Sunday, October 12, 2014

PET Bottles- Are dangerous



 ಪ್ಲಾಸ್ಟಿಕ್ ಬಾಟಲಿಗಳು : ನಿಮಗಿದು ತಿಳಿದಿರಲಿ 

ನೀವು ಪ್ರತಿನಿತ್ಯ ಬಳಸುವ ಅನೇಕ ಗೃಹಬಳಕೆಯ ಉತ್ಪನ್ನಗಳೊಂದಿಗೆ ಉಚಿತವಾಗಿ ದೊರೆಯುವ, ಹತ್ತಿಯಂತೆ ಹಗುರವಾದ ಮತ್ತು ಕೆಳಗೆ ಬಿದ್ದರೂ ಒಡೆದುಹೋಗದ ಪ್ಲಾಸ್ಟಿಕ್ ಬಾಟಲಿಗಳು ಇವೇ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯವೆನಿಸಿವೆ. ಆದರೆ ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ಗಂಭೀರ ವ್ಯಾಧಿಗಳ ಬಗ್ಗೆ ತಮ್ಮ ಗಮನವನ್ನು ಹರಿಸದ ಅನೇಕ ರಾಷ್ಟ್ರಗಳು, ಇಂತಹ ಬಾಟಲಿಗಳ ಬಳಕೆಯನ್ನು ನಿಷೇಧಿಸಲು ಹಿಂಜರಿಯುತ್ತಿವೆ.

ಸರ್ವಾಂತರ್ಯಾಮಿ 

ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ಅರಸಿ ತರಬಹುದಾದರೂ, ಪ್ಲಾಸ್ಟಿಕ್ ಬಾಟಲಿಗಳೇ ಇಲ್ಲದ ಮನೆಯೊಂದನ್ನು ಅರಸುವುದು ಅಸಾಧ್ಯವೂ ಹೌದು. ಬಡವ- ಶ್ರೀಮಂತರೆನ್ನುವ ಭೇದವಿಲ್ಲದೇ, ಅಬಾಲವೃದ್ಧರೆಲ್ಲರೂ ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಇದೀಗ ಸರ್ವಾಂತರ್ಯಾಮಿ ಎನಿಸಿರುವುದು ಮಾತ್ರ ಸುಳ್ಳೇನಲ್ಲ!. 

ಶುದ್ಧೀಕರಿಸಿದ ಕುಡಿಯುವ ನೀರನ್ನು ಬಳಸಿ ಎಸೆಯುವ ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡಲು ಆರಂಭಿಸಿದ ಬಳಿಕ, ಲಘು ಪಾನೀಯಗಳು, ಅನಾರೋಗ್ಯಪೀಡಿತರು ಸೇವಿಸುವ ಔಷದಗಳೂ ಸೇರಿದಂತೆ ಅಸಂಖ್ಯ ಗ್ರಾಹಕ ಉತ್ಪನ್ನಗಳು " ಪಾಲಿ ಇಥೈಲೀನ್ ಟೆರಪ್ತಲೇಟ್" (PET ) ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡುವ ಉದ್ದಿಮೆಗಳ ಸಂಖ್ಯೆಯು ಸ್ವಾಭಾವಿಕವಾಗಿಯೇ ಹೆಚ್ಚಿತ್ತು. ಅಂತೆಯೇ ಒಂದುಬಾರಿ ಬಳಸಿದ ಬಳಿಕ ಮರುಬಳಕೆ ಮಾಡಬಾರದಂತಹ ಪೆಟ್ ಬಾಟಲಿಗಳ ಮರುಬಳಕೆ ಮಾಡುವ ಹವ್ಯಾಸವು ಭಾರತದಲ್ಲಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚಲಾರಂಭಿಸಿತ್ತು. ಇದೇ ಕಾರಣದಿಂದಾಗಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ಈಡಾಗುತ್ತಿರುವ ಭಾರತೀಯರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದೆ.

ಅಪಾಯಕಾರಿ ರಾಸಾಯನಿಕ 

ಮನುಷ್ಯನ ಆರೋಗ್ಯಕ್ಕೆ ಮತ್ತು ಸುತ್ತಮುತ್ತಲ ಪರಿಸರಕ್ಕೆ ಅಪಾಯಕಾರಿ ಎನಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಿರುವ ಅಧ್ಯಯನಗಳಿಂದ, ಪ್ಲಾಸ್ಟಿಕ್ ಬಾಟಲಿಗಳ ಬಳಕೆಯು ಮನುಷ್ಯನ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ಒಂದರ ಹಿಂದೆ ಮತ್ತೊಂದರಂತೆ ಬಯಲಾಗುತ್ತಿವೆ. 

ಪ್ಲಾಸ್ಟಿಕ್ ಬಾಟಲಿಗಳ ತಯಾರಿಕೆಯಲ್ಲಿ ಬೈಸ್ಫೆನಾಲ್- ಎ( BPA ) ಎನ್ನುವ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ನಿಧಾನವಾಗಿ ಹಾಗೂ ಅಲ್ಪಪ್ರಮಾಣದಲ್ಲಿ ಸೋರಿಕೆಯಾಗುವುದರಿಂದ, ಈ ಬಾಟಲಿಗಳಲ್ಲಿ ತುಂಬಿಸಿರುವ ದ್ರವಗಳಲ್ಲಿ ಅನಾಯಾಸವಾಗಿ ಸೇರುತ್ತದೆ. ಅದರಲ್ಲೂ ಪುಟ್ಟ ಕಂದಮ್ಮಗಳಿಗೆ ಹಾಲೂಡಿಸುವ ಬಾಟಲಿಗಳಲ್ಲಿ ಬಿಸಿಯಾದ ಹಾಲನ್ನು ಹಾಕಿದಾಗ ಇದರ ಸೋರಿಕೆಯ ಪ್ರಮಾಣವೂ ಹೆಚ್ಚುತ್ತದೆ.ನಿಮ್ಮ ವಾಹನದಲ್ಲಿ ಇರಿಸಿದ್ದ ನೀರಿನ ಬಾಟಲಿಯು ವಾತಾವರಣದ ಉಷ್ಣತೆಯಿಂದ ಕೊಂಚ ಬಿಸಿಯಾದೊಡನೆ ಬಿ ಪಿ ಎ ರಾಸಾಯನಿಕವು ಸೋರಿ ನೀರಿನಲ್ಲಿ ಸೇರುತ್ತದೆ.  ಈ ರೀತಿಯಲ್ಲಿ ಬಾಟಲಿಗಳಲ್ಲಿ ತುಂಬಿಸಿದ ನೀರು ಅಥವಾ ಅನ್ಯ ದ್ರವಗಳಲ್ಲಿ ಸೇರುವ ಬಿ ಪಿ ಎ ರಾಸಾಯನಿಕವು, ಸುಲಭದಲ್ಲೇ ನಮ್ಮನಿಮ್ಮೆಲ್ಲರ ಉದರವನ್ನು ಸೇರುತ್ತದೆ!. 

ಅನಾರೋಗ್ಯಕರ ಪ್ಲಾಸ್ಟಿಕ್ ಬಾಟಲಿಗಳು 

ಪುಟ್ಟ ಮಕ್ಕಳಿಗೆ ಹಾಲೂಡಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದರಿಂದ ಇದರಲ್ಲಿರುವ ಬಿ ಪಿ ಎ ರಾಸಾಯನಿಕವು ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಈ ಮಕ್ಕಳಲ್ಲಿ ಮುಂದೆ ಶುಕ್ಲಗ್ರಂಥಿಯ ಕಾಯಿಲೆಗಳು, ಸ್ತನಗಳ ಕ್ಯಾನ್ಸರ್, ಜನ್ಮದತ್ತ ಅಂಗವೈಕಲ್ಯಗಳು ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು ಎಂದು ತಿಳಿದುಬಂದಿದೆ. ಕಳೆದ ಒಂದೆರಡು ದಶಕಗಳಲ್ಲಿ ನಡೆದಿದ್ದ ಅನೇಕ ಅಧ್ಯಯನಗಳ ವರದಿಗಳ ಆಧಾರದ ಮೇಲೆ, ಪುಟ್ಟ ಮಕ್ಕಳಿಗೆ ಹಾಲೂಡಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದು ಸುರಕ್ಷಿತವಲ್ಲ ಎಂದು ಖಚಿತವಾಗಿದೆ. ಇದೇ ಕಾರಣದಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿದ ಮಹಾನಗರಗಳಲ್ಲಿ ಶಿಕಾಗೋ ನಗರಕ್ಕೆ ಪ್ರಥಮ ಸ್ಥಾನ ಸಲ್ಲುತ್ತದೆ. 

ಬೈಸ್ಫೆನಾಲ್ - ಎ ರಾಸಾಯನಿಕವು ಗರ್ಭಿಣಿಯರ ಗರ್ಭದಲ್ಲಿರುವ ಹೆಣ್ಣು ಭ್ರೂಣದ ಮೇಲೆ ಬೀರುವ ದುಷ್ಪರಿಣಾಮದಿಂದಾಗಿ, ಈ ಶಿಶುವಿಗೆ ಮುಂದೆ ಶಾಶ್ವತವಾದ ಸಂತಾನೋತ್ಪತ್ತಿ ಸಂಬಂಧಿತ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ಇತ್ತೀಚಿಗೆ ತಿಳಿದುಬಂದಿದೆ. ಇದಲ್ಲದೇ ಈ ಅಪಾಯಕಾರಿ ರಾಸಾಯನಿಕವು ಮನುಷ್ಯನ ಶರೀರದಲ್ಲಿರುವ ರಕ್ತನಾಳಗಳ ಒಳಭಾಗದ ಪದರಕ್ಕೆ ಹಾನಿಯನ್ನು ಉಂಟುಮಾಡುವುದರೊಂದಿಗೆ, ರಕ್ತದಲ್ಲಿನ ಕೊಲೆಸ್ಟರಾಲ್ ನ ಪ್ರಮಾಣವನ್ನೂ ಹೆಚ್ಚಿಸುವುದೆಂದು ಇಂಗ್ಲೆಂಡ್ ನ ಸಂಶೋಧಕರು ಸಾಬೀತುಪಡಿಸಿದ್ದಾರೆ. ಬಿ ಪಿ ಎ ರಾಸಾಯನಿಕ ಮತ್ತು ಹೃದ್ರೋಗಗಳಿಗೆ  ಅವಿನಾಭಾವ ಸಂಬಂಧವಿರುವುದನ್ನು ೨೦೦೮ ರಲ್ಲೇ ಪತ್ತೆಹಚ್ಚಲಾಗಿತ್ತು. ೧,೫೦೦ ಕ್ಕೂ ಅಧಿಕ ಸ್ತ್ರೀ- ಪುರುಷರ ಆರೋಗ್ಯದ ದಾಖಲೆಗಳು ಮತ್ತು ಇತರ ಪರೀಕ್ಷಾ ವಿವರಗಳನ್ನು ಅಧ್ಯಯನ ಮಾಡಿದ್ದ ಸಂಶೋಧಕರು, ರೋಗಿಯ ಶರೀರದಲ್ಲಿರುವ ಬಿ ಪಿ ಎ ರಾಸಾಯನಿಕದ ಪ್ರಮಾಣ ಮತ್ತು ಹೃದ್ರೋಗಗಳಿಗೆ ನೇರವಾದ ಸಂಬಂಧವಿರುವುದನ್ನು ಖಚಿತಪಡಿಸಿದ್ದರು!.

ಆದರೆ ಇವೆಲ್ಲಕ್ಕೂ ಮಿಗಿಲಾಗಿ ಬಹುತೇಕ ಔಷದ ತಯಾರಿಕಾ ಸಂಸ್ಥೆಗಳು ಇತ್ತೀಚಿನ ಕೆಲವರ್ಷಗಳಿಂದ ತಮ್ಮ ಉತ್ಪನ್ನಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿವೆ.ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎನಿಸುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ವ್ಯಾಧಿಪೀಡಿತರ ಅನಾರೋಗ್ಯದ ಸಮಸ್ಯೆಗಳನ್ನು ಪರಿಹರಿಸಬಲ್ಲ ಔಷದಗಳನ್ನು ತುಂಬಿಸಿ ಮಾರಾಟ ಮಾಡುವುದು ನಿಶ್ಚಿತವಾಗಿಯೂ ಆರೋಗ್ಯಕರವಲ್ಲ. 

ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಗುರುತರವಾದ ಹೊಣೆಗಾರಿಕೆ ಇರುವ ಔಷದ ತಯಾರಿಕಾ ಸಂಸ್ಥೆಗಳೇ ಇಂತಹ ಆನಾರೋಗ್ಯಕರ ಪ್ರವೃತ್ತಿಯನ್ನು ತೋರುವುದಾದಲ್ಲಿ, ಇತರ ಸಂಸ್ಥೆಗಳು ನೀರು, ಹಣ್ಣಿನ ರಸ, ಲಘುಪಾನೀಯಗಳೇ ಮುಂತಾದ ಆಹಾರಪದಾರ್ಥಗಳನ್ನು ಇವುಗಳಲ್ಲಿ ತುಂಬಿಸಿ ಮಾರಾಟ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. 

ಅದೇನೇ ಇರಲಿ, ನಮ್ಮ ಸುತ್ತಮುತ್ತಲ ಪರಿಸರ ಮತ್ತು ನಮ್ಮ ಆರೋಗ್ಯಗಳ ಹಿತದೃಷ್ಟಿಯಿಂದ ಅನಾರೋಗ್ಯಕರ ಹಾಗೂ ಅಪಾಯಕಾರಿ ಎಣಿಸುತ್ತಿರುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಇಂದಿನಿಂದಲೇ ನಿಲ್ಲಿಸುವುದು ಅತ್ಯವಶ್ಯಕವೂ ಹೌದು. ಇದರಿಂದಾಗಿ ನಾವು ಒಂದುಬಾರಿ ಬಳಸಿ ಎಸೆಯುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳ ಪ್ರಮಾಣವೂ ಕಡಿಮೆ ಆಗುವುದರಿಂದ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಹಿತಕರವೆನಿಸೀತು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೭-೦೩- ೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಸ್ವಚ್ಚ ಭಾರತ ಅಭಿಯಾನದ ಸಲುವಾಗಿ ಇದೀಗ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 



No comments:

Post a Comment