Saturday, September 6, 2014

ORGAN DONATION - TRANSPLANTATION




 

 


ಜೀವದಾನ ಎನಿಸುವ " ಅಂಗದಾನ " ವನ್ನು ಪ್ರೋತ್ಸಾಹಿಸಿ 

ಕೆಟ್ಟು ಹೋಗಿರುವ ಯಂತ್ರವೊಂದರ ಭಾಗಗಳನ್ನು ತೆಗೆದು, ಹೊಸ ಭಾಗಗಳನ್ನು ಜೋಡಿಸುವಂತೆಯೇ, ಮನುಷ್ಯನ ಶರೀರದ ಪ್ರಮುಖ ಅಂಗಾಂಗಗಳು ಸಮರ್ಪಕವಾಗಿ ಕಾರ್ಯಾಚರಿಸದೇ ಇದ್ದಲ್ಲಿ ಅಥವಾ ವಿಫಲವಾದಲ್ಲಿ, ಈ ಅಂಗಕ್ಕೆ ಬದಲಾಗಿ ದಾನಿಯೊಬ್ಬರ ಶರೀರದ ಅಂಗವನ್ನು ಜೋಡಿಸುವುದು ಸುಲಭಸಾಧ್ಯವೂ ಹೌದು. ಆದರೆ ಇಂತಹ ಚಿಕಿತ್ಸೆಗೆ ಅನಿವಾರ್ಯವೆನಿಸುವ ಮನುಷ್ಯನ ಶರೀರದ ಪ್ರಮುಖ ಅಂಗಾಂಗಗಳನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವೇನಲ್ಲ. ಅಕ್ಷರಶಃ ಜೀವದಾನವೆನಿಸುವ ಅಂಗಾಂಗ ದಾನದ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
-----------         -----------        ------------             -----------           -------------

ಇತ್ತೀಚಿಗೆ ಬೆಂಗಳೂರಿನ "ಮಸ್ತಿಷ್ಕ ಮೃತ" ಮಹಿಳೆಯೊಬ್ಬರ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು, ನಿಗದಿತ ಅವಧಿಯಲ್ಲಿ ಚೆನ್ನೈ ನಲ್ಲಿರುವ ಆಸ್ಪತ್ರೆಯೊಂದಕ್ಕೆ ವಿಮಾನದ ಮೂಲಕ ಸುರಕ್ಷಿತವಾಗಿ ತಲುಪಿಸಿದಂತೆಯೇ, ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಅಳವಡಿಸಿದ ವರದಿಯನ್ನು ಅರಿತ ಜನರು ಮೂಕವಿಸ್ಮಿತರಾಗಿದ್ದುದು ಸತ್ಯ.ಅನಿರೀಕ್ಷಿತವಾಗಿ ಸಂಭವಿಸಿದ್ದ ಈ ಘಟನೆಯು, " ಅಂಗಾಂಗಗಳ ದಾನ " ದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವುದು ಕೂಡಾ ಅಷ್ಟೇ ಸತ್ಯ.

ಹಿನ್ನೆಲೆ 

ಜಗತ್ತಿನಲ್ಲೇ ಮೊದಲಬಾರಿಗೆ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ, ದಾನಿಯೊಬ್ಬರ ಮೂತ್ರಪಿಂಡವನ್ನು ಜೋಡಿಸುವ ಶಸ್ತ್ರಕ್ರಿಯೆಯನ್ನು ಡಾ.ಕ್ರಿಶ್ಚಿಯನ್ ಬರ್ನಾಡ್ ಇವರು ೧೯೫೩ ರಲ್ಲಿ ಅಮೇರಿಕಾದಲ್ಲಿ ಯಶಸ್ವಿಯಾಗಿ ನಡೆಸಿದ್ದರು. ಬಳಿಕ ೧೯೬೭ರ ಡಿಸೆಂಬರ್ ೩ ರಂದು, ಜಗತ್ತಿನ ಮೊದಲ ಬದಲಿ ಹೃದಯ ಜೋಡಣೆಯನ್ನು ಕೂಡಾ ಇದೇ ವೈದ್ಯರು ನಡೆಸಿದ್ದರು. ವಿಶೇಷವೆಂದರೆ ಅಂದು ಅಪಘಾತವೊಂದರಲ್ಲಿ ಗಾಯಗೊಂಡು " ಮಸ್ತಿಷ್ಕ ಮೃತ " ಎಂದು ವೈದ್ಯರು ಘೋಷಿಸಿದ್ದ ಯುವ ಮಹಿಳೆಯೊಬ್ಬಳ ಬಂಧುಗಳ ಒಪ್ಪಿಗೆಯಂತೆ, ಆಕೆಯ ಹೃದಯವನ್ನು ತೆಗೆದು ಈ ರೋಗಿಗೆ ಜೋಡಿಸಲಾಗಿತ್ತು. ತದನಂತರ ಜಗತ್ತಿನ ವಿವಿಧ ದೇಶಗಳಲ್ಲಿ ಬದಲಿ ಅಂಗಾಂಗ ಜೋಡಣೆಯ ಅಸಂಖ್ಯ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಸಹಸ್ರಾರು ರೋಗಿಗಳನ್ನು ಸಾವಿನ ದವಡೆಗಳಿಂದ ರಕ್ಷಿಸಲಾಗಿದೆ. 
 

ಮಾನವ ಶರೀರದ ಪ್ರಮುಖ ಅಂಗಾಂಗಗಳನ್ನು ಮತ್ತೊಬ್ಬರಿಗೆ " ಕಸಿ " ಮಾಡುವ ಶಸ್ತ್ರಚಿಕಿತ್ಸೆಯನ್ನು ಭಾರತದ ಅನೇಕ ಪ್ರಮುಖ ನಗರಗಳ ಸುಸಜ್ಜಿತ ಆಸ್ಪತ್ರೆಗಳಲ್ಲಿ ಅನೇಕ ವರ್ಷಗಳಿಂದ ನಡೆಸಲಾಗುತ್ತಿದೆ. ಆದರೆ ಅನೇಕ ವರ್ಷಗಳ ಹಿಂದೆ ಅಂಗಾಂಗ ದಾನದ ಬಗ್ಗೆ ರೂಪಿಸಿದ್ದ ಕಟ್ಟುನಿಟ್ಟಿನ ಕಾನೂನುಗಳು ಇದಕ್ಕೆ ತೊಡಕಾಗಿ ಪರಿಣಮಿಸುತ್ತಿತ್ತು. ಪ್ರಾಯಶಃ ಇದೇ  ಕಾರಣದಿಂದಾಗಿ ಅಮಾಯಕ ಬಡ ಜನರನ್ನು ಮರುಳುಮಾಡಿ, ಇವರ ಅಂಗಗಳನ್ನು ( ಹೆಚ್ಚಾಗಿ ಮೂತ್ರಪಿಂಡಗಳನ್ನು ) ಅತ್ಯಲ್ಪ ಬೆಲೆಗೆ ಖರೀದಿಸಿ, ಶ್ರೀಮಂತ ರೋಗಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಗಳ ಧಂದೆಯು ಅನಿಯಂತ್ರಿತವಾಗಿ ಸಾಗುತ್ತಿತ್ತು. ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಂದಂತೆಯೇ " ಅಂಗಾಂಗ ಕಸಿ " ಸೌಲಭ್ಯಕ್ಕೆ ತೀವ್ರ ಹಿನ್ನಡೆ ಉಂಟಾಗಿತ್ತು. ತತ್ಪರಿಣಾಮವಾಗಿ ನಿರ್ದಿಷ್ಟ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ಬದಲಿ ಅಂಗ ಜೋಡಣೆ ಅನಿವಾರ್ಯವೆನಿಸಿದ್ದ ಅಸಂಖ್ಯ ರೋಗಿಗಳ ಮರಣಕ್ಕೂ ಕಾರಣವೆನಿಸಿತ್ತು. ಈ ವಿಲಕ್ಷಣ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರ ಸರ್ಕಾರವು ೨೦೦೯ ರ ಅಂತ್ಯದಲ್ಲಿ ತತ್ಸಂಬಂಧಿತ ಕಾನೂನುಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡಿತ್ತು. ಆದರೆ ಈ ತಿದ್ದುಪಡಿಯನ್ನು ಜಾರಿಗೊಳಿಸಿ ಸುಮಾರು ನಾಲ್ಕು ವರ್ಷಗಳೇ ಕಳೆದಿದ್ದರೂ, ನಮ್ಮ ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಇದರ ನೈಜ ಉದ್ದೇಶವೇ ಈಡೇರುತ್ತಿಲ್ಲ. ಅದೇ ರೀತಿಯಲ್ಲಿ ಹೃದಯ, ಮೂತ್ರಪಿಂಡಗಳು, ಯಕೃತ್, ಪ್ಲೀಹ ಇತ್ಯಾದಿ ಅಂಗಗಳ ದಾನಿಗಳ ಅಭಾವದಿಂದಾಗಿ ಮೃತಪಡುತ್ತಿರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿಲ್ಲ!. 

೨೦೦೯ ರ ತಿದ್ದುಪಡಿ 

ಭಾರತದಲ್ಲಿ ಮಾನವ ಶರೀರದ ಅಂಗಾಂಗಗಳಿಗೆ ಅಪಾರವಾದ ಬೇಡಿಕೆ ಇರುವುದರಿಂದಾಗಿ ಹಾಗೂ ರೋಗಿಯೊಬ್ಬನಿಗೆ ತನ್ನ ಅಂಗವೊಂದನ್ನು ದಾನ ಮಾಡಬಹುದಾದ ಸಂಬಂಧಿಗಳ ಬಗ್ಗೆ ಸರ್ಕಾರ ಹೇರಿದ್ದ ನಿಬಂಧನೆಗಳೇ ಅಂಗಾಂಗಗಳ ಕಾಳಧಂದೆಗೆ ಮೂಲ ಕಾರಣವೆನಿಸಿತ್ತು. ಆದರೆ ತನ್ನ ತಪ್ಪನ್ನು ಅರಿತ ಸರ್ಕಾರವು ಅಂಗಾಂಗಗಳ ದಾನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು " ಟ್ರಾನ್ಸ್ ಪ್ಲಾಂಟೇಶನ್ ಆಫ್ ಹ್ಯುಮನ್ ಆರ್ಗನ್ ಎಂಡ್ ಟಿಶ್ಶ್ಸೂಸ್ ಬಿಲ್ - ೨೦೦೯ " ನ್ನು ಲೋಕಸಭೆಯು ಅಂಗೀಕರಿಸಿತ್ತು. ಈ ಕಾಯಿದೆ ಜಾರಿಗೆ ಬಂದ ಬಳಿಕ ರೋಗಿಯ ಅಜ್ಜ-ಅಜ್ಜಿಯರು ಮತ್ತು ಮೊಮ್ಮಕ್ಕಳನ್ನು ಸಮೀಪದ ಸಂಬಂಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಲ್ಲದೇ ಇಬ್ಬರು ವಿಭಿನ್ನ ರೋಗಿಗಳಿಗೆ ಅವರ ಸಮೀಪದ ಬಂಧುಗಳು ದಾನಮಾಡಿದ ಅಂಗಗಳು ಸಮರ್ಪಕವಾಗಿ ಹೊಂದಾಣಿಕೆ ಆಗದಿದ್ದಲ್ಲಿ, ಈ ಅಂಗಗಳನ್ನು ( ಪರಸ್ಪರ ಹೊಂದಾಣಿಕೆ ಆಗುವುದಾದಲ್ಲಿ ) ಇವರು ಪರಸ್ಪರ ಬದಲಾಯಿಸಿಕೊಳ್ಳಬಹುದಾಗಿದೆ. ಈ ತಿದ್ದುಪಡಿಯು ಅನೇಕ ರೋಗಿಗಳ ಪಾಲಿಗೆ ವರದಾನವೆನಿಸಿತ್ತು. 

ಆದರೆ ಇದೇ ಸಂದರ್ಭದಲ್ಲಿ ಅಲ್ಪ ವೆಚ್ಚದಲ್ಲಿ ಬಡ ಭಾರತೀಯರಿಂದ ಅಂಗಾಂಗಗಳನ್ನು ಖರೀದಿಸಿ, ಕಸಿ ಮಾಡಿಸಿಕೊಳ್ಳಲೆಂದೇ ಭಾರತಕ್ಕೆ ಆಗಮಿಸುತ್ತಿದ್ದ ವಿದೇಶೀ ರೋಗಿಗಳ ಬೇಡಿಕೆಯನ್ನು ಪೂರೈಸುತ್ತಿದ್ದ ಮಧ್ಯವರ್ತಿಗಳ ಕಾನೂನುಬಾಹಿರ ಧಂದೆಗೆ, ಸರ್ಕಾರವು ಇದೇ ಕಾಯಿದೆಯ ಮೂಲಕ ಕಡಿವಾಣವನ್ನು ತೊಡಿಸಿದೆ. ಇದರಿಂದಾಗಿ ಮಾನವ ಶರೀರದ ಅಂಗಾಂಗಗಳನ್ನು ಪಡೆದುಕೊಳ್ಳುವ ಮತ್ತು ಮತ್ತೊಬ್ಬರ ಶರೀರದಲ್ಲಿ ಜೋಡಣೆ ಮಾಡುವ ಮುನ್ನ ಸರ್ಕಾರ ನೇಮಿಸಿದ ಅಧಿಕೃತ ಸಮಿತಿಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ. 

ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅಂಗಾಂಗಗಳ ಕಾಳಧಂದೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯವೆಂದು ಸರ್ಕಾರಕ್ಕೆ ತಿಳಿದಿತ್ತು. ಇದಕ್ಕಾಗಿ " ಮಸ್ತಿಷ್ಕ ಮೃತ " ವ್ಯಕ್ತಿಗಳ ಹಾಗೂ ಅಪಘಾತಗಳಲ್ಲಿ ಮೃತಪಟ್ಟ  ಸ್ವಾಭಾವಿಕವಾಗಿ ಮೃತಪಟ್ಟ ವ್ಯಕ್ತಿಗಳ ಅಂಗಾಂಗಗಳನ್ನು ದಾನ ಮಾಡುವಂತೆ ಇವರ ಬಂಧುಗಳನ್ನು ಪ್ರೇರೇಪಿಸಲು ಉದ್ದೇಶಿಸಿತ್ತು. ಈ ಹೊಣೆಗಾರಿಕೆಯನ್ನು ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕಗಳಲ್ಲಿನ ಸಿಬಂದಿಗಳು ಮತ್ತು ವೈದ್ಯರಿಗೆ ವಹಿಸಲಾಗಿತ್ತು. 

ವಿಶೇಷವೆಂದರೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಂಡುಬರುವ ಮೂಢನಂಬಿಕೆಗಳು, ತಪ್ಪುಕಲ್ಪನೆಗಳು ಮತ್ತು ಧಾರ್ಮಿಕ ನಂಬಿಕೆಗಳು ಇಂತಹ ವ್ಯಕ್ತಿಗಳ ಅಂಗಾಂಗಗಳ ದಾನಕ್ಕೆ ತೊಡಕಾಗಿ ಪರಿಣಮಿಸುತ್ತಿವೆ. ತತ್ಪರಿಣಾಮವಾಗಿ ಜೀವನ್ಮರಣಗಳ ನಡುವೆ ತೊಳಲಾಡುತ್ತಿರುವ ರೋಗಿಗಳನ್ನು ಉಳಿಸಬಲ್ಲ ಸಾಮರ್ಥ್ಯವಿರುವ ಅಂಗವೊಂದು, ಮೃತ ವ್ಯಕ್ತಿಯ ಶರೀರದೊಂದಿಗೆ ಮಣ್ಣಿನಲ್ಲಿ ಸೇರಿ ಅಥವಾ ಸುಟ್ಟು ವ್ಯರ್ಥವಾಗುತ್ತದೆ. 

ಉದಾಹರಣೆಗೆ ೨೦೧೩  ರಲ್ಲಿ ಕೇವಲ ಬೆಂಗಳೂರು ನಗರವೊಂದರಲ್ಲೇ ಸಂಭವಿಸಿದ್ದ ೫೨೧೫ ರಸ್ತೆ ಅಪಘಾತಗಳಲ್ಲಿ ೭೫೨ ಜನರು ಮೃತಪಟ್ಟಿದ್ದರು. ಅಪಘಾತದಲ್ಲಿ ಹಾನಿಯಾಗದೇ ಇದ್ದ ಅಂಗಗಳನ್ನು ಇವರ ಸಂಬಂಧಿಗಳು ದಾನಮಾಡಲು ಸಮ್ಮತಿಸಿದ್ದಲ್ಲಿ, ನೂರಾರು ಅಂಧರಿಗೆ ದೃಷ್ಟಿಯನ್ನು ಮತ್ತು ಹೃದಯ, ಮೂತ್ರಪಿಂಡಗಳು, ಯಕೃತ್ ಇತ್ಯಾದಿ ಅಂಗಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಂದ ಪೀಡಿತರಾಗಿ ಮರಣಶಯ್ಯೆಯಲ್ಲಿದ್ದ ರೋಗಿಗಳಿಗೆ " ಜೀವದಾನ " ನೀಡಬಹುದಾಗಿತ್ತು!. 

ಅಗ್ರಸ್ಥಾನದಲ್ಲಿ ತಮಿಳುನಾಡು 

ಕೆಲವೇ ವರ್ಷಗಳ ಹಿಂದೆ ಕಾನೂನುಬಾಹಿರ ಅಂಗಾಂಗ ಜೋಡಣೆಯ ವಿಚಾರದಲ್ಲಿ ಕುಖ್ಯಾತವಾಗಿದ್ದ ತಮಿಳುನಾಡು ರಾಜ್ಯವು, ಇಂದು ಮಸ್ತಿಷ್ಕ ಮೃತ ಹಾಗೂ ಅನ್ಯ ಕಾರಣಗಳಿಂದ ಮೃತಪಟ್ಟ ವ್ಯಕ್ತಿಗಳ ಶರೀರಗಳಿಂದ ಸಂಗ್ರಹಿತ ಅಂಗಾಂಗಗಳ ಜೋಡಣೆಯ ವಿಚಾರದಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇತ್ತೀಚಿಗೆ ಅಲ್ಲಿನ ಸರ್ಕಾರವು  " ಕಾಡಾವರ್ ಟ್ರಾನ್ಸ್ ಪ್ಲಾಂಟ್ ಅಥಾರಿಟಿ" (ಸಿ ಟಿ ಎ ) ಯನ್ನು ಸ್ಥಾಪಿಸಿದ್ದು, ಅಂಗಾಂಗಗಳ ದಾನ ಮತ್ತು ಮರುಜೋಡಣೆಗೆ ಇದು ಪೂರಕವಾಗಿ ಪರಿಣಮಿಸಲಿದೆ. 

ಆದರೆ ಜನಸಾಮಾನ್ಯರಲ್ಲಿ ಅಂಗದಾನದ ಹಾಗೂ ಇದರ ಮಹತ್ವದ ಬಗ್ಗೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದೇ ಇದಕ್ಕೆ ಅತಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅಂತೆಯೇ ಮೃತ ಮಸ್ತಿಷ್ಕ  ಬಂಧುಗಳ ಶರೀರದಿಂದ ಅಂಗಾಂಗಗಳನ್ನು ಸಂಗ್ರಹಿಸಲು ಕುಟುಂಬಸ್ತರು ಅನುಮತಿಯನ್ನು ನೀಡದಿರಲು, ಇವರ ಮನದಲ್ಲಿ ತಮ್ಮ ಬಂಧು ಇನ್ನೂ ಬದುಕಿದ್ದಾರೆ ಎನ್ನುವ ಉತ್ಕಟ ಭಾವನೆಯೂ ಕಾರಣವೆನಿಸುತ್ತದೆ. ಇದಕ್ಕೂ ಮಿಗಿಲಾಗಿ ಮೃತ ಶರೀರದ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ, ಶರೀರದ ಎಲ್ಲ ಅಂಗಾಂಗಗಳು ಇಲ್ಲದಿದ್ದಲ್ಲಿ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಾರದು ಎನ್ನುವ ನಂಬಿಕೆಯೂ ಅನೇಕರಲ್ಲಿದೆ!. ಇಂತಹ ಮೂಢನಂಬಿಕೆ ಮತ್ತು ತಪ್ಪುಕಲ್ಪನೆಗಳನ್ನು ನಿವಾರಿಸದೇ ಇದ್ದಲ್ಲಿ, ಅಂಗಾಂಗಗಳ ದಾನಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 






No comments:

Post a Comment