Saturday, September 27, 2014

SVACH BHAARAT: SVASTH - SUNDAR BHAARAT




 ಸ್ವಚ್ಛ ಭಾರತ: ಸ್ವಸ್ಥ - ಸುಂದರ ಭಾರತ 

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ವರ್ಷದಲ್ಲಿ ೧೦೦ ಗಂಟೆಗಳನ್ನು ಸ್ವಚ್ಚತಾ ಅಭಿಯಾನಕ್ಕಾಗಿ ಮೀಸಲಿಡಬೇಕು ಎಂದು ವಿನಂತಿಸಿದ್ದಾರೆ. ಮೋದಿಯವರ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗಿಯಾದಲ್ಲಿ, ನಮ್ಮ ದೇಶವೂ ಅನ್ಯ ಪಾಶ್ಚಾತ್ಯ ದೇಶಗಳಂತೆ ಸ್ವಚ್ಛವಾಗುವುದರೊಂದಿಗೆ, ಸ್ವಸ್ಥ ಹಾಗೂ ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ಅಭಿಯಾನದಲ್ಲಿ ಪ್ರಚಾರದ ಸಲುವಾಗಿ ಭಾಗಿಯಾಗಿ, ಮರುದಿನ ಮತ್ತೆ ಎಂದಿನಂತೆ ತ್ಯಾಜ್ಯಗಳನ್ನು ಅತಿಯಾಗಿ ಉತ್ಪಾದಿಸುವುದರೊಂದಿಗೆ, ಕಂಡಲ್ಲಿ ಇವುಗಳನ್ನು ಎಸೆಯುವುದು ಈ ಅಭಿಯಾನದ ವೈಫಲ್ಯದೊಂದಿಗೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ.

ಸ್ವಚ್ಛತೆ- ಆರೋಗ್ಯ 

ಮನುಷ್ಯನ ಆರೋಗ್ಯ ಮತ್ತು ಸ್ವಚ್ಛತೆಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಮತ್ತು ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತವೆ. ಅದೇ ರೀತಿಯಲ್ಲಿ ನಾವಿಂದು ಅತಿಯಾಗಿ ಉತ್ಪಾದಿಸಿ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವ್ಯತ್ಯಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ. 

ಒಂದೆಡೆ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹ ಬಾಧಿಸಿದಲ್ಲಿ, ಮತ್ತೊಂದೆಡೆ ಬರದ ಬಾಧೆಯಿಂದಾಗಿ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಮತ್ತೆ ಕೆಲವೆಡೆ ಕಡುಬೇಸಗೆಯ ದಿನಗಳಲ್ಲೂ ಆಲಿಕಲ್ಲು ಮಳೆ ಸುರಿಯುವ ಹಾಗೂ ಚಳಿಗಾಲದ ದಿನಗಳಲ್ಲಿ ವಿಪರೀತ ಸೆಖೆಯ ಪೀಡೆ ಕಾಡುವ ವಿಚಾರ ಜನಸಾಮಾನ್ಯರಿಗೂ ತಿಳಿದಿದೆ. ಆದರೆ ಇಂತಹ ಸಮಸ್ಯೆಗಳಿಗೆ ಹೆಚ್ಚುತ್ತಿರುವ ದೇಶದ ಜನಸಂಖ್ಯೆ, ವಾಹನಗಳ ಸಂಖ್ಯೆ, ಪೋಲುಮಾಡುತ್ತಿರುವ ಅಮೂಲ್ಯ ನೀರು, ವಾತಾವರಣದಲ್ಲಿ ಬಿಡುಗಡೆ ಮಾಡುತ್ತಿರುವ ಹಸಿರುಮನೆ ಅನಿಲಗಳೊಂದಿಗೆ, ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳೂ ಕಾರಣ ಎನ್ನುವುದು ಅನೇಕರಿಗೆ ತಿಳಿದಿಲ್ಲ. ವರ್ಷದಲ್ಲೊಮ್ಮೆ ವನಮಹೋತ್ಸವವನ್ನು ಆಚರಿಸಿ ಒಂದಷ್ಟು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಇದು ಪರಿಹಾರಗೊಳ್ಳುವುದೂ ಇಲ್ಲ. 

ತ್ಯಾಜ್ಯ ವಿಲೇವಾರಿಯ ಸಮಸ್ಯೆ 

ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಟನ್ ತ್ಯಾಜ್ಯಗಳನ್ನು ಉತ್ಪಾದಿಸಲಾಗುತ್ತಿದ್ದು, ಇದನ್ನು ಕ್ರಮಬದ್ಧವಾಗಿ ವಿಂಗಡಿಸಿ, ಸುರಕ್ಷಿತವಾಗಿ ಸಾಗಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅಸಾಧ್ಯವೆನಿಸುತ್ತಿದೆ. ಜೊತೆಗೆ ಈಗಾಗಲೇ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳು ಹಾಗೂ ಲ್ಯಾಂಡ್ ಫಿಲ್ ಸೈಟ್ ಗಳು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು, ಇನ್ನಷ್ಟು ತ್ಯಾಜ್ಯ ವಿಲೇವಾರಿ ಘಟಕಗಳು ಮತ್ತು ಲ್ಯಾಂಡ್ ಫಿಲ್ ಸೈಟ್ ಗಳನ್ನುನಿರ್ಮಿಸಲು ನಗರಗಳ ಹೊರವಲಯಗಳಲ್ಲಿರುವ ಹಳ್ಳಿಗಳ ನಿವಾಸಿಗಳು ಸಂಮತಿಸುತ್ತಿಲ್ಲ.ಈ ಸಮಸ್ಯೆಗೆ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳೂ ಅಪವಾದವೆನಿಸಿಲ್ಲ. ದೇಶದ ಸರ್ವೊಚ್ಛ ನ್ಯಾಯಾಲಯವು ದೇಶದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವೈಜ್ಞಾನಿಕ ವಿಧಾನಗಳಿಂದ ತ್ಯಾಜ್ಯ ವಿಲೇವಾರಿ ಮಾಡಬಲ್ಲ ಘಟಕಗಳನ್ನು ಸ್ಥಾಪಿಸುವಂತೆ ಆದೇಶಿಸಿ ಹಲವಾರು ವರ್ಷಗಳೇ ಸಂದಿವೆ. ಆದರೆ ಈ ಆದೇಶವು ಈಗಾಗಲೇ ಕಸದ ಬುಟ್ಟಿಯನ್ನು ಸೇರಿದೆ. ಏಕೆಂದರೆ ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸದಿಂದಾಗಿ, ಇವೆಲ್ಲವನ್ನೂ ಪ್ರತಿನಿತ್ಯ ಸಂಗ್ರಹಿಸುವುದು ಪೌರ ಕಾರ್ಮಿಕರಿಗೂ ಅಕ್ಷರಶಃ ಅಸಾಧ್ಯವೆನಿಸುತ್ತಿದೆ. 

ವ್ಯವಸ್ಥೆಯ ವೈಫಲ್ಯ 

ವಿಶೇಷವೆಂದರೆ ಅನೇಕ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುತ್ತಿರುವ ಮೂಲಗಳಿಂದಲೇ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿವೆ. ಈ ವ್ಯವಸ್ಥೆಗಾಗಿ ಅಲ್ಪಪ್ರಮಾಣದ ಶುಲ್ಕವನ್ನೂ ನಿಗದಿಸಿವೆ. ಆದರೆ ಮಾಸಿಕ ೩೦ ರಿಂದ ೫೦ ರೂ.ಶುಲ್ಕವನ್ನು ನೀಡಲು ಸಿದ್ಧರಿಲ್ಲದ ಜನರಿಂದಾಗಿ, ಸಮಗ್ರ ವ್ಯವಸ್ಥೆಯೇ ವಿಫಲವೆನಿಸುತ್ತಿದೆ. ಶುಲ್ಕವನ್ನು ನೀಡಲು ನಿರಾಕರಿಸುವ ಜನರು ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ಕತ್ತಲಾದ ಬಳಿಕ ಅಥವಾ ಹೊತ್ತುಮೂಡುವ ಮುನ್ನ, ಸಮೀಪದ ಖಾಲಿಜಾಗಗಳಲ್ಲಿ ಅಥವಾ ಮಳೆನೀರು ಹರಿವ ಚರಂಡಿಗಳಲ್ಲಿ ಎಸೆದು ಮರೆಯಾಗುತ್ತಾರೆ. ಈ ತ್ಯಾಜ್ಯಗಳು ಮಳೆನೀರಿನ ಹರಿವಿಗೆ ಅಡಚಣೆಯನ್ನು ಒಡ್ಡುವುದರಿಂದ, ಅಲ್ಲಲ್ಲಿ ಮಡುಗಟ್ಟಿ ನಿಂತ ನೀರು ಸೊಳ್ಳೆಗಳ ಸಂತಾನಾಭಿವೃದ್ಧಿ ಕೇಂದ್ರವಾಗಿ ಪರಿಣಮಿಸುತ್ತದೆ. ಹಾಗೂ ಸೊಳ್ಳೆ, ಇಲಿ ಮತ್ತು ಕಲುಷಿತ ನೀರಿನಿಂದ ಉದ್ಭವಿಸಿ ಹರಡುವ ವ್ಯಾಧಿಗಳಿಗೆ ಮೂಲವೆನಿಸುತ್ತದೆ. ಇದಕ್ಕೂ ಮಿಗಿಲಾಗಿ ಬೃಹತ್ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳು ಮಳೆನೀರಿನೊಂದಿಗೆ ಹರಿದು, ನದಿ ಹಾಗೂ ಸಮುದ್ರಗಳನ್ನು ಸೇರುತ್ತಿವೆ. ಇದರಿಂದಾಗಿ ಜಲಚರಗಳಿಗೂ ಕಂಟಕವಾಗಿ ಪರಿಣಮಿಸುತ್ತಿವೆ. ಕಡಲ ಒಡಲಲ್ಲಿ ತುಂಬಿರುವ ಅಗಾಧ ಪ್ರಮಾಣದ ತ್ಯಾಜ್ಯಗಳ ಹಾಗೂ ಇವುಗಳ ದುಷ್ಪರಿಣಾಮಗಳ ಬಗ್ಗೆ ಅಂತರ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿವೆ.

ಕಷ್ಟನಷ್ಟಗಳಿಗೆ ಮೂಲ 

ಯಾವುದೇ ದೇಶದ ಪ್ರಜೆಗಳಿಗೆ ಅತಿಯಾದ ಅನಾರೋಗ್ಯದ ಸಮಸ್ಯೆಗಳು ಪೀಡಿಸುತ್ತಿದ್ದಲ್ಲಿ, ದೇಶದ ಉತ್ಪಾದನೆಯ ಹಾಗೂ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತೆಯೇ ಅನಾರೋಗ್ಯ ಪೀಡಿತ ಜನರು ದುಡಿಯಲಾಗದೇ ಇರುವುದರಿಂದ, ಅವರ ಆದಾಯಕ್ಕೂ ಕತ್ತರಿ ಬೀಳುತ್ತದೆ. ಆದಾಯವಿಲ್ಲದ ಕಾರಣದಿಂದಾಗಿ ಔಷದ ಸೇವಿಸದೇ ಇದ್ದಲ್ಲಿ, ಅನಾರೋಗ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಸಹಸ್ರಾರು " ಮಾನವ ಘಂಟೆ" ಗಳು ನಷ್ಟವಾಗುತ್ತವೆ. ಅದೇ ರೀತಿಯಲ್ಲಿ ಪ್ರಜೆಗಳ ಅನಾರೋಗ್ಯದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸುತ್ತದೆ.

ಪ್ರಜ್ಞಾಪರಾಧ

ಮನುಷ್ಯನು ಗೊತ್ತಿದ್ದೂ ಮಾಡುವ ಅಪರಾಧವನ್ನು ಪ್ರಜ್ಞಾಪರಾಧ ಎನ್ನುತ್ತಾರೆ. ಆಯುರ್ವೇದ ಸಂಹಿತೆಗಳಲ್ಲಿ ಉಲ್ಲೇಖಿಸಿರುವ ಈ ಪ್ರಮುಖ ವಿಚಾರವು, ತ್ಯಾಜ್ಯಗಳಿಂದ ಉದ್ಭವಿಸುತ್ತಿರುವ ವೈವಿಧ್ಯಮಯ ಆರೋಗ್ಯದ ಮತ್ತಿತರ ಸಮಸ್ಯೆಗಳ ವಿಚಾರದಲ್ಲಿ ಶತಪ್ರತಿಶತ ಸತ್ಯವೆನಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ದೇಶದ ಅಧಿಕತಮ ವಿದ್ಯಾವಂತರಿಗೆ ಇವೆಲ್ಲಾ ವಿಚಾರಗಳ ಅರಿವಿದೆ. ಆದರೆ ಸ್ವಯಂ ವಿದ್ಯಾವಂತರೇ ಬಳಸಿ ಎಸೆಯುವ ವಸ್ತುಗಳನ್ನು ಅತಿಯಾಗಿ ಬಳಸುವ ಮೂಲಕ, ತ್ಯಾಜ್ಯಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. ಇದರೊಂದಿಗೆ ಅಲ್ಲಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ತೆರವುಗೊಳಿಸುತ್ತಿಲ್ಲ ಎಂದು ದೂರುವ ಜನರು, ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆಯುವ ಅವಿವೇಕಿಗಳ ಬಗ್ಗೆ ತುಟಿ ಬಿಚ್ಚುವುದೇ ಇಲ್ಲ!.

ನೀವೇನು ಮಾಡಬಹುದು  

ಅದೇನೇ ಇರಲಿ, ಇದೀಗ ದೇಶದ ಪ್ರಧಾನ ಮಂತ್ರಿಯವರು ವಿನಂತಿಸಿರುವಂತೆ, ಕನಿಷ್ಠಪಕ್ಷ ನೀವು ಪ್ರತಿನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡಿ. ಹಾಗೂ ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಮನೆಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ತಪ್ಪದೆ ನೀಡಿ. ನಿಮ್ಮ ಅಕ್ಕಪಕ್ಕದ ನಿವಾಸಿಗಳೂ ಇದರಲ್ಲಿ ಸಹಕರಿಸುವಂತೆ ಪ್ರೇರೇಪಿಸಿ. ನಿಮ್ಮ ಮನೆ, ಸುತ್ತಲಿನ ಆವರಣ, ನಿಮ್ಮ ಊರು ಮತ್ತು ಪರಿಸರಗಳನ್ನು ಸ್ವಚ್ಚವಾಗಿ ಇರಿಸಲು ಮನಸ್ಪೂರ್ವಕ ಸಹಕಾರವನ್ನು ನೀಡಿ. ತನ್ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, ಸ್ವಸ್ಥ ಹಾಗೂ ಸುಂದರ ಭಾರತ ಎನ್ನುವ ಮೋದಿಯವರ ಕನಸನ್ನು ನನಸಾಗಿಸಲು ಸಜ್ಜಾಗುವುದರೊಂದಿಗೆ, ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು " ಅವಿಸ್ಮರಣೀಯ " ವನ್ನಾಗಿಸಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment