Friday, September 19, 2014

ORGAN DONATION - SOME INFORMATION





 ಅಂಗದಾನದ ಬಗ್ಗೆ ಮತ್ತೊಂದಿಷ್ಟು ಮಾಹಿತಿ 

 " ಜೀವದಾನ " ಎನಿಸುವ ಅಂಗದಾನವನ್ನು ಪ್ರೋತ್ಸಾಹಿಸಿ ಲೇಖನವನ್ನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ ಬಳಿಕ ಅನೇಕ ಓದುಗರು ಈ ಬಗ್ಗೆ ತಮ್ಮ ಸಂದೇಹಗಳಿಗೆ ಸಮಾಧಾನವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಇದೇ ಕಾರಣದಿಂದಾಗಿ ಆ ಲೇಖನವನ್ನು ಮತ್ತೆ ಪರಿಷ್ಕರಿಸಿ ಬ್ಲಾಗ್ ನಲ್ಲಿ ಪ್ರಕಟಿಸಿದ್ದರೂ, ಒಂದಿಷ್ಟು ಹೆಚ್ಚುವರಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

ಅಂಗದಾನ ಎಂದರೇನು?

ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ' ಮಸ್ತಿಷ್ಕ ಮೃತ " ಸ್ಥಿತಿಯಲ್ಲಿರುವಾಗ, ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ. 

ಯಾರು ಅಂಗದಾನ ಮಾಡಬಹುದು? 

ವಯಸ್ಸು, ಲಿಂಗ, ಜಾತಿಮತಗಳ ಭೇದವಿಲ್ಲದೇ, ಆರೋಗ್ಯವಂತ ವ್ಯಕ್ತಿಯೊಬ್ಬರು ತಮ್ಮ ಪ್ರಮುಖ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಚಿಕ್ಕ ಮಕ್ಕಳೂ ಈ ಜೀವದಾನವೆನಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಬಹುದಾದರೂ, ಇದಕ್ಕೆ ಇವರ ಹೆತ್ತವರ ಸಮ್ಮತಿ ಅತ್ಯವಶ್ಯಕವೆನಿಸುವುದು. 

ಆದರೆ ಮಾರಕ ಕ್ಯಾನ್ಸರ್, ಎಚ್.ಐ.ವಿ - ಏಡ್ಸ್, ರಕ್ತನಾಳಗಳ ಮೂಲಕ ಮಾದಕ ದ್ರವ್ಯಗಳನ್ನು ಸೇವಿಸುವ ವ್ಯಸನಿಗಳು ಮತ್ತು ಗಂಭೀರ ಹಾಗೂ ತೀವ್ರ ಸ್ವರೂಪದ ಸೋಂಕು ಪೀಡಿತರು ಅಂಗದಾನಕ್ಕೆ ಅನರ್ಹರೆನಿಸುತ್ತಾರೆ.

ಯಾವ ಅಂಗಗಳನ್ನು ದಾನ ಮಾಡಬಹುದು?

ಮನುಷ್ಯನ ಶರೀರದ ಪ್ರಮುಖ ಅಂಗಗಳಾದ ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು, ಯಕೃತ್,ಮೇದೋಜೀರಕ ಗ್ರಂಥಿ ಇತ್ಯಾದಿಗಳನ್ನು ಮಸ್ತಿಷ್ಕ ಮೃತರಾದಲ್ಲಿ ಮಾತ್ರ ದಾನ ಮಾಡಬಹುದು. ಆದರೆ ರೋಗಿಯ ಸಮೀಪ ಸಂಬಂಧಿಗಳು,ತಾವು ಜೀವಂತರಾಗಿರುವಾಗಲೇ ಯಕೃತ್ತಿನ ಒಂದು ಭಾಗ ಅಥವಾ ಒಂದು ಮೂತ್ರಪಿಂಡವನ್ನು ( ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನಿನನ್ವಯ ) ದಾನ ಮಾಡಬಹುದಾಗಿದೆ. ಆದರೆ ದೃಷ್ಟಿಹೀನರಿಗೆ ಅತ್ಯವಶ್ಯಕ ಎನಿಸುವ ಕಾರ್ನಿಯಾ, ಹೃದಯದ ಕವಾಟಗಳು, ಚರ್ಮ ಹಾಗೂ ಎಲುಬುಗಳನ್ನು ಒಬ್ಬ ವ್ಯಕ್ತಿ ಸ್ವಾಭಾವಿಕವಾಗಿ ಮೃತಪಟ್ಟ ಬಳಿಕವೇ ದಾನ ಮಾಡಬೇಕಾಗುವುದು. 

ಮಸ್ತಿಷ್ಕ ಮೃತ ಎಂದರೇನು?

ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಸ್ಥಿತಿಯನ್ನು ಮಸ್ತಿಷ್ಕ ಮೃತ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ನಾಲ್ವರು ತಜ್ಞವೈದ್ಯರ ತಂಡವು ಧೃಢಪಡಿಸಬೇಕಾಗುತ್ತದೆ. 

ಅಂಗದಾನ ಉಪಯುಕ್ತವೆನಿಸುವುದೇ?

ಸಾಮಾನ್ಯವಾಗಿ ಅಂಗಾಂಗಗಳ ವೈಫಲ್ಯದಿಂದ ಸಾವಿನ ದವಡೆಗಳಲ್ಲಿ ಸಿಲುಕಿರುವ ವ್ಯಕ್ತಿಗಳಿಗೆ, ಅಂಗ ದಾನವು " ಪುನರ್ಜನ್ಮ " ವೆನಿಸುತ್ತದೆ. ಹೃದಯ, ಶ್ವಾಸಕೋಶ, ಯಕೃತ್, ಮೇದೋಜೀರಕ ಗ್ರಂಥಿ ಇತ್ಯಾದಿ ಅಂಗಗಳ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳು  ನೂತನ ಅಂಗಜೋಡನೆಯ ಫಲವಾಗಿ ಮತ್ತೆ ಇತರ ಆರೋಗ್ಯವಂತ ವ್ಯಕ್ತಿಗಳಂತೆ ಸಕ್ರಿಯ ಜೀವನವನ್ನು ನಡೆಸಬಹುದು. ಅಂತೆಯೇ ದೃಷ್ಠಿಹೀನರಿಗೆ ದೃಷ್ಠಿ, ಯಾತನೆಯಿಂದ ಬಳಲುತ್ತಿದ್ದವರಿಗೆ ಇದರಿಂದ ಮುಕ್ತಿ ಮತ್ತು ನಡೆದಾಡಲೂ ಆಗದಿದ್ದ ವ್ಯಕ್ತಿಗಳಿಗೆ ಇತರರಂತೆ ನಡೆದಾಡುವ ಅವಕಾಶವು ಅಂಗದಾನದಿಂದ ಲಭಿಸುವುದು.

ದಾನಿಗಳ ನೊಂದಣಿಯ ಉಪಯುಕ್ತತೆ 

ತಾವು ಅಂಗಾಂಗಗಳ ದಾನ ಮಾಡುವುದಾಗಿ ನಿಗದಿತ ಸ್ವಯಂಸೇವಾ ಸಂಘಟನೆಗಳ ಮೂಲಕ ಹೆಸರನ್ನು ನೋಂದಾಯಿಸಿದಲ್ಲಿ, ಅಂಗಾಂಗಗಳ ದಾನಿಗಳಿಗಾಗಿ ಕಾಯುತ್ತಿರುವ ಸಹಸ್ರಾರು ರೋಗಿಗಳಿಗೆ ಮತ್ತು ಅಂಗಾಂಗಗಳ ಕಸಿಯನ್ನು ಮಾಡುವ ವೈದ್ಯರಿಗೆ ಅತ್ಯಂತ ಉಪಯುಕ್ತವೆನಿಸುತ್ತದೆ. ಸಂದರ್ಭೋಚಿತವಾಗಿ ಇಂತಹ ದಾನಿಗಳು ಕಾರಣಾಂತರಗಳಿಂದ ಮಸ್ತಿಷ್ಕ ಮೃತರಾದಲ್ಲಿ, ಮುಂದಿನ ಪ್ರಕ್ರಿಯೆಗಳಿಗಾಗಿ ಸಮಯವನ್ನು ವ್ಯರ್ಥಮಾಡಬೇಕಾಗುವುದಿಲ್ಲ. ದಾನಿಗಳ ಸಂಬಂಧಿಗಳು ತತ್ಸಂಬಂಧಿತ ಸಂಸ್ಥೆಗಳಿಗೆ ಅಥವಾ ಆಸ್ಪತ್ರೆಗಳಿಗೆ ಮಾಹಿತಿಯನ್ನು ನೀಡಿದೊಡನೆ, ಇವರ ಅಂಗಾಂಗಗಳನ್ನು ಸಂಗ್ರಹಿಸುವ ಹಾಗೂ ಇವುಗಳನ್ನು ಪಡೆಯಲು ಕಾದಿರುವ ರೋಗಿಗಳನ್ನು ಅಂಗಾಂಗ ಜೋಡಣೆಗಾಗಿ ಸಿದ್ಧಪಡಿಸುವ ಕೆಲಸಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತವೆ. ಅದೇ ರೀತಿಯಲ್ಲಿ ಈ ಅಂಗಾಂಗಗಳನ್ನು ಇತರ ನಗರಗಳಿಗೆ ಕೊಂಡೊಯ್ಯಬೇಕಾದಲ್ಲಿ, ಇದಕ್ಕಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ಲಭಿಸುತ್ತದೆ. ಏಕೆಂದರೆ ಮಸ್ತಿಷ್ಕ ಮೃತ ವ್ಯಕ್ತಿಯ ಶರೀರದಿಂದ ಸಂಗ್ರಹಿಸಿದ ಅಂಗಗಳನ್ನು ಸುಮಾರು ನಾಲ್ಕರಿಂದ ಐದು ಘಂಟೆಗಳ ಒಳಗಾಗಿ ಮತ್ತೊಬ್ಬ ವ್ಯಕ್ತಿಗೆ ಜೋಡಿಸಬೇಕಾಗುತ್ತದೆ. ಬೆಂಗಳೂರಿನ ಮಹಿಳೆಯೊಬ್ಬರ ಹೃದಯವನ್ನು ತ್ವರಿತಗತಿಯಲ್ಲಿ ಚೆನ್ನೈ ನಗರಕ್ಕೆ ಕೊಂಡೊಯ್ಯಲು ಪೊಲೀಸರೂ ಸೇರಿದಂತೆ ವಿವಿಧ ಸಂಘಟನೆಗಳು ಸಹಕರಿಸಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ನೋಂದಣಿ ಮಾಡುವುದೆಂತು?

ನೀವು ಅಂಗಾಂಗಗಳನ್ನು ದಾನ ಮಾಡಲು ಬಯಸುವುದಾದಲ್ಲಿ ಅಂತರ್ಜಾಲ ತಾಣದಲ್ಲಿ ( ಇಂಟರ್ ನೆಟ್ ) ಈ ಬಗ್ಗೆ ಸೂಕ್ತ ಮಾಹಿತಿ ಲಭ್ಯವಿದೆ. ಭಾರತದಲ್ಲಿ ಅನೇಕ ಸ್ವಯಂಸೇವಾ ಸಂಘಟನೆಗಳು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಜನಸಾಮಾನ್ಯರು ದಾನಿಗಳಾಗಿ ನೋಂದಣಿ ಮಾಡಲು ಸಹಕರಿಸುತ್ತವೆ. ದಾನಿಗಳಾಗಿ ನೊಂದಾಯಿಸಿಕೊಂಡವರಿಗೆ ಒಂದು ಗುರುತುಚೀಟಿಯನ್ನು ನೀಡಲಾಗುತ್ತದೆ. ಇದನ್ನು ದಾನಿಗಳು ಸದಾ ತಮ್ಮೊಂದಿಗೆ ಇರಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ತಮ್ಮ ಕುಟುಂಬದ ಸದಸ್ಯರಿಗೆ ಈ ಮಾಹಿತಿಯನ್ನು ನೀಡಬೇಕಾಗುತ್ತದೆ. 

ಕೊನೆಯ ಮಾತು 

ತಮ್ಮ ಮರಣದಲ್ಲೂ ಅನ್ಯ ವ್ಯಕ್ತಿಯೊಬ್ಬರಿಗೆ " ಹೊಸ ಬಾಳು " ನೀಡಬಲ್ಲ ಅಂಗಾಂಗಗಳ ದಾನ ಮಾಡಲು ಹಾಗೂ ಆಕಸ್ಮಿಕವಾಗಿ ಮಸ್ತಿಷ್ಕ ಮೃತರಾದಲ್ಲಿ ನಿಮ್ಮ ಅಂಗಾಂಗಗಳನ್ನು ಸಂಗ್ರಹಿಸಲು ನಡೆಸಬೇಕಾದ ಶಸ್ತ್ರಕ್ರಿಯೆಗಾಗಿ ಹಣವನ್ನು ವ್ಯಯಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ನಿಮ್ಮ ಆತ್ಮೀಯರು ಮೃತಪಟ್ಟ ಬಳಿಕವೂ, ಮತ್ತೊಬ್ಬರನ್ನು ಬದುಕಿಸುವುದರಿಂದ ಅವರಲ್ಲಿ ನಿಮ್ಮವರನ್ನು ಕಾಣುವುದರಲ್ಲಿ ವಿಶೇಷವಾದ ಸಂತೃಪ್ತಿಯೂ ಇದೆ. 

ಮಸ್ತಿಷ್ಕ ಮೃತಪಟ್ಟ ವ್ಯಕ್ತಿಯೊಬ್ಬರು ನಿಶ್ಚಿತವಾಗಿಯೂ ಬದುಕುವ ಸಾಧ್ಯತೆಗಳೇ ಇಲ್ಲವಾದುದರಿಂದ, ಅವರ ಶರೀರವನ್ನು ಭೂಮಿಯಲ್ಲಿ ಹೂಳುವ ಅಥವಾ ಅಗ್ನಿಯಲ್ಲಿ ಸುಡುವ ಮೂಲಕ ಅಮೂಲ್ಯವೆನಿಸುವ ಅಂಗಾಂಗಗಳನ್ನು ನಾಶಪಡಿಸದಿರಿ. ನಮ್ಮದೇ ದೇಶದಲ್ಲಿ ಅಂಗಾಂಗಗಳ ದಾನಿಗಳ ಅಭಾವದಿಂದಾಗಿ ಮೃತಪಡುತ್ತಿರುವ ಸಹಸ್ರಾರು ರೋಗಿಗಳಿಗೆ " ಜೀವದಾನ " ಮಾಡಲು ಇಂದೇ ನಿರ್ಧರಿಸಿ, ದಾನಿಯಾಗಿ ನಿಮ್ಮ ಹೆಸರನ್ನು ನೋಂದಾಯಿಸಿ. ಜೊತೆಗೆ ನಿಮ್ಮ ಬಂಧುಮಿತ್ರರನ್ನು ಅಂಗದಾನದ ಮಹತ್ಕಾರ್ಯದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment