Wednesday, September 10, 2014

ANEMIA




 ರಕ್ತಹೀನತೆಯಿಂದ ರಕ್ಷಿಸಿಕೊಳ್ಳಿ 

ಬಹುತೇಕ ಭಾರತೀಯರಲ್ಲಿ, ಅದರಲ್ಲೂ ವಿಶೇಷವಾಗಿ ಬಡತನದ ರೇಖೆಗಿಂತ ಕೆಳಗಿರುವ ಜನರಲ್ಲಿ ವ್ಯಾಪಕವಾಗಿ ಕಂಡುಬರುವ ಆರೋಗ್ಯದ ಸಮಸ್ಯೆಗಳಲ್ಲಿ ರಕ್ತಹೀನತೆಯೂ ಒಂದಾಗಿದೆ. ಅವಿದ್ಯಾವಂತರ ಅಜ್ಞಾನ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಮನುಷ್ಯನ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೋಷಕಾಂಶಗಳನ್ನು ಸೇವಿಸದಿರುವುದೇ, ಬಡವರ್ಗದ ಜನರನ್ನು ಬಾಧಿಸುತ್ತಿರುವ ರಕ್ತಹೀನತೆಗೆ ಪ್ರಮುಖ ಕಾರಣವೆನಿಸಿದೆ. 
---------           ----------          ----------            -----------          -----------           -------------- 

ಉದ್ಯೋಗದಿಂದ ನಿವೃತ್ತರಾದ ಶ್ಯಾಮರಾಯರು, ತನ್ನ ಪತ್ನಿ ಮತ್ತು ಮಗನ ಸಂಸಾರದೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದರು. ಸದಾ ಸಕ್ರಿಯರಾಗಿದ್ದ ರಾಯರಿಗೆ, ಇದೀಗ ದೊರೆಯುತ್ತಿದ್ದ ಶಾರೀರಿಕ ಮತ್ತು ಮಾನಸಿಕ ವಿಶ್ರಾಂತಿಗಳಿಂದಾಗಿ ಹಸಿವೆಯೂ ಕಡಿಮೆಯಾಗಿತ್ತು.ಇದರೊಂದಿಗೆ ಹಿಂದಿನ ತಲೆಮಾರಿನ ಅನೇಕ ಹಿರಿಯರಂತೆ, ತನಗೆ ವಯಸ್ಸಾಯಿತು ಎನ್ನುವ ಏಕಮಾತ್ರ ಕಾರಣದಿಂದಾಗಿ ದಿನನಿತ್ಯ ಸೇವಿಸುತ್ತಿದ್ದ  ಆಹಾರದ ಪ್ರಮಾಣವನ್ನೂ ಸಾಕಷ್ಟು ಕಡಿಮೆ ಮಾಡಿದ್ದರು. 

ನಿವೃತ್ತರಾಗಿ ವರ್ಷ ಕಳೆಯುವಷ್ಟರಲ್ಲಿ ರಾಯರಿಗೆ ಆಗಾಗ ವಿಪರೀತ ಆಯಾಸ ಹಾಗೂ ನಿಶ್ಶಕ್ತಿಗಳೊಂದಿಗೆ ತಲೆ ತಿರುಗುವಿಕೆ ಮತ್ತು ಕಣ್ಣುಕತ್ತಲಾವರಿಸುವುದು ಆರಂಭವಾಗಿತ್ತು. ಯಾವುದೇ ಕಾಯಿಲೆಯಿಂದ ಬಳಲದ ರಾಯರು, ಈ ಸಮಸ್ಯೆಗೆ ತನ್ನ ಇಳಿವಯಸ್ಸಿನ ಪ್ರಭಾವವೇ ಕಾರಣವೆಂದು ಭ್ರಮಿಸಿದ್ದರು. ಇದೇ ಕಾರಣದಿಂದಾಗಿ ತನ್ನ ಪತ್ನಿ ಮತ್ತು ಮಗನ ಬಳಿ ಈ ವಿಚಾರವನ್ನು ಪ್ರಸ್ತಾಪಿಸದ ರಾಯರು, ತನ್ನ ಕುಟುಂಬ ವೈದ್ಯರನ್ನು ಕೂಡಾ ಭೇಟಿಯಾಗಿರಲಿಲ್ಲ.

ಅದೊಂದು ದಿನ ಬೆಳಿಗ್ಗೆ ಎದ್ದು ಬಹಿರ್ದೆಸೆಗೆ ತೆರಳಲೆಂದು ಹೊರಟ ರಾಯರು, ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಕುಸಿದುಬಿದ್ದು ಪ್ರಜ್ಞಾಹೀನರಾದರು. ಸದ್ದು ಕೇಳಿ ಧಾವಿಸಿದ ಮನೆಮಂದಿಯ ಉಪಚಾರದಿಂದ ತುಸು ಚೇತರಿಸಿಕೊಂಡ ರಾಯರ ಜಂಘಾಬಲವೇ ಉಡುಗಿಹೋಗಿತ್ತು. ವಾರ ಕಳೆಯುವಷ್ಟರಲ್ಲಿ ಮತ್ತೆ ಎರಡುಬಾರಿ ಪುನರಾವರ್ತನೆಗೊಂಡಿದ್ದ ಈ ಸಮಸ್ಯೆಯಿಂದಾಗಿ, ರಾಯರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. 

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ರಾಯರನ್ನು ಕಾಣಲೆಂದು ಬಂದಿದ್ದ ವೈದ್ಯಮಿತ್ರರಿಗೆ ಸ್ನೇಹಿತನನ್ನು ಕಂಡು ಆಶ್ಚರ್ಯವಾಗಿತ್ತು. ಅರೆಕ್ಷಣವೂ ಸುಮ್ಮನಿರದ ತನ್ನ ಸ್ನೇಹಿತನು ಇದೀಗ ಜೀವಂತಶವದಂತೆ ಹಾಸಿಗೆ ಹಿಡಿದಿರುವುದನ್ನು ಕಂಡ ಮಿತ್ರನಿಗೆ, ಕರುಳು ಕಿತ್ತುಬಂದಂತಾಗಿತ್ತು. ಆದರೆ ಮರುಕ್ಷಣದಲ್ಲೇ ಚೇತರಿಸಿಕೊಂಡ ಮಿತ್ರನ ವೈದ್ಯ ಬುದ್ಧಿ ಜಾಗೃತವಾಗಿತ್ತು. ಬಳಿಕ ರಾಯರನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯಮಿತ್ರರಿಗೆ,  "ತೀವ್ರ ರಕ್ತಹೀನತೆ " ಬಾಧಿಸುತ್ತಿರುವುದು ಪತ್ತೆಯಾಗಿತ್ತು. ತಕ್ಷಣ ತನ್ನ ವಾಹನದಲ್ಲಿ ರಾಯರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತಜ್ಞವೈದ್ಯರಿಂದ ತಪಾಸಣೆಗೆ ಒಳಪಡಿಸಿದಾಗ,ವೈದ್ಯಮಿತ್ರರ ಸಂದೇಹ ನಿಜವಾಗಿತ್ತು. ಅರ್ಥಾತ್, ರಾಯರ ರಕ್ತದಲ್ಲಿನ ಹೆಮೊಗ್ಲೋಬಿನ್ ಸಾಂದ್ರತೆಯು ೪ ಗ್ರಾಂ ಗಳಿಗೆ ಕುಸಿದಿತ್ತು!. 

ರೋಗಿಯ ವಯಸ್ಸು ಮತ್ತು ರಕ್ತಹೀನತೆಯ ತೀವ್ರತೆಯನ್ನು ಗಮನಿಸಿದ ತಜ್ಞವೈದ್ಯರು, ಅವಶ್ಯಕ ಪ್ರಮಾಣದ ರಕ್ತವನ್ನು ನೀಡುವ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದರು.ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡ ರಾಯರು, ಎರಡು ದಿನಗಳ ಬಳಿಕ ಮನೆಗೆ ಮರಳುವಾಗ ನಿರಾಯಾಸದಿಂದ ನಡೆದುಕೊಂಡೇ ಬಂದಿದ್ದರು!. 

ರಕ್ತಹೀನತೆ ಎಂದರೇನು?

ಕಾರಣಾಂತರಗಳಿಂದ ಮನುಷ್ಯನ ರಕ್ತದಲ್ಲಿನ ಹೆಮೊಗ್ಲೋಬಿನ್ ನ ಅಂಶವು ಕಡಿಮೆಯಾಗಿರುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ " ಅನೀಮಿಯಾ " ಅರ್ಥಾತ್, ರಕ್ತಹೀನತೆ ಎನ್ನುವರು. ಅಂತೆಯೇ ಈ ವಿಶಿಷ್ಟ ಸಮಸ್ಯೆ ಉದ್ಭವಿಸಲು ಮೂಲವೆನಿಸುವ ಕಾರಣಗಳಿಗೆ ಅನುಗುಣವಾಗಿ ಇವುಗಳ ಪ್ರಭೇದಗಳನ್ನು ಗುರುತಿಸಿದ್ದಾರೆ. 

ಸಾಮಾನ್ಯವಾಗಿ ಆರೋಗ್ಯವಂತ ಪುರುಷರ ರಕ್ತದಲ್ಲಿ ೧೩ ರಿಂದ ೧೮ ಗ್ರಾಮ್ಸ್, ಮಹಿಳೆಯರಲ್ಲಿ ೧೧ ರಿಂದ ೧೬, ಮಕ್ಕಳಲ್ಲಿ ೧೧ ರಿಂದ ೧೬.೫ ಮತ್ತು ಪುಟ್ಟ ಕಂದಮ್ಮಗಳಲ್ಲಿ ೧೬.೫ ರಿಂದ ೧೯.೫ ರಷ್ಟು ಹೆಮೊಗ್ಲೋಬಿನ್ ನ ಅಂಶ ಇರುವುದು. ಸರಳವಾದ ರಕ್ತ ಪರೀಕ್ಷೆಯ ಮೂಲಕ ಸುಲಭವಾಗಿ ಅರಿತುಕೊಳ್ಳಬಹುದಾದ ಈ ಹೆಮೊಗ್ಲೋಬಿನ್ ನ ಪ್ರಮಾಣವು ತೀವ್ರವಾಗಿ ಕಡಿಮೆಯಾದಾಗ, ರೋಗಿಯು ರಕಹೀನತೆಯಿಂದ ಬಳಲುತ್ತಿರುವನೆಂದು ಖಚಿತವಾಗಿ ನಿರ್ಧರಿಸಬಹುದಾಗಿದೆ. 

ಈ ಸಮಸ್ಯೆಗೆ ಕಾರಣವೇನು?

ಬಡತನದ ರೇಖೆಗಿಂತ ಕೆಳಗಿರುವ ಜನರೇ ಹೆಚ್ಚಾಗಿರುವ ಭಾರತದಲ್ಲಿ, ಸಮೃದ್ಧ ಪೋಷಕಾಂಶಗಳಿರುವ ಸಮತೋಲಿತ ಆಹಾರವನ್ನು ಸೇವಿಸದಿರುವುದು ಹಾಗೂ ಸಮರ್ಪಕವಾದ ಶೌಚಾಲಯವನ್ನು ನಿರ್ಮಿಸಿ ಬಳಸದಿರುವುದರಿಂದಾಗಿ ಸುಲಭದಲ್ಲೇ ಹರಡುವ ಜಂತುಹುಳಗಳ ಬಾಧೆ ಈ ಸಮಸ್ಯೆಗೆ ಪ್ರಮುಖ ಕಾರಣವೆನಿಸಿದೆ. 

ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣದ ಸತ್ವ ಹಾಗೂ ಪೋಷಕಾಂಶಗಳ ಕೊರತೆ, ಶರೀರದ ಕಬ್ಬಿಣದ ಸತ್ವಗಳ ಬೇಡಿಕೆಯ ಪ್ರಮಾಣ ಹೆಚ್ಚಾಗುವ ಸ್ಥಿತಿ ( ಉದಾ- ಗರ್ಭಧಾರಣೆ ), ನಿರ್ದಿಷ್ಟ ಕಾರಣಗಳಿಂದಾಗಿ ಕರುಳಿನಲ್ಲಿ ಕಬ್ಬಿಣದ ಸತ್ವ ಹಾಗೂ ಪೋಷಕಾಂಶಗಳನ್ನು ಹೀರುವ ಪ್ರಕ್ರಿಯೆಯ ತೊಂದರೆಗಳು, ತೀವ್ರ ಅಥವಾ ದೀರ್ಘಕಾಲೀನ ರಕ್ತಸ್ರಾವದ ಸಮಸ್ಯೆಗಳು ಮತ್ತು ಕರುಳಿನ ಕಾಯಿಲೆಗಳು, ಕಾರಣಾಂತರಗಳಿಂದ ಅಸ್ಥಿಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ಕೊರತೆ ಉಂಟಾಗುವುದು ಮತ್ತು ಕೆಲವೊಂದು ಕಾರಣಗಳಿಂದ ಕೆಂಪು ರಕ್ತಕಣಗಳು ಅತಿಯಾಗಿ ನಾಶವಾಗುತ್ತಿರುವುದು ರಕ್ತಹೀನತೆಗೆ ಪ್ರಮುಖ ಕಾರಣಗಳಾಗಿವೆ. 

ಸಾಮಾನ್ಯವಾಗಿ ರಕ್ತಹೀನತೆ ಉದ್ಭವಿಸಲು ಮೇಲೆ ನಮೂದಿಸಿದ ಒಂದು ಅಥವಾ ಅದಕ್ಕೂ ಅಧಿಕ ಕಾರಣಗಳು ಮೂಲವೆನಿಸುತ್ತವೆ. ಇದರೊಂದಿಗೆ ಜಗತ್ತಿನ ಬಹುತೇಕ ಬಡರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ವ್ಯಾಧಿಗೆ ಅಜ್ಞಾನ, ಬಡತನ ಮತ್ತು ದಟ್ಟ ದಾರಿದ್ರ್ಯಗಳೇ ಕಾರಣವೆನಿಸುತ್ತವೆ. 

ವ್ಯಾಧಿಯ ಲಕ್ಷಣಗಳು 

ಅನೀಮಿಯಾ ಪೀಡಿತ ವ್ಯಕ್ತಿಗಳಿಗೆ ಅತಿ ಆಯಾಸ, ನಿಶ್ಶಕ್ತಿ, ಒಂದಿಷ್ಟು ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಿದೊಡನೆ ಏದುಬ್ಬಸ, ತಲೆನೋವು, ನಿದ್ರಾಹೀನತೆ, ದೃಷ್ಠಿಮಾಂದ್ಯ, ವಾಕರಿಕೆ, ವಾಂತಿ, ನಾಡಿ ಮತ್ತು ಹೃದಯ ಬಡಿತಗಳ ಗತಿ ತೀವ್ರಗೊಳ್ಳುವುದು, ಎದೆಯಲ್ಲಿ ಢವಗುಟ್ಟಿದಂತಾಗುವುದು, ಅಂಗೈ, ಅಂಗಾಲು, ಮುಖ, ತುಟಿ,ನಾಲಿಗೆ ಹಾಗೂ ಕಣ್ಣುಗಳು ಬಿಳಿಚಿಕೊಂಡಂತೆ ಕಾಣುವುದು, ಕೈಕಾಲುಗಳ ಬೆರಳುಗಳಲ್ಲಿ ಸೂಜಿಯಿಂದ ಚುಚ್ಚಿದಂತಾಗುವುದು ಮತ್ತು ತಲೆ ತಿರುಗಿದಂತಾಗುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ಅತಿಯಾದ ಹಾಗೂ ದೀರ್ಘಕಾಲೀನ ರಕ್ತಹೀನತೆಯಿಂದ ಬಳಲುತ್ತಿರುವವರಲ್ಲಿ ನಾಲಿಗೆಯ ಉರಿಯೂತ, ಬಾಯಿ ಮತ್ತು ತುಟಿಯ ಎರಡೂ ಮೂಲೆಗಳಲ್ಲಿ ಹುಣ್ಣುಗಳು, ಆಹಾರ ನುಂಗಲು ಮತ್ತು ಮಾತನಾಡಲು ಕಷ್ಟವೆನಿಸುವುದು, ಪ್ಲೀಹವೃದ್ಧಿ ಮತ್ತು ಉಗುರುಗಳು ಚಮಚದ ಆಕಾರವನ್ನು ತಾಳುವುದು ಹೆಚ್ಚಾಗಿ ಕಂಡುಬರುತ್ತದೆ. 

ಅದೇ ರೀತಿಯಲ್ಲಿ ಈ ಸಮಸ್ಯಾಪೀಡಿತ ವಯೋವೃದ್ಧರಲ್ಲಿ, ಎದೆ ಹಾಗೂ ಕಾಲಿನ ಮಾಂಸಪೇಶಿಗಳಲ್ಲಿ ನೋವು, ಪಾದಗಳಲ್ಲಿ ನೀರು ಸಂಗ್ರಹಗೊಂಡು ಉಂಟಾಗುವ ಬಾವು ಮತ್ತು ಹೃದಯ ವೈಫಲ್ಯಗಳಂತಹ ಲಕ್ಷಣಗಳೂ ಕಂಡುಬರುತ್ತವೆ. 

ಚಿಕಿತ್ಸೆ 

ರಕ್ತಹೀನತೆಯ ಮೂಲಕಾರಣವನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ರೋಗಿಯ ಸಮಸ್ಯೆಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುವುದು ವೈದ್ಯರ ಆದ್ಯ ಕರ್ತವ್ಯವೂ ಹೌದು. ರಕ್ತಸ್ರಾವದಿಂದ ಬಳಲುವ ರೋಗಿಗಳಲ್ಲಿ ಇರಬಹುದಾದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು, ಕ್ಷಯ ರೋಗ, ಮೂಲವ್ಯಾಧಿ, ಜಠರದ ಹುಣ್ಣುಗಳು, ಕೆಲವಿಧದ ಸೋಂಕುಗಳು ಹಾಗೂ ಜಂತುಹುಳಗಳ ಬಾಧೆಯನ್ನು ನಿವಾರಿಸಲು ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುವುದು. ಇದರೊಂದಿಗೆ ರಕ್ತಹೀನತೆಗೆ ಕಾರಣವೆನಿಸಬಲ್ಲ ಪೋಷಕಾಂಶ ರಹಿತ ಹಾಗೂ ದೋಷಪೂರಿತ ಆಹಾರ ಸೇವನಾ ಕ್ರಮವನ್ನು ಬದಲಾಯಿಸುವುದು ಅತ್ಯವಶ್ಯಕ ಎನಿಸುವುದು. 

ವಿವಿಧ ಕಾರಣಗಳಿಂದ ಉದ್ಭವಿಸಿರಬಹುದಾದ ತೀವ್ರ ರಕ್ತಸ್ರಾವದಿಂದಾಗಿ ಪ್ರಾಣಾಪಾಯದ ಭೀತಿಯಲ್ಲಿರುವ ರೋಗಿಗಳಿಗೆ ಕ್ಷಿಪ್ರಗತಿಯಲ್ಲಿ ಸೂಕ್ತ ಪ್ರಮಾಣದ ರಕ್ತವನ್ನೇ ನೀಡಬೇಕಾಗುವುದು. ಸೌಮ್ಯ ರೂಪದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕಬ್ಬಿಣದ ಸತ್ವದ ಮಾತ್ರೆಗಳು, ಕ್ಯಾಪ್ಸೂಲ್ ಅಥವಾ ಸಿರಪ್ ಗಳನ್ನು ನೀಡಬಹುದಾಗಿದೆ. ಅಪರೂಪದಲ್ಲಿ ಕೆಲ ರೋಗಿಗಳಿಗೆ, ವಿಶೇಷವಾಗಿ ದೀರ್ಘಕಾಲೀನ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬಯಸದ ವ್ಯಕ್ತಿಗಳಿಗೆ ಇಂಜೆಕ್ಷನ್ ನೀಡುವುದುಂಟು.

ತಡೆಗಟ್ಟುವುದೆಂತು?

ಮನುಷ್ಯನ ಶರೀರದ ಮೂಲಭೂತ ಅವಶ್ಯಕತೆಗಳಲ್ಲಿ ಶುದ್ಧವಾದ ಗಾಳಿ,ನೀರು ಮತ್ತು ಆಹಾರಗಳು ಪ್ರಮುಖವಾಗಿವೆ. ಮಾನವ ಶರೀರದ ಪಾಲನೆ, ಪೋಷಣೆ ಹಾಗೂ ವೈವಿಧ್ಯಮಯ ಜೈವಿಕ ಕ್ರಿಯೆಗಳಿಗೆ ಉತ್ತಮ ಗುಣಮಟ್ಟದ ಆಹಾರವು ಅತ್ಯವಶ್ಯಕವಾಗಿದೆ. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವೂ ಇದೇ. ಪೋಷಕಾಂಶಗಳಿಂದ ಸಮೃದ್ಧವಾದ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ನಮ್ಮ ಆರೋಗ್ಯದೊಂದಿಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಂತೆಯೇ ಇದರಲ್ಲಿ ಕೊರತೆಯುಂಟಾದಾಗ ನಿಸ್ಸಂದೇಹವಾಗಿ ಅನಾರೋಗ್ಯ ಬಾಧಿಸುತ್ತದೆ. 

ನಾವು ಪ್ರತಿನಿತ್ಯ ಸೇವಿಸುವ ವೈವಿಧ್ಯಮಯ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಲವಣಗಳು, ಕೊಬ್ಬು, ನಾರು ಪದಾರ್ಥಗಳು ಮತ್ತು ನೀರು ಎಂದು ವಿಂಗಡಿಸಬಹುದಾದ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯುಂಟಾದಾಗ, ಅದಕ್ಕೆ ಅನುಗುಣವಾಗಿ ಕೆಲವೊಂದು ನಿರ್ದಿಷ್ಟ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. 

ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಬಡವರು ಮೂರು ಹೊತ್ತು ಅನ್ನವನ್ನೇ ಉಣ್ಣುವುದರಿಂದ, ಇಂತಹ ವ್ಯಕ್ತಿಗಳಿಗೆ ಅನ್ನದಲ್ಲಿ ಲಭ್ಯವಿರುವ ಪೋಷಕಾಂಶಗಳು ಮಾತ್ರ ಲಭಿಸುತ್ತವೆ. ಇದರಿಂದಾಗಿ ರಕ್ತವರ್ಧಕ ಪೋಷಕಾಂಶಗಳ ಕೊರತೆ ಉದ್ಭವಿಸುವುದರಿಂದ ರಕ್ತಹೀನತೆ ಬಾಧಿಸುತ್ತದೆ. ಈ ಸಮಸ್ಯೆಯ ನಿವಾರಣೆಗಾಗಿ ರಕ್ತವರ್ಧಕ ಔಷದಗಳನ್ನು ಸೇವಿಸಿದರೂ, ಸಮಸ್ಯೆ ಪರಿಹಾರಗೊಂಡ ಬಳಿಕ ಸಮೃದ್ಧ ಪೋಷಕಾಂಶಗಳಿರುವ ಆಹಾರ ಸೇವನೆಯನ್ನು ದಿನನಿತ್ಯ ಪರಿಪಾಲಿಸಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ರಕ್ತಹೀನತೆಯ ಸಮಸ್ಯೆ ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. 

ಅಂತಿಮವಾಗಿ ಹೇಳುವುದಾದಲ್ಲಿ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಮಿಗಿಲು " ಎನ್ನುವ ಆಡುಮಾತಿನಂತೆ, ನಿಮ್ಮ ದೈನಂದಿನ ಆಹಾರ ಸೇವನಾಕ್ರಮದಲ್ಲಿ ಈಗಿನಿಂದಲೇ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಿ. ಜೊತೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳಗಳ ನಿವಾರಣೆಗಾಗಿ ಔಷದವನ್ನು ತಪ್ಪದೆ ಸೇವಿಸಿ. ತನ್ಮೂಲಕ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆಯನ್ನು ದೂರವಿರಿಸುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೦-೦೬-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.



No comments:

Post a Comment