Tuesday, October 14, 2014

HOLY RIVER - POLLUTED WATER !



 ಪವಿತ್ರ ನದಿಗಳಲ್ಲಿ ಹರಿಯುತ್ತಿದೆ - ಅಪವಿತ್ರ ನೀರು 

ಈ ಜನ್ಮದಲ್ಲಿ ತಾವು ಮಾಡಿರಬಹುದಾದ ಪಾಪಗಳನ್ನು ನಿವಾರಿಸಿಕೊಳ್ಳುವುದರೊಂದಿಗೆ, ಕಿಂಚಿತ್ ಪುಣ್ಯಪ್ರಾಪ್ತಿಗಾಗಿ ಸುಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಹವ್ಯಾಸ ಭಾರತೀಯರಲ್ಲಿದೆ. ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರಗಳ ಸಮೀಪದಲ್ಲಿ ಹರಿಯುವ ಪವಿತ್ರ ನದಿಗಳಲ್ಲಿ ತಪ್ಪದೆ " ಪುಣ್ಯ ಸ್ನಾನ " ಮಾಡುವ ಯಾತ್ರಿಕರಿಗೆ, ಈ ನದಿಗಳಲ್ಲಿ ಹರಿಯುತ್ತಿರುವ ನೀರು ಅಪವಿತ್ರ ಎನ್ನುವುದು ತಿಳಿದಿರುವುದಿಲ್ಲ!. 

ಗಂಗೇಚ ಯಮುನೇಚ .....

ಅನಾದಿಕಾಲದಿಂದಲೂ ಭಾರತದ ಹಿಂದೂ ಧರ್ಮೀಯರಿಗೆ ಗಂಗಾ ನದಿಯು ಪೂಜ್ಯವೆನಿಸಿದೆ. ಉತ್ತರ ಭಾರತದತ್ತ ತೀರ್ಥಯಾತ್ರೆಗೆ ತೆರಳುವ ಪ್ರತಿಯೊಬ್ಬ ಹಿಂದೂ ಬಾಂಧವರು, ಮರಳಿಬರುವಾಗ ಗಂಗೆಯ ನೀರನ್ನು ಮರೆಯದೇ ತರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ಮರಣಶಯ್ಯೆಯಲ್ಲಿರುವ ಕುಟುಂಬದ ಹಿರಿಯರ ಬಾಯಿಗೆ ಗಂಗೋದಕವನ್ನು ಬಿಡುವುದರಿಂದ, ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ಅಚಲ ವಿಶ್ವಾಸವೂ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಆದರೆ ಕಳೆದ ಕೆಲವರ್ಷಗಳಿಂದ ಗಂಗಾನದಿಯ ನೀರು ಅತ್ಯಂತ ಮಲಿನವಾಗಿರುವುದರಿಂದ, ಇದನ್ನು ಕುಡಿಯುವುದು ಬಿಡಿ, ಇದರಲ್ಲಿ ಸ್ನಾನವನ್ನು ಮಾಡುವುದೂ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕಲುಷಿತ ಗಂಗಾ ನದಿಯ ನೀರನ್ನು ಶುದ್ಧೀಕರಿಸಲು ಕೇಂದ್ರ ಸರ್ಕಾರವು ಸಹಸ್ರಾರು ಕೋಟಿ ರೂಪಾಯಿಗಳ ಕ್ರಿಯಾಯೋಜನೆಯನ್ನು ಅನುಷ್ಠಾನಿಸಿದ್ದರೂ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಕಿಂಚಿತ್ ಕೂಡಾ ಕಡಿಮೆಯಾಗಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ " ಪಾಪನಾಶಿನಿ " ಎಂದೇ ಪ್ರಖ್ಯಾತವೀಗಿರುವ ಗಂಗೆಯ ನೀರು, ಇದೀಗ " ಆರೋಗ್ಯ ನಾಶಿನಿ " ಯಾಗಿ ಪರಿವರ್ತನೆಗೊಂಡಿದೆ. 

ಡೆಹರಾಡೂನ್ ನ ಪೀಪಲ್ಸ್ ಸಯನ್ಸ್ ಇನ್ಸ್ಟಿಟ್ಯೂಟ್ ( ಪಿ ಎಸ್ ಐ ) ಸಂಸ್ಥೆಯ ಸಂಶೋಧಕರು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಂತೆ ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಸ್ನಾನ ಮಾಡುವ ಜನರು ತಮ್ಮ ಪಾಪಗಳನ್ನು ಕಳೆದುಕೊಂಡರೂ, ಚರ್ಮರೋಗಗಳು, ಉದರದ ಸೋಂಕುಗಳೂ ಸೇರಿದಂತೆ ಹತ್ತುಹಲವು ಕಾಯಿಲೆಗಳನ್ನು ಗಳಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಸಂಶೋಧಕರ ತಂಡವು ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗೆಯ ನೀರನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಇದರಲ್ಲಿ ಮನುಷ್ಯನ ಮಲದಲ್ಲಿರುವ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿರುವುದು ಪತ್ತೆಯಾಗಿತ್ತು!. 

ಅತಿ ಹೆಚ್ಚು ಸಂಖ್ಯೆಯ ಭಕ್ತರು ಸ್ನಾನ ಮಾಡುವ ಹರ್ ಕೀ ಪೌರಿಯಲ್ಲಿನ ಗಂಗಾಜಲವು, ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ನಿಗದಿಸಿರುವ ಮಾನದಂಡಗಳಿಗಿಂತ ಹೆಚ್ಚು ಪ್ರದೂಷಿತವಾಗಿತ್ತು. ಇದೇ ಕಾರಣದಿಂದಾಗಿ ಗಂಗೆಯಲ್ಲಿ ಸ್ನಾನವನ್ನು ಮಾಡುವುದರಿಂದ ಹಾಗೂ ಈ ನೀರನ್ನು ಕುಡಿಯುವುದರಿಂದ, ಸಾಂಕ್ರಾಮಿಕ ಮತ್ತು ಅನ್ಯ ಕೆಲವಿಧದ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿತ್ತು. ಮನುಷ್ಯನ ಮಲದಲ್ಲಿರುವ ಅಪಾಯಕಾರಿ ರೋಗಾಣುಗಳು ಹಲವಾರು ವಿಧದ ಜಲಜನ್ಯ ರೋಗಗಳಿಗೆ ಕಾರಣವೆನಿಸುವುದರೊಂದಿಗೆ, ಈ ನೀರಿನ ಬಳಕೆಯಿಂದ ಚರ್ಮರೋಗಗಳು, ಶ್ರವಣ ಇಂದ್ರಿಯಕ್ಕೆ ಸಂಬಂಧಿಸಿದ ಮತ್ತು ವಾಂತಿ- ಭೇದಿಗಳಂತಹ ಕಾಯಿಲೆಗಳು ಉದ್ಭವಿಸುತ್ತವೆ. 

ಜಗತ್ಪ್ರಸಿದ್ಧ ಕುಂಭಮೇಳಕ್ಕಿಂತ ಕೆಲವೇ ದಿನಗಳ ಮುನ್ನ ಹರಿದ್ವಾರದ ಸಮೀಪದಲ್ಲಿ ಗಂಗಾನದಿಗೆ ಕಲುಷಿತ ನೀರನ್ನು ವಿಸರ್ಜಿಸುವ ೧೦ ಬೃಹತ್ ಚರಂಡಿಗಳ ನೀರನ್ನು ಪಿ ಎಸ್ ಐ ನ ಸಂಶೋಧಕರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಚರಂಡಿಗಳಿಗೆ ನೀರನ್ನು ವಿಸರ್ಜಿಸುವ ಮುನ್ನ ಬಳಸುತ್ತಿದ್ದ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯಾಚರಿಸದ ಕಾರಣದಿಂದಾಗಿ, ಮಲಿನ ಹಾಗೂ ತ್ಯಾಜ್ಯ ನೀರು ನೇರವಾಗಿ ಗಂಗಾನದಿಯನ್ನು ಸೇರುತ್ತಿದ್ದುದು ಪತ್ತೆಯಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಕೊಳಚೆ ನೀರಿನಲ್ಲಿ ಅತ್ಯಧಿಕ ಪ್ರಮಾಣದ ಅಪಾಯಕಾರಿ ರೋಗಾಣುಗಳು ಇರುವುದು ತಿಳಿದುಬಂದಿತ್ತು. 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಂತೆ, ಯಾವುದೇ ನದಿಯ ನೀರನ್ನು ಪರೀಕ್ಷಿಸುವಾಗ ೧೦೦ ಮಿಲಿ ಲೀಟರ್ ನೀರಿನಲ್ಲಿರುವ ರೋಗಾಣುಗಳ ಪ್ರಮಾಣವು, ಗರಿಷ್ಟ ಸಂಭವನೀಯ ಸಂಖ್ಯೆಯಾಗಿರುವ ೫೦೦ ನ್ನು ಮೀರಬಾರದು. ಆದರೆ ಪಿ ಎಸ್ ಐ ನ ಸಂಶೋಧಕರು ಮೂರು ವಿಭಿನ್ನ ಸ್ಥಳಗಳಿಂದ ಸಂಗ್ರಹಿಸಿದ್ದ ಗಂಗಾಜಲದಲ್ಲಿನ ರೋಗಾಣುಗಳ ಪ್ರಮಾಣವು ೧೦೦೦, ೧೫೦೦ ಮತ್ತು ಜಗಜೀತ್ ಪುರದಲ್ಲಿ ಸಂಗ್ರಹಿಸಿದ್ದ ಮಾದರಿಯಲ್ಲಿ ೭.೫ ಲಕ್ಷದಷ್ಟಿತ್ತು!. 

ಗಂಗಾನದಿಗೆ ಹರಿದು ಬರುವ ಕೊಳಚೆ ನೀರಿನ ಪ್ರಮಾಣವು ಅಗಾಧವಾಗಿದ್ದು, ಇದನ್ನು ಶುದ್ಧೀಕರಿಸಲು ಅಳವಡಿಸಿರುವ ಜಲ ಸಂಸ್ಕರಣಾ ಘಟಕಗಳ ಸಾಮರ್ಥ್ಯಕ್ಕಿಂತಲೂ ಇದು ಸಾಕಷ್ಟು ಅಧಿಕವಾಗಿದೆ. ಇನ್ನು ಕೆಲ ಘಟಕಗಳು ಕಾರಣಾಂತರಗಳಿಂದ ಸಮರ್ಪಕವಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುತ್ತಿರುವ ನದಿಗಳೂ ಇದಕ್ಕೆ ಅಪವಾದವೆನಿಸಿಲ್ಲ. ಆದರೆ ಈ ನದಿಗಳಲ್ಲಿನ ಜಲಪ್ರದೂಷಣೆಯ ಪ್ರಮಾಣವು ಗಂಗಾನದಿಯಷ್ಟು ತೀವ್ರವಾಗಿರುವ ಸಾಧ್ಯತೆಗಳಿಲ್ಲ. 

ಅದೇನೇ ಇರಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಹಮ್ಮಿಕೊಂಡಿರುವ ಕ್ರಿಯಾಯೋಜನೆಗಳು ಯಶಸ್ವಿಯಾಗಬೇಕಿದ್ದಲ್ಲಿ, ದೇಶದ ಪ್ರಜೆಗಳ ಪರಿಪೂರ್ಣ ಸಹಕಾರವೂ ಅತ್ಯವಶ್ಯಕವೆನಿಸುತ್ತದೆ. ದೇಶಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸದೆ ಇದ್ದಲ್ಲಿ, ದೇಶದ ಅಧಿಕತಮ " ಪಾಪನಾಶಿನಿ " ನದಿಗಳು " ರೋಗವಾಹಿನಿ " ಗಳಾಗಿ ಪರಿವರ್ತನೆಗೊಳ್ಳಲಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೩-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಸ್ವಚ್ಚ್ ಭಾರತ ಅಭಿಯಾನದ ಸಲುವಾಗಿ ಇದೀಗ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 

 

No comments:

Post a Comment