Tuesday, February 24, 2015

SWINE FLU - IS BACK WITH A BANG


ಮರಳಿ ಬಂದಿಹುದು : ಮಾರಕ ಹಂದಿ ಜ್ವರ

೨೦೦೯ ರ ಮಾರ್ಚ್ ತಿಂಗಳಿನಲ್ಲಿ ಮೆಕ್ಸಿಕೋ ದೇಶದ ಪುಟ್ಟ ಬಾಲಕನೊಬ್ಬನನ್ನು ಬಲಿಪಡೆಯುವುದರೊಂದಿಗೆ ತನ್ನ ನೂತನ ಅವತಾರವನ್ನು ತೋರಿದ್ದ ಹಾಗೂ ಹಂದಿಜ್ವರ ಎಂದು ಹೆಸರಿದ್ದ ಈ ವಿನೂತನ ಇನ್ಫ್ಲುಯೆಂಜಾ ಜ್ವರವು, ಕೇವಲ ಎರಡು ತಿಂಗಳುಗಳಲ್ಲಿ ವಿಶ್ವದ ೭೪ ರಾಷ್ಟ್ರಗಳಿಗೆ ಹರಡಿತ್ತು !.

ಫ್ಲೂ ಜ್ವರದ ಪ್ರಭೇದ

ನಮ್ಮ ದೇಶದಲ್ಲಿ ಮಳೆಗಾಲ ಆರಂಭವಾದೊಡನೆ  ಪ್ರತ್ಯಕ್ಷವಾಗುವ ಸಾಮಾನ್ಯ ಫ್ಲೂ ( ಇನ್ಫ್ಲುಯೆಂಜಾ ) ಜ್ವರದ ಲಕ್ಷಣಗಳನ್ನೇ ತೋರುವ ಎಚ್ ೧ ಎನ್ ೧ ಎನ್ನುವ ವೈರಸ್ ಗಳಿಂದ ಉದ್ಭವಿಸುವ ಹಾಗೂ " ಹಂದಿಜ್ವರ " ಎಂದು ಕರೆಯಲ್ಪಡುವ ಸಾಂಕ್ರಾಮಿಕ ವ್ಯಾಧಿಗೆಈ ಬಾರಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಇತ್ತೀಚಿನ ವರದಿಗಳಂತೆ ಸುಮಾರು ೧೩,೦೦೦ ಕ್ಕೂ ಅಧಿಕ ಜನರು ಈ ಸೋಂಕಿನಿಂದ ಬಳಲುತ್ತಿದ್ದು, ೮೦೦ ಕ್ಕೂ ಅಧಿಕಜನರು ಮೃತಪಟ್ಟಿದ್ದಾರೆ.

೨೦೦೯ ರಲ್ಲಿ ಮೊದಲ ಬಾರಿಗೆ ಬಾರತದಲ್ಲಿ ಪತ್ತೆಯಾಗಿದ್ದ ಹಂದಿಜ್ವರವು ೬೯೫ ಜನರಿಗೆ ಹರಡಿದ್ದು, ಇದರಲ್ಲಿ ೧೨೫ ರೋಗಿಗಳು ಮೃತಪಟ್ಟಿದ್ದರು. ಬಳಿಕ ೨೦೧೦ ನೆ ಇಸವಿಯಲ್ಲಿ  ೧೦,೦೦೦ ಕ್ಕೂ ಅಧಿಕ ಮಂದಿಗೆ ಈ  ಸೋಂಕು ಹಬ್ಬಿದ್ದು, ಇದಕ್ಕೆ ೧೦೩೫ ಜನರು ಬಲಿಯಾಗಿದ್ದರು.  ಈ ವ್ಯಾಧಿಗೆ ಕಾರನವೆನಿಸಿರುವ ವೈರಸ್ ಗಳು ಇದೀಗ ಮತ್ತಷ್ಟು ಪ್ರಬಲಗೊಂಡಿದ್ದು, ಕಾಡ್ಗಿಚ್ಚಿನಂತೆ ಹರಡುತ್ತಿವೆ. ವೈದ್ಯಕೀಯ ವಿಜ್ಞಾನಿಗಳ ಅನಿಸಿಕೆಯಂತೆ ಹಂದಿ ಜ್ವರದ ವೈರಸ್ ಗಳು ಕ್ರಮೇಣ " ಪರಿವರ್ತನೆ " ಗೊಳ್ಳುತ್ತಾ, ತಮ್ಮ ತೀವ್ರತೆ ಮತ್ತು ಮಾರಕತೆಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ.

೨೦೦೯ ರ ಎಪ್ರಿಲ್ ನಲ್ಲಿ ಈ "ನೂತನ ಎಚ್ ೧ ಎನ್ ೧ ವೈರಸ್ " ನ್ನು ಗುರುತಿಸಲಾಗಿದ್ದು, ಇದು ಇನ್ಫ್ಲುಯೆಂಜಾ ಎ ವೈರಸ್ ಗುಂಪಿಗೆ ಸೇರಿದ ವೈರಸ್ ಗಳ ನಾಲ್ಕು ತಳಿಗಳು ಪರಿವರ್ತನೆಗೊಂಡು ಉದ್ಭವಿಸಿರಬೇಕೆಂದು ಊಹಿಸಲಾಗಿದೆ.

ರೋಗ ಲಕ್ಷಣಗಳು

ತಲೆ,ಕೈಕಾಲುಗಳು, ಬೆನ್ನು ಮತ್ತು ಸೊಂಟಗಳಲ್ಲಿ ವಿಪರೀತ ನೋವು, ಶೀನು, ಕೆಮ್ಮು, ಗಂಟಲಿನ ಕೆರೆತ ಹಾಗೂ ನೋವು, ಕೆಲವರಲ್ಲಿ ಅಲ್ಪ ಪ್ರಮಾಣದ ಜ್ವರ  ಹಾಗೂ ಮತ್ತೆ  ಕೆಲವರಲ್ಲಿ ಚಳಿಜ್ವರದೊಂದಿಗೆ ನಡುಕ, ವಾಂತಿಭೇದಿ ಮತ್ತು ವ್ಯಾಧಿ ತೀವ್ರವಾಗಿ ಉಲ್ಬಣಿಸಿದಲ್ಲಿ ನ್ಯುಮೋನಿಯಾ ಅಥವಾ ಶ್ವಾಸಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. ಇದಲ್ಲದೇ ಕೆಲರೋಗಿಗಳಲ್ಲಿ ಶರೀರವನ್ನು ಹಿಂಡಿ ಹಿಪ್ಪೆಮಾಡುವಂತಹ ಕೆಮ್ಮು ತಲೆದೋರುವುದು ಅಪರೂಪವೇನಲ್ಲ.

ಪತ್ತೆಹಚ್ಚುವುದೆಂತು?

ಎಚ್ ೧ ಎನ್ ೧ ವೈರಸ್ ಗಳನ್ನೂ ನಿಖರವಾಗಿ ಪತ್ತೆಹಚ್ಚಬಲ್ಲ ಪರೀಕ್ಷಾ ವಿಧಾನಗಳು ಲಭ್ಯವಿದ್ದರೂ, ಇವುಗಳ ವೆಚ್ಚ ತುಸು ದುಬಾರಿಯಾಗಿದೆ. ಇದರ ಪರೀಕ್ಷಾ ಕಿಟ್ ಗಳನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಬ್ಬ ರೋಗಿಯ ಪರೀಕ್ಷೆಗೆ ಇದೀಗ ರಾಜ್ಯ ಸರ್ಕಾರವು ೨೫೦೦ ರೂ. ನಿಗದಿಸಿದ್ದು, ಇದಕ್ಕೂ ಅಧಿಕ ಶುಲ್ಕವನ್ನು ವಿಧಿಸದಂತೆ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಸೂಚನೆಯನ್ನು ನೀಡಿದೆ.

ಚಿಕಿತ್ಸೆ

ಹಂದಿಜ್ವರ ಪೀಡಿತ ರೋಗಿಗಳಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಲಾಗುವುದಾದರೂ, ಈ ವ್ಯಾಧಿಯನ್ನು ನಿಯಂತ್ರಿಸಲು ತಾಮಿಫ್ಲೂ ಎನ್ನುವ ಔಷದವನ್ನು ನೀಡಲೇಬೇಕಾಗುವುದು. ಇದನ್ನು ವಿದೇಶದಿಂದ ಆಮದು ಮಾಡಬೇಕಾಗಿತ್ತಾದರೂ, ೨೦೧೦ ರಲ್ಲೇ ಇದರ ಜೆನೆರಿಕ್ ರೂಪದ ಔಷದವು ನಮ್ಮ ದೇಶದ ಔಷದ ತಯಾರಿಕಾ ಸಂಸ್ಥೆಗಳು ಸಿದ್ಧಪಡಿಸಿದ್ದವು.ಈ ಔಷದದೊಂದಿಗೆ ರೋಗಿಗೆ ಸಂಪೂರ್ಣ ವಿಶ್ರಾಂತಿ ಮತ್ತು ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ನೀಡಬೇಕಾಗುವುದು. ಅಲ್ಪಪ್ರಮಾಣದ ರೋಗಿಗಳಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ, ಸಂದರ್ಭೋಚಿತವಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಹಂದಿಜ್ವರಕ್ಕೆ ಬಲಿಯಾಗುವವರಲ್ಲಿ ವಯೋವೃದ್ಧರು, ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿದ್ದವರು, ಪ್ರಮುಖ ಅಂಗಾಂಗಗಳಿಗೆ ಸಂಬಂಧಿಸಿದ ವ್ಯಾಧಿಪೀಡಿತರು, ರೋಗನಿರೋಧಕ ಶಕ್ತಿಯ ಕೊರತೆಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಂದ ಪೀಡಿತರು ಮತ್ತು ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಆದರೆ ಈ ಬಾರಿ ಇದಕ್ಕೆ ಬಲಿಯಾದವರ ಪ್ರಮಾಣವು ತುಸು ಹೆಚ್ಚಾಗಿದೆ.

ತಡೆಗಟ್ಟುವುದೆಂತು?

ಶಂಕಿತ ಹಂದಿಜ್ವರ ಪೀಡಿತರನ್ನು ಪ್ರತ್ಯೇಕವಾಗಿ ಇರಿಸಿ ಅವಶ್ಯಕ ಪರೀಕ್ಷೆಯನ್ನು ನಡೆಸಿ, ಸಂದೇಹ ಧೃಢ ಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡವುದು ಅತ್ಯವಶ್ಯಕವೆನಿಸುವುದು.ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಜನಜಂಗುಳಿ ಸೇರುವಲ್ಲಿ ನಿಗದಿತ ಗುಣಮಟ್ಟದ “ ಮಾಸ್ಕ್ “ ಗಳನ್ನು ಧರಿಸುವುದು, ಯಾರನ್ನೇ ಭೇಟಿಯಾದಾಗ ಅಥವಾ ಬೀಳ್ಕೊಡುವಾಗ ಹಸ್ತಲಾಘವ ನೀಡದಿರುವುದು, ತಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ಪದೇ ಪದೇ ಸ್ಪರ್ಶಿಸದಿರುವುದು, ಮತ್ತೊಬ್ಬರು ಬಳಸಿರುವ ವಸ್ತುಗಳನ್ನು ಕೈಯ್ಯಿಂದ ಮುಟ್ಟದಿರುವುದು, ಫ್ಲೂ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು, ಕೆಮ್ಮುವಾಗ ಹಾಗೂ ಶೀನುವಾಗ ಕರವಸ್ತ್ರದಿಂದ ಬಾಯಿ – ಮೂಗುಗಳನ್ನು ಮುಚ್ಚಿಕೊಳ್ಳುವುದು,ಆಗಾಗ ತಮ್ಮ ಕೈಗಳನ್ನು ಸೋಪು ಹಚ್ಚಿ ತೊಳೆಯುವುದು ಹಾಗೂ ಮತ್ತೊಬ್ಬರು ಬಳಸಿದ ಕರವಸ್ತ್ರ ಮತ್ತಿತರ ವಸ್ತುಗಳನ್ನು ಬಳಸದಿರುವುದೇ ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ವ್ಯಾಧಿಯನ್ನು ತಕ್ಕ ಮಟ್ಟಿಗೆ ತಡೆಗಟ್ಟಬಹುದು.

ಲಸಿಕೆಗಳು ಲಭ್ಯವಿದೆಯೇ?

೨೦೧೦ ರಲ್ಲಿ ನಮ್ಮ ದೇಶದ ಕೆಲ ಭಾಗಗಳಲ್ಲಿ ಹಂದಿಜ್ವರ ಪ್ರತ್ಯಕ್ಷವಾದಾಗ, ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಉಪಚರಿಸುವ ಅರೆವೈದ್ಯಕೀಯ ಸಿಬಂದಿಗಳಿಗೆ ಲಸಿಕೆಯೊಂದನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಈ ಲಸಿಕೆಯು ಇದೀಗ ಪರಿವರ್ತನೆಗೊಂಡಿರುವ ವೈರಸ್ ಗಳ ವಿರುದ್ಧ ಅಪೇಕ್ಷಿತ ರಕ್ಷಣೆಯನ್ನು ನೀಡುವ ಸಾಧ್ಯತೆಗಳಿಲ್ಲ. ಇದೀಗ ಪರಿವರ್ತನೆಗೊಂಡು ಪ್ರಬಲವಾಗಿರುವ ತಳಿಗಳ ವಿರುದ್ಧ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು, ವೈದ್ಯಕೀಯ ವಿಜ್ಞಾನಿಗಳು ಇನ್ನಷ್ಟೇ ಸಂಶೋಧಿಸಬೇಕಿದೆ.

ಅದೇನೇ ಇರಲಿ, ಪ್ರಸ್ತುತ ಫ್ಲೂ ಜ್ವರದ ಲಕ್ಷಣಗಳನ್ನು ಹೋಲುವ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಪೀಡಿಸಲು ಆರಂಭಿಸಿದಲ್ಲಿ, ನಿಮ್ಮ ನಂಬಿಗಸ್ತ ವೈದ್ಯರನ್ನು ಸಂದರ್ಶಿಸಿ ಅವರ ಸಲಹೆಯನ್ನು ಪಡೆಯಿರಿ. ಅವರು ಸೂಚಿಸಿದಲ್ಲಿ ಮಾತ್ರ ಎಚ್ ೧ ಎನ್ ೧ ವೈರಸ್ ಗಳ ಇರುವಿಕೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಅನಪೇಕ್ಷಿತ ಹಾಗೂ ಪುಕ್ಕಟೆ ಸಲಹೆಗಳನ್ನು ನೀಡುವ ಬಂಧುಮಿತ್ರರ ಮಾತುಗಳಿಗೆ ಮರುಳಾಗದಿರಿ !.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



2 comments: