾ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲವು. 

ಕ್ಯಾನ್ಸರ್ ಕಾರಕ 

ನಿರುಪಯುಕ್ತ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಅತ್ಯಧಿಕ ಉಷ್ಣತೆಯಲ್ಲಿ ದಹನಕ್ರಿಯೆ ಜರಗದ ಕಾರಣದಿಂದಾಗಿ, ಇದರಿಂದ ಉತ್ಪನ್ನವಾಗುವ "ಸೂಕ್ಷ್ಮಾತಿಸೂಕ್ಷ್ಮ ಕಣ" ಗಳು ( ಪಾರ್ಟಿಕ್ಯುಲೇಟ್ ಮ್ಯಾಟ್ಟರ್) ಮನುಷ್ಯರ ಶ್ವಾಸದೊಂದಿಗೆ ಸೇವಿಸಲು ಸೂಕ್ತವಲ್ಲದ ಮತ್ತು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ.ಅಮೇರಿಕಾದಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ, ಮನುಷ್ಯರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಹಾಗೂ ವಾಯುಮಾಲಿನ್ಯಕ್ಕೆ ಮೂಲವೆನಿಸುವ ವಿಷಕಾರಕ ದ್ರವ್ಯಗಳಲ್ಲಿ "ಅಪರಿಪೂರ್ಣ ದಹನಕ್ರಿಯೆ" ಯಿಂದ ಉದ್ಭವಿಸುವ ದ್ರವ್ಯ- ಅನಿಲಗಳು ಕ್ಯಾನ್ಸರ್ ಕಾರಕವೆಂದು ತಿಳಿದುಬಂದಿದೆ. ಇದಲ್ಲದೇ ಈ ಸೂಕ್ಷ್ಮಾತಿಸೂಕ್ಷ್ಮ ಕಣಗಳು ಕ್ಯಾನ್ಸರ್, ದೀರ್ಘಕಾಲೀನ ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳೊಂದಿಗೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ಮತ್ತಿತರ ಅಂಗಗಳಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ.ನಿಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಿದ ತುಸು ದೊಡ್ಡ ಗಾತ್ರದ ಕಣಗಳನ್ನು ಕೆಮ್ಮುವಾಗ ಅಥವಾ ಶೀನುವಾಗ ಹೊರಹಾಕಬಹುದಾದರೂ, ಸಣ್ಣ ಗಾತ್ರದ ಕಣಗಳು ಶರೀರದಲ್ಲೇ ಉಳಿದುಕೊಳ್ಳುವುದರಿಂದ ಅಪಾಯಕಾರಿಯಾಗಿ ಪರಿಣಮಿಸುತ್ತವೆ. 

ಮುಕ್ತವಾಗಿ ತ್ಯಾಜ್ಯಗಳನ್ನು ಸುಡುವಾಗ ಉತ್ಪನ್ನವಾಗುವ ಅನಿಲ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ಹೊರಬೀಳದ ಅಪಾಯಕಾರಿ ದ್ರವ್ಯಗಳು ಬೂದಿಯಲ್ಲಿ  ಉಳಿದುಕೊಳ್ಳುವುದರಿಂದ, ಈ ಬೂದಿಯೂ ಮನುಷ್ಯರಲ್ಲಿ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ. ಈ ಬೂದಿಯಿಂದಾಗಿ ಸಮೀಪದಲ್ಲಿನ ಬಾವಿ ಅಥವಾ ಅನ್ಯ ಜಲಮೂಲಗಳು ಕಲುಷಿತಗೊಳ್ಳುವುದರಿಂದ, ಈ ನೀರನ್ನು ಕುಡಿದ ಮನುಷ್ಯರಿಗೆ ಹಾಗೂ ಇವುಗಳಲ್ಲಿರುವ ಜಲಚರಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ಬಗ್ಗೆ ಬರೆಯುತ್ತಾ ಹೋದಲ್ಲಿ ಹತ್ತಾರು ಪುಟಗಳಷ್ಟು ಪ್ರಮುಖ ವಿಚಾರಗಳಿವೆ. ಇವೆಲ್ಲವನ್ನೂ ಈ ಪುಟ್ಟ ಲೇಖನದಲ್ಲಿ ಬರೆಯುವುದು ಅಸಾಧ್ಯವಾಗಿರುವುದರಿಂದ, ಸಂಕ್ಷಿಪ್ತ ಮಾಹಿತಿಗಳನ್ನು ಮಾತ್ರ ನೀಡಲಾಗಿದೆ. 

ಕೊನೆಯ ಮಾತು 

ನಿಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ವೈವಿಧ್ಯಮಯ ತ್ಯಾಜ್ಯಗಳನ್ನು ಕ್ಷಣಮಾತ್ರದಲ್ಲಿ ಬೆಂಕಿ ಹಚ್ಚಿ ಸುಡಬಹುದಾದರೂ, ಇದರಿಂದ ಸಂಭವಿಸಬಲ್ಲ ಅನಾಹುತಗಳನ್ನು ತಡೆಗಟ್ಟುವುದು ಅಸಾಧ್ಯವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆ ಮಾಡಿ. ಅದರಲ್ಲೂ ಪ್ಲಾಸ್ಟಿಕ್ ಕೈಚೀಲ ಮತ್ತು ಅನ್ಯ ಉತ್ಪನ್ನಗಳ ಬಳಕೆಯನ್ನೇ ನಿಲ್ಲಿಸಿ. ನಿರ್ದಿಷ್ಟ ಗುಣಮಟ್ಟದ ಸ್ವಚ್ಚ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪುನರ್ ಬಳಕೆ, ಪುನರ್ ಆವರ್ತನ ಅಥವಾ ರಸ್ತೆಗಳ ನಿರ್ಮಾಣದಲ್ಲಿ ಬಳಸಬಹುದಾದರೂ, ನಮ್ಮ ರಾಜ್ಯ ಸರ್ಕಾರವು ಈ ಬಗ್ಗೆ ಅವಶ್ಯಕ ಕಾನೂನುಗಳನ್ನೇ ರೂಪಿಸಲು ವಿಫಲವಾಗಿದೆ. ತತ್ಪರಿಣಾಮವಾಗಿ ಪ್ಲಾಸ್ಟಿಕ್ ಮತ್ತು ಅನ್ಯವಿಧದ ತ್ಯಾಜ್ಯಗಳ ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದಲ್ಲಿ, ಇದು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿದೆ. ಇವೆಲ್ಲಾ ಕಾರಣಗಳಿಂದಾಗಿ ನಿಮ್ಮಲ್ಲಿ ಉತ್ಪನ್ನವಾದ ತ್ಯಾಜ್ಯಗಳನ್ನು ನಿಮ್ಮ ವಸತಿ- ವಾಣಿಜ್ಯ ಕಟ್ಟಡಗಳಿಂದ ಸಂಗ್ರಹಿಸುವ ಕಾರ್ಯಕರ್ತರಿಗೆ ತಪ್ಪದೇ ನೀಡುವ ಮೂಲಕ ನಿಮ್ಮ ಮತ್ತು ದೇಶದ ಅನ್ಯ ಪ್ರಜೆಗಳ ಆರೋಗ್ಯವನ್ನು ರಕ್ಷಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  







 


No comments:

Post a Comment