Wednesday, October 29, 2014

SVACHA PUTTOORU ABHIYAANA.......




 ಸ್ವಚ್ಛ ಪುತ್ತೂರು ಅಭಿಯಾನ : ವರ್ತಕರು ಮತ್ತು ಗ್ರಾಹಕರ ಸ್ಪಂದನ 

ಮಾನ್ಯ ಪ್ರಧಾನ ಮಂತ್ರಿಗಳು ಸ್ವತಃ ಭಾಗವಹಿಸುವ ಮೂಲಕ ಚಾಲನೆ ನೀಡಿದ್ದ ಸ್ವಚ್ಚ ಭಾರತ ಅಭಿಯಾನಕ್ಕೆ ದೇಶದ ಪ್ರಜೆಗಳಿಂದ ಅಭೂತಪೂರ್ವ ಸ್ಪಂದನ ದೊರೆತಿದೆ. ಇದರೊಂದಿಗೆ ವಿವಿಧ ರಾಜ್ಯಗಳ ಸ್ಥಳೀಯ ಸಂಸ್ಥೆಗಳು, ಅಯಾಚಿತವಾಗಿ ತಮಗೆ ಲಭಿಸಿದ್ದ ಈ ಅವಕಾಶವನ್ನು ಬಳಸುವ ಮೂಲಕ, ತಮ್ಮ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದ ಸಕಲ ವಿಧದ ತ್ಯಾಜ್ಯಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ನಿರತವಾಗಿವೆ. ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಂದ ಆರಂಭಿಸಿ, ಉನ್ನತ ಹುದ್ದೆಯಲ್ಲಿರುವ ಗಣ್ಯರು, ಸರ್ಕಾರಿ ನೌಕರರು- ಅಧಿಕಾರಿಗಳು,  ಖಾಸಗಿ ಹಾಗೂ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಮತ್ತು ಪೌರಕಾರ್ಮಿಕರು  ಮುತುವರ್ಜಿಯಿಂದ ಭಾಗವಹಿಸಿದ್ದರು. ಗಾಂಧೀ ಜಯಂತಿಯಂದು ಅಭಿಯಾನದ ಉದ್ಘಾಟನೆ ಜರಗಿದ ಬಳಿಕ, ಇವರಲ್ಲಿ ಅನೇಕರು ನೇಪಥ್ಯಕ್ಕೆ ಸರಿದಿದ್ದರು. ಆದರೆ ಸಾಮಾಜಿಕ ಕಳಕಳಿಯುಳ್ಳ ಜನರು ಮತ್ತು ಸ್ವಯಂ ಸೇವಾ ಸಂಘಟನೆಗಳ ಸದಸ್ಯರು, ಸ್ವಚ್ಛತಾ ಅಭಿಯಾನವನ್ನು ಕ್ರಮಬದ್ಧವಾಗಿ ಜರಗಿಸುವ ದೀರ್ಘಾವಧಿ ಯೋಜನೆಗಳನ್ನು ಹಮ್ಮಿಕೊಂಡು, ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಶ್ರಮಿಸುತ್ತಿದ್ದಾರೆ.

ಸ್ವಚ್ಛ ಪುತ್ತೂರು 

 ಇದೇ ಸಂದರ್ಭದಲ್ಲಿ " ಸ್ವಚ್ಛ ಪುತ್ತೂರು " ಅಭಿಯಾನವನ್ನು ಆರಂಭಿಸಿರುವ ಪುರಸಭೆಗೆ, ಸ್ಥಳೀಯರ ಸಹಕಾರ ಲಭಿಸುತ್ತಿದೆ. ಸ್ಥಳೀಯ ವರ್ತಕ ಸಂಘದ ವತಿಯಿಂದ ದರ್ಭೆ ವೃತ್ತದಿಂದ ಆರಂಭಿಸಿ, ಬೊಳುವಾರಿನ ಕೂಡುರಸ್ತೆಯ ವರೆಗಿನ ನಗರದ ಪ್ರಧಾನ ರಸ್ತೆಯನ್ನು ಸ್ವಚ್ಚಗೊಳಿಸುವ ಆಶ್ವಾಸನೆ ದೊರೆತಿದೆ. ತದನಂತರ ಈ ರಸ್ತೆಯನ್ನು ಸ್ವಚ್ಚವಾಗಿ ಇರಿಸಬೇಕಾದ ಹೊಣೆಗಾರಿಕೆಯು ಸ್ಥಳೀಯ ನಿವಾಸಿಗಳ ಮೇಲಿರುತ್ತದೆ. ಈ ಅನುಕರಣೀಯ ಸೇವೆಗೆ ಪುರಸಭೆಯ ಹಸಿರು ನಿಶಾನೆ ದೊರಕಿದ್ದು, ತನ್ನ ಸಹಕಾರವನ್ನು ನೀಡಲು ಸಮ್ಮತಿಸಿದೆ. ಆದರೆ ಪುತ್ತೂರಿನ ವರ್ತಕ ಸಂಘದ ಸದಸ್ಯರು ಇದರೊಂದಿಗೆ ತ್ಯಾಜ್ಯಗಳ ಉತ್ಪಾದನೆಯನ್ನೇ ನಿಯಂತ್ರಿಸಬಲ್ಲ ಕೆಲವೊಂದು ಉಪಕ್ರಮಗಳನ್ನು ಅನುಷ್ಠಾನಗೊಳಿಸಿದಲ್ಲಿ, ಪುತ್ತೂರು ನಗರವನ್ನು ಸದಾ ಸ್ವಚ್ಛವಾಗಿರಿಸುವುದು ಸುಲಭಸಾಧ್ಯ ಎನಿಸುವುದರಲ್ಲಿ ಸಂದೇಹವಿಲ್ಲ.

ಪುನರ್ ಬಳಕೆ- ನಿಯಂತ್ರಣ 

 ಉದಾಹರಣೆಗೆ ಜರ್ಮನಿ ದೇಶದಲ್ಲಿ ಉತ್ಪನ್ನವಾಗುವ ಶೇ.೯೫ ರಷ್ಟು ಘನ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಲಾಗುತ್ತಿದೆ. ಅಂತೆಯೇ ಅನೇಕ ವಿಧದ ತ್ಯಾಜ್ಯಗಳ ಉತ್ಪಾದನೆಯನ್ನು ತಡೆಗಟ್ಟಲು, ನಿರ್ದಿಷ್ಠ ಮಾರ್ಗೋಪಾಯಗಳನ್ನೂ ಅನುಸರಿಸಲಾಗುತ್ತದೆ. ಇವುಗಳಲ್ಲಿ ಗ್ರಾಹಕರು ಖರೀದಿಸಿದ ಯಾವುದೇ ಉತ್ಪನ್ನವನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್, ಕಾಗದ ಮತ್ತು ಥರ್ಮೊಕೂಲ್ ಇತ್ಯಾದಿಗಳನ್ನು, ಇದನ್ನು ಪೂರೈಕೆ ಮಾಡಿದ ವರ್ತಕರೇ ಮರಳಿ ಕೊಂಡೊಯ್ಯಬೇಕಾಗುವುದು. ಹಾಗೂ ಇವುಗಳನ್ನು ತಪ್ಪದೇ ( ಸಾಧ್ಯವಿರುವಷ್ಟು ಕಾಲ )ಮರುಬಳಕೆ ಮಾಡಬೇಕಾಗುವುದು. ಇಂತಹ ವಿಶಿಷ್ಠ ವಿಧಾನದ ಮೂಲಕ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ, ಇವುಗಳನ್ನು ಪುನರ್ ಆವರ್ತನಗೊಳಿಸುವ ಖರ್ಚುವೆಚ್ಚಗಳನ್ನೂ ಉಳಿಸಬಹುದಾಗಿದೆ. 

ಜರ್ಮನಿಯ ಮಾದರಿಯನ್ನು ಭಾರತೀಯರು ಅನುಸರಿಸುವುದು ನಿಶ್ಚಿತವಾಗಿಯೂ ಅಸಾಧ್ಯವೇನಲ್ಲ. ಇದರೊಂದಿಗೆ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡಬಲ್ಲ ಅನ್ಯ ವಿಧಾನಗಳನ್ನು ಅನುಷ್ಠಾನಗೊಳಿಸಿದಲ್ಲಿ, ಅಗಾಧ ಪ್ರಮಾಣದ ತ್ಯಾಜ್ಯಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿ ಸಾಗಿಸಿ, ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ಖರ್ಚುವೆಚ್ಚಗಳು ಉಳಿತಾಯವಾಗಲಿವೆ. ಇದಲ್ಲದೇ ಈಗಾಗಲೇ ತುಂಬಿತುಳುಕುತ್ತಿರುವ ಲ್ಯಾಂಡ್ ಫಿಲ್ ಸೈಟ್ ಗಳು, ಇನ್ನಷ್ಟು ವರ್ಷಗಳ ಕಾಲ ಬಳಸಲು ದೊರೆಯಲಿವೆ. 

ಉತ್ಪಾದನೆಯ ನಿಯಂತ್ರಣ 

ಪ್ರಸ್ತುತ ಪುತ್ತೂರಿನ ವರ್ತಕ ಸಂಘದವರು ಪ್ರಧಾನ ರಸ್ತೆಯನ್ನು ಸ್ವಚ್ಛಗೊಳಿಸುವುದರೊಂದಿಗೆ, ರಸ್ತೆಬದಿಗಳಲ್ಲಿ ಮತ್ತೆ ತ್ಯಾಜ್ಯಗಳು ರಾಶಿಬೀಳದಂತೆ ತಡೆಗಟ್ಟುವ ಕೆಲವೊಂದು ಉಪಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಉಪಕ್ರಮಗಳಲ್ಲಿ ಗ್ರಾಹಕರು ಯಾವುದೇ ವಸ್ತುವಿನ ಖರೀದಿಗೆ ಬರುವಾಗ ಬಟ್ಟೆಯ ಕೈಚೀಲವನ್ನು ತರಬೇಕು ಹಾಗೂ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಸೂಚಿಸುವ ಫಲಕಗಳನ್ನು ತಮ್ಮ ಮಳಿಗೆಗಳಲ್ಲಿ ಪ್ರದರ್ಶಿಸಬೇಕು. 


ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆ ಮಾಡಬಲ್ಲ ಇತರ ಅನೇಕ ವಿಧಾನಗಳಲ್ಲಿ ಒಂದು ವಿಧಾನ ಇಂತಿದೆ. ಇದೀಗ ಗ್ರಾಹಕರು ಖರೀದಿಸುವ ಅಕ್ಕಿಯನ್ನು ( ಮತ್ತಿತರ ವಸ್ತುಗಳನ್ನು ) ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಾರಾಟಮಾಡಲಾಗುತ್ತಿದೆ. ೫, ೧೦, ೨೫ ಮತ್ತು ೫೦ ಕಿಲೋ ಚೀಲಗಳಲ್ಲಿ ಅಕ್ಕಿ ಮತ್ತಿತರ ಸರಕುಗಳನ್ನು ಸರಬರಾಜು ಮಾಡುವ ವಿವಿಧ ಸಂಸ್ಥೆಗಳು, ತಮ್ಮ ಉತ್ಪನ್ನವನ್ನು ಖರೀದಿಸಿದ ಗ್ರಾಹಕರು ಸುಸ್ಥಿತಿಯಲ್ಲಿರುವ ಚೀಲವನ್ನು ಮರಳಿ ವರ್ತಕರಿಗೆ ನೀಡಿದಲ್ಲಿ, ಅವರು ಖರೀದಿಸುವ ಮತ್ತೊಂದು ಚೀಲ ಅಕ್ಕಿಯ ಬೆಲೆಯಲ್ಲಿ ೫ ಅಥವಾ ೧೦ ರೂ.ಗಳ ರಿಯಾಯಿತಿಯನ್ನು ನೀಡಬೇಕಾಗುವುದು. ಇದೇ ರೀತಿಯಲ್ಲಿ ಇತರ ದಿನಬಳಕೆಯ ವಸ್ತುಗಳ ಖಾಲಿ ಚೀಲಗಳನ್ನುಗ್ರಾಹಕರಿಂದ ಮರಳಿಪಡೆದು ಮತ್ತೆ ಬಳಸಬಹುದಾಗಿದೆ.ಇದರಿಂದಾಗಿ ಈ ಪ್ಲಾಸ್ಟಿಕ್ ಚೀಲಗಳು ತ್ಯಾಜ್ಯಗಳ ರೂಪದಲ್ಲಿ ನಿರುಪಯುಕ್ತವೆನಿಸುವುದನ್ನು ತಡೆಗಟ್ಟಬಹುದಾಗಿದೆ. ಅದೇ ರೀತಿಯಲ್ಲಿ ಗ್ರಾಹಕರಿಗೆ ರೆಫ್ರಿಜರೇಟರ್ ಮಾರಾಟ ಮಾಡಿದ ವರ್ತಕರು ಇದನ್ನು ಗ್ರಾಹಕರ ಮನೆಗೆ ತಲುಪಿಸಿದ ಬಳಿಕ, ರೆಫ್ರಿಜರೇಟರ್ ಪ್ಯಾಕ್ ಮಾಡಿರುವ ಥರ್ಮೊಕೂಲ್, ಪ್ಲಾಸ್ಟಿಕ್ ಕವಚ ಮತ್ತು ರಟ್ಟಿನ ಪೆಟ್ಟಿಗೆಯನ್ನು ತಾವೇ ಮರಳಿ ಕೊಂಡೊಯ್ಯಬೇಕು. ಇದರಿಂದಾಗಿ ಈ ವಸ್ತುಗಳು ತ್ಯಾಜ್ಯಗಳ ರಾಶಿಯನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ.  

ಅಂತೆಯೇ ತ್ಯಾಜ್ಯ ಪ್ಲಾಸ್ಟಿಕ್ ಚೀಲಗಳ ಪ್ರಮಾಣವನ್ನು ನಿಯಂತ್ರಿಸಲು, ದಿನಬಳಕೆಯ ಪ್ರತಿಯೊಂದು ಸಾಮಾಗ್ರಿಗಳನ್ನು ಪ್ಲಾಸ್ಟಿಕ್  ಚೀಲಗಳಲ್ಲಿ ಕಟ್ಟಿ ಕೊಡುವುದನ್ನು ವರ್ತಕರು ನಿಲ್ಲಿಸಬೇಕಾಗುವುದು. ಏಕೆಂದರೆ ಆಲೂಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಮತ್ತಿತರ ಕೆಲ ಸಾಮಾಗ್ರಿಗಳನ್ನು ನೇರವಾಗಿ ಬಟ್ಟೆಯ ಚೀಲಗಳಲ್ಲಿ ಹಾಕಬಹುದಾಗಿದೆ ಹಾಗೂ ಅನ್ಯ ಕೆಲ ವಸ್ತುಗಳನ್ನು ಕಾಗದದಲ್ಲಿ ಕಟ್ಟಿಕೊಡುವುದು ಹಿತಕರವೆನಿಸಲಿದೆ. ಇದು ತರಕಾರಿ ಮತ್ತು ಹಣ್ಣು ಹಂಪಲುಗಳಿಗೂ ಅನ್ವಯಿಸುತ್ತದೆ.ಅದೇ ರೀತಿಯಲ್ಲಿ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳುವ ಗ್ರಾಹಕರಿಂದ ಪ್ರತಿಯೊಬ್ಬ ವರ್ತಕರು ಇದಕ್ಕಾಗಿ ನಿಗದಿತ ಶುಲ್ಕವನ್ನು ವಸೂಲು ಮಾಡಲು ಆರಂಭಿಸಿದಲ್ಲಿ, ಸ್ವಾಭಾವಿಕವಾಗಿಯೇ ಗ್ರಾಹಕರು ಬಟ್ಟೆಯ ಚೀಲವನ್ನು ತರುವ ಹವ್ಯಾಸವನ್ನು ರೂಢಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಕೇವಲ ಉದಾಹರಣೆಗಾಗಿ ನಮೂದಿಸಿರುವ ಈ ಉಪಕ್ರಮಗಳೊಂದಿಗೆ ಇನ್ನಿತರ ಉಪಯುಕ್ತ ಉಪಕ್ರಮಗಳನ್ನು ಅನುಸರಿಸುವ ಮೂಲಕ, ಪ್ರತಿಯೊಬ್ಬ ವರ್ತಕರು ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡಲು ನೆರವಾದಲ್ಲಿ, ನಾವಿಂದು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ನಿಸ್ಸಂದೇಹವಾಗಿ ಕಡಿಮೆಮಾಡಬಹುದಾಗಿದೆ. ಹಾಗೂ ಪ್ರತಿಯೊಬ್ಬ ವರ್ತಕರು ಮತ್ತು ವಿಶೇಷವಾಗಿ ಗ್ರಾಹಕರು ಈ ವಿಚಾರದಲ್ಲಿ ಸಹಕರಿಸಿದರೆ,ಸ್ವಚ್ಛ ಪುತ್ತೂರು ಅಭಿಯಾನವು ಫಲಪ್ರದ ಎನಿಸುವುದರಲ್ಲಿ ಸಂದೇಹವಿಲ್ಲ.

ಪುರಸಭೆಯ ಪಾತ್ರ 

ಸುಮಾರು ೩೩ ಕಿ.ಮೀ. ವಿಸ್ತೀರ್ಣವಿರುವ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಸಂಗ್ರಹಿಸುವ ಹೊಣೆಗಾರಿಕೆ ಪುರಸಭೆಯ ಮೇಲಿದೆ. ಇವುಗಳಲ್ಲಿ ಪುನರ್ ಬಳಕೆ ಅಥವಾ ಆವರ್ತನಗೊಳಿಸಲು ಸಾಧ್ಯವಿರುವ ತ್ಯಾಜ್ಯಗಳನ್ನು ಅದಕ್ಕಾಗಿಯೇ ವಿನಿಯೋಗಿಸಬೇಕಾಗಿದೆ. ಅದೇ ರೀತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವ ತಂತ್ರಜ್ಞಾನವನ್ನು ಸ್ಥಳೀಯ ರಸ್ತೆಗಳ ನಿರ್ಮಾಣದಲ್ಲಿ ಬಳಸಿದಲ್ಲಿ, ನಿರ್ಮಾಣದ ವೆಚ್ಚ ಕಡಿಮೆ ಆಗುವುದರೊಂದಿಗೆ, ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಯೂ ಆಗುವುದು. ಇದಕ್ಕೂ ಮಿಗಿಲಾಗಿ ದೇಶದ ಕೆಲ ರಾಜ್ಯಗಳು ಮತ್ತು ಅನೇಕ ಸ್ಥಳೀಯ ಸಂಸ್ಥೆಗಳು ಈಗಾಗಲೇ ಜಾರಿಗೊಳಿಸಿರುವ ಕಾನೂನಿನಂತೆ, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನೇ ನಿಷೇಧಿಸಿದಲ್ಲಿ, ಕನಿಷ್ಠ ಪಕ್ಷ ಪ್ಲಾಸ್ಟಿಕ್ ತ್ಯಾಜ್ಯಗಳ ಹಾವಳಿಯೂ ನಿಶ್ಚಿತವಾಗಿ ಕಡಿಮೆಯಾಗುವುದು. 

ಅಂತಿಮವಾಗಿ ಹೇಳುವುದಾದಲ್ಲಿ ಎರಡು ಕೈಗಳು ಸೇರದೇ ಚಪ್ಪಾಳೆಯಾಗದು ಎನ್ನುವ ಮಾತಿನಂತೆ, ಪುರಸಭೆಯ ಸದಸ್ಯರು, ಅಧಿಕಾರಿಗಳು, ಸಿಬಂದಿಗಳು ಮತ್ತು ನಾಗರಿಕರು ಕೈಜೋಡಿಸದೇ, ತ್ಯಾಜ್ಯಗಳ ಸಮಸ್ಯೆ ಬಗೆಹರಿಯದು!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೮-೧೦-೨೦೧೪ ರ ಸುದಿನ ಸಂಚಿಕೆಯಲ್ಲಿ ಪ್ರಕಟಿತ ಲೇಖನ.



No comments:

Post a Comment