Thursday, September 25, 2014

RTI - WILL IT BE BURRIED?





 ಮಾಹಿತಿಹಕ್ಕು ಕಾಯಿದೆ ಸಮಾಧಿಯಾಗಲಿದೆಯೇ?

ಭಾರತದಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ -೨೦೦೫ ಜಾರಿಗೆ ಬಂದು ಇದೀಗ ಮೂರು ವರ್ಷಗಳೇ ಸಂದಿದ್ದರೂ,ಈ ಕಾಯಿದೆಯು ಅಪೇಕ್ಷಿತ ರೀತಿಯಲ್ಲಿ ಹಾಗೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.ವಿವಿಧ ರಾಜ್ಯಗಳ ಮತ್ತು ಕೇಂದ್ರ ಮಾಹಿತಿ ಆಯೋಗಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದಲ್ಲಿ, ಈ ಕಾಯಿದೆಯು ಸದ್ಯೋಭವಿಷ್ಯದಲ್ಲಿ ಸಮಾಧಿಯಾಗುವುದರಲ್ಲಿ ಸಂದೇಹವಿಲ್ಲ!. 
------------              ------------            -------------------            -----------             ----------

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ - ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ, ದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ಇತ್ತೀಚಿನ ತನಕ " ಸರ್ಕಾರಿ ರಹಸಗಳ ಅಧಿನಿಯಮ - ೧೯೨೩ " ( ಒಫಿಷಿಯಲ್ ಸೀಕ್ರೆಟ್ಸ್ ಆಕ್ಟ್ ) ರಂತೆ,  ಸರ್ಕಾರದ ಸ್ವಾಧೀನದಲ್ಲಿರುವ ಮಾಹಿತಿಗಳ ನ್ನು ಬಹಿರಂಗಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು. ಆದರೆ ೨೦೦೫ ಅಕ್ಟೋಬರ್ ೧೨ ರಂದು ಜಾರಿಗೆ ಬಂದಿದ್ದ " ಮಾಹಿತಿ ಹಕ್ಕು ಅಧಿನಿಯಮವು ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದೆ.

ಕಾಯಿದೆಯ ಉದ್ದೇಶ 

ಪ್ರಜೆಗಳೇ ಪ್ರಭುಗಳಾಗಬೇಕು ಹಾಗೂ ಪ್ರಜಾಪ್ರಭುತ್ವದ ನೈಜ ಉದ್ದೇಶವು ಸಫಲವಾಗಬೇಕಿದ್ದಲ್ಲಿ ಸರ್ಕಾರದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯವಶ್ಯಕ ಎನಿಸುವುದು. ಆಡಳಿತದಲ್ಲಿ ಪ್ರಜೆಗಳು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಅರ್ಥಪೂರ್ಣವೆನಿಸುತ್ತದೆ. ಆದರೆ ಇದು ಕೇವಲ ಮತಚಲಾವಣೆಗಾಗಿ ಮಾತ್ರ ಸೀಮಿತವಾಗಿರದೇ, ಸರ್ಕಾರದ ಪ್ರತಿಯೊಂದು ಕಾರ್ಯಗಳಲ್ಲಿ ನಾಗರಿಕರು ಭಾಗವಹಿಸಬೇಕಾಗಿದೆ. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಗಳು ಹೆಚ್ಚುವುದರಿಂದ, ಸ್ವಾಭಾವಿಕವಾಗಿಯೇ ದಕ್ಷತೆ ಮತ್ತು ಪ್ರಾಮಾಣಿಕತೆಗಳೂ ಹೆಚ್ಚುತ್ತವೆ. ತತ್ಪರಿಣಾಮವಾಗಿ ಆಡಳಿತದ ಗುಣಮಟ್ಟಗಳು ಇನ್ನಷ್ಟು ಉತ್ತಮಗೊಳ್ಳುವುದರೊಂದಿಗೆ, ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುತ್ತದೆ. 

ಆಡಳಿತದಲ್ಲಿ ಪ್ರಜೆಗಳು ಭಾಗವಹಿಸುವುದರ ಪರಿಣಾಮಕಾರಿ ವಿಧಾನವೇ, ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಈ ಕಾಯಿದೆಯು ಭಾರತದ ಪ್ರತಿಯೊಬ್ಬ ಪ್ರಜೆಗೆ ಅಪೇಕ್ಷಿತ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲಾ ಮಾಹಿತಿಗಳು ಸಾರ್ವಜನಿಕರ ಸೊತ್ತು ಎನ್ನುವುದನ್ನು ಈ ಕಾಯಿದೆ ಅಂಗೀಕರಿಸಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಪ್ರಜೆಗಳ ಪಾಲಿಗೆ ಪ್ರಬಲ ಅಸ್ತ್ರವೆಂದು ಪರಿಗಣಿಸಲ್ಪಟ್ಟಿರುವ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವ ನಾಗರಿಕರಿಗೆ, ಅನೇಕ ರೀತಿಯ ಅಡ್ಡಿ ಆತಂಕಗಳನ್ನು ಒಡ್ಡಲಾಗುತ್ತಿದೆ. ಹಾಗೂ ಇವುಗಳಿಗೆ ನಿರ್ದಿಷ್ಟ ಕಾರಣಗಳೂ ಇವೆ. 

ಅನುಷ್ಠಾನದಲ್ಲಿ ಅಡಚಣೆಗಳು 

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೪ ರಂತೆ, ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಸ್ವಯಂ  ಪ್ರೇರಿತವಾಗಿ ಪ್ರಕಟಿಸಬೇಕಾಗಿದೆ. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯನಿರ್ವಹಿಸುವ ಕ್ರಮ, ಪ್ರಾಧಿಕಾರದ ಆಯವ್ಯಯಗಳ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಮಾಹಿತಿ ಪಡೆಯುವ ವಿಧಾನಗಳೇ ಮುಂತಾದ ವಿವರಗಳನ್ನು ತಾವಾಗಿ ಪ್ರಕಟಿಸುವುದರೊಂದಿಗೆ, ಆಗಾಗ ಇವುಗಳನ್ನು ಪರಿಷ್ಕರಿಸಬೇಕಾಗುತ್ತದೆ. ನಾಗರಿಕರಿಗೆ ಅವಶ್ಯಕ ಹಾಗೂ ಉಪಯುಕ್ತವೆನಿಸುವ ಮಾಹಿತಿಗಳು ನೇರವಾಗಿ ಹಾಗೂ ಸುಲಭವಾಗಿ ದೊರೆಯಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿನ ಅಧಿಕತಮ ಸಾರ್ವಜನಿಕ ಪ್ರಾಧಿಕಾರಗಳು ಸ್ವಯಂ ಪ್ರೇರಿತವಾಗಿ ಇಂತಹ ಮಾಹಿತಿಗಳನ್ನು ಪ್ರಕಟಿಸದೆ ಇರುವುದರಿಂದ, ಈ ಕಾಯಿದೆಯ ಪ್ರಾಥಮಿಕ ಉದ್ದೇಶವೇ ವಿಫಲವೆನಿಸುತ್ತಿದೆ. 

ಅರ್ಜಿದಾರರಿಗೆ ಅಡ್ಡಿ- ಆತಂಕಗಳು 

ಸರ್ಕಾರ ನಿಗದಿಸಿದ ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆಯಿರುವ ಸಾರ್ವಜನಿಕ ಪ್ರಾಧಿಕಾರಗಳು, ಮಾಹಿತಿಯನ್ನು ಪಡೆಯಲು ನಾಗರಿಕರು ಸಲ್ಲಿಸಿದ್ದ ಅರ್ಜಿಯನ್ನೇ ಸ್ವೀಕರಿಸಲು ನಿರಾಕರಿಸಿದ,ಅರ್ಜಿಯನ್ನು ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ, ಅರ್ಜಿಯ ಸಲ್ಲಿಸಿದ್ದ ವ್ಯಕ್ತಿಗಳಿಗೆ ಕಿರುಕುಳ ನೀಡಿದ ಅಥವಾ ಬೆದರಿಕೆಯನ್ನು ಒಡ್ಡಿದ ಅಸಂಖ್ಯ ಪ್ರಕರಣಗಳು ವರದಿಯಾಗಿವೆ. 

ಅದೇ ರೀತಿಯಲ್ಲಿ ಮಾಹಿತಿಯನ್ನು ನೀಡಲು ನಿಗದಿತ ಶುಲ್ಕಕ್ಕೆ ಬದಲಾಗಿ ದುಬಾರಿ ಶುಲ್ಕವನ್ನು ವಿಧಿಸಿದ, ಅಪೇಕ್ಷಿತ ಮಾಹಿತಿಗಳು ( ಕಡತಗಳು ) ತಮ್ಮಲ್ಲಿ ಇಲ್ಲವೆಂದು ಉತ್ತರಿಸಿದ, ವಿವಿಧ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳನ್ನು ಮತ್ತು ಭ್ರಷ್ಟ ಅಧಿಕಾರಿಗಳ ಅಥವಾ ಇಲಾಖೆಗಳ ಹಗರಣಗಳನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿದ್ದ ಕಾರ್ಯಕರ್ತರೊಬ್ಬರ ಮನೆಯನ್ನೇ ನೆಲಸಮಗೊಳಿಸಿದ ಹಲವಾರು ಘಟನೆಗಳು ಕೆಲ ರಾಜ್ಯಗಳಲ್ಲಿ ನಡೆದಿವೆ. 

ಇಷ್ಟೆಲ್ಲಾ ಸಾಲದೆನ್ನುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅಪೇಕ್ಷಿತ ಮಾಹಿತಿಯನ್ನು ನೀಡಲು ವಿಳಂಬಿಸಿದ ಅಥವಾ ನಿರಾಕರಿಸಿದ ಅಥವಾ ಅರ್ಜಿದಾರರಿಗೆ ಕಿರುಕುಳ ನೀಡಿ ಸತಾಯಿಸಿದ ಪ್ರಕರಣಗಳಲ್ಲಿ ರಾಜ್ಯ - ಕೇಂದ್ರ ಮಾಹಿತಿ ಆಯೋಗಗಳಿಗೆ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ವಿಚಾರಣೆಯ ಬಳಿಕ ಸಂಬಂಧಿತ ಅಧಿಕಾರಿಗಳಿಗೆ ದಂಡವನ್ನು ವಿಧಿಸದ ಅಥವಾ ಶಿಸ್ತುಕ್ರಮ ಕೈಗೊಳ್ಳದ ನೂರಾರು ಪ್ರಕರಣಗಳಿವೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಸಗಿದ ತಪ್ಪುಗಳಿಗೆ ಸೂಕ್ತ ಶಿಕ್ಷೆಯನ್ನು ನೀಡದಿರುವುದು ಈ ಕಾಯಿದೆಯ ಮೂಲ ಉದ್ದೇಶಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. 

ಅಪರೂಪದಲ್ಲಿ ವಿಘ್ನಸಂತೋಷಿಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತೊಂದರೆಯನ್ನು ನೀಡುವ ಏಕಮಾತ್ರ ಉದ್ದೇಶದಿಂದ, ನೂರಾರು ಪುಟಗಳ ಅನಾವಶ್ಯಕ ಮಾಹಿತಿಯನ್ನು ಅಪೇಕ್ಷಿಸಿ ಅರ್ಜಿಯನ್ನು ಸಲ್ಲಿಸುವುದರಿಂದ, ಇತರ ಪ್ರಾಮಾಣಿಕ ನಾಗರಿಕರಿಗೆ ಅವಶ್ಯಕ ಮಾಹಿತಿ ದೊರೆಯಲು ವಿಳಂಬವಾಗುತ್ತಿದೆ. 

ಇದಲ್ಲದೇ ಜನಸಾಮಾನ್ಯರು ಸ್ಥಳೀಯ ಸಾರ್ವಜನಿಕ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ, ನಿಗದಿತ ಅವಧಿಯಲ್ಲಿ ಮಾಹಿತಿ ದೊರೆಯದ ಕಾರಣದಿಂದಾಗಿ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದ ಬಳಿಕವೂ ಅಪೇಕ್ಷಿತ ಮಾಹಿತಿ ಲಭಿಸದೇ ಇದ್ದಲ್ಲಿ, ರಾಜ್ಯ ಮಾಹಿತಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಪ್ರಸ್ತುತ ದೇಶದ ಪ್ರತಿಯೊಂದು ಮಾಹಿತಿ ರಾಜ್ಯಗಳ ಮಾಹಿತಿ ಆಯೋಗಗಳಲ್ಲಿ ಇಂತಹ ಸಹಸ್ರಾರು ಮನವಿಗಳು ಇದ್ದು, ಮಹಾರಾಷ್ಟ್ರದಲ್ಲಿ ೧೬,೦೦೦ ಮತ್ತು ಕರ್ನಾಟಕದಲ್ಲಿ ಸುಮಾರು ೪೦೦೦ ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ. ಇಷ್ಟೊಂದು ಮೇಲ್ಮನವಿಗಳ ವಿಲೇವಾರಿಗೆ ಹಲವಾರು ತಿಂಗಳುಗಳೇ ಬೇಕಾಗುತ್ತವೆ. ಜೊತೆಗೆ ಮೇಲ್ಮನವಿ ಸಲ್ಲಿಸಿದ್ದ ನಾಗರಿಕರು ಆಯೋಗದ ಮುಂದೆ ಹಾಜರಾಗಲು ಸಾಕಷ್ಟು ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗುವುದರಿಂದ, ಬಹುತೇಕ ನಾಗರಿಕರು ತಮಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಯನ್ನೇ ಸಲ್ಲಿಸುವುದಿಲ್ಲ!. 

ಈ ಸಮಸ್ಯೆಗೆ ಅವಶ್ಯಕ ಸಂಖ್ಯೆಯ ಮಾಹಿತಿ ಆಯುಕ್ತರನ್ನು ರಾಜ್ಯ ಸರ್ಕಾರಗಳು ನೇಮಕ ಮಾಡದೇ ಇರುವುದು, ಆಯೋಗ ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ ಸಂಖ್ಯೆಯ ಸಿಬಂದಿಗಳನ್ನು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸದಿರುವುದು ಪ್ರಮುಖ ಕಾರಣಗಳಾಗಿವೆ. ಇದರಿಂದಾಗಿ ಸಾರ್ವಜನಿಕ ಪ್ರಾಧಿಕಾರವೊಂದರಿಂದ ಮಾಹಿತಿ ದೊರೆಯದೇ, ಕೊನೆಯ ಪ್ರಯತ್ನವಾಗಿ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ ವ್ಯಕ್ತಿಗಳಿಗೆ ಅಪೇಕ್ಷಿತ ಮಾಹಿತಿ ದೊರೆಯಲು ಹಲವಾರು ತಿಂಗಳುಗಳೇ ತಗಲುತ್ತವೆ!. 

ಕೇಂದ್ರ ಮಾಹಿತಿ ಆಯೋಗಕ್ಕೆ ಎಪ್ರಿಲ್ ೨೦೦೭ ರಿಂದ ಮಾರ್ಚ್ ೨೦೦೮ ರ ಅವಧಿಯಲ್ಲಿ ೨೨,೬೮೮ ಮೇಲ್ಮನವಿಗಳು ಬಂದಿದ್ದು, ಇವುಗಳಲ್ಲಿ ಕೇವಲ ೧೨,೪೪೧ ಪ್ರಕರಣಗಳನ್ನು ಮಾತ್ರ ವಿಚಾರಣೆಗಾಗಿ ಸ್ವೀಕರಿಸಲಾಗಿದೆ.ಇನ್ನುಳಿದ ಅರ್ಜಿಗಳನ್ನು ಸಮರ್ಪಕವಾಗಿ ಭಾರ್ತಿ ಮಾಡಿಲ್ಲ ಹಾಗೂ ಅಪ್ರಸ್ತುತ ಮಾಹಿತಿಗಳನ್ನು ಕೇಳಲಾಗಿದೆ ಎನ್ನುವ ನೆಪವನ್ನು ಒಡ್ಡಿ ತಿರಸ್ಕರಿಸಲಾಗಿದೆ!. ಇದೇ ರೀತಿಯಲ್ಲಿ ಅನೇಕ ರಾಜ್ಯಗಳ ಮಾಹಿತಿ ಆಯೋಗಗಳಲ್ಲಿ ಉಳಿದುಕೊಂಡಿರುವ ಸಹಸ್ರಾರು ಮೇಲ್ಮನವಿಗಳು, ಈ ಆಯೋಗಗಳ ನಿಧಾನಗತಿಯ ಕಾರ್ಯವೈಖರಿಗೆ ಸಾಕ್ಷಿಯಾಗಿವೆ. 

ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದವರು ತಮ್ಮ ಅರ್ಜಿಗಳ ಸ್ಥಿತಿಗತಿಗಳನ್ನು ಮತ್ತು ಪ್ರತಿನಿತ್ಯ ವಿಚಾರಣೆಯಾಗಲಿರುವ ಪ್ರಕರಣಗಳ ವಿವರಗಳನ್ನು ಆಯೋಗದ " ಅಂತರ್ಜಾಲ ತಾಣ " ದಲ್ಲಿ ಪರಿಶೀಲಿಸಬಹುದಾಗಿತ್ತು. ಆದರೆ ಇದೀಗ ಈ ವ್ಯವಸ್ಥೆಯನ್ನೇ ರದ್ದುಪಡಿಸಿರುವುದು, ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವ ಯತ್ನಕ್ಕೆ ಸಾಕ್ಷಿಯಾಗಿದೆ.

ಅದೇನೇ ಇರಲಿ, ನಿಮ್ಮ ಊರಿನಲ್ಲಿರುವ ಸರ್ಕಾರಿ ಕಛೇರಿಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಆರಂಭಿಸಿ, ರಾಜ್ಯ ಮತ್ತು ಕೇಂದ್ರ ಮಾಹಿತಿ ಆಯೋಗಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಮಾಹಿತಿ ಹಕ್ಕು ಅಧಿನಿಯಮವು ಸದ್ಯೋಭವಿಷ್ಯದಲ್ಲಿ ಸದ್ದಿಲ್ಲದೇ ಸಮಾಧಿಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೩-೧೦- ೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment