Wednesday, February 18, 2015

RTI ACT - CHANGES WILL WEAKEN IT




ಮಾಹಿತಿ ಹಕ್ಕು ಕಾಯಿದೆ : ಇನ್ನಷ್ಟು ದುರ್ಬಲವಾಗುವುದೇ ?

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ೨೦೦೫ ರ ಅಕ್ಟೋಬರ್ ೧೨ ರಂದು ಮಾಹಿತಿ ಪಡೆಯುವ ಹಕ್ಕು ಕಾಯಿದೆಯು ದೇಶಾದ್ಯಂತ ಜಾರಿಗೆ ಬರುವ ತನಕ, " ಸರ್ಕಾರಿ ರಹಸ್ಯಗಳ ಅಧಿನಿಯಮ ೧೯೨೩ ರನ್ವಯ ಸರ್ಕಾರದ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವೆನಿಸಿತ್ತು !.

ಪ್ರಬಲ ಅಸ್ತ್ರವೆನಿಸಿದ ಕಾಯಿದೆ

ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫ ರನ್ವಯ  ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳನ್ನು ಜನಸಾಮಾನ್ಯರು ಪಡೆದುಕೊಳ್ಳ ಬಹುದಾಗಿದೆ. ಈ ಕಾಯಿದೆ ಜಾರಿಗೆ ಬಂದ ಬಳಿಕಸರ್ಕಾರಿ ಅಧಿಕಾರಿಗಳು, ರಾಜಕೀಯ ನೇತಾರರು ಮತ್ತು ಮಂತ್ರಿಮಾಗಧರು ಶಾಮೀಲಾಗಿರುವ ನೂರಾರು ಭ್ರಷ್ಟಾಚಾರಸ್ವಜನ ಪಕ್ಷಪಾತ ಮತ್ತು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದ  ಸಹಸ್ರಾರು ಕೋಟಿ ರೂ.ಗಳ  ಅವ್ಯವಹಾರಗಳ ಪ್ರಕರಣಗಳು ಬಯಲಾಗಿದ್ದವು. ಇದು ಭ್ರಷ್ಟ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು !.

ದುರ್ಬಲಗೊಳಿಸುವ ಹುನ್ನಾರ

  ಭ್ರಷ್ಟ  ರಾಜಕೀಯ ನೇತಾರರು ಮತ್ತು ಅಧಿಕಾರಿಗಳು ತಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ಎನ್ನುವ   ಕಾರಣದಿಂದಾಗಿ ನಡೆಸಿದ್ದ ಹುನ್ನಾರದ ಪರಿಣಾಮವಾಗಿ,  ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಂದೇ ಆರಂಭವಾಗಿದ್ದವು. ಜೊತೆಗೆ ನಿರ್ದಿಷ್ಟ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದ ಕಾರ್ಯಕರ್ತರ ಅರ್ಜಿಗಳನ್ನೇ ಸ್ವೀಕರಿಸದ, ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣದಾರಿತಪ್ಪಿಸುವ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ್ದ, ಅರ್ಜಿದಾರರಿಗೆ ಕಿರುಕುಳ ನೀಡಿದ ಅಥವಾ ಬೆದರಿಕೆ ಒಡ್ಡಿದ್ದ ಅಸಂಖ್ಯ ಪ್ರಕರಣಗಳು ವರದಿಯಾಗಿದ್ದವು.

ಅದೇ ರೀತಿಯಲ್ಲಿ ಅಪೇಕ್ಷಿತ ಮಾಹಿತಿಗಳನ್ನು ಒದಗಿಸಲು ನಿಗದಿತ ಶುಲ್ಕಕ್ಕೆ ಬದಲಾಗಿ ಕಾನೂನುಬಾಹಿರವಾಗಿ ದುಬಾರಿ ಶುಲ್ಕವನ್ನು ವಿಧಿಸಿದ್ದ, ನಿರ್ದಿಷ್ಟ ಮಾಹಿತಿಗಳು ( ಕಡತಗಳು ) ತಮ್ಮಲ್ಲಿ ಇಲ್ಲವೆಂದು ಉತ್ತರಿಸಿದ, ಅರ್ಜಿದಾರರ ಮೇಲೆ ಹಲ್ಲೆ ನಡೆಸಿದ್ದ ಮತ್ತು ಕೆಲ ರಾಜ್ಯಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ ಅನೇಕ ಪ್ರಕರಣಗಳು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇವೆಲ್ಲವುಗಳ ಉದ್ದೇಶವು ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳನ್ನು ನೀಡದೇ ಇರುವ ಮೂಲಕ, ಪ್ರಬಲ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ಹಿತಾಸಕ್ತಿಯನ್ನು ( ಅವ್ಯವಹಾರಗಳು ಮತ್ತು ಹಗರಣಗಳು ಬಯಲಾಗದಂತೆ ) ಕಾಪಾಡಿಕೊಳ್ಳುವುದೇ ಆಗಿದೆ. ಇಂತಹ ಪ್ರಯತ್ನಗಳು ಈ ಕಾಯಿದೆಯು ಜಾರಿಗೆ ಬಂದು ವರ್ಷ ಕಳೆಯುವಷ್ಟರಲ್ಲೇ ಆರಂಭವಾಗಿದ್ದವು.

ತಿದ್ದುಪಡಿ ಮಾಡುತ್ತಿರುವುದೇಕೆ ?

ಕರ್ನಾಟಕ ರಾಜ್ಯ ಸರ್ಕಾರವು ೨೦೦೮ ರಲ್ಲಿ ಕೆಲ ತಿದ್ದುಪಡಿಗಳನ್ನು ಜಾರಿಗೆ ತರುವ ಮೂಲಕ ಈ ಕಾಯಿದೆಯನ್ನು ತುಸು ದುರ್ಬಲಗೊಳಿಸಲು ಯಶಸ್ವಿಯಾಗಿತ್ತು. ಇವುಗಳಲ್ಲಿ ಅರ್ಜಿದಾರರು ಸಲ್ಲಿಸುವ ಒಂದು ಅರ್ಜಿಯು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಪೇಕ್ಷಿತ ಮಾಹಿತಿಗಳನ್ನು ಕೋರಿ ನಮೂದಿಸುವ ವಿವರಗಳು ೧೫೦ ಪದಗಳಿಗೆ ಸೀಮಿತವಾಗಿರಬೇಕು ಮತ್ತು ನೇರವಾಗಿ ಪ್ರಶ್ನೆಗಳನ್ನು ಕೇಳುವಂತಿಲ್ಲ ಎನ್ನುವ ತಿದ್ದುಪಡಿಗಳು ಪ್ರಮುಖವಾಗಿದ್ದವು.ಇದಲ್ಲದೇ ಅಪೇಕ್ಷಿತ ಮಾಹಿತಿಗಳನ್ನು ಸಂಗ್ರಹಿಸಲು ತಗಲುವ ವೆಚ್ಚವನ್ನು ಅರ್ಜಿದಾರರೇ ತೆರಬೇಕು ಎನ್ನುವ ಉದ್ದೇಶವೂ ಸರ್ಕಾರಕ್ಕೆ ಇದ್ದಿತು. ಇದು ಜಾರಿಗೆ ಬಂದಿದ್ದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಇಚ್ಛಾನುಸಾರ ವಿಧಿಸುವ ಶುಲ್ಕವನ್ನು ಅರ್ಜಿದಾರರು ತೆರಲೇಬೇಕಾಗುತ್ತಿತ್ತು.ಅದೃಷ್ಟವಶಾತ್ ಈ ತಿದ್ದುಪಡಿಯನ್ನು ಕಾರಣಾಂತರಗಳಿಂದ ಕೈಬಿಡಲಾಗಿತ್ತು.

ಇವೆಲ್ಲಕ್ಕೂ ಮಿಗಿಲಾಗಿ ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳು “ ತೀರಾ ಕ್ಷುಲ್ಲಕ “ ಹಾಗೂ ಸಾ. ಮಾ. ಅಧಿಕಾರಿಗಳಿಗೆ ಕಿರುಕುಳ ನೀಡುವ ಸಲುವಾಗಿಯೇ ಅರ್ಜಿಯನ್ನು ಸಲ್ಲಿಸಲಾಗಿದೆ ಎನ್ನುವ ನೆಪವನ್ನು ಮುಂದೊಡ್ಡಿ, ಅರ್ಜಿಯನ್ನು ಸಲ್ಲಿಸಿದ ೧೫ ದಿನಗಳ ಒಳಗಾಗಿ ತಿರಸ್ಕರಿಸಬಹುದು ಮತ್ತು ಈ ನಿರ್ಧಾರವನ್ನು ಪ್ರಶ್ನಿಸಿ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸುವಂತಿಲ್ಲ ಎನ್ನುವ ತಿದ್ದುಪಡಿಯೊಂದನ್ನೂ ಅಂದು ಕೈಬಿಡಲಾಗಿತ್ತು.  ಆದರೆ  ಸರ್ಕಾರ ಜಾರಿಗೊಳಿಸಿದ್ದ ಇತರ ಕೆಲ  ತಿದ್ದುಪಡಿಗಳ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರು ಪ್ರತಿಭಟಿಸಿದ್ದರೂ, ಇವುಗಳನ್ನು ಇಂದಿಗೂ ಹಿಂದಕ್ಕೆ ಪಡೆದಿಲ್ಲ. ಹಾಗೂ ಇವೆಲ್ಲಾ ಕಾರಣಗಳಿಂದಾಗಿ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಸುವ ಜನಸಾಮಾನ್ಯರ ಸಂಖ್ಯೆಯೂ ಹೆಚ್ಚಿಲ್ಲ.

ನೂತನ ಶಿಫಾರಸುಗಳು

ಗತವರ್ಷದ ಸೆಪ್ಟೆಂಬರ್ ೨೨ ರಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದ ಸಭೆಯೊಂದರಲ್ಲಿ, ಮಾಹಿತಿ ಹಕ್ಕು ಕಾಯಿದೆಗೆ ಕೆಲವೊಂದು ತಿದ್ದುಪಡಿಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನ ಮಂಥನ ನಡೆದಿತ್ತು. ಇದೀಗ ರಾಜ್ಯ ಸರ್ಕಾರವು ಇವುಗಳಲ್ಲಿ ಬಹುತೇಕ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.

ಇವುಗಳಲ್ಲಿ  ಸಿ ಐ ಡಿ ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿರಿಸುವ ಸಲಹೆಯೂ ಸೇರಿದಂತೆ, ನಾಲ್ಕು ಶಿಫಾರಸುಗಳು  ಪ್ರಮುಖವಾಗಿದ್ದವು. ವಿಶೇಷವೆಂದರೆ ಈ ಸಭೆಯ ಉದ್ದೇಶವು ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದೇ ಆಗಿದ್ದರೂ,ಪದೇಪದೇ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮೂಲಕ  ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಸತಾಯಿಸುವ, ಸರ್ಕಾರಿ ಅಧಿಕಾರಿಗಳ ಮಾತಿನಲ್ಲಿ ಹೇಳುವುದಾದರೆ  " ತಂಟೆಕೋರ ಮಾಹಿತಿ ಹಕ್ಕು ಕಾರ್ಯಕರ್ತ " ರನ್ನು ಕಪ್ಪುಪಟ್ಟಿಗೆ ಸೇರಿಸುವ ಶಿಫಾರಸನ್ನು ಸರ್ಕಾರ ಇದೀಗ ಕೈಬಿಟ್ಟಿದೆ. ಈ ತಿದ್ದುಪಡಿಯು ಜಾರಿಗೆ ಬಂದಲ್ಲಿ ಎಸ್.ಆರ್ . ಹಿರೇಮಠರೂ ಸೇರಿದಂತೆ, ರಾಜ್ಯದ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಕಪ್ಪುಪಟ್ಟಿಯಲ್ಲಿ ಸ್ಥಾನವನ್ನು ಗಳಿಸುತ್ತಿದ್ದುದರಲ್ಲಿ ಸಂದೇಹವಿಲ್ಲ !. ಇದಲ್ಲದೇ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಗಳನ್ನು ಒದಗಿಸುವಾಗ, ಅಂಚೆ ವೆಚ್ಚವನ್ನು ಅವರಿಂದ ವಸೂಲು ಮಾಡುವ ಸಲಹೆಯೂ ಹಾಸ್ಯಾಸ್ಪದವೆನಿಸುತ್ತದೆ. ಏಕೆಂದರೆ ಗತವರ್ಷದಲ್ಲಿ ಕರ್ನಾಟಕದ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರು ಕೈಗೊಂಡಿದ್ದ ವಿದೇಶ ಪ್ರವಾಸಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ನಾವು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಮಾಹಿತಿಗಳನ್ನು ನೀಡಲು ಕೆಲ ಸಮಿತಿಗಳ ಸಾ. ಮಾ. ಅಧಿಕಾರಿಗಳು ನೂರಾರು ರೂಪಾಯಿ ಅಂಚೆ ಶುಲ್ಕವನ್ನು ವಸೂಲು ಮಾಡಿದ್ದರು.ತತ್ಪರಿಣಾಮವಾಗಿ ನೂರಾರು ಪುಟಗಳ ಈ ಮಾಹಿತಿಗಳು ಬಳಕೆದಾರರ ಹಿತರಕ್ಷಣಾ ವೇದಿಕೆಯ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದವು. (ಈ ರೀತಿಯಲ್ಲಿ ಗತವರ್ಷದಲ್ಲೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ವಿಚಾರವನ್ನು ಮತ್ತೆ ಹೊಸದಾಗಿ ಶಿಫಾರಸು ಮಾಡಿರುವುದಾದರೂ ಏಕೆಂದು ನಮಗೂ ತಿಳಿದಿಲ್ಲ.) ಪ್ರಾಯಶಃ ಕೇಂದ್ರ ಸರಕಾರ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಅರ್ಜಿದಾರರಿಂದ  ಅಂಚೆ ವೆಚ್ಚವನ್ನು ವಸೂಲು ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿರಲೂಬಹುದು.

 ಆದರೆ ಈ ಕಾಯಿದೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದ್ದಲ್ಲಿ, ಅಪೇಕ್ಷಿತ ಮಾಹಿತಿಗಳನ್ನು ತಮ್ಮ ಅಂತರ್ಜಾಲ ವಿಳಾಸ ನಮೂದಿಸಿದ ಅರ್ಜಿದಾರರಿಗೆ ಉಚಿತವಾಗಿ ಇ – ಮೇಲ್ ಮೂಲಕ ಕಳಿಸಬಹುದಾಗಿದೆ. ಇದರಿಂದಾಗಿ ಅಪೇಕ್ಷಿತ ಮಾಹಿತಿಗಳನ್ನು ತ್ವರಿತಗತಿಯಲ್ಲಿ ಹಾಗೂ ಅಂಚೆ ಮತ್ತು ಕಾಗದಗಳ ವೆಚ್ಚವಿಲ್ಲದೇ ಕಳುಹಿಸಬಹುದಾಗಿದೆ. ಇ – ಆಡಳಿತವನ್ನು ಅನುಷ್ಠಾನಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿರುವ ಸರ್ಕಾರಕ್ಕೆ, ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೊಳಿಸುವುದು ನಿಶ್ಚಿತವಾಗಿಯೂ ಹೊರೆಯೆನಿಸಲಾರದು.

ಕೊನೆಯ ಮಾತು  

ವಿಶೇಷವೆಂದರೆ ದ್ವಿತೀಯ ಆಡಳಿತ ಸುಧಾರಣಾ ಆಯೋಗವು ಗತದಶಕದಲ್ಲಿ ಈ ಕಾಯಿದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಸೂಚಿಸಿದ್ದ ಅನೇಕ ಸಲಹೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದೀಗ ರಾಜ್ಯ ಸರ್ಕಾರವು ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು “ ಜನಪ್ರಿಯ “ ಗೊಳಿಸುವ ನೆಪದಲ್ಲಿ, ಇದನ್ನು ಮತ್ತಷ್ಟು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಮಾತ್ರ ಸರ್ವಥಾ ಸಮರ್ಥನೀಯವಲ್ಲ.

ಡಾ.ಸಿ. ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಪುತ್ತೂರು



No comments:

Post a Comment