Friday, October 4, 2013

Gunapal"s Surgery

      ಗುಣಪಾಲನ ಹರ್ನಿಯಾ ಗುಣವಾಯಿತೇ ?   

ಕೇವಲ ಶಸ್ತ್ರ ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಲ್ಲ ಕೆಲವೊಂದು ವ್ಯಾಧಿಗಳನ್ನು ಔಷದಸೇವನೆ ಅಥವಾ ಇತರ ಪ್ರಯೋಗಗಳಿಂದ ಪರಿಹರಿಸಿಕೊಳ್ಳಬಹುದೆಂದು ಭ್ರಮಿಸುವ ಅಮಾಯಕರು, ಸಾಕಷ್ಟು ಹಣವನ್ನು ಕಳೆದುಕೊಳ್ಳುವುದರೊಂದಿಗೆ ಶಾರೀರಿಕ ಮತ್ತು ಮಾನಸಿಕ ಯಾತನೆಗಳನ್ನು ಅನುಭವಿಸುತ್ತಾರೆ. ಅಂತಿಮವಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡ ಬಳಿಕ, ತಮ್ಮ ತಪ್ಪಿಗಾಗಿ ಪರಿತಪಿಸುತ್ತಾರೆ.
----------------             -----------------------                              -----------------------                                             ---------------

  ಕೇವಲ ಶಸ್ತ್ರ ಚಿಕಿತ್ಸೆಯಿಂದ ಪರಿಹರಿಸಬಲ್ಲ ನಿರ್ದಿಷ್ಟ ವ್ಯಾಧಿಗಳನ್ನು ಯಾವುದೇ ಔಷದಗಳ ಸೇವನೆಯಿಂದ ಅಥವಾ ಅನ್ಯ ವಿಧದ ಚಿಕಿತ್ಸೆಗಳಿಂದ ಗುಣಪಡಿಸುವುದು ಅಸಾಧ್ಯವೆನಿಸುತ್ತದೆ. ಆದರೆ ಕಾರಣಾಂತರಗಳಿಂದ ಇಂತಹ ಮಾರ್ಗೋಪಾಯಗಳನ್ನು ಅನುಸರಿಸುವ ರೋಗಿಗಳು, ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ ಬಳಿಕ ಅಂತಿಮವಾಗಿ ಶಸ್ತ್ರ ಚಿಕಿತ್ಸೆಗೆ ಶರಣಾಗುತ್ತಾರೆ. 

ಗುಣವಾಗದ ಗುಳ್ಳೆ!

ಪುಟ್ಟ ಗೂಡಂಗಡಿಯಿಂದ ದೊರೆಯುವ ಆದಾಯದಿಂದ ಜೀವನ ಸಾಗಿಸುತ್ತಿದ್ದ ಗುಣಪಾಲನಿಗೆ ಎರಡು ವರ್ಷಗಳ ಹಿಂದೆ ಕಿಬ್ಬೊಟ್ಟೆಯ ಎಡಭಾಗದ ತೊಡೆಯ ಸಂಧಿಯಲ್ಲಿ ಚಿಕ್ಕದೊಂದು ಗುಳ್ಳೆ ಕಾಣಿಸಿಕೊಂಡಿತ್ತು. ಕಾಲಕ್ರಮೇಣ ಹಿಗ್ಗಲಾರಂಭಿಸಿದ್ದ ಈ ಗುಳ್ಳೆಯು ರಾತ್ರಿ  ಮಲಗಿದ ಬಳಿಕ ಮಾಯವಾದರೂ,ಬೆಳಿಗ್ಗೆ ಎದ್ದ ಕೊಂಚ ಹೊತ್ತಿನ ಬಳಿಕ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಇದನ್ನು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯದಿರಲು ಒಂದಿಷ್ಟು ನಾಚಿಕೆಯೊಂದಿಗೆ ಅವ್ಯಕ್ತ ಭಯವೂ ಕಾರಣವೆನಿಸಿತ್ತು!.  

ಒಂದೆರಡು ವರ್ಷಗಳ ಕಾಲ ವಿಶೇಷ ಉಪಟಳವನ್ನು ತೋರದ ಈ ಗುಳ್ಳೆಯು, ಇತ್ತೀಚಿಗೆ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಿದಾಗ ಸಣ್ಣಗೆ ನೋಯುತ್ತಿತ್ತು. ಅದಾಗಲೇ ಗಾತ್ರದಲ್ಲಿ ಸಾಕಷ್ಟು ಹಿಗ್ಗಿದ್ದ ಗುಳ್ಳೆಯು ಅನೇಕಬಾರಿ ರಾತ್ರಿ ಮಲಗಿದ ಬಳಿಕವೂ ಮಾಯವಾಗದೆ ಯಥಾಸ್ಥಿತಿಯಲ್ಲಿ ಉಳಿಯುತ್ತಿತ್ತು. 

ಸುಮಾರು ಒಂದುವಾರ  ಕಳೆಯುತ್ತಲೇ ಉಲ್ಬಣಿಸಿದ್ದ ನೋವಿನ ತೀವ್ರತೆಯನ್ನು ಸಹಿಸಲಾಗದೇ ಸರಕಾರೀ ಆಸ್ಪತ್ರೆಗೆ ತೆರಳಿದ ಗುಣಪಾಲನನ್ನು ಪರೀಕ್ಷಿಸಿದ್ದ ವೈದ್ಯರು, ಆತನನ್ನು ಕಾಡುತ್ತಿದ್ದ "ಹರ್ನಿಯಾ" ಗುಣಪಡಿಸಲು ಶಸ್ತ್ರ ಚಿಕಿತ್ಸೆಯೇ ಏಕಮಾತ್ರ ಪರಿಹಾರವೆಂದು ತಿಳಿಸಿದರು. ಇಂಜೆಕ್ಷನ್ ಎಂದರೆ ಮಾರುದೂರ ಓಡುತ್ತಿದ್ದ ಗುಣಪಾಲನು "ಆಪರೇಶನ್' ಎನ್ನುವ ಶಬ್ದವನ್ನು ಕೇಳಿ ಗಾಬರಿಯಾಗಿ ಮನೆಗೆ ಮರಳಿದ್ದನು. 

ಶಸ್ತ್ರ ಚಿಕಿತ್ಸೆಯ ಭೀತಿಯಿಂದಾಗಿ ತನ್ನ ಸಮಸ್ಯೆಯನ್ನು ಪರಿಹರಿಸಲು ಅನ್ಯ ಚಿಕಿತ್ಸೆ ಲಭ್ಯವಿದೆಯೇ ಎಂದು ಪರಿಚಿತರಲ್ಲಿ ವಿಚಾರಿಸುತ್ತಿದ್ದ ಗುಣಪಾಲನಿಗೆ, ಸಮೀಪದ ಹಳ್ಳಿಯಲ್ಲಿ ಔಷದವನ್ನು ನೀಡಿ ಹರ್ನಿಯಾ ಗುಣಪಡಿಸುವ ಚಿಕಿತ್ಸಕನ ಬಗ್ಗೆ ಮಾಹಿತಿ ದೊರೆತಿತ್ತು. 

ಹೊಗೆಸೊಪ್ಪಿನ ಲಂಗೋಟಿ!

ಮರುದಿನ ಬೆಳಗ್ಗೆ ಚಿಕಿತ್ಸಕನನ್ನು ಭೇಟಿಯಾದ ಗುಣಪಾಲನನ್ನು "ಕಣ್ಣುಮುಚ್ಚಿ" ತಪಾಸಣೆ ಮಾಡಿದ ಈ ಮಹಾಶಯನು, ಕೇವಲ ನಾಲ್ಕು ವಾರಗಳಲ್ಲಿ ಆತನ ಹರ್ನಿಯಾ ಗುಣಪಡಿಸುವ ಭರವಸೆ ನೀಡಿದನು. ಈ ವಿಶೇಷ ಚಿಕಿತ್ಸೆಯ ಅಂಗವಾಗಿ ಚಿಕಿತ್ಸಕನು ನೀಡಿದ್ದ ಗಿಡಮೂಲಿಕೆಗಳ ಪುಡಿಯಿಂದ ತಯಾರಿಸಿದ ಲೇಪವನ್ನು ಉದ್ದವಾದ ಹೊಗೆಸೊಪ್ಪಿನ ಎಲೆಗೆ ಸವರಿ, ಲೇಪಯುಕ್ತ ಭಾಗವು ಹರ್ನಿಯಾದ ಗುಳ್ಳೆಗೆ ತಗಲುವಂತೆ ಲಂಗೋಟಿಯಂತೆ ದಿನವಿಡೀ ಧರಿಸಬೇಕಿತ್ತು. ವಾರದಲ್ಲಿ ಮೂರುಬಾರಿಯಂತೆ ಆರು ವಾರಗಳ ಕಾಲ ಔಷದಯುಕ್ತ ಕೌಪೀನಧಾರಣೆಯಿಂದ ಹರ್ನಿಯಾದ ಗುಳ್ಳೆ ಕಿಂಚಿತ್ ಕುಗ್ಗದಿದ್ದರೂ, ಆತನ ಮರ್ಮಾಂಗದ ಮೇಲೆ ಪುಟ್ಟ ದದ್ದುಗಳು ಎದ್ದು ಅಸಾಧ್ಯ ತುರಿಕೆಯೂ ಆರಂಭವಾಗಿತ್ತು. ಚಿಕಿತ್ಸಕನ ಲೇಪವು ಅಪೇಕ್ಷಿತ ಪರಿಣಾಮವನ್ನು ನೀಡದಿದ್ದರೂ, ಅನಿರೀಕ್ಷಿತ ದುಷ್ಪರಿಣಾಮವನ್ನು ತೋರಲು ಯಶಸ್ವಿಯಾಗಿತ್ತು!. 

ಕಷಾಯಕ್ಕೆ ಕುಗ್ಗದ ಗುಳ್ಳೆ 

ಹಳ್ಳಿಯ ಚಿಕಿತ್ಸಕನ ಪ್ರಯೋಗ ವಿಫಲವಾದ ವಿಚಾರವನ್ನು ಪರಿಚಿತರ ಬಳಿ ಹೇಳುತ್ತಿದ್ದ ಗುಣಪಾಲನಿಗೆ, ಪುತ್ತೂರು ಪೇಟೆಯಲ್ಲಿನ ವೈದ್ಯರೊಬ್ಬರು "ಹೊಟ್ಟೆಗೆ ಔಷದವನ್ನು ನೀಡಿ" ಹರ್ನಿಯಾ ಗುಣಪಡಿಸುತ್ತಾರೆ ಎಂದು ತಿಳಿಯಿತು. ಹೊಸ ವೈದ್ಯರಲ್ಲಿಗೆ ತೆರಳಿದ ಗುಣಪಾಲನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು, ಆತನಿಗೆ ಅಭಯವನ್ನು ನೀಡಿದ್ದರು. ಜೊತೆಗೆ ಗಿಡಮೂಲಿಕೆಗಳಿಂದ ತಾನೇ ಸ್ವತಃ ತಯಾರಿಸಿದ ವಿಶೇಷ ಔಷದವನ್ನು ಎಡೆಬಿಡದೆ ಆರು ತಿಂಗಳುಗಳ ಕಾಲ ಸೇವಿಸಿದಲ್ಲಿ ಹರ್ನಿಯಾ ನಿರ್ನಾಮಗೊಳ್ಳುವುದರೊಂದಿಗೆ, ಮುಂದಿನ ಐದು ವರ್ಷಗಳ ಕಾಲ ಮತ್ತೆ ಮರುಕಳಿಸದು ಎಂದು ಆಶ್ವಾಸನೆಯನ್ನೂ ನೀಡಿದ್ದರು. ವೈದ್ಯರ ಹೇಳಿಕೆಯಂತೆ ಅವರು ನೀಡಿದ ಔಷದವನ್ನು ಸೇವಿಸಿದ ಕೊಂಚ ಹೊತ್ತಿನ ಬಳಿಕ ಈ ಔಷದವು ಹರ್ನಿಯಾ ಇರುವ ಕರುಳಿನ ಭಾಗವನ್ನು ತಲುಪಿ, ಅದರ ಗುಳ್ಳೆಯನ್ನು ನಿಧಾನವಾಗಿ ಕುಗ್ಗಿಸುತ್ತಾ ಸಂಪೂರ್ಣವಾಗಿ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿತ್ತು!. 

ವೈದ್ಯರ ಮಾತಿನ ಮೋಡಿಗೆ ಮರುಳಾದ ಗುಣಪಾಲನು ಮರುಮಾತನಾಡದೇ ೬೦೦ ರೂ. ಗಳನ್ನೂ ತೆತ್ತು, ಎರಡು ವಾರಗಳಿಗೆ ಬೇಕಾದಷ್ಟು ಔಷದಗಳನ್ನು ಖರೀದಿಸಿದ್ದನು. 

ಸುಮಾರು ಮೂರು ತಿಂಗಳುಗಳ ಚಿಕಿತ್ಸೆಗಾಗಿ ೩೬೦೦ ರೂ. ಗಳನ್ನು ವ್ಯಯಿಸಿದ್ದ ಗುಣಪಾಲನ ಹರ್ನಿಯಾ ಒಂದಿಷ್ಟೂ ಕುಗ್ಗದಿದ್ದರೂ, ಆತನ ಜೇಬಿನಲ್ಲಿದ್ದ ಪರ್ಸಿನ ಗಾತ್ರ ಮಾತ್ರ ಸಾಕಷ್ಟು ಕುಗ್ಗಿತ್ತು. ಇಷ್ಟು ಮಾತ್ರವಲ್ಲ, ಚಿಕಿತ್ಸೆ ಆರಂಭಿಸಿದ ಬಳಿಕ ಇನ್ನಷ್ಟು ಹಿಗ್ಗಿದ್ದ ಹರ್ನಿಯಾದ ಗುಳ್ಳೆಯು ರಾತ್ರಿ ಮಲಗಿದ ಬಳಿಕ ಕಡಿಮೆಯಾಗುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಚಿಕಿತ್ಸೆಯನ್ನು ನಿಲ್ಲಿಸಿದ್ದ ಗುಣಪಾಲನಿಗೆ ತಿಂಗಳು ಕಳೆಯುವಷ್ಟರಲ್ಲೇ ಹರ್ನಿಯಾ ಇರುವ ಭಾಗದಲ್ಲಿ ತೀವ್ರ ನೋವು ಬಾಧಿಸಲಾರಂಭಿಸಿ, ಆತನ ದೈನಂದಿನ ಕೆಲಸಕಾರ್ಯಗಳನ್ನು ಮಾಡುವುದೂ ದುಸ್ತರವೆನಿಸಿತ್ತು. 

ಒಂದೆರಡು ದಿನಗಳ ಬಳಿಕ ಅಸಹನೀಯ ನೋವಿನಿಂದ ನರಳುತ್ತಿದ್ದ ಆತನನ್ನು ಆಪ್ತಮಿತ್ರರೊಬ್ಬರು ಒತ್ತಾಯಪೂರ್ವಕವಾಗಿ ಶಸ್ತ್ರ ಚಿಕಿತ್ಸಾ ತಜ್ಞರ ಬಳಿ ಕರೆದೊಯ್ದರು. ರೋಗಿಯನ್ನು ಪರೀಕ್ಷಿಸಿದ ತಜ್ನವೈದ್ಯರು ಆತನು ಪ್ರಯೋಗಿಸಿದ್ದ ಚಿಕಿತ್ಸೆಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ರೋಗಿಯ ಕಿಬ್ಬೊಟ್ಟೆಯ ಕೆಳಭಾಗದಲ್ಲಿನ ಮಾಂಸಪೇಶಿಗಳು ದುರ್ಬಲಗೊಂಡ ಪರಿಣಾಮವಾಗಿ, ಇವುಗಳ ಸಂದಿಯಿಂದ ಕೆಳಗಿಳಿದ ಕರುಳಿನ ಪುಟ್ಟ ಭಾಗವನ್ನು ಮತ್ತೆ ಹಿಂದಿನಂತೆ ಸರಿಪಡಿಸಲು ಶಸ್ತ್ರ ಚಿಕಿತ್ಸೆಯೇ ಏಕಮಾತ್ರ ಪರಿಹಾರವೆಂದು ವಿವರಿಸಿದ್ದರು. ಬಳಿಕ ಅದಾಗಲೇ ಉಲ್ಬಣಿಸಿ ಅಪಾಯಕಾರಿ ಹಂತವನ್ನು ತಲುಪಿದ್ದ ಹರ್ನಿಯಾದ ಸಮಸ್ಯೆಯನ್ನು ಪರಿಹರಿಸಲು ತುರ್ತು ಶಸ್ತ್ರ ಚಿಕಿತ್ಸೆಯನ್ನು ನಡೆಸಿದರು. ವಾರ ಕಳೆಯುತ್ತಲೇ ಚೇತರಿಸಿಕೊಂಡಿದ್ದ ಗುಣಪಾಲನು ಮನೆಗೆ ಮರಳಿದ್ದನು. ಹರ್ನಿಯಾದ ಪೀಡೆಯಿಂದ ಮುಕ್ತನಾಗಿರುವ ಗುಣಪಾಲನು ಇಂದಿಗೂ ತನ್ನ ಗೂಡಂಗಡಿಗೆ ಬರುವ ಗಿರಾಕಿಗಳಿಗೆ ತನ್ನ ಅನುಭವಗಳನ್ನು ಹೇಳುವುದರೊಂದಿಗೆ, ಶಸ್ತ್ರ ಚಿಕಿತ್ಸೆಯೇ ಏಕಮಾತ್ರ ಪರಿಹಾರವಾಗಿರುವ ವ್ಯಾಧಿಗಳಿಗೆ ಅನ್ಯ ಔಷದಗಳನ್ನು ಪ್ರಯೋಗಿಸದಂತೆ ಸಲಹೆಯನ್ನು ನೀಡಲು ಮರೆಯುವುದಿಲ್ಲ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೦೫-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

 

No comments:

Post a Comment