Saturday, October 11, 2014

ನಗರಗಳ ನೈರ್ಮಲ್ಯ : ವ್ಯವಸ್ಥೆಯ ವೈಫಲ್ಯ



 ನಗರಗಳ ನೈರ್ಮಲ್ಯ : ವ್ಯವಸ್ಥೆಯ ವೈಫಲ್ಯ 

ಕೇಂದ್ರ ಸರ್ಕಾರವು ಇತ್ತೀಚೆಗೆ ದೇಶದ ಆಯ್ದ ೪೨೩ ನಗರಗಳಲ್ಲಿ ನಡೆಸಿದ್ದ ವಿಶೇಷ ಸಮೀಕ್ಷೆಯೊಂದರ ಫಲಿತಾಂಶಗಳು ಪ್ರಕಟಗೊಂಡಾಗ, ಕರ್ನಾಟಕದ ಉದ್ಯಾನ ನಗರಿ ಎಂದೇ ಪ್ರಖ್ಯಾತವಾಗಿರುವ ಮೈಸೂರು ನಗರವು ದ್ವಿತೀಯ ಸ್ಥಾನವನ್ನು ಗಳಿಸಿತ್ತು. ದೇಶದ ಪ್ರಮುಖ ನಗರಗಳಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ನಗರಗಳಲ್ಲಿ ಮೈಸೂರು ನಗರವು ದ್ವಿತೀಯ ಸ್ಥಾನವನ್ನು ಗಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದರೂ, ಈ ಸಮೀಕ್ಷೆಯ ವರದಿಯ ಇತರ ಅಂಶಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿವೆ. 

ದೇಶದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚಂಡೀಘಡವನ್ನು" ಚೇತರಿಸುತ್ತಿರುವ ಆದರೆ ಇಂದಿಗೂ ರೋಗಪೀಡಿತ " ಎನ್ನುವ ವರ್ಗದಲ್ಲಿ ಸೇರಿಸಿರುವುದು ನಂಬಲು ಅಸಾಧ್ಯವೆನಿಸುತ್ತದೆ. ಆದರೆ ದೇಶದ ಪ್ರಮುಖ ನಗರಗಳು ಪ್ರತಿನಿತ್ಯ ಉತ್ಪಾದಿಸುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳಲ್ಲಿ ಮುಳುಗಿ ಹೋಗಿವೆ. ಸಾರ್ವಜನಿಕ ಸ್ಥಳಗಳನ್ನೇ ಶೌಚಾಲಯವನ್ನಾಗಿ ಬಳಸುವ, ಕೊಳಚೆ ನೀರನ್ನು ಸಂಸ್ಕರಿಸದ ಮತ್ತು ಘನತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ನಗರಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕೇಂದ್ರ ಸರ್ಕಾರವು ಈ ಸಮೀಕ್ಷೆಯನ್ನು ನಡೆಸುವ ಮೂಲಕ ದೇಶದ ಪ್ರತಿಯೊಂದು ನಗರಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಠಿಸಲು ಶ್ರಮಿಸುತ್ತಿರುವ ನಗರಗಳನ್ನು ಗುರುತಿಸಿ, ಇತರ ನಗರಗಳೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಲು ಉದ್ದೇಶಿಸಿತ್ತು. 

ಈ ಸಮೀಕ್ಷೆಗಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ೪೨೩ ನಗರಗಳನ್ನು ಆಯ್ಕೆ ಮಾಡಿದ ಬಳಿಕ, ಪೂರ್ವನಿಗದಿತ ಮಾನದಂಡಗಳಂತೆ ಈ ನಗರಗಳಿಗೆ ಅಂಕಗಳನ್ನು ನೀಡಲಾಗಿತ್ತು. ಹಾಗೂ ಇದಕ್ಕಾಗಿ ಮೂರು ಖಾಸಗಿ ಸಂಸ್ಥೆಗಳನ್ನು ನಿಯೋಜಿಸಲಾಗಿತ್ತು. ಈ ಸಂಸ್ಥೆಗಳ ಕಾರ್ಯಕರ್ತರು ಆಯಾ ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸಂದರ್ಶಿಸಿ ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಸುಮಾರು ಒಂದು ವರ್ಷ ನಡೆದಿದ್ದ ಈ ಸಮೀಕ್ಷೆಗಾಗಿ ಆಯ್ಕೆಯಾಗಿದ್ದ ನಗರಗಳನ್ನು ಕೆಂಪು, ಕಪ್ಪು, ನೀಲಿ ಮತ್ತು ಹಸಿರು ಎನ್ನುವ ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಲಾಗಿತ್ತು. 

ಕೆಂಪು ವರ್ಗದಲ್ಲಿ ಸೇರಿಸಲ್ಪತ್ತಿದ್ದ ನಗರಗಳು ಈ ಪಟ್ಟಿಯ ತಳಭಾಗದಲ್ಲಿದ್ದು, ಈ ನಗರಗಳ ಸ್ವಚ್ಚತೆ ಮತ್ತು ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಶ್ಚರ್ಯವೆಂದರೆ ಈ ೪೨೩ ನಗರಗಳಲ್ಲಿ ಶೇ.೪೫ ರಷ್ಟು ನಗರಗಳು ಕೆಂಪು ವರ್ಗದಲ್ಲಿ ಸೇರಿವೆ!. 

ಈ ೪೨೩ ನಗರಗಳಲ್ಲಿ ಯಾವುದೇ ನಗರಗಳು ಶೇ.೯೧ ರಿಂದ ೧೦೦ ಅಂಕಗಳನ್ನು ಗಳಿಸಲು ವಿಫಲಗೊಂಡಿದ್ದು, ಶೇ.೭೩.೪೮ ಅಂಕಗಳನ್ನು ಗಳಿಸಿದ್ದ ಚಂಡೀಘಡ ಮತ್ತು ಶೇ. ೭೦.೬೫ ಅಂಕಗಳನ್ನು ಗಳಿಸಿದ್ದ ಮೈಸೂರು ನಗರಗಳು ನೀಲಿ ವರ್ಗದಲ್ಲಿವೆ. ಅಂತೆಯೇ ೨೨೮ ನಗರಗಳು ಕಪ್ಪು ವರ್ಗದಲ್ಲಿ ಸೇರ್ಪಡೆಗೊಂಡಿದ್ದು, ಇವುಗಳಲ್ಲಿ ಶೇ. ೫೩.೬ ಅಂಕ ಗಳಿಸಿದ್ದ ಚೆನ್ನೈ ತುತ್ತತುದಿಯಲ್ಲಿದ್ದು, ಶೇ.೪೯.೮ ಅಂಕಗಳನ್ನು ಗಳಿಸಿದ್ದ ಹರಿದ್ವಾರವು ತಳಭಾಗದಲ್ಲಿದೆ. 

ತೀರಾ ನಿರಾಶಾದಾಯಕ ನಿರ್ವಹಣೆಯನ್ನು ತೋರುತ್ತಿರುವ ನಗರಗಳನ್ನು ಕೆಂಪು ವರ್ಗದಲ್ಲಿ ಸೇರಿಸಲಾಗಿದ್ದು, ಇವುಗಳಲ್ಲಿ ಶೇ.೨೨.೩ ಅಂಕಗಳನ್ನು ಗಳಿಸಿದ್ದ ಜಲಂಧರ್ ನಗರ ಅಗ್ರಸ್ಥಾನದಲ್ಲಿದ್ದು, ಕೇವಲ ೧೭.೨ ಅಂಕಗಳನ್ನು ಗಳಿಸಿದ್ದ ಶ್ರೀನಗರವು ಈ ಗುಂಪಿನ ಮತ್ತು ೪೨೩ ನಗರಗಳ ಯಾದಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

೫೦ ಕ್ಕೂ ಅಧಿಕ ನಗರಗಳಲ್ಲಿ ಮನುಷ್ಯರ ಮಲವನ್ನು ಸುರಕ್ಷಿತ ವಿದಾನದಿಂದ ವಿಲೇವಾರಿ ಮಾಡುವ ಒಳಚರಂಡಿ ವ್ಯವಸ್ಥೆ ಇದ್ದರೂ, ಕೊಳಚೆ ನೀರನ್ನು ಸಂಸ್ಕರಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ೩೮೦ ನಗರಗಳ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿರುವ ದ್ರವತ್ಯಾಜ್ಯಗಳಲ್ಲಿ, ಕೇವಲ ಶೇ. ೪೦ ರಷ್ಟನ್ನು ಮಾತ್ರ ಸಂಸ್ಕರಿಸಿ ವಿಸರ್ಜಿಸಲಾಗುತ್ತಿದೆ. 

ದೇಶದ ಪಶ್ಚಿಮ ಭಾಗದಲ್ಲಿರುವ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಅಧಿಕತಮ ನಗರಗಳು ಈ ಸಮೀಕ್ಷೆಯಲ್ಲಿ ಅತ್ಯಲ್ಪ ಅಂಕಗಳನ್ನು ಗಳಿಸಿವೆ. 

ಈ ಸಮೀಕ್ಷೆಯ ಫಲಿತಾಂಶಗಳು ಕಳೆದ ತಿಂಗಳಿನ ೧೧ ರಂದು ಪ್ರಕಟವಾದಂತೆಯೇ, ಬಹುತೇಕ ನಗರಗಳ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮಗೆ ಇನ್ನಷ್ಟು ಅಂಕಗಳು ದೊರೆಯಬೇಕಾಗಿತ್ತು ಎಂದು ಈ ಸಮೀಕ್ಷೆಯನ್ನು ನಡೆಸಿದವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದ್ದ ಸ್ಥಳೀಯ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಯತ್ತ ವಿಶೇಷ ಗಮನವನ್ನು ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎನ್ನುವುದನ್ನು ಅರಿತ ಬಳಿಕ ಈ ಅಧಿಕಾರಿಗಳು ತುಸು ಶಾಂತರಾಗಿದ್ದರು!. 

ಅದೇನೇ ಇರಲಿ, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ, ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ಒಂದಿಷ್ಟು ಕಾಲ್ಜಯಾಯನ್ನು ವಹಿಸಲೇಬೇಕು. ಅದೇ ರೀತಿಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸುತ್ತಮುತ್ತಲ ಪರಿಸರದ ನೈರ್ಮಲ್ಯವನ್ನು ಕಾಪಾಡಲು ಸಹಕರಿಸಬೇಕು. ಈ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ನಿವಾಸಿಗಳು ಒಂದಾಗಿ, ಈ ನಿಟ್ಟಿನಲ್ಲಿ ಕಾರ್ಯತತ್ಪರರಾದಲ್ಲಿ ದೇಶದ ಪ್ರತಿಯೊಂದು ನಗರ,ಪಟ್ಟಣ ಮತ್ತು ಹಳ್ಳಿಗಳು " ನಿರ್ಮಲ ಮತ್ತು ಆರೋಗ್ಯಕರ " ವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ದಿ. ೨೩-೦೬-೨೦೧೦ ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ.

ಪ್ರಸ್ತುತ ನಡೆಯುತ್ತಿರುವ " ಸ್ವಚ್ಚ ಭಾರತ ಅಭಿಯಾನ " ದ ಸಲುವಾಗಿ ಇದೀಗ ಈ ಲೇಖನವನ್ನು ಮತ್ತೆ ಪ್ರಕಟಿಸುತ್ತಿದ್ದೇನೆ.


No comments:

Post a Comment