Monday, October 13, 2014

KANDALLI KASAVANNU ESEDAVARIGE DANDA- JAILUSHIKSHE !




 ಕಂಡಲ್ಲಿ ಕಸವನ್ನು ಎಸೆದವರಿಗೆ ದಂಡ - ಜೈಲುಶಿಕ್ಷೆ !

ಸ್ವಚ್ಛ ಭಾರತ ಅಭಿಯಾನ ಆರಂಭವಾಗುವುದಕ್ಕೆ ಮುನ್ನ, ಅನೇಕ ಜನರು ಕಂಡಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಗಣನೀಯ ಪ್ರಮಾಣದ ದಂಡವನ್ನು ವಿಧಿಸಬೇಕೆಂದು ವಾದಿಸಿದ್ದರು. ಇನ್ನು ಕೆಲವರಂತೂ ಇಂತಹ ಹೇಯ ಕೃತ್ಯಗಳನ್ನು ಎಸಗುವವರಿಗೆ ಜೈಲು ಶಿಕ್ಷೆ ನೀಡಬೇಕೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ೨೦೧೦ ರಲ್ಲೇ ತಳೆದಿದ್ದ ನಿಲುವಿನಂತೆ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಭಾರತೀಯ ದಂಡ ಸಂಹಿತೆಯಂತೆ ದಂಡ ಮತ್ತು ಜೈಲುಶಿಕ್ಷೆಗಳನ್ನು ವಿಧಿಸುವಂತೆ ಆದೇಶಿಸಿತ್ತು. ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರತ್ಯಕ್ಷವಾಗಿದ್ದ ಈ ವರದಿಯು, ತದನಂತರ ಪತ್ರಿಕೆಗಳಿಗೆ ಗ್ರಾಸವೆನಿಸಿರಲೇ ಇಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಧಿಕತಮ ಕನ್ನಡಿಗರಿಗೆ ಇಂತಹ ಸರ್ಕಾರಿ ಆದೇಶದ ನೆನಪಿಲ್ಲ.

ಕಾನೂನುಗಳ ಅನುಷ್ಠಾನ 

ಕಾನೂನು ಒಂದು ಕತ್ತೆ ಎನ್ನುವ ಮಾತನ್ನು ನೀವೂ ಕೇಳಿರಲೇಬೇಕು. ಏಕೆಂದರೆ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸುವ ಸಲುವಾಗಿ ಸರ್ಕಾರವೇ ರೂಪಿಸಿರುವ ಕಾನೂನುಗಳು ಇರುವುದೇ ಮುರಿಯುವ ಸಲುವಾಗಿ ಎನ್ನುವುದನ್ನು ಸಮರ್ಥಿಸುವಂತಹ ಅನೇಕ ಘಟನೆಗಳನ್ನು ನೀವು ಕಂಡಿರಬೇಕು. ದೇಶದ ಉದ್ದಗಲಕ್ಕೂ ಪ್ರತಿನಿತ್ಯ ಕಾಣಸಿಗುವ ಇಂತಹ ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ವರ್ತಿಸುವ ಪ್ರಜೆಗಳು, ಸಂದರ್ಭೋಚಿತವಾಗಿ ತಾವೂ ಸಣ್ಣಪುಟ್ಟ ಕಾನೂನುಗಳನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ!. 

ನಮ್ಮ ರಾಜ್ಯದ ಪ್ರತಿಯೊಂದು ಸ್ಥಳೀಯ  ಸಂಸ್ಥೆಗಳ ಪಾಲಿಗೆ ಬಗೆಹರಿಸಲಾಗದ ಸಮಸ್ಯೆ ಎನಿಸುತ್ತಿರುವ ತ್ಯಾಜ್ಯ ಸಂಗ್ರಹ - ವಿಲೇವಾರಿಗಳ ಸಂದರ್ಭಗಳಲ್ಲಿ ಉದ್ಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲವೊಂದು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ೨೦೧೦ ರಲ್ಲಿ ಉದ್ದೇಶಿಸಿತ್ತು. ಏಕೆಂದರೆ ರಾಜ್ಯದ ಎಲ್ಲೆಡೆ ಕಾನೂನುಬಾಹಿರವಾಗಿ ಸಾಮಾನ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಹವ್ಯಾಸ ನಿಧಾನವಾಗಿ ಹೆಚ್ಚಲಾರಂಭಿಸಿತ್ತು. ಖಾಲಿ ಜಾಗಗಳು, ರಸ್ತೆ ಬದಿ- ಚರಂಡಿಗಳುಮತ್ತು  ಕೆರೆಕುಂಟೆಗಳಲ್ಲೂ ವಿಸರ್ಜಿಸುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳು, ಆರೋಗ್ಯದ ಮತ್ತಿತರ ಸಮಸ್ಯೆಗಳಿಗೆ ಕಾರಣವೆನಿಸಿತ್ತು.  

ರಾಜ್ಯದ ಅನೇಕ ನಗರ - ಪಟ್ಟಣಗಳಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಯೋಜನೆ ಅದಾಗಲೇ ಆರಂಭಗೊಂಡಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ರಾಶಿಬೀಳುತ್ತಿದ್ದ ತ್ಯಾಜ್ಯಗಳ ಪ್ರಮಾಣ ಮಾತ್ರ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಇದೇ ಕಾರಣದಿಂದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳಿಗೆ ಸುತ್ತೊಲೆಯೊಂದನ್ನು ಕಳಿಸಿದ್ದರು. ಇದರಂತೆ ಪುರಸಭಾ ಘನತ್ಯಾಜ್ಯ ಸಂಗ್ರಹ- ವಿಲೇವಾರಿ ನಿಯಮಗಳಂತೆ, ಸಂಗ್ರಹಿತ ತ್ಯಾಜ್ಯಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವಂತೆ ಆದೇಶಿಸಿದ್ದರು. ಅದೇ ರೀತಿಯಲ್ಲಿ ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯಗಳ ನಿಯಮ ೧೯೯೮  ರಂತೆ, ಎಲ್ಲಾ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚಿಸಿದ್ದರು. 

ಕ್ರಿಮಿನಲ್ ಪ್ರಕರಣ  

ಮುಖ್ಯ ಕಾರ್ಯದರ್ಶಿಯವರು ಸಂಬಂಧಿತ ಅಧಿಕಾರಿಗಳಿಗೆ ಬರೆದಿದ್ದ ಪತ್ರದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೬೮, ೨೬೯, ೨೭೦, ೨೭೭, ೨೭೮, ಮತ್ತು ೨೮೪ ರನ್ವಯ ಸಾರ್ವಜನಿಕ ಆರೋಗ್ಯ, ಸುರಕ್ಷತೆ, ಸೌಲಭ್ಯ, ಸಭ್ಯತೆಮತ್ತು ನೈತಿಕತೆಗಳನ್ನು ಉಲ್ಲಂಘಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಸೂಚಿಸಿದ್ದರು. 

ಇಂತಹ ಪ್ರಕರಣಗಳಲ್ಲಿ ಕನಿಷ್ಠ ೫೦೦ ರೂ. ದಂಡದಿಂದ ಆರಂಭಿಸಿ, ೬ ತಿಂಗಳುಗಳ ಜೈಲುವಾಸದಂತಹ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಈ ಕಾನೂನನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಪರಿಸರ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿತ್ತು. ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಈ ಕಾಯಿದೆಯಂತೆ ಯಾರೊಬ್ಬರಿಗೂ ದಂಡ ಅಥವಾ ಜೈಲು ಶಿಕ್ಷೆಗಳನ್ನು ನೀಡಿದ ವಿಚಾರವು ನಮ್ಮ ಗಮನಕ್ಕೆ ಬಂದಿಲ್ಲ. ಹಾಗೂ ಪ್ರಾಯಶಃ ಇಂತಹ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವ ಜನಸಾಮಾನ್ಯರ ಕೆಟ್ಟ ಹವ್ಯಾಸವು ಅಂತ್ಯಗೊಂಡಿಲ್ಲ!. 

ಕೊನೆಯ ಮಾತು 

ದೇಶದಲ್ಲಿ ಅಸ್ತಿತ್ವದಲ್ಲಿರುವ ಸಕಲ ಕಾನೂನುಗಳನ್ನು ಗೌರವಿಸಿ ಪರಿಪಾಲಿಸುವ ಮನೋಭಾವ ನಮ್ಮ ದೇಶದ ಪ್ರಜೆಗಳಲ್ಲೂ ಇದ್ದಿದ್ದಲ್ಲಿ, ಇಂದು " ಸ್ವಚ್ಚ ಭಾರತ ಅಭಿಯಾನ" ವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುತ್ತಲೇ ಇರಲಿಲ್ಲ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅಂತೆಯೇ ಜನಸಾಮಾನ್ಯರ ಆರೋಗ್ಯದ ಗುಣಮಟ್ಟಗಳು ಉನ್ನತಸ್ಥರದಲ್ಲಿ ಇರುತ್ತಿದ್ದುದರಲ್ಲಿ ಸಂದೇಹವಿಲ್ಲ.

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment