Tuesday, August 19, 2014

EBOLA - UPDATE



 ಎಬೊಲ : ಮತ್ತೊಂದಿಷ್ಟು ಮಾಹಿತಿ 


ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಉದ್ಭವಿಸಿ, ಕಾಡ್ಗಿಚ್ಚಿನಂತೆ ಹರಡುತ್ತಿರುವ ಎಬೊಲ ವೈರಸ್ ಗಳ ಮಾರಕತೆಗೆ ಈಗಾಗಲೇ ಸುಮಾರು ೧೩೦೦ ರೋಗಿಗಳು ಬಲಿಯಾಗಿದ್ದಾರೆ. ಎಬೊಲ ರಕ್ತಸ್ರಾವಕ ವ್ಯಾಧಿ ಪೀಡಿತರಲ್ಲಿ ಶೇ.೯೦ ರಷ್ಟು ಜನರು ಮೃತಪಡುವ ಸಾಧ್ಯತೆಗಳಿದ್ದು, ಈ ವ್ಯಾಧಿಯನ್ನು ನಿಯಂತ್ರಿಸಲು ಲೈಬೀರಿಯ, ಸಿಯೆರಾ ಲಿಯೋನ್, ಗಿನಿ ಮತ್ತು ನೈಜೀರಿಯ ದೇಶಗಳು ಹರಸಾಹಸವನ್ನೇ ನಡೆಸುತ್ತಿವೆ. ಈ ವೈರಸ್ ಗಳ ಹಾವಳಿಯನ್ನು ನಿಯಂತ್ರಿಸಲು, ವ್ಯಾಧಿ ಪೀಡಿತರಿಗೆ ಅನ್ನಾಹಾರಗಳನ್ನು ಒದಗಿಸಲು ಮತ್ತು ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆಯನ್ನು ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ತಂಡಗಳು ಹಗಲಿರುಳು ಶ್ರಮಿಸುತ್ತಿವೆ. 

ಪಶ್ಚಿಮ ಆಫ್ರಿಕಾದ ಈ ದೇಶಗಳಲ್ಲಿ ಕರ್ತವ್ಯನಿರತರಾಗಿದ್ದ ಅನೇಕ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬಂದಿಗಳು ಮೃತಪಟ್ಟಿದ್ದು, ಇತರ ಹಲವಾರು ಸಿಬಂದಿಗಳು ತಮ್ಮ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ತತ್ಪರಿಣಾಮವಾಗಿ ಈ ವೈರಸ್ ಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ವ್ಯಾಧಿ ಪೀಡಿತರನ್ನು ಚಿಕಿತ್ಸಿಸಲು ನಡೆಸುತ್ತಿರುವ ಹೋರಾಟಕ್ಕೆ ತುಸು ಹಿನ್ನಡೆಯಾಗಿದೆ. 

ಎಬೊಲ ಪೀಡಿತ ಪ್ರದೇಶಗಳಲ್ಲಿ ಸುಮಾರು ಹತ್ತು ದಶಲಕ್ಷ ಜನರು ವಾಸಿಸುತ್ತಿದ್ದು, ಇವರನ್ನು ಸ್ಥಳೀಯ ಭದ್ರತಾ ಪಡೆಗಳು ಸುತ್ತುವರೆದಿವೆ. ಇಷ್ಟೊಂದು ಜನರಿಗೆ ಅನ್ನಾಹಾರಗಳನ್ನು ಒದಗಿಸುವ ಮೂಲಕ ಜನರ ಅನಾವಶ್ಯಕ ಚಲನವಲನಗಳನ್ನು ನಿಯಂತ್ರಿಸಲಾಗಿದೆ. ಜೊತೆಗೆ ಪ್ರತಿನಿತ್ಯ ನಿಯಮಿತವಾಗಿ ಇಷ್ಟೊಂದು ಜನರಿಗೆ ಅವಶ್ಯಕ ಆಹಾರವನ್ನು ಒದಗಿಸುವ ಸಿಬಂದಿಗಳಿಗೆ ಮತ್ತು ವೈದ್ಯಕೀಯ- ಅರೆ ವೈದ್ಯಕೀಯ ಸಿಬಂದಿಗಳಿಗೆ ವ್ಯಾಧಿ ಹರಡದಂತೆ ಅವಶ್ಯಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಈ ವ್ಯಾಧಿ ಪೀಡಿತ ೨,೨೪೦ ರೋಗಿಗಳಲ್ಲಿ, ೧,೨೯೯ ರೋಗಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಇದೇ ತಿಂಗಳಿನ ೧೪ - ೧೬ ನೇ ತಾರೀಕುಗಳ ನಡುವೆ ಲೈಬೀರಿಯದಲ್ಲಿ ೫೩, ಸಿಯೆರ ಲಿಯೋನ್ ನಲ್ಲಿ ೧೭ ಮತ್ತು ಗಿನಿಯಲ್ಲಿ ೧೪ ರೋಗಿಗಳು ಮೃತಪಟ್ಟಿದ್ದಾರೆ. 

ಲೈಬೀರಿಯ ದೇಶದ ಗಡಿ ಪ್ರದೇಶದಲ್ಲಿ ಮತ್ತು ಬಡವರು ವಾಸವಾಗಿರುವ ಕೊಳೆಗೇರಿಗಳಲ್ಲಿ ಈ ವೈರಸ್ ಹರಡುವುದನ್ನು ನಿಯಂತ್ರಿಸಲು ಅನೇಕ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಶಂಕಿತ ಎಬೊಲ ಪೀಡಿತ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಇರಿಸಿದ್ದ ತಾಣದ ಮೇಲೆ ದಾಳಿ ಮಾಡಿದ್ದ ಸ್ಥಳೀಯ ಜನರಿಂದಾಗಿ, ಅಲ್ಲಿದ್ದ ೧೭ ವ್ಯಕ್ತಿಗಳು ನಾಪತ್ತೆಯಾಗಿದ್ದರು. ಆದರೆ ಅದೃಷ್ಟವಶಾತ್ ಇವರೆಲ್ಲರನ್ನೂ ಪತ್ತೆ ಹಚ್ಚಿ ಮತ್ತೆ ಪ್ರತ್ಯೇಕಿಸಿ ಇರಿಸಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

ನೂತನ ಔಷದ 

ಎಬೊಲ ವೈರಸ್ ಗಳನ್ನು ಮಣಿಸಬಲ್ಲ ನೂತನ ಔಷದವೊಂದನ್ನು ಸಂಶೋಧಿಸಲಾಗಿದ್ದರೂ, ಇದನ್ನು ಕೇವಲ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿತ್ತು. ಝೆಡ್ ಮಾಪ್ ಎಂದು ಹೆಸರಿಸಲಾಗಿರುವ ಈ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸದೇ ಇದ್ದರೂ, ಎಬೊಲ ವೈರಸ್ ವ್ಯಾಧಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಮನುಷ್ಯರಿಗೆ ನೀಡಲು ಹಸಿರು ನಿಶಾನೆಯನ್ನು ತೋರಿದೆ. ಈ ಔಷದವನ್ನು ಸೇವಿಸಿದ ರೋಗಿಗಳಲ್ಲಿ ಗಮನಾರ್ಹ ಚೇತರಿಕೆಯ ಲಕ್ಷಣಗಳು ಕಂಡುಬಂದಿವೆ. ಆದರೆ ಇದರ ತಯಾರಕರಾದ ಮಾಪ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಬಳಿಯಿದ್ದ ಅಲ್ಪ ಪ್ರಮಾಣದ ಈ ಔಷದದ ದಾಸ್ತಾನು ಮುಗಿದಿದೆ. ಹಾಗೂ ಇದೇ ಕಾರಣದಿಂದಾಗಿ ಈ ಔಷದದ ಹೊಸ ದಾಸ್ತಾನು ಸರಬರಾಜಾಗುವ ತನಕ, ಎಬೊಲ ಪೀಡಿತ ವ್ಯಕ್ತಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಗಳಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






No comments:

Post a Comment