Friday, October 3, 2014

SVACHH BHAARATH ABHIYAN and the POLITICIANS




ಸ್ವಚ್ಛ ಭಾರತ ಅಭಿಯಾನ: ನೇತಾರರಿಗೆ ಪ್ರಚಾರದ್ದೇ ಧ್ಯಾನ!

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುವಂತೆ ನೀಡಿದ್ದ ಕರೆಗೆ, ಜನಸಾಮಾನ್ಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಸಂಖ್ಯ ಜನರು ಗಾಂಧೀಜಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಸಾರ್ವಜನಿಕ ಸ್ಥಳಗಳಲ್ಲಿ ತುಂಬಿದ್ದ ವೈವಿಧ್ಯಮಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಇವುಗಳನ್ನು ವಿಲೇವಾರಿ ಮಾಡುವಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದರು. ಸಂಘ ಸಂಸ್ಥೆಗಳ ಸದಸ್ಯರು, ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು, ರಾಜಕೀಯ ಪಕ್ಷಗಳ ಸದಸ್ಯರು ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಅಧಿಕತಮ ಜನರು, ಕೆಲವಾರು ಗಂಟೆಗಳ ಕಾಲ ತ್ಯಾಜ್ಯಗಳನ್ನು ಸಂಗ್ರಹಿಸುವ ಮತ್ತು ಸಾರ್ವಜನಿಕ ಸ್ಥಳಗಳನ್ನು ಚೊಕ್ಕಟಗೊಳಿಸಲು ಶ್ರಮಿಸಿದ್ದರು.

 ಮನಸ್ಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರು ತಮ್ಮ ನಿಗದಿತ ಉದ್ದೇಶವನ್ನು ಈಡೇರಿಸುವ ವಿಚಾರವನ್ನು ಹೊರತುಪಡಿಸಿ, ಅನ್ಯ ವಿಚಾರಗಳ ಬಗ್ಗೆ ಗಮನವನ್ನೇ ಹರಿಸುತ್ತಿರಲಿಲ್ಲ. ತಮ್ಮ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕ ಸಂತೃಪ್ತರಾದ ಈ ಸ್ವಯಂಸೇವಕರು, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಮುಂದುವರೆಸುವ ಬಗ್ಗೆ ಚರ್ಚಿಸುತ್ತಿದ್ದರು.

ನಮ್ಮ ಗಮನಕ್ಕೆ ಬಂದಂತೆ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರದ ಅನೇಕ ಜನರು, ತಮ್ಮ ವಸತಿ - ವಾಣಿಜ್ಯ ಕಟ್ಟಡಗಳ ಸುತ್ತಮುತ್ತಲ ಪ್ರದೇಶಗಳನ್ನು ಸದ್ದುಗದ್ದಲವಿಲ್ಲದೆ ಸ್ವಚ್ಚಗೊಳಿಸುವ ಮೂಲಕ, ಅಭಿಯಾನದ ಯಶಸ್ಸಿಗಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದರು. ಮತ್ತೆ ಕೆಲವರು ಸ್ವಚ್ಚತಾ ಅಭಿಯಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಜೊತೆಗೆ ಈ ಸ್ವಚ್ಛತಾ ಅಭಿಯಾನದ ಸಾಧಕಗಳನ್ನು ಮತ್ತು ಅಸ್ವಚ್ಛತೆಯ ಬಾಧಕಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ, ಇದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಈ ರೀತಿಯಲ್ಲಿ ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗಾಗಿ ಅಸಂಖ್ಯ ಜನರು ಶ್ರಮಿಸಿದ್ದರೂ, ಇವರೆಲ್ಲರೂ ಯಾವುದೇ ಪ್ರಚಾರವನ್ನು ಗಳಿಸಿಕೊಳ್ಳುವ ಸಲುವಾಗಿ ಇದರಲ್ಲಿ ಭಾಗವಹಿಸಿರಲಿಲ್ಲ.

ರಾಜಕಾರಣಿಗಳ ಪ್ರಹಸನ 

ಪ್ರಾಯಶಃ ತಮ್ಮ ಜೀವಿತಾವಧಿಯಲ್ಲೇ ಒಂದೇ ಒಂದುಬಾರಿ ಪೊರಕೆಯನ್ನು ಕೈಯಲ್ಲಿ ಹಿಡಿದು ಕಸವನ್ನು ಗುಡಿಸದೇ ಇದ್ದ ನಮ್ಮ ಕೆಲ ರಾಜಕೀಯ ನೇತಾರರು, ಕೇವಲ ಮಾಧ್ಯಮಗಳ ಕಣ್ಣಿಗೆ ಬೀಳುವ ಮೂಲಕ ಒಂದಿಷ್ಟು ಪುಕ್ಕಟೆ ಪ್ರಚಾರವನ್ನು ಪಡೆಯುವ ಸಲುವಾಗಿಯೇ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೆಲವರು ಕೈಗವುಸುಗಳನ್ನು ಧರಿಸಿದ್ದಲ್ಲಿ, ಇನ್ನು ಕೆಲವರು ಘೋಷಣೆಗಳನ್ನು ಮುದ್ರಿಸಿದ ಟೋಪಿಗಳನ್ನು ಮತ್ತು ಆಕರ್ಷಕವಾದ ಬ್ಯಾಜ್ ಗಳನ್ನು ಧರಿಸಿ ಪೊರಕೆಯನ್ನು ಹಿಡಿದಿದ್ದರು. ದೇಶದ ಪ್ರಧಾನಿ ಮೋದಿಯವರು ಕಸವನ್ನು ಗುಡಿಸಿದ್ದು ಮಾತ್ರವಲ್ಲ, ಅದನ್ನು ಬಕೆಟ್ ನಲ್ಲಿ ಬರಿಗೈಯ್ಯಿಂದಲೇ ತುಂಬಿಸಿದ್ದರು. 

ಆದರೆ ಕೇವಲ ಪುಕ್ಕಟೆ ಪ್ರಚಾರಕ್ಕಾಗಿ ಅಭಿಯಾನದಲ್ಲಿ ಭಾಗಿಯಾಗಿದ್ದ ನೇತಾರರು, ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ನಿರ್ಗಮಿಸಿದ್ದರು. ಟೆಲಿವಿಷನ್ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ನಮ್ಮನ್ನಾಳುವವರ ಹಾವಭಾವಗಳನ್ನು ಕಂಡ ವೀಕ್ಷಕರು, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಏಕೆಂದರೆ ಮಾಧ್ಯಮಗಳು ಇವರು ಕಸವನ್ನು ಗುಡಿಸುವ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಪೊರಕೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದ್ದ ನೇತಾರರಿಗೆ ಆ ಜಾಗ ಅತ್ಯಂತ ಸ್ವಚ್ಛವಾಗಿದ್ದುದೇ ಗಮನಕ್ಕೆ ಬಂದಿರಲಿಲ್ಲ. ಅಂತೆಯೇ ಈ ನೇತಾರರ ಅಕ್ಕಪಕ್ಕದಲ್ಲಿ ಹಾಜರಿದ್ದ ಹಲವಾರು ಮರಿಪುಡಾರಿಗಳು ತಮ್ಮ ದೃಷ್ಟಿಯನ್ನು ಕ್ಯಾಮರಾಗಳತ್ತ ಹರಿಸಿದ್ದುದರಿಂದ, ತಮ್ಮ ಕಾಲಬುಡದಲ್ಲಿ ಕಸವೇ ಇರದಿದ್ದುದು ಅವರ ಗಮನಕ್ಕೆ ಬಂದಿರಲೇ ಇಲ್ಲ!. ಪುಕ್ಕಟೆ ಪ್ರಚಾರದ ಸಲುವಾಗಿ ಮಾಧ್ಯಮಗಳ ಮುಂದೆ ರೂಪದರ್ಶಿಗಳಂತೆ " ಪೋಸ್ " ನೀಡಿದ್ದ ಈ ನೇತಾರರಿಗೆ, ಮಾಧ್ಯಮಗಳು ಈ ದೃಶ್ಯಗಳನ್ನು ಬಿತ್ತರಿಸುವಾಗ ಇವರ ಮಾನವನ್ನೇ ಹರಾಜು ಹಾಕಲಿರುವುದರ ಅರಿವೂ ಇರಲಿಲ್ಲ. 

ಹೇಳುವುದೊಂದು, ಮಾಡುವುದು ........... ? 

ಇವೆಲ್ಲಕ್ಕೂ ಮಿಗಿಲಾಗಿ ಬೆಂಗಳೂರಿನಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಸಮಾರಂಭದ ಸಂದರ್ಭದಲ್ಲಿ ಹಂಚಿದ್ದ ಸಿಹಿತಿಂಡಿ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು, ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಅಲ್ಲಲ್ಲಿ ಎಸೆದು ಹೋಗಿದ್ದುದು ನಂಬಲಸಾಧ್ಯ ಎನಿಸುತ್ತದೆ. ಸ್ವಚ್ಚತೆಯ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದ ಗಾಂಧೀಜಿಯವರ ಪ್ರತಿಮೆಯ ಅನಾವರಣದ ಸಂದರ್ಭದಲ್ಲಿ ಹಾಗೂ ಅವರ ಜನ್ಮದಿನದಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಿರುವುದರ ಬಗ್ಗೆ ಅರಿವಿದ್ದರೂ, ಅತಿಥಿಗಳು ಈ ರೀತಿಯಲ್ಲಿ ವರ್ತಿಸಿರುವುದು ಅಕ್ಷಮ್ಯ ಅಪರಾಧವೇ ಸರಿ.ಅದೇ ರೀತಿಯಲ್ಲಿ ಸ್ವಚ್ಚತಾ ಅಭಿಯಾನದ ಸಲುವಾಗಿ ಸಾಕಷ್ಟು ಶ್ರಮಿಸಿದ್ದ ರಾಜ್ಯ ಸರ್ಕಾರದ ಅಧಿಕಾರಿಗಳು, ಇಂದಿಗೂ ಸಭೆ- ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಅತಿಥಿಗಳಿಗೆ ನೀಡುವುದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ. 

ಅದೇನೇ ಇರಲಿ, ಮಹಾತ್ಮಾ ಗಾಂಧೀಜಿಯವರ ೧೫೦ ನೇ ಜನ್ಮದಿನಕ್ಕೆ ಮುನ್ನ ಸಮಗ್ರ ಭಾರತವನ್ನು ತ್ಯಾಜ್ಯಮುಕ್ತ ಸ್ವಚ್ಚ್ ಭಾರತವನ್ನಾಗಿ ಪರಿವರ್ತಿಸಲು, ದೇಶದ ಜನತೆ ಪಣತೊಡಬೇಕಾಗಿದೆ. ತನ್ಮೂಲಕ " ಸ್ವಚ್ಛ ಭಾರತ: ಸ್ವಸ್ಥ ಹಾಗೂ ಸುಂದರ ಭಾರತ" ವನ್ನಾಗಿಸಲು ಇನ್ನಷ್ಟು ಶ್ರಮಿಸಬೇಕಿದೆ.

ಕೊನೆಯ ಮಾತು 

ಬೆಳಗಿನ ಜಾವ ಸುಮಾರು ಐದು ಕಿಲೋಮೀಟರ್ ನಡೆಯುವ ಹವ್ಯಾಸದೊಂದಿಗೆ, ರಸ್ತೆಯ ಅಕ್ಕಪಕ್ಕಗಳಲ್ಲಿ ಜನರು ಬಳಸಿ ಎಸೆದ ಕುಡಿಯುವ ನೀರು, ಲಘುಪಾನೀಯಗಳು ಮತ್ತು ಸಿದ್ಧ ಹಣ್ಣಿನ ರಸಗಳ ಖಾಲಿ ಬಾಟಲಿಗಳನ್ನು ಆಯ್ದು ತರುವುದು ನನ್ನ ಹವ್ಯಾಸಗಳಲ್ಲಿ ಒಂದಾಗಿದೆ. ಈ ರೀತಿಯಲ್ಲಿ ಹೆಕ್ಕಿ ತಂದಿರುವ ಖಾಲಿ ಬಾಟಲಿಗಳನ್ನು ಮನೆಮನೆಗಳಿಂದ ಕಸವನ್ನು ಸಂಗ್ರಹಿಸುವ ಸ್ವಸಹಾಯ ಗುಂಪುಗಳ ಕಾರ್ಯಕರ್ತರಿಗೆ ನೀಡಿ, ಗುಜರಿ ವರ್ತಕರಿಗೆ ಇದನ್ನು ಮಾರಿ ಸಿಗುವ ಹಣವನ್ನು ನೀವೇ ಬಳಸಿ ಎಂದು ಹೇಳಲು ಮಾತ್ರ ಮರೆಯುವುದಿಲ್ಲ. 

ಇದೀಗ ಸ್ವಚ್ಚತಾ ಅಭಿಯಾನ ಜರಗಿದ್ದ ಮರುದಿನ ಮುಂಜಾನೆ ನಿಶ್ಚಿತವಾಗಿಯೂ ಇಂದು ಖಾಲಿ ಬಾಟಲಿಗಳು ಸಿಗಲಿಕ್ಕಿಲ್ಲ ಎಂದು ಆಶಿಸಿದ್ದರೂ, ಒಂದೂವರೆ ಡಜನ್ ಬಾಟಲಿಗಳು ಸಿಕ್ಕಿದ್ದವು. ಅದರ ಮರುದಿನ ಸಂಗ್ರಹಿಸಿದ್ದ ಬಾಟಲಿಗಳ ಸಂಖ್ಯೆ ನೂತನ ದಾಖಲೆಯನ್ನು ಸೃಷ್ಠಿಸಿತ್ತು. ಏಕೆಂದರೆ ಕಳೆದ ಹಲವಾರು ತಿಂಗಳುಗಳಲ್ಲಿ ದಿನನಿತ್ಯ ಸಂಗ್ರಹವಾಗುತ್ತಿದ್ದ ಬಾಟಲಿಗಳ ಸರಾಸರಿ ಸಂಖ್ಯೆಯು ೧೫ ಆಗಿದ್ದಲ್ಲಿ, ಅಕ್ಟೋಬರ್ ೪ ರಂದು ಸಿಕ್ಕಿದ ಬಾಟಲಿಗಳ ಸಂಖ್ಯೆ ೩೧ ಆಗಿತ್ತು!. ಇದು ನಮ್ಮ ನಾಗರಿಕರಿಗೆ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಇರುವ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ. ಈ ಮನೋಭಾವನೆಯನ್ನು ಬದಲಾಯಿಸಲು ನಾವೆಲ್ಲರೂ ಇನ್ನಷ್ಟು ಶ್ರಮಿಸಬೇಕಾಗಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

  

No comments:

Post a Comment