Friday, August 22, 2014

SARS- The new age epidemic


ನಿಗೂಢ ವೈರಸ್ ತಂದ ಸಮಸ್ಯೆ : " ಸಾರ್ಸ್ "

ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳ ಜನರಲ್ಲಿ ಭಯಮಿಶ್ರಿತ ಕುತೂಹಲ ಮತ್ತು ಆತಂಕಗಳಿಗೆ ಕಾರಣವೆನಿಸಿರುವ "ಸಾರ್ಸ್"(Severe Acute Respiratory Syndrome) ಎಂದು ಕರೆಯಲ್ಪಡುವ ಕಾಯಿಲೆಯು, ಹಾಂಗ್ ಕಾಂಗ್ ನ ಸಮೀಪ ಸುಮಾರು ಆರು ತಿಂಗಳುಗಳ ಹಿಂದೆ ಕಾಣಿಸಿಕೊಂಡಿತ್ತು. ನಮ್ಮೆಲ್ಲರನ್ನೂ ಸಾಮಾನ್ಯವಾಗಿ ಕಾಡುವ ಶೀತ- ಫ್ಲೂ ವ್ಯಾಧಿಯ ಲಕ್ಷಣಗಳನ್ನೇ ಹೋಲುವ ಈ ನಿಗೂಢ ವ್ಯಾಧಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ ಇದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿರುವುದು ಸತ್ಯ. ಈ ಕಾಯಿಲೆಯಿಂದ ಬಳಲುವ ರೋಗಿಗಳಲ್ಲಿ ನ್ಯುಮೋನಿಯ ರೋಗದ ಲಕ್ಷಣಗಳೂ ಕಂಡುಬರುತ್ತಿದ್ದು, ಶೇ.೪ ರಷ್ಟು ರೋಗಿಗಳು ಮೃತಪಡುತ್ತಿರುವುದು ವಾಸ್ತವ. ಹಠಾತ್ತಾಗಿ ಪ್ರತ್ಯಕ್ಷವಾಗಿ ನೂರಾರು ರೋಗಿಗಳ ಮರಣಕ್ಕೆ ಕಾರಣವೆನಿಸಿರುವ ಈ ವಿಶಿಷ್ಠ ವ್ಯಾಧಿಯ ಬಗ್ಗೆ ಜಗತ್ತಿನಾದ್ಯಂತ ವೈದ್ಯಕೀಯ ವಿಜ್ಞಾನಿಗಳು, ಸಮರೋಪಾದಿಯಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ (WHO) ಸಾಂಕ್ರಾಮಿಕ ವ್ಯಾಧಿ ವಿಭಾಗದ ನಿರ್ದೇಶಕ ಡಾ. ಕಾರ್ಲೋಸ್ ಅರ್ಬಾನಿಯವರು ಪ್ರಪ್ರಥಮವಾಗಿ ಈ ಕಾಯಿಲೆಯ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಫಲವಾಗಿ, ಅನೇಕ ವೈದ್ಯರು- ದಾದಿಯರ ಪ್ರಾಣಗಳು ಉಳಿದಿದ್ದವು. ಈ ತೆರನ ಅಪಾಯದ ಬಗ್ಗೆ ಸಾಕಷ್ಟು ಅರಿವಿದ್ದರೂ, ಅನೇಕ ಅರೆವೈದ್ಯಕೀಯ ಸಿಬಂದಿಗಳು ಹಿಂಜರಿಯದೆ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಬಹಳಷ್ಟು ರೋಗಿಗಳಿಗೆ ಚಿಕಿತ್ಸೆ-ಉಪಚಾರಗಳನ್ನು ನೀಡಿದ್ದ ಕಾರಣದಿಂದಾಗಿ ಈ ಕಾಯಿಲೆಗೆ ಬಲಿಯಾಗಬೇಕಾಯಿತು. ವಿಶೇಷವೆಂದರೆ ಈ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದ ಡಾ.ಕಾರ್ಲೋಸ್ ಅರ್ಬಾನಿಯವರೂ ಇದೇ ಕಾಯಿಲೆಗೆ ಬಲಿಯಾಗಿದ್ದುದು ನಿಜಕ್ಕೂ ವಿಷಾದನೀಯ. ಇದೀಗ ಡಾ.ಕಾರ್ಲೋಸ್ ಅವರ ಗೌರವಾರ್ಥ, ಈ ಕಾಯಿಲೆಗೆ ಕಾರಣವೆನಿಸಿರುವ ವೈರಸ್ ಗೆ ಅವರ ಹೆಸರನ್ನಿಡಲಾಗಿದೆ. ಹಗಲಿರುಳು ನಡೆಸಿದ್ದ ಸಂಶೋಧನೆಗಳ ಫಲವಾಗಿ ಈ ವೈರಸ್ ನ "ವಂಶವಾಹಿನಿಗಳ ಸಂಕೇತ" (Genetic code) ನ್ನು ಭೇದಿಸಲಾಗಿದ್ದು, ತತ್ಪರಿಣಾಮವಾಗಿ ಈ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಲು ಅವಶ್ಯಕವೆನಿಸುವ " ಪರೀಕ್ಷೆ " ಗಳನ್ನು ಕಂಡುಹಿಡಿಯಲು ಉಪಯುಕ್ತವೆನಿಸಲಿದೆ. 

ಸಾರ್ಸ್ ವ್ಯಾಧಿಗೆ ಕಾರಣವೇನು?

ಮನುಷ್ಯನನ್ನು ಸಾಮಾನ್ಯವಾಗಿ ಬಾಧಿಸುವ ಶೀತ-ಜ್ವರಗಳಿಗೆ ಕಾರಣವೆನಿಸುವ ಕೊರೋನ ವೈರಸ್ ಕುಟುಂಬಕ್ಕೆ ಸೇರಿದ ಒಂದು ನೂತನ ವೈರಸ್, ಸಾರ್ಸ್ ವ್ಯಾಧಿಗೆ ಕಾರಣವಾಗಿದೆ. ಇದಲ್ಲದೇ ಕೆಲವೊಂದು ರೋಗಿಗಳಲ್ಲಿ ಪಾರಾಮಿಕ್ಸೋ ವೈರಸ್ ಗಳು ಕೂಡಾ ಪತ್ತೆಯಾಗಿವೆ. ತೀವ್ರ ಸಾಂಕ್ರಾಮಿಕವಾಗಿ ಹರಡಬಲ್ಲ ಈ ವೈರಸ್, ಈಗಾಗಲೇ ೩೦ ಕ್ಕೂ ಅಧಿಕ ದೇಶಗಳಿಗೆ ಹರಡಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ವಿಶ್ವವ್ಯಾಪಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಭಾರತದ ಸುತ್ತಮುತ್ತಲ ೧೩ ರಾಷ್ಟ್ರಗಳಲ್ಲಿ ಸಾರ್ಸ್ ಪತ್ತೆಯಾಗಿರುವುದು ಭಾರತೀಯರಲ್ಲಿ ಆತಂಕಕ್ಕೆ ಕಾರಣವೆನಿಸಿದೆ. 

ಹರಡುವುದೆಂತು?

ಸಾರ್ಸ್ ವ್ಯಾಧಿಪೀಡಿತರ ಸಂಪರ್ಕ, ರೋಗಿ ಶೀನಿದಾಗ ಹಾಗೂ ಕೆಮ್ಮಿದಾಗ ಉಗುಳಿನ ಸಣ್ಣ ಕಣಗಳೊಂದಿಗೆ ಹೊರಬೀಳುವ  ಮೂಲಕ ಮತ್ತು ರೋಗಿ ಬಳಸಿದ ವಸ್ತುಗಳನ್ನು ಅನ್ಯರು ಬಳಸುವುದರಿಂದ ಈ ವೈರಸ್ ಗಳು ಇತರರಿಗೆ ಸುಲಭದಲ್ಲೇ ಹರಡುತ್ತವೆ. 

ಲಕ್ಷಣಗಳು 

ಮನುಷ್ಯನ ಶರೀರವನ್ನು ಪ್ರವೇಶಿಸಿದ ಈ ವೈರಸ್ ಗಳಿಂದಾಗಿ ಸುಮಾರು ಎರಡು ದಿನಗಳಿಂದ ಏಳು ದಿನಗಳಲ್ಲಿ ಜ್ವರ, ತಲೆನೋವು, ಗಂಟಲು ನೋವು, ಶೀತ ಹಾಗೂ ಕೆಮ್ಮುಗಳು ಪ್ರಾರಂಭವಾಗುತ್ತವೆ. ಕೆಲ ರೋಗಿಗಳಲ್ಲಿ ಎದೆನೋವು ಮತ್ತು ಶ್ವಾಸೋಚ್ಚ್ವಾಸದಲ್ಲಿ ತೊಂದರೆಯಂತಹ ನ್ಯುಮೋನಿಯ ವ್ಯಾಧಿಯ ಲಕ್ಷಣಗಳು ಕಂಡುಬಂದಲ್ಲಿ, ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಬೇಕಾಗುವುದು ಅನಿವಾರ್ಯ. 

ಚಿಕಿತ್ಸೆ 

ಸಾರ್ಸ್ ವ್ಯಾಧಿಯನ್ನು ನಿಖರವಾಗಿ ಗುಣಪಡಿಸಬಲ್ಲ ಔಷದಗಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. ಆದುದರಿಂದ ರೋಗಲಕ್ಷಣಗಳಿಗೆ ಅನುಗುಣವಾಗಿ ಕೆಲವೊಂದು ಜೀವನಿರೋಧಕಗಳು, ಜ್ವರಹಾರಕಗಳು ಮತ್ತು ಸಂದರ್ಭೋಚಿತವಾಗಿ ಸ್ಟಿರಾಯ್ಡ್ ಮತ್ತಿತರ ಔಷದಗಳನ್ನು ನೀಡಬೇಕಾಗುವುದು. ಇದರೊಂದಿಗೆ ಶ್ವಾಸೋಚ್ಚ್ವಾಸದ ತೊಂದರೆಗಳು ಕಂಡುಬಂದಲ್ಲಿ "ರೆಸ್ಪಿರೇಟರ್" ಗ ಬಳಸುವುದು ರೋಗಿಯ ಪ್ರಾಣವನ್ನುಳಿಸಲು ನೆರವಾಗಬಲ್ಲದು. 

ಅವಿರತ ಸಂಶೋಧನೆ 

ಮನುಷ್ಯನಲ್ಲಿ ಶೀತಕ್ಕೆ ಕಾರಣವೆನಿಸುವ ಕೊರೊನಾ ವೈರಸ್ ಕುಟುಂಬಕ್ಕೆ ಸೇರಿದ ಇದೊಂದು ವೈರಸ್ ಮಾತ್ರ ಮಾರಕವಾಗಿ ಪರಿಣಮಿಸಲು ಕಾರಣವೇನೆಂದು ಅರಿತುಕೊಳ್ಳಲು, ಜಗತ್ತಿನ ಸುಪ್ರಸಿದ್ಧ ೧೩ ಪ್ರಯೋಗಾಲಯಗಳಲ್ಲಿ ಹಗಲಿರುಳು ಸಂಶೋಧನೆ ನಡೆಯುತ್ತಿದೆ. ಇದರೊಂದಿಗೆ ಪ್ರತಿಯೊಂದು ಪ್ರಯೋಗಾಲಯಗಳು ಪರಸ್ಪರ ಮಾಹಿತಿಗಳನ್ನು ವಿನಿಮಯಿಸಿಕೊಳ್ಳುತ್ತಾ, ಈ ಸಮಸ್ಯೆಗೆ ಪರಿಹಾರವನ್ನು ಪತ್ತೆಹಚ್ಚುವಲ್ಲಿ ಶ್ರಮಿಸುತ್ತಿವೆ. ಪ್ರಸ್ತುತ ವೈದ್ಯಕೀಯ ವಿಜ್ಞಾನಿಗಳು ಸಂದೇಹಿಸಿದಂತೆ, ಪ್ರಾಯಶಃ ಒಬ್ಬ ವ್ಯಕ್ತಿಯ ಶರೀರದಲ್ಲಿ ಏಕಕಾಲದಲ್ಲಿ ಪ್ರವೇಶಿಸಿದ್ದ ಎರಡು ವಿಧದ ಕೊರೋನಾ ವೈರಸ್ ಗಳ ವಂಶವಾಹಿನಿಗಳ ಸಮ್ಮಿಶ್ರಣದಿಂದಾಗಿ ಉತ್ಪನ್ನವಾಗಿದ್ದ ನೂತನ ತಳಿಯೇ ಸಾರ್ಸ್ ವ್ಯಾಧಿಯ ಮಾರಕತೆಗೆ ಕಾರಣವಾಗಿರಬಹುದು. ಅಥವಾ ಮನುಷ್ಯನೊಂದಿಗೆ ಸಂಪರ್ಕವಿರುವ ಪ್ರಾಣಿಗಳಿಂದಾಗಿ ಈ ವೈರಸ್ ಮನುಷ್ಯರಿಗೆ ಹರಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಈ ಬಗ್ಗೆ ಯಾವುದೇ ಸಮರ್ಥನೀಯ ಪುರಾವೆಗಳು ಲಭಿಸಿಲ್ಲ. ಸಾರ್ಸ್ ವೈರಸ್ ಗಳ ವಂಶವಾಹಿನಿಗಳ ಅಧ್ಯಯನದಿಂದ ಇಂತಹ ಅವಶ್ಯಕ ಮಾಹಿತಿ ಮತ್ತು ಸಂದೇಹಗಳಿಗೆ ಸಮಾಧಾನ ದೊರೆಯುವುದು ನಿಶ್ಚಿತ. 

ಲಸಿಕೆಗಳನ್ನು ಪತ್ತೆಹಚ್ಚಬಹುದೇ? 

ಮನುಷ್ಯರನ್ನು ಬಾಧಿಸುವ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷದಗಳ ಮತ್ತು ಇದನ್ನು ತಡೆಗಟ್ಟಬಲ್ಲ ಲಸಿಕೆಗಳನ್ನು ಸಂಶೋಧಿಸಲು ಸಾಕಷ್ಟು ಸಮಯಾವಕಾಶ ಬೇಕಾಗುವುದು. ಮನುಷ್ಯನನ್ನು ಹೋಲುವ ಮಂಗಗಳ ಮೇಲೆ ನಡೆಸುವ ಇಂತಹ ಪ್ರಯೋಗಗಳು ಸಾಕಷ್ಟು ದುಬಾರಿಯೂ ಹೌದು. ಜೊತೆಗೆ ಇಂತಹ ವೈಜ್ಞಾನಿಕ ಸಂಶೋಧನೆಗಳು ಯಶಸ್ವಿಯಾಗಿ ಫಲಪ್ರದವೆನಿಸಲು, ಹಲವಾರು ವರ್ಷಗಳೇ ಬೇಕಾಗಬಹುದು. ಇದೇ ಕಾರಣದಿಂದಾಗಿ ಯಾವುದೇ ಹೊಸ ವ್ಯಾಧಿಯೊಂದು ಪತ್ತೆಯಾದೊಡನೆ, ಇದನ್ನು ಗುಣಪಡಿಸಬಲ್ಲ ಔಷದಗಳನ್ನು ಕಂಡುಹುಡುಕಲು ಸುದೀರ್ಘಕಾಲ ಸಂಶೋಧನೆಗಳನ್ನು ನಡೆಸಬೇಕಾಗುತ್ತದೆ. 

ಸಾರ್ಸ್ ವೈರಸ್ ಗಳು ಭಾರತವನ್ನು ಪ್ರವೇಶಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಹಾಗೂ ಇದಕ್ಕಾಗಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಶೇಷ ವೈದ್ಯಕೀಯ ತಂಡಗಳು ಶಂಕಿತ ರೋಗಿಗಳನ್ನು ಪ್ರತ್ಯೇಕಿಸಿ ತಪಾಸಣೆಗೆ ಒಳಪಡಿಸುತ್ತಿವೆ. ಅವಶ್ಯಕತೆಯಿದ್ದಲ್ಲಿ ಇಂತಹ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ, ಪ್ರತ್ಯೇಕವಾಗಿರಿಸಿ ನಿರ್ದಿಷ್ಟ ಪರೀಕ್ಷೆಗಳಿಗೆ ಒಳಪಡಿಸುವ ವ್ಯವಸ್ಥೆಯೂ ಇದೆ. ಆದರೂ ಪ್ರತಿನಿತ್ಯ ವಿವಿಧ ದೇಶಗಳಿಂದ ಭಾರತಕ್ಕೆ ಆಗಮಿಸುವ ಸಹಸ್ರಾರು ವಿದೇಶೀ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡುವುದು ಸುಲಭಸಾಧ್ಯವೆನಲ್ಲ.

ಗೋವಾದಲ್ಲಿ ಇತ್ತೀಚಿಗೆ ಪತ್ತೆಯಾಗಿದ್ದ ಭಾರತದ ಮೊತ್ತ ಮೊದಲ ಸಾರ್ಸ್ ರೋಗಿಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಮುಂದಿನ ಎರಡೇ ದಿನಗಳಲ್ಲಿ ಈ ರೋಗಿಯು ಸಾರ್ಸ್ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತನಾಗಿರುವನೆಂದು ಪತ್ರಿಕಾ ಹೇಳಿಕೆಯನ್ನೂ ನೀಡಲಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಇಷ್ಟೊಂದು ಕ್ಷಿಪ್ರಗತಿಯಲ್ಲಿ ಸಾರ್ಸ್ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದೆಯೇ ಎನ್ನುವ ಮಾಹಿತಿ ಬಹುತೇಕ ವೈದ್ಯರಿಗೂ ತಿಳಿದಿಲ್ಲ!. 

ಅಂತಿಮವಾಗಿ ಹೇಳುವುದಾದಲ್ಲಿ ನುರಿತ ಅನುಭವೀ ವೈದ್ಯರೂ ಖಚಿತವಾಗಿ ಪತ್ತೆಹಚ್ಚಲಾರದ , ಜನಸಾಮಾನ್ಯರಿಗೆ ಸ್ಪಷ್ಟ ಮಾಹಿತಿ ಇರದ, ಪ್ರಸ್ತುತ ನಿಗೂಢವೆನ್ನಬಹುದಾದ ಸಾರ್ಸ್ ವ್ಯಾಧಿಯ ಬಗ್ಗೆ ಒಂದಿಷ್ಟು ಸಮಯದ ಬಳಿಕ ಬಹಳಷ್ಟು ಮಾಹಿತಿಗಳು ಲಭ್ಯವಾಗಲಿವೆ. 

ನಿಮಗಿದು ತಿಳಿದಿರಲಿ 

ಹತ್ತಾರು ವರ್ಷಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಮಲೇರಿಯ ವ್ಯಾಧಿಯು ವ್ಯಾಪಕವಾಗಿ ಹರಡಿ, ಅನೇಕ ರೋಗಿಗಳ ಮರಣಕ್ಕೆ ಕಾರಣವೆನಿಸಿತ್ತು. ಇದರಿಂದಾಗಿ ಭಯಭೀತರಾಗಿದ್ದ ಜನರು ವೈದ್ಯರ ಸಲಹೆಯನ್ನೂ ಪಡೆಯದೇ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯೋಗಾಲಯಗಳ ಮುಂದೆ ಸಾಲುಗಟ್ಟಿ ನಿಂತಿದ್ದು ನಿಮಗೂ ನೆನಪಿರಬಹುದು. 

ಇದೀಗ ಶೀತ-ಕೆಮ್ಮಿನೊಂದಿಗೆ ಗಂಟಲು ನೋವು,ಎದೆನೋವು ಮತ್ತು ಜ್ವರಗಳು ಬಾಧಿಸಿದೊಡನೆ ಪ್ರಯೋಗಾಲಯಗಳಿಗೆ ಧಾವಿಸದಿರಿ. ನಿಮ್ಮ ರಕ್ತ, ಮಲ, ಮೂತ್ರಗಳ ಪರೀಕ್ಷೆಯಿಂದ ಸಾರ್ಸ್ ವೈರಸ್ ನಿಮ್ಮ ಶರೀರದಲ್ಲಿ ಇರುವುದನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಶತಪ್ರತಿಶತ ಸಾರ್ಸ್ ವೈರಸ್ ನ್ನು ಗುರುತಿಸಲು ವಂಶವಾಹಿನಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇತ್ತೀಚಿನ ಮಾಹಿತಿಯಂತೆ ಈ ಪರೀಕ್ಷೆಯನ್ನು ಒಬ್ಬ ವ್ಯಕ್ತಿಗೆ ನಡೆಸಲು ಸುಮಾರು ೮೦೦೦ ರೂ.ಗಳು ವೆಚ್ಚವಾಗುತ್ತವೆ. ಜೊತೆಗೆ ಇಂತಹ ಪರೀಕ್ಷೆಗಳನ್ನು ಸಣ್ಣಪುಟ್ಟ ಪ್ರಯೋಗಾಲಯಗಳಲ್ಲಿ ನಡೆಸಲಾಗದು. 

ಸಾರ್ಸ್ ರೋಗಕ್ಕೆ ಕಾರಣವಾಗಿರುವ ವೈರಸ್ ಗಳನ್ನು ನಿಖರವಾಗಿ ಪತ್ತೆಹಚ್ಚಲು ರೋಗಿಯಿಂದ ಸಂಗ್ರಹಿಸಿದ ಸೀರಮ್ ನ್ನು, ನೇಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ,ಪೂನಾ ಅಥವಾ ನೇಶನಲ್ ಇನ್ಸ್ತಿತ್ಯೋತ್ ಆಫ್ ಕಮ್ಯೂನಿಕೆಬಲ್ ಡಿಸೀಸಸ್, ದೆಹಲಿ, ಇಲ್ಲಿಗೆ ಕಳುಹಿಸಿ ಪರೀಕ್ಷಿಸಬೇಕಾಗುವುದು. ಈ ಎರಡು ಸಂಸ್ಥೆಗಳು ಮಾತ್ರ ಖಚಿತವಾಗಿ ರೋಗಿಯು ಸಾರ್ಸ್ ವ್ಯಾಧಿಯಿಂದ ಬಳತ್ತಿರುವುದನ್ನು ಪತ್ತೆಹಚ್ಚುವ ಪರೀಕ್ಷೆಗಳನ್ನು ನಡೆಸುವ ಸೌಲಭ್ಯಗಳನ್ನು ಹೊಂದಿವೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೧-೦೫-೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ - ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 



No comments:

Post a Comment