Saturday, August 9, 2014

EBOLA VIRUS- DEADLY AND DANGEROUS







ಮಾರಕ ವ್ಯಾಧಿಯೊಂದರ ಮೂಲ : ಎಬೊಲ 

ಪ್ರಸ್ತುತ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳಲ್ಲಿ  ಭಯಮಿಶ್ರಿತ ಕುತೂಹಲಕ್ಕೆ ಕಾರಣವೆನಿಸಿರುವ ವ್ಯಾಧಿಗಳಲ್ಲಿ ಎಬೊಲ ಅಗ್ರಸ್ಥಾನದಲ್ಲಿದೆ. ವೈರಸ್ ಗಳಿಂದ ಉದ್ಭವಿಸಿ ತ್ವರಿತಗತಿಯಲ್ಲಿ ಹರಡುತ್ತಾ, ಈಗಾಗಲೇ ಸುಮಾರು ಒಂದು ಸಾವಿರ ರೋಗಿಗಳನ್ನು ಬಲಿಪಡೆದಿರುವ ಈ ವಿಶಿಷ್ಠ ವ್ಯಾಧಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
---------------          -------------             -----------             --------------           ---------------

ವೈದ್ಯಕೀಯ ಸಂಶೋಧಕರು ಅತ್ಯಂತ ಅಪಾಯಕಾರಿ ಹಾಗೂ ಮಾರಕ ಎಂದು ಗುರುತಿಸಿರುವ ವೈರಸ್ ಗಳಲ್ಲಿ " ಎಬೊಲ " ವೈರಸ್ ಗಳೂ ಸೇರಿವೆ. ಈ ವೈರಸ್ ಗಳ ಐದು ತಳಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರು ತಳಿಗಳು ಅತ್ಯಂತ ಮಾರಕವೆಂದು ಪರಿಗಣಿಸಲ್ಪಟ್ಟಿವೆ. ಅತ್ಯಂತ ಪ್ರಬಲ ತಳಿಯೊಂದರ ಮಾರಕತೆಯ ಪ್ರಮಾಣವು ಶೇ.೯೦ ರಷ್ಟಿದೆ. ಇದಕ್ಕೂ ಮಿಗಿಲಾಗಿ ಈ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಎಬೊಲದ ಮೂಲ 

ಎಬೊಲ ವೈರಸ್ ಕಾಯಿಲೆ ಅಥವಾ ಎಬೊಲ ರಕ್ತಸ್ರಾವಕ ಜ್ವರ ಎಂದು ಕರೆಯಲ್ಪಡುವ ಗಂಭೀರ ಹಾಗೂ ಮಾರಕ ಸಮಸ್ಯೆಗೆ ಕಾರಣವೆನಿಸಿರುವ ಎಬೊಲ ವೈರಸ್ ಗಳು, ೧೯೭೬ ರಲ್ಲಿ ಮೊತ್ತ ಮೊದಲಬಾರಿಗೆ ಕಾಂಗೊ ಮತ್ತು ಸೂಡಾನ್ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿದ್ದವು. ಕಾಂಗೊ ದೇಶದ ಎಬೊಲ ನದಿ ಪ್ರಾಂತ್ಯದಲ್ಲಿ ಇದು ಪ್ರತ್ಯಕ್ಷವಾಗಿದ್ದುದರಿಂದ, ಈ ವೈರಸ್ ಗಳನ್ನು ಎಬೊಲ ಎಂದು ಹೆಸರಿಸಲಾಗಿತ್ತು. 

೧೯೭೬ ರಿಂದ ೨೦೧೨ ಅವಧಿಯಲ್ಲಿ ೧೨ ಬಾರಿ ವಿವಿಧ ದೇಶಗಳಲ್ಲಿ ಪ್ರತ್ಯಕ್ಶವಾಗಿದ್ದ ಈ ವೈರಸ್ ಗಳು, ಕೇವಲ ೧೦೦೦ ಕ್ಕೂ ಕಡಿಮೆ ಜನರನ್ನು ಪೀಡಿಸಿದ್ದವು. ಆದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಿನಿ ದೇಶದಲ್ಲಿ ಉದ್ಭವಿಸಿ, ತ್ವರಿತಗತಿಯಲ್ಲಿ ಲೈಬೀರಿಯ, ಸಿಯೆರಾ ಲಿಯೋನ್ ಮತ್ತು ನೈಜೀರಿಯ ದೇಶಗಳಲ್ಲಿ ಹರಡುತ್ತಾ, ಈಗಾಗಲೇ ಸರಿಸುಮಾರು ೧೦೦೦ ಜನರನ್ನು ಬಲಿಪಡೆದಿರುವ ಈ ವೈರಸ್ ಗಳ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳು, ಕಳೆದ ನಾಲ್ಕು ದಶಕಗಳಲ್ಲೇ ಸರ್ವಾಧಿಕವೆನಿಸಿದೆ. ಇದೇ ಕಾರಣದಿಂದಾಗಿ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಎಬೊಲ ವೈರಸ್ ಗಳ ಹಾವಳಿಯನ್ನು " ಅಂತಾರಾಷ್ಟ್ರೀಯ ಅರೋಗ್ಯ ತುರ್ತುಸ್ಥಿತಿ " ಎಂದು ಘೋಷಿಸಿದೆ. ಇಷ್ಟು ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ, ಈ ವ್ಯಾಧಿಯ ಹರಡುವಿಕೆಯ ಸಂಭಾವ್ಯತೆಯ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿದೆ. 

ಹರಡುವುದು ಹೇಗೆ?

ಸೋಂಕುಪೀಡಿತ ಕಾಡುಪ್ರಾಣಿಗಳ ರಕ್ತ ಹಾಗೂ ಶರೀರದ ದ್ರವಗಳ ಸಂಪರ್ಕದಿಂದ  ಮನುಷ್ಯರಿಗೆ ಹರಡುವ ಈ ವೈರಸ್ ಗಳು, ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು. ಸೋಂಕುಪೀಡಿತ  ವ್ಯಕ್ತಿಗಳ ರಕ್ತ ಹಾಗೂ ಶರೀರದ ಇತರ ದ್ರವಗಳ ಸಂಪರ್ಕದಿಂದ ಇದು ಇತರರಿಗೆ ಹರಡುವುದೇ ಹೊರತು, ಶೀತ- ಕೆಮ್ಮುಗಳಂತೆ ಗಾಳಿಯ ಮೂಲಕ ಹರಡಲಾರದು. 

ಎಬೊಲ ಪೀಡಿತ ರೋಗಿಗಳ ರಕ್ತ, ಮಲ, ಮೂತ್ರ, ಜೊಲ್ಲು, ಬೆವರು ಹಾಗೂ ಇನ್ನಿತರ ದ್ರವಗಳ ನೇರ ಸಂಪರ್ಕದಿಂದ ಈ ವ್ಯಾಧಿಯು ಸುಲಭದಲ್ಲೇ ಹರಡುವುದು. ಇದಲ್ಲದೇ ರೋಗಿಗಳು ಬಳಸಿದ ವಸ್ತುಗಳನ್ನು ಇತರರು ಬಳಸುವುದರಿಂದ, ಸೋಂಕುಪೀಡಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕದಿಂದ, ಈ ವ್ಯಾಧಿಯಿಂದ ಮೃತಪಟ್ಟ ರೋಗಿಗಳ ಮೃತಶರೀರವನ್ನು ಸಮರ್ಪಕ ಸುರಕ್ಷಾ ವಿಧಾನಗಳನ್ನು ಅನುಸರಿಸದೇ ಮುಟ್ಟುವುದು ಅಥವಾ ಹೊರುವುದರಿಂದಲೂ ಎಬೊಲ ಇತರರಿಗೆ ಹರಡುತ್ತದೆ. ಅಂತೆಯೇ ರೋಗಿ ಬಳಸಿದ ಬಟ್ಟೆಗಳು, ಅನ್ಯ ಪರಿಕರಗಳು ಮತ್ತು ರೋಗಿಯ ಸಲುವಾಗಿ ಬಳಸಿದ ವೈದ್ಯಕೀಯ ಉಪಕರಣಗಳನ್ನು ಇತರರು ಬಳಸಿದಲ್ಲಿ ಈ ವ್ಯಾಧಿ ಮತ್ತೊಬ್ಬರಿಗೆ ಹರಡುತ್ತದೆ. 

ಈ ಆಧುನಿಕ ಯುಗದಲ್ಲಿ ಸಹಸ್ರಾರು ಜನರು ವಿಮಾನಗಳ ಮೂಲಕ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವುದರಿಂದ, ಇಂತಹ ಸೋಂಕುಪೀಡಿತ ವ್ಯಕ್ತಿಗಳಿಂದ ಈ ವೈರಸ್ ಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭದಲ್ಲೇ ಹರಡುತ್ತವೆ. 

ಪತ್ತೆಹಚ್ಚುವುದೆಂತು ?

ಶಂಕಿತ ಎಬೊಲ ವ್ಯಾಧಿಪೀಡಿತ ವ್ಯಕ್ತಿಯ ಶಾರೀರಿಕ ತಪಾಸಣೆ ಹಾಗೂ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವ ಮೂಲಕ ಎಬೊಲ ವೈರಸ್ ಕಾಯಿಲೆಯ ಇರುವಿಕೆಯನ್ನು ಪತ್ತೆಹಚ್ಚಬಹುದಾಗಿದೆ.

ರೋಗಲಕ್ಷಣಗಳು 

ಎಬೊಲ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಎರಡರಿಂದ ಇಪ್ಪತ್ತೊಂದು ದಿನಗಳಲ್ಲಿ ವ್ಯಾಧಿಯ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಆಕಸ್ಮಿಕವಾಗಿ ಉದ್ಭವಿಸುವ ಜ್ವರದೊಂದಿಗೆ ತೀವ್ರ ನಿಶ್ಶಕ್ತಿ, ಶರೀರದ ಅಸ್ಥಿಸಂಧಿಗಳು ಹಾಗೂ ಮಾಂಸಪೇಶಿಗಳಲ್ಲಿ ಅಸಹನೀಯ ನೋವು, ತಲೆನೋವು, ಹೊಟ್ಟೆನೋವು, ಗಂಟಲಲ್ಲಿ ಕೆರೆತ- ನೋವು,ಹಸಿವಿಲ್ಲದಿರುವುದೇ ಮುಂತಾದ ಫ್ಲೂ ಜ್ವರದಂತಹ ಲಕ್ಷಣಗಳು ಪ್ರತ್ಯಕ್ಷವಾಗುತ್ತವೆ. ಬಳಿಕ ಕೆಲರೋಗಿಗಳಲ್ಲಿ ವಾಕರಿಕೆ, ವಾಂತಿ ಹಾಗೂ ಭೇದಿಗಳು ಬಾಧಿಸುತ್ತವೆ. ತದನಂತರ ಶೇ. ೫೦ ರಷ್ಟು ರೋಗಿಗಳ ಚರ್ಮದ ಮೇಲೆ ದದ್ದುಗಳು ಮೂಡುವುದು, ಮೂತ್ರಪಿಂಡಗಳು ಹಾಗೂ ಯಕೃತ್ತಿನ ಕಾರ್ಯಕ್ಷಮತೆಯಲ್ಲಿ ವ್ಯತ್ಯಯಗಳು ತಲೆದೋರುತ್ತವೆ. ಈ ಹಂತದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ ಮತ್ತು ತೀವ್ರ ನಿರ್ಜಲೀಕೃತ ಸ್ಥಿತಿಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 
ಶೇ.೪೦ ರಿಂದ ೫೦ ರಷ್ಟು ರೋಗಿಗಳನ್ನು ಬಾಧಿಸುವ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವಗಳಿಂದಾಗಿ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳಲ್ಲಿ ರಕ್ತ ಹೆಪ್ಪುಗಟ್ಟದಿರುವುದು, ರಕ್ತವಾಂತಿ, ಮಲದೊಂದಿಗೆ ಹಾಗೂ ಕೆಮ್ಮಿದಾಗ ರಕ್ತ ಹೊರಬೀಳುವುದು ಮತ್ತು  ಚರ್ಮಕ್ಕೆ ತೂತು ಬಿದ್ದಲ್ಲಿ ( ಉದಾ- ಇಂಜೆಕ್ಷನ್ ನೀಡಿದ ಬಳಿಕ) ರಕ್ತಸ್ರಾವ ಸಂಭವಿಸಬಹುದು. ಇದಲ್ಲದೇ ಜೀರ್ಣಾಂಗಗಳಲ್ಲಿ, ಮೂಗು, ಒಸಡು  ಮತ್ತು ಯೋನಿಯಿಂದ ರಕ್ತಸ್ರಾವ ಸಂಭವಿಸಬಹುದು. ಈ ರೀತಿಯ ರಕ್ತಸ್ರಾವ ತೀವ್ರ ಸ್ವರೂಪದಲ್ಲಿ ಇರುವ ಸಾಧ್ಯತೆಗಳು ಕಡಿಮೆಯಿದ್ದರೂ, ಇದು ರೋಗಿಯ ಸ್ಥಿತಿ ವಿಷಮಿಸುತ್ತಿರುವುದನ್ನು ಸೂಚಿಸುತ್ತದೆ. ಅಂತೆಯೇ ತೀವ್ರ ರಕ್ತಸ್ರಾವವು ಬಹುತೇಕ ಸಂದರ್ಭಗಳಲ್ಲಿ ರೋಗಿಯ ಮರಣದೊಂದಿಗೆ ಪರ್ಯವಸಾನಗೊಳ್ಳುತ್ತದೆ. 
ತಡೆಗಟ್ಟುವುದು ಹೇಗೆ?

ಎಬೊಲ ವ್ಯಾಧಿಪೀಡಿತ ರೋಗಿಗಳನ್ನು ಸಂಪೂರ್ಣವಾಗಿ ಗುಣಮುಖರಾಗುವ ತನಕ ಇತರ ವ್ಯಕ್ತಿಗಳ ಸಂಪರ್ಕವಿರದಂತೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆಯನ್ನು ನೀಡಬೇಕು. ಎಬೊಲ ವೈರಸ್ ಸೋಂಕಿನಿಂದ ಬಳಲುತ್ತಿರುವರೆಂದು ಸಂದೇಹಿಸಿದ ವ್ಯಕ್ತಿಗಳನ್ನು ಕೂಡಾ ಪ್ರತ್ಯೇಕವಾಗಿರಿಸಿ, ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ವ್ಯಾಧಿಪೀಡಿತರಲ್ಲ ಎಂದು ಸಾಬೀತಾದ ಬಳಿಕವೇ ಬಿಡಬೇಕು. ರೋಗಿಗಳನ್ನು ಚಿಕಿತ್ಸಿಸುವ ಹಾಗೂ ಆರೈಕೆ ಮಾಡುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬಂದಿಗಳು, ಸೂಕ್ತ ಸುರಕ್ಷಾ ಕ್ರಮಗಳು ಹಾಗೂ ದಿರುಸುಗಳನ್ನು ಧರಿಸಬೇಕು. ರೋಗಿಗಳು ಬಳಸಿರುವ ಬಟ್ಟೆ ಮತ್ತಿತರ ಪರಿಕರಗಳನ್ನು ಅನ್ಯರು ಬಳಸಬಾರದು. ಮೃತಪಟ್ಟ ರೋಗಿಯ ದೇಹವನ್ನು ದಹಿಸಬೇಕು. ಇದಲ್ಲದೇ ಶಂಕಿತ ರೋಗಪೀಡಿತ ಪ್ರಾಣಿಗಳ ಸಂಪರ್ಕ ಹಾಗೂ ಇವುಗಳ ಮಾಂಸದ ಸೇವನೆಯನ್ನು ವರ್ಜಿಸಬೇಕು. 

ಎಬೊಲ ವ್ಯಾಧಿಪೀಡಿತ ಗಂಡಸರು ಸಂಪೂರ್ಣವಾಗಿ ಗುಣಮುಖರಾದ ಬಳಿಕ, ಸುಮಾರು ೫೦ ದಿನಗಳ ತನಕ ಇವರ ವೀರ್ಯದಲ್ಲಿ ವೈರಸ್ ಗಳು ಇರುವ ಸಾಧ್ಯತೆಗಳು ಇರುವುದರಿಂದ, ಕನಿಷ್ಠ ಎರಡು ತಿಂಗಳುಗಳ ಕಾಲ ಇವರೊಂದಿಗೆ ಲೈಂಗಿಕ ಸಂಪರ್ಕವನ್ನು ತಪ್ಪಿಸಬೇಕು. 

ಚಿಕಿತ್ಸೆ 

ಈಗಾಗಲೇ ಹೇಳಿರುವಂತೆ ಎಬೊಲ ವೈರಸ್ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತೀವ್ರ ಅಸ್ವಸ್ಥರಾಗಿರುವ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು. 



 ಈ ಬಾರಿ ಉದ್ಭವಿಸಿದ್ದೆಲ್ಲಿ ?

ಇತ್ತೀಚಿನ ವರದಿಗಳಂತೆ ಗಿನಿ ದೇಶದ ಹಳ್ಳಿಯೊಂದರಲ್ಲಿ ಎರಡು ವರ್ಷ ವಯಸ್ಸಿನ ಬಾಲಕನೊಬ್ಬನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಾಲಕನು ಮೃತಪಟ್ಟು ವಾರ ಕಳೆಯುವಷ್ಟರಲ್ಲಿ ಆತನ ತಾಯಿಯೂ ಮೃತಪಟ್ಟಿದ್ದಳು. ತದನಂತರ ಆತನ ಮೂರು ವರ್ಷದ ಸೋದರಿ ಮತ್ತು ಆತನ ಅಜ್ಜಿ ನಿಧನರಾಗಿದ್ದರು. ಆದರೆ ಈ ನಾಲ್ವರ ಮರಣಕ್ಕೆ ಕಾರಣವೇನೆಂದು ಯಾರಿಗೂ ತಿಳಿದಿರಲೇ ಇಲ್ಲ. ಅಜ್ಜಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಇಬ್ಬರು ಸಂಬಂಧಿಗಳು ಈ ನಿಗೂಢ ಕಾಯಿಲೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದಿದ್ದರು. ಬಳಿಕ ಆರೋಗ್ಯ ಕಾರ್ಯಕರ್ತನೊಬ್ಬನು ಈ ವ್ಯಾಧಿಯನ್ನು ಮತ್ತೊಬ್ಬರಿಗೆ ಹರಡಿದಂತೆಯೇ ಮೃತಪಟ್ಟಿದ್ದನು. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರೂ ಇದಕ್ಕೆ ಬಲಿಯಾಗಿದ್ದರು. ಇವರಿಬ್ಬರೂ ಅದಾಗಲೇ ಈ ಕಾಯಿಲೆಯನ್ನು ತಮ್ಮ ಪರಿಚಿತರು ಮತ್ತು ಸಂಬಂಧಿಗಳಿಗೆ ಹರಡಿದ್ದರು. ಅಂತಿಮವಾಗಿ ಇದೇ ವರ್ಷದ ಮಾರ್ಚ್  ತಿಂಗಳಿನಲ್ಲಿ ಈ ಮಾರಕ ವ್ಯಾಧಿಯು ಎಬೊಲ ಎಂದು ಪತ್ತೆಹಚ್ಚುವಷ್ಟರಲ್ಲಿ , ಅನೇಕ ಅಮಾಯಕರು ಇದಕ್ಕೆ ಬಲಿಯಾಗಿದ್ದರು. ಜೊತೆಗೆ ಗಡಿಯ ಸಮೀಪದಲ್ಲಿನ ಲೈಬೀರಿಯ ಮತ್ತು ಸಿಯೆರಾ ಲಿಯೋನ್ ದೇಶಗಳಲ್ಲೂ ಅನೇಕ ಪ್ರಕರಣಗಳು ಉದ್ಭವಿಸಲಾರಂಭಿಸಿದ್ದವು. 

ನಾಲ್ವರು ಬಲಿಯಾಗಿದ್ದ  ಹಳ್ಳಿಯು ಗಿನಿ ದೇಶದ ಗಡಿಭಾಗದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ಸಿಯೇರ ಲಿಯೋನ್ ಮತ್ತು ಲೈಬೀರಿಯಾ ದೇಶಗಳಿವೆ. ಈ ಹಿಂದುಳಿದ ಹಾಗೂ ಬಡ ದೇಶಗಳ ನಡುವಿನ ಗಡಿಭಾಗದ ರಸ್ತೆಗಳು ಹಿಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ, ಪ್ರತಿನಿತ್ಯ ನೂರಾರು ಜನರು ಈ ಮೂರು ದೇಶಗಳ ನಡುವೆ ಸಂಚರಿಸುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ, ಗಿನಿಯ ಹಳ್ಳಿಯಲ್ಲಿ ಉದ್ಭವಿಸಿದ್ದ ಎಬೊಲ ವೈರಸ್ ಗಳು, ಸುಲಭದಲ್ಲೇ ಸಮೀಪದ ದೇಶಗಳಿಗೆ ಹರಡಿದ್ದವು. 

ಆದರೆ ಈ ಬಾರಿ ಈ ವ್ಯಾಧಿಗೆ ಮೊದಲು ಬಲಿಯಾದ ಬಾಲಕನಿಗೆ ಈ ವೈರಸ್ ಗಳ ಸೋಂಕು ಎಲ್ಲಿಂದ ಬಂದಿತ್ತ್ತು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ. ಇದಕ್ಕೂ ಮುನ್ನ ಸಂಭವಿಸಿದ್ದ ಎಬೊಲ ಸಾಂಕ್ರಾಮಿಕತೆಯಂತೆಯೇ, ಸೋಂಕು ಪೀಡಿತ ಕಾಡುಪ್ರಾಣಿಗಳಿಂದ ಇದು ಬಂದಿರಬೇಕು ಎಂದು ವೈದ್ಯಕೀಯ ವಿಜ್ಞಾನಿಗಳು ಊಹಿಸಿದ್ದಾರೆ. ಆಫ್ರಿಕನ್ ಜನರು ಮಾಂಸಕ್ಕಾಗಿ ಕೊಲ್ಲುವ  ಮಂಗ ಹಾಗೂ ಹಣ್ಣುಗಳನ್ನು ತಿನ್ನುವ ಬಾವಲಿಗಳನ್ನು ಸಂಹರಿಸುವಾಗ, ಇವುಗಳ ರಕ್ತದಲ್ಲಿರಬಹುದಾದ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿರಬೇಕು. ಈ ಮಾಂಸವನ್ನು ಬೇಯಿಸಿದಾಗ ವೈರಸ್ ಗಳು ನಾಶವಾಗುವುದಾದರೂ, ಇವುಗಳನ್ನು ಕಡಿಯುವ ವ್ಯಕ್ತಿಗಳಿಗೆ ಸೋಂಕು ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬಾವಲಿಗಳು ತಿಂದು ಹಾಕಿದ ಹಾಗೂ ಇವುಗಳ ಮಲಮೂತ್ರಗಳಿಂದ ಕಲುಷಿತ  ಹಣ್ಣುಗಳನ್ನು ಸೇವಿಸಿದ ವ್ಯಕ್ತಿಗಳಿಗೂ ಈ ಸೋಂಕು ಸುಲಭದಲ್ಲೇ ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಈ ಬಾರಿಯ ಎಬೊಲ ಹಾವಳಿಯ ಮೂಲವನ್ನು ಪತ್ತೆಹಚ್ಚಿದ್ದರೂ, ಈಗಾಗಲೇ ಸಹಸ್ರಾರು ಜನರಿಗೆ ಮತ್ತು ಹಲವಾರು ದೇಶಗಳಿಗೆ ಹರಡಿರುವ ಈ ವ್ಯಾಧಿಯನ್ನು ನಿಯಂತ್ರಿಸಲು, ಹಲವಾರು ತಿಂಗಳುಗಳೇ ಬೇಕಾಗುವುದೆಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ. 



ಪ್ರಸ್ತುತ ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಪತ್ತೆಯಾಗಿರುವ ಎಬೊಲ ವೈರಸ್ ಗಳು, ನಮ್ಮ ದೇಶದ ಜನತೆಯನ್ನು ಕಾಡುವ ಸಾಧ್ಯತೆಗಳಿಲ್ಲ. ಆದರೆ ವ್ಯಾಧಿಪೀಡಿತ ದೇಶಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಆಗಮಿಸುವ ವ್ಯಕ್ತಿಗಳಿಂದ ಇದು ಭಾರತವನ್ನು ಪ್ರವೇಶಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದೇ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಗಳಿಂದ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ತಪಾಸಣೆಗೆ ಒಳಪಡಿಸಿ, ಫ್ಲೂ ಜ್ವರದಂತಹ ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿದೊಡನೆ ಪ್ರತ್ಯೇಕಿಸಿ, ಇನ್ನಷ್ಟು ಪರೀಕ್ಷೆಗಳಿಗೆ ಒಳಪಡಿಸುತ್ತಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 







No comments:

Post a Comment