Tuesday, September 2, 2014

ARTICLE NO- 200 - ASTHAMA





 ಉಸಿರು ಕಟ್ಟಿಸುವ ಉಬ್ಬಸ (ಆಸ್ತಮಾ ) !

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಿರತ ಸಂಶೋಧನೆಗಳ ಫಲವಾಗಿ ಮಾನವಕುಲಕ್ಕೆ ಅನೇಕ ಅದ್ಭುತ ಔಷದಗಳು ಲಭ್ಯವಾಗಿದ್ದರೂ, ಶಾಶ್ವತವಾಗಿ ನಿಮ್ಮನ್ನು ರೋಗಮುಕ್ತರನ್ನಾಗಿ ಇರಿಸಬಲ್ಲ ಔಷದವನ್ನು ಕಂಡುಹಿಡಿಯಲು ಅಸಾಧ್ಯವೆನಿಸಿರುವ ರೋಗಗಳಲ್ಲಿ ಆಸ್ತಮಾ ವ್ಯಾಧಿಯೂ ಒಂದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
------------             -----------            -----------------            ----------------

ಅನಿರೀಕ್ಷಿತ ಅಥಿತಿಯಂತೆ ಬಂದೆರಗುವ ಆಸ್ತಮಾ ವ್ಯಾಧಿಯು ರೋಗಿಯನ್ನು ಗಾಣಕ್ಕೆ ಕೊಟ್ಟ ಕಬ್ಬಿನ ಜಲ್ಲೆಯಂತೆ, ಹಿಂಡಿ ಹಿಪ್ಪೆಮಾಡುತ್ತದೆ. ವಿಶ್ವದ ಜನಸಂಖ್ಯೆಯ ಶೇ.೧೦ ರಿಂದ ೨೦ ರಷ್ಟು ಜನರನ್ನು ಪೀಡಿಸುವ ಈ ಕಾಯಿಲೆಯು, ಅನೇಕರಲ್ಲಿ ಬಹಳ ಸೌಮ್ಯರೂಪದಲ್ಲಿರುತ್ತದೆ. ಇಂದಿನ ಹೈಟೆಕ್ ಯುಗದಲ್ಲಿ ಆಸ್ತಮಾದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ವೈದ್ಯಕೀಯ ಕ್ಷೇತ್ರದ ಗಮನಕ್ಕೆ ಬಂದಿದ್ದರೂ, ಇದಕ್ಕೆ ಮೂಲಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ. ಆಸ್ತಮಾದ ರೋಗಕಾರಕ ಶಾರೀರಿಕ ಪ್ರಕ್ರಿಯೆಗಳ ಬಗ್ಗೆ ನಡೆದಿರುವ ಸಂಶೋಧನೆಗಳ ಫಲವಾಗಿ ಇದರ ಚಿಕಿತ್ಸಾ ವಿಧಾನಗಳಲ್ಲಿ ಉನ್ನತಮಟ್ಟವನ್ನು ತಲುಪಿದ್ದರೂ, ಈ ವ್ಯಾಧಿಯ ಮಾರಕತೆಯು ಕ್ಷಯಿಸುವ ಬದಲಾಗಿ ಇನ್ನಷ್ಟು ವೃದ್ಧಿಸುತ್ತಿರುವುದು ಗಮನೀಯ. 

" ನೇವಸ " ಗುಣವಾಗದೇಕೆ ?

ಅರುವತ್ತು ವರ್ಷದ ದೇವಪ್ಪನು ಅವಿದ್ಯಾವಂತ ಕೃಷಿಕ. ಬಾಲ್ಯದಿಂದಲೂ ಪ್ರಭುಗಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಸರ್ಕಾರದ ಕೃಪೆಯಿಂದಾಗಿ ಈ ಹೊಲದೊಡೆಯನಾಗಿ ಹತ್ತಾರು ವರ್ಷಗಳೇ ಸಂದಿವೆ. ಅಪರೂಪದಲ್ಲಿ  ಬಾಲ್ಯದಿಂದಲೇ ಆತನನ್ನು ಬಾಧಿಸುತ್ತಿದ್ದ ನೇವಸವು ಏರುಜವ್ವನದಲ್ಲಿ ಸಹನೀಯವಾಗಿತ್ತಲ್ಲದೇ, ಕುಟುಂಬ ವೈದ್ಯರ ಚಿಕಿತ್ಸೆಯಿಂದ ಶಮನಗೊಳ್ಳುತ್ತಿತ್ತು. ಪಾಲಿಗೆ ಬಂದಿದ್ದ ಜಮೀನಿನಲ್ಲಿ ಶ್ರಮಪಟ್ಟು ಪುಟ್ಟ ಅಡಿಕೆಯ ತೋಟವನ್ನು ಸೃಷ್ಟಿಸಿದ್ದ ದೇವಪ್ಪನು, ಅಡಿಕೆಯ ಬೆಲೆ ಗಗನಕ್ಕೇರಿದಾಗ, ಕೈಯ್ಯಲ್ಲಿ ಒಂದಿಷ್ಟು ಕಾಸನ್ನೂ ಮಾಡಿಕೊಂಡಿದ್ದ. 

ಇದೀಗ ಇಳಿವಯಸ್ಸಿನಲ್ಲಿ ದಿನನಿತ್ಯ ಕಾಡಲು ಆರಂಭಿಸಿದ್ದ  ನೇವಸದಿಂದಾಗಿ, ಹತ್ತು ಹೆಜ್ಜೆ ನಡೆದರೂ ಹೆಚ್ಚೆನಿಸುತ್ತಿತ್ತು. ಇದೇ ಕಾರಣದಿಂದಾಗಿ ಒಂದಿಷ್ಟು ಹಣ ಖರ್ಚಾದರೂ ತೊಂದರೆಯಿಲ್ಲ, ತನ್ನ ನೇವಸವನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬೇಕೆನ್ನುವ  ಛಲದಿಂದ, ಹತ್ತಾರು ವೈದ್ಯರು ಹಾಗೂ ಹಲವಾರು ಆಸ್ಪತ್ರೆಗಳು ಮತ್ತು ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪ್ರಯೋಗಿಸಿದರೂ, ನೇವಸ ಮಾತ್ರ ಆತನನ್ನು ಬಿಡಲೇ ಇಲ್ಲ!. ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ವ್ಯಾಧಿಗೆ ಶಾಶ್ವತ ಪರಿಹಾರವಿಲ್ಲ. ಈ ಬಗ್ಗೆ ಪ್ರಾಮಾಣಿಕ ಸಲಹೆಯನ್ನು ನೀಡಿದ್ದ ಕುಟುಂಬ ವೈದ್ಯರ ಹಿತವಾದವನ್ನು ನಿರ್ಲಕ್ಷಿಸಿದ್ದ ದೇವಪ್ಪನು, ಸಾಕಷ್ಟು ಹಣವನ್ನು ಕಳೆದುಕೊಂಡ ಬಳಿಕ ಗಳಿಸಿದ್ದು ಕೇವಲ ಅಧಿಕ ರಕ್ತದೊತ್ತಡವನ್ನು ಮಾತ್ರ!. 

ಆಸ್ತಮಾ ವ್ಯಾಧಿಗೆ ಶಾಶ್ವತ ಪರಿಹಾರ ನೀಡಬಲ್ಲ ಔಷದಗಳೇ ಇಲ್ಲವೆಂದು ಅರಿತ ಬಳಿಕವೂ ಅನೇಕ ರೋಗಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವ ನಕಲಿ ವೈದ್ಯರ ಸುಳ್ಳು ಭರವಸೆಗಳಿಗೆ ಬಲಿಯಾಗಿ ಸಹಸ್ರಾರು ರೂಪಾಯಿಗಳೊಂದಿಗೆ, ತಮ್ಮ ಆರೋಗ್ಯವನ್ನೂ ಕಳೆದುಕೊಳ್ಳುತ್ತಾರೆ. ನಿಜಜೀವನದಲ್ಲಿ ರೋಗಿಗಳೇ ವೈದ್ಯರನ್ನು ಅರಸಿಕೊಂಡು ಹೋಗುವುದಾದಲ್ಲಿ, ಈ ನಕಲಿ ವೈದ್ಯರು ತಾವೇ ರೋಗಿಗಳನ್ನು ಅರಸಿಕೊಂಡು ಊರಿಂದ ಊರಿಗೆ ಅಲೆಯುತ್ತಾ ( ಗತಕಾಲದ ಟೂರಿಂಗ್ ಟಾಕೀಸ್ ಗಳಂತೆ) ತಮ್ಮ ಧಂದೆಯನ್ನು ನಡೆಸುತ್ತಾರೆ!. 

ಆಸ್ತಮಾ ಎಂದರೇನು?

ಮನುಷ್ಯನ ಶರೀರವನ್ನು ವಿವಿಧರೀತಿಯಲ್ಲಿ ಪ್ರವೇಶಿಸಬಲ್ಲ "ಅಲೆರ್ಜೆನ್ " ಗಳಿಂದಾಗಿ ಉದ್ಭವಿಸುವ ವಿಶಿಷ್ಠ ಶಾರೀರಿಕ ಪ್ರತಿಕ್ರಿಯೆಗಳಿಂದಾಗಿ ಉತ್ಪನ್ನವಾಗುವ ಕೆಮ್ಮು, ಉಸಿರುಗಟ್ಟುವುದು, ಶ್ವಾಸನಾಳ- ಶ್ವಾಸಕೋಶಗಳು ಶ್ಲೇಷ್ಮದಿಂದ ತುಂಬಿ ಆಕುಂಚನಗೊಂಡು ಉಸಿರಾಟಕ್ಕೆ ಅಡಚಣೆಯನ್ನು ಉಂಟುಮಾಡುವ ತೊಂದರೆಯನ್ನು ಆಸ್ತಮಾ ಎನ್ನುತ್ತಾರೆ.

ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲಿ ಆರಂಭವಾಗಬಹುದಾದ ಆಸ್ತಮಾ, ಬಾಲ್ಯ ಅಥವಾ ಮಧ್ಯವಯಸ್ಸಿನಲ್ಲಿ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಾಲ್ಯದಲ್ಲಿ ಬಾಧಿಸುವ ಆಸ್ತಮಾ ಹೆಚ್ಚಾಗಿ ವರ್ಷದ ಕೆಲವೇ ತಿಂಗಳುಗಳಲ್ಲಿ ಉಲ್ಬಣಿಸುವುದಾದರೂ, ಉಳಿದ ಸಮಯದಲ್ಲಿ ರೋಗಿಯು ಸ್ವಸ್ಥನಾಗಿರುತ್ತಾನೆ. ಆದರೆ ಮಧ್ಯವಯಸ್ಸಿನಲ್ಲಿ ಪ್ರತ್ಯಕ್ಷವಾಗುವ ಆಸ್ತಮಾ, ಸಾಮಾನ್ಯವಾಗಿ ದಿನನಿತ್ಯ ರೋಗಿಯನ್ನು ಕಾಡುವುದು. 

ಇನ್ನು ಅತೀ ತೀವ್ರ ಸ್ವರೂಪವನ್ನು ತಾಳಿರುವ ಹಾಗೂ ಕೆಲ ಸಂದರ್ಭಗಳಲ್ಲಿ ಮಾರಕವೆನಿಸಬಲ್ಲ "ಸ್ಟೇಟಸ್ ಅಸ್ತಮ್ಯಾಟಿಕಸ್"ಎಂದು ವೈದ್ಯರು ಗುರುತಿಸುವ ಸ್ಥಿತಿಯಲ್ಲಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಬೇಕಾಗುವುದು. ಏಕೆಂದರೆ ಆಸ್ತಮಾ ಉಲ್ಬಣಿಸಿದಾಗ ಕೆಲವು ಗಂಟೆಗಳಿಂದ ಹಿಡಿದು ಕೆಲವು ವಾರಗಳ ತನಕ ರೋಗಿಯನ್ನು ಬಾಧಿಸುವ ಸಾಧ್ಯತೆಗಳಿವೆ. 

ಅನಿಲನ ಆಸ್ತಮಾ ಗುಣವಾಯಿತು!

ಆರನೇ ತರಗತಿಯ ವಿದ್ಯಾರ್ಥಿ ಅನಿಲನಿಗೆ ಅದೊಂದು ರಾತ್ರಿ ಆಕಸ್ಮಿಕವಾಗಿ ಆರಂಭವಾಗಿದ್ದ ಕೆಮ್ಮು ಉಲ್ಬಣಿಸಿದ ಪರಿಣಾಮವಾಗಿ ಉಸಿರಾಟದ ತೊಂದರೆ ಉದ್ಭವಿಸಿತ್ತು. ತುರ್ತುಕರೆಗೆ ಸ್ಪಂದಿಸಿದ್ದ ಕುಟುಂಬ ವೈದ್ಯರ ಚಿಕಿತ್ಸೆಯಿಂದ ಸಮಸ್ಯೆ ಪರಿಹಾರಗೊಂಡಿತ್ತು. ಆದರೆ ಮುಂದಿನ ಮೂರು ತಿಂಗಳಿನಲ್ಲಿ ನಾಲ್ಕಾರು ಬಾರಿ ಇದರ ಪುನರಾವರ್ತನೆಯಾಗಿತ್ತು. ವೈದ್ಯರ ಅಭಿಪ್ರಾಯದಂತೆ ಅನಿಲನ ಅಜ್ಜನಲ್ಲಿದ್ದ ಆಸ್ತಮಾ ಕಾಯಿಲೆಯು ಇದೀಗ ಅನುವಂಶಿಕವಾಗಿ ಅನಿಲನನ್ನು ಕಾಡಲಾರಂಭಿಸಿತ್ತು. ಅನೇಕ ರೀತಿಯ ಪರೀಕ್ಷೆಗಳು ಮತ್ತು ವಿವಿಧ ಪದ್ದತಿಯ ವೈದ್ಯರ ಚಿಕಿತ್ಸೆಗಳನ್ನು ಪಡೆದುಕೊಂಡರೂ, ಅನಿಲನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿಲ್ಲ. 

ಅನಿಲನ ಕಾಯಿಲೆಯ ಬಗ್ಗೆ ಅರಿತ ಸಂಬಂಧಿಯೊಬ್ಬರು ಈ ತೆರನ ಸಮಸ್ಯೆಗಳಿಗೆ " ರಾಮಬಾಣ " ದಂತಹ ಔಷದ ಲಭ್ಯವಿದೆ ಎಂದಾಗ ಅನಿಲನ ತಂದೆಗೆ ಮಹದಾನಂದವಾಗಿತ್ತು. ಅವರ ಒಪ್ಪಿಗೆಯ ಬಳಿಕ ಚಿಕಿತ್ಸೆ ಆರಂಭವಾಗಿತ್ತು. ಹಸಿರು ಬಣ್ಣದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದಂತೆ ಕಾಣಿಸುತ್ತಿದ್ದ ಈ ಔಷದವನ್ನು ದಿನದಲ್ಲಿ ಮೂರುಬಾರಿ ಒಂದೊಂದು ಚಮಚದಷ್ಟು ಸೇವಿಸಬೇಕಾಗಿತ್ತು. ವಿಶೇಷವೆಂದರೆ ಚಿಕಿತ್ಸೆ ಆರಂಭವಾದಂತೆಯೇ ಅನಿಲನ ಆಸ್ತಮಾ ಅದೃಶ್ಯವಾಗಿತ್ತು!. ಆದರೆ ಅನಿಲನ ಶರೀರದ ಗಾತ್ರ ಮತ್ತು ತೂಕಗಳು ಮಾತ್ರ ನಿಧಾನವಾಗಿ ಹೆಚ್ಚುತ್ತಾ ಹೋಗಿತ್ತು. 

ಸಂತುಷ್ಟರಾದ ಅನಿಲನ ತಂದೆ, ಮಗನಿಗೆ ಹೊಸ ಸಮವಸ್ತ್ರಗಳನ್ನು ಹೋಲಿಸಿದರು. ಜೊತೆಗೆ ಕುಟುಂಬ ವೈದ್ಯರ ಬಳಿ,  ಯಾವುದೇ ಚಿಕಿತ್ಸೆಯಿಂದ ಗುಣವಾಗದೆಂದು ನೀವು ಹೇಳಿದ್ದ  ಆಸ್ತಮಾ ವ್ಯಾಧಿಯು, ಕೇವಲ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳಿಂದ ಗುಣವಾಯಿತೆಂದು ಹೀಯಾಳಿಸಿದರು. 

ಕೆಲದಿನಗಳ ಬಳಿಕ ಅನಿಲನ ಹುಟ್ಟುಹಬ್ಬದಂದು ಅಪರಾತ್ರಿಯಲ್ಲಿ ಆಕಸ್ಮಿಕವಾಗಿ ಆರಂಭಗೊಂಡು ತೀವ್ರವಾಗಿ ಉಲ್ಬಣಿನಿಸಿದ್ದ  ಆಸ್ತಮಾದಿಂದಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಅನಿಲನ ಕಾಯಿಲೆ ಮತ್ತು ಚಿಕಿತ್ಸೆಗಳ ವಿವರಗಳನ್ನು ಪಡೆದ ತಜ್ಞವೈದ್ಯರು, ರಾಮಬಾಣದಂತಹ ಔಷದದಲ್ಲಿ ಬೆರೆಸಿದ್ದ " ಸ್ಟೆರಾಯ್ಡ್ " ಗಳೇ ಆತನ ಕಾಯಿಲೆಯು ಶಮನಗೊಳ್ಳಲು ಮತ್ತು ಶರೀರದ ತೂಕ ಮತ್ತು ಗಾತ್ರಗಳು ಹೆಚ್ಚಲು ಕಾರಣವೆಂದು ಹೇಳಿದ್ದರು. ಆಧುನಿಕ ಪದ್ಧತಿಯ ಚಿಕಿತ್ಸೆಯಲ್ಲಿ ಕೇವಲ ತುರ್ತುಸ್ಥಿತಿಯಲ್ಲಿ ಬಳಸುವ ಈ ಜೀವರಕ್ಷಕ ಔಷದವನ್ನು, ಗಿಡಮೂಲಿಕೆಗಳಿಂದ ತಯಾರಿಸಿದ ಔಷದದಲ್ಲಿ ಬೆರೆಸಿ ನೀಡಿದ್ದ ನಕಲಿ ವೈದ್ಯನ ಕೈಚಳಕದಿಂದಾಗಿ ಅನಿಲನ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ವೈದ್ಯರಿಂದ ಸ್ಟೆರಾಯ್ಡ್ ಔಷದಗಳ ಸೇವನೆಯ ದುಷ್ಪರಿಣಾಮಗಳನ್ನು ಅರಿತು ಬೆಚ್ಚಿದ ಅನಿಲನ ತಂದೆಯು, ವೈದ್ಯರ ಸಲಹೆಯಂತೆ ಈ ಔಷದವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಇದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಮುಂದಿನ ಮೂರು ತಿಂಗಳುಗಳಲ್ಲಿ ಅನಿಲನು ತನ್ನ ಹಳೆಯ ಸಮವಸ್ತ್ರವನ್ನು ಮತ್ತೆ ಧರಿಸುವಂತಾಗಿದ್ದನು. ತದನಂತರ ವೈದ್ಯರ ಸಲಹೆಯಂತೆ ದಿನಚರಿ ಮತ್ತು ಆಹಾರ ಸೇವನೆಯಲ್ಲಿ ಅವಶ್ಯಕ ಬದಲಾವಣೆ ಮತ್ತು ಕನಿಷ್ಠ ಪ್ರಮಾಣದ ಔಷದ ಸೇವನೆಗಳಿಂದ ಆತನ ಆರೋಗ್ಯ ಸುಧಾರಿಸಿತ್ತು. ಇದರೊಂದಿಗೆ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿತ್ತು!. 

ಈ ಸಮಸ್ಯೆಗೆ ಕಾರಣವೇನು ?

ನಾವು ಉಸಿರಾಡುವ ಗಾಳಿಯೊಂದಿಗೆ ಶ್ವಾಸಕೋಶಗಳನ್ನು ಸುಲಭವಾಗಿ ಪ್ರವೇಶಿಸಬಲ್ಲ ಧೂಳು, ವಿವಿಧ ಸಸ್ಯಗಳ ಪರಾಗಗಳು, ರಾಸಾಯನಿಕ ಧೂಮ, ತಂಬಾಕಿನ ಹೊಗೆ, ಮಂಜು, ತಣ್ಣಗಿನ ಗಾಳಿ ಮತ್ತು ಶ್ವಾಸಕೋಶಗಳ ಸೋಂಕುಗಳು ಆಸ್ತಮಾ ಉದ್ಭವಿಸಲು ಕಾರಣವೆನಿಸುವ ಸಾಧ್ಯತೆಗಳಿವೆ. ಇದಲ್ಲದೇ ಮೊಟ್ಟೆ, ಮೀನು, ಮಾಂಸ, ಹಾಲು, ಮೊಸರು, ಚಾಕಲೆಟ್, ಐಸ್ ಕ್ರೀಮ್, ಕೆಲ ವಿಧದ ಹನ್ನುಹಂಪಲುಗಳ ಸೇವನೆ ಮತ್ತು ತೀವ್ರ ಮಾನಸಿಕ ಒತ್ತಡಗಳೂ ಆಸ್ತಮಾ ಉದ್ಭವಿಸಲು ಮೂಲವೆನಿಸುತ್ತವೆ. ಕೆಲವೊಮ್ಮೆ ಆಸ್ಪಿರಿನ್ ಮತ್ತಿತರ ಔಷದಗಳ ಸೇವನೆಯೂ ಈ ಸಮಸ್ಯೆಗೆ ಕಾರಣವೆನಿಸುತ್ತವೆ. 

ರಾಮಣ್ಣನ ಸಮಸ್ಯೆಗೆ ಕಾರಣವೇನು?

ಬೀಡಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಮಣ್ಣನಿಗೆ ೫೦ ವರ್ಷ ವಯಸ್ಸಾಗಿದ್ದು, ಮೇಲ್ನೋಟಕ್ಕೆ ಆರೋಗ್ಯವಂತನಂತೆ ಕಂಡರೂ, ಆತನಿಗೆ ಬಾಲ್ಯದಿಂದಲೂ ಆಸ್ತಮಾ ಬಾಧಿಸುತ್ತಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ ತೀವ್ರವಾಗಿ ಉಲ್ಬಣಿಸಿದ್ದ ಆಸ್ತಮಾದ ಪೀಡೆಯನ್ನು ಸಹಿಸಲಾಗದೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಆತನ ಸಮಸ್ಯೆ ಪರಿಹಾರಗೊಂಡಿತ್ತು. ಆದರೆ ವೈದ್ಯರು ತುರ್ತು ಪರಿಸ್ಥಿತಿಯಲ್ಲಿ ಸೂಚಿಸಿದ್ದ ಔಷದಗಳನ್ನು ದಿನನಿತ್ಯ ಸೇವಿಸಲು ಆರಂಭಿಸಿದ ರಾಮಣ್ಣನ ಆಸ್ತಮಾ, ಕಾಣದಂತೆ ಮಾಯವಾಗಿತ್ತು!. 

ಒಂದೆರಡು ವರ್ಷಗಳು ಕಳೆಯುತ್ತಿದ್ದಂತೆಯೇ ರಾಮಣ್ಣನಿಗೆ ಆಗಾಗ ಸಣ್ಣಗೆ ಹೊಟ್ಟೆನೋವು ಹಾಗೂ ಉರಿ, ಹೊಟ್ಟೆ ತೊಳಸಿದಂತಾಗಿ ವಾಂತಿ ಇತ್ಯಾದಿ ತೊಂದರೆಗಳು ಬಾಧಿಸಲು ಆರಂಭವಾಗಿದ್ದವು. ಇದು ಗ್ಯಾಸ್ ಟ್ರಬಲ್ ಎಂದು ನಂಬಿದ್ದ ರಾಮಣ್ಣನು, ಸ್ವಯಂ ಚಿಕಿತ್ಸೆಗೆ ಶರಣಾಗಿದ್ದನು. 

ಅದೊಂದು ಮುಂಜಾನೆ ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಕಂಗೆಟ್ಟ ರಾಮಣ್ಣನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ಆತನ ಹೊಟ್ಟೆನೋವಿಗೆ ಕಾರಣವೆನಿಸಿದ್ದ " ಜಠರದ ಹುಣ್ಣು " ಪತ್ತೆಯಾದಂತೆಯೇ, ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ತಜ್ಞವೈದ್ಯರ ಅಭಿಪ್ರಾಯದಂತೆ ತುರ್ತು ಸ್ಥಿತಿಯಲ್ಲಿ ಆತನ ಆಸ್ತಮಾ ನಿಯಂತ್ರಿಸಲು ತಜ್ಞ ವೈದ್ಯರು ಸೂಚಿಸಿದ್ದ ಹಾಗೂ ತದನಂತರ ಆತನು ವೈದ್ಯರ ಸಲಹೆಯನ್ನೇ ಪಡೆಯದೇ ದಿನನಿತ್ಯ ಸೇವಿಸುತ್ತಿದ್ದ ಸ್ಟೆರಾಯ್ಡ್ ಮಾತ್ರೆಗಳೇ ಈ ಸಮಸ್ಯೆಗೆ ಮೂಲವೆನಿಸಿತ್ತು. 

ಸ್ಟೆರಾಯ್ಡ್ ಎಂದರೇನು?

ನಮ್ಮ ಶರೀರದಲ್ಲಿರುವ ಅಡ್ರಿನಲ್ ಗ್ರಂಥಿಗಳು ಸ್ರವಿಸುವ ಅನೇಕ ಹಾರ್ಮೋನ್ ಗಳಲ್ಲಿ ಸ್ಟೆರಾಯ್ಡ್ ಗಳೂ ಸೇರಿವೆ. ಅಪರೂಪದಲ್ಲಿ ಈ ಗ್ರಂಥಿಗಳ ಅತಿಯಾದ ಕಾರ್ಯಕ್ಷಮತೆಯಿಂದ ಅನೇಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ.

ಅತಿಯಾದರೆ ಅಮೃತವೂ ವಿಷವಾಗಬಲ್ಲದು ಎನ್ನುವ ನಾಣ್ಣುಡಿಯು, ಸ್ಟೆರಾಯ್ಡ್ ಗಳ ಬಗ್ಗೆ ಅನ್ವರ್ಥವೆನಿಸುತ್ತದೆ. ಜನಸಾಮಾನ್ಯರು ನಂಬಿರುವಂತೆ ಸ್ಟೆರಾಯ್ಡ್ ಗಳು ನಿಶ್ಚಿತವಾಗಿಯೂ ಸರ್ವರೋಗಹರ ಸಂಜೀವಿನಿ ಅಲ್ಲ. ಆದರೆ ವೈದ್ಯಕೀಯ ತುರ್ತುಪರಿಸ್ಥಿತಿಯಲ್ಲಿ, ಉದಾ- ತೀವ್ರ ಉಲ್ಬಣಿಸಿರುವ ಆಸ್ತಮಾ, ಕೆಲವಿಧದ ಔಷದಗಳ ಸೇವನೆಯಿಂದ ಉದ್ಭವಿಸಬಲ್ಲ ತೀವ್ರ ಪ್ರತಿಕ್ರಿಯೆ ಇತ್ಯಾದಿ ಸಂದರ್ಭಗಳಲ್ಲಿ ಸ್ಟೆರಾಯ್ಡ್ ಗಳು ಜೀವರಕ್ಷಕವೆನಿಸುತ್ತವೆ. ಸಾಮಾನ್ಯವಾಗಿ ಸ್ಟೆರಾಯ್ಡ್ ಗಳನ್ನೂ ಅನಿವಾರ್ಯ ಸಂದರ್ಭಗಳಲ್ಲಿ ಬಳಸುವ ವೈದ್ಯರು, ಆರಂಭಿಕ ಹಂತದಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಇದನ್ನು ನೀಡಿ, ಬಳಿಕ ಈ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದು ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ವಿಧಾನವೂ ಹೌದು. 

ಸ್ಟೆರಾಯ್ಡ್ ಗಳ ಸೇವನೆಯು ರೋಗಿಗಳಲ್ಲಿ " ತಾನು ಸೌಖ್ಯದಿಂದ ಹಾಗೂ ಆರಾಮವಾಗಿ ಇದ್ದೇನೆ" (A feeling of well being)ಎನ್ನುವ ಭಾವನೆಯನ್ನು ಸೃಷ್ಟಿಸುತ್ತದೆ. ಅಂತೆಯೇ ಇಂತಹ ಔಷದಗಳನ್ನು ವೈದ್ಯರ ಸಲಹೆ ಪಡೆಯದೇ ಹಾಗೂ ದಿನನಿತ್ಯ ಸೇವಿಸುವುದರಿಂದ ಗಂಭೀರ ಸಮಸ್ಯೆಗಳಲ್ಲದೇ, ಪ್ರಾಣಪಾಯಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ದಿನಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಜನತೆಯನ್ನು ಮರುಳುಮಾಡುವ, ನಿಗದಿತ ದಿನಗಳಲ್ಲಿ ನಿ ಮ್ಮೂರಿನ ಲಾಡ್ಜ್ ಗಳಲ್ಲಿ ಪ್ರತ್ಯಕ್ಷರಾಗುವ, ವೈದ್ಯಕೀಯ ಶಾಸ್ತ್ರದ ಗಂಧಗಾಳಿಯನ್ನೂ ಅರಿಯದ ಮತ್ತು ಸ್ವಯಂಘೋಷಿತ " ಆಸ್ತಮಾ ತಜ್ಞ" ರು ನಿಜಕ್ಕೂ ' ನಕಲಿ ವೈದ್ಯ" ರಾಗಿದ್ದು, ಇವರು ನೀಡುವ ಔಷದಗಳಲ್ಲಿ ಧಾರಾಳವಾಗಿ ಬಳಸುವುದು ಈ ಸ್ಟೆರಾಯ್ಡ್ ಗಳನ್ನೇ ಹೊರತು ಅನ್ಯ ಔಷದಗಳನ್ನಲ್ಲ. ಆಸ್ತಮಾ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳು ಇವರಲ್ಲಿದ್ದಲ್ಲಿ, ರೋಗಿಗಳೇ ಇವರನ್ನು ಹುಡುಕಿಕೊಂಡು ಹೋಗಬೇಕಾಗಿತ್ತೇ ಹೊರತು, ಇವರೇ ರೋಗಿಗಳನ್ನು ಹುಡುಕಿಕೊಂಡು ಅಲೆಯಬೇಕಾಗಿರಲಿಲ್ಲ!. 

ಸ್ಟೆರಾಯ್ಡ್ ಗಳ ದುಷ್ಪರಿಣಾಮಗಳು 

ಯಾವುದೇ ವಿಧದ ಸ್ಟೆರಾಯ್ಡ್ ಗಳನ್ನು ವೈದ್ಯರು ಸೂಚಿಸದೇ ಅವಿರತವಾಗಿ ಸೇವಿಸುವುದರಿಂದ ನಿಮ್ಮ ಶರೀರದ ತೂಕ ಮತ್ತು ಗಾತ್ರಗಳು ಹೆಚ್ಚುವುದು, ಮುಖವು ಹುಣ್ಣಿಮೆಯ ಚಂದ್ರನಂತೆ ದುಂಡಗಾಗುವುದು, ಭುಜ, ಹೊಟ್ಟೆ ಮತ್ತು ಸೊಂಟದ ಭಾಗಗಳಲ್ಲಿ ಕೊಬ್ಬು ತುಂಬಿ ಉಬ್ಬುವುದು, ಬಾಣಂತಿಯ ಹೊಟ್ಟೆಯ ಮೇಲೆ ಕಾಣುವಂತಹ ಉದ್ದನೆಯ ಬಿಳಿಯ ಬಣ್ಣದ ಗೆರೆಗಳು ಉದ್ಭವಿಸಿವುದು. ಇದಲ್ಲದೆ ಜಠರದ ಹುಣ್ಣು, ಮಧುಮೇಹ, ಅಧಿಕ ರಕ್ತದ ಒತ್ತಡ, ಮೂಳೆಗಳ ದೌರ್ಬಲ್ಯಗಳು ಪ್ರತ್ಯಕ್ಷವಾಗುವ ಹಾಗೂ ಮಾನಸಿಕ ತೊಂದರೆಗಳು ಮತ್ತು ಅಪಸ್ಮಾರಗಳಂತಹ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಶರೀರದ ಮಾಂಸಖಂಡಗಳಲ್ಲಿ ನೋವು, ಕೈಕಾಲುಗಳಲ್ಲಿ ನಿಶ್ಶಕ್ತಿ, ತೀವ್ರ ಶಾರೀರಿಕ ಆಯಾಸ ಇತ್ಯಾದಿ ಸಮಸ್ಯೆಗಳೂ ತಲೆದೋರುತ್ತವೆ. ವಿಶೇಷವಾಗಿ ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಗಡ್ಡ - ಮೀಸೆಗಳು ಮೂಡುವುದು, ರಕ್ತ ಹೆಪ್ಪುಗಟ್ಟುವಂತಹ ಸ್ಥಿತಿಯ ವೈಪರೀತ್ಯದಿಂದ ಉಂಟಾಗುವ ತೊಂದರೆಗಳು ಮತ್ತು ಕೆಲವರಲ್ಲಿ ತಲೆಗೂದಲು ಉದುರುವುದೇ ಮುಂತಾದ ಸಮಸ್ಯೆಗಳು ಬಾಧಿಸಬಹುದು. 

ಸ್ಟೆರಾಯ್ಡ್ ಪತ್ತೆಹಚ್ಚಬೇಕೇ ?

ನೀವು ಈಗಾಗಲೇ ನಕಲಿ ವೈದ್ಯರ ಮಾತಿಗೆ ಮರುಳಾಗಿ, ಅವರು ನೀಡಿದ್ದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ್ದೆಂದು ನಂಬಿ ಸೇವಿಸುತ್ತಿರುವ ಔಷದಗಳಲ್ಲಿ ಸ್ಟೆರಾಯ್ಡ್ ಗಳು ಇರುವುದೇ ಎಂದು ಅರಿಯಲು ಅಪೇಕ್ಷಿಸುತ್ತೀರಾ ?.

ನಿಮ್ಮ ಉತ್ತರ ಹೌದೆಂದಾದಲ್ಲಿ, ಮೊದಲನೆಯದಾಗಿ ನೀವು ಈ ಔಷದವನ್ನು ಸೇವಿಸಿದ ೩೦ ರಿಂದ ೬೦ ನಿಮಿಷಗಳಲ್ಲಿ ನಿಮ್ಮ ಆಸ್ತಮಾ ಕಡಿಮೆಯಾಗುವುದೇ ?. ಜೊತೆಗೆ ದಿನನಿತ್ಯದ ಔಷದ ಸೇವನೆ ನಿಲ್ಲಿಸಿದೊಡನೆ ಆಸ್ತಮಾ ಮತ್ತೆ ಪ್ರಾರಂಭವಾಗುವುದೇ ?. ಈ ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ, ನೀವು ಸೇವಿಸುತ್ತಿರುವ ಔಷದಗಳಲ್ಲಿ ನಿಸ್ಸಂದೇಹವಾಗಿಯೂ ಆಧುನಿಕ ಪದ್ದತಿಯ ಸ್ಟೆರಾಯ್ಡ್ ಗಳನ್ನು ಬೆರೆಸಿರುವುದರಲ್ಲಿ  ಸಂದೇಹವಿಲ್ಲ!. 

ನಿಮ್ಮ ಸಂದೇಹವನ್ನು ನಿವಾರಿಸಿಕೊಳ್ಳಲು ಈ ಔಷದಗಳನ್ನು ಯಾವುದೇ ವೈದ್ಯಕೀಯ ಕಾಲೇಜಿನ ಫಾರ್ಮಕಾಲಜಿ ವಿಭಾಗದಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ.

ನೀವೇನು ಮಾಡಬಹುದು?

ನಿಮಗೆ ಆಸ್ತಮಾ ಕಾಯಿಲೆ ಇದ್ದಲ್ಲಿ ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರ ಅಥವಾ ಅವರ ಸಲಹೆಯಂತೆ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯುವುದು ಹಿತಕರ. ಅವಶ್ಯಕತೆಯಿದ್ದಲ್ಲಿ ಎಕ್ಸ್-ರೇ, ಶ್ವಾಸಕೋಶದ ಕ್ಷಮತೆಯ ಪರೀಕ್ಷೆ, ನಿಮಗಿರುವ ಅಲರ್ಜಿಯನ್ನು ಪತ್ತೆಹಚ್ಚಲು ಅವಶ್ಯಕ ಪರೀಕ್ಷೆ, ಮಲ, ಮೂತ್ರ ಮತ್ತು ಕಫಗಳ ಪರೀಕ್ಷೆಗಳನ್ನು ನಡೆಸುವ ಮೂಲಕ ಸೂಕ್ತ ಚಿಕಿತ್ಸೆಯನ್ನು ನೀಡಬಹುದಾಗಿದೆ. ಇದರೊಂದಿಗೆ ನಿಮ್ಮ ಸಮಸ್ಯೆ ಉಲ್ಬಣಿಸಲು ಕಾರಣವೆಂದು ನೀವು ಗುರುತಿಸಿರುವ ವಾತಾವರಣ, ಖಾದ್ಯಪೇಯಗಳು, ಔಷದಗಳು, ಹಣ್ಣು ಹಂಪಲುಗಳು, ದೈಹಿಕ ಶ್ರಮದ ಕೆಲಸ- ಕಾರ್ಯಗಳು, ಮತ್ತು ಮಾನಸಿಕ ಒತ್ತಡಗಳಿಂದ ದೂರವಿರಿ. ನಿಮ್ಮ ವೈದ್ಯರು ನಿಮಗೆ ನೀಡಿರುವ ಔಷದಗಳನ್ನು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಸೇವಿಸಿ. ಆಸ್ತಮಾ ತೀವ್ರವಾಗಿ ಉಲ್ಬಣಿಸಿದಲ್ಲಿ ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ. ಯಾವುದೇ ಕಾರಣಕ್ಕೂ ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ನಿಮಗೆ ನೀಡಿರಬಹುದಾದ ಸ್ಟೆರಾಯ್ಡ್ ಮಾತ್ರೆಗಳನ್ನು ಬೇಕಾಬಿಟ್ಟಿಯಾಗಿ ಸೇವಿಸದಿರಿ. 

ನಿಮ್ಮ ಸಮಸ್ಯೆಯನ್ನು ಕೂಲಂಕುಶವಾಗಿ ಅರಿತುಕೊಂಡು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಅಂತಿಮವಾಗಿ ನಿಮ್ಮ ವೈದ್ಯರ ರೋಗನಿದಾನ (Diagnosis), ನಡೆಸಿರುವ ಅವಶ್ಯಕ ಪರೀಕ್ಷೆಗಳ ಪರಿಣಾಮಗಳು ಮತ್ತು ಚಿಕಿತ್ಸೆಗಳ ವಿವರಗಳನ್ನು ಕೇಳಿ ಪಡೆದುಕೊಳ್ಳುವ ಹಕ್ಕು ನಿಮಗಿದೆ. ಅಂತೆಯೇ ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಕಾರಣದಿಂದ ವೈದ್ಯರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು ನಿಮಗಿದೆ. ಜೊತೆಗೆ ಕಾಯಿಲೆಯ - ಚಿಕಿತ್ಸೆಯ ಎಲ್ಲ ದಾಖಲೆಗಳನ್ನು ಕೇಳಿ ಪಡೆದುಕೊಂಡು ಜೋಪಾನವಾಗಿರಿಸುವ ಹೊಣೆಗಾರಿಕೆಯು ನಿಮ್ಮದೇ ಆಗಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ದಿ೨೬-೧೨-೨೦೦೨ ರ ಉದಯವಾಣಿ ಪತ್ರಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 




No comments:

Post a Comment