Saturday, September 13, 2014

AIR POLLUTION



 ಭಾರತದ ನಗರವಾಸಿಗಳಿಗೆ ವಾಯುಮಾಲಿನ್ಯದ ಅಪಾಯ 

ನಿರಂತರವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ದೇಶದ ಪ್ರಜೆಗಳು ಖರೀದಿಸಿ ಬಳಸುತ್ತಿರುವ ವೈವಿಧ್ಯಮಯ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ದೇಶದ ರಸ್ತೆಗಳಲ್ಲಿ ಸದಾ ಸಂಚರಿಸುತ್ತಿರುವ ಅತಿಯಾದ ವಾಹನಗಳಿಂದಾಗಿ, ಬಹುತೇಕ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವೂ ದಿನೇದಿನೇ ವೃದ್ಧಿಸುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ದೇಶದ ಅಧಿಕತಮ ನಗರವಾಸಿಗಳನ್ನು ಪೀಡಿಸುವ ಗಂಭೀರ ಹಾಗೂ ಮಾರಕವೆನಿಸಬಲ್ಲ ಆರೋಗ್ಯದ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. 

ವಿಶ್ವದಲ್ಲೇ ಪ್ರಥಮ 

ವಿಶ್ವ ಆರೋಗ್ಯ ಸಂಸ್ಥೆಯು ಇದೇ ವರ್ಷದ ಮಧ್ಯಭಾಗದಲ್ಲಿ ಪ್ರಕಟಿಸಿದ್ದ  ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳ ಯಾದಿಯಲ್ಲಿ, ಭಾರತದ ೧೩ ನಗರಗಳು ಸೇರಿವೆ. ಇದಿಷ್ಟು ಸಾಲದೆನ್ನುವಂತೆ ಭಾರತದ ಶೇ.೫೦ ನಗರಗಳು ಅತ್ಯಂತ ಪ್ರದೂಷಿತ ಪ್ರದೇಶಗಳೆನಿಸಿವೆ. ಅಧಿಕೃತ ಮಾಹಿತಿಯಂತೆ ಭಾರತದಲ್ಲಿ ಸಂಭವಿಸುತ್ತಿರುವ ಮರಣಗಳಿಗೆ ಕಾರಣವೆನಿಸುತ್ತಿರುವ ಅಪಾಯಕಾರಿ ಸಮಸ್ಯೆಗಳಲ್ಲಿ, ವಾಯುಮಾಲಿನ್ಯಕ್ಕೆ ಐದನೆಯ ಸ್ಥಾನ ಸಲ್ಲುತ್ತದೆ. ಈ ವಿಚಾರವು ನಿಜಕ್ಕೂ ಭಯಾನಕವೆನಿಸಿದರೂ, ನಿಶ್ಚಿತವಾಗಿಯೂ ಆಶ್ಚರ್ಯಕರವೇನಲ್ಲ. 

ನಮ್ಮ ದೇಶದ ಪ್ರತಿಯೊಂದು ನಗರಗಳ ರಸ್ತೆಗಳು ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು ಮತ್ತು ಡೀಸೆಲ್ ಇಂಧನವನ್ನು ಬಳಸುವ ವಾಹನಗಳಿಂದ ತುಂಬಿ ತುಳುಕುತ್ತಿದ್ದು, ಇವೆಲ್ಲಾ ವಾಹನಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ವಿಷಪೂರಿತ ಧೂಮವನ್ನು ವಿಸರ್ಜಿಸುತ್ತವೆ. ಇದೇ ಸಂದರ್ಭದಲ್ಲಿ ಪಾದಚಾರಿಗಳು ಹಾಗೂ ಸೈಕಲ್ ಸವಾರರು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. 

ವಿಶ್ವ ಬ್ಯಾಂಕ್ ಇತ್ತೀಚಿಗೆ ಬಹಿರಂಗಪಡಿಸಿದ ಮಾಹಿತಿಯಂತೆ ಭಾರತದ ನಗರವಾಸಿಗಳು ಉಸಿರಾಡುವ ಗಾಳಿಯಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಕಣಗಳ ಪರಿಣಾಮವಾಗಿ, ದೇಶದ ಸರಾಸರಿ ಉತ್ಪನ್ನದ ಶೇ.೩ ರಷ್ಟು ಭಾಗವು ಆರೋಗ್ಯದ ಸಲುವಾಗಿ ವ್ಯಯಿಸಲ್ಪಡುತ್ತಿದೆ. ಈ ಗಂಭೀರ ಹಾಗೂ ಮಾರಕ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಅನೇಕ ಕಠಿಣ ನಿರ್ಧಾರಗಳನ್ನು ತಳೆಯಲೇ ಬೇಕಾಗುತ್ತದೆ. 

ಮುಂದೇನು?

ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ದಶಕಗಳಲ್ಲಿ ಭಾರತೀಯರ ದೈನಂದಿನ ಸಂಚಾರದ ಪ್ರಮಾಣವು ದುಪ್ಪಟ್ಟಾಗಲಿದೆ.ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರ ಪ್ರಮಾಣವು ಶೇ.೨೬ ರಿಂದ ಶೇ.೧೬ ಕ್ಕೆ ಕುಸಿಯಲಿದೆ. ಇಷ್ಟು ಮಾತ್ರವಲ್ಲ, ವೈಯುಕ್ತಿಕ ವಾಹನಗಳ ಸಂಚಾರದ ಪ್ರಮಾಣವು ಶೇ.೩೪ ರಿಂದ ಶೇ. ೫೧ ಕ್ಕೆ ಏರಲಿದೆ. ಅಂತೆಯೇ ಮಹಾನಗರಗಳಲ್ಲಿ ಸಂಚರಿಸುವ ವಾಹನಗಳ ವೇಗವು ಇದೀಗ ಪ್ರತಿ ಗಂಟೆಗೆ ೧೬ ಕಿ.ಮೀ. ಇದ್ದು, ಇದು ಪ್ರತಿ ಗಂಟೆಗೆ ೮ ಕಿ.ಮೀ. ಗಳಿಗೆ ಇಳಿಯಲಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ, ದೇಶದ ನಗರಗಳಲ್ಲಿ ಸಂಭವಿಸುವ ವಾಯುಮಾಲಿನ್ಯ - ಪರಿಸರ ಪ್ರದೂಷಣೆಗಳ ಪ್ರಮಾಣ ಇನ್ನಷ್ಟು ಹೆಚ್ಚಲಿರುವುದು!.

ನಿಯಂತ್ರಣ ಎಂತು - ಏನು?

ಈ ಅನಾರೋಗ್ಯಕರ ಹಾಗೂ ಅಪಾಯಕಾರಿ ಸಮಸ್ಯೆಯನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ ಕೇಂದ್ರ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇವುಗಳಲ್ಲಿ ರಾಷ್ಟ್ರೀಯ ಪರಿಶುದ್ಧ ಗಾಳಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದನ್ನು ಅನುಷ್ಠಾನಿಸುವ ಮೂಲಕ ದೇಶದ ಪ್ರತಿಯೊಂದು ನಗರಗಳು ೨೦೨೦-೨೧ ಕ್ಕೆ ಮುನ್ನ ಪರಿಶುದ್ಧ ಗಾಳಿಯ ಮಾನದಂಡಗಳಿಗೆ ಅನುಗುಣವಾಗಿ ಇರುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 

ಇದರೊಂದಿಗೆ ವಾಹನಗಳು ವಿಸರ್ಜಿಸುವ ಹೊಗೆಯ ವಿಚಾರದಲ್ಲಿ ರೂಪಿಸಿರುವ ಮಾನದಂಡಗಳನ್ನು ( Bhaarat stage -4,5 and 6 ) ೨೦೨೦-೨೧ ಕ್ಕೆ ಮುನ್ನ ಹಂತಹಂತವಾಗಿ ಜಾರಿಗೆ ತರುವುದು ಅನಿವಾರ್ಯವೆನಿಸಲಿದೆ. ಇದಲ್ಲದೆ ಡೀಸೆಲ್ ವಾಹನಗಳು ಉಗುಳುವ ಹೊಗೆಯಲ್ಲಿನ ಪ್ರದೂಷಕಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು "ಕ್ಯಾನ್ಸರ್ ಕಾರಕ " ಎಂದು ಘೋಷಿಸಿದ್ದು, ಇದನ್ನು ನಿಯಂತ್ರಿಸಲು BS- 6 ಮಾನದಂಡದ ಅನುಷ್ಠಾನ ಅತ್ಯವಶ್ಯಕವೆನಿಸುವುದು. ಇದಲ್ಲದೇ ಡೀಸೆಲ್ ಇಂಧನವನ್ನು ಬಳಸುವ ಶ್ರೀಮಂತರ ವಿಲಾಸಿ ಕಾರುಗಳು ಹಾಗೂ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಅಬಕಾರಿ ಸುಂಕ ಮತ್ತು ಇಂಧನದ ಮೇಲಿನ ತೆರಿಗೆಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗುವುದು. 

ಇವೆಲ್ಲಾಕ್ಕೂ ಮಿಗಿಲಾಗಿ CNG ( ನೈಸರ್ಗಿಕ ಅನಿಲ ) ಯಂತಹ ಸ್ವಚ್ಚ ಇಂಧನದ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು, ಇದರ ಮೇಲೆ ವಿಧಿಸುವ ತೆರಿಗೆಯಲ್ಲಿ ಮತ್ತು ಈ ಅನಿಲವನ್ನು ಬಳಸುವ ವಾಹನಗಳ ಮೇಲಿನ ತೆರಿಗೆಯಲ್ಲಿ  ಇಂದಿಷ್ಟು ವಿನಾಯತಿ ನೀಡಬೇಕಾಗುವುದು. ಅಂತೆಯೇ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಹಾಗೂ ಕನಿಷ್ಠ ಪ್ರಮಾಣದ ಪ್ರದೂಷಕಗಳನ್ನು ವಿಸರ್ಜಿಸುವ ಮತ್ತು ಎಲೆಕ್ಟ್ರಿಕ್( ಬ್ಯಾಟರಿ ಚಾಲಿತ ) ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗುವುದು.

ಅಂತಿಮವಾಗಿ ನಗರ ಪ್ರದೇಶಗಳ ನಿವಾಸಿಗಳಿಗೆ ಕೈಗೆಟಕುವ ಶುಲ್ಕದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಇಂತಹ ವ್ಯವಸ್ಥೆಗೆ ಸರ್ಕಾರದಿಂದ ಧನಸಹಾಯವನ್ನು ನೀಡುವುದು, ಪಾದಚಾರಿಗಳು ನಿರಾತಂಕವಾಗಿ ಸಂಚರಿಸಲು ಅನುಕೂಲಕರವೆನಿಸುವ ಕಾಲುದಾರಿಗಳ ನಿರ್ಮಾಣ, ಸೈಕಲ್ ಸವಾರರಿಗೆ ಪ್ರತ್ಯೇಕ ಹಕ್ಕಿನ ಹಾದಿ, ಶೇ.೮೦ ರಷ್ಟು ನಗರವಾಸಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಹ ಉಪಕ್ರಮಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒಂದಿಷ್ಟು ತೆರಿಗೆ ವಿನಾಯತಿಯನ್ನು ನೀಡಿ ಈ ನಷ್ಟವನ್ನು ಭರಿಸಲು ಕಾರುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು, ವೈಯುಕ್ತಿಕ ವಾಹನಗಳ ಸಂಖ್ಯೆಯ ನಿಯಂತ್ರಣ, ಖಾಸಗಿ ವಾಹನಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ರದ್ದುಪಡಿಸಿ ನಿಗದಿತ ಶುಲ್ಕವನ್ನು ಸಂಗ್ರಹಿಸುವುದೇ ಮುಂತಾದ ನಿರ್ದಿಷ್ಟ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ, ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಹೊಣೆಗಾರಿಕೆಯನ್ನೂ ಸರ್ಕಾರ ಸುಲಭದಲ್ಲೇ ನಿಭಾಯಿಸಬಹುದಾಗಿದೆ. ಆದರೆ " ಮತನಿಧಿ ರಾಜಕೀಯ " ದ ಸಲುವಾಗಿ ಇಂತಹ ಅತ್ಯವಶ್ಯಕ ಉಪಕ್ರಮಗಳನ್ನು ಸರ್ಕಾರ ಕೈಗೊಳ್ಳದೇ ಇದ್ದಲ್ಲಿ, ಭಾರತದ ಪ್ರತಿಯೊಂದು ನಗರಗಳ ನಿವಾಸಿಗಳು ಸದ್ಯೋಭವಿಷ್ಯದಲ್ಲಿ ವೈವಿಧ್ಯಮಯ ಹಾಗೂ ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 


No comments:

Post a Comment