Wednesday, August 27, 2014

RAT FEVER -LEPTOSPIROSIS



 ಇಲಿಜ್ವರ : ಮುಂಜಾಗರೂಕತೆ ವಹಿಸಿ 

ಇಲಿ ಓಡಿತು ಎನ್ನುವುದನ್ನು ಕೇಳಿದವನು, ಹುಲಿ ಓಡಿತು ಎಂದು ಹೇಳಿದಂತೆ, ಎನ್ನುವ ತುಳುವರ ಆಡುಮಾತು " ಇಲಿಜ್ವರ " ದ ಬಗ್ಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಈ ಸೋಂಕು ಪೀಡಿತ ಮೂಷಿಕದ ಮೂತ್ರದ ಮೂಲಕ ಹರಡುವ ಇಲಿಜ್ವರವು, ಅನೇಕ ರೋಗಿಗಳ ಪಾಲಿಗೆ ಪ್ರಾಣಾಂತಿಕವಾಗಿ ಪರಿಣಮಿಸುತ್ತಿದೆ.

ಕಳೆದ ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗಗಳಲ್ಲಿ ವ್ಯಾಪಕವಾಗಿ ಹರಡಿದ್ದ ಡೆಂಗೆ, ಚಿಕುನ್ ಗುನ್ಯ ಮತ್ತು ಇನ್ಫ್ಲುಯೆಂಜಾ ಜ್ವರಗಳಂತಹ ವ್ಯಾಧಿಗಳಿಗೆ, ನಿರ್ದಿಷ್ಟ ವೈರಸ್ ಗಳೇ ಕಾರಣವೆನಿಸಿವೆ. ಇವುಗಳಲ್ಲಿ ಮೊದಲ ಎರಡು ಕಾಯಿಲೆಗಳಲ್ಲದೇ, ಮಲೇರಿಯ ಜ್ವರವೂ ಸೊಳ್ಳೆಗಳಿಂದ ಹರಡುತ್ತದೆ. ಆದರೆ ಈ ವ್ಯಾಧಿಗಳೊಂದಿಗೆ ಅಪರೂಪದಲ್ಲಿ ಪತ್ತೆಯಾಗುತ್ತಿರುವ ಇಲಿಜ್ವರವು, "ಸ್ಪೈರೋಕೆಟ್ " ಎನ್ನುವ ಬ್ಯಾಕ್ಟೀರಿಯಾಗಳಿಂದ ಉದ್ಭವಿಸುತ್ತದೆ. 

ವೈದ್ಯಕೀಯ ಪರಿಭಾಷೆಯಲ್ಲಿ " ಲೆಪ್ಟೋಸ್ಪೈರೋಸಿಸ್ " ಎಂದು ಕರೆಯಲ್ಪಡುವ ಇಲಿಜ್ವರವು, ಈ ಸೋಂಕು ಪೀಡಿತ ಇಲಿಗಳ ಮೂತ್ರ, ನಾಸಿಕ - ನೇತ್ರ ಮತ್ತು ಶರೀರದ ಇತರ ಅಂಗಾಂಗಗಳ ಸ್ರಾವಗಳ ಮೂಲಕ ಮತ್ತು ಇಲಿಗಳು ಕಚ್ಚುವ ಮೂಲಕವೂ ಕಾಡು ಪ್ರಾಣಿಗಳು, ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ಹರಡುವುದು. ಡಾ. ವೇಲ್ ಎಂಬಾತನು ಪತ್ತೆಹಚ್ಚಿದ್ದ ಈ ವ್ಯಾಧಿಯ ರೋಗಾಣುಗಳಿಂದ ಪೀಡಿತ ಇಲಿಗಳು ವಿಸರ್ಜಿಸಿದ ಮೂತ್ರದಲ್ಲಿರುವ ರೋಗಾಣುಗಳಿಂದ ಕಲುಷಿತಗೊಂಡ ನೀರು ಮತ್ತು ಮಣ್ಣಿನ ಮೂಲಕವೂ ಈ ಸೋಂಕು ಹರಡಬಲ್ಲದು. ಸೋಂಕು ಪೀಡಿತ ಇಲಿಗಳು ವಿಸರ್ಜಿಸುವ ಒಂದು ಮಿಲಿ ಲೀಟರ್ ಮೂತ್ರದಲ್ಲಿ, ೧೦ ಕೋಟಿಗೂ ಅಧಿಕ ಬ್ಯಾಕ್ಟೀರಿಯಾಗಳು ಇರುತ್ತವೆ!. 

ಉದಾಹರಣೆಗೆ ನಿಮ್ಮ ಮನೆಯಂಗಳದಲ್ಲಿ ಬೆಳೆದಿರುವ ಹುಲ್ಲಿನ ಮೇಲೆ ಸೋಂಕು ಪೀಡಿತ ಇಲಿಯೊಂದು ವಿಸರ್ಜಿಸಿದ ಮೂತ್ರವನ್ನು ನಿಮ್ಮ ನಾಯಿಯು ನೆಕ್ಕಿದಲ್ಲಿ, ಈ ರೋಗಾಣುಗಳು ನಾಯಿಯ ಶರೀರವನ್ನು ಪ್ರವೇಶಿಸಿ ರೋಗವನ್ನು ಉಂಟುಮಾಡುತ್ತವೆ. ಅದೇ ರೀತಿಯಲ್ಲಿ ನಿಮ್ಮ ಮನೆಯಂಗಳದಲ್ಲಿರುವ ಕೈತೋಟದಲ್ಲಿ ನೀವು ಕೆಲಸಮಾಡುತ್ತಿರುವಾಗ, ನಿಮ್ಮ ಕೈಯ್ಯಲ್ಲಿ ಇರಬಹುದಾದ ಪುಟ್ಟ ಗಾಯಗಳ ಮೂಲಕ ಅಥವಾ ಸಂದರ್ಭೋಚಿತವಾಗಿ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ನಿಮ್ಮ ಶರೀರದಲ್ಲಿ ಪ್ರವೇಶಗಳಿಸುವ ಈ ಬ್ಯಾಕ್ಟೀರಿಯಾಗಳು, ಇಲಿಜ್ವರಕ್ಕೆ ಕಾರಣ ವೆನಿಸುತ್ತವೆ. ಈ ವ್ಯಾಧಿಯು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. 

ಲೆಪ್ಟೋಸ್ಪೈರೋಸಿಸ್ ಎಂದು ಕರೆಯಲ್ಪಡುವ ಈ ಸೋಂಕು ಮನುಷ್ಯರಲ್ಲಿ ಉದ್ಭವಿಸಲು, ಲೆಪ್ಟೋಸ್ಪೈರಾ ಇಕ್ಟೆರೋ ಹೆಮೊರೆಜಿಯೇ ಅಥವಾ ಲೆಪ್ಟೋಸ್ಪೈರಾ ಕೆನಿಕೊಲಾ ಎನ್ನುವ ಎರಡು ವಿಧದ ಬ್ಯಾಕ್ಟೀರಿಯಾಗಳೇ ಕಾರಣವೆನಿಸುತ್ತವೆ. 

ರೋಗಲಕ್ಷಣಗಳು 

ಈ ರೋಗಾಣುಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಮುಂದಿನ ೪ ರಿಂದ ೨೧ ದಿನಗಳಲ್ಲಿ ಇಲಿಜ್ವರದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಪ್ರಾಥಮಿಕ ಹಂತದಲ್ಲಿ ನಿಮ್ಮನ್ನು ಸಾಮಾನ್ಯವಾಗಿ ಪೀಡಿಸುವ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುವ ವಿಪರೀತ ತಲೆನೋವು, ಶರೀರದ ಮಾಂಸಪೇಶಿಗಳು, ಅಸ್ಥಿಸಂಧಿಗಳು ಮತ್ತು ಕಣ್ಣುಗಳಲ್ಲಿ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು, ಶರೀರದಾದ್ಯಂತ ದದ್ದುಗಳು ಮೂಡುವುದು, ಒಂದಿಷ್ಟು ಚಳಿ ಮತ್ತು ಜ್ವರಗಳು ಈ ವ್ಯಾಧಿ ಪೀಡಿತರಲ್ಲಿ ಕಂಡುಬರುತ್ತವೆ. ತದನಂತರದ ಐದರಿಂದ ಹತ್ತು ದಿನಗಳ ಅವಧಿಯಲ್ಲಿ ಈ ಲಕ್ಷಣಗಳು ನಿಧಾನವಾಗಿ ಮಾಯವಾಗುತ್ತವೆ. ಈ ಹಂತದಲ್ಲಿ ತಮ್ಮನ್ನು ಬಾಧಿಸುತ್ತಿರುವ ವ್ಯಾಧಿ ಯಾವುದೆಂದು ಅರಿಯದವರು, ಸ್ವಯಂ ವೈದ್ಯರು ಮತ್ತು ಇಂತಹ "ಸಣ್ಣಪುಟ್ಟ ಕಾಯಿಲೆ"ಗಳಿಗೆ ಚಿಕಿತ್ಸೆಯನ್ನೇ ಪಡೆದುಕೊಳ್ಳದ ವ್ಯಕ್ತಿಗಳಲ್ಲಿ, ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. 

ದ್ವಿತೀಯ ಹಂತದಲ್ಲಿ ಮತ್ತೆ ಮರುಕಳಿಸುವ ಪ್ರಾಥಮಿಕ ಹಂತದ ಲಕ್ಷಣಗಳೊಂದಿಗೆ, ಕೆಲ ರೋಗಿಗಳಲ್ಲಿ ಕಣ್ಣು, ಮೆದುಳು ಮತ್ತು ಬೆನ್ನುಹುರಿಗಳಿಗೆ ಸಂಬಂಧಿಸಿದ ನರಗಳ ಉರಿಯೂತ ಹಾಗೂ ಕುತ್ತಿಗೆಯ ಸೆಡೆತಗಳು ಉದ್ಭವಿಸುತ್ತವೆ. ಈ ರೋಗಾಣುಗಳು ಮೆದುಳಿನ ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮದಿಂದಾಗಿ, ಮೆದುಳು ಜ್ವರವನ್ನು ಹೋಲುವ ಲಕ್ಷಣಗಳು ಅನೇಕ ರೋಗಿಗಳಲ್ಲಿ ಕಂಡುಬರುತ್ತವೆ. ಅಪರೂಪದಲ್ಲಿ ಕೆಲ ರೋಗಿಗಳಲ್ಲಿ ಶ್ವಾಸಕೋಶಗಳು, ಯಕೃತ್, ಪ್ಲೀಹ, ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಕೆಲ ನಿರ್ದಿಷ್ಟ ರೋಗಲಕ್ಷಣಗಳು ಕಂಡುಬರುತ್ತವೆ. ಅದೇ ರೀತಿಯಲ್ಲಿ ಯಕೃತ್, ಮೂತ್ರಾಂಗಗಳು ಮತ್ತು ಹೃದಯದ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ, ಇಲಿಜ್ವರವು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಈ ರೀತಿಯ ಯಾವುದೇ ಸಮಸ್ಯೆಗಳು ಬಾಧಿಸದೇ ಇದ್ದಲ್ಲಿ, ಸುಮಾರು ೩ ರಿಂದ ೪ ವಾರಗಳ ಅವಧಿಯಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು. 

ರೋಗಿಯ ರಕ್ತ, ಮೂತ್ರ ಇತ್ಯಾದಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಈ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಅಂತೆಯೇ ಪ್ರಾರಂಭಿಕ ಹಂತದಲ್ಲಿ ಈ ವ್ಯಾಧಿಯನ್ನು ನಿಯಂತ್ರಿಸಬಲ್ಲ ಜೀವನಿರೋಧಕ ಔಷದಗಳು ಲಭ್ಯವಿದೆ. ಆದುದರಿಂದ ಈ ವ್ಯಾಧಿಯನ್ನು ನಿರ್ಲಕ್ಷಿಸದೇ, ಕ್ಷಿಪ್ರಗತಿಯಲ್ಲಿ ತಜ್ಞವೈದ್ಯರಿಂದ ಚಿಕಿತ್ಸೆಯನ್ನು ಪದೆದುಕೊಂಡಲ್ಲಿ ಪ್ರಾಣಾಪಾಯದ ಸಂಭಾವ್ಯತೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ. 

ಇಲಿಜ್ವರ ಅರ್ಥಾತ್ ಲೆಪ್ಟೋಸ್ಪೈರೋಸಿಸ್  ವ್ಯಾಧಿಪೀಡಿತರಲ್ಲಿ ಶೇ.೧೦ ರಿಂದ ೪೦ ರಷ್ಟು ರೋಗಿಗಳು ಗಂಭೀರ ಸಮಸ್ಯೆಗಳಿಂದ ಮೃತಪಡುತ್ತಾರೆ. ಆದರೆ ವ್ಯಾಧಿಯ ತೀವ್ರತೆ, ಇದರಿಂದಾಗಿ ರೋಗಿಯ ಪ್ರಮುಖ ಅಂಗಾಂಗಗಳಿಗೆ ಸಂಭವಿಸಿರಬಹುದಾದ ಹಾನಿಯ ಪ್ರಮಾಣ, ರೋಗಿಯ ವಯಸ್ಸು, ಆತನಲ್ಲಿ ಈಗಾಗಲೇ ಇರುವ ಅನ್ಯ ಗಂಭೀರ ಆರೋಗ್ಯದ ಸಮಸ್ಯೆಗಳು ಮತ್ತು ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಹೊಂದಿಕೊಂಡು, ಈ ಮಾರಕತೆಯ ಪ್ರಮಾಣವೂ ಹೆಚ್ಚು ಅಥವಾ ಕಡಿಮೆಯಾಗಬಲ್ಲದು. ಇಲಿಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದು ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಲಭ್ಯವಿದೆ. ಆದರೆ ಇದನ್ನು ಪಡೆದುಕೊಳ್ಳುವವರ ಪ್ರಮಾಣವೂ ಸಾಕಷ್ಟು ಕಡಿಮೆಯಿದೆ.

ಕೊನೆಯ ಮಾತು 

ನಿಜ ಹೇಳಬೇಕಿದ್ದಲ್ಲಿ ಹೆಚ್ಚುತ್ತಿರುವ ಇಲಿಗಳ ಸಂಖ್ಯೆ ಮತ್ತು ಇಲಿಜ್ವರಗಳ ಪ್ರಕರಣಗಳು ಹೆಚ್ಚಲು ಜನಸಾಮಾನ್ಯರೇ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು. ಏಕೆಂದರೆ ನಾವಿಂದು ಉತ್ಪಾದಿಸಿ ಕಂಡಲ್ಲಿ ಎಸೆಯುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳೊಂದಿಗೆ, ಸಾಕಷ್ಟು ಆಹಾರ ಪದಾರ್ಥಗಳನ್ನೂ ಎಸೆಯುತ್ತಿರುವುದರಿಂದ ಮೂಷಿಕಗಳ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಇಲಿಜ್ವರದ ಸಮಸ್ಯೆಯೂ ಇದಕ್ಕೆ ಅನುಗುಣವಾಗಿ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿದೆ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೨೫-೦೭-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 




No comments:

Post a Comment