Saturday, December 13, 2014

LED LIGHTS - DO NOT LAST LONGER



  ದಾರಿದೀಪಗಳನ್ನು ಖರೀದಿಸುವಾಗ ಖಾತರಿನೀಡುವುದೇಕೆ ?


ನಿರಂತರವಾಗಿ ಹೆಚ್ಚುತ್ತಿರುವ ರಾಜ್ಯದ ಜನಸಂಖ್ಯೆ, ಹೆಚ್ಚುತ್ತಲೇ ಇರುವ ವಿದ್ಯುಚ್ಛಕ್ತಿಯ ಬೇಡಿಕೆ, ವಿದ್ಯುತ್ ಕಳ್ಳತನ ಹಾಗೂ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಜಾರಿಗೊಳಿಸದ ಕಾರಣಗಳಿಂದಾಗಿ ನಮ್ಮ ರಾಜ್ಯದಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆಯು ಇಂದಿಗೂ ಬಗೆಹರಿದಿಲ್ಲ.

ಆದರೆ ಇತ್ತೀಚಿನ ಕೆಲವರ್ಷಗಳಿಂದ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಸರ್ಕಾರ ಗಮನಹರಿಸಿದ ಕಾರಣದಿಂದಾಗಿ, ರಾಜ್ಯದ ಅನೇಕ ನಗರ ಮತ್ತು ಮಹಾನಗರಗಳಲ್ಲಿ ವಿದ್ಯುತ್ ಕಬಳಿಸುವ ಸೋಡಿಯಂ ಮತ್ತಿತರ ದೀಪಗಳಿಗೆ ಬದಲಾಗಿ, ವಿದ್ಯುತ್ ಉಳಿತಾಯ ಮಾಡಬಲ್ಲ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲಾಗುತ್ತಿದೆ. ಹಾಗೂ ಇದಕ್ಕಾಗಿ ಸರ್ಕಾರವೇ ನೀಡುವ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಬಳಸಲಾಗುತ್ತದೆ.ಆದರೆ ಸರ್ಕಾರದ ಈ ಯೋಜನೆಯು ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಮತ್ತು ಅವ್ಯವಹಾರಗಳಿಗೆ ಕಾರಣವೆನಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಕೆಟ್ಟುಹೋದ ದಾರಿದೀಪಗಳು 

ದ.ಕ ಜಿಲ್ಲೆಯ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಅತ್ಯಲ್ಪ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಬಳಸಿ, ಪ್ರಖರವಾದ ಬೆಳಕನ್ನು ನೀಡುವ ಹಾಗೂ ಪರಿಸರ ಸ್ನೇಹಿ ಎನಿಸಿರುವ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ನಿರ್ಧರಿಸಿ ೧೦-೦೫-೨೦೧೨ ರಂದು ಮೊದಲಬಾರಿಗೆ ಟೆಂಡರ್ ಗಳನ್ನು ಆಹ್ವಾನಿಸಲಾಗಿತ್ತು. ತದನಂತರ ಅತ್ಯಂತ ಕಡಿಮೆ ದರವನ್ನು ನಮೂದಿಸಿದ್ದ ಸ್ವಸ್ತಿಕ್ ಲ್ಯುಮಿನರೀಸ್ ಮತ್ತು ಸನ್ ಲೈಟ್ ಲ್ಯುಮಿನರೀಸ್ ಸಂಸ್ಥೆಗಳಿಗೆ ನಿಗದಿತ ಪ್ರದೇಶಗಳಲ್ಲಿ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಪುರಸಭಾ ವ್ಯಾಪ್ತಿಯಲ್ಲಿ ಸ್ವಸ್ತಿಕ್ ಸಂಸ್ಥೆಯು ೧೪೪, ಸನ್ ಲೈಟ್ ಸಂಸ್ಥೆಯು ೫೫ ಮತ್ತು ಸರ್ಕಾರಿ ಸಂಸ್ಥೆಯಾಗಿರುವ " ಕ್ರೆಡಲ್ " ನ ವತಿಯಿಂದ ಉಚಿತವಾಗಿ ದೊರೆತ ೧೨೦ ದೀಪಗಳು ಸೇರಿದಂತೆ ಒಟ್ಟು ೩೧೯ ದೀಪಗಳನ್ನು ೨೦೧೩ ಮತ್ತು ೨೦೧೪ ರಲ್ಲಿ ಅಳವಡಿಸಲಾಗಿತ್ತು. ಕ್ರೆಡಲ್ ನೀಡಿದ್ದ ದೀಪಗಳನ್ನು ಬೆಂಗಳೂರಿನ ಕೃಪಾ ಟೆಲಿಕಾಂ ಸಂಸ್ಥೆ ಅಳವಡಿಸಿತ್ತು. ಈ ದೀಪಗಳಿಗೆ ಒಂದು ವರ್ಷದ ಖಾತರಿಯನ್ನೂ ನೀಡಲಾಗಿತ್ತು.

ಅಲ್ಪಾಯುಷಿ ದೀಪಗಳು  

ನೀವು ಬಳಸುವ ಉತ್ತಮ ಗುಣಮಟ್ಟದ ಸಾಮಾನ್ಯ ವಿದ್ಯುತ್ ಬಲ್ಬ್ ೧೦೦೦ ಗಂಟೆ ಹಾಗೂ ಸಿ ಎಫ್ ಎಲ್ ಬಲ್ಬ್ ಗಳು ೫ ರಿಂದ ೧೦.೦೦೦ ಸಾವಿರ ಗಂಟೆ ಮತ್ತು ಎಲ್ ಇ ಡಿ ದೀಪಗಳು ೫೦,೦೦೦ ಗಂಟೆಗಳ ಕಾಲ ಉರಿಯಲೇಬೇಕು. ಎಲ್ ಇ ಡಿ ದೀಪಗಳು ಉಳಿತಾಯ ಮಾಡುವ ವಿದ್ಯುಚ್ಛಕ್ತಿಯ ಪ್ರಮಾಣ, ಹೊರಸೂಸುವ ಬೆಳಕಿನ ಪ್ರಖರತೆ ಮತ್ತು ಇವುಗಳ ಆಯುಷ್ಯಗಳನ್ನು ಪರಿಗಣಿಸಿದಾಗ, ಇವುಗಳ ದುಬಾರಿ ಬೆಲೆಯೂ ( ದೀಪವೊಂದರ ಸುಮಾರು ೨೦,೦೦೦/- ) ತೀರಾ ನಗಣ್ಯವೆನಿಸುತ್ತದೆ. ಆದರೆ ಪುತ್ತೂರಿನಲ್ಲಿ ಅಳವಡಿಸಿದ್ದ ೩೧೯ ಎಲ್ ಇ ಡಿ ದೀಪಗಳಲ್ಲಿ ೧೭೫ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗಿದ್ದವು. ಇವುಗಳಲ್ಲಿ ಕೃಪಾ ಟೆಲಿಕಾಂ ಸಂಸ್ಥೆ ಅಳವಡಿಸಿದ್ದ ಹಾಗೂ ಕ್ರೆಡಲ್ ವತಿಯಿಂದ ಪುಕ್ಕಟೆಯಾಗಿ ದೊರೆತಿದ್ದ ೧೨೦ ದೀಪಗಳಲ್ಲಿ ೧೦೫, ಸನ್ ಲೈಟ್ ಅಳವಡಿಸಿದ್ದ ೫೫ ರಲ್ಲಿ ೨೫ ಮತ್ತು ಸ್ವಸ್ತಿಕ್ ಅಳವಡಿಸಿದ್ದ ೧೪೪ ರಲ್ಲಿ ೫೫ ದೀಪಗಳು ಸೇರಿದಂತೆ,ಶೇ.೫೫ ರಷ್ಟು ದೀಪಗಳು ಅಕಾಲಿಕವಾಗಿ ಅಸುನೀಗಿದ್ದವು!. ಗುತ್ತಿಗೆದಾರರು ಹೇಳುವಂತೆ ಇದಕ್ಕೆ ಮಳೆಗಾಲದಲ್ಲಿ ಬಂದೆರಗುವ ಗುಡುಗು - ಮಿಂಚುಗಳೇ ಕಾರಣವೆನ್ನುವುದು ನಿಶ್ಚಿತವಾಗಿಯೂ ಸಮರ್ಥನೀಯವಲ್ಲ. ಇದು ನಿಜವಾಗಿದ್ದಲ್ಲಿ ಭಾರತದ ಅಧಿಕತಮ ನಗರ - ಪಟ್ಟಣಗಳಲ್ಲಿ ಇಂತಹ ದೀಪಗಳನ್ನೇ  ಅಳವಡಿಸುವಂತಿಲ್ಲ.


 
ಖಾತರಿಯ ಅವಧಿ ಎಷ್ಟು?

ಸಹಸ್ರಾರು ರೂಪಾಯಿ ಬೆಲೆಬಾಳುವ ಎಲ್ ಇ ಡಿ ದಾರಿದೀಪಗಳಿಗೆ ಕೇವಲ ಒಂದು ವರ್ಷದ ಖಾತರಿಯನ್ನು ನೀಡಲಾಗಿದೆ. ಆದರೆ ಪುರಸಭೆಯ ಗುತ್ತಿಗೆಯ ಷರತ್ತಿನಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಪರಿಪೂರ್ಣಗೊಳಿಸಿದ ಬಳಿಕ ಹಾಗೂ ಅಂತಿಮ ಬಿಲ್ಲನ್ನು ಪಾವತಿಸಿದ ನಂತರ, ಮುಂದಿನ ಎರಡು ವರ್ಷಗಳ ಅವಧಿಗೆ ಈ ದಾರಿದೀಪಗಳನ್ನು ಗುತ್ತಿಗೆದಾರರು ಉಚಿತವಾಗಿ ನಿರ್ವಹಿಸಬೇಕು. ಇದರರ್ಥ ಈ ದೀಪಗಳು ಎರಡು ವರ್ಷಗಳಲ್ಲಿ ಕೆಟ್ಟುಹೋದಲ್ಲಿ, ಗುತ್ತಿಗೆದಾರರೇ ಇದನ್ನು ಉಚಿತವಾಗಿ ದುರಸ್ತಿಪಡಿಸಬೇಕು. ಆದರೆ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಕೆಟ್ಟುಹೋಗಿದ್ದ ಕೆಲವು ಎಲ್ ಇ ಡಿ ದೀಪಗಳನ್ನು ದುರಸ್ತಿಪಡಿಸಿದ್ದಲ್ಲಿ, ಮತ್ತೆ ಕೆಲವು ದೀಪಗಳನ್ನು ಬದಲಾಯಿಸಿ ಹೊಸ ದೀಪಗಳನ್ನು ನೀಡಲಾಗಿತ್ತು. ತದನಂತರ ಕೆಲವೆಡೆ ಈ ದೀಪಗಳಿಗೆ ಬದಲಾಗಿ ಅಲ್ಪಬೆಲೆಯ ಟಿ - ೫ ದಾರಿದೀಪಗಳನ್ನು ಅಳವಡಿಸಲಾಗಿತ್ತು. ವಿಶೇಷವೆಂದರೆ ಸುಮಾರು ೨೦,೦೦೦ ರೂ. ಬೆಲೆಯ ಎಲ್ ಇ ಡಿ ದೀಪಗಳಿಗೆ ಬದಲಾಗಿ ಕೇವಲ ೧,೪೮೯ ರೂ.ಬೆಲೆಯ ಟಿ - ೫ ದೀಪಗಳನ್ನು ಅಳವಡಿಸಿದ್ದ ಬಗ್ಗೆ, ಯಾರೊಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ!. ಇದು " ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ " ಎನ್ನುವ ಆಡುಮಾತಿಗೆ ಉತ್ತಮ ಉದಾಹರಣೆಯೂ ಹೌದು. 



ಕಾಮಗಾರಿಗಳಲ್ಲಿ ನ್ಯೂನತೆ 

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಎಲ್ ಇ ಡಿ ದಾರಿದೀಪಗಳ ಅಳವಡಿಕೆಗಾಗಿ ಟೆಂಡರ್ ಗಳನ್ನು ಆಹ್ವಾನಿಸಿದಾಗ, ಈ ದೀಪಗಳನ್ನು ೩೨ ಡಯಾಮೀಟರ್ ನ ಹಾಗೂ ೨.೭೦ ಮೀಟರ್ ಉದ್ದದ ಜಿ. ಐ ಪೈಪ್ ಮತ್ತು ನಿಗದಿತ ಬ್ರಾಕೆಟ್ ಗಳೊಂದಿಗೆ ವಿದ್ಯುತ್ ಕಂಬಗಳಿಗೆ ಅಳವಡಿಸಬೇಕು ಎಂದು ನಮೂದಿಸಲಾಗಿದ್ದು, ಇದಕ್ಕಾಗಿ ಒಂದು ಬ್ರಾಕೆಟ್ ಗೆ ಸುಮಾರು ೯೦೦ ರೂ.ಗಳನ್ನು ಪಾವತಿಸಲಾಗಿದೆ. ಆದರೆ ಪುತ್ತೂರಿನಲ್ಲಿ ಅಳವಡಿಸಿದ್ದ ೩೧೯ ದಾರಿದೀಪಗಳಲ್ಲಿ ಒಂದೇ ಒಂದು ದೀಪಕ್ಕೂ ೨.೭೦ ಮೀಟರ್ ನ ಜಿ.ಐ ಪೈಪನ್ನು ಬಳಸದೇ, ಹಿಂದೆ ಸೋಡಿಯಂ ವೇಪರ್ ಹಾಗೂ ಟ್ಯೂಬ್ ಲೈಟ್ ಗಳನ್ನು ಅಳವಡಿಸಲು ಬಳಸಲಾಗಿದ್ದ ಹಳೆಯ ಪೈಪುಗಳಿಗೆ ಇವುಗಳನ್ನು ಅಳವಡಿಸಿದ್ದರೂ, ಈ ಫಿಟ್ಟಿಂಗ್ ಗಳ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿರುವುದು ಸಂದೇಹಾಸ್ಪದವಾಗಿದ್ದು, ಗುತ್ತಿಗೆಯ ಷರತ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. 

ಇಷ್ಟು ಮಾತ್ರವಲ್ಲ, ಕಾಮಗಾರಿಗಳನ್ನು ಆರಂಭಿಸುವಂತೆ ಪುರಸಭೆ ಆದೇಶಿಸಿದ ಬಳಿಕ, ತಮ್ಮ ಕಾಮಗಾರಿಗಳು ಪರಿಪೂರ್ಣಗೊಂಡಿವೆ ಎನ್ನುವ ವರದಿಯನ್ನು ಸ್ವಸ್ತಿಕ್ ಮತ್ತು ಸನ್ ಲೈಟ್ ಸಂಸ್ಥೆಗಳು ಸಲ್ಲಿಸಿಲ್ಲ. ( ವಿಶೇಷವೆಂದರೆ ಕ್ರೆಡಲ್ ಸಂಸ್ಥೆಯು ಉಚಿತವಾಗಿ ನೀಡಿದ್ದ ೧೨೦ ದಾರಿದೀಪಗಳನ್ನು ಅಳವಡಿಸಿದ್ದ ಕೃಪಾ ಟೆಲಿಕಾಂ ಸಂಸ್ಥೆಯು ತನ್ನ ಕಾಮಗಾರಿಗಳು ಪರಿಪೂರ್ಣಗೊಂಡ ವರದಿಯನ್ನು ನೀಡುವುದರೊಂದಿಗೆ, ಈ ಸಂದರ್ಭದಲ್ಲಿ ತೆಗೆದಿದ್ದ ೧೨೦ ಹಳೆಯ ಸೋಡಿಯಂ ದೀಪಗಳನ್ನು ಪುರಸಭೆಗೆ ಮರಳಿಸಿದೆ!. )
ಈ ವರದಿಯ ಬಳಿಕ ಸಂಸ್ಥೆಗಳು ನಡೆಸಿರುವ ಕಾಮಗಾರಿಗಳನ್ನು ಪುರಸಭಾ ಅಧಿಕಾರಿಗಳು ಪರಿಶೀಲಿಸಿ, ಇವುಗಳು ತೃಪ್ತಿಕರವಾಗಿವೆ ಎಂದು ಪ್ರಮಾಣೀಕರಿಸದೇ ಗುತ್ತಿಗೆದಾರರಿಗೆ ನಿಗದಿತ ಮೊತ್ತವನ್ನು ಪಾವತಿಸುವಂತಿಲ್ಲ. ಆದರೂ ಇವೆರಡೂ ಸಂಸ್ಥೆಗಳಿಗೆ ಗುತ್ತಿಗೆಯ ಮೊತ್ತವನ್ನು ಪಾವತಿಸಿರುವುದು ಹೇಗೆ ಮತ್ತು ಏಕೆ? ಮತ್ತು ಸುಮಾರು ೨೦,೦೦೦ ರೂ.ಬೆಲೆಬಾಳುವ ದೀಪಗಳಿಗೆ ಬದಲಾಗಿ ೧,೪೮೯ ರೂ. ಬೆಲೆಯ ಟಿ - ೫ ದೀಪಗಳನ್ನು ಅಳವಡಿಸಲು ಅನುಮತಿಯನ್ನು ನೀಡಿರುವುದಾದರೂ ಹೇಗೆ ಮತ್ತು ಏಕೆ?, ಎನ್ನುವ ಪ್ರಶ್ನೆಗೆ ಉತ್ತರವೇನೆಂದು ನಮಗೂ ತಿಳಿದಿಲ್ಲ!. 

ಮಾಹಿತಿ ನೀಡದ ಪುರಸಭೆ 

ಮಾಹಿತಿ ಹಕ್ಕು ಕಾಯಿದೆಯನ್ವಯ ಪುತ್ತೂರು ಪುರಸಭೆಗೆ ೨೬-೦೮-೨೦೧೪ ರಂದು ಈ ದೀಪಗಳ ಬಗ್ಗೆ ಅಪೇಕ್ಷಿತ ಮಾಹಿತಿಗಳನ್ನು ಒದಗಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ, ೩೦-೦೯-೨೦೧೪ ರಂದು ನೀಡಿದ್ದ ಮಾಹಿತಿಗಳು ಅಪೂರ್ಣ ಮತ್ತು ದಾರಿತಪ್ಪಿಸುವ ಮಾಹಿತಿಗಳಾಗಿದ್ದುದರಿಂದ ಈ ಬಗ್ಗೆ ೧೦-೧೦-೨೦೧೪ ರಂದು ಪ್ರಥಮ ಮೇಲ್ಮನವಿಯನ್ನು ನಿಗದಿತ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆಯನ್ನು ನಡೆಸಿದ ಬಳಿಕ ದಿ.೧೧-೧೧-೨೦೧೪ ರಂದು ನೀಡಿದ್ದ ಮಾಹಿತಿಗಳೂ ಪರಿಪೂರ್ಣವಾಗಿರಲಿಲ್ಲ. ಇದೇ ಕಾರಣದಿಂದಾಗಿ ಮತ್ತೆ ಮೇಲ್ಮನವಿ ಪ್ರಾಧಿಕಾರಕ್ಕೆ ದೂರನ್ನು ನೀಡಿದ ನಂತರ ೨೬-೧೧-೨೦೧೪ ರಂದು ಮತ್ತೊಮ್ಮೆ ನೀಡಿದ್ದ ಮಾಹಿತಿಗಳಲ್ಲಿ ಈ ಗುತ್ತಿಗೆಗಳ ಬಗ್ಗೆ ಕೆಲ ಹೊಸ ವಿಚಾರಗಳು ತಿಳಿದುಬಂದಿದ್ದರೂ, ಕೆಲವೊಂದು ದಾಖಲೆಗಳನ್ನು ಪುರಸಭೆಯ ಅಧಿಕಾರಿಗಳು ಇಂದಿನ ತನಕ ನೀಡಿಲ್ಲ. 

ಇವೆಲ್ಲವನ್ನೂ ಪುರಸಭೆಗೆ ತೆರಿಗೆಯನ್ನು ಪಾವತಿಸುವ ಸ್ಥಳೀಯ ನಾಗರಿಕರ ಗಮನಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಜೊತೆಗೆ ದಾರಿದೀಪಗಳ ಗುತ್ತಿಗೆಯಲ್ಲಿ ಸಂಭವಿಸಿರುವ ನ್ಯೂನತೆಗಳನ್ನು ಸರಿಪಡಿಸುವ ಮತ್ತು ಷರತ್ತುಗಳನ್ನು ಪರಿಪಾಲಿಸದೇ ಇದ್ದರೂ, ಪುರಸಭೆಯು ಪಾವತಿಸಿದ್ದ ಮೊತ್ತವನ್ನು ಮರಳಿ ಪಡೆಯುವ ಬಗ್ಗೆ ಜನಪ್ರತಿನಿಧಿಗಳನ್ನು ಆಗ್ರಹಿಸುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ. 

ಡಾ,ಸಿ.ನಿತ್ಯಾನಂದ ಪೈ, ಪುತ್ತೂರು  

ಚಿತ್ರ - ಟಿ - ೫ ದಾರಿದೀಪ 





No comments:

Post a Comment