Wednesday, February 11, 2015

ASSAM GOVT. TO CONTROL PESTICIDES IN VEGETABLES

ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಲಿರುವ ಅಸ್ಸಾಂ ಸರ್ಕಾರ

ನಾವಿಂದು ಸೇವಿಸುತ್ತಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವಾಗ ಅತಿಯಾದ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ ಎನ್ನುವ ವಿಚಾರ ನಿಮಗೂ ತಿಳಿದಿರಲೇಬೇಕು. ರಾಸಾಯನಿಕ ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅರಿತಿರುವ ಜನರು, ತಮ್ಮ ಮನೆಯಂಗಳದಲ್ಲೇ ತರಕಾರಿಗಳನ್ನು ಬೆಳೆಸುತ್ತಾರೆ. ಮತ್ತೆ ಕೆಲವರು ಸಾವಯವ ಪದ್ದತಿಯಲ್ಲಿ ಬೆಳೆದಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಇವುಗಳನ್ನು ಬೆಳೆಯುವುದು ಅಸಾದ್ಯವಾಗಿರುವುದರಿಂದ, ಮಾರುಕಟ್ಟೆಯಲ್ಲಿ ದೊರೆಯುವ ಹಾಗೂ ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನೇ ಜನಸಾಮಾನ್ಯರು ಖರೀದಿಸಿ ಸೇವಿಸುತ್ತಾರೆ. ತತ್ಪರಿಣಾಮವಾಗಿ ಅಯಾಚಿತ ಆರೋಗ್ಯದ ಸಮಸ್ಯೆಗಳಿಗೆ ಈಡಾಗುತ್ತಾರೆ.

ಸಾಮಾನ್ಯವಾಗಿ ದೇಶದ ವಿವಿಧ ರಾಜ್ಯಗಳಲ್ಲಿನ ಅಧಿಕತಮ ಕೃಷಿಕರು ಅನಕ್ಷರಸ್ತರಾಗಿದ್ದು, ತಾವು ಜೀವನೋಪಾಯಕ್ಕಾಗಿ ಬೆಳೆಯುವ ಆಹಾರಧಾನ್ಯಗಳು, ಹನ್ನುಹಂಪಳುಗಳು ಮತ್ತು ತರಕಾರಿಗಳನ್ನು ಕೀಟಗಳ ಬಾಧೆಯಿಂದ ರಕ್ಷಿಸಲು, ವಿವಿಧ ರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಸಂದರ್ಭದಲ್ಲಿ ಈ ರಾಸಾಯನಿಕ ಕೀಟನಾಶಕಗಳನ್ನು ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಬಳಸಬೇಕು ಎನ್ನುವುದರ ಮಾಹಿತಿ ತಿಳಿಯದೇ, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದಲ್ಲದೇ ತಮ್ಮ ಬೆಳೆಗಳನ್ನು ಮಾರಾಟಮಾಡಲು ಕೊಂಡೊಯ್ಯುವ ೧೫ ದಿನಗಳಿಗೆ ಮುನ್ನ ಕೀಟನಾಶಕಗಳ ಸಿಂಪಡನೆಯನ್ನು ನಿಲ್ಲಿಸಬೇಕು ಎನ್ನುವ ವಿಚಾರವನ್ನು ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಗ್ರಾಹಕರು ಖರೀದಿಸುವ ಉತ್ಪನ್ನಗಳಲ್ಲಿ ಕೀಟನಾಶಕಗಳ ಅಂಶವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿ ಇರುವುದರಿಂದ, ಅನಪೇಕ್ಷಿತ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ವಿಶೇಷವೆಂದರೆ ಅನೇಕ ಅನಕ್ಷರಸ್ತ ಕೃಷಿಕರಿಗೆ ತಾವು ಬಳಸುವ ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದು, ಇವರು ತಮ್ಮ ಮನೆಮಂದಿಗಾಗಿ ಕೀಟನಾಶಕಗಳನ್ನು ಬಳಸದೇ ಪ್ರತ್ಯೇಕವಾಗಿ ಬೆಳೆಸಿರುವ ಬೆಳೆಗಳನ್ನು ಮಾತ್ರ ಸೇವಿಸುತ್ತಾರೆ!.

ಕೀಟನಾಶಕಗಳ ಕಾಟ

೧೯೮೦ ರ ದಶಕದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಗೇರು ತೋಟಗಳನ್ನು ಬಾಧಿಸುತ್ತಿದ್ದ " ಟೀ ಮಾಸ್ಕಿಟೋ " ಎನ್ನುವ ಕೀಟಗಳನ್ನು ನಾಶಪಡಿಸಲು ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋ ಸಲ್ಫಾನ್ ಮತ್ತಿತರ ಕೀಟನಾಶಕಗಳ ದುಷ್ಪರಿಣಾಮಗಳಿಗೆ ಬಲಿಯಾಗಿದ್ದ ನೂರಾರು ಅಮಾಯಕರು ಹಾಗೂ  ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳಿಂದ ನರಳುತ್ತಿರುವ ಮತ್ತು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ಮೃತಪಟ್ಟ ಜನರ ಬಗ್ಗೆ ಒಂದಿಷ್ಟು ಮಾಹಿತಿಗಳು ನಿಮಗೂ ತಿಳಿದಿರಬಹುದು. ಅದೇ ರೀತಿಯಲ್ಲಿ ನಮ್ಮ ಜೀವಿತಾವಧಿಯಲ್ಲಿ ಕೀಟನಾಶಕಗಳು ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನು ಸೇವಿಸಿದಲ್ಲಿ ಉದ್ಭವಿಸಬಲ್ಲ ಅಪಾಯಕಾರಿ ವ್ಯಾಧಿಗಳ ಬಗ್ಗೆ ಕಿಂಚಿತ್ ಮಾಹಿತಿ ತಿಳಿದಿರಬಹುದು. ಆದರೆ ಕೀಟನಾಶಕಗಳನ್ನು ಬಳಸದೇ ಬೆಳೆಸಿರುವ ಆಹಾರಪದಾರ್ಥಗಳು ಲಭ್ಯವಾಗದೇ ಇರುವುದರಿಂದ ಚಿಂತಾಕ್ರಾಂತರಾಗಿರಲೂಬಹುದು.

ಸರ್ಕಾರಗಳ ವೈಫಲ್ಯ

ನಮ್ಮ ದೇಶದ ಸಂವಿಧಾನದಲ್ಲಿ  ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಚ್ಛವಾದ ಗಾಳಿ, ಶುದ್ಧವಾದ ನೀರು ಮತ್ತು ಉತ್ತಮ ಗುಣಮಟ್ಟದ ಆಹಾರಪದಾರ್ಥಗಳನ್ನು( ಆಹಾರ ಭದ್ರತಾ ಕಾಯಿದೆಯಂತೆ )  ಪಡೆಯುವ  ಹಕ್ಕನ್ನು ನೀಡಲಾಗಿದೆ. ಆದರೆ ಇವೆಲ್ಲವನ್ನೂ ಒದಗಿಸಬೇಕಾದ ಹೊಣೆಗಾರಿಕೆಯು ರಾಜ್ಯ ಹಾಗೂಕೆಂದ್ರ ಸರ್ಕಾರಗಳ ಮೇಲಿದೆ. ವಿಶೇಷವೆಂದರೆ ಇವೆಲ್ಲವುಗಳನ್ನು ತನ್ನ ಪ್ರಜೆಗಳಿಗೆ ಒದಗಿಸುವಲ್ಲಿ ರಾಜ್ಯ – ಕೇಂದ್ರ ಸರ್ಕಾರಗಳು  ದಯನೀಯವಾಗಿ ವಿಫಲಗೊಂಡಿವೆ.

ಅಸ್ಸಾಂ ಸರ್ಕಾರ ಮಾದರಿ  

ಆದರೆ ಅಸ್ಸಾಂ ರಾಜ್ಯ ಸರ್ಕಾರವು ತನ್ನ ಪ್ರಜೆಗಳ ಹಿತರಕ್ಷಣೆಯ ದೃಷ್ಠಿಯಿಂದ ರಾಜ್ಯದಲ್ಲಿ ಮಾರಾಟವಾಗುತ್ತಿರುವ ತರಕಾರಿಗಳಲ್ಲಿನ ಕೀಟನಾಶಕಗಳ ಪ್ರಮಾಣವನ್ನು ಪತ್ತೆಹಚ್ಚಲು, ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರಯೋಗಾಲಯಗಳನ್ನು ತೆರೆಯಲು ನಿರ್ಧರಿಸಿದೆ. ಜೊತೆಗೆ ಕೀಟನಾಶಕಗಳಿಗೆ ಇತಿಮಿತಿಗಳನ್ನೂ ನಿಗದಿಸಲಿದೆ. ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಕೀಟನಾಶಕಗಳು ಪತ್ತೆಯಾದಲ್ಲಿ, ಇದನ್ನು ಬೆಳೆದವರಿಗೆ ದಂಡವನ್ನು ವಿಧಿಸಲಿದೆ. ಅವಶ್ಯಕತೆ ಇದ್ದಲ್ಲಿ ಇಂತಹ ಕೃಷಿಕರು ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯದಂತೆ ನಿಷೇಧವನ್ನೂ ಹೇರಲಿದೆ ಎಂದು ಅಸ್ಸಾಂ ನ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಈ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಜನಸಾಮಾನ್ಯರು ತಮ್ಮ ದೂರುಗಳನ್ನು ತತ್ಸಂಬಂಧಿತ ನಿಯಂತ್ರಣ ಮಂಡಳಿಗೆ ನೀಡಬಹುದಾಗಿದೆ.ಈ ಮಂಡಳಿಯು ಜಿಲ್ಲಾ ಮಟ್ಟದ ಸಮಿತಿಯ ಸಹಯೋಗದಲ್ಲಿ, ಕೃಷಿಕರ ಮೇಲೆ ಕಣ್ಗಾವಲು ಇರಿಸಲಿದೆ.

ಕೊನೆಯ ಮಾತು

ನಮ್ಮ ರಾಜ್ಯದಲ್ಲೂ ಈ ವ್ಯವಸ್ತೆ ಜಾರಿಗೆ ಬಂದಲ್ಲಿ ಹಾಗೂ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ, ರಾಜ್ಯದ ಪ್ರಜೆಗಳು “ ವಿಷ ಮಾನವ “ ರಾಗುವ ಸಾಧ್ಯತೆಗಳು ನಿಶ್ಚಿತವಾಗಿಯೂ ಕಡಿಮೆಯಾಗಲಿದೆ. ಆದರೆ ನಮ್ಮ ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಎನ್ನುವ ಪಿಡುಗು ಯಾವುದೇ ಕೀಟನಾಶಕಕ್ಕಿಂತಲೂ ಅಪಾಯಕಾರಿ ಎನಿಸಿದ್ದು, ಸರ್ಕಾರವು ಪ್ರಜೆಗಳ ಹಿತದೃಷ್ಟಿಯಿಂದ  ರೂಪಿಸುವ ಕಾನೂನುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವ ಹೊರತಾಗಿ ಅವರನ್ನು ರಕ್ಷಿಸುತ್ತದೆ!.

ಅದೇನೇ ಇರಲಿ, ನೀವು ಮಾರುಕಟ್ಟೆಯಲ್ಲಿ ಹಣ್ಣುಹಂಪಲು ಅಥವಾ ತರಕಾರಿಗಳನ್ನು ಖರೀದಿಸುವಾಗ, ಸೊಟ್ಟನೆಯ ಆಕಾರದ, ಆಕರ್ಷಕವಾಗಿ ಕಾಣಿಸದ ಮತ್ತು ಒಂದಿಷ್ಟು ಕೀಟಗಳ ಬಾಧೆಯ ಲಕ್ಷಣಗಳಿರುವ ಉತ್ಪನ್ನಗಳನ್ನೇ ಕೊಳ್ಳಿರಿ. ಏಕೆಂದರೆ ಇವೆಲ್ಲವೂ ಕೀಟನಾಶಕಗಳನ್ನು ಬಳಸದೇ ಬೆಳೆದಿರುವುದನ್ನು ಸಾಬೀತುಪಡಿಸುತ್ತವೆ.


ಡಾ.ಸಿ.ನಿತ್ಯಾನಂದ ಪೈ,ಪುತ್ತೂರು


1 comment: