Wednesday, October 22, 2014

Eat more fruits and vegetables - Prevent heart disease



 

 ಹಣ್ಣು ಹಂಪಲುಗಳ ಸೇವನೆ : ಹೃದ್ರೋಗದಿಂದ ರಕ್ಷಣೆ !

ಇತೀಚಿನ ಕೆಲವರ್ಷಗಳಿಂದ ಜನಸಾಮಾನ್ಯರನ್ನು ಅತಿಯಾಗಿ ಬಾಧಿಸುತ್ತಿರುವ ಮತ್ತು ಅಕಾಲಿಕ ಮರಣಕ್ಕೂ ಕಾರಣವೆನಿಸುತ್ತಿರುವ ಹೃದ್ರೋಗವೊಂದರಿಂದ ಪಾರಾಗಲು, ತುಸು ಅಧಿಕ ಪ್ರಮಾಣದಲ್ಲಿ ಹಣ್ಣು ಹಂಪಲುಗಳನ್ನು ದಿನನಿತ್ಯ ಸೇವಿಸುವುದು ಉಪಯುಕ್ತವೆನಿಸುವುದು ಎಂದು ಯುರೋಪ್ ನಲ್ಲಿ ನಡೆದ ವೈದ್ಯಕೀಯ ಅಧ್ಯಯನದ ವರದಿ ಬಹಿರಂಗಪಡಿಸಿದೆ. ಮಾಸಾಹಾರಿಗಳ ಪಾಲಿಗೆ ಅಪಥ್ಯವೆನಿಸಬಹುದಾದ ಈ ವಿಧಾನವು, ಸಸ್ಯಾಹಾರಿಗಳಿಗೆ ನಿಸ್ಸಂದೇಹವಾಗಿಯೂ ವರದಾನವೆನಿಸಲಿದೆ. 

ಐ.ಎಚ್.ಡಿ ತಡೆಗಟ್ಟಿರಿ 

ಪ್ರತಿನಿತ್ಯ ನಿಗದಿತ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದಲ್ಲಿ ಇಸ್ಕೀಮಿಕ್ ಹಾರ್ಟ್ ಡಿಸೀಸ್ ( ಐ.ಎಚ್.ಡಿ ) ಎಂದು ಕರೆಯಲ್ಪಡುವ ಹೃದ್ರೋಗದಿಂದ ಬಳಲುವ ಮತ್ತು ಹೃದಯಾಘಾತದಿಂದ ಮೃತಪಡುವ ಅಪಾಯವನ್ನು ಕಡಿಮೆಯಾಗಿಸಬಹುದು ಎಂದು ಈ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದರೊಂದಿಗೆ ಸಮತೋಲಿತ ಹಾಗೂ ಆರೋಗ್ಯದಾಯಕ ಆಹಾರಪದಾರ್ಥಗಳ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯ ಪರಿಪಾಲನೆಗಳೂ ಅತ್ಯವಶ್ಯಕ ಎನ್ನುವುದರ ಮಹತ್ವವನ್ನು ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 

ಮನುಷ್ಯನ ಹೃದಯಕ್ಕೆ ನಿರಂತರವಾಗಿ ಶುದ್ಧ ರಕ್ತವನ್ನು ಸರಬರಾಜು ಮಾಡುವ ಕೊರೋನರಿ ಆರ್ಟರಿಗಳ ಒಳಮೈಯ್ಯಲ್ಲಿ ಶೇಖರಿಸಲ್ಪಡುವ ಕೊಬ್ಬಿನ ಅಂಶಗಳಿಂದಾಗಿ, ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕಡಿಮೆಯಾಗುವ ಸ್ಥಿತಿಯನ್ನು ಐ.ಎಚ್.ಡಿ ಎಂದು ಕರೆಯುವರು. ಈ ಸಮಸ್ಯೆಯಿಂದಾಗಿ ಎಂಜೈನಾ ಎಂದು ಕರೆಯಲ್ಪಡುವ ಎದೆನೋವು ಬಾಧಿಸುವ ಮತ್ತು ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಗಂಭೀರ ಹಾಗೂ ಅಪಾಯಕಾರಿ ಸಮಸ್ಯೆಯ ಸಂಭಾವ್ಯತೆಯನ್ನು ಕಡಿಮೆಮಾಡಲು, ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಹಣ್ಣು ಹಂಪಲುಗಳು ಮತ್ತು ತಾಜಾ ತರಕಾರಿಗಳನ್ನು ಸೇವಿಸುವುದು ಉಪಯುಕ್ತವೆನಿಸುವುದು. 

ಯುರೋಪ್ ಖಂಡದ ೮ ದೇಶಗಳ ಸುಮಾರು ೩ ಲಕ್ಷ ಜನರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿತ್ತು. ಪ್ರತಿನಿತ್ಯ ಸುಮಾರು ೬೦೦ ರಿಂದ ೮೦೦ ಗ್ರಾಮ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ತಪ್ಪದೇ ಸೇವಿಸುತ್ತಿದ್ದ ವ್ಯಕ್ತಿಗಳಲ್ಲಿ ಐ.ಎಚ್.ಡಿ ಮತ್ತು ಹೃದಯಾಘಾತದ ಪ್ರಮಾಣಗಳು ಕಡಿಮೆಯಿರುವುದು ಮತ್ತು ಕೇವಲ ೨೦೦ ರಿಂದ ೨೫೦ ಗ್ರಾಮ್ ಸೇವಿಸುತ್ತಿದ್ದವರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದುದು ಈ ಅಧ್ಯಯನದಿಂದ ತಿಳಿದುಬಂದಿತ್ತು. ಅಲ್ಪ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುವವರಲ್ಲಿ ಐ. ಎಚ್. ಡಿ ಹಾಗೂ ತತ್ಪರಿಣಾಮವಾಗಿ ಸಂಭವಿಸಿದ್ದ ಮರಣದ ಪ್ರಮಾಣವು, ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವವರಿಗಿಂತಲೂ ಶೇ.೨೦ ರಷ್ಟು ಹೆಚ್ಚಾಗಿದ್ದಿತು. ವಿಶೇಷವೆಂದರೆ ಸಾಕಷ್ಟು ಕಡಿಮೆ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುತ್ತಿದ್ದವರು, ಈ ಪ್ರಮಾಣವನ್ನು ಸುಮಾರು ೮೦ ಗ್ರಾಮ್ ಗಳಷ್ಟು ಹೆಚ್ಚಿಸಿದಾಗ, ಈ ಸಮಸ್ಯೆಯ ಸಂಭಾವ್ಯತೆಯು ಶೇ.೪ ರಷ್ಟು ಕಡಿಮೆಯಾಗಿತ್ತು ಎನ್ನುವ ಕುತೂಹಲಕಾರಿ ಮಾಹಿತಿಯು ಈ ಅಧ್ಯಯನದಿಂದ ಪತ್ತೆಯಾಗಿತ್ತು. 

ಎಚ್ಚರಿಕೆ 

ಅದೇನೇ ಇರಲಿ, ನೀವು ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ, ಹೃದ್ರೋಗದ ಸಂಭಾವ್ಯತೆಯನ್ನು ಸುಲಭದಲ್ಲೇ ಕಡಿಮೆ ಮಾಡಿಕೊಳ್ಳಬಹುದು ಎಂದು ನಿಶ್ಚಿಂತರಾಗಿ ಇರದಿರಿ. ಏಕೆಂದರೆ ಇದೇ ವರದಿಯಲ್ಲಿ ಆರೋಗ್ಯದಾಯಕ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯ ಪರಿಪಾಲನೆಯೂ ಈ ವಿಚಾರದಲ್ಲಿ ಅತ್ಯಂತ ಮಹತ್ವಪೂರ್ಣವೆನಿಸುತ್ತವೆ ಎಂದು ಉಲ್ಲೇಖಿಸಲಾಗಿದೆ. ಅರ್ಥಾತ್, ಹಿತ-ಮಿತವಾದ, ಅತಿಯಾದ ಕೊಬ್ಬಿನ ಹಾಗೂ ಸಕ್ಕರೆಯ ಅಂಶವಿಲ್ಲದ ಸಸ್ಯಾಹಾರದ ಸೇವನೆ, ಪ್ರತಿನಿತ್ಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ದುಶ್ಚಟಗಳಿಂದ ದೂರವಿರುವುದು ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅನುಕರಿಸುವುದರಿಂದ, ಹೃದ್ರೋಗವನ್ನು ಮಾತ್ರವಲ್ಲ, ಅನೇಕ ಅನ್ಯ ಕಾಯಿಲೆಗಳನ್ನು ದೂರವಿರಿಸಲು ಇದು ಅತ್ಯಂತ ಉಪಯುಕ್ತವೆನಿಸುವುದು. ಇದರೊಂದಿಗೆ ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗ, ಸಂಗೀತ, ಬರಹ, ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತವನ್ನು ಚಾಚುವುದೇ ಮುಂತಾದ ಚಟುವಟಿಕೆಗಳು, ಆರೋಗ್ಯಕರ ಮತ್ತು ಸಂತೃಪ್ತ ಜೀವನಕ್ಕೆ ಬುನಾದಿಯಾಗಲಿವೆ ಎನ್ನುವುದನ್ನು ಮರೆಯದಿರಿ. 

ಕೊನೆಯ ಮಾತು 

ದಿನೇದಿನೇ ಏರುತ್ತಿರುವ ಹಣ್ಣು ಹಂಪಲು ಮತ್ತು ತರಕಾರಿಗಳ ಬೆಲೆಗಳೊಂದಿಗೆ, ಇವಗಳನ್ನು ಬೆಳೆಯುವಾಗ ಮತ್ತು ತದನಂತರ ಸಂರಕ್ಷಿಸಿಡಲು ಬಳಸಲಾಗುತ್ತಿರುವ ವೈವಿಧ್ಯಮಯ ಹಾಗೂ ಅಪಾಯಕಾರಿ ರಾಸಾಯನಿಕ ಕೀಟನಾಶಕಗಳ ವಿಚಾರವನ್ನು ಗಮನಿಸಿದಲ್ಲಿ, ಯುರೋಪ್ ನಲ್ಲಿ ನಡೆಸಿದ್ದ ಅಧ್ಯಯನದ ವರದಿಯು ನಮ್ಮ ದೇಶಕ್ಕೆ ಅನ್ವಯಿಸಬಲ್ಲದೇ ಎನ್ನುವ ಸಂದೇಹ ಮೂಡುವುದು ಸ್ವಾಭಾವಿಕ. ಏಕೆಂದರೆ ಈಗಾಗಲೇ ಕಲುಷಿತ ನೀರು ಹಾಗೂ ಗಾಳಿಯನ್ನು ಸೇವಿಸುತ್ತಾ ಪ್ರದೂಷಿತ ಪರಿಸರದಲ್ಲಿ ವಾಸಿಸುತ್ತಿರುವ ನಾವು, ಇವೆಲ್ಲಾ ಕಾರಣಗಳಿಂದಾಗಿ " ವಿಷಮಾನವ " ರಾಗಿ ಬದುಕುತ್ತಿದ್ದೇವೆ. ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಗಂಭೀರ ಕಾಯಿಲೆಗಳ ಅಪಾಯದೊಂದಿಗೆ ತುಲನೆ ಮಾಡಿದಾಗ, ಹಣ್ಣು - ತರಕಾರಿಗಳನ್ನು ಸೇವಿಸುವುದು ಕೂಡಾ ಅಸುರಕ್ಷಿತವೆನಿಸುವುದು. ಆದರೂ ಸಾವಯವ ಪದ್ದತಿಯಲ್ಲಿ ಬೆಳೆಸಿದ ಆಹಾರಧಾನ್ಯಗಳು, ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಯನ್ನು ನಿಶ್ಚಿತವಾಗಿ ತಡೆಗಟ್ಟಬಹುದಾಗಿದೆ. ಇದರೊಂದಿಗೆ ನಮ್ಮ ಸುತ್ತಮುತ್ತಲ ಪರಿಸರವನ್ನು ನಿರ್ಮಲ ಹಾಗೂ ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೯-೧೧-೨೦೧೧ ರ ಸಚಿಕೆಯಲ್ಲಿ ಪ್ರಕಟಿತ ಲೇಖನ. 


No comments:

Post a Comment