Monday, October 7, 2013

Vitiligo- naagadosha?


      ತೊನ್ನು ಎನ್ನುವ ವ್ಯಾಧಿಗೆ ದೋಷ- ಶಾಪಗಳು ಕಾರಣವಲ್ಲ! 

  ಭಾರತದಲ್ಲಿ "ತೊನ್ನು" ಎನ್ನುವ ಚರ್ಮರೋಗಕ್ಕೆ ಪೂರ್ವಜನ್ಮದ ಶಾಪಗಳು, ನಾಗದೋಷ ಅಥವಾ ದೇವರ ಶಾಪವೇ ಕಾರಣವೆಂದು ವಿದ್ಯಾವಂತರೂ ಸೇರಿದಂತೆ ಅನೇಕರು ನಂಬುತ್ತಾರೆ. ತೊನ್ನು ಪ್ರತ್ಯಕ್ಷವಾದೊಡನೆ ಜ್ಯೋತಿಷಿಗಳ ಬಳಿಗೆ ಧಾವಿಸಿ, ತಮ್ಮನ್ನು ಬಾಧಿಸುತ್ತಿರುವ ದೋಷಗಳನ್ನು ಪತ್ತೆಹಚ್ಚಿದ ಬಳಿಕ, ಇವುಗಳ ಪರಿಹಾರಕ್ಕಾಗಿ ಶಾಸ್ತ್ರೋಕ್ತ ಪೂಜೆ- ಪುನಸ್ಕಾರಗಳನ್ನು ತಪ್ಪದೆ ಮಾಡಿಸುತ್ತಾರೆ. ಈ ಪ್ರಾಯಶ್ಚಿತಗಳು ಫಲಪ್ರದ ಎನಿಸುತ್ತಿಲ್ಲವೆಂದು ಮನವರಿಕೆಯಾದ ಬಳಿಕವೇ ಚರ್ಮರೋಗ ತಜ್ಞರ ಚಿಕಿತ್ಸೆಯನ್ನು ಪ್ರಯೋಗಿಸುತ್ತಾರೆ. ಆದರೆ ತೊನ್ನು ಆರಂಭವಾಗಿ ಅದಾಗಲೇ ಒಂದೆರಡು ವರ್ಷಗಳು ಕಳೆದು, ಶರೀರದ ವಿವಿಧ ಭಾಗಗಳಲ್ಲಿ ಮೂಡಿರುವ ಬಿಳಿಯ ಕಲೆಗಳು ಸಾಕಷ್ಟು ಬೆಳೆದಿರುವುದರಿಂದಾಗಿ, ವೈದ್ಯರ ಚಿಕಿತ್ಸೆಯು ಅಲ್ಪಾವಧಿಯಲ್ಲಿ ಅಪೇಕ್ಷಿತ ಪರಿಣಾಮವನ್ನು ತೋರದಿದ್ದಲ್ಲಿ ವೈದ್ಯರ ಚಿಕಿತ್ಸೆಯನ್ನೇ ನಿಲ್ಲಿಸುತ್ತಾರೆ!. 

ಲ್ಯುಕೋಡರ್ಮ 

ಸಹಸ್ರಾರು   ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದ ಸಂಹಿತೆಗಳಲ್ಲಿ "ಶ್ವೇತ ಕುಷ್ಠ " ಎನ್ನುವ ನಾಮಧೇಯದಿಂದ ಗುರುತಿಸಿದ್ದ ಹಾಗೂ ಆಡುಭಾಷೆಯಲ್ಲಿ ತೊನ್ನು ಎಂದು ಕರೆಯಲ್ಪಡುವ ಚರ್ಮರೋಗವು ನಿಜಕ್ಕೂ ಕುಷ್ಠರೋಗದ ಪ್ರಭೇದವಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ "ವಿಟಿಲಿಗೊ" ಎಂದು ಕರೆಯಲ್ಪಡುವ ಈ ವ್ಯಾಧಿಪೀಡಿತರ ಶರೀರದ ಕೆಲಭಾಗಗಳಲ್ಲಿನ ಚರ್ಮವು ಬಿಳಿಯ ಬಣ್ಣಕ್ಕೆ ಬದಲಾಗುವುದರಿಂದ ಲ್ಯುಕೋಡರ್ಮ(ಲ್ಯುಕೋ= ಬಿಳಿ, ಡರ್ಮ= ಚರ್ಮ) ಎಂದೂ ಕರೆಯುತ್ತಾರೆ. 

ಅಟೋ ಇಮ್ಯೂನ್ ಡಿಸಾರ್ಡರ್ ಎನ್ನುವ, ನಮ್ಮ ಶರೀರದ ಸ್ವಾಭಾವಿಕ ರೋಗಪ್ರತಿರೋಧಕ ಪ್ರಕ್ರಿಯೆಗಳಲ್ಲಿ ಸಂಭವಿಸಬಲ್ಲ ವ್ಯತ್ಯಯಗಳಿಂದಾಗಿ ಮತ್ತು ಕೆಲ ಬಾಹ್ಯ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವಿಸಬಲ್ಲದು. ವಿಶೇಷವೆಂದರೆ ಅಟೋ ಇಮ್ಯೂನ್ ಡಿಸಾರ್ಡರ್ ವರ್ಗಕ್ಕೆ ಸೇರಿರದ ಚಿಕುನ್ ಗುನ್ಯಾ ವ್ಯಾಧಿಪೀಡಿತರಲ್ಲಿ ಅಲ್ಪಪ್ರಮಾಣದ ರೋಗಿಗಳಲ್ಲೂ ತೊನ್ನು ಪ್ರತ್ಯಕ್ಷವಾಗಿರುವುದು ತಿಳಿದುಬಂದಿದೆ. 

ನಮ್ಮ ಶರೀರದ ಮೇಲೆ ಬ್ಯಾಕ್ಟೀರಿಯ-ವೈರಸ್ ಗಳಂತಹ ರೋಗಾಣುಗಳು ದಾಳಿಮಾಡಿದಾಗ ಹಾಗೂ ಇತರ ಕೆಲ ಸಂದರ್ಭಗಳಲ್ಲಿ, ಇವುಗಳ ವಿರುದ್ಧ ಹೋರಾಡಲು ನಮ್ಮ ಶರೀರವು ಉತ್ಪಾದಿಸುವ "ಪ್ರತಿಕಾಯ" (ಎಂಟಿಬಾಡಿ) ಗಳು, ಪ್ರಮಾದವಶಾತ್ ನಮ್ಮದೇ ದೇಹದ ಜೀವಕೋಶಗಳನ್ನು ನಾಶಪಡಿಸುವ ಸ್ಥಿತಿಯನ್ನು "ಅಟೋ ಇಮ್ಯೂನ್ ಡಿಸಾರ್ಡರ್" ಎಂದು ಕರೆಯುತ್ತಾರೆ. ಈ ಕಾರಣದಿಂದ ಉದ್ಬಹ್ವಿಸಬಲ್ಲ ಇತರ ಕೆಲವು ವ್ಯಾಧಿಗಳಿಂದ ಪೀಡಿತರಾದ ವ್ಯಕ್ತಿಗಳಲ್ಲೂ, ಕೆಲವೊಂದು ಸಂದರ್ಭಗಳಲ್ಲಿ ತೊನ್ನು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ. 

ಮನುಷ್ಯನ ಚರ್ಮಕ್ಕೆ ಸ್ವಾಭಾವಿಕ ಬಣ್ಣವನ್ನು ನೀಡುವ "ಮೆಲನಿನ್ "ಎನ್ನುವ ವರ್ಣಕಾರಕ ದ್ರವ್ಯ (ಪಿಗ್ಮೆಂಟ್) ವನ್ನು ಚರ್ಮದಲ್ಲಿರುವ ಮೆಲನೊಸೈಟ್  ಎನ್ನುವ ಜೀವಕಣಗಳು ಉತ್ಪಾದಿಸುತ್ತವೆ. ಕಾರಣಾಂತರಗಳಿಂದ ನಮ್ಮ ಶರೀರವು ಉತ್ಪಾದಿಸುವ ಪ್ರತಿಕಾಯಗಳು ಈ ಮೆಲನೊಸೈಟ್ ಗಳನ್ನು ನಾಶಪಡಿಸುವುದರಿಂದ, ಶರೀರದ ಈ ಭಾಗದ ಚರ್ಮವು ಬಿಳಿಯ ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತದೆ. ಇದಲ್ಲದೆ ರಬ್ಬರ್ ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಬಳಸುವ ಕೆಲ ವಿಷಕಾರಕ ರಾಸಾಯನಿಕಗಳೂ ಮೆಲನೊಸೈಟ್ ಗಳನ್ನು ನಾಶಪಡಿಸಬಲ್ಲವು. 

ಈ ರೀತಿಯಲ್ಲಿ ಮೆಲನೊಸೈಟ್  ನಾಶವಾಗಿರುವ ಭಾಗದ ಚರ್ಮವು ಬಿಳಿಯಾಗುವುದನ್ನು ಹೊರತುಪಡಿಸಿ, ಇತರ ಯಾವುದೇ ಲಕ್ಷಣಗಳು ಅಥವಾ ತೊಂದರೆಗಳು ಈ ವ್ಯಾಧಿಪೀಡಿತರಲ್ಲಿ ಕಾಣಿಸುವುದಿಲ್ಲ.ಸಾಮಾನ್ಯವಾಗಿ ೧೦ ರಿಂದ ೪೦ ವರ್ಷ ವಯಸ್ಸಿನವರನ್ನು ಹೆಚ್ಚಾಗಿ ಬಾಧಿಸುವ ಈ ವ್ಯಾಧಿಯು, ಕೆಲವೊಮ್ಮೆ ಯಾವುದೇ ವಯಸ್ಸಿನವರನ್ನು ಬಾಧಿಸುವ ಸಾಧ್ಯತೆಗಳಿವೆ. ಶೇ. ೨೫ ರಷ್ಟು ವ್ಯಾಧಿಪೀಡಿತರಲ್ಲಿ ಇದು ಅನುವಂಶಿಕವಾಗಿ ಬಂದಿರುತ್ತದೆ. 

ಶರೀರದ ದ್ವಾರಗಳ (ಕಿವಿ,ಬಾಯಿ, ಮೂಗು, ಮೂತ್ರ ಮತ್ತು ಮಲದ್ವಾರಗಳ ಬಳಿ, ಕಂಕುಳು,ತೊಡೆಸಂದಿ, ಬೆರಳುಗಳು ಹಾಗೂ ಶರೀರದ ಇತರ ಕೆಲಭಾಗಗಳಲ್ಲಿ ಮೂಡುವ ಬಿಳಿಯ ಕಲೆಗಳು ಚಿಕಿತ್ಸೆ ಪಡೆಯದೇ ಅಥವಾ ಚಿಕಿತ್ಸೆಗೆ ಮಣಿಯದೆ ಸುದೀರ್ಘಕಾಲ ಉಳಿದುಕೊಂಡಲ್ಲಿ, ಕಲೆಗಳಿರುವ ಭಾಗದಲ್ಲಿನ ಕೂದಲುಗಳೂ ಬಿಳಿಯ ಬಣ್ಣವನ್ನು ತಾಳುತ್ತವೆ. 

ಚಿಕಿತ್ಸೆ 

ಲ್ಯುಕೊಡರ್ಮ ವ್ಯಾಧಿಯನ್ನು ಗುಣಪಡಿಸಬಲ್ಲ ವಿನೂತನ ಮತ್ತು ಪರಿಣಾಮಕಾರಿ ಚಿಕಿತ್ಸೆಗಳು ಇಂದು ಲಭ್ಯವಿವೆ. ಆದರೆ ರೋಗಿಯ ವಯಸ್ಸು, ಕಲೆಗಳು ಮೂಡಿರುವ ಶರೀರದ ಭಾಗ, ವ್ಯಾಧಿಯ ಅವಧಿ ಮತ್ತು ರೋಗಿಯಲ್ಲಿ ಇರಬಹುದಾದ ಇತರ ಗಂಭೀರ ಕಾಯಿಲೆಗಳಿಗೆ ಅನುಗುಣವಾಗಿ, ಚಿಕಿತ್ಸೆಯು ಸಫಲ ಅಥವಾ ವಿಫಲವೆನಿಸುವ ಸಾಧ್ಯತೆಗಳೂ ಇವೆ. 

ಸಾಮಾನ್ಯವಾಗಿ ಎಳೆಯ ವಯಸ್ಸಿನವರಲ್ಲಿ, ಕೂದಲುಗಳು ಇರುವ ಭಾಗದಲ್ಲಿ ಕಲೆಗಳು ಮೂದಿದ್ದಲ್ಲಿ ಮತ್ತು ಕಲೆಗಳು ಪ್ರತ್ಯಕ್ಷವಾದ ಕೆಲವೇ ದಿನಗಳಲ್ಲಿ ಚಿಕಿತ್ಸೆಯನ್ನು ಆರಂಭಿಸಿದಲ್ಲಿ ಇದು ಸಫಲವಾಗುತ್ತದೆ. ಮಧ್ಯವಯಸ್ಸು ದಾಟಿದ ವ್ಯಕ್ತಿಗಳಲ್ಲಿ ಹಾಗೂ ತುಟಿ,ಅಂಗೈ,ಅಂಗಾಲುಗಳಲ್ಲಿ ಮೂಡಿರುವ ಕಲೆಗಳು ಮತ್ತು ಕಲೆಗಳು ಮೂಡಿ ವರುಷಗಳೇ ಕಳೆದ ಬಳಿಕ ಪಡೆದುಕೊಳ್ಳುವ ಚಿಕಿತ್ಸೆಯು ವಿಫಲವೆನಿಸಬಹುದು. ಆದರೆ ಇಂತಹ ಸಂದರ್ಭಗಳಲ್ಲಿ "ಚರ್ಮ ಕಸಿ" ಯಂತಹ ಶಸ್ತ್ರ ಚಿಕಿತ್ಸಾ ವಿಧಾನಗಳು ಉಪಯುಕ್ತವೆನಿಸಬಹುದು. 

ಲ್ಯುಕೊಡರ್ಮ ದ ಚಿಕಿತ್ಸೆಯನ್ನು ಕನಿಷ್ಠ ೬ ತಿಂಗಳುಗಳಿಂದ ಹಿಡಿದು ಒಂದೆರಡು ವರ್ಷಗಳ ಕಾಲ ಪಡೆದುಕೊಳ್ಳಬೇಕಾಗುವುದು. 

ತಪ್ಪುಕಲ್ಪನೆಗಳು- ಮೂಢ ನಂಬಿಕೆಗಳು 

ತೊನ್ನು ಬಾಧಿಸಲು ನಾಗದೋಷವೇ ಮೂಲಕಾರಣ ಎನ್ನುವ ಮೂಢನಂಬಿಕೆಯ ಜೊತೆಗೆ ಜನಸಾಮಾನ್ಯರಲ್ಲಿ ಸಾಕಷ್ಟು ತಪ್ಪುಕಲ್ಪನೆಗಳೂ ಇವೆ. ಈ ವ್ಯಾದಿಗೆ ಸೂಕ್ತ ಚಿಕಿತ್ಸೆ ಇಲ್ಲದಿರುವುದು, ಕುಟುಂಬದ ಹೆಚ್ಚಿನ ಸದಸ್ಯರನ್ನು ಅನುವಂಶಿಕವಾಗಿ ಬಾಧಿಸುವುದು, ವ್ಯಾಧಿಪೀಡಿತರ ಸಂಪರ್ಕದಿಂದ ಇತರರಿಗೆ ಹರಡುವುದು ಮತ್ತು ರೋಗಿಯ ಶರೀರ ಸಂಪೂರ್ಣ ಬಿಳಿಯಾಗುವುದು  ಎನ್ನುವ ವಿಚಾರಗಳು ಇವುಗಳಲ್ಲಿ ಪ್ರಮುಖವಾಗಿವೆ. 

ವಿಶೇಷವೆಂದರೆ ಈ ವೈಜ್ಞಾನಿಕ ಯುಗದಲ್ಲೂ ಅಧಿಕತಮ ತೊನ್ನು ಪೀಡಿತ ವ್ಯಕ್ತಿಗಳು ತಜ್ಞವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರೊಂದಿಗೆ , ತಮ್ಮನ್ನು ಬಾಧಿಸುತ್ತಿರುವ ದೋಷ,ಶಾಪ ಅಥವಾ ಪಾಪಗಳ ನಿವಾರಣೆಗಾಗಿ ಮಂತ್ರ-ತಂತ್ರ ಅಥವಾ ಪೂಜೆ-ಪುನಸ್ಕಾರಗಳ ಮೊರೆಹೋಗುತ್ತಾರೆ!. 

ಸಮಸ್ಯೆಗಳು 

ಕೆಲವೇ ದಶಕಗಳ ಹಿಂದಿನ ತನಕ ತೊನ್ನುಪೀಡಿತ ವ್ಯಕ್ತಿಗಳು "ಸಾಮಾಜಿಕ ಮುಜುಗರ' ಕ್ಕೆ ಒಳಗಾಗುವುದನ್ನು ತಪ್ಪಿಸಲು ಯಾವುದೇ ಸಭೆ- ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಜೊತೆಗೆ ಈ ವ್ಯಾಧಿಯ "ಕಳಂಕ" ದಿಂದಾಗಿ ಇವರಿಗೆ ಉದ್ಯೋಗ ದೊರೆಯದಿರುವುದು, ವಿವಾಹ ಆಗದಿರುವುದು ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗುವುದು ಸಾಮಾನ್ಯವಾಗಿತ್ತು. ಇಂತಹ ಸಮಸ್ಯೆಗಳನ್ನು ಎದುರಿಸಲಾಗದೇ ಕೊರಗುತ್ತಿದ್ದ ವ್ಯಕ್ತಿಗಳು, ಯಾರೊಂದಿಗೂ ಬೇರೆಯದೇ ಏಕಾಂತಕ್ಕೆ ಶರಣಾಗಿ ಖಿನ್ನತೆಯಂತಹ ಮಾನಸಿಕ ವ್ಯಾಧಿಗಳಿಗೂ ಒಳಗಾಗುತ್ತಿದ್ದರು. 

ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಈ ವ್ಯಾಧಿಪೀಡಿತರನ್ನು ಅಸ್ಪ್ರಶ್ಯರಂತೆ ಕಾಣುವ ಅಥವಾ ಅಘೋಷಿತ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿಸುವ ಮನೋಭಾವ ಜನಸಾಮಾನ್ಯರಲ್ಲಿ ಇಲ್ಲದಾಗಿದೆ. ಇದಕ್ಕೂ ಮಿಗಿಲಾಗಿ ಕ್ಷಿಪ್ರಗತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ರೋಗಮುಕ್ತರಾಗುವ ಅವಕಾಶ ಇರುವುದರಿಂದ, ಜೀವನಪರ್ಯಂತ ಈ ವ್ಯಾಧಿಯೊಂದಿಗೆ ಬದುಕಬೇಕಾದ ಅನಿವಾರ್ಯತೆಯೂ ಇಲ್ಲ. 

ಅಂತಿಮವಾಗಿ ಹೇಳುವುದಾದಲ್ಲಿ ಚರ್ಮದ ಮೇಲೆ ಮೂಡುವ ಬಿಳಿಯ ಕಲೆಗಳೆಲ್ಲವೂ ತೊನ್ನು ಅಲ್ಲ ಎನ್ನುವುದು ನೆನಪಿರಲಿ. ಆದರೆ ಚರ್ಮದ  ಬದಲಾಗುತ್ತಿರುವ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ಚರ್ಮರೋಗ  ಭೇಟಿಯಾಗಿ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಇವೆಲ್ಲಕ್ಕಿಂತ ಮಿಗಿಲಾಗಿ ಇತ್ತೀಚಿನ ಕೆಲ ತಿಂಗಳುಗಳಿಂದ ಕನ್ನಡ ದಿನಪತ್ರಿಕೆಗಳಲ್ಲೂ ಜಾಹೀರಾತುಗಳನ್ನು ನೀಡುತ್ತಿರುವ ನಕಲಿವೈದ್ಯರ ಚಿಕಿತ್ಸೆ ಪಡೆಯಲು ಹೋಗಿ, ಸಹಸ್ರಾರು ರೂಪಾಯಿಗಳೊಂದಿಗೆ ನಿಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೬-೦೨-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ    

1 comment:

  1. Very nice blog thanks for sharing this information. Keep posting... Also read our blog to know more about vitiligo skin disease by visiting our blog.

    ReplyDelete