Monday, October 27, 2014

INCREASING AIR POLLUTION........


 

 ವೃದ್ಧಿಸುತ್ತಿರುವ ವಾಯುಮಾಲಿನ್ಯ : ಹೆಚ್ಚುತ್ತಿದೆ ಅನಾರೋಗ್ಯ 

ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಇದೀಗ " ಸ್ವಚ್ಛ ಭಾರತ ಅಭಿಯಾನ " ದ ಅಂಗವಾಗಿ ಅಲ್ಲಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳಿಂದ ತುಂಬಿರುವ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳು ಜರಗುತ್ತಲೇ ಇವೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸಲು ಶೌಚಾಲಯಗಳೇ ಇಲ್ಲದ ಮನೆಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ " ವಾಯು ಮಾಲಿನ್ಯ " ದ ಸಮಸ್ಯೆಯನ್ನು ನಿಯಂತ್ರಿಸುವತ್ತ ಯಾರೊಬ್ಬರೂ ಗಮನಹರಿಸಿದಂತಿಲ್ಲ. ಈ ಗಂಭೀರ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೆ ಇದ್ದಲ್ಲಿ, ದೇಶದ ಪ್ರಜೆಗಳು ಗಂಭೀರ ಹಾಗೂ ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ. 

ವಾಯು ಮಾಲಿನ್ಯ 

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ಜನ- ವಾಹನ ಸಂದಣಿಗಳೊಂದಿಗೆ, ತೀವ್ರ ಸ್ವರೂಪದ ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲ ದಶಕಗಳ ಹಿಂದೆ ದೇಶದ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವಿಶಿಷ್ಟ ಸಮಸ್ಯೆಯು, ಇದೀಗ ತೀವ್ರ ಸಾಂಕ್ರಾಮಿಕ ವ್ಯಾಧಿಗಳಂತೆಯೇ ದೇಶದ ಅನ್ಯ ನಗರ- ಪಟ್ಟಣಗಳಿಗೂ ಹರಡಲಾರಂಭಿಸಿದೆ. ಇರುವೆಗಳ ಸಾಲಿನಂತೆ ಸಂಚರಿಸುವ ವಾಹನಗಳು ಉಗುಳುವ ಅಗಾಧ ಪ್ರಮಾಣದ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವು, ಅನೇಕ ವಿಧದ ಗಂಭೀರ ವ್ಯಾಧಿಗಳ ಸಂಭಾವ್ಯತೆಯನ್ನು ಹೆಚ್ಚಿಸುತ್ತಿದೆ. 

ಮನುಷ್ಯನು ಆರೋಗ್ಯದಿಂದ ಬದುಕಲು ಅತ್ಯವಶ್ಯಕವೆನಿಸುವ ಶುದ್ಧವಾದ ಗಾಳಿಯನ್ನು ಉಸಿರಾಡಲು, ನಮ್ಮ ದೇಶದ ಮಹಾನಗರಗಳಲ್ಲಿಂದು ಆಸ್ಪದವೇ ಇಲ್ಲದಂತಾಗಿದೆ. ಮನುಷ್ಯನಿಗೆ ಮಾರಕವೆನಿಸಬಲ್ಲ ಈ ಸಮಸ್ಯೆಗೆ, ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಇದಕ್ಕೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಳೂ ಪ್ರಮುಖ ಕಾರಣವೆನಿಸಿವೆ. ಇದಲ್ಲದೇ ಸಣ್ಣಪುಟ್ಟ ಹಾಗೂ ಬೃಹತ್ ಉದ್ದಿಮೆಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದ ಸಂಭವಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣವೂ ಸಾಕಷ್ಟು ವೃದ್ಧಿಸುತ್ತಿರುವುದರಿಂದ, ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗೆ ನಡೆಸಿದ್ದ ಅಧ್ಯಯನದಂತೆ, ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೇಜಿಂಗ್ ನಗರವನ್ನು ಪದಚ್ಯುತಗೊಳಿಸಿ, ನಮ್ಮ ದೇಶದ ರಾಜಧಾನಿಯಾಗಿರುವ ದೆಹಲಿಯು ಈ ಸ್ಥಾನದಲ್ಲಿ ವಿರಾಜಮಾನವಾಗಿದೆ. ಇಷ್ಟು ಮಾತ್ರವಲ್ಲ, ಈ ೨೦ ನಗರಗಳಲ್ಲಿ ೧೩ ನಗರಗಳು ಭಾರತದಲ್ಲೇ ಇವೆ!. 

ದ್ವಿಚಕ್ರ ವಾಹನಗಳೇ ಕಾರಣ 

ದೇಶದಲ್ಲಿ ವಾಯುಮಾಲಿನ್ಯದ ಸಮಸ್ಯೆ ಅತಿಯಾಗುತ್ತಿರಲು ಡೀಸೆಲ್ ಇಂಧನವನ್ನು ಬಳಸಿ ಅತಿಯಾಗಿ ಹೊಗೆಯನ್ನು ಉಗುಳುವ ಸಾರಿಗೆ ವಾಹನಗಳೇ ಕಾರಣವೆಂದು ಬಹುತೇಕ ಜನರು ನಂಬಿದ್ದಾರೆ. ಆದರೆ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯು ಕೆಲ ವರ್ಷಗಳ ಹಿಂದೆಯೇ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಂತೆ, ಈ ಸಮಸ್ಯೆ ಉಲ್ಬಣಿಸಲು ಮಿತಿಮೀರಿದ ದ್ವಿಚಕ್ರ ವಾಹನಗಳೇ ಕಾರಣವೆಂದು ತಿಳಿದುಬಂದಿತ್ತು!. 

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಪ್ರದೂಷಣೆ, ವಾಯುಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವೆನಿಸುತ್ತಿರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣ ಮತ್ತು ಕಾರಣಗಳನ್ನು ಪತ್ತೆಹಚ್ಚುವ ಸಲುವಾಗಿ ಈ ಅಧ್ಯಯನವನ್ನು ನಡೆಸಿತ್ತು. ಎನ್ಜೆನ್ ಗ್ಲೋಬಲ್ ಸೊಲ್ಯೂಶನ್ಸ್ ಪ್ರೈವೇಟ್ ಲಿ. ಎನ್ನುವ ಸಂಸ್ಥೆಯು ರಾಜ್ಯದ ಆಯ್ದ ನಗರಗಳಲ್ಲಿ ನಡೆಸಿದ್ದ ಅಧ್ಯಯನದಿಂದಾಗಿ, ವಾಯುಮಾಲಿನ್ಯದ ಸಮಸ್ಯೆ ಉಲ್ಬಣಿಸಲು ದ್ವಿಚಕ್ರ ವಾಹನಗಳೇ ಕಾರಣವೆಂದು ತಿಳಿದುಬಂದಿತ್ತು. 

ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿದ್ದ ಈ ಅಧ್ಯಯನ ಮೂಲಕ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್ ,ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಮುಂತಾದ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣ ಮತ್ತು ಕಾರಣಗಳನ್ನು, ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿ ಪತ್ತೆಹಚ್ಚಲಾಗಿತ್ತು. 

ದುಷ್ಪರಿಣಾಮಗಳು 

ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ ಎನಿಸುವ ಹಸಿರುಮನೆ ಅನಿಲಗಳ ಸೇವನೆಯಿಂದ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಹೃದ್ರೋಗಗಳ ಉಲ್ಬಣಿಸುವಿಕೆ, ಕೆಲವಿಧದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. 


ಈ ಅಧ್ಯಯನದ ಅಂಗವಾಗಿ ಮೇಲೆ ನಮೂದಿಸಿದ ಏಳು ಜಿಲ್ಲೆಗಳಲ್ಲಿ ನೊಂದಾಯಿಸಲ್ಪತ್ತಿರುವ ವಾಹನಗಳ ಸಂಖ್ಯೆ ಮತ್ತು ವೈವಿಧ್ಯತೆಗಳನ್ನು ಪರಿಶೀಲಿಸಿದಾಗ, ದ್ವಿಚಕ್ರ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚಿರುವುದು ಪತ್ತೆಯಾಗಿತ್ತು. ಪ್ರಾಯಶಃ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅಸಮರ್ಪಕವಾಗಿರುವುದೇ ಇದಕ್ಕೆ ಕಾರಣವಾಗಿರಲೂಬಹುದು.ಆದರೆ ಬಲ್ಲವರು ಹೇಳುವಂತೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತದ ಪ್ರಜೆಗಳ ಆದಾಯದ ಪ್ರಮಾಣವೂ ಹೆಚ್ಚುತ್ತಿರುವುದರಿಂದಾಗಿ, ಸ್ವಂತ ಉಪಯೋಗಕ್ಕಾಗಿ ವಾಹನಗಳನ್ನು ಖರೀದಿಸಿ ಬಳಸುವವರ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ. 

೨೦೦೫ ರಲ್ಲಿ ರಾಜ್ಯ ಸರ್ಕಾರವೇ ನಡೆಸಿದ್ದ ಸಮೀಕ್ಷೆಯೊಂದರಂತೆ, ಕರ್ನಾಟಕದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಯು ೧.೨೪ ಕೋಟಿ ಆಗಿತ್ತು. ಇವುಗಳಲ್ಲಿ ಬಡತನದ ರೇಖೆಗಿಂತ ಕೆಳಗಿದ್ದ ಕುಟುಂಬಗಳ ಸಂಖ್ಯೆ ೧.೦೬ ಯಾಗಿತ್ತು. ಆದರೆ ರಾಜ್ಯದ ಅಧಿಕತಮ ಕುಟುಂಬಗಳ ಸದಸ್ಯರ ಬಳಿ ಒಂದು ಅಥವಾ ಅದಕ್ಕೂ ಅಧಿಕ ಸಂಖ್ಯೆಯ ದ್ವಿಚಕ್ರ ವಾಹನಗಳಿದ್ದವು!. ಇದೀಗ ಸುಮಾರು ಹತ್ತು ವರ್ಷಗಳ ಬಳಿಕ ಈ ಸಂಖ್ಯೆಯು ಹಲವಾರು ಪಟ್ಟು ಹೆಚ್ಚಾಗಿರುವುದರಲ್ಲಿ ಸಂದೇಹವಿಲ್ಲ.  

ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲೂ ಸಂಭವಿಸುತ್ತಿರುವ ವಾಯುಮಾಲಿನ್ಯ- ಪರಿಸರ ಪ್ರದೂಷಣೆಗಳಿಗೆ, ಇತರ ಕಾರಣಗಳೊಂದಿಗೆ ಹೆಚ್ಚುತ್ತಿರುವ ದ್ವಿಚಕ್ರ ಮತ್ತು ಅನ್ಯ ವರ್ಗಗಳ ವಾಹನಗಳೂ ಕಾರಣವೆನಿಸುತ್ತಿವೆ ಎನ್ನಲು ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇರೊಂದಿಲ್ಲ. 

ಕೊನೆಯ ಮಾತು 

ಪ್ರಸ್ತುತ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ವಾಯುಮಾಲಿನ್ಯದ ಸಮಸ್ಯೆಯನ್ನೂ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಇದಕಾಗಿ ಸೂಕ್ತ ಕಾಯಿದೆಗಳನ್ನು ರೂಪಿಸಿ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದಕ್ಕೆ ತಪ್ಪಿದಲ್ಲಿ ನಮ್ಮ ಮುಂದಿನ ಸಂತತಿಯು ವಾಯುಮಾಲಿನ್ಯದ ದುಷ್ಪರಿಣಾಮಗಳಿಂದ ಗಂಭೀರ - ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



No comments:

Post a Comment