Tuesday, November 4, 2014

RTI ACT : CENTRE MAKES IT TIGHT !






 ಮಾಹಿತಿಹಕ್ಕು ಕಾಯಿದೆ: ಇನ್ನಷ್ಟು ಪ್ರಬಲವಾಗುವುದೇ ?

ಹಿನ್ನೆಲೆ 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ದೊರೆತಿದ್ದರೂ, ಸುಮಾರು ಆರು ದಶಕಗಳ ಕಾಲ ದೇಶದ ಪ್ರಜೆಗಳಿಗೆ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ " ಸರ್ಕಾರಿ ರಹಸ್ಯಗಳ ಅಧಿನಿಯಮ- ೧೯೨೩ " ರಂತೆ, ಸರ್ಕಾರದ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು!. 

ಆದರೆ ಯು.ಪಿ.ಎ ಸರ್ಕಾರವು ತಳೆದಿದ್ದ ದಿಟ್ಟ ನಿರ್ಧಾರದ ಪರಿಣಾಮವಾಗಿ ಅಕ್ಟೋಬರ್ ೧೨,೨೦೦೫ ರಂದು ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫ ಅಧಿನಿಯಮವು ಜಾರಿಗೆಬಂದಿತ್ತು. ಪ್ರಜಾಪ್ರಭುತ್ವದಲ್ಲಿ " ಪ್ರಭು " ಎನಿಸಿರುವ ಮತದಾರನಿಗೆ ಸರ್ಕಾರ ನೀಡಿದ್ದ ಅತ್ಯುತ್ತಮ ಕೊಡುಗೆ ಇದಾಗಿತ್ತು. 

ನೂತನ ಸರ್ಕಾರದ ನಿರ್ಧಾರ 

ದೇಶಾದ್ಯಂತ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಒಂಬತ್ತು ವರ್ಷಗಳೇ ಸಂದಿವೆ. ಈ ಕಾಯಿದೆಯು ನೈಜ ಪ್ರಜಾಪ್ರಭುತ್ವದಲ್ಲಿ ದೇಶದ ಪ್ರಜೆಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಅಂತೆಯೇ ಮಾಹಿತಿ ಪಡೆಯುವ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಅನೇಕ ಹಗರಣಗಳನ್ನು ಬಯಲಿಗೆಳೆದಿದ್ದ ಕಾರ್ಯಕರ್ತರನ್ನು ದಮನಿಸುವ ಹಾಗೂ ಈ ಕಾಯಿದೆಯನ್ನೇ ದುರ್ಬಲಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚಿಗೆ ಅಧಿಕಾರದ ಗದ್ದುಗೆಯನ್ನೆರಿದ ಮೋದಿಯವರ ಸರ್ಕಾರವು, ಮಾಹಿತಿಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಿದ ಪ್ರಜೆಗಳು ಅಪೇಕ್ಷಿಸುವ ಮಾಹಿತಿಗಳನ್ನು ಆಯಾ ಸಚಿವಾಲಯದ ಅಥವಾ ತತ್ಸಂಬಂಧಿತ ಸಾರ್ವಜನಿಕ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಆದೇಶಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ನಿಶ್ಚಿತವಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. 

ಸರ್ವೋಚ್ಛ ನ್ಯಾಯಾಲಯದ ಸೂಚನೆ 

ವಿಶೇಷವೆಂದರೆ ಕೇಂದ್ರ ಸರ್ಕಾರದ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ದೇಶದ ಸರ್ವೋಚ್ಛ ನ್ಯಾಯಾಲದಲ್ಲಿ ವಕೀಲರೊಬ್ಬರು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದಕ್ಕೆ ಸಂಬಂಧಿಸಿದಂತೆ, ಮೂವರು ನ್ಯಾಯಮೂರ್ತಿಗಳ ಪೀಠವು ಮಾಹಿತಿ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಮಹತ್ವಪೂರ್ಣ ಸಲಹೆಯೊಂದನ್ನು ನೀಡಿದೆ. ಈ ಪೀಠವು ಮಾಹಿತಿ ಹಕ್ಕು ಕಾಯಿದೆಯನ್ವಯ ಅಪೇಕ್ಷಿತ ಮಾಹಿತಿಯನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ನೀಡಲು ಸಾಧ್ಯವೇ ಎನ್ನುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ. ಈ ವಿಚಾರದ ಬಗ್ಗೆ ಮುಂದಿನ ಮೂರು ತಿಂಗಳುಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸುವಂತೆ ಆದೇಶಿಸಿದೆ. 

ಸರ್ವೋಚ್ಛ ನ್ಯಾಯಾಲಯದ ಅನಿಸಿಕೆಯಂತೆ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಒಂಬತ್ತು ವರ್ಷಗಳೇ ಕಳೆದಿದ್ದರೂ, ಈ ಕಾಯಿದೆಯನ್ವಯ ಕಡ್ಡಾಯವಾಗಿ ಜಾರಿಗೊಳಿಸಬೇಕಿದ್ದ ಅನೇಕ  ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವುದು, ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಿಸಿದೆ.

ಅಂತರ್ಜಾಲ ತಾಣದಲ್ಲಿ ಮಾಹಿತಿ 

೨೦೦೫ ರಲ್ಲಿ ಈ ಕಾಯಿದೆ ಜಾರಿಗೊಂಡ ಬಳಿಕ ನಿರ್ದಿಷ್ಟ ಮಾಹಿತಿಗಳನ್ನು ಅಪೇಕ್ಷಿಸಿ, ನಿಗದಿತ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಿದ ನಾಗರಿಕರಿಗೆ ಅಂಚೆಯ ಮೂಲಕ ಮಾಹಿತಿಯನ್ನು ಒದಗಿಸಲಾಗುತ್ತಿತ್ತು. ಹಾಗೂ ಇದಕ್ಕಾಗಿ ನಿಗದಿತ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಿತ್ತು. ಇದೀಗ ಕೇಂದ್ರ ಸರ್ಕಾರ ನಿರ್ಧರಿಸುವಂತೆ ಹಾಗೂ ಸರ್ವೋಚ್ಛ ನ್ಯಾಯಾಲಯವು ಅಪೇಕ್ಷಿಸುವಂತೆ, ಅಪೇಕ್ಷಿತ ಮಾಹಿತಿಗಳನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅರ್ಥಾತ್, ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದಲ್ಲಿ ಇದೇ ಮಾಹಿತಿಯನ್ನು ಅಪೇಕ್ಷಿಸುವ ಇತರ ನಾಗರಿಕರು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ. ತಾವು ಅಪೇಕ್ಷಿಸುವ ಮಾಹಿತಿಯು ನಿರ್ದಿಷ್ಟ ಸಚಿವಾಲಯ ಆಥವಾ ಸಾರ್ವಜನಿಕ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಲಭ್ಯವಿದೆಯೇ ಎಂದು ಪರಿಶೀಲಿಸಿದ ಬಳಿಕ, ಇದು ಲಭ್ಯವಿಲ್ಲದೇ ಇದ್ದಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುವುದು. ಅಕ್ಟೋಬರ್ ೩೧ ರಂದು ಜಾರಿಗೊಂಡಿದ್ದ ಈ ಆದೇಶದಿಂದಾಗಿ ಸಾರ್ವಜನಿಕ ಪ್ರಾಧಿಕಾರಗಳ ಹೊರೆಯು ಕಡಿಮೆಯಾಗುವುದರೊಂದಿಗೆ, ಸಾಕಷ್ಟು ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ. ಇದಕ್ಕೂ ಮಿಗಿಲಾಗಿ ತಮಗೆ ಬೇಕಿದ್ದ ಮಾಹಿತಿಯು ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದಲ್ಲಿ, ಮಾಹಿತಿಹಕ್ಕು ಕಾಯಿದೆಯಂತೆ ಅರ್ಜಿಯನ್ನು ಸಲ್ಲಿಸಿ, ಈ ಮಾಹಿತಿಯನ್ನು ಪಡೆದುಕೊಳ್ಳಲು ೩೦ ರಿಂದ ೪೦ ದಿನಗಳ ಕಾಲ ಕಾಯಬೇಕಾದ ಹಾಗೂ ಮಾಹಿತಿ ದೊರೆಯದೇ ಇದ್ದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಮತ್ತು ಈ ಪ್ರಾಧಿಕಾರದಿಂದಲೂ ಮಾಹಿತಿ ಲಭ್ಯವಾಗದಿದ್ದಲ್ಲಿ, ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬೇಕಾದ ಸಂಕಷ್ಟದಿಂದ  ಅರ್ಜಿದಾರರನ್ನು ಪಾರುಮಾಡುತ್ತದೆ. ಅದೇ ರೀತಿಯಲ್ಲಿ ಈ ಮಾಹಿತಿಗಳು ಅಂತರ್ಜಾಲ ತಾಣದಲ್ಲಿ ಪ್ರಕಟವಾಗುವುದರಿಂದ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸತ್ಯಕ್ಕೆ ದೂರವಾದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡುವ ಸಾಧ್ಯತೆಗಳನ್ನು ತಡೆಗಟ್ಟುತ್ತದೆ.  

ಕೇಂದ್ರ ಸರ್ಕಾರದ ಆದೇಶದಲ್ಲಿ ಮತ್ತೊಂದು ಪ್ರಮುಖ ಅಂಶವೂ ಇದೆ. ಅಂತರ್ಜಾಲ ತಾಣದಲ್ಲಿ ಎಲ್ಲಾ ಮಾಹಿತಿಗಳನ್ನು ಪ್ರಕಟಿಸಬೇಕೆಂದು ಸೂಚಿಸಿದ್ದರೂ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದ ಮಾಹಿತಿಗಳನ್ನು ಪ್ರಕಟಿಸಬೇಕಾಗಿಲ್ಲ ಎಂದು ಸೂಚಿಸಲಾಗಿದೆ. ಏಕೆಂದರೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವುದು , ಇಂತಹ ವ್ಯಕ್ತಿಗಳಿಗೆ ತೀವ್ರ ಮುಜುಗರಕ್ಕೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದಾಗಿ ಈ ನಿರ್ಧಾರವನ್ನು ತಳೆಯಲಾಗಿದೆ. 

ಅರ್ಜಿದಾರರಿಗೆ ಆಪತ್ತು 

ಇವೆಲ್ಲಕ್ಕೂ ಮಿಗಿಲಾಗಿ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಾಗ, ಇದರೊಂದಿಗೆ ಅರ್ಜಿದಾರರ ಹೆಸರನ್ನು ಪ್ರಕಟಿಸಲು ಸರ್ಕಾರ ನಿರ್ಧರಿಸಿರುವುದು, ನಿಸ್ಸಂದೇಹವಾಗಿಯೂ ಮಾಹಿತಿಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವೆನಿಸಲಿದೆ. ಏಕೆಂದರೆ ದೇಶದ ಅನೇಕ ರಾಜ್ಯಗಳಲ್ಲಿ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಅರ್ಜಿಯನ್ನು ಸಲ್ಲಿಸಿದ್ದ ಅನೇಕ ಸಕ್ರಿಯ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಾಗೂ ಇವರ ಮೇಲೆ ಹಲ್ಲೆ ನಡೆಸಿದ ಹಲವಾರು ಘಟನೆಗಳು ನಡೆದಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಮಾಹಿತಿಹಕ್ಕು ಕಾರ್ಯಕರ್ತರ ಪಾಲಿಗೆ ಪ್ರಾಣಾಪಾಯಕ್ಕೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದ, ದೇಶದ ನಾಗರಿಕರು ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಲು ಹಿಂಜರಿಯುವ ಸಾಧ್ಯತೆಗಳು ಉಜ್ವಲವಾಗಿವೆ. ಜೊತೆಗೆ ಈ ನಿಯಮದಿಂದಾಗಿ ಇದೀಗ ಸರ್ಕಾರವು ಜಾರಿಗೆ ತಂದಿರುವ ನೂತನ ನಿಯಮಗಳು ತಮ್ಮ ಉದ್ದೇಶವನ್ನು ಈಡೇರಿಸಲು ವಿಫಲವಾಗಲಿವೆ. ಈ ಪ್ರಮುಖ ವಿಚಾರವನ್ನು ಕೇಂದ್ರ ಸರ್ಕಾರ ಮತ್ತು ದೇಶದ ಸರ್ವೋಚ್ಛ ನ್ಯಾಯಾಲಯಗಳು ಪರಿಶೀಲನೆ ಮಾಡಿ, ಇದನ್ನು ನಿಶ್ಚಿತವಾಗಿಯೂ ರದ್ದುಪಡಿಸಬೇಕಿದೆ. ತನ್ಮೂಲಕ ಮಾಹಿತಿ ಹಕ್ಕು ಕಾಯಿದೆ ೨೦೦೫ ನ್ನು ದೇಶದ ಪ್ರಜೆಗಳು ಸಮರ್ಪಕವಾಗಿ ಬಳಸುವ ಮೂಲಕ, ಈ ಕಾಯಿದೆಯನ್ನು ಜಾರಿಗೊಳಿಸಿದ್ದ ಮೂಲ ಉದ್ದೇಶ ವಿಫಲವಾಗದಂತೆ ಹಾಗೂ ದೇಶದ ನಾಗರಿಕರಿಗೆ ಇನ್ನಷ್ಟು ಉಪಯುಕ್ತವೆನಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

 

No comments:

Post a Comment