Saturday, February 21, 2015

ROAD SAFETY - TODAYS NECESSITY




      ರಸ್ತೆ ಸುರಕ್ಷತೆ : ಇಂದಿನ ಅವಶ್ಯಕತೆ


    ನಿರಂತರವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ಭಾರತೀಯರು ಖರೀದಿಸಿ ಬಳಸುತ್ತಿರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.ಇದರೊಂದಿಗೆ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳುಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ.

ಈ ಜಗತ್ತಿನಲ್ಲೇ ಅತ್ಯಧಿಕ ಜನರನ್ನು ಬಲಿಪಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಹಾಗೂ ಇದೇ ಕಾರಣದಿಂದಾಗಿ “ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರ ರಾಜಧಾನಿ “ ಎಂದೇ ಕುಖ್ಯಾತವಾಗಿದೆ. ೨೦೦೭ ರ ತನಕ ಈ ಸ್ಥಾನದಲ್ಲಿದ್ದ ಚೀನಾ ದೇಶವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಗಳಿಸಿದ್ದ ಭಾರತವು, ಇಂದಿನ ತನಕ ಈ ಸ್ಥಾನವನ್ನು ತೆರವುಗೊಳಿಸಿಲ್ಲ !. 

ಕಳೆದ ೧೦ ವರ್ಷಗಳಲ್ಲಿ ೧೦ ಲಕ್ಷಕ್ಕೂ ಅಧಿಕ ಭಾರತೀಯರು ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆ. ವಿಶೇಷವೆಂದರೆ ಇದು ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವ ಜನರ ಶೇ. ೧೦ ರಷ್ಟಾಗಿದೆ !.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ, ಕಳೆದ ೨೭ ವರ್ಷಗಳಿಂದ ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ರಸ್ತೆ ಸುರಕ್ಷತಾ ಸಪ್ತಾಹವನ್ನು ವರ್ಷಂಪ್ರತಿ ಜನವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಆದರೆ ಕೇವಲ ಕಾಟಾಚಾರಕ್ಕಾಗಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮವು, ನಿಗದಿತ ಉದ್ದೇಶವನ್ನು ಈಡೇರಿಸಲು ವಿಫಲವಾಗಿದೆ.

ಅಂಕಿ ಅಂಶಗಳು 

೨೦೧೩ ರಲ್ಲಿ ದೇಶಾದ್ಯಂತ ೪,೪೩,೦೦೧ ರಸ್ತೆ ಅಪಘಾತಗಳು ಸಂಭವಿಸಿದ್ದು, ೧,೩೭,೪೨೩ ಜನರು ಬಲಿಯಾಗಿದ್ದರು. ಜೊತೆಗೆ ೪,೬೯,೮೮೨ ಜನರು ಗಾಯಗೊಂಡಿದ್ದರು. ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರಲ್ಲಿ ಶೇ. ೫೦ ರಷ್ಟು ಜನರು ಪಾದಚಾರಿಗಳು, ಸೈಕಲ್ ಸವಾರರು ಮತ್ತು ದ್ವಿಚಕ್ರ ವಾಹನ ಸವಾರರಾಗಿರುವುದಲ್ಲದೇ, ೧೫ ರಿಂದ ೨೯ ವರ್ಷ ವಯಸ್ಸಿನವರೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡ ಶೇ. ೫೦ ರಷ್ಟು ಜನರು ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದ ಕಾರಣದಿಂದಾಗಿಯೇ ಮೃತಪಡುತ್ತಾರೆ. ಏಕೆಂದರೆ ಸ್ಥಳದಲ್ಲಿ ಹಾಜರಿರುವ ಶೇ.೭೪ ಜನರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ದು ದಾಖಲಿಸಲು ಹಿಂಜರಿಯುತ್ತಾರೆ !.

ನಮ್ಮ ದೇಶದಲ್ಲಿ ಪ್ರತಿ ೪ ನಿಮಿಷಗಳಿಗೆ ಒಬ್ಬ ವ್ಯಕ್ತಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದು, ವರ್ಷಂಪ್ರತಿ ಈ ಸಂಖ್ಯೆಯಲ್ಲಿ ಶೇ.೮ ರಷ್ಟು ಹೆಚ್ಚಳವಾಗುತ್ತಿದೆ. ಈ ಪ್ರಮಾಣವು  ಇದೇ ರೀತಿಯಲ್ಲಿ  ಮುಂದುವರೆದಲ್ಲಿ, ೨೦೩೦ ರಲ್ಲಿ ಈ ಸಂಖ್ಯೆಯು ೨.೬೦ ಲಕ್ಷವನ್ನು ತಲುಪಲಿದೆ.

ಕಾರಣಗಳೇನು ?

ಉತ್ತಮ ರಸ್ತೆಗಳ ಹಾಗೂ  ಸುರಕ್ಷಿತ ಕಾಲುದಾರಿಗಳ ಅಭಾವ, ಸಂಚಾರಿ ಪೋಲೀಸರ ಅನುಪಸ್ಥಿತಿ ಅಥವಾ ನಿಷ್ಕ್ರಿಯತೆ, ಸುಗಮ ಸಂಚಾರಕ್ಕಾಗಿ ರೂಪಿಸಿರುವ ಕಾನೂನುಗಳನ್ನು ಅನುಷ್ಠಾನಗೊಳಿಸದಿರುವುದು – ಅನುಸರಿಸದಿರುವುದು, ಕಾನೂನುಗಳನ್ನು ಉಲ್ಲಂಘಿಸಿದವರ ವಿರುದ್ಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು  ಕೈಗೊಳ್ಳದಿರುವುದು, ಸಾರಿಗೆ ಮತ್ತು  ಪೋಲೀಸ್ ಇಲಾಖೆಗಳಲ್ಲಿನ ಅನಿಯಂತ್ರಿತ ಭ್ರಷ್ಟಾಚಾರವೇ ಮುಂತಾದ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಗಳು ದಿನೇದಿನೇ ಹೆಚ್ಚುತ್ತಿವೆ.

ಇದಲ್ಲದೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆಗಳ ದುಸ್ಥಿತಿ, ಮೋಟಾರು ವಾಹನಗಳ ಮತ್ತು ಸಾರಿಗೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ – ಸೀಟ್ ಬೆಲ್ಟ್ ಧರಿಸದಿರುವುದು, ಮದ್ಯ – ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು, ಅತಿವೇಗ – ನಿರ್ಲಕ್ಷ್ಯದ ಚಾಲನೆ, ವಾಹನಗಳ ನಡುವೆ ಪೈಪೋಟಿ, ಬೀದಿಬದಿ ವ್ಯಾಪಾರಿಗಳ ಕಾಟ, ರಸ್ತೆ – ರಸ್ತೆಬದಿಗಳ ಅಗೆತ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಬೀದಿನಾಯಿ – ಜಾನುವಾರುಗಳ ಕಾಟ, ಅನಿರೀಕ್ಷಿತವಾಗಿ ರಸ್ತೆಯನ್ನು ದಾಟುವ ಪಾದಚಾರಿಗಳು, ಪ್ರಖರವಾದ – ಕಣ್ಣುಕುಕ್ಕುವ ಹೆಡ್ ಲೈಟ್ ,ವಾಹನ ಚಾಲನಾ ನೈಪುಣ್ಯವಿಲ್ಲದವರು – ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದವರು ಅತಿವೇಗದಲ್ಲಿ ಹಾಗೂ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದು, ಅತಿಯಾದ ವೇಗದಲ್ಲಿ ಚಲಿಸಬಲ್ಲ ಆಧುನಿಕ ವಾಹನಗಳೇ ಮುಂತಾದ ಕಾರಣಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಕಾನೂನುಗಳನ್ನು ರೂಪಿಸಿದ್ದರೂ, ಇವುಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ.

ಬಲಿಯಾಗುತ್ತಿರುವ ಮಕ್ಕಳು  

ವಿಶ್ವಾದ್ಯಂತ ಎಳೆಯ ವಯಸ್ಸಿನ ಮಕ್ಕಳ ಅಕಾಲಿಕ ಮರಣಕ್ಕೆ ರಸ್ತೆ ಅಪಘಾತಗಳೇ ಪ್ರಮುಖ ಕಾರಣವೆನಿಸಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೦೦ ಮಕ್ಕಳು ರಸ್ತೆ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಇದಲ್ಲದೆ ಸುಮಾರು ೧೦ ಲಕ್ಷ ಮಕ್ಕಳು ಗಂಭೀರ ಗಾಯಗಳಿಗೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ೨೦೧೦ ರಲ್ಲಿ ಅಪ್ರಾಪ್ತ ಮಕ್ಕಳ ಮರಣಕ್ಕೆ ಮೂಲವೆನಿಸುತ್ತಿದ್ದ ಕಾರಣಗಳಲ್ಲಿ ರಸ್ತೆ ಅಪಘಾತವು ೧೧ ನೆಯ ಸ್ಥಾನದಲ್ಲಿತ್ತು. ಆದರೆ ಮುಂದಿನ ೨೦ ವರ್ಷಗಳಲ್ಲಿ, ಅರ್ಥಾತ್ ೨೦೩೦ ರಲ್ಲಿ ಇದು ೫ ನೆಯ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ೨೦೨೦ ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗಲಿರುವ ಮಕ್ಕಳ ಪ್ರಮಾಣವು ಶೇ. ೧೪೯ ರಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಜನಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವುದೇ ಇದಕ್ಕೆ ಕಾರಣವೆನಿಸಲಿದೆ.

ಪರಿಹಾರವೇನು ?
ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರ ನೈಪುಣ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು,ಸಾರಿಗೆ - ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವುದು, ನಿಯಮಗಳು - ಕಾನೂನುಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸುವುದು, ಮತ್ತೆ ಇದೇ ತಪ್ಪಿನ ಪುನರಾವರ್ತನೆ ಮಾಡಿದಲ್ಲಿಇನ್ನಷ್ಟು ದಂಡದೊಂದಿಗೆ ನಿಗದಿತ ಅವಧಿಗೆ  ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವುದು, ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಸಂಚಾರ ವಿಭಾಗದ ಪೊಲೀಸರು ನಿಯಮಿತವಾಗಿ ವಾಹನಗಳ - ಚಾಲಕರ ದಾಖಲೆಗಳನ್ನು ಪರಿಶೀಲಿಸುವುದು,ಗಂಭೀರ – ಮಾರಕ  ಅಪಘಾತ ಎಸಗಿದ ಚಾಲಕರ ಪರವಾನಿಗೆಯನ್ನು ರದ್ದುಪಡಿಸುವುದೇ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ.

ಇದರೊಂದಿಗೆ ಉತ್ತಮ ಗುಣಮಟ್ಟದ ರಸ್ತೆಗಳು, ಸುರಕ್ಷಿತವಾದ ಕಾಲುದಾರಿಗಳುಸಂಚಾರಿ ಪೋಲೀಸರ ಕಣ್ಗಾವಲುಅವಶ್ಯಕತೆಯಿರುವಲ್ಲಿ ಸಂಚಾರ ಸೂಚನಾ ಫಲಕಗಳ ಅಳವಡಿಕೆಪಾದಚಾರಿಗಳು ರಸ್ತೆಯನ್ನು ದಾಟುವಲ್ಲಿ ಜೀಬ್ರಾ ಕ್ರಾಸಿಂಗ್ ಗುರುತಿನ ಅಳವಡಿಕೆ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮತ್ತಷ್ಟು ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಅಂತಿಮವಾಗಿ ರಸ್ತೆಗಳನ್ನು ಬಳಸುವ ಪ್ರತಿಯೊಬ್ಬರೂ ಸಾರಿಗೆ - ಸಂಚಾರ ನಿಯಮಗಳನ್ನು ಪರಿಪಾಲಿಸಿದಲ್ಲಿ, ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವರ ಸಂಖ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು



No comments:

Post a Comment