Thursday, August 21, 2014

SHAASAKARA VIDESHA YATRE RADAAGADU !




 

 

 ಶಾಸಕರ ವಿದೇಶ ಅಧ್ಯಯನ ಪ್ರವಾಸ ಭಾಗ್ಯ ರದ್ದಾಗದು !

ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಮತ್ತು ತದನಂತರ ತಮ್ಮ "ಮತನಿಧಿ " ಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಸಲುವಾಗಿ, ಪ್ರತಿಯೊಂದು ರಾಜಕೀಯ ಪಕ್ಷಗಳು ಹಲವಾರು ಯೋಜನೆಗಳನ್ನು ಘೋಷಿಸಿ ಅನುಷ್ಠಾನಿಸುತ್ತವೆ. ಇವುಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಭಾಗ್ಯ, ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯಗಳಂತಹ ಅನೇಕ " ಉಚಿತ ಭಾಗ್ಯ " ಗಳು ಸೇರಿವೆ. ಆದರೆ ಇದೇ ರಾಜಕಾರಣಿಗಳು ತಮ್ಮ ಸುಖ ಸೌಲಭ್ಯಗಳಿಗಾಗಿ ತಾವೇ ರೂಪಿಸಿ ಪಡೆದುಕೊಳ್ಳುವ " ಉಚಿತ ಭಾಗ್ಯ " ಗಳ ಸಂಖ್ಯೆಯೂ ಸಾಕಷ್ಟಿದೆ. ಇವುಗಳಲ್ಲಿ ಶಾಸಕರ ವಿದೇಶ ಅಧ್ಯಯನ ಪ್ರವಾಸವೂ ಒಂದಾಗಿದೆ. 

ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ಈ ವಿಶೇಷ ಸೌಲಭ್ಯದ ಲೋಪದೋಷಗಳನ್ನು ಸರಿಪಡಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು, ವಿಧಾನಸಭೆಯ ಅಧ್ಯಕ್ಷರು ನೇಮಿಸಿದ್ದ ಅಧಿಕಾರಿಗಳ ಸಮಿತಿಯೊಂದು, ತನ್ನ ಸಲಹೆ ಸೂಚನೆಗಳು ಮತ್ತು ಶಿಫಾರಸುಗಳ ವರದಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದೆ. ಅನೇಕ ವರ್ಷಗಳಿಂದ ಶಾಸಕರ ಮೋಜು ಮಸ್ತಿಗಳಿಗೆ ಆಸ್ಪದವನ್ನು ನೀಡುತ್ತಿದ್ದ ಈ ಸೌಲಭ್ಯವು ರದ್ದಾಗುತ್ತದೆ ಎಂದು ನಂಬಿದ್ದ ಜನಸಾಮಾನ್ಯರಿಗೆ, ಸಮಿತಿಯ ವರದಿಯಿಂದ ನಿಜಕ್ಕೂ ಭ್ರಮನಿರಸನವಾಗಿದೆ.

ಹಿನ್ನೆಲೆ  

ಕರ್ನಾಟಕದ ಶಾಸಕರಿಗೆ ಲಭಿಸುವ ಅನೇಕ ಸೌಲಭ್ಯಗಳಲ್ಲಿ, ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕನಿಷ್ಠ ಒಂದುಬಾರಿ ವಿದೇಶ ಅಧ್ಯಯನ ಪ್ರವಾಸವನ್ನು ಕೈಗೊಳ್ಳುವ ಅವಕಾಶವಿತ್ತು. ಆದರೆ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಎರಡುಬಾರಿ ವಿದೇಶ ಪ್ರವಾಸಕ್ಕೆ ಅವಕಾಶ ನೀಡುವ ನಿರ್ಧಾರವನ್ನು ತಳೆಯಲಾಗಿತ್ತು. ಇಷ್ಟು ಮಾತ್ರವಲ್ಲ, ಇದೇ ಅವಧಿಯಲ್ಲಿ ಮೂರುಬಾರಿ ಉಚಿತವಾಗಿ ಸ್ವದೇಶದಲ್ಲಿ ಪ್ರವಾಸ ಮಾಡಬಹುದಾದ ಸೌಲಭ್ಯವನ್ನೂ ಶಾಸಕರಿಗೆ ನೀಡಲಾಗಿತ್ತು.

ರಾಜ್ಯದ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರು ಕಳೆದ ಹಲವಾರು ವರ್ಷಗಳಿಂದ ಸುಪ್ರಸಿದ್ಧ ಪ್ರವಾಸಿತಾಣಗಳಿರುವ ದೇಶಗಳಿಗೆ ಭೇಟಿನೀಡಿ, ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ವ್ಯಾಪಕವಾದ ಪ್ರತಿಭಟನೆ ಜನರಿಂದ ವ್ಯಕ್ತವಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಪ್ರವಾಸವನ್ನು " ವಿದೇಶ ಅಧ್ಯಯನ ಪ್ರವಾಸ " ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಆದರೆ ಶಾಸಕರ ಮೋಜು- ಮಸ್ತಿಗಳು ಮತ್ತು ಸುಪ್ರಸಿದ್ಧ ಪ್ರವಾಸಿತಾಣಗಳಿಗೆ ಭೇಟಿನೀಡುವ ಪದ್ಧತಿಯು ಎಂದಿನಂತೆಯೇ ಅಬಾಧಿತವಾಗಿ ಮುಂದುವರೆದಿತ್ತು!. 

ಅಸಂಬದ್ಧ ವರದಿಗಳು 

ವಿದೇಶ ಪ್ರವಾಸದಿಂದ ಮರಳಿದ ಬಳಿಕ ಅನೇಕ ಸಮಿತಿಗಳು ತಮ್ಮ ಅಧ್ಯಯನದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿಲ್ಲ. ಕೆಲ ಸಮಿತಿಗಳು ಸಲ್ಲಿಸಿರುವ ವರದಿಗಳನ್ನು ನೀವು ಓದಿದಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಜಗತ್ಪ್ರಸಿದ್ಧ ಪೀಸಾ ವಾಲು ಗೋಪುರದ ಬಗ್ಗೆ ನಮೂದಿಸಿರುವಂತೆ, ಇದರ ಮೂಲ ಅಸ್ತಿಭಾರದಲ್ಲೇ ದೋಷವಿದೆ. ವರ್ಷದಿಂದ ವರ್ಷಕ್ಕೆ ಈ ಗೋಪುರವು ೦.೦೪ ಡಿಗ್ರಿಯಷ್ಟು ವಾಲುವ ಚಾಲನೆಯಲ್ಲಿದ್ದು, ಕೊನೆಗೆ ಭೂಮಿಗೆ ಬೀಳುವ ಸಂಭವ ಇರುವುದಾಗಿ ಸಮಿತಿಗೆ ತಿಳಿದುಬಂತು!. 

ಇದಕ್ಕೂ ಮಿಗಿಲಾಗಿ ಯುರೋಪ್ ನ ಅತಿ ಎತ್ತರದ ಪರ್ವತ ಶಿಖರವಾಗಿರುವ ಯಂಗ್ ಫ್ರಾವ್ ಯೋಕ್ ಗೆ ಭೇಟಿ ನೀಡಿದ್ದ ಸರ್ಕಾರಿ ಭರವಸೆಗಳ ಸಮಿತಿಯು, ಈ ಹಿಮಾಚ್ಛಾದಿತ ಶಿಖರವನ್ನೇರಲು ಸುಮಾರು ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಸುರಂಗ ರೈಲು ಮಾರ್ಗವನ್ನು ವೀಕ್ಷಿಸಿತ್ತು. ಇದನ್ನು ಏರಲು ಪುಟ್ಟ ರೈಲೊಂದು ಸಂಚರಿಸುತ್ತಿದ್ದು, ಇದರಲ್ಲಿ ಪ್ರಯಾಣಿಸಿದ್ದ ಶಾಸಕರಿಗೆ ಅತ್ಯಾಶ್ಚರ್ಯವಾಗಿತ್ತು. ಈ ಬಗ್ಗೆ ತಮ್ಮ ವರದಿಯಲ್ಲಿ ಶಾಸಕರು ನೀಡಿದ್ದ ಸಲಹೆಯೊಂದು ಈ ರೀತಿ ಇದ್ದಿತು. ನಮ್ಮ ದೇಶದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೇ ರೀತಿಯ ಸೌಲಭ್ಯವನ್ನು ಅಲ್ಲಿಯೂ ಕಲ್ಪಿಸಿಕೊಟ್ಟರೆ ಹೆಚ್ಚುಹೆಚ್ಚ್ಚು ಪ್ರವಾಸಿಗಳನ್ನು ಅಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು. ಇದು ಅಕ್ಷರಶಃ ಈ ವರದಿಯಲ್ಲಿನ ವಾಕ್ಯವೇ ಹೊರತು ಲೇಖಕರದ್ದಲ್ಲ್ಲ. ಇಂತಹ ವರದಿಗಳನ್ನು ಓದಿದಲ್ಲಿ ಕೇವಲ ಕಾಟಾಚಾರಕ್ಕಾಗಿ ಈ ವರದಿಗಳನ್ನು ಸಲ್ಲಿಸಿರುವುದು ಸ್ಪಷ್ಟವಾಗುತ್ತದೆ.

ಪ್ರವಾಸಕ್ಕೆ ಬ್ರೇಕ್   

 ಇದೇ ವರ್ಷದ ಬೇಸಗೆಯ ಸಂದರ್ಭದಲ್ಲಿ ರಾಜ್ಯದ ಅನೇಕ ತಾಲೂಕುಗಳ ಜನರು ಕುಡಿಯಲು ನೀರಿಲ್ಲದೇ ಬಳಲುತ್ತಿದ್ದರೂ, ಈ ಬರಪೀಡಿತ ಪ್ರದೇಶಗಳ ಸಮಸ್ಯೆಯನ್ನು ಬಗೆಹರಿಸಬೇಕಾದ ತಮ್ಮ ಹೊಣೆಗಾರಿಕೆಯನ್ನು ಮರೆತ ಕೆಲ ಶಾಸಕರು, ವಿದೇಶ ಅಧ್ಯಯನ ಪ್ರವಾಸಕ್ಕೆ ಸಜ್ಜಾಗಿದ್ದರು. ರಾಜ್ಯದ ಪ್ರಜೆಗಳ ಸಮಸ್ಯೆಯನ್ನು ನಿರ್ಲಕ್ಷಿಸಿ, ಪ್ರಜೆಗೆಳು ತೆತ್ತ ತೆರಿಗೆಯ ಹಣವನ್ನು ಬಳಸಿ ವಿದೇಶ ಪ್ರವಾಸಕ್ಕೆ ಹೊರಟಿದ್ದ ಶಾಸಕರ ವರ್ತನೆಗಳ ಬಗ್ಗೆ ಮಾಧ್ಯಮಗಳಲ್ಲಿ ವಿಸೃತ ವರದಿಗಳು ಪ್ರಕಟವಾದಂತೆಯೇ, ವಿಧಾನಸಭಾಧ್ಯಕ್ಷರು ಇದಕ್ಕೆ ಬ್ರೇಕ್ ಹಾಕಿದ್ದರು. ಜೊತೆಗೆ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನೀತಿನಿಯಮಗಳಿದ್ದರೂ, ಇವುಗಳನ್ನು ಅವಶ್ಯಕತೆಯಿದ್ದಲ್ಲಿ ಬದಲಿಸಲು ಹೊಸದಾಗಿ ಮತ್ತೊಂದು ಸಮಿತಿಯನ್ನು ನೇಮಿಸಿದ್ದರು. ಈ ಸಮಿತಿಯ ವರದಿ ತಮ್ಮ ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದರು. 

ಖಡಕ್ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದ ವಿಧಾನಸಭಾಧ್ಯಕ್ಷರು, ರಾಜ್ಯದ ಶಾಸಕರ ವಿದೇಶ ಪ್ರವಾಸದ ಸೌಲಭ್ಯವನ್ನು ನಿಶ್ಚಿತವಾಗಿಯೂ ರದ್ದುಪಡಿಸುತ್ತಾರೆಂದು ಅನೇಕರು ಭಾವಿಸಿದ್ದರೂ, ಇವರ ಆದೇಶವನ್ನು ಗಮನಿಸಿದಾಗ ಶಾಸಕರ ವಿದೇಶ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆಯೇ ಹೊರತು, ರದ್ದುಪಡಿಸಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ವಿಧಾನಸಭಾಧ್ಯಕ್ಷರು ೨೦೦೯ ರಲ್ಲಿ ಶಾಸಕರ ವಿದೇಶ ಪ್ರವಾಸದ ಬಗ್ಗೆ ರೂಪಿಸಿದ್ದ ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಥಾನಗೊಳಿಸುವ ಮೂಲಕ ಶಾಸಕರ ಸ್ವೇಚ್ಚಾಚಾರಗಳಿಗೆ ಕಡಿವಾಣವನ್ನು ತೊಡಿಸಬಹುದಾಗಿದ್ದರೂ, ನೂತನ ಸಮಿತಿಯೊಂದನ್ನು ನೇಮಕಗೊಳಿಸಿದ್ದುದು ಏಕೆಂದು ನಮಗೂ ತಿಳಿದಿಲ್ಲ. ಪ್ರಾಯಶಃ ಈ ಬಾರಿಯ ವಿದೇಶ ಪ್ರವಾಸದ ಬಗ್ಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳು ತೋರಿದ್ದ ವ್ಯಾಪಕ ಆಕ್ರೋಶವನ್ನು ತುಸು ತಣ್ಣಗಾಗಿಸಲು ಹಾಗೂ ಒಂದಿಷ್ಟು ಸಮಯಾವಕಾಶವನ್ನು ಪಡೆದುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಅವರು ತಳೆದಿರಬಹುದು. 

ಸಮಿತಿಯ ವರದಿಯಲ್ಲೇನಿದೆ?

ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವಂತೆ ಇನ್ನು ಮುಂದೆ ಯಾವುದೇ ಸದನ ಸಮಿತಿಗಳು ಪ್ರತ್ಯೇಕವಾಗಿ ವಿದೇಶ ಪ್ರವಾಸವನ್ನು ಕೈಗೊಳ್ಳುವಂತಿಲ್ಲ.ಈ ಪದ್ದತಿಗೆ ಬದಲಾಗಿ ಶಾಸಕರ ಮೂರು ಅಥವಾ ನಾಲ್ಕು ತಂಡಗಳು ವಿದೇಶಗಳಿಗೆ ಭೇಟಿ ನೀಡಬಹುದಾಗಿದ್ದು, ನಿರ್ದಿಷ್ಟ ವಿಷಯಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕಾಗುವುದು. ಉದಾಹರಣೆಗೆ ಮೂಲ ಸೌಕರ್ಯ, ತ್ಯಾಜ್ಯ ಸಂಗ್ರಹ- ವಿಲೇವಾರಿ, ಉತ್ತಮ ಗುಣಮಟ್ಟದ ರಸ್ತೆಗಳು- ಕಾಲುದಾರಿಗಳು, ಕೃಷಿ ಪದ್ಧತಿ, ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಆದರೆ ಹಿಂದಿನಂತೆ ಪ್ರವಾಸದಿಂದ ಮರಳಿದ ಬಳಿಕ ಅಧ್ಯಯನದ ವರದಿಯನ್ನು ನೀಡದೇ ಇರಲು ಅವಕಾಶ ಇಲ್ಲದಿರುವುದರಿಂದ, ಕಾಲಮಿತಿಯಲ್ಲಿ ತಾವು ನಡೆಸಿದ್ದ ಅಧ್ಯಯನದ ವರದಿಯನ್ನು ವಿಧಾನ ಸಭೆಯ ಅಥವಾ ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲಿಸಲೇಬೇಕಾಗುತ್ತದೆ!. 

ಇಷ್ಟು ಮಾತ್ರವಲ್ಲ, ಯಾವುದೇ ಶಾಸಕರು ವಿದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಜೊತೆಗೆ ಕರೆದೊಯ್ಯುವಂತಿಲ್ಲ. ಆದರೆ ಕುಟುಂಬದ ಸದಸ್ಯರ ಖರ್ಚು ವೆಚ್ಚಗಳನ್ನು ಶಾಸಕರೇ ಭರಿಸುವುದಾದಲ್ಲಿ, ಇದಕ್ಕೆ ಅಡ್ಡಿಪಡಿಸುವುದಿಲ್ಲ. ವಿಧಾನಸಭಾಧ್ಯಕ್ಷರು ನೇಮಿಸಿದ್ದ ಈ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ಸಲಹೆ ಸೂಚನೆಗಳು ಮತ್ತು ಶಿಫಾರಸುಗಳನ್ನು ವಿಶೇಷ ಮಂಡಳಿಯೊಂದು ಇನ್ನಷ್ಟೇ ಅಂಗೀಕರಿಸಬೇಕಿದೆ ಎನ್ನುವ ಮಾಹಿತಿಯನ್ನು ಸ್ಪೀಕರ್ ನೀಡಿದ್ದಾರೆ. ಈ ವರದಿಯಲ್ಲಿನ ಸಲಹೆ ಸೂಚನೆಗಳನ್ನು ಮತ್ತು ಶಿಫಾರಸುಗಳನ್ನು ಕಂಡ ನಮ್ಮ ಶಾಸಕರು, ಇದನ್ನು ಅಂಗೀಕರಿಸದಂತೆ ವಿಶೇಷ ಮಂಡಳಿಯ ಮೇಲೆ ಒತ್ತಡವನ್ನು ಹೇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಈ ವರದಿಯನ್ನು ಅಂಗೀಕರಿಸದೇ, ಹಿಂದಿನ ಪದ್ದತಿಯನ್ನೇ ಮುಂದುವರೆಸಿದಲ್ಲಿ ರಾಜ್ಯದ ಪ್ರಜೆಗಳ ಆಕ್ರೋಶಕ್ಕೆ ಗುರಿಯಾಗುವುದರಲ್ಲಿ ಮಾತ್ರ ಸಂದೇಹವಿಲ್ಲ. 

ಸೌಲಭ್ಯವನ್ನೇ ರದ್ದುಪಡಿಸಿ 

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ನಿಜವಾದಲ್ಲಿ, ಪ್ರಜೆಗಳು ಪಾವತಿಸಿದ ತೆರಿಗೆಯ ಹಣವನ್ನು ಬಳಸಿ ನಮ್ಮ ಶಾಸಕರು ಕೈಗೊಳ್ಳುವ  ಉಚಿತ ಸ್ವದೇಶ ಪ್ರವಾಸ ಮತ್ತು ವಿದೇಶ ಅಧ್ಯಯನ ಪ್ರವಾಸಗಳನ್ನು  ರದ್ದುಗೊಳಿಸಲೇಬೇಕು. ಏಕೆಂದರೆ ಇದಕ್ಕೂ ಮುನ್ನ ವಿದೇಶ ಅಧ್ಯಯನ ಪ್ರವಾಸಗಳನ್ನು ಕೈಗೊಂಡಿದ್ದ ಶಾಸಕರ ತಂಡಗಳು ನೀಡಿದ್ದ ವರದಿಗಳಲ್ಲಿ ( ವರದಿಗಳನ್ನು ನೀಡಿದ್ದಲ್ಲಿ ! ) ಶಿಫಾರಸು ಮಾಡಿರುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಉದಾಹರಣೆಗಳೇ ಇಲ್ಲ. ಇದಕ್ಕೂ ಮಿಗಿಲಾಗಿ ವಿದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸ್ವಚ್ಚತೆ, ಕಾನೂನು ಪರಿಪಾಲನೆ, ಶಿಸ್ತು ಮತ್ತಿತರ ವಿಚಾರಗಳು ಮತ್ತು ಅತ್ಯುತ್ತಮ ಮೂಲಸೌಕರ್ಯಗಳ ಸೌಲಭ್ಯ ಇತ್ಯಾದಿಗಳ ವಿವರಗಳನ್ನು ಅರಿತುಕೊಳ್ಳಲು ಆಯಾ ದೇಶಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಇವೆಲ್ಲಾ ಮಾಹಿತಿಗಳು ಅಂತರ್ಜಾಲ ತಾಣಗಳಲ್ಲಿ ಸುಲಭದಲ್ಲೇ ಲಭಿಸುತ್ತವೆ. ಇದೇ ಕಾರಣದಿಂದಾಗಿ ಇಂತಹ ಅಧ್ಯಯನ ಪ್ರವಾಸಗಳಿಂದ ನಮ್ಮ ರಾಜಕ್ಕೆ ಮತ್ತು ರಾಜ್ಯದ ಪ್ರಜೆಗಳಿಗೆ ಯಾವುದೇ ರೀತಿಯ ಲಾಭವಿಲ್ಲ. ಅಂತೆಯೇ ಇದರಿಂದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳು ದೊರೆಯುವ ಮತ್ತು ತತ್ಪರಿಣಾಮವಾಗಿ ಇವರ ಜೀವನದ ಮಟ್ಟವು ಉನ್ನತ ಸ್ಥರಕ್ಕೆ ಏರುವ ಸಾಧ್ಯತೆಗಳೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. 

ಸರ್ಕಾರಿ ಅಧಿಕಾರಿಗಳೇ ಸದಸ್ಯರಾಗಿದ್ದ ಈ ಸಮಿತಿಯ ಸಂಪೂರ್ಣ ವರದಿಯ ಬಗ್ಗೆ ನಮ್ಮ ಶಾಸಕರು ಏನೆನ್ನುತ್ತಾರೆ ಅನ್ನುವುದನ್ನು ಅರಿತುಕೊಳ್ಳುವ ಕುತೂಹಲ ಜನಸಾಮಾನ್ಯರ ಮನದಲ್ಲಿ ಮೂಡಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ತಾವು ಚುನಾಯಿಸಿದ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಅರಿತುಕೊಳ್ಳುವ ಹಕ್ಕು ರಾಜ್ಯದ ಜನರಿಗೆ ಇದೆ.


ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment