Tuesday, October 15, 2013

Injections


                           ಚುಚ್ಚುಮದ್ದಿನ ಹುಚ್ಚು: ವಿದ್ಯಾವಂತರಲ್ಲೇ ಹೆಚ್ಚು!

    ಯಾವುದೇ ಕಾಯಿಲೆಗೆ ಚುಚ್ಚುಮದ್ದು ರಾಮಬಾಣದಂತೆ ಪರಿಣಾಮಕಾರಿ ಎಂದು ನಂಬಿ ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುವವರು ಮತ್ತು ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳಲು ನಿರಾಕರಿಸುವವರು- ಈ ಎರಡೂ ವರ್ಗದ ಜನರು ನಮ್ಮಲ್ಲಿದ್ದಾರೆ. ಆದರೆ ಇವೆರಡೂ ಮನೋಭಾವಗಳು ಆರೋಗ್ಯಕರವಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಮನುಷ್ಯನನ್ನು ಬಾಧಿಸುವ ವಿವಿಧ ವ್ಯಾಧಿಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪುಕಲ್ಪನೆಗಳಿವೆ. ಇವುಗಳಲ್ಲಿ ಚುಚ್ಚುಮದ್ದಿನ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎನ್ನುವುದು ಕೂಡಾ ಒಂದಾಗಿದೆ. ಎಂತಹ ಕಾಯಿಲೆಯನ್ನಾದರೂ ಕ್ಷಣಮಾತ್ರದಲ್ಲಿ ಗುಣಪಡಿಸಬಲ್ಲ ಸಾಮರ್ಥ್ಯವು, ಕೇವಲ ಒಂದು ಚುಚ್ಚುಮದ್ದಿನಲ್ಲಿದೆ ಎಂದು ಅನೇಕ ವಿದ್ಯಾವಂತರೂ ನಂಬುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ ಇಂಜೆಕ್ಷನ್ ನೀಡದ ವೈದ್ಯರನ್ನು ಹೆಚ್ಚಿನ ರೋಗಿಗಳು ದೂರವಿರಿಸುತ್ತಾರೆ!. 

ಚುಚ್ಚುಮದ್ದು ಎಂದರೇನು?

ಪರಿಶುದ್ಧವಾದ ದ್ರವರೂಪದ ಔಷದಗಳನ್ನು ಸೂಜಿಯ ಮೂಲಕ ಶರೀರಕ್ಕೆ ನೀಡುವ ವಿಧಾನವೇ ಚುಚ್ಚುಮದ್ದು ಅರ್ಥಾತ್ ಇಂಜೆಕ್ಷನ್. ಸಾಮಾನ್ಯವಾಗಿ ಚುಚ್ಚುಮದ್ದನ್ನು ಮಾಂಸಪೇಶಿಗಳಿಗೆ ನೀಡುವರಾದರೂ, ಚರ್ಮದ ಕೆಳಭಾಗಕ್ಕೆ ಹಾಗೂ ರಕ್ತನಾಳಗಳಿಗೆ ನೀಡುವುದೂ ವಾಡಿಕೆಯಲ್ಲಿದೆ. ಇದಲ್ಲದೇ ಅಸ್ಥಿಸಂದಿಗಳು, ಬೆನ್ನುಹುರಿ, ಹಲ್ಲಿನ ಒಸಡುಗಳು ಮತ್ತು ಸಂದರ್ಭೋಚಿತವಾಗಿ ಶರೀರದ ಇತರ ಕೆಲವು ಭಾಗಗಳಿಗೂ ನೀಡಲಾಗುತ್ತದೆ. ಚುಚ್ಚುಮದ್ದಿನಲ್ಲಿ ಬಳಸುವ ಮತ್ತು ಇವುಗಳನ್ನು ನೀಡುವ ಶರೀರದ ಭಾಗಗಳನ್ನು ಹೊಂದಿಕೊಂಡು, ಕೆಲವೇ ಕ್ಷಣಗಳಿಂದ ಆರಂಭಿಸಿ ಹಲವಾರು ತಾಸುಗಳಲ್ಲಿ ಇವುಗಳು ತಮ್ಮ ಪರಿಣಾಮವನ್ನು ತೋರುತ್ತವೆ. ಶಸ್ತ್ರಚಿಕಿತ್ಸೆಗೆ ಮುನ್ನ ನೀಡುವ ಅರಿವಳಿಕೆ ಹಾಗೂ ತುರ್ತುಪರಿಸ್ಥಿತಿಯಲ್ಲಿ ಬಳಸುವ ಕೆಲ ಔಷದಗಳು ಕ್ಷಣಮಾತ್ರದಲ್ಲಿ ತಮ್ಮ ಪರಿಣಾಮವನ್ನು ತೋರುತ್ತವೆ. ಆದರೆ ನಿರ್ದಿಷ್ಟ ವ್ಯಾಧಿಯೊಂದನ್ನು ತಡೆಗಟ್ಟಲು ನೀದುವಳಸಿಕೆಗಳು, ಈ ವ್ಯಾಧಿಗೆ ಪ್ರತಿರೋಧಕ ಶಕ್ತಿಯನ್ನು ತೋರಲು ಸಾಕಷ್ಟು ಸಮಯಾವಕಾಶ ಬೇಕಾಗುವುದು. 

ವಿಶೇಷವೆಂದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ರೋಗಿಯ ಪ್ರತಿರೋಧವನ್ನು ಲೆಕ್ಕಿಸದೆ ವೈದ್ಯರು ಒತ್ತಾಯಪೂರ್ವಕವಾಗಿ ನೀಡುವ ಚುಚ್ಚುಮದ್ದು , ಅಪೇಕ್ಷಿತ ಪರಿಣಾಮವನ್ನು ನೀಡದಿರುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಅನಾವಶ್ಯಕವಾಗಿ ಹಾಗೂ ರೋಗಿಯೇ ಒತ್ತಾಯಪೂರ್ವಕವಾಗಿ ಕೇಳಿ ಪಡೆದುಕೊಂಡ ಚುಚ್ಚುಮದ್ದು, ನಿಶ್ಚಿತವಾಗಿಯೂ ರಾಮಬಾಣದಂತೆ ಪರಿಣಾಮಕಾರಿ ಎನಿಸಬಲ್ಲದು!.

ಸಾಮಾನ್ಯವಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಪ್ರಾಣಾಪಾಯದಿಂದ ಪಾರುಮಾಡಲು ವೈದ್ಯರು ಬಳಸುವ ಚುಚ್ಚುಮದ್ದು ಜೀವರಕ್ಷಕ ಎನಿಸಬಲ್ಲದು. ಅದೇ ರೀತಿಯಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡುವ ಕೆಲ ಔಷದಗಳು- ಲಸಿಕೆಗಳು ರೋಗಿಯ ಶರೀರಕ್ಕೆ ಒಗ್ಗದಿರುವ ಕಾರಣದಿಂದಾಗಿ ಉದ್ಭವಿಸುವ "ಅನಾಫೈಲಾಕ್ಸಿಸ್ " ಎಂದು ಕರೆಯಲ್ಪಡುವ ತೀವ್ರಸ್ವರೂಪದ ಪ್ರತಿಕ್ರಿಯೆಯು, ರೋಗಿಯ ಪ್ರಾಣಹರಣಕ್ಕೂ ಕಾರಣವೆನಿಸುವುದುಂಟು. ಇಂತಹ ಸ್ಥಿತಿಯಲ್ಲಿ ರೋಗಿಯನ್ನು ಉಳಿಸಲು ಕೆಲ ಅನ್ಯ ವಿಧಾನಗಳೊಂದಿಗೆ, ತುರ್ತಾಗಿ ನೀಡಬೇಕಾದ ಔಷದಗಳನ್ನು ಮತ್ತೆ ಚುಚ್ಚುಮದ್ದಿನ ರೂಪದಲ್ಲೇ ನೀಡಬೇಕಾಗುವುದು!. ( ಪೆನಿಸಿಲಿನ್ ಇಜೆಕ್ಷನ್ ಇದಕ್ಕೊಂದು ಉತ್ತಮ ಉದಾಹರಣೆ ಎನಿಸುತ್ತದೆ.)

ಚುಚ್ಚುಮದ್ದಿನ ರೂಪದಲ್ಲಿ ನೀಡುವ ಔಷದ- ಲಸಿಕೆಗಳಿಂದ ಉದ್ಭವಿಸಬಲ್ಲ ತೀವ್ರ ಅಲರ್ಜಿ ಪ್ರತಿಕ್ರಿಯೆಗಳಲ್ಲಿ ಶರೀರದಾದ್ಯಂತ ದದ್ದುಗಳು ಎದ್ದು ಅಸಾಧ್ಯ ತುರಿಕೆ, ಅತಿಯಾಗಿ ಬೆವರುವುದು, ತಲೆ ಸುತ್ತಿದಂತೆ ಅಥವಾ ಕಣ್ಣು ಕತ್ತಲಾವರಿಸಿದಂತೆ ಆಗುವುದು, ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಮತ್ತು ಪ್ರಜ್ಞೆ ಕಳೆದುಕೊಳ್ಳುವುದೇ ಮುಂತಾದ ಲಕ್ಷಣಗಳು ಕಂಡುಬರಬಹುದು. ಆದರೆ ಈ ರೀತಿಯ ಪ್ರತಿಕ್ರಿಯೆಗಳು ಕೇವಲ ಇಂಜೆಕ್ಷನ್ ಗಳಿಗೆ ಮಾತ್ರ ಸೀಮಿತವಾಗಿರದೇ, ಇತರ ರೂಪಗಳಲ್ಲಿ ಬಳಸಿದ (ಮಾತ್ರೆ, ಮುಲಾಮು, ಸಿರಪ್ ಇತ್ಯಾದಿ) ಔಷದಗಳಿಂದಲೂ ತಲೆದೋರಬಹುದು. 

ಜೀವರಕ್ಷಕ ಚುಚ್ಚುಮದ್ದು 

ಹೃದಯಾಘಾತ, ಮೆದುಳಿನ ಆಘಾತ, ತೀವ್ರವಾಗಿ ಉಲ್ಬಣಿಸಿದ ಆಸ್ತಮಾ, ಅಪಸ್ಮಾರದ ಸೆಳೆತಗಳು, ತೀವ್ರ ಜ್ವರ- ನೋವು ಇತ್ಯಾದಿಗಳು ಬಾಧಿಸಿದ ಸಂದರ್ಭಗಳಲ್ಲಿ ಚುಚ್ಚುಮದ್ದಿನ ಬಳಕೆ ಅನಿವಾರ್ಯವೂ ಹೌದು. ಇದಲ್ಲದೇ ಬಾಯಿಯ ಮೂಲಕ ಔಷದವನ್ನು ಸೇವಿಸಲಾರದ ಅಥವಾ ನೀಡಲಾರದಂತಹ ಸಂದರ್ಭಗಳಲ್ಲಿ, ಅಪಾಯಕಾರಿ ಸೋಂಕು ಬಾಧಿಸಿದಾಗ, ತೀವ್ರ ವಾಂತಿ- ಭೆದಿಗಲಂತಹ ವ್ಯಾಧಿಪೀಡಿತರಿಗೆ, ಹಲ್ಲು ಕೀಳುವ ಮುನ್ನ ಅರಿವಳಿಕೆ ಔಷದವನ್ನು ನೀಡಲು ಚುಚ್ಚುಮದ್ದನ್ನು ಬಳಸಲೇ ಬೇಕಾಗುವುದು. ಅದೇ ರೀತಿಯಲ್ಲಿ ಕೇವಲ ಇಂಜೆಕ್ಷನ್ ರೂಪದಲ್ಲಿ ಮಾತ್ರ ಲಭ್ಯವಿರುವ ಕೆಲ ವಿಧದ ಔಷದಗಳು ಮತ್ತು ಲಸಿಕೆಗಳನ್ನು ಪಡೆದುಕೊಳ್ಳಲು ರೋಗಿಗಳು ನಿರಾಕರಿಸಿದರೂ, ವೈದ್ಯರು ಇವುಗಳನ್ನು ಒತ್ತಾಯಪೂರ್ವಕವಾಗಿ ನೀಡಬೇಕಾಗಬಹುದು. 

ಮಧುಮೇಹದಂತಹ ಗಂಭೀರ ಹಾಗೂ ಮಾರಕವೆನಿಸಬಲ್ಲ ವ್ಯಾಧಿಯನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಬಲ್ಲ "ಇನ್ಸುಲಿನ್" ಚುಚ್ಚುಮದ್ದು , ಜಗತ್ತಿನಾದ್ಯಂತ ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿದೆ. ಅಂತೆಯೇ, ಹುಚ್ಚುನಾಯಿ ಕಡಿತದಿಂದ ಉದ್ಭವಿಸುವ ಹಾಗೂ ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದ ಮಾರಕ "ರೇಬೀಸ್" ವ್ಯಾಧಿಯನ್ನು ತಡೆಗಟ್ಟಲು ಮತ್ತು ಪುಟ್ಟ ಕಂದಮ್ಮಗಳನ್ನು ಬಾಧಿಸಬಲ್ಲ ಡಿಪ್ತೀರಿಯಾ, ನಾಯಿಕೆಮ್ಮು, ಧನುರ್ವಾತ, ಹೆಪಟೈಟಿಸ್, ದಡಾರ, ಸೀತಾಳೆ ಸಿಡುಬು- ಸರ್ಪಸುತ್ತು ಇವೇ ಮುಂತಾದ ಕಾಯಿಲೆಗಳಿಂದ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳು ಕೇವಲ ಇಂಜೆಕ್ಷನ್ ರೂಪದಲ್ಲಿ ಮಾತ್ರ ಲಭ್ಯವಿದೆ. "ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮಾತಿನಂತೆ, ಇಂತಹ ಲಸಿಕೆಗಳನ್ನು ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಹಿತಕರ ಎನಿಸುವುದು. 

ಆದರೆ ವೈದ್ಯರು ಸೂಚಿಸದಿದ್ದಾಗ, ಅನಾವಶ್ಯಕವಾಗಿ ಮತ್ತು ಸಣ್ಣಪುಟ್ಟ ಕಾಯಿಲೆಗಳು ಬಾಧಿಸಿದ ಸಂದರ್ಭಗಳಲ್ಲಿ ರೋಗಿಗಳು ಒತ್ತಾಯಪೂರ್ವಕವಾಗಿ ಚುಚ್ಚುಮದ್ದನ್ನು ಕೇಳಿ ಪಡೆದುಕೊಳ್ಳುವುದು ನಿಷ್ಪ್ರಯೋಜಕ ಎನಿಸುವುದು. 

ಚುಚ್ಚುಮದ್ದು- ಚಿಕುನ್ ಗುನ್ಯಾ 

ಚುಚ್ಚುಮದ್ದಿನ ಪವಾಡ ಸದೃಶ ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅಪಾರವಾದ ನಂಬಿಕೆ ಮತ್ತು ನಿರೀಕ್ಷೆಗಳನ್ನು ಹುಸಿಗೊಳಿಸಿದ ವಿಚಾರದಲ್ಲಿ, ದಕ್ಷಿಣ ಕನ್ನಡದ ಜನತೆಯನ್ನು ಕಳೆದ ವರ್ಷದಲ್ಲಿ ವ್ಯಾಪಕವಾಗಿ ಪೀಡಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯು ಉತ್ತಮ ಉದಾಹರಣೆ ಎನಿಸುತ್ತದೆ. 

ತೀವ್ರ ಚಳಿಜ್ವರದೊಂದಿಗೆ ಶರೀರದ ಅಸ್ಥಿ ಸಂಧಿಗಳಲ್ಲಿ ವಿಪರೀತ ನೋವು ಮತ್ತಿತರ ಲಕ್ಷಣಗಳೊಂದಿಗೆ ಆಕಸ್ಮಿಕವಾಗಿ ಪ್ರತ್ಯಕ್ಷವಾಗುತ್ತಿದ್ದ ಈ ಕಾಯಿಲೆಯು, ಬಹುತೇಕ ರೋಗಿಗಳು ಹಲವಾರು ದಿನಗಳ ಕಾಲ ಹಾಸಿಗೆ ಹಿಡಿಯುವಂತೆ ಮಾಡಿತ್ತು. ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದ ಈ ಕಾಯಿಲೆಯ ಲಕ್ಷಣಗಳಿಗೆ ಅನುಗುಣವಾಗಿ ಔಷದಗಳನ್ನು ಸೇವಿಸುವುದರೊಂದಿಗೆ, ಸಂಪೂರ್ಣ ವಿಶ್ರಾಂತಿಯೇ ಇದಕ್ಕೆ ಏಕಮಾತ್ರ ಪರಿಹಾರವಾಗಿತ್ತು. ಆದರೆ ಈ ವ್ಯಾಧಿಯೊಂದಿಗೆ ಆರಂಭವಾಗುತ್ತಿದ್ದ ಆಸ್ತಿ ಸಂಧಿಗಳ ನೋವು ಮಾತ್ರ ಹಲವಾರು ತಿಂಗಳುಗಳ ಕಾಲ ಉಳಿದುಕೊಳ್ಳುತ್ತಿತ್ತು. 

ತೀವ್ರ ಚಳಿಜ್ವರ ಮತ್ತು ಅಸಹನೀಯ ನೋವಿನಿಂದ ಎದ್ದು ನಡೆದಾಡಲೂ ಆಗದ ರೋಗಿಗಳಿಗೆ, ವೇದನಾ ಶಾಮಕ ಮತ್ತು ಕೆಲವಿಧದ ಸ್ಟೆರಾಯ್ಡ್ ಗಳ ಚುಚ್ಚುಮದ್ದುಗಳು ತತ್ ಕ್ಷಣ ಪರಿಹಾರವನ್ನು ನೀಡುತ್ತಿದ್ದವು. ಈ ಚುಚ್ಚುಮದ್ದನ್ನು ಪಡೆದುಕೊಂಡ ರೋಗಿಗಳಿಗೆ ಸುಮಾರು ೩೦ ರಿಂದ ೬೦ ನಿಮಿಷಗಳ ಅವಧಿಯಲ್ಲಿ ಚಳಿಜ್ವರ ಮತ್ತು ಗಂಟು ನೋವುಗಳು (ತಾತ್ಕಾಲಿಕವಾಗಿ) ಮಾಯವಾಗುತ್ತಿದ್ದುದರಿಂದ, ತಾನು ಸಂಪೂರ್ಣವಾಗಿ ಗುನಮುಖನಾಗಿದ್ದೇನೆ ಎನ್ನುವ ಭಾವನೆಯನ್ನು ಮೂಡಿಸುತ್ತಿತ್ತು. ಆದರೆ ಕೆಲವೇ ತಾಸುಗಳ ಬಳಿಕ ಚುಚ್ಚುಮದ್ದಿನ ಪ್ರಭಾವವು ಕಡಿಮೆಯಾದಂತೆಯೇ, ಗಂಟುನೋವು ಮತ್ತು ಚಳಿಜ್ವರಗಳು ಮತ್ತೆ ಮರುಕಳಿಸುತ್ತಿದ್ದವು!. 

ಚಿಕುನ್ ಗುನ್ಯಾ ಕಾಯಿಲೆಯನ್ನು ಗುಣಪಡಿಸಲು ಚುಚ್ಚುಮದ್ದಿನ ಚಿಕಿತ್ಸೆ ನಿಷ್ಪ್ರಯೋಜಕವೆನಿಸಿದರೂ, ಅಸಂಖ್ಯ ರೋಗಿಗಳು ಈ ಚಿಕಿತ್ಸೆಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿದ್ದರು. ಇದಕ್ಕೂ ಮಿಗಿಲಾಗಿ ಹಲವಾರು ವಾರಗಳ ಕಾಲ ವೇದನಾ ಶಾಮಕ ಚುಚ್ಚುಮದ್ದು ಅಥವಾ ಮಾತ್ರೆಗಳ ಸೇವನೆಯಿಂದ ಜಠರದ ಉರಿಯೂತ ಮತ್ತಿತರ ಸಮಸ್ಯೆಗಳಿಂದ ಪೀಡಿತರಾಗಿ, ಇದರಿಂದ ಪಾರಾಗಲು ಮತ್ತಷ್ಟು ಔಷದಗಳು ಮತ್ತು ಹಣವನ್ನು ಕಳೆದುಕೊಂಡಿದ್ದರು. ಆದರೂ ಅನೇಕ ವೈದ್ಯರು ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳು ತಮ್ಮಲ್ಲಿ ಮಾತ್ರ ಲಭ್ಯವೆನ್ನುವ ಮೂಲಕ, ಅಮಾಯಕ ರೋಗಿಗಳನ್ನು ತಪ್ಪುದಾರಿಗೆ ಎಳೆದಿದ್ದರು!. ವಿಶೇಷವೆಂದರೆ "ಕೊಟ್ಟೋನು ಕೋಡಂಗಿ, ಈಸ್ಕೊಂಡೋನು ಈರಭದ್ರ" ಎನ್ನುವ ಮಾತಿನಂತೆ, ಇಂತಹ ಚಿಕಿತ್ಸೆಯನ್ನು ಪಡೆದುಕೊಂಡಿದ್ದ ರೋಗಿಗಳು ಕೋಡಂಗಿ ಹಾಗೂ ಚಿಕಿತ್ಸೆಯನ್ನು ನೀಡಿದ್ದ ವೈದ್ಯರು ಈರಭದ್ರ ರೆನಿಸಿಕೊಂಡಿದ್ದು ಮಾತ್ರ ಸುಳ್ಳೇನಲ್ಲ!.  

ಅಂತಿಮವಾಗಿ ಹೇಳುವುದಾದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಮತ್ತು ಅನಾವಶ್ಯಕವಾಗಿ ಚುಚ್ಚುಮದ್ದನ್ನು ನೀಡುವಂತೆ ನಿಮ್ಮ ವೈದ್ಯರನ್ನು ಒತ್ತಾಯಿಸದಿರಿ. ಅಂತೆಯೇ ನಿಮ್ಮ ನಂಬಿಗಸ್ತ ವೈದ್ಯರು ಅನಿವಾರ್ಯ ಸಂದರ್ಭಗಳಲ್ಲಿ ಸೂಜಿಮದ್ದನ್ನು ಪಡೆದುಕೊಳ್ಳಲು ಸೂಚಿಸಿದಾಗ ನಿರಾಕರಿಸದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೫-೦೨-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment