Wednesday, August 6, 2014

SOLIDWASTE MANAGEMENT - WHO IS RESPONSIBLE ?



 ಘನತ್ಯಾಜ್ಯ ಸಂಗ್ರಹ- ನಿರ್ವಹಣೆ : ಯಾರ ಹೊಣೆ ?

ನಮ್ಮ ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ , ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತವೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ ಎಂದು ದೂರುವ ಜನರು, ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇವುಗಳನ್ನು ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಲು ಸಹಕರಿಸುತ್ತಿಲ್ಲ. ಇನ್ನು ಕೆಲವರಂತೂ ಮಾತೆತ್ತಿದರೆ ಸಿಂಗಾಪುರ ಮತ್ತು ಅಮೆರಿಕಗಳಲ್ಲಿನ ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ತಮ್ಮಲ್ಲಿ ಉತ್ಪನ್ನವಾಗಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡುವುದಿಲ್ಲ.

 ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಬಹುತೇಕ ನಗರ - ಪಟ್ಟಣಗಳಲ್ಲಿದ್ದ ಸಿಮೆಂಟ್ ನಿರ್ಮಿತ ತೆರೆದ ಕಸದ ತೊಟ್ಟಿಗಳನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿತ್ತು. ಆದರೆ ಇದೇ ನ್ಯಾಯಾಲಯವು ಆದೇಶಿಸಿದ್ದಂತೆ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ದೈನಂದಿನ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಬೇಕೆನ್ನುವ ಪ್ರಮುಖ ವಿಚಾರವನ್ನು ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನಿಗದಿಸಿದ್ದ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ತಲೆಕೆಡಿಸಿಕೊಂಡಿಲ್ಲ. 

ನಿರ್ವಹಣೆ- ವಿಲೇವಾರಿ 

ದೇಶದ ಪ್ರಥಮ ದರ್ಜೆಯ ನಗರಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ನೇಮಕಗೊಂಡಿದ್ದ ಸಮಿತಿಯೊಂದು, ೧೯೯೯ ರಲ್ಲಿ ಈ ಬಗ್ಗೆ ವರದಿಯೊಂದನ್ನು ಸರ್ವೋಚ್ಛ  ನ್ಯಾಯಾಲಯಕ್ಕೆ ಸಲ್ಲಿಸಿತ್ತು. ತತ್ಪರಿಣಾಮವಾಗಿ ಘನತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮದ ವಿಚಾರದಲ್ಲಿ ನೂತನ ಧೋರಣೆಯೂ ೨೦೦೦ ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು. ಈ ಧೋರಣೆಯಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣೆಯ ಪರಿಪೂರ್ಣವಾದ ಯೋಜನೆಯೊಂದನ್ನು ರೂಪಿಸಿ, ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ, ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಹಾಗೂ ಪುನರ್ ಆವರ್ತನಕ್ಕೆ ಉಪಯುಕ್ತವೆನಿಸುವ ತ್ಯಾಜ್ಯಗಳನ್ನು ಅದಕ್ಕಾಗಿಯೇ ಬಳಸುವ ವಿಚಾರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಆದರೆ ಈ ಧೋರಣೆಯನ್ನು ಕಾರ್ಯರೂಪಕ್ಕೆ ತರಲು ಬಹುತೇಕ ಸ್ಥಳೀಯ ಸಂಸ್ಥೆಗಳು ದಯನೀಯವಾಗಿ ವಿಫಲಗೊಂಡಿವೆ. 

ಮುನಿಸಿಪಲ್ ಘನತ್ಯಾಜ್ಯ ( ಆಡಳಿತ ಮತ್ತು ನಿರ್ವಹಣೆ) ನಿಯಮ ೧೯೯೯ ರಂತೆ ನಗರ ಪ್ರದೇಶಗಳಲ್ಲಿ ಮುಕ್ತವಾಗಿ ತ್ಯಾಜ್ಯಗಳನ್ನು ಸುರಿಯುವುದು ಅಪರಾಧವೆನಿಸುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಲ್ಯಾಂಡ್ ಫಿಲ್ ಗಳನ್ನು ನಿರ್ಮಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ, ಸುದೀರ್ಘಕಾಲ ಇವುಗಳನ್ನು ಬಳಸುವಂತೆ ಸಿದ್ಧಪಡಿಸಿ ತ್ಯಾಜ್ಯಗಳ ಸಂಸ್ಕರಣೆ ಮತ್ತು ವಿಲೆವಾರಿಗಳಿಗೆ ಅವಶ್ಯಕ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕಾಗುತ್ತದೆ. 

ವಿಶೇಷವೆಂದರೆ ಈ ವ್ಯವಸ್ಥೆ ಲಭ್ಯವಿರುವ ಅನೇಕ ನಗರ- ಪಟ್ಟಣಗಳಲ್ಲೂ, ರಸ್ತೆಗಳ ಬದಿಗಳು, ಚರಂಡಿಗಳು ಮತ್ತು ಖಾಲಿಜಾಗಗಳಲ್ಲಿ ಸ್ಥಳೀಯ ನಿವಾಸಿಗಳು ತ್ಯಾಜ್ಯಗಳನ್ನು ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ತ್ಯಾಜ್ಯ ಸಂಗ್ರಹ, ಸಾಗಾಟ, ಸಂಸ್ಕರಣೆ ಮತ್ತು ವಿಲೇವಾರಿ ವ್ಯವಸ್ಥೆಗಳಿಗಾಗಿ ಸ್ಥಳೀಯ ಸಂಸ್ಥೆಗಳು ವಿಧಿಸುವ ಶುಲ್ಕವನ್ನು ಉಳಿಸಲು ನಾಗರಿಕರು ಮೊರೆಹೋಗುವ ಈ ವಿಧಾನವು, ಸಮಗ್ರ ವ್ಯವಸ್ಥೆಯ ವೈಫಲ್ಯದೊಂದಿಗೆ ಸ್ಥಳೀಯ ನಿವಾಸಿಗಳ ಅನಾರೋಗ್ಯಕ್ಕೂ ಕಾರಣ ವೆನಿಸುತ್ತಿದೆ. 

ಉದಾಹರಣೆಗೆ ಪುತ್ತೂರಿನಲ್ಲಿ ಹಲವಾರು ವರ್ಷಗಳ ಹಿಂದೆಯೇ ಕುಡ್ಸೆಂಪ್ ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ತತ್ಸಂಬಂಧಿತ ಕಸದ ತೊಟ್ಟಿಗಳು ಮತ್ತು ವಾಹನಗಳಿಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಹಣವನ್ನು ವ್ಯಯಿಸಲಾಗಿತ್ತು. ಆದರೆ ನಗರದಲ್ಲಿ ಸಂಗ್ರಹವಾಗುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಸಂಸ್ಕರಿಸದೇ, ಇವೆಲ್ಲಾ ತ್ಯಾಜ್ಯಗಳನ್ನು ಲ್ಯಾಂಡ್ ಫಿಲ್ ಸೈಟ್ ನಲ್ಲಿ ಸುರಿಯಲಾಗುತ್ತಿತ್ತು!. ತತ್ಪರಿಣಾಮವಾಗಿ ಈ ಲ್ಯಾಂಡ್ ಫಿಲ್ ಸೈಟ್ ಈಗಾಗಲೇ ಅರ್ಧದಷ್ಟು ತುಂಬಿದ್ದು, ಇದು ಸಂಪೂರ್ಣವಾಗಿ ತುಂಬಿದಲ್ಲಿ, ಹೊಸದಾಗಿ ಮತ್ತೊಂದು ಸೈಟ್ ನಿರ್ಮಿಸಲು ಕೋಟ್ಯಂತರ ರೂಪಾಯಿಗಳು ವೆಚ್ಚವಾಗಲಿದೆ. ಇದರೊಂದಿಗೆ ನಗರದ ಹೊರವಲಯದಲ್ಲಿನ ಸಣ್ಣಪುಟ್ಟ ಗ್ರಾಮಗಳ ನಿವಾಸಿಗಳು, ತಮ್ಮ ಗ್ರಾಮದ ಸಮೀಪ ಇಂತಹ ಘಟಕಗಳನ್ನು ನಿರ್ಮಿಸಲು ವಿರೋಧ ವ್ಯಕ್ತಪಡಿಸುವುದು ತೊಡಕಾಗಿ ಪರಿಣಮಿಸಲಿದೆ. ಆದುದರಿಂದ ಸಂಗ್ರಹಿತ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಪ್ರತ್ಯೇಕಿಸಿ, ಸಂಪೂರ್ಣವಾಗಿ ನಿರುಪಯುಕ್ತವೆನಿಸುವ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ನಲ್ಲಿ ಹಾಕಿದಲ್ಲಿ, ಇದು ಸುದೀರ್ಘಕಾಲ ಬಾಳ್ವಿಕೆ ಬರಲಿದೆ. ಪ್ರಸ್ತುತ ಸ್ವಚ್ಚ ಪುತ್ತೂರು ಅಭಿಯಾನದ ಅಂಗವಾಗಿ ಸಂಗ್ರಹಿತ ತ್ಯಾಜ್ಯಗಳನ್ನು ಪ್ರತ್ಯೇಕಿಸುವ ಮೂಲಕ, ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ಸೈಟ್ ನಲ್ಲಿ ಹಾಕಲಾಗುತ್ತಿದೆ. ಆದರೂ ಜನಸಾಮಾನ್ಯರ ಸಹಕಾರವಿಲ್ಲದ ಕಾರಣದಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿವೆ. 

ಬಗೆಹರಿಯದ ಸಮಸ್ಯೆ 

ನಗರದಾದ್ಯಂತ ಅಲ್ಲಲ್ಲಿ ಕಾಣಸಿಗುವ ತ್ಯಾಜ್ಯಗಳ ರಾಶಿಗಳ  ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಆಗಾಗ ಸಚಿತ್ರ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. 

ಪುತ್ತೂರಿನ ವಿವಿಧ ಭಾಗಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಸಿಮೆಂಟ್ ನಿರ್ಮಿತ ಹಾಗೂ ಕುಡ್ಸೆಂಪ್ ಯೋಜನೆಯಲ್ಲಿ ಲಭಿಸಿದ್ದ ಫೈಬರ್ ಕಸದ ತೊಟ್ಟಿಗಳನ್ನು ಇರಿಸಲಾಗಿತ್ತು. ದಿನನಿತ್ಯ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುತ್ತಿದ್ದರು. ಆದರೆ ಕಸದ ತೊಟ್ಟಿರಹಿತ ನಿರ್ಮಲ ಗ್ರಾಮ ಯೋಜನೆ ಅನುಷ್ಠಾನಗೊಂಡಂತೆಯೇ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆರೆವುಗೊಳಿಸಲಾಗಿತ್ತು. ಜೊತೆಗೆ ವಸತಿ- ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯವೂ ಆರಂಭವಾಗಿತ್ತು. ಆದರೆ ಕಸದ ತೊಟ್ಟಿ ಕಣ್ಮರೆಯಾದರೂ, ಕಸದ ರಾಶಿಗಳು ಮಾತ್ರ ಕಣ್ಮರೆಯಾಗಲೇ ಇಲ್ಲ!.ಏಕೆಂದರೆ ತೊಟ್ಟಿಗಳನ್ನು ಇರಿಸಿದ್ದ ಜಾಗಗಳಲ್ಲಿ ಕದ್ದುಮುಚ್ಚಿ ಕಸವನ್ನು ಹಾಕುವ ಅಭ್ಯಾಸವನ್ನು ಅನೇಕರು ನಿಲ್ಲಿಸಿರಲಿಲ್ಲ. ಈ ಪ್ರವೃತ್ತಿ ಇಂದಿಗೂ ಅನಿಯಂತ್ರಿತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣವನ್ನು ತೊಡಿಸದೆ ಇದ್ದಲ್ಲಿ ಪುತ್ತೂರಿನ ತ್ಯಾಜ್ಯ ನಿರ್ವಹಣೆಯ ಯೋಜನೆ ಯಶಸ್ವಿಯಾಗುವ ಸಾಧ್ಯತೆಗಳೇ ಇಲ್ಲ. 

ವಿಶೇಷವೆಂದರೆ ಕಸದ ತೊಟ್ಟಿಗಳಿದ್ದ ಜಾಗಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ಜನರು ಸುರಿದಿದ್ದ ತ್ಯಾಜ್ಯಗಳನ್ನು ಪೌರಕಾರ್ಮಿಕರು ಆಗಾಗ ತೆರವುಗೊಳಿಸುತ್ತಾರೆ. ಆದರೆ ಮತ್ತೆ ಮರುದಿನ ಅದೇ ಜಾಗಗಳಲ್ಲಿ ಇನ್ನಷ್ಟು ತ್ಯಾಜ್ಯಗಳನ್ನು ಸ್ಥಳೀಯ ನಿವಾಸಿಗಳು ತಂದು ಸುರಿಯುತ್ತಾರೆ. ನಿಜ ಸ್ಥಿತಿ ಇಂತಿರುವಾಗ, ಈ ಸಮಸ್ಯೆಯನ್ನು ಬಗೆಹರಿಸುವುದಾದರೂ ಹೇಗೆ?. ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!. 

ಕೊನೆಯ ಮಾತು 

ಪ್ರಸ್ತುತ ಭಾರತೀಯರು ಒಂದು ವರ್ಷದಲ್ಲಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವು ೧.೩ ಬಿಲಿಯನ್ ಟನ್ ಆಗಿದ್ದು, ಇದು ೨೦೨೫ ರಲ್ಲಿ ದುಪ್ಪಟ್ಟಾಗಲಿದೆ. ತ್ಯಾಜ್ಯಗಳ ಉತ್ಪಾದನೆಯಲ್ಲಿ ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಏಕೆಂದರೆ ಅಲ್ಲಿ ದಿನನಿತ್ಯ ಉತ್ಪಾದನೆಯಾಗುತ್ತಿರುವ ತ್ಯಾಜ್ಯಗಳ ಪ್ರಮಾಣವು ೬,೨೧,೦೦೦ ಟನ್ ಗಳಾಗಿವೆ. ವಿಶೇಷವೆಂದರೆ ತ್ಯಾಜ್ಯಗಳ ಪುನರ್ ಆವರ್ತನದ ವಿಚಾರದಲ್ಲಿ ಜರ್ಮನಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಉತ್ಪನ್ನವಾಗುವ ಶೇ.೯೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲ, ಇನ್ನುಳಿದ ಶೇ.೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಪ್ರಯತ್ನಗಳು ಸಾಗುತ್ತಿವೆ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment