Saturday, August 16, 2014

KARNAATAKADA SHAASAKARA ANAAROGYA.........


 

 ಕರ್ನಾಟಕದ ಶಾಸಕರ ಅನಾರೋಗ್ಯ ಹಾಗೂ ಉಚಿತ ಚಿಕಿತ್ಸಾ ಭಾಗ್ಯ !

ತಮ್ಮ ಪಕ್ಷದ ಮತ್ತು ತಮ್ಮ ವೈಯುಕ್ತಿಕ ಜನಪ್ರಿಯತೆಯನ್ನು ಹೆಚ್ಚಿಸುವ ಹಾಗೂ ತನ್ಮೂಲಕ ಅಮಾಯಕ ಜನರ ಮತಗಳನ್ನು ಗಳಿಸಿಕೊಳ್ಳುವ ಸಲುವಾಗಿ, ರಾಜಕಾರಣಿಗಳು ಅನೇಕ ಜನಪ್ರಿಯ ( ಉಚಿತ ) ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಅವಕಾಶ ಸಿಕ್ಕಿದಾಗಲೆಲ್ಲಾ " ತಾವು ಜಾರಿಗೊಳಿಸಿದ್ದ ಯೋಜನೆ" ಗಳ ಬಗ್ಗೆ ಪುಂಖಾನುಪುಂಖವಾಗಿ ಕೊರೆಯುವ ರಾಜಕಾರಣಿಗಳು,ಇಂತಹ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆಯೇ ಹೊರತು ತಮ್ಮ ಜೇಬಿನಿಂದಲ್ಲ. ಆದೇ ರೀತಿಯಲ್ಲಿ  ತಮ್ಮ ( ಅರ್ಥಾತ್ ಶಾಸಕರ ) ಸಲುವಾಗಿ ಸದ್ದುಗದ್ದಲವಿಲ್ಲದೇ ಇವರು ಪಡೆದುಕೊಳ್ಳುತ್ತಿರುವ ಅನೇಕ " ಉಚಿತ ಸೌಲಭ್ಯ" ಗಳ ಬಗ್ಗೆ ದೇಶದ ಸಾಮಾನ್ಯ ಪ್ರಜೆಗಳಿಗೂ ಸೂಕ್ತ ಮಾಹಿತಿಯ ಅರಿವಿರುವುದಿಲ್ಲ!. 

ಉಚಿತ ಚಿಕಿತ್ಸಾ ಭಾಗ್ಯ!

ನಮ್ಮ ಶಾಸಕರು ತಮ್ಮ ಸಲುವಾಗಿ ತಾವೇ ಮಂಜೂರು ಮಾಡಿಸಿದ್ದ ಅನೇಕ ಸೌಲಭ್ಯಗಳಲ್ಲಿ, ಉಚಿತ ಚಿಕಿತ್ಸಾ ಭಾಗ್ಯವೂ ಒಂದಾಗಿದೆ. ವಿಶೇಷವೆಂದರೆ ಇಂತಹ ಹಲವಾರು ಸೌಲಭ್ಯಗಳು ದೇಶದ ಪ್ರತಿಯೊಂದು ರಾಜ್ಯಗಳ ಶಾಸಕರು ಮತ್ತು ಸಂಸದರಿಗೂ ಲಭಿಸುತ್ತಿದೆ. ನಮ್ಮ ದೇಶದ ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರಲ್ಲಿ ಕೋಟ್ಯಾಧಿಪತಿಗಳೇ ಹೆಚ್ಚಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಇವರೆಲ್ಲರೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆ. ಆದರೆ ಒಮ್ಮೆ ಶಾಸಕ ಅಥವಾ ಸಂಸದರಾಗಿ ಚುನಾಯಿತರಾದಂತೆಯೇ, ತಮಗೆ ಲಭ್ಯವಿರುವ ಪ್ರತಿಯೊಂದು ಸೌಲಭ್ಯಗಳನ್ನು ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಾರೆ!. 

ಸಚಿವರಿಗೆ ವಿದೇಶದಲ್ಲಿ ಚಿಕಿತ್ಸೆ 

ಇತ್ತೀಚಿಗೆ ಕರ್ನಾಟಕದ ವಸತಿ ಸಚಿವರು ತಮ್ಮ ಆರೋಗ್ಯದ ಸಮಸ್ಯೆಯ ಚಿಕಿತ್ಸೆಯ ಸಲುವಾಗಿ ಸಿಂಗಾಪುರಕ್ಕೆ ತಮ್ಮ ಪರಿವಾರದೊಂದಿಗೆ ತೆರಳಲು ಹಾಗೂ ಅಲ್ಲಿನ ಖ್ಯಾತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮತ್ತು ಮರಳಿಬರಲು ವ್ಯಯಿಸಿದ್ದ ೧.೧೬ ಕೋಟಿ ರೂ.ಗಳಲ್ಲದೇ, ಬೆಂಗಳೂರಿನ ಆಸ್ಪತ್ರೆಗೆ ಪಾವತಿಸಿದ್ದ ೫ ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರ ಮರುಪಾವತಿಸಿದೆ. ಅಸ್ತಿತ್ವದಲ್ಲಿರುವ ನಿಯಮಗಳಂತೆ ಇವರಿಗೆ ಕೇವಲ ೫ ಲಕ್ಷ ರೂ. ಗಳನ್ನು ವೈದ್ಯಕೀಯ ವೆಚ್ಚಕ್ಕಾಗಿ ನೀಡಬಹುದಾಗಿದ್ದರೂ, ಮುಖ್ಯಮಂತ್ರಿಗಳು ಈ ನಿಯಮವನ್ನು ಉಲ್ಲಂಘಿಸಿ ೧.೨೧ ಕೋಟಿ ರೂ.ಗಳನ್ನು ಸಚಿವರಿಗೆ ಪಾವತಿಸಿರುವುದು ನಂಬಲಸಾಧ್ಯವೆನಿಸುತ್ತದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಾಜಿ ಮಂತ್ರಿಯೋಬ್ಬರಿಗೆ ಶ್ರವಣ ಸಾಧನವನ್ನು ಖರೀದಿಸಲು ವ್ಯಯಿಸಿದ್ದ ೫ ಲಕ್ಷ ರೂ.ಗಳನ್ನು ಮರುಪಾವತಿಸಲಾಗಿತ್ತು. ಈ ವಿಚಾರವು ಸಾಕಷ್ಟು ವಾದವಿವಾದಗಳಿಗೂ ಕಾರಣವೆನಿಸಿತ್ತು. ಅದೇ ರೀತಿಯಲ್ಲಿ ಇತ್ತೀಚಿಗೆ ವಿಧಾನ ಪರಿಷತ್ತಿನ ಸದಸ್ಯರೊಬ್ಬರು ತನ್ನ ಬಕ್ಕ ತಲೆಗೆ ಕೂದಲನ್ನು ಕಸಿಮಾಡಿಸಲು ವ್ಯಯಿಸಿದ್ದ ೧.೨೫ ಲಕ್ಷ ರೂ. ಗಳನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಲು ಅರ್ಜಿಸಲ್ಲಿಸಿದ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗವಾದೊಡನೆ, ಈ ಬಗ್ಗೆ ಜನಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಆತಂಕಗೊಂಡ ಈ ಸದಸ್ಯರು ತಾವು ತಮ್ಮನ್ನು ಕಾಡುತ್ತಿರುವ ಚರ್ಮವ್ಯಾಧಿಯ ಚಿಕಿತ್ಸೆಯ ವೆಚ್ಚದ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೇ ಹೊರತು, ಕೂದಲು ಕಸಿಮಾಡಿಸಲು ಅಲ್ಲವೆನ್ನುವ ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಇನ್ನು ಮುಂದೆ ಯಾವುದೇ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರದಿಂದ ಪಡೆಯುವುದಿಲ್ಲ ಎಂದು ಶಪಥ ಮಾಡಿದ್ದರು!. 

ಆದರೆ ಇದೀಗ ರಾಜ್ಯದ ವಸತಿ ಸಚಿವರಿಗೆ ಒಂದು ಕೋಟಿಗೂ ರೂ.ಗಳಿಗೂ ಅಧಿಕ ಮೊತ್ತವನ್ನು ಮರುಪಾವತಿಸಿರುವುದು ರಾಜ್ಯದ ಜನರ ಮನಸ್ಸಿನಲ್ಲಿ ಒಂದಿಷ್ಟು ಕುತೂಹಲ ಹಾಗೂ ಸಾಕಷ್ಟು ಅಸಮಾಧಾನವನ್ನು ಮೂಡಿಸಿದೆ. ವಿಶೇಷವೆಂದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು, ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಬಾರಿಗೆ ಅಲ್ಲ ಮತ್ತು ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿರುವುದು ನೂರಕ್ಕೆ ನೂರು ಸತ್ಯ. ಏಕೆಂದರೆ ರಾಜ್ಯದ ಪ್ರಜೆಗಳು ಪಾವತಿಸಿರುವ ತೆರಿಗೆಯ ಹಣದಲ್ಲಿ, ನಮ್ಮ ಶಾಸಕರಿಗೆ ಅನೇಕ ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಪಾವತಿಸಿದೆ. ಇನ್ನು ಮುಂದೆಯೂ ಪಾವತಿಸಲಿದೆ. 

ಆದರೆ ರಾಜ್ಯದ ವಸತಿ ಸಚಿವರ ಅನಾರೋಗ್ಯದ ಪ್ರಕರಣ ತುಸು ಬಿನ್ನವಾಗಿದೆ. ಸಚಿವರು ಉಸಿರಾಟದ ಸಮಸ್ಯೆಯಿಂದ ಮೊದಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.ಈ ಸಂದರ್ಭದಲ್ಲಿ, ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರ ಸ್ನೇಹಿತ ರಜನೀಕಾಂತ್ ನೀಡಿದ್ದ ಸಲಹೆಯನ್ನು ಮನ್ನಿಸಿದ ಸಚಿವರನ್ನು ಏರ್ ಎಂಬುಲೆನ್ಸ್ ನಲ್ಲಿ ಅವರ ಪರಿವಾರದೊಂದಿಗೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ರಜನೀಕಾಂತ್ ಅವರೇ ಭರಿಸಲಿದ್ದಾರೆ ಎನ್ನುವ "ಗಾಳಿಸುದ್ದಿ" ಯೂ ಮಾಧ್ಯಮಗಳಲ್ಲಿ ಹರಡಿತ್ತು. ಇದರಿಂದ ಕೆರಳಿದ ಸಚಿವರು, ತನ್ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಾಮರ್ಥ್ಯ ತನಗಿದೆ ಎಂದಿದ್ದರು. ಆದರೆ ಗುಣಮುಖರಾಗಿ ಸಿಂಗಪುರದಿಂದ ಮರಳಿದ ಬಳಿಕ ತನ್ನ ಪ್ರಯಾಣದ ಮತ್ತು ಚಿಕಿತ್ಸಾ ವೆಚ್ಚಗಳನ್ನು ಸರ್ಕಾರದ ಬೊಕ್ಕಸದಿಂದ ಪಡೆದುಕೊಂಡಿದ್ದರು!. 

ನಿಜ ಹೇಳಬೇಕಿದ್ದಲ್ಲಿ ರಾಜ್ಯದ ಪ್ರಜೆಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಅವಶ್ಯಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮತ್ತು ಕೆಲ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ವ್ಯಯಿಸಿದ್ದ ವೆಚ್ಚವನ್ನು ಮರುಪಾವತಿಸಲು, ಅಸ್ತಿತ್ವದಲ್ಲಿರುವ ನಿಯಮಗಳನ್ನೇ ಉಲ್ಲಂಘಿಸುತ್ತಿದೆ. 

ವೈದ್ಯಕೀಯ ಭತ್ಯೆ?

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸಾ ಭಾಗ್ಯ ಲಭ್ಯವಿದೆ. ಒಂದುಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ ಇವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಲಭಿಸುವ ಉಚಿತ ಚಿಕಿತ್ಸಾ ಭಾಗ್ಯವು, ಶಾಸಕರು ನಿವೃತ್ತರಾದ ಅಥವಾ ಮೃತಪಟ್ಟ ಬಳಿಕವೂ ಅವರ ಕುಟುಂಬದ ಸದಸ್ಯರಿಗೆ ದೊರೆಯುತ್ತದೆ. ನಿವೃತ್ತ ಶಾಸಕರಿಗೆ ಸರ್ಕಾರ ನೀಡುವ ಮಾಸಿಕ ಪಿಂಚಣಿಯೊಂದಿಗೆ, ಪ್ರತಿತಿಂಗಳಿನಲ್ಲೂ ವೈದ್ಯಕೀಯ ವೆಚ್ಚವೆಂದು ೪ ಸಾವಿರ ರೂಪಾಯಿಗಳನ್ನು ಮತ್ತು ಮೃತ ಶಾಸಕರ ಕುಟುಂಬದ ಸದಸ್ಯರೊಬ್ಬರಿಗೆ ನೀಡುವ ಕುಟುಂಬ ಪಿಂಚಣಿಯೊಂದಿಗೆ ವೈದ್ಯಕೀಯ ವೆಚ್ಚವೆಂದು ೨ ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಯಾವುದೇ ರೀತಿಯ ಅನಾರೋಗ್ಯದಿಂದ ಪೀಡಿತರಾಗಿರದ ಶಾಸಕರು ಅಥವಾ ಅವರ ಕುಟುಂಬದ ಸದಸ್ಯರಿಗೂ ಅಯಾಚಿತವಾಗಿ ಲಭಿಸುತ್ತಿದೆ!. 

ನಿಯಮಗಳು ಎಂತಿವೆ?

ರಾಜ್ಯ ಸರ್ಕಾರದ ನಿಯಮಗಳಂತೆ ಅನಾರೋಗ್ಯ ಪೀಡಿತ ಶಾಸಕರು ನಮ್ಮ ರಾಜ್ಯದಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವಶ್ಯಕ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅವಶ್ಯಕ ಚಿಕಿತ್ಸಾ ಸೌಲಭ್ಯಗಳು ನಮ್ಮ ದೇಶದಲ್ಲಿ ಲಭ್ಯವಿಲ್ಲದಲ್ಲಿ, ವಿದೇಶಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವೆಚ್ಚವನ್ನು ಶಾಸಕರೇ ಪಾವತಿಸಿದಲ್ಲಿ, ಸೂಕ್ತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದರೂ, ಇದರ ಮಿತಿಯು ಕೇವಲ ೫ ಲಕ್ಷ ರೂ.ಗಳಾಗಿವೆ. ಕರ್ನಾಟಕ ವಿಧಾನ ಮಂಡಲಗಳ ( ಸದಸ್ಯರ ವೈದ್ಯಕೀಯ ಸೌಲಭ್ಯ) ನಿಯಮಗಳು ೧೯೬೯  ಮತ್ತು ಕರ್ನಾಟಕ ವಿಧಾನ ಮಂಡಲಗಳ ( ನಿವೃತ್ತ ಶಾಸಕರ ವೈದ್ಯಕೀಯ ಸೌಲಭ್ಯ) ಗಳ ನಿಯಮಗಳು ೨೦೦೭ ಗಳಂತೆ, ರಾಜ್ಯದ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಅವರ ಕುಟುಂಬದ ಅನ್ಯ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಅಂತೆಯೇ ಸರ್ಕಾರ ಸೂಚಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲಭ್ಯ ಔಷದಗಳನ್ನು ಹೊರಗೆ ಖರೀದಿಸಿದಲ್ಲಿ, ಈ ಮೊತ್ತವನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆಯಬಹುದಾಗಿದೆ. 

ಒಂದಿಷ್ಟು ಉದಾಹರಣೆಗಳು 

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರು ಜನವರಿ ೨೦೦೭ ರಿಂದ ಅಕ್ಟೋಬರ್ ೨೦೦೯ ರ ಅವಧಿಯಲ್ಲಿ ಪಡೆದಿದ್ದ ಮೊತ್ತವು ೫.೨ ಕೋಟಿ ರೂ. ಗಳಾಗಿತ್ತು. ಸರ್ಕಾರವು ಇಷ್ಟೊಂದು ದೊಡ್ಡ ಮೊತ್ತವನ್ನು ಶಾಸಕರ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ವ್ಯಯಿಸಿದ್ದರೂ, ಈ ಶಾಸಕರನ್ನು ಪೀಡಿಸಿದ್ದ ಕಾಯಿಲೆಯ ವಿವರಗಳ ಬಗ್ಗೆ ಸರ್ಕಾರದ ಬಳಿ ಸೂಕ್ತ ಮಾಹಿತಿಯೇ ಇಲ್ಲ. 

ಕರ್ನಾಟಕದ ಒಬ್ಬ ಶಾಸಕರು ೨೦೦೯ ರಲ್ಲಿ ಕೇವಲ ೧೦ ತಿಂಗಳುಗಳಲ್ಲಿ ೧೭.೬೮ ಲಕ್ಷ ರೂ.ಗಳನ್ನು ವೈದ್ಯಕೀಯ ವೆಚ್ಚದ ಮರುಪಾವತಿಯ ರೂಪದಲ್ಲಿ ಪಡೆದುಕೊಂಡಿದ್ದರು. ವಿಶೇಷವೆಂದರೆ ಇವರನ್ನು ಪೀಡಿಸಿದ್ದ ಆರೋಗ್ಯದ ಸಮಸ್ಯೆ ಯಾವುದೆಂದು ಸರ್ಕಾರಕ್ಕೆ ತಿಳಿದಿರಲಿಲ್ಲ!. ಇವರು ಫೆಬ್ರವರಿಯಲ್ಲಿ ೫,೮೩,೭೧೦, ಮಾರ್ಚ್ ನಲ್ಲಿ ೬೪,೧೫೫, ಎಪ್ರಿಲ್ ನಲ್ಲಿ ೨,೮೧,೮೯೫, ಜೂನ್ ನಲ್ಲಿ ೨,೭೪,೮೩೦, ಜುಲೈ ನಲ್ಲಿ ೧,೪೭,೮೭೬, ಆಗಸ್ಟ್ ನಲ್ಲಿ ೧,೪೧,೪೧೦, ಅಕ್ಟೋಬರ್ ನಲ್ಲಿ ೨,೭೫,೨೩೨ ರೂ ಗಳನ್ನು ತಮ್ಮ ಚಿಕಿತ್ಸೆಗಾಗಿ ವ್ಯಯಿಸಿರುವುದಾಗಿ ಮರುಪಾವತಿಯನ್ನು ಪಡೆದುಕೊಂಡಿದ್ದರು. ಇನ್ನು ನಾಲ್ಕಾರು ಲಕ್ಷ ರೂ.ಗಳನ್ನು ಪಡೆದಿರುವ ಶಾಸಕರ ಪಟ್ಟಿ ಸಾಕಷ್ಟು ಉದ್ದವಿದೆ. 

ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಪಡೆದುಕೊಂಡ ರಾಜಕಾರಣಿಗಳಲ್ಲಿ ಮಾಜಿ ಶಾಸಕರ ಪಾಲೇ ಸಾಕಷ್ಟು ಅಧಿಕವಾಗಿದೆ. ಉದಾಹರಣೆಗೆ ೨೦೦೭- ೨೦೦೯ ರ ಅವಧಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪಡೆದುಕೊಂಡಿದ್ದ ಮೊತ್ತವು ೫,೧೯,೪೫,೩೬೬ ರೂಗಳಾಗಿದ್ದು, ಮಾಜಿ ಶಾಸಕರ ಪಾಲು ಇಂತಿದೆ. ೨೦೦೭- ೧,೦೧,೬೮,೪೪೧, ೨೦೦೮- ೧,೫೫,೧೩,೬೯೭, ೨೦೦೯- ೧,೫೦,೦೨,೫೭೦ ರೂ.ಗಳಾಗಿದೆ. ಇದೇ ಅವಧಿಯಲ್ಲಿ ಹಾಲಿ ಶಾಸಕರು ಪಡೆದಿದ್ದ ಮೊತ್ತವು ಹೀಗಿದೆ. ೨೦೦೭- ೫೩,೭೩,೭೮೦, ಹಾಗೂ ೯,೫೨,೭೦೯, ಮತ್ತು ೨೦೦೯- ೪೯,೩೪,೧೬೯ ರೂ.ಗಳಾಗಿತ್ತು. 

ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಶಾಸಕರು, ತಮ್ಮ ಹೊಣೆಗಾರಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮತ್ತು ನಾಡಿನ ಜನತೆಯ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಬೇಕಿದೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment